ಎನ್ ರವಿಕುಮಾರ್ ಟೆಲೆಕ್ಸ್
ರಾಜಸತ್ತೆಯು ಸತ್ತು ಏಳೊಪ್ಪತ್ತಾಗಿ
ಹೆಣ ನಾರುತಿದೆ ದಿಕ್ಕು ದಿಕ್ಕಿಗೆ
ನಾಯಿ – ನರಿ ತೋಳಗಳಿಗೆ ಹಬ್ಬದೂಟ
ರಾಜಾಧಿರಾಜನು ಪರಿವಾರವು
ಮೂಗಿನೊಳ್ಳೆಗಳಿಗೆ
ಸುಗಂಧ ಮಿಂದ ಹತ್ತಿ ಮೆತ್ತಿಕೊಂಡು
ಮಿಥುನದಲಿ ಮಲೆತಿವೆ
ಊರಲ್ಲಿ ರಾಕ್ಷಸರ ಒಡ್ಡೋಲಗ
ಅರಮನೆಯ ಮುತ್ತೈದೆಯರು
ಮೂರು ಬಣ್ಣದ ರತ್ನೀರ ತೆಗೆದು
ಮೂರು ಮುಷ್ಟಿ ಅನ್ನ ಮಿದ್ದಿರಲು
ಕಾಗೆಗಳ ಹಿಂಡು ಪಿಂಡ ಮುಕ್ಕಲು
ಸೂರ್ಯ ಸಾಯುವುದೇ ಕಾದು ಕುಂತಿವೆ

ನಾಗನೂರಿನಲಿ ನಿತ್ಯ ಯಜ್ಞ
ಸಹಸ್ರಪಾದ ಸಹಸ್ರ ನಾಲಿಗೆಯ
ಕಾಳಸರ್ಪಗಳ ವಿಷ ಉಕ್ಕಿದೆ
ಉತ್ತರಕೂ ದಕ್ಷಿಣಕೂ
ಪೂರ್ವ ಪಶ್ಚಿಮ ನಡುಗಡ್ಡೆಯ ಸೀಮೆಗೂ
ಅಲ್ಲೀಗ ದೇವರುಗಳಿಗೆ ಉಯ್ಯಾಲೆ ಶಾಸ್ತ್ರ
ಮೆರವಣಿಗೆ ಬರುವಾಗ ದಾರಿಯಲಿ
ನರಮಾನವರು ಇರಬಾರದು
ನೋಡಬಾರದು, ಆಡಬಾರದು
ಕಣ್ಣಗುಡ್ಡೆಗಳ ಕಿತ್ತು ನಾಲಿಗೆ ಸೀಳಿ
ತಲೆ ಬುರುಡೆಯನ್ನು ಈಡುಗಾಯಿ ಹೊಡೆದಾರು
ಗಡಿ ಗಡಿಗೂ ಕೇಡಿನ ಚರಗ
ಊರ ಬೀದಿ ಬೀದಿಯಲಿ ಸೇಡಿನ ಕರಗ
ಊರ ಜನ ಅಳುವುದಾ ನೋಡಿದರೆ
ರಾಜನೂ ರಾಜಪರಿವಾರವೂ
ರಣರೋಗದಿಂದ ಸತ್ತಿರಲೇಬೇಕು






0 Comments