ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎರಡನೇ ಗುಹೆ ನಮಗಾಗಿ ಕಾಯುತ್ತಿದೆ..

ಮಹೇಶ್ ಪಿ ಎಂ

ಅದೊಂದು ಶುಕ್ರವಾರ, ಎಂದಿನಂತೆ ಎಲ್ಲರೂ ಕೆಲಸ ಮುಗಿಸಿ system shutdown ಮಾಡಿ ಮನೆಗೆ ಹೊರಡಲು ತಯಾರಾಗಿದ್ದರು. ಅಷ್ಟರಲ್ಲಿ ಮ್ಯಾನೇಜರ್ “ನಾಳೆ trekking ಇದೆ ಆಸಕ್ತಿಯಿರುವವರು ಹೆಸರು ನೊಂದಾಯಿಸಿ” ಎಂದು ಹೇಳಿ ಹೊರಟರು. ಸುಮಾರು 400 ಜನ ಇದ್ದ ತಂಡದಲ್ಲಿ ಹೆಚ್ಚು ಕಡಿಮೆ 100 ಜನ ಆಸಕ್ತರು ಹೆಸರು ನೊಂದಾಯಿಸಿದರು. “ಹೆಸರು ನೊಂದಾಯಿಸಿದವರನ್ನೊರತುಪಡಿಸಿ ಉಳಿದವರು ಹೊರಡಿ” ಎಂದು ಹೇಳಿ trekkingಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ನಿಯಮಗಳನ್ನು ಹೇಳಲು ಶುರುಮಾಡಿದರು ಮ್ಯಾನೇಜರ್.

*ಪ್ರತಿಯೊಬ್ಬರು ತಮ್ಮ ತಮ್ಮ ನೀರಿನ ಬಾಟಲಿ ತರಬೇಕು.
*ಸ್ವಲ್ಪ ಸಡಿಲವಿರುವ, ನಿಮಗೆ ಆರಾಮದಾಯಕವೆನಿಸುವ ಬಟ್ಟೆಗಳನ್ನು ಧರಿಸಿರಬೇಕು.
*ಆರೋಗ್ಯ ಸಮಸ್ಯೆ ಇರುವವರು ಅಗತ್ಯವಿರುವ ಔಷಧ ತರಬೇಕು.
*ಊಟ-ತಿಂಡಿ, ಪ್ರಥಮ ಚಿಕಿತ್ಸೆ ಹಾಗೂ ಮಾರ್ಗದರ್ಶಕರ ವ್ಯವಸ್ಥೆ ಇರುತ್ತದೆ.
*ಯಾವುದೇ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬಾರದು.
*6 ಗಂಟೆಗೆ ನಿಗದಿ ಪಡಿಸಿದ ಸ್ಥಳಕ್ಕೆ ಬರಬೇಕು.
*ಕ್ಯಾಮೆರಾ, ಟೋಪಿ, ಕೈಚೀಲ ಇತ್ಯಾದಿ ಅವರವರ ಅವಶ್ಯಕತೆಗೆ ಬಿಟ್ಟದ್ದು.


ಬೆಳಿಗ್ಗೆ 5 ಗಂಟೆಗೆ ಬಸ್ ಬಂದು ನಿಂತಿತ್ತು. ಹಲವರು ತಡವಾಗಿ ಬಂದ ಕಾರಣ ಬೆಳಿಗ್ಗೆ 6 ಕ್ಕೆ ಹೊರಡಬೇಕಿದ್ದ ಬಸ್ಸು ಅರ್ಧ ಗಂಟೆ ತಡವಾಗಿ ಹೊರಟಿತು. ಪ್ರಯಾಣದಲ್ಲೆ ತಿಂಡಿ ಮುಗಿಸಿದ ಹಲವರ ಕಣ್ಣಲ್ಲಿ ಕುತೂಹಲ, ಕೆಲವರ ಕಣ್ಣಲ್ಲಿ ನಿದ್ದೆ.

ಒಂದು ತಾಸಿನಲ್ಲಿ ಬಸ್ಸು ಅಂತರಗಂಗೆ ಬೆಟ್ಟಕ್ಕೆ ತಲುಪಿತು, engine off ಆಯಿತು, ಚಾಲಕ ಕೆಳಗಿಳಿದ. ಗೂಡಿಂದ ಹೊರ ಬರುವ ಜೇನುಗಳಂತೆ ಎಲ್ಲರೂ ಬಸ್ಸಿನ ಒಳಗಿನಿಂದ ಒಬ್ಬೊಬ್ಬರಾಗಿ ಇಳಿದು ಎಲ್ಲೆಡೆ ಹರಡಿಕೊಂಡರು.

ಕಂಪ್ಯೂಟರ್ ನೋಡಿ ನೋಡಿ ಅರ್ಧದಷ್ಟು ಜನರ ಮೂಗಿನ ಮೇಲೆ ಕುಳಿತಿದ್ದ ಕನ್ನಡಕದೊಳಗಿಂದ ಸುತ್ತ ಮುತ್ತ ಇದ್ದ ಬೆಟ್ಟ ಗುಡ್ಡ, ಮರ ಗಿಡ, ಹಳ್ಳಿ ಸೊಗಡು ಕಂಡು ಎಲ್ಲರ ಮುಖದಲ್ಲೂ ಒಂದು ಸಣ್ಣ ನಗು, ಏನೋ ಅದ್ಭುತ ನೋಡಿದಂತೆ ಎಲ್ಲರೂ ಅತ್ತಿತ್ತ ಕತ್ತು ತಿರುಗಿಸುತ್ತಿದ್ದರು, ಅಷ್ಟರಲ್ಲಿ ನಾಲ್ವರು trek ಮಾರ್ಗದರ್ಶಕರು ಬಂದು ನಿಂತರು. ಎಲ್ಲರ ಗಮನ ಅವರತ್ತ ಹೋಯಿತು. ಅವರು ತಂಡದ ರಚನೆ ತಿಳಿಸಿದರು “ಮುಂದೆ ಇಬ್ಬರು, ಹಿಂದೆ ಇಬ್ಬರು ಮಾರ್ಗದರ್ಶಕರುಗಳು, ಮಧ್ಯದಲ್ಲಿ ನೂರು ಜನ. ಏನೇ ಆದರೂ ಯಾರೊಬ್ಬರೂ ಮುಂದೆ ಇರುವ ಇಬ್ಬರನ್ನು ದಾಟಿ ಹೋಗುವ ಹಾಗಿಲ್ಲ ಮತ್ತು ಹಿಂದಿನ ಇಬ್ಬರು ಯಾರು ಹಿಂದೆ ಉಳಿಯದಂತೆ ಗಮನಹರಿಸಬೇಕು”.

ಅವರ ಮಾರ್ಗದರ್ಶನದಲ್ಲಿ ಎಲ್ಲಾ ಬೆಟ್ಟ ಹತ್ತಲು ಶುರು ಮಾಡಿದರು. ಕಾಲುಗಳು ಮೇಲೆ ಹತ್ತುತ್ತಿದ್ದವು, ಬೆವರು ಕೆಳಕ್ಕೆ ಇಳಿಯುತ್ತಿತ್ತು. ಬೆಳಗ್ಗೆಯಿಂದ ರಾತ್ರಿ ವರೆಗೂ ಸೂರ್ಯನ ಬಿಸಿಲ ಕಾಣದೆ, AC ರೂಮ್ ನಲ್ಲಿ ಇದ್ದ, ಬೆವರ ನೋಡದ ಬಟ್ಟೆಗಳು ಇಂದು ಅದರಲ್ಲೇ ಮಿಂದೆದ್ದಿದ್ದವು.

ಸ್ವಲ್ಪ ಮೇಲೆ ಹತ್ತಿದಾಗ ಒಂದು ಗುಹೆ ಕಂಡಿತು. ಬೆಟ್ಟದ ತುದಿ ತಲುಪಲು ಗುಹೆಯ ಒಳಗಿಂದ ಹೋಗಬೇಕು ಎಂಬ ಸೂಚನೆ ಸಿಕ್ಕಿತು. ಸೂಚನೆಯ ಪ್ರಕಾರ ಒಬ್ಬೊಬ್ಬರಾಗಿ ಸಣ್ಣ ಕಿಂಡಿಯಿಂದ ಒಳ ನುಸುಳುವಾಗ ಪ್ರತಿಯೊಬ್ಬರ ಮನದಲ್ಲು ಉತ್ಸಾಹ, ಭಯ ಜೊತೆಗೆ ಸ್ವಲ್ಪ ಸುಸ್ತು. ಗುಹೆಯ ಒಳಗೆ ಕತ್ತಲು ಬಿಟ್ಟರೆ ಬೇರೇನೂ ಕಾಣಿಸುತ್ತಿಲ್ಲ, ನಿಶ್ಯಬ್ದ ಬಿಟ್ಟರೆ ಬೇರೇನೂ ಕೇಳಿಸುತ್ತಿಲ್ಲ. ಅಲ್ಲಲ್ಲಿ ಸೂರ್ಯನ ಕಿರಣಗಳು ಸಣ್ಣ ಸಣ್ಣ ಕಿಂಡಿಗಳಿಂದ ಒಳ ಬರುತ್ತಿತ್ತು, ಬಂಡೆಯ ಸೀಳಿ ಬಂದಂತೆ ಕಾಣುತ್ತಿತ್ತು.

ಸ್ವಲ್ಪವೂ ಮೈ ಮರೆಯುವಹಾಗಿಲ್ಲ, ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ ಮುಂದೆ ಸಾಗುವಾಗ, ತಾಳ್ಮೆಯ ಪಾಠ ಕಲಿಸುತ್ತಿತ್ತು ಗುಹೆ. ಪ್ರತಿಯೊಬ್ಬರ ಪಂಚ ಇಂದ್ರಿಯಗಳು ಬಹಳ ಎಚ್ಚರಿಕೆಯಿಂದ ತಮ್ಮ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದವು. ಮೊದಮೊದಲ ಸುಲಭವೆನಿಸಿದರು, ಮುಂದೆ ಸಾಗಿದಂತೆ ಗುಹೆಯೊಳಗಿನ ಪ್ರಯಾಣದ ಕಠಿಣತೆ ಎಲ್ಲರಿಗೂ ಅರ್ಥವಾಗಿತ್ತು. ಎಲ್ಲರಿಗೂ ತಮ್ಮ ಸಾಮರ್ಥ್ಯ ಮತ್ತು ಮಿತಿಗಳ ಪರಿಚಯವಾಯಿತು.

ಹಲವು ವರ್ಷಗಳಿಂದ ಒಂದೇ ಸೂರಿನಡಿ ಕೆಲಸ ಮಾಡಿದರು ಒಬ್ಬರಿಗೊಬ್ಬರು ಮಾತನಾಡದೆ ತಾವಾಯಿತು ತಮ್ಮ ಕೆಲಸವಾಯಿತು ಎನ್ನುತ್ತಿದ್ದವರಿಗೆ, ಒಬ್ಬರಿಗೊಬ್ಬರು ಸಹಾಯ ಮಾಡದೆ ಮುಂದೆ ಸಾಗುವುದು ಕಷ್ಟ ಎಂಬ ಸತ್ಯ ಅರಿವಾಗಿತ್ತು.

ಎಷ್ಟೋ ಜನರಿಗೆ ಗುಹೆಯಲ್ಲಿಯೇ ಒಬ್ಬರಿಗೊಬ್ಬರ ಪರಿಚಯವಾಯಿತು. ಕಚೇರಿಯಲ್ಲಿ ಮುಖ ಪರಿಚಯ ಇದ್ದರು, ಪರಿಚಯ ಮಾಡಿಕೊಳ್ಳುವ ಗೋಜಿಗೆ ಹೋಗುತ್ತಿರಲಿಲ್ಲ, ಹಾಯ್ ಬಾಯ್ ಗೆ ಮುಗಿಯುತ್ತಿತ್ತು. ಗುಹೆಯೊಳಗೆ ಸತತ ಒಂದು ತಾಸಿಗಿಂತ ಹೆಚ್ಚು ಕಾಲ ಪಯಣ ಸಾಗಿತ್ತು. ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಾ, ಅವಕಾಶ ಸಿಕ್ಕಾಗ ಫೋಟೋ ಕ್ಲಿಕ್ಕಿಸುತ್ತ ಹೊರಗಿನ ಪ್ರಪಂಚನ್ನು ಮರೆತು ಪ್ರಕೃತಿಯ ಒಳಗೆ ಬೆರೆತು ಹೋಗಿದ್ದರು.

ಅಲ್ಲೆಲ್ಲೊ ಸಣ್ಣ ಬೆಳಕು ಕಂಡಿತು. ಗುಹೆಯ ನಿರ್ಗಮನ ದ್ವಾರದಿಂದ ಬರುತ್ತಿದ್ದ ಬೆಳಕು ಅದು. ಆ ಬೆಳಕಿಗೆ ಸಮೀಪ ಬರುತ್ತಿದ್ದಂತೆ ನೀಲಿ ಆಕಾಶ ಕೈ ಬೀಸಿ ಕರೆದಂತಿತ್ತು. ಯಾವುದೋ ಹೊಸ ಲೋಕಕ್ಕೆ ಬಂದಂತೆ ಭಾಸವಾಗಿತ್ತು. ನಿನ್ನೆಯ ಚಿಂತೆ, ನಾಳೆಯ ಆತಂಕ ಯಾವುದು ಇಲ್ಲದೆ, ಆ ಕ್ಷಣದಲ್ಲಿ ಮೈ ಮನಸ್ಸುಗಳ ಮರೆತಿದ್ದರು.

ಹೊರಬಂದು ಬೆಟ್ಟದ ತುತ್ತ ತುದಿಯಲ್ಲಿ, ತಂಗಾಳಿಯ ಅಲೆಗಳಿಗೆ ಕೈ ಚಾಚಿ, ಎದೆಯೊಡ್ಡಿ ನಿಂತ ಎಲ್ಲರ ಮೊಗದಲ್ಲೂ ಗುರಿ ಮುಟ್ಟಿದೆವೆಂಬ ಸಂತಸ, ಹೆಮ್ಮೆ. ಒಂದರ್ದ ತಾಸು ಆ ಅನುಭವವನ್ನು ಸವಿಯುತ್ತ ಬೆಟ್ಟದ ಮೇಲೆ ಕುಳಿತರು.

ಅರ್ಧ ತಾಸಿನ ನಂತರ ಮಾರ್ಗದರ್ಶಕರು ಕೂಗಿ ಹೇಳಿದರು “ಎರಡನೇ ಗುಹೆ ನಮಗಾಗಿ ಕಾಯುತ್ತಿದೆ”.

‍ಲೇಖಕರು avadhi

6 April, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading