ಎನ್ ಶೈಲಜಾ ಹಾಸನ ಓದಿದ ‘ಭಾವಪ್ರಣತಿ’

ಎನ್ ಶೈಲಜಾ ಹಾಸನ

ಅಂಕಣ ಬರೆಹದ ವೈಶಿಷ್ಟ್ಯವೆಂದರೆ ಸಾಮಾನ್ಯ ಓದುಗರಿಂದ ಹಿಡಿದು ವಿದ್ವಾಂಸರ ತನಕ ಎಲ್ಲರನ್ನೂ ಆಕರ್ಷಿಸುವ ಗುಣವನ್ನು ಪಡೆದುಕೊಂಡಿರುವುದೇ ಆಗಿದೆ. ಓದುಗರಲ್ಲಿ ಅಭಿರುಚಿ ಮೂಡಿಸುವ ಕಾರ್ಯವನ್ನು ಅಂಕಣ ಬರೆಹ ಮಾಡುತ್ತದೆ. ಅಂಕಣ ಬರೆಹಗಳು ಆತ್ಮಕೇಂದ್ರಿತವೆ, ಸಮಾಜ ಸಾಹಿತ್ಯ ಸಂಸ್ಕೃತಿ ಕೇಂದ್ರಿತವೆ ಎಂಬ ಪ್ರಶ್ನೆಯೂ ಇದೆ. ಸಾಮಾನ್ಯವಾಗಿ ಅಂಕಣ ಬರೆಹದಲ್ಲಿ ಲೇಖಕ ನಾನು ಎಂಬ ಪ್ರತ್ಯಯವನ್ನು ಬಳಸಿದರೂ ಅದು ಆತ್ಮಕೇಂದ್ರಿತ ಅಥವಾ ಅಹಮಿಕೆಯನ್ನು ಸೂಚಿಸುವ ಪದವಾಗಿ ಉಳಿಯುವುದಿಲ್ಲ; ಬದಲಿಗೆ ಬರೆಹಕ್ಕೆ ಸಂವಾದ ಸ್ವರೂಪವನ್ನು ನೀಡುತ್ತದೆ.

ಅಂಕಣ ಬರೆಹಕ್ಕೆ ಸಮಕಾಲೀನ ಸಮಾಜದ ಯಾವ ಮುಖವಾದರೂ ವಸ್ತುವಾಗಬಹುದೆಂದು ಪ್ರಸಿದ್ಧ ಅಂಕಣಕಾರರಾದ ಹಾ.ಮಾ. ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಅನೇಕ ಸಮಕಾಲೀನ ಬರಹಗಳ ಮೂಲಕ ಓದುಗರಿಗೆ ಹತ್ತಿರವಾಗಿರುವ ಸುಮಾ ವೀಣಾರವರು ಸತತವಾಗಿ ಬರೆಯುತ್ತಿರುವ ಪ್ರತಿಭಾವಂತ ಲೇಖಕಿ ಹಾಗು ಅಧ್ಯಯನಶೀಲರೂ  ಹೌದು.ಅವರ ಅನೇಕ ಲೇಖನಗಳ ಒಟ್ಟು ಸಂಗ್ರಹ ಭಾವಪ್ರಾಪ್ತಿ ಅನ್ನೊ ಪುಸ್ತಕ ರೂಪದಲ್ಲಿ ಸಹೃದಯರಿಗೆ ನೀಡಿದ್ದಾರೆ.

ಈ ಕೃತಿಯಲ್ಲಿ 24 ಲೇಖನ ಗಳಿದ್ದು ಪ್ರತಿಯೊಂದು ಲೇಖನವೂ ವಿಶಿಷ್ಟವಾಗಿದ್ಧು, ವೈಚಾರಿಕತೆ ಹಾಗು ಆಸಕ್ತಿ ದಾಯಕವಾಗಿವೆ. ಕ್ಷಮೆ, ಕೋಪ, ನಗು, ಧೈರ್ಯ, ನಂಬಿಕೆ, ಸಹಿಷ್ಣುತೆ,ಲೋಕದ ಕಾಳಜಿ, ಸಂಶಯ, ಮಾದಕವ್ಯಸನ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಮನೋಜ್ಞ ವಾಗಿ ಬರೆದು ಓದುಗರಿಗೆ ರಸದೌತಣ ನೀಡಿದ್ದಾರೆ. ಅವರ ಲೇಖನಗಳನ್ನು ಓದಿದಾಗ, ಅವರು ನೀಡಿರುವ ಉದಾಹರಣೆಗಳನ್ನು ಅವಲೋಕಿಸಿದಾಗ ಪುರಾಣ ,ಕಾವ್ಯ, ಶ್ರೇಷ್ಟ ಸಾಹಿತ್ಯಗಳ ಅಧ್ಯಯನ ನಿರಂತರವಾಗಿದೆ ಎಂದು ಅರಿವಾಗಿದೆ ಇರದು.
     
ಭಾವಪ್ರಣತಿಯ ಕಿರುಬರಹಗಳ ಹೊತ್ತಿಗೆಯೊಳಗಿನ ಬದುಕು ಒಂದು ನವರಸ ಕಾವ್ಯ ಅನ್ನೋ ಲೇಖನದಲ್ಲಿ ಸಿಹಿ,ಕಹಿ,ಸುಖ, ದುಃಖ, ರಾತ್ರಿ ಹಗಲು ,ಹುಟ್ಟು ಸಾವು ಇವು ಬರಿ ಜೋಡುಪದಗಳಲ್ಲ, ಒಂದಾದ ಮೇಲೆ ಒಂದು  ಪುನರಾವರ್ತಿತವಾಗುವ ಸತ್ಯಗಳು.ಶೃಂಗಾರ, ಹಾಸ್ಯ,ಕರುಣಾ, ರೌದ್ರ,ಭಯಾನಕ ಅನ್ನೋ ನವರಸ ಪಾಕದಲಿ ಮಿಂದೇಳುವ ಈ ಬದುಕಿನಲಿ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಹೊಂದಿರಬೇಕು ಎಂದು ಲೇಖಕಿ ಹೇಳುತ್ತಾರೆ. 

ಯುವಜನತೆ ಮಾದಕ ವ್ಯಸನಿಗಳಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾ ಯುವಜನರಿಗೆ ಮಾದಕ ದ್ರವ್ಯ ತಂದೊಡ್ಡುವ ಆಪತ್ತುಗಳ ಕುರಿತು ಜಾಗೃತಿಯನ್ನು ಹಿರಿಯರು, ಮನೋವಿಜ್ಞಾನಿಗಳು, ವೈದ್ಯರು, ಬರಹಗಾರರು, ಸಮೂಹ ಮಾಧ್ಯಮದವರು ಮೂಡಿಸಬೇಕು .ಮಾದಕ ದ್ರವ್ಯದಿಂದ ಆಗುವ ಸಂಚನೆಗಳನ್ನು ಅಭಿಯಾನದ ಮಾದರಿಯಲ್ಲಿ ಮಾಡಿಸಬೇಕಾಗಿದೆ. ಇದು ಸಮಾಜಮುಖಿ ಕೆಲಸ. ಇಂತಹ ಕೆಲಸಕ್ಕೆ ಇದು ಸಕಾಲವಾಗಿದೆ ಎನ್ನುತ್ತಾರೆ ಸುಮಾ ವೀಣಾರವರು.

ಅಮ್ಮನ ಬಗ್ಗೆ ಅಮ್ಮನ ಮಮತೆ, ಪ್ರೀತಿ, ವಾತ್ಸಲ್ಯ, ತ್ಯಾಗದ ಬಗ್ಗೆ ಯಾರು ಬರೆದಿಲ್ಲ ಹೇಳಿ. ಅಂತಹ ಅಮ್ಮನ ಮಹತ್ವದ ಬಗ್ಗೆ ಸುಮಾ ವೀಣಾ ಕೂಡ ಬರೆಯುತ್ತಾರೆ. ಮಕ್ಕಳ ಬದುಕಲ್ಲಿ ಆನಂದವನ್ನು ಅನಂತವಾಗಿ ತರ ಬಯಸುವ ಬಂಧು ಅಮ್ಮ, ಸುಖ ಸ್ವರೂಪಿಣಿ, ಮಧುರ ಭಾಷಿಣಿ ನಮ್ಮನ್ನು ಈ ಜಗತ್ತಿಗೆ ತಂದಿದ್ದು ಅಮ್ಮ. ಇಂತಹ ಅಮ್ಮನಿಗೆ ಸರಿಸಾಟಿ ಯಾರು ಎಂದು ಹೇಳುತ್ತಾ ಅಮ್ಮನ ಪದಕ್ಕೆ ವ್ಯಾಖ್ಯಾನ ಮಾಡುವುದು ಸುಲಭವೂ, ಸಾಧ್ಯವೂ ಇಲ್ಲದ್ದು ಎನ್ನುತ್ತಾರೆ.

“ಒಡನೆ ಮಾಗಧನ ಸೇವಕರು ಬಡಿದರು ಹಲ್ಲೆಲ್ಲಾ ಕವಡೆಯ ಚೀಲವ ಕೊಡಹಿಂದೆಂತು ತುದಿರ್ದುವು ಧರೆಗೆ” ಇದು ರತ್ನಾಕರವರ್ಣಿಯ ಭರತೇಶ ವೈಭವದಲ್ಲಿ ಉಲ್ಲೇಖವಾಗಿರುವ ಪದ್ಯ.ಇಲ್ಲಿ  ಕವಡೆ ಅನ್ನುವ ಪದ ಇರುವುದನ್ನು ಹೇಳುತ್ತಾ ಕವಡೆಯ ಬಗ್ಗೆ ಇಡೀ ಲೇಖನದಲ್ಲಿ ವಿವರಿಸಿದ್ದಾರೆ .ಕಪರ್ದಿಕ ಎಂದೆ ಕರೆಸಿಕೊಂಡು ಅನೂಚಾನವಾಗಿ ಅಸ್ತಿತ್ವವನ್ನು  ಕಾಪಾಡಿಕೊಂಡು ಬಂದಿರುವ ಕವಡೆಯನ್ನು ಆರೋಗ್ಯವರ್ಧಕ ಆಯುಷ್ಯ ವರ್ಧಕ ಎನ್ನುವುದಿದೆ .ಕವಡೆ ಕಾಸಿಗೆ ಕಿಮ್ಮತ್ತಿಲ್ಲ ಎಂದು ಹೇಳಿಕೊಳ್ಳುತ್ತಲೇ ಸೌಂದರ್ಯ, ಪರಂಪರೆ, ವಸ್ತ್ರ ವಿನ್ಯಾಸಗಳಲ್ಲಿ ಬೆಲೆಯನ್ನು ಇಟ್ಟುಕೊಂಡಿರುವ ಗಿಟ್ಟಿಸಿಕೊಂಡಿರುವ ಕವಡೆ ನೈಸರ್ಗಿಕ ಸಂಪತ್ತೆ ಸರಿ ಎಂದು ಲೇಖಕಿ ತಿಳಿಸುತ್ತಾರೆ.

ಹಣವಿಲ್ಲದೆ ಬದುಕು ಇಲ್ಲ ಅನ್ನುವ ಸತ್ಯ ತಿಳಿದಿದ್ದೆ ಆಗಿದೆ. ಕಾಡುವ, ಕಾಯುವ ಮಾಯೆ ಈ ಹಣ. ಸಮಾಜದಲ್ಲಿ ಆಗುವಂತಹ ಕೊಲೆ, ಸುಲಿಗೆ ,ದರೋಡೆ, ಆತ್ಮಹತ್ಯೆ, ಕಿರುಕುಳ ಇತ್ಯಾಗಳೆಲ್ಲ ನಡೆಯುವುದು ಹಣಕ್ಕಾಗಿಯೆ, ಹಾಗೆ ತುಂಬಿದ ಐಶ್ವರ್ಯ ಸುಖ ಲೋಲುಪತಿಯ ತುತ್ತತುದಿ ತೋರಿಸುವುದು ವೈರಾಗ್ಯವನ್ನೆ ಎಂದು ಲೇಖಕಿ ತಿಳಿಸುತ್ತಾ , ಹಣವಿದೆ ಎಂದರೆ ಧನಾತ್ಮಕತೆಯನ್ನು ಸಂಕೇತಿಸುತ್ತದೆ .ಬದುಕಲ್ಲಿ ಹಣ ಹೆಚ್ಚಾದಂತೆ ಬದುಕು ಅರ್ಥಹೀನವಾಗುತ್ತದೆ ಎಂದು ಹಣದ ಋಣಾತ್ಮಕತೆ ಹಾಗೂ ಧನಾತ್ಮಕತೆ ಕುರುತು ಈ ಲೇಖನದಲ್ಲಿ ಬರೆದಿದ್ದಾರೆ.

ಕ್ಷಮೆ ವರದಾನ ಹೌದು, ತಪ್ಪು ಮಾಡುವುದು ಸಹಜ ಗುಣ, ತಪ್ಪಿಗೆ ಕ್ಷಮೆ ನೀಡುವುದು ದೇವಗುಣ ಎನ್ನುತ್ತಾರೆ ಸುಮಾರವರು. ತಪ್ಪಿಗೆ ಶಿಕ್ಷೆ ಎಂದಿಗೂ ಪರಿಹಾರವಲ್ಲ, ಗೊತ್ತಿಲ್ಲದೆ ಮಾಡಿದ ತಪ್ಪುಗಳಿಗೆ  ಕ್ಷಮೆ ಖಂಡಿತ ಇರಬೇಕು. ಆದರೆ ತಿಳಿದು ತಿಳಿದು ತಪ್ಪು ಮಾಡಿದವರು ಕ್ಷಮೆಗೆ ಅರ್ಹರಲ್ಲ. ಕ್ಷಮೆ ಎಂದರೆ ಅಲ್ಲೊಂದು ತಿದ್ದುವಿಕೆ, ಪ್ರೀತಿ, ಎದುರಿಗಿದ್ದವರ ಏಳಿಗೆಯನ್ನು ಮುಂಗಾಣುವ ಸಹರ್ಷ ಎಂದು ಕ್ಷಮೆಯ ಮಹತ್ವದ ಪರಿಚಯ ಮಾಡಿದ್ದಾರೆ.

ಒಟ್ಟಾರೆ ಈ ಕೃತಿಯಲ್ಲಿ ಶಿಷ್ಟ ಪ್ರಾಚೀನತೆಗೆ ಸ್ಪಷ್ಟ ಆಧುನಿಕತೆ ಬೆರೆತು ಸುಖಾವಹ ಸಮಾಜ ಸೃಷ್ಟಿಯಾಗಲು ಅವಶ್ಯಕವಾದ ಮೂಲಮಂತ್ರ ಈ ಕೃತಿಯಲ್ಲಿ ಇದೆ ಎಂದು ಮುನ್ನುಡಿಯಲ್ಲಿ ಬರೆದಿರುವಂತೆ  ಸಮಾಜಮುಖಿ, ಆದರ್ಶ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸುಮಾರಮೇಶರವರಈ ಕೃತಿ ನೆರವು ನೀಡುವಲ್ಲಿ ಯಶಸ್ವಿಯಾಗಿದೆ.

‍ಲೇಖಕರು Admin

March 31, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: