ಮೂಗುತಿ ಸುಂದರಿ
ಸ್ಮಿತಾ ಅಮೃತರಾಜ್. ಸಂಪಾಜೆ
ಮೂಗುತಿ ಎಂದರೆ
ಮೂಗು ಮುರಿಯುತ್ತಿದ್ದವಳು
ಪರಮಾಶ್ಚರ್ಯವೆಂಬಂತೆ ಇತ್ತೀಚೆಗೆ
ಮೂಗು ಚುಚ್ಚಿಸಿಕೊಂಡಳು.
ಕಣ್ಣರಳಿಸಿದ್ದಕ್ಕೆ ಬದುಕು ಶುರುವಾಗುವುದೇ
ನಡು ಹರೆಯದಲ್ಲಿ ಕಣೇ ಅಂತ
ಹಗುರವಾಗಿ ನಕ್ಕಿದ್ದಳು.
ಮೊನ್ನೆ ಮೊನ್ನೆ ನಡುರಾತ್ರಿಯಲ್ಲಿ
ಫೋನಾಯಿಸಿ ಮೂಗು ವಿಪರೀತ ನೋವು
ತಡೆಯೋಕಾಗಲ್ವೇ,
ಅಂತ ಕಣ್ಣೀರಾಗಿದ್ದಕ್ಕೆ..

ಯಾಕೆ ತ್ರಾಸ ತೆಗೆದು ಬಿಡು ಎಂದಿದ್ದೆ
ಕಲೆ ಉಳಿಯಬಾರದಲ್ಲವಲ್ಲ ಕನಲಿದ್ದಳು.
ಮೊನ್ನೆ ಬಸ್ಸಿನಲ್ಲಿ ಸಿಕ್ಕವಳು
ಮೂಗುತಿಯಲ್ಲಿ ಚೆಂದಕ್ಕೆ ಕಂಡಿದ್ದಳು
ನಾನೂ..ಚುಚ್ಚಿಸಿಕೊಳ್ಳಲಾ..?
ಮೂಗು ಸವರಿಕೊಂಡೆ.
ಎದೆಯೊಳಗೊಂದು ಚುಚ್ಚುವ ನೋವಿದ್ದರೆ
ಮೂಗು ಚುಚ್ಚಿಸಿಕೋ..
ಎಂದಿನಂತೆ ನಕ್ಕಳು.
ಈಗ ಮೂಗಿನ ಕಡೆಗೇ ನನ್ನ ಗಮನ
ಸ್ವಗತಕ್ಕೆಂಬಂತೆ ನುಡಿದಳು.






0 Comments