ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದೆಗೆ ಬಿದ್ದ ಅಕ್ಷರ : ಜೋಗಿಯವರೇ ಪ್ರಶ್ನಿಸಿಕೊಳ್ಳಬೇಕಾಗಿದೆ..

ಇದು ವ್ಯಂಗ್ಯವೋ ಕಾಗುಣಿತ ದೋಷವೋ?!

ಅಶೋಕ ಶೆಟ್ಟರ್

ಜೋಗಿಯವರ ಆ ವಾರದ ಅಂಕಣ ಬರಹದ ಮೊದಲ ಸಾಲು “ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಚೆಂದದ ಪುಸ್ತಕಗಳು ಬರುತ್ತಿವೆ.” ಆ ನಂತರ, ಬಹುಶ: ಚೆಂದದ ಅಂಥ ಪುಸ್ತಕಗಳ, ಒಂದು ಯಾದಿ ಅಲ್ಲಿ ಬರುತ್ತದೆ.ಜೋಗಿಯವರಿಗೆ ದೇವನೂರರ “ಎದೆಗೆ ಬಿದ್ದ ಅಕ್ಷರ” ವೆಂಬ ಬರಹ-ಭಾಷಣಗಳ ಸಂಕಲನ “ಚೆಂದದ ಪುಸ್ತಕ” ಅನಿಸಿರಲಿಕ್ಕಿಲ್ಲ.ಅದು “ಒಂದಷ್ಟು ಹುಸಿ ಪ್ರಚಾರ ಪಡಕೊಂಡ ಪುಸ್ತಕಗಳೂ ಬಂದವು” ಎಂಬ (ಯಾವ ಯಾದಿಯೂ ಇಲ್ಲದ) ಪುಸ್ತಕಗಳ ಏಕೈಕ ಉಲ್ಲೇಖವಾಗಿ ಬರುತ್ತದೆ.
ಕಾದಂಬರಿಯೊಂದರಲ್ಲಿ ಒಂದು ಕೇಂದ್ರವಿರಬೇಕು ಎಂಬ ನವ್ಯರ ಮಾನದಂಡದಿಂದ ಕುವೆಂಪು ಅವರ ಕಾದಂಬರಿಗಳಲ್ಲಿ ಒಂದು ಕೇಂದ್ರವಿಲ್ಲ ಎಂಬ ಗಿರಡ್ಡಿಯವರ ಮಾತಿನಂತೆ ಜೋಗಿಯವರೂ ಮೂರು ಮೊಳದ ಮಾನದಂಡ ಹಿಡಿದು ಆರು ಮೊಳದ ವಸ್ತುವನ್ನು ಅಳೆಯ ಹೊರಟು ಇದು ಎತ್ತರವಿದೆ ಎಂದಂತಾಗಿದೆ. ಜೋಗಿಯವರು ಇನ್ನು ಮುಂದೂ ನಿರಾಶರಾಗಿಯೇ ಉಳಿಯಬೇಕಾಗಬಹುದು. ದೇವನೂರು “ಚೆಂದದ ಪುಸ್ತಕ” ಬರೆಯುವದು ಕಷ್ಟ.
ಕನ್ನಡದಲ್ಲಿ ಹುಸಿಪ್ರಚಾರ ಪಡೆದುಕೊಂಡ ಏಕೈಕ ಕೃತಿರತ್ನವೆಂದರೆ ಶ್ರೀಯುತ ಎಸ್.ಎಲ್.ಬೈರಪ್ಪನವರ “ಆವರಣ”. ಈ ಪದವನ್ನು ದೇವನೂರರ ಕೃತಿಗೆ ಸಂಬಂಧಿಸಿ ಜೋಗಿಯವರು ಬಳಸಿದ್ದು ನನಗೆ ಸರಿ ಕಾಣಲಿಲ್ಲ.
ಇನ್ನೊಂದು ಸಂದೇಹ:
ಘಾಚರ್ ಘೋಚರ್ ಎಂಬ ಇತ್ತೀಚಿನ ಪುಸ್ತಕವೊಂದನ್ನು ದಯಾನಂದ ಟಿ.ಕೆ ಅವರೂ ದಿನೇಶ್ ಕುಮಾರ್ ಅವರೂ ಫಾಚರ್ ಫೋಚರ್ ಎಂದು ಉಲ್ಲೇಖಿಸಿದ್ದಾರೆ. ಇದು ವ್ಯಂಗ್ಯವೋ ಕಾಗುಣಿತ ದೋಷವೋ?

ಅಷ್ಟಕ್ಕೂ `ಎದೆಗೆ ಬಿದ್ದ ಅಕ್ಷರ’ ಎಲ್ಲರ ಎದೆಗೂ ಇಳಿಯಬೇಕಾಗಿಲ್ಲ, ಇಳಿಯುವುದೂ ಇಲ್ಲ

– ದಿನೇಶ್ ಕುಮಾರ್ ಎಸ್.ಸಿ.

ದೇವನೂರು ಮಹದೇವರ `ಎದೆಗೆ ಬಿದ್ದ ಅಕ್ಷರ’ ಕಾದಂಬರಿಯೂ ಅಲ್ಲ, ಕಥಾ ಸಂಕಲನವೂ ಅಲ್ಲ. ಸೃಜನಶೀಲ ಕೃತಿಗಳೊಂದಿಗೆ ಸೃಜನೇತರ ಕೃತಿಗಳನ್ನು ತೌಲನಿಕವಾಗಿ ವಿಮರ್ಶಿಸಲಾಗದು ಎಂಬುದು ಜೋಗಿಯಂಥ ಪಳಗಿದ ಲೇಖಕರಿಗೆ ಗೊತ್ತಿಲ್ಲದ ಸಾಹಿತ್ಯದ ಪ್ರಾಥಮಿಕ ಪಾಠವೂ ಅಲ್ಲ. ಪಾಚರ್ ಪೋಚರ್ ಕೃತಿಯನ್ನು ವಿಮರ್ಶಿಸುವ ಸಂದರ್ಭದಲ್ಲಿ `ಎದೆಗೆ ಬಿದ್ದ ಅಕ್ಷರ’ವನ್ನು ತೂಗಿ ನೋಡುವ ಅಸಹಜ ವಿಮರ್ಶೆ ಸಾಹಿತ್ಯ ಪ್ರೇಮಿಗಳಿಗೆ ಇರಿಸುಮುರಿಸು ಉಂಟು ಮಾಡುವುದು ಸಹಜ. ಈ ಹಿನ್ನೆಲೆಯಲ್ಲಿ ಟಿ.ಕೆ.ದಯಾನಂದರು ಎತ್ತಿರುವ ಪ್ರಶ್ನೆಗಳು ಮುಖ್ಯವಾಗಿ ಕಾಡುತ್ತವೆ, ಕಾಡಲೇಬೇಕು.
ಅಷ್ಟಕ್ಕೂ ಜೋಗಿಯವರು ಹಾಯ್ ಬೆಂಗಳೂರ್ ನ ತಮ್ಮ ಅಂಕಣದಲ್ಲಿ `ಎದೆಗೆ ಬಿದ್ದ ಅಕ್ಷರ’ದ ಕುರಿತು ಬರೆದಿರುವುದು ಎರಡೇ ಪ್ಯಾರಗಳು. ಅಸಲಿಗೆ ಇದು ವಿಮರ್ಶೆಯೂ ಅಲ್ಲ, ಟೀಕೆಯೂ ಅಲ್ಲ. ಇಡಿಯ ಕೃತಿಯನ್ನು ವಿಮರ್ಶೆಯ ಮಾನದಂಡಗಳಿಂದ ಹೊರಗಿಟ್ಟು ಸಾರಾಸಗಟಾಗಿ ತಿರಸ್ಕರಿಸುವ ಜಡ್ಜ್ ಮೆಂಟು. ಫೇಸ್ ಬುಕ್ಕಿಗರು ಅವಸರದಲ್ಲಿ ಹಾಕುವ ಅಸಹನೆಯ ಕಮೆಂಟಿನಷ್ಟೇ ದುರ್ಬಲವಾದ ಸಾಲುಗಳು ಇವು. (ಫೇಸ್ ಬುಕ್ಕಿನಲ್ಲೂ ಈಗ ಎಡಿಟ್ ಆಪ್ಷನ್ ಇದೆ.!)
`ಎದೆಗೆ ಬಿದ್ದ ಅಕ್ಷರ’ ಜೋಗಿಯವರಿಗೆ ಗೊತ್ತಿರುವಂತೆ ದೇವನೂರರು ಎಲ್ಲೋ, ಎಂದೋ ಆಡಿದ ಮಾತುಗಳು, ಭಾಷಣಗಳು, ಪತ್ರಗಳ ಸಂಕಲನವೆಂಬುದೇನೋ ನಿಜ. ಇಂಥ ಸಂಕಲನಗಳನ್ನು ಹೊರತಂದವರಲ್ಲಿ ದೇವನೂರು ಮೊದಲಿನವರೂ ಅಲ್ಲ, ಕೊನೆಯವರೂ ಅಲ್ಲ. ಸ್ವಾಮಿ ವಿವೇಕಾನಂದ, ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿಯಂಥವರನ್ನು ಅರ್ಥ ಮಾಡಿಕೊಂಡು ಎದೆಗೆ ಇಳಿಸಿಕೊಳ್ಳಲು ಸಾಧ್ಯವಾಗಿಸಿರುವುದೇ ಇಂಥ ಪತ್ರ, ಭಾಷಣ, ಲೇಖನಗಳ ಸಂಗ್ರಹಗಳಿಂದ. ಕನ್ನಡದ ಬಹುತೇಕ ಲೇಖಕರು ಇಂಥ ಸಂಗ್ರಹಗಳನ್ನು ಹೊರತಂದಿರುವುದು ಎಲ್ಲರಿಗೂ ಗೊತ್ತಿರುವ ವಿದ್ಯಮಾನವೇ ಆಗಿದೆ. ಹಾಗೆಂದು ಇಂಥ ಕೃತಿಗಳಿಗೆ ಒಂದು ಕೇಂದ್ರ ಆಶಯ ಇಲ್ಲವೆಂದು ಜರಿಯುವುದು ಎಷ್ಟು ಸರಿ ಎಂಬುದನ್ನು ಜೋಗಿಯವರೇ ಪ್ರಶ್ನಿಸಿಕೊಳ್ಳಬೇಕಾಗಿದೆ.
`ಎದೆಗೆ ಬಿದ್ದ ಅಕ್ಷರ’ಕ್ಕೆ ಹುಸಿ ಪುಸ್ತಕ, ಹುಸಿ ಪ್ರಚಾರ ಎಂಬ ಹಣೆಪಟ್ಟಿಗಳನ್ನು ಹಚ್ಚುವ ಪ್ರಯತ್ನವಂತೂ ತೀರಾ ಅಸಹನೀಯ. ಯಾವುದೇ ಸ್ವರೂಪದ ವಿಮರ್ಶೆಯ ಚೌಕಟ್ಟಿಗೂ ಒಳಪಡದ ಟ್ಯಾಬ್ಲ್ಯಾಡ್ ಭಾಷೆ ಇದು. ಜೋಗಿಯವರ ಮಾತುಗಳು ಟ್ಯಾಬ್ಲ್ಯಾಡ್ ನಲ್ಲೇ ಪ್ರಕಟವಾಗಿದ್ದರೂ, ಇದನ್ನು ಆಡಿರುವವರು ಸಂವೇದನಾಶೀಲ ಲೇಖಕ ಜೋಗಿಯವರೆಂಬ ಕಾರಣಕ್ಕೆ ನಮ್ಮಂಥವರಿಗೆ ನೋವಾಗುತ್ತದೆ. `ಎದೆಗೆ ಬಿದ್ದ ಅಕ್ಷರ’ವನ್ನು ಹುಸಿ ಪುಸ್ತಕವೆನ್ನಲು ಜೋಗಿಯವರ ಬಳಿ ಯಾವ ಸಾಕ್ಷಿ ಇದೆ ಎಂದು ಪ್ರಶ್ನಿಸಲೇಬೇಕಾಗುತ್ತದೆ. ದೇವನೂರು ಒಡಲಾಳ, ಕುಸುಮಬಾಲೆಗಳಂಥ ಇನ್ನಷ್ಟು ಕೃತಿಗಳನ್ನು ಬರೆಯಬೇಕಿತ್ತು, ಬರೆಯಬೇಕು ಎಂಬುದು ಅವರನ್ನು ಪ್ರೀತಿಸುವ, ಅಭಿಮಾನಿಸುವ ಎಲ್ಲ ಓದುಗರ ಹಂಬಲ. ನೂರಾರು ಪುಸ್ತಕಗಳನ್ನು ಅವಸರದಲ್ಲಿ ಹೆತ್ತವರು, ರೀಮುಗಟ್ಟಲೆ ಬರೆದವರು ಹೇಳಲಾರದ್ದನ್ನು ದೇವನೂರು ಕುಸುಮಬಾಲೆಯೊಂದರಲ್ಲಿ ಹೇಳಿದ್ದಾರೆ ಎಂಬುದು ವಾಸ್ತವ. `ಎದೆಗೆ ಬಿದ್ದ ಅಕ್ಷರ’ ಕಾದಂಬರಿಯಲ್ಲದೇ ಇರುವುದರಿಂದ ಅದನ್ನು ಕುಸುಮಬಾಲೆಯ ಜತೆ ಹೋಲಿಸಿ ಮಾತನಾಡುವುದೂ ತರವಲ್ಲ.
ದೇವನೂರು ಹೆಚ್ಚು ಬರೆದವರಲ್ಲ, ಹೆಚ್ಚು ಮಾತನಾಡುವವರೂ ಅಲ್ಲ. ಅವರು ಆಡುವ ಕೆಲವೇ ಮಾತುಗಳನ್ನು ಕೇಳಿಸಿಕೊಳ್ಳಲು ಹಂಬಲಿಸುವವರ ಪೈಕಿ ನಾನೂ ಒಬ್ಬ. ಅವರ ಪ್ರತಿ ಮಾತುಗಳು ಹೊರಡುವುದು ಸಂತನ ಅನುಭಾವದಿಂದ, ಮೌನದ ಒಡಲಲ್ಲಿ ಹುಟ್ಟುವ ಶಬ್ದಗಳು ಯಾವತ್ತಿಗೂ ಸಶಕ್ತ. `ಎದೆಗೆ ಬಿದ್ದ ಅಕ್ಷರ’ದಲ್ಲಿ ದಾಖಲಾಗಿರುವುದು ಇಂಥ ದಾರ್ಶನಿಕನ ಮಾತುಗಳು. ಅವುಗಳಿಗೆ ಕೇಂದ್ರ ಆಶಯವೆಂಬುದಿಲ್ಲ ಎನ್ನುವುದು ದೇವನೂರು ಅವರ ವ್ಯಕ್ತಿತ್ವಕ್ಕೆ ಮಾಡುವ ಅಪಮಾನ.
ಅಷ್ಟಕ್ಕೂ `ಎದೆಗೆ ಬಿದ್ದ ಅಕ್ಷರ’ ಎಲ್ಲರ ಎದೆಗೂ ಇಳಿಯಬೇಕಾಗಿಲ್ಲ, ಇಳಿಯುವುದೂ ಇಲ್ಲ. ಶತಶತಮಾನಗಳಿಂದ ಅಕ್ಷರವಂಚಿತ ಸಮುದಾಯದ ನೆಲೆಯಲ್ಲಿ ನಿಂತು ದೇವನೂರು ಅಂಥವರು ಆಡುವ ಮಾತುಗಳು ಎಲ್ಲರಿಗೂ ಅರ್ಥವಾಗುವುದೂ ಇಲ್ಲ. ನೊಂದ ನೋವ ನೋಯದವರು ಹೇಗೆ ಬಲ್ಲರು? ದಯಾನಂದರು ಹೇಳಿದಂತೆ “ ಮಹದೇವರ ಪುಸ್ತಕ ಆಪ್ಯಾಯತೆಯಿಂದ ಓದಿಸಿಕೊಳ್ಳುವ ನವಿರು ಕವಿತೆಯಲ್ಲ, ಕತ್ತರಿಸಿದ ಮನುಷ್ಯನೊಬ್ಬನ ದೇಹದಿಂದ ಚಿಮ್ಮಿದ ರಕ್ತದ ಹುಂಡು ಗೋಡೆಗಂಟಿ ಅದರ ಮೇಲೆ ಸುಣ್ಣ ಬಳಿದು ಮರೆಮಾಚಿದ್ದರೂ ಅದರ ಕಮಟು ವಾಸನೆಯನ್ನು ಗ್ರಹಿಸುವ ತೆರೆದ ಕಿವಿಯ ಸ್ವಗತ. ಇಲ್ಲಿ ಜ್ಞಾನೋದಯ ಹೊಸದಾಗಿಗೇನೂ ಆಗುವುದಿಲ್ಲ. ಹುಟ್ಟಿದ ಜ್ಞಾನದ ಆತ್ಮಪರೀಕ್ಷೆ ನಡೆಯುತ್ತದೆ. “ಎದೆಗೆ ಬಿದ್ದ ಅಕ್ಷರ” ಖಂಡಿತವಾಗಿಯೂ ಅರಿವು ತಂದು ಕೊಡುವುದಿಲ್ಲ, ಈಗಾಗಲೇ ಇರುವ ಅರಿವನ್ನು ವಿಸ್ತರಿಸುತ್ತದೆ.’’
ನಿಜ, ಎದೆಗೆ ಬಿದ್ದ ಅಕ್ಷರ ಸಂಭ್ರಮದಿಂದ ಓದಬಹುದಾದ ರೋಮ್ಯಾಂಟಿಕ್ ಕಾವ್ಯವಲ್ಲ. ಸಂಭ್ರಮ ಮತ್ತು ಖುಷಿ ನೀಡುವುದಷ್ಟೇ ಸಾಹಿತ್ಯವೂ ಅಲ್ಲ. ಎದೆಯಲ್ಲಿ ತಲ್ಲಣಗಳನ್ನು ಸೃಷ್ಟಿಸದ ಹೊರತು ಸಾಹಿತ್ಯದ ಓದು ಸಾರ್ಥಕವಾಗುವುದೂ ಇಲ್ಲ. ದೇವನೂರು ತಮ್ಮ ಕಾಲಘಟ್ಟಕ್ಕೆ ಅಂಟಿದ ಬಾವು, ಉರಿ, ಊತಗಳ ಬಗ್ಗೆ ಮಾತನಾಡುತ್ತಲೇ ಆಶಾವಾದಿಯಾಗಿ ನಾಳಿನ ಬಗ್ಗೆ ಕನಸುಗಳನ್ನು ಚೆಲ್ಲಿದ್ದಾರೆ. ಗಾಯಗೊಂಡರಿಗೆ, ನೋವು ಉಂಡವರಿಗೆ ದೇವನೂರರ ಭಾಷೆ ಚೆನ್ನಾಗಿಯೇ ಅರ್ಥವಾಗುತ್ತದೆ, ಕೇಂದ್ರ ಆಶಯ ಏನೆಂಬುದು ಎದೆಗೆ ಇಳಿಯುತ್ತದೆ.
ನಮ್ಮ ಪ್ರೀತಿಯ ಲೇಖಕರಲ್ಲಿ ಒಬ್ಬರಾದ ಜೋಗಿಯವರು `ಎದೆಗೆ ಬಿದ್ದ ಅಕ್ಷರ’ದ ಕುರಿತು ಇಷ್ಟು ಬಿರುಸಾದ ಜಡ್ಜ್ ಮೆಂಟು ಕೊಡುವುದಕ್ಕೆ ಮುನ್ನ ಶತಮಾನಗಳ ಗಾಯಹೊತ್ತವರ ಎದೆಯಲ್ಲಿ ಒಮ್ಮೆ ಇಳಿದಿದ್ದರೆ ಒಳಿತಿತ್ತು.
 

‍ಲೇಖಕರು G

10 February, 2013

4 Comments

  1. ದಯಾನಂದ

    ಪ್ರಾಮಾಣಿಕತೆಗೆ ಬಣ್ಣ, ಆಕಾರ ಇದ್ದಿದ್ದರೆ ಅದು ದೇವನೂರರ ಹಾಗೆ ಇರುತ್ತಿತ್ತೋ ಏನೋ…
    ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ದ ಪುಟ್ಟ ಪುಟ್ಟ ಲೇಖನಗಳನ್ನು ಓದುತ್ತಾ ಹೋದ ಹಾಗೆ ನನಗೆ ಅನ್ನಿಸಿದ್ದು ಇದು. ಮಾತಿನಲ್ಲಿ, ಬರಹದಲ್ಲಿ ಅಪ್ಪಟ ಪ್ರಾಮಾಣಿಕ ಹೇಗೋ, ಸಂಕೋಚದ ಸ್ವಭಾವವು ಅವರ ನಡೆಯ ಪ್ರಾಮಾಣಿಕತೆಯನ್ನೂ ತೋರುತ್ತದೆ.
    ಚಾಮರಾಜನಗರದಲ್ಲಿ ಚಾನೆಲ್ ನ ವರದಿಗಾರನಾಗಿ ಕೆಲಸ ಮಾಡುವಾಗ ಮಹಾದೇವರನ್ನು ಮೊದಲಿಗೆ ನೇರವಾಗಿ ಕೇಳುವ ಅವಕಾಶ ದೊರೆಯಿತು. ಹಡಗು ಮತ್ತು ದೋಣಿಯ (ಬಹುಶಃ) ಹೋಲಿಕೆಯಲ್ಲಿ ಅಸಮಾನತೆಯ ಬಗ್ಗೆ ಮಹಾದೇವ ಅಂದು ಮಾತನಾಡಿದ್ದ ನೆನಪು. ಶಾಲು ಹೊದ್ದು ಮೈಕಿನ ಮುಂದೆ ಸಂಕೋಚದಿಂದಲೇ ನಿಂತ, ಆದರೆ, ತನ್ನ ಮಾತಿನಲ್ಲಿ ಎಲ್ಲೂ ಸಂಕೋಚವನ್ನು ತೋರಿಸಿಕೊಳ್ಳದ ಖಡಕ್ ಈ ಕುಸುಮಬಾಲೆಯ ಶಿಲ್ಪಿಯನ್ನು ಕೇಳಿ ಅಂದು ರೋಮಾಂಚನಗೊಂಡಿದ್ದೆ.
    ಈಗ ಅದೇ ಆ ಸಂಕೋಚದ ಮಹಾದೇವ ತನ್ನ ಬರಹದ ಮೂಲಕ ನನ್ನ ಮುಂದೆ ಬಿಚ್ಚಿಕೊಳ್ಳುತ್ತಿರುವಾಗ ಈ ಮನುಷ್ಯ ಕಕ್ಕಸಿನ ಬೇಸನ್ ಗೆ ಕೈಹಾಕಿದ್ದು, ಅಸ್ಪೃಶ್ಯತೆಯನ್ನು ಪೋಷಿಸುತ್ತಿದ್ದ ನೀರಿನ ಪಾತ್ರೆಗೆ ಉಗಿದಿದ್ದು ಎಲ್ಲವನ್ನೂ ಹೇಳಿಕೊಳ್ಳುವಾಗ ಅವರ ಬಗೆಗಿನ ಗೌರವ ಇಮ್ಮಡಿಯಾಗುತ್ತಿದೆ. ಅತಿಶಯೋಕ್ತಿಯಲ್ಲಿ ಹೇಳುವುದಾದರೆ ನೂರ್ಮಡಿಯಾಗುತ್ತಿದೆ.
    ಇದು ಬರಿಯ ಹುಚ್ಚು ಅಭಿಮಾನದ ಮಾತಲ್ಲ. ಪ್ರಜಾವಾಣಿ ಸಮಾನತೆಯ ಕನಸು ಕಾಣುತ್ತಾ ಸಂಚಿಕೆಯನ್ನು ರೂಪಿಸಲು ಕಾರ್ಯನಿರ್ವಾಹಕ ಸಂಪಾದಕರ ಕೊಠಡಿಯಲ್ಲಿ ಮಹಾದೇವರ ಜತೆಗೆ ಒಂದಿಷ್ಟು ಸಮಯ ಕಳೆಯುವ ಅವಕಾಶ ನನಗೂ ದೊರಕಿತ್ತು. ದಲಿತರ ಸ್ಥಿತಿಗತಿಯ ಹಳೆಯ ಕೂಗಾಟ, ಅರುಚಾಟಗಳ ಬಗ್ಗೆ ಮಹಾದೇವರಿಗೆ ನಂಬಿಕೆ ಇಲ್ಲದ್ದು ಆಗ ನನ್ನ ಅರಿವಿಗೆ ಬಂದಿತ್ತು. ಸೊಲ್ಲು ಸೊಲ್ಲಾಗುವ ಬದಲು ಅರುಚಾಟವಾದರೆ ಅದರಿಂದ ಪ್ರಯೋಜನವಿಲ್ಲ ಎಂದು ನಂಬಿದ ಈ ಕುರುಚಲು ಗಡ್ಡದ ‘ಮಹಾದೇವ’ ಕೃತಿಯ ಪ್ರಯತ್ನದ ಆಗುವಿಕೆಯಲ್ಲಿ ನಂಬಿಕೆ ಇಟ್ಟವರೇ ಹೊರತು ಭಾಷಣಗಳ ಕಡ್ಡಿಪುಡಿಯಲ್ಲ ಎಂಬ ನನ್ನ ನಂಬಿಕೆ ಅಂದು ಗಟ್ಟಿಯಾಗಿತ್ತು.
    ಈಗ ಮಹಾದೇವ ಮತ್ತೆ ನನ್ನೊಳಗೆ ಬಿಚ್ಚಿಕೊಳ್ಳುತ್ತಿದ್ದಾರೆ. ಅಸಮಾನತೆಯನ್ನು ಹೇಗೆಲ್ಲಾ ಅನುಭವಿಸಬಹುದು ಮತ್ತು ಪ್ರತಿರೋಧಿಸಬಹುದು ಎಂಬುದಕ್ಕೆ ಈ ಕೃತಿ ಒಂದು ಉತ್ತಮ ಉದಾಹರಣೆ. ಈ ಕಾರಣಕ್ಕಾಗೇ ಅವರ ಬಗ್ಗೆ ಗೌರವ ನೂರ್ಮಡಿಯಾಗುವುದು.
    ಕೃತಿಯ ಓದಿನ ಮಧ್ಯದಲ್ಲಿ ನನಗನ್ನಿಸಿದ್ದು :
    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಅಂಕಹಳ್ಳಿಯಲ್ಲಿ ದಲಿತರ ಗುಡಿಸಲುಗಳಿಗೆ ಬೆಂಕಿ ಬಿದ್ದ ಸುದ್ದಿ ರಾಜ್ಯದ ಗಮನ ಸೆಳೆದಿತ್ತು. ದಲಿತರು ಮತ್ತು ಸವರ್ಣೀಯರ ಮಧ್ಯೆ ಸಾಮರಸ್ಯ ಮೂಡಿಸಲು ಸು್ತ್ತೂರು ಸ್ವಾಮೀಜಿಯಾದಿಯಾಗಿ ಯಾರ್ಯಾರೋ ಪ್ರಯತ್ನಿಸಿದ್ದರು. ಎಷ್ಟೇ ಸಭೆಗಳು ನಡೆದರೂ ಸಾಮರಸ್ಯ ಮೂಡಲಿಲ್ಲ. ಎರಡೂ ಕಡೆಯವರು ಒಮ್ಮತಕ್ಕೆ ಬರಲಿಲ್ಲ. ಹಳ್ಳಿಯ ಸ್ಥಿತಿಯ ಬಗ್ಗೆ ವರದಿ ಮಾಡಲು ಇಡ್ಲಿ ವಡೆ ತಿಂದು, ಬಿಸ್ಲೆರಿ ಬಾಟಲಿಗಳ ಜತೆಗೆ ವಾರ್ತಾ ಇಲಾಖೆಯ ಗಾಡಿಯಲ್ಲಿ ಹೋಗಿದ್ದ ನಾವು ಸವರ್ಣೀಯರ ವಿರೋಧವನ್ನೂ ಎದುರಿಸಬೇಕಾಯ್ತು. ‘ನಾವು ತಮಟೆ ಬಾರಿಸಲು ಒತ್ತಾಯ ಹಾಕಿದ್ದು ನಿಜ, ಅವರು ಬಡಿಯಲ್ಲ ಬಾರಿಸಲ್ಲ ಅಂದಾಗ ಬಹಿಷ್ಕಾರ ಹಾಕಿದ್ದು ನಿಜ. ಆದರೆ, ಗುಡಿಸಲಿಗೆ ಬೆಂಕಿ ಹಾಕಿಕೊಂಡಿದ್ದು ಅವರೇ’ ಎಂಬುದು ಸವರ್ಣೀಯರ ವಾದ.
    ದಿನ ಕಳೆದಂತೆ ಈ ಸುದ್ದಿಯೂ ಒಂದು ಸುದ್ದಿಯಾಗೇ ಮರೆಯಾಗುತ್ತಾ ಬಂತು. ಒಂದಷ್ಟು ದಿನಗಳು ಕಳೆದ ಮೇಲೆ ಸರ್ಕಾರದಿಂದ ದಲಿತರಿಗೆ ಮನೆ, ಭೂಮಿ, ಬೋರ್ ವೆಲ್ ಯೋಜನೆಗಳು ಜಾರಿಯಾದವು. ದಲಿತರ ಮುಖಗಳಲ್ಲಿ ನಗೆ ಕಂಡಿತ್ತು. ರಾಜ್ಯವೆಂಬೋ ರಾಜ್ಯ, ‘ನಗರ’ ಎಂಬೋ ಜಿಲ್ಲೆ, ಗುಂಡ್ಲುಪೇಟೆ ಎಂಬೋ ತಾಲ್ಲೂಕು ಮತ್ತು ಅಂಕಹಳ್ಳಿ ಎಂಬ ಅಂಕಹಳ್ಳಿಯೂ ಈ ಘಟನೆಯನ್ನು ಮರೆಯುತ್ತಾ ಬಂತು.
    ಈ ನಡುವೆ ಸರ್ಕಾರಿ ಯೋಜನೆಗಳನ್ನು ಪಡೆಯಲು ಆಗಾಗ ನಗರಕ್ಕೆ ಬರುತ್ತಿದ್ದ ದಲಿತರ ಹುಡುಗನ ಪರಿಚಯ ನನಗಾಗಿತ್ತು. ಇದೆಲ್ಲ ಕಳೆದು ಹಲವು ತಿಂಗಳಾದ ಮೇಲೆ ನಗರದ ನಮ್ಮ ಮನೆಯ ಎದುರಿನ ರಸ್ತೆಯಲ್ಲೇ ಆ ಹುಡುಗ ಮಾತಿಗೆ ಸಿಕ್ಕ. ಅದೂ ಇದೂ ಮಾತು ಕಳೆದು ಕೇಳಬೇಕೋ ಕೇಳಬಾರದೋ ಎಂಬ ಅಳುಕಲ್ಲಿ ಆ ಹುಡುಗನನ್ನ ಕೇಳಿದೆ : ‘ಅಂದು ರಾತ್ರಿ ಸವರ್ಣೀಯರು ನಿಮ್ಮವರ ಗುಡಿಸಲಿಗೆ ಬೆಂಕಿ ಹಾಕಿದ್ದು ನಿಜವಾ?’
    ಹುಡುಗ ಯಾವುದೇ ಅಳುಕಿಲ್ಲದೇ ಕೊಟ್ಟ ಉತ್ತರ ಹೀಗಿತ್ತು : ‘ಗುಡಿಸಲಿಗೆ ಬೆಂಕಿ ಇಟ್ಟಿದ್ದು ಸುಳ್ಳೋ ನಿಜವೋ ಸಾ. ಆದ್ರೆ ಬೆಂಕಿ ಬಿತ್ತು ಅನ್ನೋ ಕಾರಣಕ್ಕೇ ಅದು ದೊಡ್ಡ ಸುದ್ದಿಯಾಯ್ತು. ಸುದ್ದಿಯಾಗಿದ್ಕೇ ಇವತ್ತು ಸರ್ಕಾರ ನಮ್ಗ ಒಂದಷ್ಟ ಜಮೀನು, ಬೋರು ಕೊಟ್ಸವ್ರ. ಈಗ ಏಳಿ ಸಾ ಬೆಂಕಿ ವಿಷ್ಯ ಈಗ ನಿಜವೋ ಸುಳ್ಳೋ…’
    ಈ ನಿಜ – ಸುಳ್ಳುಗಳ ಅರ್ಥ ಈವರೆಗೂ ನನಗೆ ಆಗಿಲ್ಲ.
    ಮಹಾದೇವರ ಪುಸ್ತಕದಲ್ಲಿ ಅರ್ಥ ಸಿಗಬಹುದೇನೋ ಹುಡುಕುತ್ತಿದ್ದೇನೆ….
    -ದಯಾನಂದ

  2. ಸುಧಾ ಚಿದಾನಂದಗೌಡ

    ದಯಾನಂದರವರ ಈ ಪುಟ್ಟ ಲೇಖನ ತುಂಬ ಶಕ್ತಿಶಾಲಿಯಾಗಿದೆ.
    ಗ್ರಹಿಕೆಯ ಮೂಲ ಕರಾರುವಾಕ್ಕಾಗಿದೆ.

  3. ತಾಜ್ ಗಡಿನಾಡು

    ಖಂಡಿತವಾಗಿಯೂ ‘ಎಲ್ಲರಿಗೂ ‘ ಇಷ್ಟ ಆಗುವ ‘ಚೆಂದದ ಪುಸ್ತಕ’ ದೇವನೂರರು ಬರೆಯೋದು ಕಷ್ಟದ ಮಾತು…! ಓದುವ ಮನಸ್ಸು ‘ಚಂದ’ ಇದ್ದರೆ ಚೆನ್ನ …

  4. ಲಿಂಗರಾಜು ಬಿ.ಎಸ್

    ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರದ ಬಗ್ಗೆ ಜೋಗಿಯವರ ಒಂದೆರಡು ಸಾಲುಗಳ ಟೀಕೆ ಬಗ್ಗೆ ಸ್ವಲ್ಪ ಖಾರ ಎನ್ನಬಹುದಾದ ಪ್ರತಿಕ್ರಿಯೆಗಳು ಬರುತ್ತಿವೆ. ಇವೆಲ್ಲಾ ಹೆಚ್ಚಿನದಾಗಿ ದೇವನೂರರ ಬಗ್ಗೆ ಇರುವ ಅಭಿಮಾನದ ಮೂಸೆಯಲ್ಲಿ ಅರಳಿದವು ಎನ್ನಿಸುತ್ತಿವೆ. ಟೀಕೆ ಮಾಡಿದವರಿಗೆ ಉತ್ತರ ಕೊಡುವ ಭರದಲ್ಲಿ ಅವರನ್ನು ಕವುಚಿ ಹಾಕುತ್ತಾರೆನೋ ಎಂಬ ಭಯ ನನ್ನನ್ನು ಕಾಡುತ್ತಿದೆ.
    ದೇವನೂರರನ್ನು ನಾನು ಮೊದಲು ಭೇಟಿ ಮಾಡಿದ್ದು ಚಿಕ್ಕಮಗಳೂರಿನಲ್ಲಿ. ಬಾಬಾಬುಡನ್ ದಗರ್ಾವನ್ನು ದತ್ತಪೀಠವೆಂಬ ವೈದಿಕ ಗರ್ಭಗುಡಿಯೊಳಗೆ ಬಂಧಿಸುವ ಸಂಘಪರಿವಾರದ ಹುನ್ನಾರದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗೆ ದೇವನೂರು ಬಂದಿದ್ದರು. ಬಂದಿದ್ದು ವಿಶೇಷವಿಲ್ಲದಿದ್ದರೂ ಬಂದ ರೀತಿ ಮಾತ್ರ ಎಂಥವರಿಗೂ ಆಭಿಮಾನ ಮೂಡಿಸುವಂಥದ್ದು. ಚಿಕ್ಕಮಗಳೂರಿಗೆ ಬರುವವರನ್ನೆಲ್ಲಾ ತಪಾಸಣೆ ಮಾಡಿಯೇ ಬಿಡುತ್ತಿದ್ದ ಜಿಲ್ಲಾಡಳಿತದ ಕಣ್ತಪ್ಪಿಸಿ ಆವರು ಬಂದಿದ್ದರು.
    ಹುಲ್ಲನ್ನು ಸಾಗಿಸುವ ಲಾರಿಯಲ್ಲಿ ಹುಲ್ಲಿನ ಮೇಲೆ ಮಲಗಿಕೊಂಡು ಬಂದಿದ್ದ ದೇವನೂರರ ತಲೆ ಹಾಗೂ ಸ್ವಟರ್ ಮೇಲೆಲ್ಲಾ ಹುಲ್ಲು. ಲಾರಿಯಿಂದ ಇಳಿದಾಗಲಿಂದ ಪ್ರತಿಭಟನೆ ನಡೆಯುವ ಸ್ಥಳದವರೆಗೂ ಹುಲ್ಲನ್ನು ಕೊಡವುತ್ತಲೇ ಇದ್ದರು. ಪ್ರತಿಭಟನೆ ಸ್ಥಳಕ್ಕೆ ಕರೆದುಕೊಂಡು ಬರಲು ಹೋಗಿದ್ದ ನಾನು ಅಣ್ಣಾ (ನಾನು ಯಾವಾಗಲೂ ಆವರನ್ನು ಅಣ್ಣ ಎಂದೇ ಕರೆಯುವುದು) ಇಲ್ಲೇ ಎಲ್ಲಾದರೂ ಟೀ ಕುಡಿಯೋಣ ಎಂದೆ. ಯಾಕೆಂದರೆ ಕನಿಷ್ಠ ಆಲ್ಲಿ ಬಾಯಿ ತೊಳೆಯುವಾಗ ಕನ್ನಡಿ ನೋಡಿ ಉಳಿದ ಹುಲ್ಲನ್ನಾದರೂ ಕೊಡವುತ್ತಾರೆ ಎಂಬ ಆಸೆ ನನ್ನದು. ಆದರೆ ಟೀ ಕುಡಿಯೋದು ಬೇಡ ಎಂದರು. ಯಾಕೋ ಆವರ ಮನಸು ಸರಿಯಿಲ್ಲ ಎಂದು ಅಂದುಕೊಂಡು ಸುಮ್ಮನಾದೆ. ದಾರಿಯುದ್ದಕ್ಕೂ ಮಾತನಾಡುತ್ತಲೇ ಬಂದ ಅವರು ಹೇಳಿದ್ದು ಒಂದೇ ಮಾತು “ಇಲ್ಲಿನ ಹಳೆ ಮರಗಳಿಗೆಲ್ಲಾ ಎಂತದೋ ಕಾಯಿಲೆ ಬಂದಿದೆ ಕಣೋ, ಊರಲೆಲ್ಲಾ ಹರಡೋ ಮುಂಚೆ ಹುಷಾರು ಮಾಡಬೇಕು. ಅದಕ್ಕೆ ನಿಮ್ಮಂಥೋರು(ನನ್ನ ವಯಸ್ಸಿನವರು) ಡಾಕ್ಟರಾಗಬೇಕು” ಅಂತ.
    ನಂತರ ಹುಲ್ಲಿನ ಲ;ಆರಿಯಲ್ಲಿ ಬಂದಿದ್ದನ್ನು ಅವರು ಭಷಣದಲ್ಲೇನೂ ಹೇಳಿಕೊಳ್ಳಲಿಲ್ಲ. ಅದರೆ ಏನಿದು ಹುಲ್ಲು ಅಂದ ಎಲ್ಲರಿಗೂ ಹೇಳುತ್ತಿದ್ದುದ್ದು, ಇಲ್ಲಿ ಕಸ ಗುಡಿಸುವ ಮುಂಚೆ ಅಲ್ಲೊಂದು ಕಡೆ ಕಸಗುಡಿಸಿ ಬಂದೆ ಅಂಥ. ಆದರೆ ಇದು ಎಷ್ಟು ಜನರಿಗೆ ಅರ್ಥವಾಯಿತೋ ಇಲ್ಲವೋ ಗೊತ್ತಿಲ್ಲ.
    ಇದನ್ನು ಇಲ್ಲಿ ಹೇಳಿದ ಕಾರಣ ಇಷ್ಟೆ, ದೆಏವನೂರರ ಬರಹ ಓದಿ ಕುಣಿಯುವುದು ಬೇರೆ, ಅನುಭವಿಸುವುದು ಬೇರೆ, ಎಲ್ಲಾ ಹೇಳುವಂತೆ ಅವರು ಮಾತನಾಡುವುದು ಕಡಿಮೆ, ಬರೆಯುವುದು ಕಡಿಮೆ, ಹಾಗೆಯೇ ಅವರೊಳಕ್ಕೆ ಇಳಿದಿರುವವರು ಇನ್ನೂ ತುಂಬಾ ಕಡಿಮೆ. ಅಂಥದ್ದರಲ್ಲಿ ಬಾಗಿಲಲ್ಲಿ ನಿಂತು ಓದಿದವರು ಮಾಡಿದ ಒಂದೆರಡು ಸಾಲು ದೇವನೂರರನ್ನು ಮತ್ತೆ ಮತ್ತೆ ಓದಿಸಿಕೊಳ್ಳಲು ಕಾರಣವಾಗುತ್ತದೆ. ಟೀಕೆ ಯಾವಾಗಲೂ ಇನ್ನಷ್ಟು ಎತ್ತರಕ್ಕೆ ಬೆಳೆಸುತ್ತದೆ, ಒಳಗೂ ಹೊರಗೂ ಪ್ರಾಮಾಣಿಕರನ್ನು ಮಾತ್ರ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading