ಗೋಪಾಲ ವಾಜಪೇಯಿ ಕಾಲಂ : ಬಣ್ಣದ ಮನುಷ್ಯ, ಮಣ್ಣಿನ ಮನುಷ್ಯ!

ಸುಮ್ಮನೇ ನೆನಪುಗಳು – 35

ಗಜಾನನ ಅಥವಾ ಗಣಪತಿಗೆ ಮಣ್ಣಿನೊಂದಿಗೂ ಬಣ್ಣದೊಂದಿಗೂ ಅವಿನಾಭಾವ ಸಂಬಂಧ.
ಆತ ಮಣ್ಣಿನಿಂದ ‘ಉದ್ಭವಿಸು’ವವ, ಬಣ್ಣಗಳಿಂದ ‘ಅಲಂಕೃತ’ಗೊಳ್ಳುವವ.
ಈ ನಮ್ಮ ‘ಜೀವಂತ ಗಣಪತಿ’ಗೂ ಅಷ್ಟೇ. ಮಣ್ಣು-ಬಣ್ಣಗಳೆರಡೂ ಇಷ್ಟವಾದವುಗಳೇ. ಬಣ್ಣವನ್ನು ಕಲೆಸುತ್ತ ನಟರನ್ನು ಹೇಗೆ ರೂಪಾಂತರಗೊಳಿಸಬಲ್ಲರೋ ಹಾಗೆಯೇ ಮಣ್ಣನ್ನು ಮಿದ್ದಿ ಮಿದ್ದಿ, ಮುದ್ದೆ ಮಾಡಿ, ಕ್ರಮೇಣ ಅದರಲ್ಲೊಂದು ಮೂರ್ತಿಯನ್ನು ರೂಪಿಸಿಟ್ಟು ನಮ್ಮನ್ನು ಮುದಗೊಳಿಸಬಲ್ಲರು.
ಗಣಪತಿ ಹಬ್ಬ ಬಂದರೆ ಮಹಾಲೆಯವರ ಹುಮ್ಮಸ್ಸು ನೋಡಬೇಕು. ಹುಡುಗರಿಗಿಂತ ಹುಡುಗರಾಗುತ್ತಾರೆ. ಕೈ ಕೆಸರು ಮಾಡಿಕೊಳ್ಳುತ್ತಾರೆ. ಹಾಂ, ಅವರಿಗೆ ಕೈ ಕೆಸರು ಮಾಡಿಕೊಳ್ಳುವುದಷ್ಟೇ ಗೊತ್ತು ; ‘ಮೊಸರಿನ ಯೋಚನೆ’ ಇಲ್ಲವೇ ಇಲ್ಲ. ನಿಜಕ್ಕೂ ಅವರದು ಗೋರಾ ಕುಂಬಾರನ ತನ್ಮಯತೆ.
ಮಹಾಲೆ ಹೀಗೆ ಮಣ್ಣನ್ನು ತುಳಿತುಳಿದು ಹದಗೊಳಿಸುತ್ತಿರುವ ಹೊತ್ತಿನಲ್ಲಿ ನಾನೊಂದೆರಡು ಸಲ ಹೋಗಿ ”ಮೇಕಪ್ಪಿಗೆ ಬರ್ರಿ,” ಎಂದು ಅವರನ್ನು ಕಾಡಿದ್ದೇನೆ. ನಮ್ಮಂಥವರು ಕಾಡಿದರೂ ಕೋಪಗೊಳ್ಳದವರು ಈ ಹಿರಿಯ. ಆಗೆಲ್ಲ ಒಂದು ನಗೆ ಬೀರಿ, ”ಎಲ್ಲಿ? ಯಾವಾಗ? ಯಾವ ನಾಟಕ?” ಎಂಬೆಲ್ಲ ವಿವರಗಳನ್ನು ಪಡೆಯುತ್ತಲೇ ತಮ್ಮ ಕೆಲಸ ಮುಂದುವರಿಸಿದ್ದುಂಟು. ಏನು ಮಾಡೋಣ ಹೇಳಿ? ಬೇರೆಯವರು ಮಾಡುವ ಮೇಕಪ್ ನಮಗೆ ಇಷ್ಟವೇ ಆಗುವುದಿಲ್ಲ. ಮೇಕಪ್ಪಿಗೆ ನಮಗೆ ಮಹಾಲೆಯೇ ಆಗಬೇಕು. ಅಲ್ಲಿಯೇ ಸುತ್ತಮುತ್ತಲಿನ ನೂರು ಕಿಲೋಮೀಟರು ಅಂತರದಲ್ಲಿ ನಾಟಕವಿದೆ ಎಂದಾದರೆ ಅವರು ಮಣ್ಣಿನ ಕೆಲಸವನ್ನು ಮಕ್ಕಳಿಗೆ ವಹಿಸಿ ನಾಟಕದವರೊಂದಿಗೆ ನಡೆದುಬಿಡುತ್ತಾರೆ. ನಾಟಕದ ಕೆಲಸ ಮುಗಿಸಿಬಂದು ಮತ್ತೆ ಮಣ್ಣಿಗೆ ಕೈಹಚ್ಚುತ್ತಾರೆ.
ಹೀಗೆ ಧಾರವಾಡದಲ್ಲಿದ್ದುಕೊಂಡು, ‘ಪ್ರಸಾಧನ’, ‘ಪ್ರತಿಮೆಗಳ ತಯಾರಿ’ಗಳ ಜತೆ ಜತೆಗೆ ‘ಪೇಟೀ ಸಾಥಿ’ಗೆ ಕೂಡುವುದು ಮಹಾಲೆಯವರ ದಿನಚರಿಯ ಇನ್ನೊಂದು ಮುಖ್ಯ ಅಂಶ. ಮನೆಯಲ್ಲೇ ಸಂಗೀತದ ಅಭ್ಯಾಸ ಮಾಡುವ ಉದಯೋನ್ಮುಖ ಸಂಗೀತ ಪಟುಗಳಿಗೆ ಹಾರ್ಮೋನಿಯಂ ಸಾಥಿ ನೀಡುವುದು, ಮತ್ತು ಅಲ್ಲಿ, ಸಾಥಿ ನೀಡುವಾಗ, ತುಂಬಾ ಪ್ರೀತಿಯಿಂದ ಮೆದುವಾಗಿ ತಪ್ಪುಗಳನ್ನು ತಿದ್ದಿ ತೀಡಿ ಸಹಕರಿಸುವುದು ಈ ಹಿರಿಯನ ದೊಡ್ಡ ಗುಣ. ಹಾಗೆ ತಿದ್ದಿ ಹೇಳುವಾಗ ಅವರಲ್ಲಿ ‘ತನಗೆಲ್ಲ ಗೊತ್ತು’ ಎಂಬ ಅಹಮು ಕಿಂಚಿತ್ತೂ ಕಾಣಿಸದು. ಇಂಥ ವಿನಯಶೀಲನ ಬಗ್ಗೆ ಯಾರಿಗೆ ತಾನೇ ಆದರಭಾವವುಂಟಾಗದು ಹೇಳಿ…
ವಿದೇಶದಲ್ಲಿದ್ದುಕೊಂಡು (Belfast, United Kingdom) ಗಾಯನ ಮತ್ತು ಕುಂಚ ಕಲೆಗಳೆರಡರಲ್ಲೂ ಸಾಧನೆಗೈಯುತ್ತಿರುವ ಶ್ರೀಮತಿ ಅಮಿತಾ ರವಿಕಿರಣ್ ಒಂದು ಸಲ ಬರೆದಿದ್ದರು : ”ಮಹಾಲೆ ಮಾಮಾ ಎಂದರೆ ನನಗೆ ಭಕ್ತಿಪೂರ್ವಕ ಗೌರವ. ಧಾರವಾಡದಲ್ಲಿ ಬಿ ಮ್ಯೂಜಿಕ್ ಮೊದಲ ವರ್ಷದಲ್ಲಿರುವಾಗ ನನ್ನ ಮೊದಲ ಸಂಗೀತ ಕಚೇರಿಗೆ ಅವರೇ ಹಾರ್ಮೋನಿಯಂ ನುಡಿಸಿದ್ದು. ನಾನು ಆಲಾಪವನ್ನು ಮಾಡುವಾಗ ‘ಆ’ಕಾರದ ಬದಲು ‘ಅ’ಕಾರ ಹಾಡುತ್ತಿದ್ದೆ. ಅದನ್ನು ಗಮನಿಸಿ, ಅವರು ಪ್ರೀತಿಯಿಂದ ತಿದ್ದಿದರು. ಅದೆಷ್ಟೇ ಕಿರಿಯ ವಯಸ್ಸಿನ ಕಲಾವಿದರಿದ್ದರೂ ಅವರನ್ನು ಪ್ರೋತ್ಸಾಹಿಸುತ್ತ ನಗುಮೊಗದಿಂದ ಸಾಥಿ ಮಾಡುತ್ತಾರೆ ಮಹಾಲೆ ಅವರು. ನಿಜಕ್ಕೂ ಅವರದು ಅಪರೂಪದ ವ್ಯಕ್ತಿತ್ವ…”
ಮಹಾಲೆ ಸ್ವಭಾವತಃ ತುಂಬಾ ಸಂಕೋಚಪ್ರವೃತ್ತಿಯವರು. ನೀರಡಿಸಿ ಕೂತರೂ ಬಾಯಿ ಬಿಟ್ಟು ನೀರು ಕೇಳಲು ಮುಜುಗರಪಟ್ಟುಕೊಳ್ಳುವಷ್ಟು ಸಂಕೋಚ. ಯಾರ ಮನೆಯಲ್ಲೂ ಅನವಶ್ಯವಾಗಿ ಒಂದು ನಿಮಿಷವೂ ನಿಲ್ಲದಂಥವರು. ಬಂದ ಕೆಲಸ ಮುಗಿದ ಕೂಡಲೇ ಆ ಜಾಗ ಖಾಲಿ ಮಾಡಿಬಿಡುವವರು. ಮಹಾಲೆಯವರ ಈ ಗುಣದ ಮೇಲೆ ತಮ್ಮ ಒಂದು ಬರಹದಲ್ಲಿ ನಮ್ಮ ಹೆಮ್ಮೆಯ ಕವಯಿತ್ರಿ, ಬಹುಮುಖ ಪ್ರತಿಭೆಯ ಶ್ರೀದೇವಿ ಕಳಸದ ಅವರು ಬೆಳಕು ಚೆಲ್ಲಿದ್ದಾರೆ. ಶ್ರೀದೇವಿ ಹಿಂದೂಸ್ತಾನಿ ಶೈಲಿಯ ಒಳ್ಳೆಯ ಸಂಗೀತ ಪಟು. ಧಾರವಾಡದಲ್ಲಿ ಅವರಿನ್ನೂ ಕಲಿಕೆಯ ಹಂತದಲ್ಲಿದ್ದಾಗ, ಮಹಾಲೆಯವರೇ ಸಾಥ್ ನೀಡುತ್ತಿದ್ದರು. ಅದೊಂದು ಸಂಜೆ. ಅವರ ಮನೆಗೆ ಮಹಾಲೆ ಹೋಗಿದ್ದಾರೆ. ಮಳೆಗಾಲ ಬೇರೆ. ಸಣ್ಣಗೆ ಶುರುವಾದ ಹನಿ ಜೋರು ಮಳೆಯಾಗಿ ಸುರಿಯತೊಡಗಿದೆ. ಸಂಗೀತಾಭ್ಯಾಸ ಮುಗಿದರೂ ಮಳೆ ನಿಂತಿಲ್ಲ. ಮಹಾಲೆ ಅಂಥದರಲ್ಲಿಯೇ ಮನೆಗೆ ಹೊರಟು ನಿಂತರಂತೆ. ”ಮಳೀ ನಿಲ್ಲೂ ತನಕಾ ಕೂತುಗೋಳ್ರಿ,” ಎಂದರೂ ಒಪ್ಪಲಿಲ್ಲವಂತೆ. ”ಕೊಡೀನಾದ್ರೂ ತೊಗೊಂಡು ಹೋಗ್ರಿ,” ಎಂದು ಕೊಡಲು ಬಂದರೆ, ”ಮಳಿ ಏನೂ ಜೋರಿಲ್ಲ ಬಿಡ್ರಿ,” ಎಂದವರೇ ಸೈಕಲ್ಲು ಏರಿದರಂತೆ.
ಸೈಕಲ್ಲು… ಅದು ಹೆಚ್ಚು ಕಡಿಮೆ ಮಹಾಲೆಯವರ ಬದುಕಿನ ಇನ್ನೊಂದು ಭಾಗವೇ ಆಗಿಬಿಟ್ಟಿದೆ. ಕಳೆದ ನಲವತ್ತು ವರ್ಷಗಳಿಂದ ಬಹುಶಃ ಅವರು ಈ ಸೈಕಲ್ಲನ್ನು ತುಳಿಯುತ್ತಿರಬೇಕು.
ಧಾರವಾಡದಲ್ಲೇ ಆದರೆ ದೊಡ್ಡದೊಂದು ಮೇಕಪ್ ಕಿಟ್ ಹೆಗಲಿಗೆರಿಸಿಕೊಂಡು ಸೈಕಲ್ ಏರಿ ಹೊರಟ ಮಹಾಲೆ ಕಣ್ಣಿಗೆ ಬೀಳುತ್ತಾರೆ. ಹುಬ್ಬಳ್ಳಿ ಮುಂತಾದೆಡೆಯ ಪ್ರಯೋಗವಾದರೆ ಕಿಟ್ ಸಮೇತ ಅವರು ಬಸ್ ಸ್ಟಾಂಡಿನಲ್ಲಿ ಕಾಣಸಿಗುತ್ತಾರೆ.
ಅವರು ಸೈಕಲ್ಲು ಏರಿ ಹೊರಟಾಗಲೆಲ್ಲ ತಮ್ಮೊಳಗೆ ತಾವೇ ಏನನ್ನೋ ಗುನುಗಿಕೊಳ್ಳುತ್ತಿರುತ್ತಾರೆ. ಅದು ಖಂಡಿತವಾಗಿ ಒಂದು ರಾಗ ಅಥವಾ ಒಂದು ರಂಗಗೀತೆಯಾಗಿರುತ್ತದೆ ; ಇಲ್ಲದಿದ್ದರೆ, ಧಾರವಾಡದ ಹೆಸರನ್ನು ಸಂಗೀತ ಕ್ಷೇತ್ರದಲ್ಲಿ ಅಜರಾಮರಗೊಳಿಸಿದ ಡಾ. ಮಲ್ಲಿಕಾರ್ಜುನ ಮನಸೂರ ಇಲ್ಲವೇ ಡಾ. ಬಸವರಾಜ ರಾಜಗುರು ಹಾಡಿದ ವಚನವೋ ಗೀತೆಯೋ ಆಗಿರುತ್ತದೆ.
ಆ ಇಬ್ಬರೂ ಮಹನೀಯರಿಗೆ ಮಹಾಲೆಯ ಬಗ್ಗೆ ಇದ್ದದ್ದು ‘ನಮ್ಮ ಹುಡಗ’ ಎಂಬಂಥ ಪ್ರೀತಿ.
ಅಂಥ ಅನೇಕ ಮಹನೀಯರ ಕೆಲವು ಗುಣವಿಶೇಷಗಳನ್ನು ಮಹಾಲೆ ಕತೆ ಮಾಡಿ ಹೇಳುತ್ತಿರುತ್ತಾರೆ.

-೦-೦-೦-೦-೦-

ಮಣ್ಣಿನ ಗಣಪ… ಬಣ್ಣದ ಗಣಪ…

ಹೀಗೆಯೇ ಒಮ್ಮೆ ಕುತೂಹಲಕ್ಕೆ ಅವರನ್ನು ಕೇಳಿದ್ದೆ- ”ಅಲ್ರೀ ಮಹಾಲೆ… ಗಣಪತಿ ಅಂತೀರಿ, ಮೇಕಪ್ಪು ಅಂತೀರಿ, ವಿಗ್ಗು-ಕಿರೀಟ ಅಂತೆಲ್ಲಾ ಮಾಡತೀರಿ… ಇದರಿಂದ ನಿಮಗ ಸಾಕಷ್ಟು ರೊಕ್ಕ ಬರತಿರಬೇಕಲ್ಲಾ?…”
ನನ್ನ ಮಾತಿಗೆ ಬಾಯಿ ತುಂಬಾ ನಕ್ಕರು ಮಹಾಲೆ. ”ಹೌದ್ರೀ ಸರ್… ಹಂಗ ಬರೂದನ್ನೆಲ್ಲಾ ‘ಎಲ್ಲಿಡಬೇಕು’ ಅನ್ನೋದs ತಿಳೀಧಂಗಾಗೆತಿ ನೋಡ್ರಿ…” ಅಂದರು.
ಮಹಾಲೆಯವರಿಗೆ ‘ವಿದ್ಯೆ’ ಒಲಿದಿದ್ದಾಳೆ ಹೊರತು ‘ಲಕ್ಷ್ಮಿ’ಯಲ್ಲ… ಆ ಬಗ್ಗೆ ಅವರು ತಲೆಕೆಡಿಸಿಕೊಂಡೂ ಇಲ್ಲ. ‘ಇಂದಿಗಾದರೆ ಸಾಕು, ನಾಳಿನ ಚಿಂತೆ ನಾಳಿಗೆ…’

1975ರ ನಂತರ ತಾನೇ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಮುಂತಾದೆಡೆಗಳಲ್ಲಿ ಹವ್ಯಾಸಿ ರಂಗಭೂಮಿ ಚುರುಕುಗೊಂಡದ್ದು… ಅದಕ್ಕೂ ಮುನ್ನ ಹವ್ಯಾಸಿ ನಾಟಕಗಳ ಪ್ರಯೋಗಗಳು ಬಲು ಅಪರೂಪ. ಆಗೆಲ್ಲ ಸ್ಪರ್ಧೆಗಳಿಗೆಂದೇ ನಾಟಕಗಳನ್ನು ಕೈಗೆತ್ತಿಕೊಳ್ಳುವ ಪರಿಪಾಠ. ಅಂಥ ಸ್ಪರ್ಧೆಗೆ ಹೋಗುತ್ತಿದ್ದವರು ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರು. ಅವರಿಗೆ ಒಂದೋ ಎರಡೋ ಪ್ರಯೋಗಗಳಾದರೆ ಮುಗಿಯಿತು. ಅಂಥ ಸಂದರ್ಭ ಬಿಟ್ಟರೆ, ಹಳ್ಳಿಗಳಲ್ಲಿ ನಾಟಕಗಳಾದರಷ್ಟೇ ಮಹಾಲೆಯಂಥವರಿಗೆ ಕೆಲಸ-ಕಾಸು…
ಹಳ್ಳಿಗಳ ನಾಟಕ ಎಂದಕೂಡಲೇ ನನ್ನ ಕಣ್ಣೆದುರಿಗೆ ಇನ್ನೊಬ್ಬ ಮಹಾಶಯನ ಚಿತ್ರ ನಗುತ್ತ ನಿಲ್ಲುತ್ತದೆ. ಆತನೂ ಮೇಕಪ್ ಮಾಡುವವನೇ. ಮೊದಮೊದಲು ನಾವು ಅವನನ್ನೇ ಕರೆಯುತ್ತಿದ್ದೆವು. ನಾಟಕಗಳಿಗೆ ಬೇಕಾದ ಪರದೆ, ಡ್ರೆಸ್ಸು, ಆಭರಣಗಳು, ಶಸ್ತ್ರಾಸ್ತ್ರಗಳು ಮುಂತಾದವುಗಳನ್ನು ಒದಗಿಸುವುದು ಆತನ ವೃತ್ತಿ. ಹಳ್ಳಿಯ ನಾಟಕಗಳಿಗೆ ಬೇಕಾದ ಕಲಾವಿದೆಯರನ್ನೂ ಆತನೇ ಹೊಂದಿಸಿಕೊಡುತ್ತಿದ್ದ. ತುಂಬಾ ಒರಟು ಕೈ ಆತನದು. ಬಣ್ಣ ಬಳಿಯುತ್ತಿದ್ದಾನೋ ರೊಟ್ಟಿ ತಟ್ಟುತ್ತಿದ್ದಾನೋ ಗೊತ್ತಾಗುತ್ತಿರಲಿಲ್ಲ. ಮುಖಕ್ಕೆ ಬಣ್ಣ ಬಳಿದು ಪಟಪಟ ಬಡಿಯುತ್ತಿದ್ದ. ಒಮ್ಮೆ ಮೇಕಪ್ ಮಾಡಿಸಿಕೊಂಡರೆ ಮುಂದೆ ಒಂದು ವಾರದ ತನಕ ಆ ಗುರುತು ಉಳಿದಿರುತ್ತಿತ್ತು. ಹಳ್ಳಿಯ ಜನಕ್ಕೆ ಅಂತ ಮೇಕಪ್ಪೇ ಆಗಬೇಕಂತೆ. (ಹೌದು. ನಾಟಕ ಮುಗಿದು ಮುಂದೆ ವಾರದ ತನಕ ಕಿವಿಯ ಸಂದಿಯಲ್ಲೋ, ಕಿವಿಯ ಹಿಂಬದಿಯಲ್ಲೋ ಬಣ್ಣ ಉಳಿಯಬೇಕು. ಹಾಗೆ ಉಳಿದ ಬಣ್ಣವನ್ನು ನೋಡಿ, ಬೇರೆ ಊರಿನ ಜನ ಯಾವ ನಾಟಕ, ಯಾವ ಪಾರ್ಟು ಇತ್ಯಾದಿ ಕೇಳಬೇಕು… ಈತ ಉಬ್ಬು ಉಮ್ಮೇದಿನಿಂದ ಆ ಬಗ್ಗೆ ಹೇಳಿಕೊಳ್ಳಬೇಕು…)
ಒಮ್ಮೆ ಆ ಮಹಾಶಯನೊಂದಿಗೆ ಸಮೀಪದ ಹಳ್ಳಿಯ ನಾಟಕಕ್ಕೆ ಹೋಗಿದ್ದೆ. ನಾನೂ ಚಿಕ್ಕಂದಿನಲ್ಲಿ ಅಂಥದೊಂದು ನಾಟಕದಲ್ಲಿ ಪಾತ್ರ ಮಾಡಿದ್ದವನೇ. ಅಲ್ಲಿ ಆ ಹಳ್ಳಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಲಾವಿದರು. ಈತನ ಜತೆ ಸಣ್ಣ ಪಾತ್ರಗಳಿಗೆ ಬಣ್ಣ ಬಳಿಯಲು ಒಬ್ಬ ಸಹಾಯಕ. ಡ್ರೆಸ್ ಹಾಕಲು ಮತ್ತೊಬ್ಬ ಆಳು. ಮುಖ್ಯ ಪಾತ್ರಗಳೆಲ್ಲ ಈ ಮಹಾಶಯನ ಪಾಲಿಗೆ. ಊರ ಗೌಡರ ಮಗ, ಶಾನುಭೋಗರ ಅಳಿಯ, ಪಂಚಾಯಿತಿ ಚೇರ್ಮನ್ನರ ಸಂಬಂಧಿಕ ಇತ್ಯಾದಿ ಪ್ರಮುಖರಿಗೆಲ್ಲ ದೊಡ್ಡ ಪಾತ್ರಗಳು.
ಅಂದು ರಾತ್ರಿ ಹತ್ತಕ್ಕೆ ನಾಟಕ. ಇಪ್ಪತ್ತು ಜನರಿಗೆ ಬಣ್ಣ ಹಚ್ಚುವುದಾಗಬೇಕು, ಡ್ರೆಸ್ಸು ಹಾಕುವುದಾಗಬೇಕು. ಮಧ್ಯಾಹ್ನ ಊಟ ಮುಗಿಯುತ್ತಲೇ ಎಲ್ಲ ಕಲಾವಿದರನ್ನೂ ಒಂದೆಡೆ ಕರೆದ ಆ ಮಹಾಶಯ.
”ನೋಡ್ರಿ. ಬಣ್ಣಾ ಬೇಶಾಗಿ ಕೂಡಬೇಕಂದ್ರ ಅದನ್ನ ಬೆಣ್ಣಿ ಒಳಗ ಕಲಸಬೇಕಾಕ್ಕೈತಿ. ಇಪ್ಪತ್ತು ಜನಕ್ಕ ಬೇಕಾಗೂ ಬಣ್ಣಕ್ಕ ಐದು ಸೇರು ಬೆಣ್ಣಿ ಬೇಕು…” ಅಂತ ಪೀಠಿಕೆ ಹಾಕಿದ್ದೇ ತಡ ಗೌಡರ ಮಗ ಮನೆಗೆ ಆಳನ್ನು ಕಳಿಸಿಯೇಬಿಟ್ಟ.
ಹೀಗೆ ಹೋದಲ್ಲೆಲ್ಲ ಐದು ಸೇರು (=ಒಂದು ಕೆ.ಜಿ.) ಬೆಣ್ಣೆ ಈತನ ಡಬ್ಬಿಗೆ ಬೀಳುತ್ತಿತ್ತು. ಸುಗ್ಗಿಯಾದ ಮೇಲೆ ಜಾತ್ರೆಗಳ ಹಂಗಾಮು. ಈತನಿಗೋ ಕೈತುಂಬಾ ರೊಕ್ಕ. ಡಬ್ಬಿ ತುಂಬ ಬೆಣ್ಣೆ. ಕೊಬ್ಬಿ ಕೂಡದೆ ಇನ್ನೇನು?
ಆದರೆ ನಮ್ಮ ಮಹಾಲೆ ಯಾವತ್ತೂ ಅಂಥ ವ್ಯಾಪಕ್ಕೆ ಹೋದವರೇ ಅಲ್ಲ… ‘ಬಂದಷ್ಟೇ ಭಾಗ್ಯ’ವೆಂದು ಭಾವಿಸುವ ಸೀದಾ ಸಾದಾ ವ್ಯಕ್ತಿ. ಹಿಂದೆಲ್ಲ ಮಹಾಲೆಯಿಂದ ಬಣ್ಣ ಬಳಿಸಿಕೊಂಡ ಮೇಲೆ ಉದಾರವಾಗಿ ಕೊಟ್ಟವರೂ ಉಂಟು. ‘ನಾಳೆ ಬಾ, ನಾಡಿದ್ದು ಬಾ,’ ಎಂದು ಓಡಾಡಿಸಿ ಕೈ ಕೊಟ್ಟವರೂ ಉಂಟು. ಕೆಲಸ ಮುಗಿದ ಮೇಲೆ ಆದರೂ ‘ಬೆಣ್ಣೆ’ಯಂಥ ಮಾತುಗಳನ್ನು, ಬಣ್ಣ ಬಣ್ಣದ ಮಾತುಗಳನ್ನು ಆಡಿ ಬರಿಗೈಲಿ ಕಳಿಸಿದ್ದೂ ಉಂಟು. ಕೆಲವೊಮ್ಮೆ ಕೇವಲ ಬಸ್ಸಿನ ಖರ್ಚನ್ನು ಕೈಯಲ್ಲಿಟ್ಟು ‘ಬೈ’ ಎಂದವರೂ ಉಂಟು. ದೂಸರಾ ಮಾತಾಡದೆ ಅಲ್ಲಿಂದ ಮರಳುತ್ತಿದರು ಮಹಾಲೆ.
”ನೀವು ‘ಇಷ್ಟು’ ಅಂತ ಯಾಕ ರೇಟು ಫಿಕ್ಸ್ ಮಾಡೂದುಲ್ಲಾ…? ‘ಇಷ್ಟು ಕೊಟ್ರ ಮಾತ್ರ ಬರತೀನಿ,’ ಅಂತ ಯಾಕ ತಾಕೀತು ಮಾಡೂದಿಲ್ಲಾ…?” ಅಂತ ಒಮ್ಮೆ ಕೇಳಿದ್ದೆ.
ಮಹಾಲೆ ಸುಮ್ಮನೆ ಒಂದು ಸಲ ನಕ್ಕು ಸುಮ್ಮನಾಗಿದ್ದರು.
ಕ್ರಮೇಣ ಸ್ಥಿತಿ ಸುಧಾರಿಸಿತು. ತಂಡಗಳ ಜನಕ್ಕೂ ಮೇಕಪ್ ಮಹತ್ವದ ಅರಿವು ಬಂತು. ಮೊದಮೊದಲು ಪ್ರಯೋಗವೊಂದಕ್ಕೆ 25/-, 50/- ಅಂತ ಕೊಡುತ್ತಿದ್ದವರು ನೂರು ಇನ್ನೂರು ಕೊಡತೊಡಗಿದರು. ಕೆಲವು ತಂಡಗಳು ಜೊತೆಗೆ ಗಾಡಿ ಖರ್ಚು, ರಿಕ್ಷಾ ಚಾರ್ಜುಗಳನ್ನೂ ನೀಡಲಾರಂಭಿಸಿದರು. ಪ್ರಯೋಗಗಳ ಸಂಖ್ಯೆಗಳೂ ಹೆಚ್ಚತೊಡಗಿದವು. ಮಹಾಲೆಯ ಬದುಕು ಇದ್ದುದರಲ್ಲಿಯೇ ‘ಅರ್ಥಪೂರ್ಣ’ವಾಗಿ ಸಾಗತೊಡಗಿತು.
ಕೊಟ್ಟರೂ ಸೈ, ಕೊಡದಿದ್ದರೂ ಸೈ… ಒಟ್ಟು ನಾಟಕ ನಡೀಯಬೇಕು ಎಂಬ ಮನೋಭಾವದ ಮಹಾಲೆ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ…

-೦-೦-೦-೦-೦-

ಮಹಾಲೆಯ ಕೈ ಚಿತ್ರಕಲೆಯಲ್ಲೂ ಪಳಗಿದೆ. ಅವರ ಮನೆಗೆ ಹೋದರೆ ಮಹಾಲೆ ಯಾರದೋ ಒಂದು ಚಿಕ್ಕ ಫೋಟೋ ಇಟ್ಟುಕೊಂಡು ದೊಡ್ಡ ಡ್ರಾಯಿಂಗ್ ಪೇಪರ್ ಮೇಲೆ ಚಿತ್ರ ಬರೆಯುತ್ತ ಕೂತಿರುವುದನ್ನು ಈಗಲೂ ಕಾಣಬಹುದು. ನೋಡ ನೋಡುತ್ತಿದ್ದಂತೆ ಅಲ್ಲಿ ಒಂದು ಆಕಾರ ಕಾಣಿಸತೊಡಗಿ, ಮಹಾಲೆಯ ಕೈಚಳಕದಿಂದ ಅದು ಜೀವತಳೆದು ನಿಮ್ಮತ್ತ ಒಂದು ನಗೆಬೀರಬಹುದು. ಅದನ್ನು ‘ನೇರ್ಪಡಿಸು’ವುದು, ‘ಸುರೂಪ’ಗೊಳಿಸುವುದು ನಂತರದ ಹಂತ. ಅದಕ್ಕೆ ಬಣ್ಣ ಬಳಿಯುವುದು ಮೂರನೆಯ ಹೆಜ್ಜೆ. ಆ ನಂತರವಂತೂ ನೀವು ಅದನ್ನು ‘ಬಣ್ಣಿಸದೇ’ ಇರಲು ಸಾಧ್ಯವೇ ಇಲ್ಲ. ತುಂಬಾ ಹಿಂದೆ, ಡಾ. ಡಿ. ಸಿ. ಪಾವಟೆಯವರು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಸಂದರ್ಭ. ಆಗ ಮಹಾಲೆ ವಿಶ್ವವಿದ್ಯಾಲಯ ಆವರಣದ ಒಂದು ಅಂಗಡಿಯಲ್ಲಿ ಕೆಲಸಕ್ಕಿದ್ದರಂತೆ. ಪಾವಟೆಯವರದೊಂದು ವರ್ಣಚಿತ್ರವನ್ನು ತಯಾರಿಸಿ ಕೊಟ್ಟು ಅವರಿಂದ ಮೆಚ್ಚುಗೆ ಗಳಿಸಿದರಂತೆ.
ಚಿತ್ರಕಲೆಯನ್ನು ಅವರು ರೂಢಿಸಿಕೊಂಡದ್ದು ಎಳೆಯ ವಯದಲ್ಲಿಯೇ. ಉತ್ತರ ಕನ್ನಡ ಜಿಲ್ಲೆಯ ಮಣ್ಣು-ನೀರು-ಗಾಳಿಗಳ ಗುಣವೇ ಅಂಥದು. ಅಲ್ಲಿಯ ಪರಿಸರವೇ ನಿಮ್ಮಲ್ಲಿ ಸೃಜನಶೀಲತೆಯನ್ನು ಬಿತ್ತಿಬಿಡುತ್ತದೆ. ಅದು ಭಿನ್ನ ರೀತಿಯಲ್ಲಿ ಅಭಿವ್ಯಕ್ತಗೊಳ್ಳುತ್ತ ಹೋಗುತ್ತದೆ. ಅಲ್ಲಿಯವರೆಲ್ಲ ಮೂಲತಃ ನಿಸರ್ಗದ ಮಕ್ಕಳು. ಅದಕ್ಕೇ ಅವರ ಸೃಜನಾತ್ಮಕ ರಚನೆಗಳು ಅಷ್ಟು ಸಹಜ, ಅಷ್ಟು ಸುಂದರ.
ಮಹಾಲೆ ಅಂಕೋಲಾದಲ್ಲಿರುವಾಗ ಚವತಿ ಹಬ್ಬಕ್ಕೆ ಗಣೇಶನನ್ನು ಕೂರಿಸುವ ಮಂಟಪವನ್ನು ವಿಶೇಷವಾಗಿ ರೂಪಿಸಿದ್ದರಂತೆ. ಅದನ್ನು ನೋಡಲೆಂದೇ ಬಂದಿದ್ದರಂತೆ ಸುತ್ತಮುತ್ತಲ ಊರಿನ ಜನ. ಅಂತ ಆಕರ್ಷಣೆ ಏನಿತ್ತು ಅಲ್ಲಿ? ಮಹಾಲೆ ಆ ಮಂಟಪದಲ್ಲಿ ಮಹಾತ್ಮಾ ಗಾಂಧೀಜಿಯ ಪಾದಯಾತ್ರೆಯ ಮಾಡೆಲ್ಲುಗಳನ್ನು ಮಾಡಿ ನಿಲ್ಲಿಸಿದ್ದರಂತೆ. ಅದು 1944-45ನೆಯ ವರ್ಷ. ಆಗಿನ್ನೂ ಮಹಾಲೆ ಹದಿಮೂರರ ಬಾಲಕ.
ಅಲ್ಲಿಂದ ಶುರುವಾಯಿತು ಅವರ ‘ಕಲಾಯಾತ್ರೆ.’ ಎಲ್ಲ ಕಲೆಗಳೂ ಒಂದಕ್ಕೊಂದು ಪೂರಕ ಎಂಬುದು ಅವರ ಅರಿವಿಗೆ ಬರಲು ತಡವಾಗಲಿಲ್ಲ. ಕೇಶಕರ್ತನವೂ ಒಂದು ಕಲೆಯೇ. ಅದು ಮೇಕಪ್ ಕಲೆಯನ್ನು ಸುಧಾರಿಸಿಕೊಳ್ಳಲು ಮಹಾಲೆಗೆ ಸಾಕಷ್ಟು ರೀತಿಯಲ್ಲಿ ನೆರವಾಗಿದೆ.
ಹಿಂದೆಲ್ಲ ಹಳ್ಳಿಯ ನಾಟಕಗಳಿಗೂ ಬಣ್ಣ ಹಚ್ಚಲು ಮಹಾಲೆ ಹೋಗುತ್ತಿದ್ದರು ಎಂದೆನಲ್ಲ. ಬರಬರುತ್ತ ಹವ್ಯಾಸಿಗಳತ್ತ ತಿರುಗಿ ಇಲ್ಲಿಯೇ ನೆಲೆ ನಿಲ್ಲುವಂತಾದಾಗ ಮಹಾಲೆ ಮೇಕಪ್ ಮಾಡುವ ವಿಧಾನವನ್ನು ಬದಲಿಸಿಕೊಳ್ಳಲು ಯೋಚಿಸಿದರು. ತುಂಬ ‘ರಫ್’ ಎಂದು ತೋರುವ ಮೇಕಪ್ಪನ್ನು ಕೈಬಿಡಬೇಕು, ಸಿನೆಮಾದಲ್ಲಿಯ ಹಾಗೆ ತೆಳುವಾದ ಮೇಕಪ್ ರೂಢಿಸಿಕೊಳ್ಳಬೇಕು ಎಂಬ ಯೋಚನೆ ಬಂದದ್ದೇ ತಡ, ಆ ಕುರಿತ ಅಧ್ಯಯನಕ್ಕೆ ತೊಡಗಿದರು. ಹುಬ್ಬಳ್ಳಿ-ಧಾರವಾಡಗಳಿಗೆ ಮರಾಠಿ ನಾಟಕಗಳು ಹೆಚ್ಚಾಗಿ ಬರುತ್ತಿದ್ದ ಕಾಲ ಅದು. ಆಗೆಲ್ಲ ಮಹಾಲೆ ಆ ನಾಟಕಗಳ ಗ್ರೀನ್ ರೂಮಿಗೆ ನುಗ್ಗುತ್ತಿದ್ದರು.
”ಅಲ್ಲಿಗೆ ಹೋಗಿ ಅವರು ಮಾಡೋ ಮೇಕಪ್ ಹೆಂಗಿರತೈತಿ ಅಂತ ಆಬ್ಸರ್ವ್ ಮಾಡ್ತಿದ್ದೆ… ಒಮ್ಮೊಮ್ಮೆ ಅವರಿಗೆ ಸಹಾಯಕ ಅಂತನೂ ಕೆಲಸ ಮಾಡ್ತಿದ್ದೆ. ನಾನು ಅದನ್ನ ಕಲೀಬೇಕಾಗಿತ್ತು. ಅವರು ಬಳಸೋ ಬಣ್ಣ ಇತ್ಯಾದಿ ಹೆಂಗಿರತಾವು ನೋಡಬೇಕಾಗಿತ್ತು. ಅವು ಎಲ್ಲೇ ಸಿಗತಾವು ಅಂತ ತಿಳ್ಕೊಬೇಕಾಗಿತ್ತು… ಯಾವ ಯಾವ ಥರದ ನಾಟಕಕ್ಕ ಯಾವ ಯಾವ ರೀತಿ ಮೇಕಪ್ಪು, ಪೌರಾಣಿಕ ಆದ್ರ ಹೆಂಗ, ಸಾಮಾಜಿಕಾ ಆದ್ರ ಹೆಂಗ, ಕಂಪನಿ ಸ್ಟೈಲಿನದಾದ್ರ ಹೆಂಗ, ಮತ್ತ ಪ್ರಾಯೋಗಿಕ ನಾಟಕಾ ಆದರ ಹೆಂಗ… ಎಲ್ಲಾನೂ ಕಣ್ಣ ಪಿಳಕಸದ ನೋಡತಿದ್ದೆ…”
ಮಹಾಲೆಯವರ ಪ್ರಾಮಾಣಿಕ ಪ್ರಯತ್ನಕ್ಕೆ ಗೆಲುವು ಸಿಕ್ಕಿತು. ಕೆಲವೇ ದಿನಗಳಲ್ಲಿ ಮುಂಬಯಿಯ ಪರಿಚಯಸ್ಥರೊಬ್ಬರು ಪಾರ್ಸಲ್ ಮೂಲಕ ಒಂದು ಮೇಕಪ್ ಕಿಟ್ ಕಳಿಸುವುದರ ಜೊತೆಗೆ, ಒಂದು ಗೈಡನ್ನೂ ಕಳಿಸಿಕೊಟ್ಟರು. ಆ ಪಾರ್ಸಲ್ಲಿನಲ್ಲಿ ಕಲರ್ ಟ್ಯೂಬುಗಳಿದ್ದವು. ಮಹಾಲೆಯ ಆನಂದಕ್ಕೆ ಪಾರವೇ ಇರಲಿಲ್ಲ.
ಅದನ್ನು ರೂಢಿಸಿಕೊಂಡ ಮಹಾಲೆ ಕಾಲಾಂತರದಲ್ಲಿ ಹುಬ್ಬಳ್ಳಿ-ಧಾರವಾಡದ ಹವ್ಯಾಸಿಗಳಿಗಷ್ಟೇ ಅಲ್ಲ, ಈ ಭಾಗದಲ್ಲಿ ನಡೆಯತೊಡಗಿದ ವೀಡಿಯೋ ಫಿಲ್ಮುಗಳು, ಡಾಕ್ಯುಮೆಂಟರಿಗಳು, ಜಾಹೀರಾತು ಚಿತ್ರಗಳು ಮುಂತಾದವುಗಳ ಮೇಕಪ್ಪಿಗೂ ಅನಿವಾರ್ಯವೆನಿಸಿದರು.
ಈಗ ಮಹಾಲೆಯ ಇಬ್ಬರು ಗಂಡು ಮಕ್ಕಳು (ಸಂತೋಷ ಮತ್ತು ಕಿರಣ) ಮೇಕಪ್ ಕಲೆಯಲ್ಲಿ ಅಪ್ಪನಷ್ಟೇ ಪರಿಣಿತರು.

-೦-೦-೦-೦-೦-

ಎಂಬತ್ತರ ದಶಕದ ಮಾತು… ತಾನಾಯಿತು, ತನ್ನ ಕೆಲಸವಾಯಿತು ಎಂದು ಇದ್ದುಬಿಟ್ಟ ಮಹಾಲೆ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಚಿರಪರಿಚಿತ ಹೆಸರಾಗಿದ್ದರೂ ಅವರಾಗ ರಾಜಧಾನಿಯ ರಂಗಭೂಮಿಗೆ ಅಪರಿಚಿತರೆ. ಹಾಗೆ ಆಗೀಗ ನಾಟಕಗಳ ಜತೆ ಅವರು ಬೆಂಗಳೂರು, ಮೈಸೂರು ಅಂತ ಹೋಗಿರಬಹುದು. ಆದರೆ ಕರ್ನಾಟಕದ ರಂಗಭೂಮಿಯ ನಕ್ಷೆಯಲ್ಲಿ ಮಾತ್ರ ‘ಕಾಣದ ನಕ್ಷತ್ರ’ದಂತೆ ಉಳಿದುಬಿಟ್ಟಿದ್ದರು.
1987ರಲ್ಲಿ ಸರಕಾರ ಹಿರಿಯ ಪತ್ರಕರ್ತ ಬಿ. ವಿ. ವೈಕುಂಠರಾಜು ಅವರನ್ನು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರನ್ನಾಗಿ ನಿಯಮಿಸಿದ ಸಂದರ್ಭ. ನಾನಾಗ ಅಕಾಡೆಮಿಯಲ್ಲಿ ಧಾರವಾಡ ಜಿಲ್ಲೆ ಪ್ರತಿನಿಧಿ. ‘ವರ್ಷದ ಪ್ರಶಸ್ತಿ’ಗಳನ್ನು ನಿರ್ಧರಿಸಬೇಕು. ಅದಕ್ಕಾಗಿ ಸೇರಿತು ಸರ್ವ ಸದಸ್ಯರ ಸಭೆ.
ಆ ಕಾಲದಲ್ಲಿ ಈಗಿನಂತೆ ಪ್ರಶಸ್ತಿಗಾಗಿ ಅರ್ಜಿ ಹಾಕಿಕೊಂಡು ಹಲ್ಲು ಗಿಂಜುವ, ‘ಕೊಡೀಪ್ಪಾ’ ಅಂತ ಕೈ ಒಡ್ಡುವ ಸ್ಥಿತಿ ಇರಲಿಲ್ಲ. ಹಾಗೆ ಕೈ ಒಡ್ಡುವವರೂ, ಲಾಬಿ ಮಾಡುವವರೂ ಮುಂದಿನ ಮೂರು ವರ್ಷಗಳಿಗೆ ಅನರ್ಹರೆನಿಸಿಕೊಳ್ಳುತ್ತಿದ್ದರು. ಕೇವಲ ಆಯಾ ವ್ಯಕ್ತಿಯ ‘ವಯಸ್ಸು’, ‘ವಿಶೇಷತೆ’ ಹಾಗೂ ‘ಸೇವಾ ಕ್ಷೇತ್ರ’ಗಳೇ ಪ್ರಶಸ್ತಿಗೆ ಆಗಿನ ಮಾನದಂಡ. ಐವರು ರಂಗಭೂಮಿಯ ಗಣ್ಯರಿಗೆ ಮಾತ್ರ ಪ್ರಶಸ್ತಿ ಘೋಷಣೆಯಾಗುತ್ತಿತ್ತು. ಹೀಗಾಗಿ ಆಯ್ಕೆಯ ಪ್ರಕ್ರಿಯೆ ತುಂಬ ಕಷ್ಟದ್ದಾಗಿರುತ್ತಿತ್ತು.
ಪ್ರತಿ ಸದಸ್ಯನೂ ಕೆಲವು ರಂಗ ಗಣ್ಯರ ಹೆಸರುಗಳನ್ನು ಸೂಚಿಸಬೇಕು. ಆ ಮೇಲೆ ಅದರ ಬಗ್ಗೆ ಚರ್ಚೆಯಾಗಬೇಕು. ಸೂಚಿಸಲ್ಪಟ್ಟ ವ್ಯಕ್ತಿ ಪ್ರಶಸ್ತಿಗೆ ಯಾಕೆ ಅರ್ಹ ಎಂಬುದನ್ನು ಸೂಚಿಸಿದಾತ ಸಿದ್ಧಮಾಡಿ ತೋರಿಸಬೇಕಾಗುತ್ತಿತ್ತು.
ಆ ವರ್ಷ ಪ್ರಶಸ್ತಿಗೆ ಸೂಚಿಸಲ್ಪಟ್ಟ ಮಹನೀಯರೆಲ್ಲ ರಂಗಗಣ್ಯರೇ. ಯಾರನ್ನೂ ತೆಗೆದುಹಾಕುವಂತಿರಲಿಲ್ಲ.
ಮಹಾಲೆ ಅಲ್ಲಿಯ ತನಕ ನಾಲ್ಕು ಸಾವಿರಕ್ಕೂ ಮಿಕ್ಕಿ ರಂಗ ಪ್ರಯೋಗಗಳಿಗೆ ಮೇಕಪ್ ಮಾಡಿದ್ದರು. ಆದರೂ ಎಲೆ ಮರೆಯ ಕಾಯಿಯಾಗಿಯೇ ಉಳಿದುಬಿಟ್ಟಿದ್ದರು. ನಾನು ಮಹಾಲೆಯ ಸಾಧನೆಯ ಚಿಕ್ಕ ಚಿತ್ರವೊಂದನ್ನು ನೀಡುವುದರ ಮೂಲಕ ಅವರ ಹೆಸರನ್ನು ಸೂಚಿಸಿದೆ. ಅಲ್ಲಿದ್ದ ‘ತುಂಗೆಯ ಈಚಿನ ರಂಗಭೂಮಿ’ಯ ಜನರೆಲ್ಲ ಅನುಮೋದಿಸಿದರು. ನಮ್ಮ ಹೆಮ್ಮೆಯ, ನಮ್ಮ ಪ್ರೀತಿಯ ಗಜಾನನ ಮಹಾಲೆ 1987ರ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ವಿಜೇತರೆಂದು ಘೋಷಿಸಲ್ಪಟ್ಟರು.
ಮರುದಿನ ಪತ್ರಿಕೆಗಳ ಮೂಲಕ ನಾಡಿಗೆಲ್ಲ ಸುದ್ದಿ ಗೊತ್ತಾದರೂ ಮಹಾಲೆಗೆ ಪ್ರಶಸ್ತಿಯ ವಿಚಾರ ತಿಳಿದದ್ದು ಮೂರು ದಿನಗಳ ನಂತರವೇ. ಆಗ ಅವರು ಕುಲ ದೇವತೆ ಶಾಂತೇರಿ ಕಾಮಾಕ್ಷಿಯ ದರ್ಶನಕ್ಕೆಂದು ಗೋವಾಕ್ಕೆ ಹೋಗಿದ್ದರಂತೆ. ಯಾವುದೋ ಅಂಗಡಿಯಲ್ಲಿ ಸಾಮಾನು ಕೊಳ್ಳುತ್ತಿರುವಾಗ ಕಣ್ಣಿಗೆ ಬಿದ್ದ ಹಿಂದಿನ ದಿನದ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿಯನ್ನು ನೋಡಿದರಂತೆ. ನೋಡಿ ಸುಮ್ಮನಾದರಂತೆ.
ಆ ನಂತರ ”ನಾನು ಮೂರಂಕಿಯ ಇಷ್ಟು ದೊಡ್ಡ ರಕಮು ನೋಡ್ತಿರೋದು ಇದs ಮದಲ ಸಲ ನೋಡ್ರಿ…” ಅಂತ ಒಂದು ಪತ್ರಿಕೆಯ ಸಂದರ್ಶನದಲ್ಲಿ ಹೇಳಿದ್ದರು ಮಹಾಲೆ.

ಮುಂದೆ ಕೆಲವು ದಿನಗಳ ನಂತರ ಮಂಡ್ಯದಲ್ಲಿ ನಡೆಯಿತು ಪ್ರಶಸ್ತಿ ಪ್ರದಾನ ಸಮಾರಂಭ. ವೇದಿಕೆಯ ಮೇಲೆ ಅಷ್ಟೆಲ್ಲ ಗಣ್ಯರ ನಡುವೆ ದೇಹವನ್ನು ಹಿಡಿಮಾಡಿಕೊಂಡು ಕೂತಿದ್ದರು ವಿನಯ ಮೂರುತಿ ಮಹಾಲೆ. ಹಾಂ…, ಅವರ ಜೊತೆ ವೇದಿಕೆಯ ಮೇಲೆ ಆಸೀನರಾಗಿದ್ದ ಉಳಿದ ನಾಲ್ವರು ಮಹನೀಯರಾದರೂ ಯಾರು ಅನ್ನುತ್ತೀರಿ? ಇದೀಗ ‘ಜ್ಞಾನಪೀಠ ಪ್ರಶಸ್ತಿ’ಯ ಗರಿಯನ್ನು ತಮ್ಮ ರುಮಾಲಿಗೆ ಸಿಕ್ಕಿಸಿಕೊಂಡ ಡಾ. ಚಂದ್ರಶೇಖರ ಕಂಬಾರ, ರಂಗಭೂಮಿಯ ಮೂಲಕ ಸಿನಿಮಾ ಪ್ರವೇಶಿಸಿ ಕಪ್ಪು-ಬಿಳುಪು ಕಾಲದಲ್ಲೇ ‘ಸೆಲ್ಯುಲಾಯ್ದ್ ಕಾವ್ಯ’ ಬರೆದ ವಿ. ಕೆ. ಮೂರ್ತಿ, ಕಂದಗಲ್ಲರ ನಾಟಕಗಳ ಕಬ್ಬಿಣದ ಕಡಲೆಯಂಥ ನುಡಿಗಡಣವನ್ನು ಭೋರ್ಗರೆಯುವ ಜಲಪಾತದಂತೆ ಹೊಮ್ಮಿಸಿ ನಮ್ಮೆಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸುತ್ತಿದ್ದ ನಟ ಎಲಿವಾಳ ಸಿದ್ದಯ್ಯಸ್ವಾಮಿ (‘ಶ್ರೀ ಕೃಷ್ಣಗಾರುಡಿ’ ಚಿತ್ರದ ಶ್ರೀಕೃಷ್ಣ) ಮತ್ತು ಪುರುಷ ಪಾತ್ರಗಳಿಗೆ ಹೆಸರಾಗಿದ್ದ ಸ್ತ್ರೀ ನಾಟಕ ಮಂಡಳಿಯ ಶ್ರೀಮತಿ ಆರ್. ನಾಗರತ್ನಮ್ಮ…
ಈ ಲೇಖನದ ಮೊದಲ ಕಂತಿನ ಆರಂಭಕ್ಕೆ ನೀವು ಓದಿದಿರಲ್ಲ, ”ನಮಗೊಬ್ಬ ಜೀವನ ಗಜಾನನ ದೊರಕಿದ್ದಾನೆ…” ಎಂಬ ವಾಕ್ಯವನ್ನು ; ಅದು ಆ ದಿನ ಮಹಾಲೆಯ ಕುರಿತು ನಾನು ಓದಿದ ‘ಸ್ವಸ್ತಿ ವಾಚನ’ದ (Citation) ಮೊದಲ ಸಾಲು…

-೦-೦-೦-೦-೦-

ಇವತ್ತಿಗೂ ಮಹಾಲೆ ‘ಬಣ್ಣದ ಮನುಷ್ಯ’ರಾಗಿಯೇ ಸಾಗಿದ್ದಾರೆ. ‘ಮಣ್ಣಿನ ಮನುಷ್ಯ’ರಾಗಿಯೇ ಮುಂದುವರಿದಿದ್ದಾರೆ. ಮೇಕಪ್ ಕಿಟ್ ಹೊತ್ತುಕೊಂಡು ಮುಂಬಯಿ, ಭುವನೇಶ್ವರ, ಹೈದರಾಬಾದು, ಬೆಂಗಳೂರು ಅಂತ ನಾಟಕದ ಹುಡುಗರ ನಡುವಿನ ಹಿರಿಯನಾಗಿ ಹೋಗುತ್ತಲೇ ಇರುತ್ತಾರೆ. ಅವರ ದಣಿವರಿಯದ ಸೇವೆಗೆ ಸಾಕಷ್ಟು ಸಂಸ್ಥೆಗಳ ಪ್ರಶಸ್ತಿಗಳು ಸಂದಿವೆ. ಆಂಧ್ರ ಪ್ರದೇಶದ ಆಗಿನ ಮುಖ್ಯಮಂತ್ರಿ ರಾಜಶೇಖರ ರೆಡ್ಡಿಯವರು ಮಹಾಲೆಗೆ ಪ್ರಸಾಧನಕ್ಕಾಗಿ ಇರುವ ಅತ್ಯುನ್ನತ ಪ್ರಶಸ್ತಿ ನೀಡಿದ್ದಾರೆ (2004-05), ಮುಂಬಯಿ ಮಾಟುಂಗಾ ಕನ್ನಡ ಸಂಘದ ಪ್ರಶಸ್ತಿಯೂ ಬಂದಿದೆ. ಬೆಂಗಳೂರಿನ ‘ಅಂತರಂಗ’ ತಂಡ ಕೊಡಮಾಡುವ ‘ನಾಣಿ ಪ್ರಶಸ್ತಿ’ ಮಹಾಲೆಯವರನ್ನು ಅರಸಿಕೊಂಡು ಬಂದು ತೃಪ್ತಿಪಟ್ಟುಕೊಂಡಿದೆ.
ಇವೆಲ್ಲಕ್ಕೂ ಮಿಗಿಲಾದದ್ದೆಂದರೆ ಈ ಅಜಾತತ್ರುವಿನ ಮೇಲಿನ ಅಭಿಮಾನದಿಂದ ರಂಗಪ್ರೇಮಿ ಶಂಕರ ಹಲಗತ್ತಿ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ‘ಗಜಾನನ ಮಹಾಲೆ ದತ್ತಿ’ಯನ್ನು ಸ್ಥಾಪಿಸಿರುವುದು ; ಪ್ರತಿವರ್ಷ ಒಬ್ಬ ನಿಷ್ಣಾತ ರಂಗಕರ್ಮಿಯನ್ನು ಆಮಂತ್ರಿಸಿ ದತ್ತಿ ಉಪನ್ಯಾಸ ಏರ್ಪಡಿಸುವುದು.
ಇದೀಗ ಮಹಾಲೆ ಮೇಕಪ್ ಮಾಡಿದ ನಾಟಕ ಪ್ರಯೋಗಗಳ ಸಂಖ್ಯೆ ಏಳು ಸಾವಿರದ ಗಡಿ ತಲಪುತ್ತಿದೆ…
ಸದ್ದು-ಸುದ್ದಿಯಿಲ್ಲದ ರಂಗಸೇವಕನ ಮಹಾಲೆ ಇವತ್ತಿಗೂ ಕೈಕೆಸರು ಮಾಡಿಕೊಳ್ಳುತ್ತಲೇ ಇದ್ದಾರೆ…
ಇನ್ನೂ ಸೈಕಲ್ ಹೊಡೆಯುತ್ತಲೇ ಇದ್ದಾರೆ…

 

‍ಲೇಖಕರು G

February 10, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. umesh desai

    ಬಣ್ಣದ(ಬಂಗಾರದ)ಮನುಷ್ಯ ನ ಸಾಧನೆ ನೀವು ಹೇಳಿದ ರೀತಿ ಅಪೂರ್ವದ್ದು..

    ಪ್ರತಿಕ್ರಿಯೆ
  2. Pushparaj Chowta

    ಮಣ್ಣಿನ ಮಗನೂ ಆದಿ ಪೂಜಿತನೂ ಈ ‘ಗಜಾನನ’! ಇಲ್ಲದಿದ್ದರೆ ‘ರಂಗಸ್ಥಳ’ಕ್ಕೆಲ್ಲಿಯ ರಂಗು?
    ಅರ್ಥವತ್ತಾದ ‘ಬಣ್ಣದ” ನೆನಪುಗಳ ಸಂಚಿ ಇದು.

    ಪ್ರತಿಕ್ರಿಯೆ
  3. nagaraja somayji

    ಮಹಾಲೆ ಅವರ ಮೇಕಪ್ ಹಾಗು ಅವರ ಮನುಷ್ಯ ಮನದ ಕುರಿತ ವಿವರ ಸುಂದರ. ನಿಮ್ಮ ಬರವಣಿಗೆಯಲ್ಲಿ ಮೇಕಪ್ ಇಲ್ಲದೆ ಸಾದ ಸ್ವಾದ ಸನ್ನಿಧಿ ಇತ್ತು.ಕಲಾವಿದನ ಪರಿಚಯ ಮಾಡಿ ಕೊಟ್ಟ ನಿಮಗೆ ದನ್ಯವಾದಗಳು:)

    ಪ್ರತಿಕ್ರಿಯೆ
  4. s.s.chandrashekar

    ಮಹಾಲೆಜೀಗೂ ನಮಗೂ ಒ೦ದು ಅವಿನಾಭಾವ ಸ೦ಭ೦ದ..ನಮ್ಮ ತ೦ಡಕ್ಕೆ ಕಳೆದ ೧೩ ವರ್ಷದಿ೦ದ ನಮ್ಮ ನಾಟಕಗಳಿಗೆ ಸುಮಾರು ೭೦ ಪ್ರಸಸ್ತಿಗಳು ಬರುವಲ್ಲಿ ಅವರ ಪಾತ್ರ ಬಹು ದೊಡ್ಡದು…:) ವಿಷೇಶವಾಗಿ ನನ್ನ ಮೇಲ೦ತೂ ಅತೀವ ಪ್ರೀತಿ ಆ ಅಜ್ಜನಿಗೆ…ಪ್ರತೀಸಲ ನನಗೆ ಮೆಕಪ್ ಮಾಡುವಾಗ ನನ್ನ ಪಾತ್ರದ ಬಗ್ಗೆ ಸಣ್ಣ ಸಣ್ಣ ಟಿಪ್ಸ್ ಗಳನ್ನ ಅತೀ ಪ್ರೀತಿಯಿ೦ದ ಸಲಹೆಗಳನ್ನ ನೀಡೊರು…..ಇ೦ತಹ ಮಹಾನ್ ಕಲಾವಿದರನ್ನ ನಮ್ಮ ತ೦ಡಕ್ಕೆ ಕರೆತ೦ದ ಧನ೦ಜಯ ಕುಲ್ಕರ್ಣಿಗೆ ಮತ್ತು ಅವರ ಬಗ್ಗೆ ಪ್ರೀತಿಯಿ೦ದ ಬರೆದ ನಿಮ್ಮ ಲೇಖನಕ್ಕೂ ಒ೦ದು ದೊಡ್ಡ ಹ್ಯಾಟ್ಸಪ್….:)
    ಪ್ರೀತಿಯಿ೦ದ
    ಚ೦ದ್ರು

    ಪ್ರತಿಕ್ರಿಯೆ
  5. sumathi shenoy

    By the time, i finished reading a vivid picture of Mahale maam cycling with all his selfless works and humbleness came before eyes..he is a role model for all artists..your writing about his Gandhiji marching models during chowthi is memorable…

    ಪ್ರತಿಕ್ರಿಯೆ
  6. radha s talikatte

    nijavavaagiyu mahaleyavaradu meru sadrusha vyaktitva.aa hiriya jeevakke nanna namangalu

    ಪ್ರತಿಕ್ರಿಯೆ
  7. CHANDRASHEKHAR VASTRAD

    ತುಂಬ ಖುಷಿ ಆಯ್ತು. ಬಿಜಾಪುರದ ಸಾಹಿತ್ಯ ಸಮ್ಮೇಳನದಲ್ಲಿ ಒಂದು ದಿನ ಪಾಲ್ಗೊಂಡ ಬೇಸರವೆಲ್ಲಾ ಹೊರಡು ಹೋಯ್ತು. ರಂಗಭೂಮಿಯ ಮಹಾ ಅಲೆ ಮ಻ನ಻ಸಿಗೆ ಮುಟ್ಟಿತು ಲೇಖಕರಿಗೆ ಅಭಿನಂದನೆಗಳು.

    ಪ್ರತಿಕ್ರಿಯೆ
  8. Paresh Saraf

    ಲೇಖನ ಬಹಳ ಆಪ್ತವಾಯಿತು. ತಮ್ಮ ನೆನಪುಗಳ ಸರಮಾಲೆ, ಮತ್ತು ಅದನ್ನು ತಾವು ಪ್ರಸ್ತುತ ಪಡಿಸುವ ಶೈಲಿ ನನಗೆ ಅಚ್ಚು ಮೆಚ್ಚು

    ಪ್ರತಿಕ್ರಿಯೆ
  9. hipparagi Siddaram

    ನಿಜ ಸರ್….ಇಂದಿಗೂ ಮಹಾಲೆ ಅಜ್ಜ ನಮಗೆಲ್ಲಾ ವಿಸ್ಮಯದ ವಿನಯ ಮೂರ್ತಿ….ಇತ್ತೀಚೆಗೆ ನಮ್ಮ ತಂಡದಿಂದ ಕುವೆಂಪುರವರ ‘ಬಿರುಗಾಳಿ’ ನಾಟಕವನ್ನು ಮೈಸೂರಿನ ರಂಗಾಯಣದ ವನರಂಗದಲ್ಲಿ ಪ್ರಯೋಗಿಸಿದಾಗ ನಾನು ರಣನಾಯಕನ ಪಾತ್ರ ವಹಿಸಿದ್ದೆ. ಉಳಿದ ಪಾತ್ರಗಳಿಗೆ ಢಾಳಾಗಿ ಮೆಕಪ್ಪು ಮಾಡಿದ್ದರು. ನನಗೆ ಮಾತ್ರ ತೆಳುವಾದ ಮೆಕಪ್ಪು ಮಾಡಿದ್ದರು. ಹೀಗೆಕೆಂದು ಪ್ರಶ್ನಿಸಿದಾಗ ನಿಮ್ಮದು ಮಗನನ್ನು ಬಿರುಗಾಳಿಯಲ್ಲಿ ಮಗನನ್ನು ಕಳೆದುಕೊಂಡ ಶೋಕತಪ್ತ ಪಾತ್ರ…ನೀವು ಮುಖದಲ್ಲಿ ಭಾವನೆಗಳನ್ನು ಹೊರಹೊಮ್ಮಿಸಬೇಕಾಗುವುದರಿಂದ ಢಾಳಾದ ಮೆಕಪ್ಪು ಅಭಿನಯಕ್ಕೆ ತುಸು ನೀರಸ ಮಾಡಬಹುದು’ ಎಂದರು. ಅವರು ಕೇವಲ ಮೆಕಪ್ಪಮನ್ ಆಗಿರದೇ ನಾಟಕದ ಕತೆಯನ್ನು ಸಹ ಅರ್ಥೈಸಿಕೊಂಡು ಅದಕ್ಕೆ ತಕ್ಕುದಾದ ಮೇಕಪ್ಪು ಮಾಡುವವರು ಎಂದು ಅಂದೇ ಅವರ ಕುರಿತು ಅರ್ಥೈಸಿಕೊಂಡೆ. ಇಂತಹ ಗಜಾನನ ಮಹಾಲೆ ಅಜ್ಜಾವರ ಕುರಿತು ನೀವು ಬರೆದಿರುವುದು ತುಂಬಾ ಸಂತೋಷ ಸರ್….ಧನ್ಯವಾದಗಳು !

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: