ಹಿಂದಿ ಮೂಲ-ಗುಲ್ಜಾರ್

ಕನ್ನಡಕ್ಕೆ: ಲಕ್ಷ್ಮಣ್
ಎಲೆ!
ಸದ್ದಿಲ್ಲದೆ ಸುರಿದು ಹೋಗುತಿರುವ
ವಯಸ್ಸೇ
ನಿನಗೊಂದು ಕಿವಿಮಾತು ಹೇಳಿದೆ
ಕೇಳಿಸಿತೆ?
ನನ್ನ ಬಾಲ್ಯವನ್ನಷ್ಟೇ ನೀನು ಕಸಿದುಕೊಳ್ಳಬಲ್ಲೆ
ಆದರೆ ಮುಗ್ಧ ಮಗುವಿನ ಮನವನಲ್ಲ.
ನಿನ್ನ ಪ್ರತಿ ಪ್ರಶ್ನೆಗಿಲ್ಲಿ ಉತ್ತರವಿರಲಾರದು
ಪ್ರತಿ ಪ್ರೇಮವೂ ಕಳಂಕಿತವಿರಲಾರದು
ಶರಾಬು ಕುಡಿಯುವವರೇನು ಬಿಡು
ನಶೆಯಲ್ಲೇ ಲೋಕವನ್ನು ಬುಗುರಿಯಂತೆ ತಿರುಗಿಸಿ ಬಿಡುವವರು
ಆದರೆ
ಪ್ರತಿ ನಶೆಗೂ ಇಲ್ಲಿ ಶರಾಬು ಬೇಕೆಂದೇನೂ ಇಲ್ಲ
ಪ್ರತಿ ಮನದ ಮೌನ ಕಣಿವೆಯವ ಸುತ್ತ
ಪಹರೆಗೆ ನಿಲ್ಲುವ ಸಾವಿರ ಕಣ್ಣುಗಳು
ನಗುವ ಪ್ರತಿ ಕಣ್ಣುಗಳಾಳದಿಯೂ
ಆರದ ಗಾಯವೊಂದಿರಬಹುದು.
ಮುನಿದು ಹೋಗುವವರ ಮೇಲೆಯೇ ತುಸು
ಜಾಸ್ತಿ ಮನಸು ನನ್ನದು
ಅಸಲು
ಮುರಿದ ಮನಸಿನವರೆ ನಮ್ಮ ನಿಜ ನಂಟರು
ಯಾರೋ ಒಬ್ಬನಿಲ್ಲಿ
ತನ್ನ ಸಾವಿಗಾಗಿ ದೇವರಲ್ಲಿ ಮೊರೆಯಿಟ್ಟ
ಆಗ ದೇವರೆಂದ;
ನಿನ್ನ ಅಣತಿಯಂತೆ ನಿನಗೆ ಸಾವೇನೊ ಕರುಣಿಸಬಲ್ಲೆ
ನಿನ್ನ ಪ್ರಾಣಕ್ಕಾಗಿ ಪ್ರತಿದಿನ
ಪೂಜಿಸುವ ಅವಳಿಗೇನು ಉತ್ತರ ಕೊಡಲಿ?
ಪ್ರತಿ ಹೃದಯವೂ ಇಲ್ಲಿ ಕಲ್ಮಶವಿರಲಾದು
ಪ್ರತಿ ಮನುಷ್ಯನೂ ದುಷ್ಟನಿರಲಾರ
ಎಣ್ಣೆಯಿಲ್ಲದೆಯೂ ಒಮ್ಮೊಮ್ಮೆ ದೀಪಗಳಾರುತ್ತವೆ
ಪ್ರತಿ ಬಾರಿಯೂ ಗಾಳಿಯ
ತಪ್ಪು ಇರಲಾರದಲ್ಲವೆ?





0 Comments