
ಗಿರಿಜಾ ಶಾಸ್ತ್ರಿ ಕವಿತೆಗಳು
ಬೀಗದ ಕೈ
ಹೊಸಿಲ ಮೇಲಿಟ್ಟ ಪಡಿ 
ಒದ್ದು ಒಳಹೊಕ್ಕಾಕ್ಷಣ
ಅತ್ತೆ ಕೊಟ್ಟಿದ್ದಳು
ಅವರತ್ತೆಗತ್ತೆಯ ಅತ್ತೆ
ಕೊಟ್ಟಿದ್ದ ಕೀಲಿ ಗೊಂಚಲು
ಬೆಳ್ಳಿಕಟ್ಟು
ಸೊಂಟಕ್ಕೆಸಿಕ್ಕಿಸಿ ಓಡಾಡಲು
ಕಲಿಸಿದ್ದಳು
ಹಸಿಕಟ್ಟಿಗೆ ಊದುವುದನ್ನು
ಮೆಣಸು ಹುರಿಯುವುದನ್ನು
ಅನ್ನ ಬಸಿಯುವುದನ್ನು
ಕುಟ್ಟಿ ಜಜ್ಜಿ ಪುಡಿ ಮಾಡುವುದನ್ನು
ತಿಕ್ಕಿತೊಳೆಯುವುದನ್ನು
ಆದರೆ
ಬೀಗ ಒಡೆಯುವ ಕಲೆಯನ್ನು
ಮಾತ್ರ ಹೇಳಿಕೊಡಲೇ ಇಲ್ಲ….
(ಪ್ರೇರಣೆ : ಡಾ. ಸಿ.ಎಸ್. ಲಕ್ಷ್ಮಿಯವರ ತಮಿಳು ಪ್ರಬಂಧ “ಹೆಣ್ಣುದೇಹ ಭಾಷೆ ಅಭಿವ್ಯಕ್ತಿ”)
ಕರುಳ ಕಬಾಬು
ಹೊಟ್ಟೆ ಹರಿದು ಹೊರತೆಗೆದು
ರಕ್ತ ಸಿಕ್ತ ಬಳ್ಳಿಯಲಿ
ಹತ್ತಿ ಹೂ ಅರಳಿ
ಮುದ್ದು ಉಕ್ಕಿ ಹರಿದು
ಮೊಲೆತುಂಬಾ ಹಾಲು
ಮಡಿಲ ತುಂಬ
‘ಗುಲಾಬಿಯ ಮೃದು ಪಾದ’
ಒದ್ದಾಗ ಎದೆಗೆ
ಮೈಯೆಲ್ಲಾ ಪುಳಕ
ತುಸು ಸೀನಿದರೆ
ಮೈ ಬೆಚ್ಚಗಾದರೆ
ನಿದ್ದೆಯಲಿ ಬೆಚ್ಚಿದರೆ
ನಕ್ಕರೆ ಅತ್ತರೆ
ಅಯ್ಯೋ ದೇವರೇ..
ಕಳ್ಳಬೆಕ್ಕು ಕೊಂಡೊಯ್ದರೇ..
ಎದೆಯೊಳಗೆ ಕುದಿವ ಕೂಳು
‘ಇರುಳೆಲ್ಲಾ ಜಾಗರಾಗಿ’ ಮಡುಗಟ್ಟಿ ಅಳು
ಕಣ್ಣ ತುಂಬುವ ಸಕ್ಕರೆ ಬೊಂಬೆ
ನಾಯಿಕಣ್ಣು ನರಿಕಣ್ಣು
ತುಂಬ ತುಂಬಿ ತಾಯಿಕಣ್ಣು
ಆ ಮರಾ ಈ ಮರಾ
ಮರಾಮರಾಮರಾ
ಅಲೆದು
ಬೀದಿ ಬೀದಿ ತಿಪ್ಪೆ ಹುಡುಕಿ
ಕಾಳು ಕಡ್ಡಿ ಹೆಕ್ಕಿ
ಮೆತ್ತನೆಯ ಗೂಡು
ಒದ್ದೆ ಹಾಸಿಗೆ
ಬದಲಿಸಿ ಹೊದಿಕೆ ಬೆಚ್ಚಗೆ
ಹೊಟ್ಟೆಯೊಳಗೆಲ್ಲಾ ಹಬೆ ಹಬೆ
ಕನಸಿನೊಳಗೂ ಎಚ್ಚರಿಕೆ
ನೀರು ಗೊಬ್ಬರ
ಭರವಸೆಯ ಮಣ್ಣು
ಸುರಿದು ಭರಪೂರ
ಉದ್ದೋ ಉದ್ದ ಬೆಳೆಸಿ
ಎದೆಮಟ್ಟ …ಅಲ್ಲಲ್ಲ..
ಬರೋಬ್ಬರಿ ಆರುಫೂಟು
ಒದ್ದ ಬೂಟುಗಾಲಿನ ಮೊಳೆ
ಬತ್ತಿದ ಜೋಲು ಮೊಲೆಯ ಮೇಲೆ
ಕುದಿವ ಎಣ್ಣೆ ಕೊಪ್ಪರಿಯೊಳಗೆ
ಕರಿದ ಕರುಳ ಕಬಾಬು





ಮತ್ತೊಮ್ಮೆ ಓದಬೇಕೆನಿಸುವ ಕವನಗಳು
ಕರುಳ ಕಬಾಬು ಉತ್ತಮ ಕವನ. ಮನವನ್ನುಗಾಢವಾಗಿ ಸ್ಪರ್ಶಿಸಿತು.
ಉಭಯಭಾರತಿ.ಕೆ.ವಿ.
ಬಹಳ ಸುಂದರ ಕವನಗಳು
tumbaa chennagide.
ಸುಪರ್ ಗಿರಿಜಾ.
ಇತ್ತೀಚೆಗೆ ನಾ ಓದಿದ ಕವಿತೆಗಳಲ್ಲಿ ಅತ್ಯಂತ ಮೆಚ್ಚುಗೆಯಾದದ್ದು.
ಎಷ್ಟು ತಿಳಿಯಾಗಿ ಸರಳವಾಗಿ ಮನಹೊಕ್ಕು ಕಾಡುತ್ತವೆ ಕಣೆ ಗೆಳತಿ.
ಮಮತೆಯ ಭಾವವು ಮನಸ್ಸನ್ನು ಹಗುರಗೊಳಿಸುತ್ತಿರುವಾಗಲೇ ‘ಗುಲಾಬಿಯ ಮೃದು ಪಾದ’ ’ಬೂಟುಗಾಲಿನ ಮೊಳೆ ಪಾದ” ವಾಗಿ ವಿಕಾಸ/ವಿನಾಶ ಹೊಂದುವ ತೀವ್ರ ತಿರುವು ಘಾತಗೊಳಿಸುತ್ತದೆ…ಗಾಢ ಪರಿಣಾಮದ ಕವಿತೆ.
thanq friends
ಬೀಗದ ಕೈ ಮತ್ತು ಕರುಳ ಕಬಾಬು ಎರಡು ಉತ್ತಮ ಕವನಗಳು.-ಮನವನ್ನು ಸ್ಪರ್ಶಿಸಿದವು. ತಾಯಿ ಮಗು -ಕರುಳ ಸಂಬಂಧ ರಾಜೀವ್ ಎನ್. ನಾಯಕ್ ಹೇಳುವಂತೆ ಇಷ್ಟೇನೇ ಎನಿಸುತ್ತೆ.
ಕೆ.ವಿ.ಉಭಯಭಾರತಿ