ಎನ್ ಎಸ್ ಶಂಕರ್ ಕೇಳುತ್ತಾರೆ: ‘ಶಿಕಾರಿ’ಯ ನೈತಿಕ ನೆಲೆ ಯಾವುದು?

ನಾಗಪ್ಪನ ನೀತಿ, ನಿಯಮ
‘ಶಿಕಾರಿ’ಯ ನೈತಿಕ ನೆಲೆ ಯಾವುದು?

1

-ಎನ್.ಎಸ್. ಶಂಕರ್

ತಲೆಗೂದಲು ಬಾಚಿಕೊಳ್ಳುವಾಗ ಕನ್ನಡಿಯಲ್ಲಿ ‘ಮೂಡಿದ ಮೋರೆ ತನ್ನದಲ್ಲವೇ ಅಲ್ಲ ಎನ್ನುವಂತಹ ಪರಕೀಯತೆಯ ಭಾವನೆಯಿಂದ ಕ್ಷಣ ಕಾಲ ನಿರುಕಿಸಿದ್ದ. ಕಾರಿನಲ್ಲಿ ಕೂತು ತಾಜಮಹಲ್ ಹೋಟೆಲ್ ಅತ್ತ ಸಾಗುತ್ತಿದ್ದವನ ಮನಸ್ಸಿನಲ್ಲಿ ಮೂಡಿ ನಿಂತದ್ದು ಅದೇ ಮೋರೆ: ತನ್ನದಾಗಿಯೂ ಬೇರೆಯೇ ಒಬ್ಬನದಾಗಿ ತೋರಿದ್ದು! ಅದರ ಕಣ್ಣುಗಳಲ್ಲಿ ಮೂಡಿದ ನಿಷ್ಪಾಪ ಮುಗ್ಧತೆ ನಾಗಪ್ಪನನ್ನು ಎಷ್ಟೊಂದು ಆಳಕ್ಕೆ ಕಲಕಿಬಿಟ್ಟಿತ್ತೆಂದರೆ ಅದರಿಂದಾಗಿ ಹುಟ್ಟಿದ ಅಂತರ್ಮುಖತೆಯಿಂದ ಹೊರಗೆ ಬರಲು ಬಹಳ ಹೊತ್ತು ಹಿಡಿಯಿತು…’

ಹೀಗೆ ತನ್ನ ಕಣ್ಣುಗಳಲ್ಲಿ ತಾನೇ ‘ನಿಷ್ಪಾಪ ಮುಗ್ಧತೆ’ಯನ್ನು ಕಂಡು ಆತ್ಮಮರುಕದಿಂದ ಅಂತರ್ಮುಖಿಯಾಗುವವನು, ಯಶವಂತ ಚಿತ್ತಾಲರ ಸುಪ್ರಸಿದ್ಧ ಕಾದಂಬರಿ ‘ಶಿಕಾರಿ’ಯ ಕಥಾನಾಯಕ ನಾಗಪ್ಪ.

ಪ್ರಕಟವಾದ 1979ರಿಂದಲೂ- ಅಂದರೆ ಸರಿ ಸುಮಾರು ನಾಲ್ಕು ದಶಕ ಕಾಲ ಓದುಗರನ್ನು, ಅದರ ಜೊತೆಗೆ ಕನ್ನಡ ಸಾರಸ್ವತ ಲೋಕವನ್ನು ‘ಶಿಕಾರಿ’ ರೋಮಾಂಚನಗೊಳಿಸಿದೆ.

ಈ ಕಾದಂಬರಿಯ ಇಂಗ್ಲಿಷ್ ಆವೃತ್ತಿ ಸಿದ್ಧವಾಗಿ ಈಗಷ್ಟೇ ಬಿಡುಗಡೆಯಾಗಿರುವ ಈ ಸಂದರ್ಭದಲ್ಲಿ ಚಿತ್ತಾಲರ ಬಗ್ಗೆ- ವಿಶೇಷವಾಗಿ ‘ಶಿಕಾರಿ’ಯನ್ನು ದೃಷ್ಟಿಯಲ್ಲಿರಿಸಿಕೊಂಡು- ‘ನಾಳೆಗಳನ್ನು ಕಂಡ ಲೇಖಕ’ ಎಂಬ ಮಾತುಗಳು ಬಂದಿವೆ.

ಗಿರೀಶ್ ಕಾರ್ನಾಡರಂತೂ ಇನ್ನಷ್ಟು ಮೊನಚಾಗಿ ‘ಚಿತ್ತಾಲರನ್ನು ಓದುವುದೆಂದರೆ ಇಡಿಯಾಗಿ ನಗರ ಜೀವನದ ಹಾಗೂ ನಗರದ ದುಃಸ್ವಪ್ನಗಳ ಸಂಪೂರ್ಣ ದರ್ಶನ ಪಡೆಯುವುದು’ ಎಂದು ಬಣ್ಣಿಸುತ್ತಾರೆ. ಇದು ಯಶವಂತ ಚಿತ್ತಾಲರ ಅತಿ ಮುಖ್ಯ ಕೃತಿಯಷ್ಟೇ ಅಲ್ಲ, ಸಮಗ್ರ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲೇ ಗಣ್ಯ ಸ್ಥಾನ ಪಡೆದ ಕಾದಂಬರಿಯೂ ಹೌದು.

ಸ್ವತಃ ಚಿತ್ತಾಲರು ‘ನನಗೆ ತುಂಬ ಸುಖ, ಸಮಾಧಾನ ತಂದ ಕೃತಿ’ ಇದು ಎಂಬ ಸಾರ್ಥಕ ಭಾವ ತೋರುತ್ತಾರೆ (ಮುನ್ನುಡಿ). ಈಗ ‘ಶಿಕಾರಿ’ಯ ಮರು ಓದಿಗೆ ಹವಣಿಸುವಾಗ ಈ ವಿಜೃಂಭಣೆಯ ದನಿಗಳನ್ನು ತುಸು ಕಾಲವಾದರೂ ಬದಿಗಿಟ್ಟು ಹೊಸದಾಗಿ ಕಣ್ಣು ತೆರೆದು ನೋಡುವುದು ತುಸು ಪ್ರಯಾಸದ ಕೆಲಸವಾದರೂ, ಅನಿವಾರ್ಯ. ಇರಲಿ.

ಎಲ್ಲರಿಗೂ ಗೊತ್ತಿರುವ ಹಾಗೆ ‘ಶಿಕಾರಿ’ಯ ವಸ್ತು- ‘ಅಮಾಯಕನಾದ, ಯಾವ ತಪ್ಪೂ ಮಾಡಿರದ, ವ್ಯವಹಾರ ಜ್ಞಾನವಿರದ ನಾಗಪ್ಪನನ್ನು, ಅವನು ಕಟ್ಟಿ ಬೆಳೆಸಲು ಸಾಕಷ್ಟು ಶ್ರಮ ವಹಿಸಿದ ಸಂಸ್ಥೆಯಲ್ಲೇ’- ಬೇಟೆಯಾಡಿ ಕಡೆಗೆ ಆತ ರಾಜೀನಾಮೆ ಕೊಟ್ಟು ಹೊರಗೋಡುವ ಪರಿಸ್ಥಿತಿ ಸೃಷ್ಟಿಸುತ್ತಾರೆ…

ಈ ಕಥಾಹಂದರವನ್ನು ಚಿತ್ತಾಲರು ಕನ್ನಡದಲ್ಲಿ ಅಪರೂಪ ಎನಿಸುವ ಮಟ್ಟಿನ ಪ್ರೌಢ ಸಂಕೀರ್ಣತೆ ಹಾಗೂ ಅಸಾಧಾರಣ ವಿವರ ಸಮೃದ್ಧಿಗಳೊಂದಿಗೆ,- ಇದು ಮುಂಬಯಿಯಂಥ ಮಹಾನಗರ ಜೀವನಕ್ಕೆ ಮನುಷ್ಯ ಅನಿವಾರ್ಯವಾಗಿ ತೆರಬೇಕಾದ ಬೆಲೆಯೂ ಹೌದು ಎಂಬ ಧ್ವನಿಯೊಂದಿಗೆ- ಕಣ್ಣು ಕೋರೈಸುವಷ್ಟು ಉಜ್ವಲವಾಗಿ ನಿರ್ವಹಿಸುತ್ತಾರೆ.

ಒಟ್ಟು ‘ಶಿಕಾರಿ’ಯಲ್ಲಿ ಓದುಗರು ಅನುಭವಿಸುವುದು- ಉಗುರು ಕಚ್ಚುತ್ತ ಉಸಿರು ಬಿಗಿ ಹಿಡಿದು ಓದುವ ಮಟ್ಟಿನ- ಥ್ರಿಲರ್‍ನಂಥ ಹೆಣಿಗೆ.

ಈ ಕಾದಂಬರಿಯಲ್ಲಿ ನಾಗಪ್ಪನ ನಿಷ್ಪಾಪ ಮುಗ್ಧತೆಯನ್ನು ನಿರೂಪಿಸಲೆಂದೇ ಲೇಖಕರು ಸಾಕಷ್ಟು ಬೆವರು ಹರಿಸಿದ್ದಾರೆ. ತಾವು ಸೃಷ್ಟಿಸಿದ ಪಾತ್ರಗಳಲ್ಲೇ ಚಿತ್ತಾಲರಿಗೆ ನಾಗಪ್ಪನೆಂದರೆ ವಿಶೇಷ ಮೋಹವಿದ್ದಂತಿದೆ. ಯಾಕೆಂದರೆ ಅವರು ನಾಗಪ್ಪನನ್ನು ಹೆಚ್ಚೂಕಮ್ಮಿ ತಮ್ಮದೇ ವ್ಯಕ್ತಿತ್ವದ ಎರಕದಲ್ಲಿ ಅದ್ದಿ ತೆಗೆಯಲು ಯತ್ನಿಸಿದ್ದಾರೆ!

ನಾಗಪ್ಪ ಉರುಫ್ ನಾಗನಾಥ ಸಾಂತಯ್ಯ ಮಾಪ್ಸೇಕರ್- ಸಾರಸ್ವತ ಬ್ರಾಹ್ಮಣ ಕುಲದವನು- ಚಿತ್ತಾಲರ ಹಾಗೆಯೇ. ಅವರಂತೆಯೇ ರಸಾಯನಶಾಸ್ತ್ರದ ವಿದ್ಯಾರ್ಥಿಯಾಗಿ ಕೆಮಿಕಲ್ ಉದ್ದಿಮೆಯಲ್ಲಿ ರಸಾಯನ ತಜ್ಞನಾದವನು. ಅವರಂತೆಯೇ ಸಾಕಷ್ಟು ಓದಿಕೊಂಡವನು ಮತ್ತು ಸಾಹಿತಿ ಕೂಡ. ಅವನ ಓದಿನ ಅಭಿರುಚಿಯೂ ಹೆಚ್ಚು ಕಡಿಮೆ ಚಿತ್ತಾಲರ ಅಭಿರುಚಿಯೇ-

‘….ಆಫೀಸಿನ ಕೆಲಸ ಬಿಟ್ಟರೆ ನನಗೆ ಬಹಳ ಪ್ರಿಯವಾದದ್ದು ಸಾಹಿತ್ಯ. ವಿದ್ಯಾರ್ಥಿದೆಸೆಯಲ್ಲಿ ಕಲಿತದ್ದು ಮಾತ್ರ ವಿಜ್ಞಾನ. ಅಲ್ಲೂ ಕೂಡ ರಸಾಯನಶಾಸ್ತ್ರದ ವಿದ್ಯಾರ್ಥಿಯಾಗಿಯೂ ಆಸ್ಥೆಯಿದ್ದದ್ದು ಡಾರ್ವಿನ್ನನ ವಿಕಾಸವಾದದಲ್ಲಿ; ಫ್ರಾಯ್ಡ್, ಯುಂಗರ ಮನೋವಿಶ್ಲೇಷಣೆಯಲ್ಲಿ. ಮಾಕ್ರ್ಸ್, ರಾಯ್ ಅವರ ಬರವಣಿಗೆಯಲ್ಲಿ. ಲಂಗೋಟೀ ಗೆಳೆಯರೆನ್ನುವಷ್ಟರ ಮಟ್ಟಿಗೆ ಭಾವನಾತ್ಮಕವಾಗಿ ಹತ್ತಿರವಾದವರು ಇವರೆಲ್ಲ. ಸದ್ಯ ಕಾನ್ರಾಡ್ ಲಾರೆಂಝ್, ಎರಿಕ್ ಬರ್ನ್ ಕೂಡ ಹತ್ತಿರವಾಗುತ್ತಿದ್ದಾರೆ….’ ಸಂಸ್ಥೆಯಲ್ಲಿ ಬಿಕ್ಕಟ್ಟು ಎದುರಾದ ಕೂಡಲೇ ನಾಗಪ್ಪನ ನೆನಪಿಗೆ ಬರುವವನು “ಕಾಫ್ಕಾನ ‘ಟ್ರಾಯಲ್’ ಕಾದಂಬರಿಯ ನಾಯಕ ‘ಕೇ”. (ಆ ಉಲ್ಲೇಖ ಕಾಣುವುದು ‘ಶಿಕಾರಿ’ ಕಾದಂಬರಿಯ ಮೊದಲ ವಾಕ್ಯದಲ್ಲೇ.)

ಇಂಥ ಸೂಕ್ಷ್ಮ ಸಂವೇದನೆಯ ನಾಗಪ್ಪನ ಅಮಾಯಕತೆಯನ್ನು ಚಿತ್ತಾಲರು ಕಾದಂಬರಿಯುದ್ದಕ್ಕೂ, ಹೆಜ್ಜೆಹೆಜ್ಜೆಗೂ ನಿರೂಪಿಸುತ್ತಲೇ ಹೋಗುತ್ತಾರೆ. ಕಥನದ ವಿವಿಧ ಹಂತಗಳಲ್ಲಿ ನಾಗಪ್ಪ ತನ್ನ ಬಗ್ಗೆ ತಾನು ಅಂದುಕೊಳ್ಳುವ ಮಾತುಗಳಾಗಲಿ, ಲೇಖಕರು ಅವನ ವ್ಯಕ್ತಿತ್ವವನ್ನು ಚಿತ್ರಿಸುವ ಬಗೆಯಾಗಲಿ, ಅಥವಾ ಇತರೆ ಪಾತ್ರಗಳು ಬೇರೆ ಬೇರೆ ಸಂದರ್ಭಗಳಲ್ಲಿ ನಾಗಪ್ಪನನ್ನು ಕಾಣುವ ರೀತಿಯಿರಲಿ- ಎಲ್ಲವೂ ಒತ್ತಿ ಒತ್ತಿ ಹೇಳುವುದು ನಾಗಪ್ಪನ ಈ ‘ನಿಷ್ಪಾಪ ಮುಗ್ಧತೆ’ಯನ್ನೇ.

ಹಾಗೆ ನೋಡಿದರೆ ‘ಶಿಕಾರಿ’ ಕಾದಂಬರಿಯಲ್ಲಿ ಪ್ರತ್ಯಕ್ಷವಾಗುವ ಪ್ರತಿಯೊಬ್ಬರೂ- ನಾಗಪ್ಪನ ಸಹೋದ್ಯೋಗಿಗಳು, ಗೆಳೆಯರು, ನೆರೆಹೊರೆಯವರು- ಎಲ್ಲರೂ ದುಷ್ಟರೇ- ನಾಗಪ್ಪ ಒಬ್ಬನನ್ನುಳಿದು! ಅದರಲ್ಲೂ ವಿಶೇಷವಾಗಿ, ಪಾರ್ಸಿ ಸಮುದಾಯದ ಪಾತ್ರಗಳೆಲ್ಲವೂ- ನಾಗಪ್ಪನ ಸರ್ವನಾಶಕ್ಕೆ ಪಣ ತೊಟ್ಟು ನಿಂತ ಧೂರ್ತರೇ!

(ಈ ಎರಡು ಅಂಶಗಳ ಬಗ್ಗೆ ಈ ಹಿಂದಿನ ವಿಮರ್ಶಕರೂ ಗಮನ ಸೆಳೆದಿದ್ದಾರೆ. ಅಷ್ಟಾದರೂ ಈ ನಿಯಮಕ್ಕೆ ಅಪವಾದಕ್ಕೆಂಬಂತೆ ಕಾದಂಬರಿಯಲ್ಲಿ ಒಬ್ಬ ಪಾರ್ಸಿ ಮುದುಕನ ಪಾತ್ರ ಬರುತ್ತದೆ. ಆ ಮುದುಕ, ನಾಗಪ್ಪ ಟೆಲಿಫೋನ್ ಬೂತಿನಲ್ಲೇ ಮೂರ್ಛೆ ಹೋದಾಗ ಕಾಳಜಿಯಿಂದ ಆತನನ್ನು ಮನೆವರೆಗೆ ತಲುಪಿಸಿ ಹೋಗುತ್ತಾನೆ)…

ಕಾದಂಬರಿಕಾರ ನಾಗಪ್ಪನ ವ್ಯಕ್ತಿತ್ವವನ್ನು ಬಣ್ಣಿಸುವ ಕೆಲವು ಉದಾಹರಣೆಗಳನ್ನು ಇಲ್ಲಿ ಗಮನಿಸಬಹುದು. ಮೊದಲಿಗೆ ಅವನ ಕಾರ್ಯಕ್ಷಮತೆಯ ಬಗ್ಗೆ:

‘ತಂತ್ರ ವಿಜ್ಞಾನದ ಪ್ರಾವೀಣ್ಯದಲ್ಲಿ ನಾಗಪ್ಪನನ್ನು ಸರಿಗಟ್ಟುವ ಇನ್ನೊಬ್ಬ ಇಡೀ ಕಾರಖಾನೆಯಲ್ಲೇ ಇಲ್ಲ ಎನ್ನುವ ಪ್ರತೀತಿ ಇದ್ದರೂನೂ ಈತ ಭಾವನಾಪ್ರಧಾನಿಯಾದವನು. ವ್ಯವಹಾರಜ್ಞಾನವಿಲ್ಲದವನು ಎನ್ನುವ ಅಭಿಪ್ರಾಯವೊಂದು ಮೇಲಿನ ಅಧಿಕಾರಿಗಳಲ್ಲಿ ನೆಲೆಗೊಂಡಿತ್ತು…’

‘ಕಂಪನಿಯ ಇಂದಿನ ಉತ್ತಮ ಸ್ಥಿತಿಗೆ ಕಾರಣವಾದ ಟೆಕ್ನಾಲೊಜಿ ಮಾತ್ರ ನಾಗಪ್ಪನ ಸೃಷ್ಟಿಶೀಲ ಮನಸ್ಸಿನ ಫಲವಾಗಿತ್ತು…’
ಸ್ವತಃ ನಾಗಪ್ಪನ ಚಿಂತನೆಯ ಧಾಟಿಯೂ ಹೀಗೇ ಇದೆ:

ನನ್ನೆಲ್ಲ ಕರ್ತೃತ್ವ ಶಕ್ತಿಯನ್ನು ನಾನು ಸದ್ಯ ಕೆಲಸ ಮಾಡುತ್ತಿದ್ದ ಈ ಕಂಪನಿಯನ್ನು ಕಟ್ಟುವುದರಲ್ಲಿ ತೊಡಗಿಸದೇ ಇದ್ದಲ್ಲಿ, ಇಲ್ಲವೇ ಹಾಗೆ ಕಟ್ಟಿ ಇಂದಿನ ಭರಭರಾಟಿಯ ಸ್ಥಿತಿಗೆ ತರುವುದರಲ್ಲಿ ನಾನು ಬಹು ದೊಡ್ಡ ಭಾಗವಹಿಸಿದ್ದೇನೆ ಎಂಬ ಭ್ರಮೆಯನ್ನು ನಾನು ಮೊದಲಿನಿಂದಲೂ ಇಟ್ಟುಕೊಳ್ಳದೇ ಇದ್ದಲ್ಲಿ, ಇಂದಿನ ಈ ದುಃಖದಾಯಕ ಸ್ಥಿತಿಗೆ ಬರುತ್ತಿರಲಿಲ್ಲವೇನೋ…
ಲೇಖಕರು ಧಾಟಿಯೂ ಇದನ್ನು ಅನುಮೋದಿಸುವ ಹಾಗೆಯೇ ಇದೆ-

‘…ಹಾಗೆ ನೋಡಿದಲ್ಲಿ ಮಹತ್ವಾಕಾಂಕ್ಷೆ ಅವನ ಸ್ವಭಾವ- ಶಿಲ್ಪದಲ್ಲೇ ಇಲ್ಲವಾಗಿತ್ತು. ಈ ಮಹತ್ವಾಕಾಂಕ್ಷೆಯ ಅಭಾವವೇ ಒಂದು ಅರ್ಥದಲ್ಲಿ ಅವನು ಸದ್ಯ ಸಿಲುಕಿಕೊಂಡ ಸನ್ನಿವೇಶಕ್ಕೆ ಕಾರಣವಾಗಿತ್ತೆನ್ನಬಹುದು. ಆರ್ ಎಂಡ್ ಡೀ ಬಿಟ್ಟರೆ ನಾಗಪ್ಪ ತುಂಬ ತನ್ಮಯತೆಯಿಂದ ತೊಡಗುತ್ತಿದ್ದದ್ದು ಸಾಹಿತ್ಯದಲ್ಲಿ. ಸಾಲೆಯ ದಿನಗಳಿಂದಲೇ ಕವಿತೆ ಗೀಚುವ, ಕತೆ ಬರೆಯುವ ಹುಚ್ಚು ಹವ್ಯಾಸ. ಸಣ್ಣ ಕತೆಯ ಕ್ಷೇತ್ರದಲ್ಲಿ ಹೆಸರನ್ನು ಗಳಿಸುವ ಪ್ರತಿಭೆಯಿದ್ದೂ ಹೆಸರು ಗಳಿಸುವುದರ ಬಗೆಗೇ ನಿರಾಸಕ್ತ.’

ಅಷ್ಟೇ ಅಲ್ಲ, ‘ತನ್ನ ಹಲವಾರು ದುಃಖಗಳಿಗೆ ತನ್ನ ಸ್ವಭಾವರಚನೆಯಲ್ಲೇ ಬೆಳೆದುಬಂದ ಒಂದು ದಾರುಣವಾದ ಒಂಟಿತನ ಕಾರಣವಾಗಿದೆ ಎಂಬ ಅರಿವು ನಾಗಪ್ಪನಿಗೆ ಇದೆಯಾದರೂ ಅದರ ಬಗ್ಗೆ ಏನೂ ಮಾಡಲು ಆಗದವನಾಗಿದ್ದಾನೆ.’

ಇನ್ನು ಒಮ್ಮೆ ಮಾತ್ರ ಇವನ ಸಂಪರ್ಕಕ್ಕೆ ಬರುವ ಗಗನಸಖಿ ಡಯಾನಾ ಡ್ರಾೈವರ್ (ಈತನ ಸಹೋದ್ಯೋಗಿ ಮೇರಿಯ ಗೆಳತಿ) ವಿಮಾನಯಾನ ಸಂದರ್ಭದಲ್ಲಿ ಮೊದಲ ಭೇಟಿಯಲ್ಲೇ ಈತನ ಗುರುತು ಹಿಡಿಯುತ್ತಾಳೆ. ಹೇಗೆ ಗುರುತು ಹಿಡಿದೆ ಎಂದು ನಾಗಪ್ಪ ಕೇಳಿದರೆ ಅವಳು ಹೇಳುವುದು- “Your sad sweet face”- ‘ನೀವು ನೀವೇ ಎಂದು ಪತ್ತೆ ಹಚ್ಚಿದ್ದು ಮೇರಿ ಬಹಳವಾಗಿ ಮೆಚ್ಚಿಕೊಂಡಂತಿದ್ದ ನಿಮ್ಮ ಕಣ್ಣೊಳಗಿನ ಬುದ್ಧಿಮತ್ತೆಯ ಹೊಳಪು ಹಾಗೂ ಅದರ ಆಳದಲ್ಲಿಂದ ಹೊರಸೂಸುವ ಮ್ಲಾನತೆಗಳಿಂದ.’…!

ಇದು ‘ನಿಷ್ಪಾಪ ಮುಗ್ಧ’ ನಾಗಪ್ಪನ ಚಿತ್ರಣ. ಈ ನಾಗಪ್ಪ ‘ನಿಷ್ಪಾಪ ಮುಗ್ಧ’ನಷ್ಟೇ ಅಲ್ಲ, ಉದಾತ್ತನೂ ಹೌದು.
‘ಈ ಜಗತ್ತಿನಲ್ಲಿ ಪ್ರತಿಭೆಯಿದ್ದರಷ್ಟೇ ಸಾಲದು. ಅದನ್ನು ತನಗೇ ಅನ್ಯಾಯವಾಗದಂತೆ ಪ್ರಕಟಿಸುವ ಚಾತುರ್ಯವೂ ಬೇಕು. ದಕ್ಷತೆಯೂ ಬೇಕು. ಇವೆರಡೂ ಇವನಲ್ಲಿರಲಿಲ್ಲ’ ಎಂಬುದು ಲೇಖಕರ ಷರಾ.

‘ಅಂತಃಸ್ಫೂರ್ತಿಯನ್ನು ಕಳೆದುಕೊಂಡ ಭಾವನೆಗಳ ಅರ್ಥವೇ ನಾಗಪ್ಪನಿಗೆ ಆಗುತ್ತಿರಲಿಲ್ಲ. ಬರೇ ಸ್ವಾರ್ಥವೇ ಮೂಲವಾದ ಭಾವನೆಗಳು ತಟ್ಟುತ್ತಿರಲಿಲ್ಲ.’ ಜೊತೆಗೆ ‘ತನ್ನ ಆನಂದಕ್ಕೆ ಸೃಷ್ಟಿಶೀಲತೆಯೊಂದೇ ನಿಜವಾದ ಮೂಲಸೆಲೆಯೆಂಬ ಅನುಭವ ನಾಗಪ್ಪನಿಗೆ ಮತ್ತೆ ಮತ್ತೆ ಬಂದಿದೆ.’ ಅಷ್ಟೇ ಅಲ್ಲ, ‘ಊರೇ ಉರಿಯುತ್ತಿರುವಾಗ ಗುಲಾಬಿಗಿಡದ ಮೇಲೆ ಕವಿತೆ ಬರೆಯುವದು ಮೂರ್ಖತನವೇನೋ (ಹಾಗೆ ನೋಡಿದರೆ ಕವಿತೆ ಬರೆಯುವದೇ!) ಆದರೆ ಊರಿಗೆ ಬೆಂಕಿ ಏಕೆ ಹತ್ತಿತು ಎಂಬ ಮೂಲಭೂತ ಪ್ರಶ್ನೆಗೆ ಬಂದಾಗ ಮಾತ್ರ ಗುಲಾಬಿಗಿಡವನ್ನು ಮನುಷ್ಯ ಪ್ರೀತಿಸುವುದನ್ನೇ ಮರೆತದ್ದರಿಂದ ಎಂದು ಹೊಳೆಯದೇ ಇರದು’ ಅನ್ನುವುದು ನಾಗಪ್ಪನ ವಿಚಾರ ಲಹರಿ.

ಅವನ ಬರವಣಿಗೆಯೂ ಎಷ್ಟು ಸಾಚಾ ಅಂದರೆ- ‘ಬರಿಯೆ ಬೇರೆಯವರು ಸೂಚಿಸಿದ ಉದ್ದೇಶಗಳಿಗಾಗಿ ಸಾಹಿತ್ಯ ಸೃಷ್ಟಿ ತನ್ನಿಂದ ಸಾಧ್ಯವಿಲ್ಲ. ತನ್ನ ಅನುಭವದಲ್ಲಿ ಹುಟ್ಟದೇ ಇದ್ದುದನ್ನು ಬರೆಯದೇ ಇರುವದು ಸಾಧ್ಯವೇ ಇಲ್ಲ ಎನ್ನುವಂತಹ ಉತ್ಕಟ ಕ್ಷಣಕ್ಕಾಗಿ ಕಾಯದೇ ಇರುವಂಥದ್ದನ್ನು ಶಬ್ದಗಳಲ್ಲಿ ಮೂಡಿಸುವದು ತನಗೆ ಶಕ್ಯವಿಲ್ಲ’ ಎಂಬುದು ಸಾಹಿತಿಯಾಗಿ ನಾಗಪ್ಪನ ನಿಲುವು. ‘ಅಂತಃಸ್ಫೂರ್ತಿಯನ್ನು ಕಳೆದುಕೊಂಡ ಭಾವನೆಗಳ ಅರ್ಥವೇ ನಾಗಪ್ಪನಿಗೆ ಆಗುತ್ತಿರಲಿಲ್ಲ. ಬರೇ ಸ್ವಾರ್ಥವೇ ಮೂಲವಾದ ಭಾವನೆಗಳು ತಟ್ಟುತ್ತಿರಲಿಲ್ಲ’ ಎಂದು ಅವನ ಪರ ವಾದ ಹೂಡುತ್ತಾರೆ ಕಾದಂಬರಿಕಾರ.

ಇಂಥ ಉದಾತ್ತ ನಿಷ್ಪಾಪ ಮುಗ್ಧ ನಾಗಪ್ಪ ಈ ನಗರ ಜೀವನದ ‘ಶಿಕಾರಿ’ಗೆ ಗುರಿಯಾಗುತ್ತಾನೆ. ಹಂತ ಹಂತವಾಗಿ ಸುತ್ತಲಿನವರು ಹೆಣೆಯುವ ಭಯಾನಕ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತ, ಉಸಿರುಗಟ್ಟುತ್ತ ಹೋಗುತ್ತಾನೆ.

। ಇನ್ನು ನಾಳೆಗೆ ।

‍ಲೇಖಕರು avadhi

April 2, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

Trackbacks/Pingbacks

  1. ಎನ್ ಎಸ್ ಶಂಕರ್ ಕೇಳುತ್ತಾರೆ: ನಾಗಪ್ಪನ ಶತ್ರು ನಿಜಕ್ಕೂ ಯಾರು? – Avadhi/ಅವಧಿ - […] ನಿನ್ನೆಯ ಮೊದಲ ಭಾಗವನ್ನು ಇಲ್ಲಿ ಓದಬಹುದು  […]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: