ಎನ್ ಎಸ್ ಎಲ್ ಗೆ ಸಾಯಿಲಕ್ಷ್ಮಿ ನುಡಿ ನಮನ

ಸಾಯಿಲಕ್ಷ್ಮಿ ಎಸ್ ಅಯ್ಯರ್

ನಾನಾಗ ಹಾಸನ ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ‌ ನಿರ್ವಾಹಕಳಾಗಿದ್ದೆ. ರಾಜ್ಯದ ಮೊದಲ FM ಪ್ರಸಾರವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅಪಾರ ಸಂಖ್ಯೆಯ ಕೇಳುಗಮಿತ್ರರು. ಹುಮ್ಮಸ್ಸಿನಿಂದ ಸದಾ ದುಡಿಯುವ ಪ್ರಯೋಗಶೀಲ ಕಾರ್ಯಪಡೆ‌ ನಮ್ಮದು.

ರಮಣೀಯ ಪ್ರಕೃತಿಮಾತೆಯ ತೊಟ್ಟಿಲಲ್ಲಿ ತೂಗುವ ಪುಟ್ಟ ಪ್ರಶಾಂತ ಊರು ಹಾಸನ. ಸ್ಥಳೀಯ ಕೇಂದ್ರವಾದ್ದರಿಂದ ಅಲ್ಲಿಯ ಸುತ್ತಮುತ್ತಲ ಪರಿಸರದ ಪ್ರತಿಭೆಗಳನ್ನು ಬಳಸಿಕೊಂಡು ಕಾರ್ಯಕ್ರಮ ರೂಪಿಸುವುದೇ ನಮ್ಮ ಕರ್ತವ್ಯ ಹಾಗು ಘನ ಸರ್ಕಾರದ ಉದ್ದೇಶವೂ ಸಹ ಆಗಿತ್ತು.

ಒಮ್ಮೆ ಗೊರೂರಿನಿಂದ ಬಂದ‌ ಓರ್ವ ಕವಿಮಿತ್ರರು ತಾವು ಬರೆದ ಪದ್ಯಗಳನ್ನು‌ ವಾಚಿಸಿದರು. ನಡುನಡುವೆ ನಾನು ಅವರ ಕಾವ್ಯಪ್ರೇರಣೆ ಕುರಿತಂತೆ ಚಿಕ್ಕ ಚಿಕ್ಕ ಪ್ರಶ್ನೆಗಳನ್ನು ಹಾಕಿ ಅವರಿಂದ ಉತ್ತರ ಪಡೆದೆ. ಹದಿನೈದು ನಿಮಿಷದ ವಿಚಾರ ವೈವಿಧ್ಯ ಶೀರ್ಷಿಕೆಯ ಬೆಳಿಗ್ಗೆ 715ರ ಚಂಕ್ ಗೆ ಕೇವಲ ಆರು ನಿಮಿಷ ಮಾತ್ರ ರೆಕಾರ್ಡ್ ಆಗಿತ್ತು. ಉಳಿದ ಸಮಯ ತುಂಬಬೇಕಿತ್ತು.

ಬೆಂಗಳೂರು ಆಕಾಶವಾಣಿಯಿಂದ ಹೋಗಿದ್ದ ನನಗೆ ಯಾಕೋ ಈ ರೆಕಾರ್ಡಿಂಗ್ ತೃಪ್ತಿದಾಯಕವೆನಿಸಲಿಲ್ಲ. ಅದನ್ನು ರಿಪೇರಿ ಮಾಡುವುದು ಸಾಧ್ಯವೆನಿಸಲಿಲ್ಲ. ಶ್ರೋತೃಗಳ ದೃಷ್ಟಿಯಿಂದ ಅದಕ್ಕೊಂದು ಆಕರ್ಷಣೀಯ ರೂಪ ನೀಡಬೇಕೆನಿಸಿತು. ನಮ್ಮ ಟೇಪ್ ಲೈಬ್ರರಿಯಲ್ಲಿ ಏನಾದರೂ ಸಿಕ್ಕೀತೇ ಎಂದು ಹುಡುಕಲಾರಂಭಿಸಿದೆ. ಒಂದು ಭಾವಗೀತೆ ಸೇರಿಸಿ ದಾಟಿಸಬಹುದಿತ್ತು.

ನನ್ನ ಟೇಪ್ ಶೋಧದಲ್ಲಿ ನನಗೆ ಸಿಕ್ಕಿದ್ದು ಕವಿ
ಪ್ರೊ. ಎನ್ ಎಸ್ ಲಕ್ಷ್ಮಿನಾರಾಯಣಭಟ್ಟರ ದನಿಯ ವಾಚನದಲ್ಲಿದ್ದ ಮಲೆನಾಡ ಮಳೆಯನ್ನು ವರ್ಣಿಸುವ ಕವನದ ರೆಕಾರ್ಡಿಂಗ್. ಅದೇನು ಸೊಗಸಾದ ಲಯದ ಸಾಹಿತ್ಯ ಅದರ ಗೇಯತೆ ಅದೆಷ್ಟು ಮಧುರ. ಅಕ್ಷರದಲ್ಲಿ ಲವಲವಿಕೆಯ ಆನಂದದ ಮಳೆಯ ಗೀತಾತ್ಮಕ ಸೆರೆ. ಆ ಕಂಠದ ಶ್ರೀಮಂತಿಕೆ, ಗಾಂಭೀರ್ಯಕ್ಕೆ ಆ ರಸಾನುಭೂತಿಗೆ ನಾ ಶರಣಾದೆ. ತೆಪ್ಪ ಅರಸಿ ಹೋದವಳಿಗೆ ಹಡಗು ಸಿಕ್ಕಂತಹ ಭಾಗ್ಯ. ಹೃದಯ ಅರಳಿತು. ಕವಿಯ ಪಾಂಡಿತ್ಯಕ್ಕೆ ತಲೆದೂಗುತ್ತ ದೊರಕಿಸಿಕೊಟ್ಟ ದೈವಕ್ಕೆ ವಂದಿಸುತ್ತ ಎಡಿಟ್ ಮಾಡಿದೆ.

ಕಾರ್ಯಕ್ರಮದ ಮೊದಲ‌ ಭಾಗದಲ್ಲಿ ಎನ್ ಎಸ್ ಎಲ್‌ ಬಗ್ಗೆ ಅವರಿಗಾದ ಇಳೆಯ‌ ಮಳೆಯ ದರ್ಶನಾದ ಬಗ್ಗೆ ಪರಿಚಯ ಮಾಡಿಕೊಟ್ಟು ಅವರ ವಾಚನ ಅಡಕ‌ ಮಾಡಿ ನಂತರ ನಮ್ಮ ಗೊರೂರಿನ ಕಾವ್ಯ ಪ್ರತಿಭೆಯ ರೆಕಾರ್ಡ್ ಸೇರಿಸಿ ಪ್ರಸಾರಕ್ಕೆ ಅಣಿಮಾಡಿದೆ. ಪ್ರಸಾರದ ನಂತರ ಕೇಳುಗರ ಪತ್ರ, ಪೋನ್‌ ಮೂಲಕ ನೀಡಿದ ಅದ್ಭುತ ಪ್ರತಿಕ್ರಿಯೆ ಮರೆಯಲಾರೆ. ಒಂದು ನೀರಸವಾಗಬಹುದಾಗಿದ್ದ ಕಾರ್ಯಕ್ರಮದಲ್ಲಿ ಜೀವ ಸಂಚಾರ ಮೂಡಿಸಿದ ಶ್ರೇಷ್ಟ ಕವಿ ಡಾ ಎನ್ ಎಸ್ ಎಲ್ ಅವರಿಗೆ ನಾನು ಋಣಿ.

ಈ‌ ಮೇಲಿನ ಸಂದರ್ಭವನ್ನು ಕರೆಮಾಡಿ ಅವರಲ್ಲಿ ಹಂಚಿಕೊಂಡು ‘ಸಾರ್ ನೀವು‌ ನನ್ನ‌ ಕಾಪಾಡಿದಿರಿ’ ಎಂದಾಗ ಸ್ನೇಹಮಯ ಸರಸ ಹೃದಯದ‌ ಕವಿ ನಕ್ಕುನುಡಿದರು. ‘ಇವೆಲ್ಲ ಕವಿಯ ಧನ್ಯತೆ ಹೆಚ್ಚಿಸುವ ಪ್ರಸಂಗಗಳು. ಸಂತೋಷವಾಯ್ತು ಹಾಸನದ ಜನತೆಗೆ ಕೇಳಿಸಿದ್ದಕ್ಕೆ’ ಎನ್ನುತ್ತ ಪದ್ಯದ ಚರಣಭಾಗವನ್ನು ನೆನಪಿಸಿಕೊಂಡು ಅದೇ ಓಘದಲ್ಲಿ ತನ್ಮಯತೆಯಲ್ಲಿ ಹಂಚಿಕೊಂಡರು.

ಅಗಲಿದ ಕವಿಗೆ ಅಂತಿಮ ನಮನ.

‍ಲೇಖಕರು Avadhi

March 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಸತ್ಯಕಾಮ ಶರ್ಮಾ ಕಾಸರಗೋಡು

    ಬನ್ನಂಜೆ ಗೋವಿಂದಾಚಾರ್ಯ ಅವರ ನಿಧನ, ಲಕ್ಷ್ಮಿ ನಾರಾಯಣ ಭಟ್ಟರ ನಿಧನ-ಸದಾ ಕನ್ನಡ ಪರ ( ಕನ್ನಡ ಚಿತ್ರರಂಗದ ಪರ?) ಎಂದು ಪೋಸ್ ಕೊಡುವ ಕನ್ನಡ ಸುದ್ದಿ ಚಾನೆಲ್ ಗಳಲ್ಲಿ ವಾರ್ತೆಯಾಗಿ ಪ್ರಸಾರವಾಗಲೇ ಇಲ್ಲ! ಮಾತ್ರವಲ್ಲ ಇದನ್ನು ಯಾರೂ ಪ್ರಶ್ನಿಸಿದ್ದು, ಖಂಡಿಸಿದ್ದು ನನ್ನ ಗಮನಕ್ಕೆ ಬಂದಿಲ್ಲ ಏನಾಗಿದೆ ಈ ನಾಡಿಗೆ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: