ವಿಷಾದಿಸುವ ಕಲೆ
ಸತ್ಯಕಾಮ ಶರ್ಮಾ, ಕಾಸರಗೋಡು
ಎಳೆದು ಕಟ್ಟಿ ಬಿಟ್ಟ ತಂತಿಗಳ
ಬಿಗುವಿನಿಂದಲ್ಲವೇ
ಎದೆಯ ಕಲಕುವಂತ ಸಂಗೀತ
ಹೊರಹೊಮ್ಮುವುದು?
ಬಿದಿರ ಮೆಳೆಯನಗಲಿದ ದಂಟಿನ
ಗಂಟಲಿನಿಂದಲ್ಲವೇ
ವಿರಹ ಮೋಹನ ಗಾನ
ತೇಲಿ ತೇಲಿ ಬರುವುದು?
ಸುಲಿದ ತುಪ್ಪಳವನು ಬಿಟ್ಟು
ಬಿಡದ ವೇದನೆಯಲ್ಲವೇ
ನಗಾರಿಯ ನಾದವಾಗಿ
ಧುಮ್ಮಿಕ್ಕುವುದು?
ಸ್ಫಟಿಕಗಳಾಗುವುದಾದರೆ ಹರಿದು ಬರಲಿ
ಕಣ್ಣು ಕೂಡಾ ಒಲ್ಲೆನೆನ್ನುವ ಉಪ್ಪು ನೀರು
ಕೂರಲದು ಹಾರದಲಿ
ಕೊನೆಯಿಲ್ಲದ ವ್ಯಥೆಯ ಕೊರಳಿನಲಿ

ಇಲ್ಲವಾದಲ್ಲಿ ತುಂಬುತಿರಲಿ
ಜಲತರಂಗದ ಬೋಗುಣಿಗಳಲಿ
ಹೊರಹೊಮ್ಮಿಸಲಿ ಅಸಲಿ
ಪ್ರೇಮದ ನವನಿನಾದ
ಒಟ್ಟಿನಲ್ಲಿ ಎದೆಯಲ್ಲದೆ
ಬೇರೆಲ್ಲಿ ತಂಗಲಿ?
ಎನ್ನದಿರಲಿ ವಿಷಾದ
ಅಷ್ಟಕ್ಕೂ ನುಂಗಲಾರದ ನೋವಲ್ಲವೇ
ಇಂಗಲಾರದ ಕಲೆಯೆನಿಸಿಕೊಳ್ಳುವುದು?
ಹೊರಟು ಹೋಗುವೆನೆಂದ ದುಃಖಕೆ
ತೊಡಿಸು ನಿನ್ನ ಪದಗಳದೇ ಪಾದುಕೆ
ಅದರ ನೆರಳಿನ ಸುತ್ತ ನರಳಿ
ಎಳೆವ ರೇಖಾಚಿತ್ರಕೆ
ಇರಲಿ ಅವಕಾಶ ನಿನ್ನ
ಬಳಿಯೇ ಉಳಿಯುವುದಕೆ






0 Comments