'ಎಚ್ ಕ್ರಾಸ್' – ಕೋಲಾರ ಜಿಲ್ಲೆಯಲ್ಲೊಂದು ಜುಗಾರಿ ಕ್ರಾಸ್

– ನಾಗಮಣಿ ಮಾಲೂರ್

ತೇಜಸ್ವಿಯವರ ‘ಜುಗಾರಿ ಕ್ರಾಸ್’ ನಲ್ಲಿ ಮೇದರಹಳ್ಳಿಯ ಅವಸಾನ ಎಂಬ ಪ್ರಸಂಗ ಬರುತ್ತದೆ . ಅದರಲ್ಲಿ ನಾಗರೀಕ ಆವಿಷ್ಕಾರಗಳಿಗೆ ಸಿಕ್ಕಿ ಅವನತಿಗೆ ಒಳಗಾಗುವ ಮೇದರ ಬದುಕಿನ ಬಗ್ಗೆ ಮನ ಕಲುಕುವ ಚಿತ್ರಣವಿದೆ. ಅದು ಜುಗಾರಿಕ್ರಾಸ್ ನ ಸುತ್ತ ಹಣೆದ ಕಥಾ ಸುರುಳಿಯಾಗಿದೆ.
ಇದೇ ರೀತಿ ನಮ್ಮ ಕೋಲಾರ ಜಿಲ್ಲೆಯಲ್ಲಿಯೂ ಒಂದು ‘ಎಚ್ ಕ್ರಾಸ್’ ಇದೆ. ಇಲ್ಲಿಯೂ ಕೂಡ ಬಡ ಮೇದಾರರಿದ್ದಾರೆ ಅನಾದಿ ಕಾಲದಿಂದಲೂ ತಮ್ಮ ಉಸಿರು ಹಾಗೂ ಕುಲಕಸುಬಾಗಿದ್ದ ಚಂದ್ರಂಕಿಗಳನ್ನು ಹಣೆಯುವ ಕಸುಬಿನಿಂದಲೇ ದೂರವಾಗುತ್ತಿದ್ದಾರೆ.ಸಾಂಸ್ಕ್ರುತಿಕ ವಾಗಿ ಆರ್ಥಿಕವಾಗಿ ಛಿದ್ರ ಛಿದ್ರವಾಗುತ್ತಲೇ ಉಳಿವಿಗಾಗಿ ಇಂದಿಗೂಏನೆಲ್ಲಾ ಹೋರಾಟ ನಡೆಸುತ್ತಿದ್ದಾರೆ.
ಈ ಎಚ್ ಕ್ರಾಸ್ ನ ಓಳ ಹೊರಗುಗಳನ್ನು ಗಮನಿಸಿದಾಗ ನಮಗೆ ಸಾಮಾನ್ಯವಾಗಿ ಕಂಡು ಬರುವುದು
ಎಚ್ ಕ್ರಾಸ್ ಎಂದರೆ ಹಿಂಡಿಗನಾಳ ಕ್ರಾಸ್ ಎಂದರ್ಥ . ಕೋಲಾರದಿಂದ ಚಿಕ್ಕಬಳ್ಳಾಪುರ, ಹೊಸಕೋಟೆ ಯಿಂದ ಚಿಂತಾಮಣಿಗೆ ಹೋಗುವ ರಸ್ತೆ ಗಳೆರಡು ಪರಸ್ಪರ ಹಾದು ಹೋಗುತ್ತಾ ಹಾಕಿದ ಪ್ಲೇಗ್ ಮಾರ್ಕಿದು .ನಾಲ್ಕೂ ದಿಕ್ಕುಗಳಲ್ಲಿ ಕೆಲವು ಮನೆಗಳಿವೆ . ಹೆಚ್ಚೆಂದರೆ ಸುಮಾರು ಮುನ್ನೂರು ನಾನ್ನೂರು ಮನೆಗಳು ಇರಬಹುದಾದ ಸಣ್ಣ ಗ್ರಾಮ.
ಎಚ್ ಕ್ರಾಸ್ ನ ಗಡಿ ಸೀಮೆಗಳು ಹೇಗಿವೆಯೆಂದರೆ ಎಚ್ ಕ್ರಾಸ್ ನಿಂದ ಪೂರ್ವಕ್ಕೆ ಕೋಲಾರದ ಕಡೆಗೆ ಮುನ್ನೂರು ಅಡಿ ಸಾಗಿದರೆ ಅದು ಶಿಡ್ಲಘಟ್ಟ ತಾಲ್ಲೂಕು . ದಕ್ಷಿಣಕ್ಕೆ ನಾಲ್ಕು ನೂರು ಮೀಟರ್ ಸಾಗಿದರೆ ಸಾಕು ,ಅದು ಹೊಸಕೋಟೆಯ ಗಡಿ .ಉತ್ತರಕ್ಕೆ ಎರಡು ಕಿ.ಮೀ. ದೂರದಲ್ಲಿ ಚಿಂತಾಮಣಿ ತಾಲ್ಲೂಕಿನ ಗಡಿ . ಪಶ್ಚಿಮಕ್ಕೆ ಮತ್ತೆ ಶಿಡ್ಲಘಟ್ಟ ತಾಲ್ಲೂಕು ಕಂಡುಬರುತ್ತದೆ.
ಚಿಂತಾಮಣಿ ಗಡಿಯ ಬಳಿ ರೇಷ್ಮೆ ಮಾರುಕಟ್ಟೆ ಇದೆ .
ಎಚ್ ಕ್ರಾಸ್ ಸಣ್ಣ ಗ್ರಾಮವೇ ಆದರೂ ಇಲ್ಲಿ ನಡೆಯುವ ವ್ಯಾಪಾರ ವ್ಯವಹಾರಗಳ. ಪ್ರಮಾಣ ಬೆರಗುಗೊಳಿಸುವಂತಹದ್ದು .ಇಲ್ಲಿಯ ಸೀಬೆಹಣ್ಣುಗಳು ಬಲು ರುಚಿಕರ , ಸ್ವಾದಿಷ್ಟ ,ಸೀಜನ್ನಿನಲ್ಲಿ ಲಾರಿಗಟ್ಟಲೆ ಹಣ್ಣುಗಳು ಕರ್ನಾಟಕ ಮಾತ್ರವಲ್ಲದೆ ನೆರೆಯ .ಆಂದ್ರಕ್ಕೂ ರವಾನೆ ಆಗುತ್ತದೆ ಪ್ರತಿ ಸೋಮವಾರ ಇಲ್ಲಿ ನಡೆಯುವ ಹಂದಿಗಳ ಸಂತೆ ವ್ಯವಹಾರ ದ್ರುಷ್ಟಿಯಿಂದ ಪ್ರಮುಖವಾದದ್ದು .
ಕರ್ನಾಟಕ ಗುಲ್ಬರ್ಗ ,ಆಂಧ್ರದ ಕರ್ನೂಲ್ ನಿಂದೆಲ್ಲಾ ಮಾರಾಟಕ್ಕಾಗಿ ಇಲ್ಲಿಗೆ ಹಂದಿಗಳು ಬರುತ್ತವೆ ವಿಸ್ಮಯದ ಸಂಗತಿ ಎಂದರೆ ಇಲ್ಲಿನ ಒಂದು ಸೋಮವಾರದ ವ್ಯವಹಾರವೇ 60 ಲಕ್ಷ ರುಪಾಯಿ ಮೀರುವುದುಂಟು . ಇದಲ್ಲದೆ ಪ್ರತೀ ವರ್ಷ ನಡೆಯುವ ದನಗಳ ಜಾತ್ರೆಯು ಕೂಡ ಬಹಳ ಮುಖ್ಯವಾದುದಾಗಿದೆ.

ಆದರೂ ಇಷ್ಟೆಲ್ಲಾ ವ್ಯವಹಾರಗಳು ಇಲ್ಲಿ ಇಷ್ಟು ದೊಡ್ಡ ಪ್ರಮಾಣ ದಲ್ಲಿ ಬೆಳೆದು ಬರಲು ಮೂಲ ಕಾರಣವೆಂದರೆ ಇಲ್ಲಿಯ ಅಂದ ಚೆಂದದ ಕಲಾತ್ಮಕ ಚಂದ್ರಂಕಿಗಳು. ಇವುಗಳ ಶ್ರೇಷ್ಟವಾದ ಗುಣಮಟ್ಟ ದಿಂದಾಗಿಯೇ ಎಚ್ ಕ್ರಾಸ್ ನ ಚಂದ್ರಂಕಿ ಗಳಿಗೆ ಅಪಾರ ಬೇಡಿಕೆ.
ಇಲ್ಲಿ ದಿನವೊಂದಕ್ಕೆ ಐನೂರಕ್ಕೂ ಹೆಚ್ಚು ಚಂದ್ರಂಕಿಗಳು ಮಾರಾಟವಾಗುತ್ತಿದ್ದವು. ಇದನ್ನು ಬಳಸಿ, ರೇಷ್ಮೆ ಬೆಳೆಸಿ ಶ್ರೀಮಂತರಾದವರು ಎಷ್ಟೋ ಮಂದಿ. ಬಹಳವಕಾಲದಿಂದಲೂ ಪ್ರಚಲಿತದಲ್ಲಿದ್ದ ಈ ವ್ಯವಹಾರವೇ ಈಗಿನ ಎಲ್ಲಾ ಬೆಳವಣಿಗೆಗೆ ತಳಹದಿ .
ಆದರೆ ಇವೆಲ್ಲಾ ಕೆಲವು ವರ್ಷಗಳ ಮಾತು ಎಚ್ ಕ್ರಾಸ್ ನ ಜೀವಂತಿಕೆಗೆ ಕಾರಣವಾಗಿದ್ದರೆ ಚಂದ್ರಂಕಿಗಳನ್ನು ಇಂದು ಕೇಳುವವರೇ ಇಲ್ಲವಾಗಿದೆ.
ಸಿದ್ದಪಡಿಸಿಟ್ಟ ಸಾವಿರಾರು ಚಂದ್ರಂಕಿಗಳು ಗ್ರಾಹಕರಿಲ್ಲದೆ ಷೆಡ್ಡುಗಳಲ್ಲಿ ಅನಾಥವಾಗಿ ಬಿದ್ದಿವೆ. ಗೆದ್ದಲಿಗೆ ಆಹಾರವಾಗುತ್ತಿವೆ ಬಡಮೇದಾರರ ಬದುಕಿಗೆ ಗೆದ್ದಲು ಹಿಡಿದಿದೆ. ಒಂದುಕಡೆ ಚೀನಾದ ರೇಷ್ಮೆ, ನವೀನ ತಾಂತ್ರಿಕತೆ ಮತ್ತೊಂದೆಡೆ ಮಳೆ ಬೆಳೆ ಇಲ್ಲದ ಕ್ಷಾಮ ಪರಿಸ್ಥಿತಿ. ಕೇವಲ ಕೆಲವು ವರ್ಷಗಳ ಅವಧಿಯಲ್ಲಿ ಈ ಬಡ ಜನರ ನೆಮ್ಮದಿಯನ್ನು ಚಿಂದಿ ಚಿಂದಿ ಮಾಡಿವೆ. ಸಾಲದ ಹೊರೆ ಹೊತ್ತು ಗುಳೇ ಹೊರಟ ಕುಟುಂಬಗಳು ಎಷ್ಟೋ.. ಆದರೂ ಬದುಕಿನ ಈ ಎಲ್ಲಾ ತಿರುವುಗಳ ನಡುವೆಯೂ ಅಳಿದುಳಿದ ಕುಟುಂಬಗಳು ಇಂದು ಉಳಿವಿಗಾಗಿ ಹೋರಾಟ ನಡೆದಿವೆ.
ಚಂದ್ರಂಕಿಗಳನ್ನು ತಯಾರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇಲ್ಲಿ ತಾಂತ್ರಿಕ ಪರಿಶ್ರಮದ ಜತೆ ಬಳಸುವ ಪ್ರತೀ ವಸ್ತುವಿನ ಮೇಲೂ ಬಂಡವಾಳ ಹೂಡಿರಬೇಕು. ದೂರದ ಸಿರ್ಸಿ, ಬೆಳಗಾಂವ, ಶಿವಮೊಗ್ಗ, ಭದ್ರಾವತಿಗಳಿಂದ ಗಳ. ಕೊಂಡು ತಂದು (ದಾಸ್ತಾನಿದ್ದಾಗ ಮಾತ್ರ ಅರಣ್ಯ ಇಲಾಖೆ ರಿಯಾಯಿತಿ ದರದಲ್ಲಿ ಒದಗಿಸುತ್ತದೆ.ಇದಕ್ಕಾಗಿ ಅನೇಕ ದಿನ ಇಲಾಖೆಯ ನಾವಿಲ್ಲಿ ಕಾದು ನೋಡಬೇಕು ಹೀಗಾಗಿ ಖಾಸಗೀ ವತಿಯಿಂದಲೇ ದುಬಾರಿ ಬೆಲೆ ತೆತ್ತು ತರುವುದು ಹೆಚ್ಚು) . ಇದರೊಂದಿಗೆ ಚಾಪೆಗಳು ಅಸ್ಸಾಂ ನಿಂದ ಬರಬೇಕು. ವ್ರುತ್ತಾಕಾರದಲ್ಲಿ ಹೊಲಿದು ಹೂವನ್ನು ( ಬಿದಿರಿನ ಪಟ್ಟಿ) ಆಂಧ್ರದಿಂದ ತರಬೇಕು ಹೊಲಿಯಲು ಬಳಸುವ ತೆಂಗಿನ ನಾರಿಗೆ ಕೇರಳದ ಕಾರುಗಳಿಗೆ ಕಾಯಬೇಕು! ಹೀಗಾಗಿ ಪ್ರತಿ ಚಂದ್ರಂಕಿಗಳಿಗೆ 200 ರಿಂದ 250 ರುಪಾಯಿ ಬಂಡವಾಳ ಬಿದ್ದರೂ 150 ರೂಗಳಿಗೆ ಕೊಡಲು ಇವರು ಸಿದ್ದರಿದ್ದಾರೆ ಇದು ಇವರ ಅಸಹಾಯ ಸ್ಥಿತಿ .

ಇಲ್ಲಿಯವರ ಕುಟುಂಬಗಳ ಲ್ಲಿ ನಾಲ್ಕೈದನ್ನು ಹೊರತುಪಡಿಸಿ ಮಿಕ್ಕೆಲ್ಲಾ ಕುಟುಂಬಗಳು ಭೂರಹಿತರು ಹಾಗೂ ವಸತಿಹೀನರು ಆಗಿದ್ದಾರೆ. ಹಲವಾರು ವರ್ಷಗಳಿಂದಲೂ ರಸ್ತೆ ಬದಿಯ ಷೆಡ್ಡುಗಳಲ್ಲೇ ಇವರ ಬದುಕಿನ ಬಂಡಿ ಎದೆಗುಂದದೆ ಸಾಗುತ್ತಿದೆ. ಇಲ್ಲಿ ಸದಾ ಆರೋಗ್ಯದ ಸಮಸ್ಯೆ ಜತೆಗೆ ನೀರಿಗೂ ಬಾಡಿಗೆ . ಸರ್ಕಾರಕ್ಕೆ ಬ್ಯಾಂಕುಗಳಿಗೆ ಖಾಸಗಿ ಸಂಗಟನೆಗಳಿಗೆ ಇವರ ಮೇಲೆ ಮರುಕ ಹುಟ್ಟಿಲ್ಲ.
ತಮ್ಮ ಅನೇಕ ಸಮಸ್ಯೆಗಳ ಬಗ್ಗೆ ಜಿಲ್ಲಾ ಆಡಳಿತವಾಗಲಿ ಕ್ಷೇತ್ರದ ಶಾಸಕರಾಗಲಿ ಅನೇಕ ಬಾರಿ ತಿಳಿಸಿದಾಗ್ಯೂ ಏನೂ ಪರಿಹಾರ ಒದಗಿಸಿಲ್ಲ ಎಂದು ಇಲ್ಲಿನ ಸ್ಥಳೀಯರು ನೊಂದು ನುಡಿಯುತ್ತಾರೆ. ಇವರ ನೆರವಿಗೆ ಬರಬೇಕಾದ ಬರಬೇಕಾದ ಯಾರೂ ಬಂದಿಲ್ಲ. ನೈಜ ಸಮಸ್ಯೆಗಳಿಗೆ ಸ್ಪಂದಿಸುವ ದಲಿತ ಸಂಘಟನೆಗಳೂ ಎಲ್ಲಿ ಮಾಯವಾಗಿವೆಯೋ? ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಬೆಳೆದಿರುವ ಬಿದಿರು ಹಾಗೂ ಅಲ್ಲಲ್ಲಿ ಚೆನ್ನಾಗಿ ಬೆಳೆದ ಸ್ವಾಭಾವಿಕ ಬಿದಿರು ಇದೆ. ಇವನ್ನು ಜಿಲ್ಲದರರಿಗೆ ಮುಫ್ತಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ದೊರಕಿಸಿ ಕೊಟ್ಟರೆ ಇವರ ಬದುಕಿಗೆ ಅಲ್ಪ ಸಹಾಯವಾದೀತೆನ್ನುವ ಮಾತು ತಲುಪಬೇಕಾದವರಿಗೆ ತಲುಪಿದರೆ ಷ್ಟು ಚೆನ್ನ..
ಜಿಲ್ಲೆಯಲ್ಲೇ ಒಣಗಿ ನಿಂತಿರುವ ಬಿದಿರು ಬೆಂಕಿಯ ಭಯದಲ್ಲಿ ಆಕಾಶ ನೋಡುತ್ತಿದ್ದರೆ, ಇತ್ತ ಕುಸೂರಿಯ ಕುಲಕಸುಬು ಬಿಟ್ಟು ಬೇರೇನೂ ಗೊತ್ತಿಲ್ಲದೆ ಸಣ್ಣಪುಟ್ಟ ಕೈ ಕೆಲಸಗಳನ್ನು ಮಾಡುತ್ತ ಹೊಟ್ಟೆಗೆ ಬೆಂಕಿ ಬಿದ್ದ ಮೇದರೂ ಆಕಾಶ ನೋಡುತ್ತಿದ್ದಾರೆ…..
 

‍ಲೇಖಕರು G

May 27, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    ನಾಗಮಣಿಯವರು ಬರೀ ಮೇದರು ಮತ್ತು ಅವರು ಕಸುಬಾಗಿಸಿಕೊಂಡಿರುವ ಚಂದ್ರಿಕೆಗಳ ತಯಾರಿಸುವ ಬಗ್ಗೆ ಮಾತ್ರ ತಿಳಿಸಿದ್ದಾರೆ. ಆದರೆ ಈ ಹೆಚ್. ಕ್ರಾಸ್. ಬಗ್ಗೆ ಹೇಳಹೊರಟರೆ, ಸಾವಿರ ಪುಟಗಳಷ್ಟು ಬರೆದರೂ ಮುಗಿಯದ ಕತೆ.
    ಹೆಚ್ಚೆಂದರೆ ನೂರಾರು ಮನೆಗಳಷ್ಟಿರುವ ಈ ಊರು, ಅಲ್ಲಿನವರಿಗಿಂಥ ಸುತ್ತ ಮುತ್ತಲಿನ ನೂರಾರು ಹಳ್ಳಿಗಳಿಗೇ ಜೀವನಾಡಿ ಇದ್ದ ಹಾಗೆ. ಸುತ್ತಲ ಸಾವಿರಾರು ಜನಕ್ಕೆ ಈ ಊರಲ್ಲಿ , ಪ್ರತಿದಿನ ಒಂದಲ್ಲ ಒಂದು ಕೆಲಸ ಇದ್ದೇ ಇರುತ್ತದೆ. ಹಾಗೇನೇ ಏನೂ ಕೆಲಸ ವಿಲ್ಲದಿದ್ದರೂ ಹಾಗೆ ಬಂದು ಓಡಿಯಾಡಿ, ಟೀ ಕುಡಿದು, ನಾಲ್ಕಾರು ಜನರೊಂದಿಗೆ ಬೆರೆತು , ಕಾಲ ನೂಕಿ ಹೋಗುವವರೂ ಕಮ್ಮಿಯೇನಿಲ್ಲ.
    ಗೂಡಿನ ಮಾರುಕಟ್ಟೆ , ಹಣ್ಣಿನ ಮಂಡಿಗಳು , ಕಬ್ಬಿಣದ ಅಂಗಡಿಗಳು , ಚಂದ್ರಿಕೆಗಳು, ಹಂದಿ ಸಂತೆ , ಸಾಮಾನ್ಯ ಸಂತೆ , ಎರಡು ಕಿ.ಮೀ.ವ್ಯಾಪ್ತಿಯಲ್ಲಿ ನಡೆವ ಆಡು ಕುರಿಗಳ ಸಂತೆ…..ಹೀಗೆ ಹೆಸರಿಸುತ್ತಾ ಹೋದರೆ, ಇಲ್ಲಿ ನಡೆಯದಿರುವ ವ್ಯವಹಾರವೇ ಇಲ್ಲವೇನೋ ಎನ್ನಿಸಿಬಿಡುತ್ತದೆ. ಅಷ್ಟಾಗಿದಿದ್ದರೆ ಈ ಊರನ್ನು ಒಂದು ಮಾದರಿಯಾಗಿ ನೋಡ ಬಹುದಾಗಿತ್ತು. ಆದರೆ ಇಲ್ಲಿ ಭೂಗತವಾಗಿ ನಡೆಯುವ ವ್ಯವಹಾರಗಳು ಮಾತ್ರ ಲೆಕ್ಕವಲ್ಲದಷ್ಟು ಎನ್ನ ಬಹುದು.ಲಾಟರಿ , ಜೂಜು , ಮಟ್ಕಾ , ವೇಶ್ಯಾವಾಟಿಕೆ , ಬಡ್ಡಿ -ಚಕ್ರ ಬಡ್ಡಿ -ಮೀಟರ್ ಬಡ್ಡಿ , ಆದರ, ಅನಾಚಾರ…..ಒಂದೇ ಎರಡೇ. …ಇಲ್ಲಿನ ಭೂಗತ ವ್ಯವಹಾರಗಳಿಂದ, ನರಳಿದವರೆಷ್ಟು! ನಾಶವಾದವರೆಷ್ಟು ! ಆತ್ಮ ಹತ್ಯೆಗೆ ಶರಣಾದವರೆಷ್ಟು ! ಕೊಲೆಯಾದವರೆಷ್ಟು !
    ಆದರೂ ಈ ಹೆಚ್. ಕ್ರಾಸ್. ಎಂಬ ಮಾಯೆಯ ಊರು , ಸುತ್ತಲ ಎಲ್ಲಾ ಜನರನ್ನೂ ಅಯಸ್ಕಾಂತದಂತೆ ಸೆಳೆಯುತ್ತಲೇ ಹೋಗುತ್ತಿದೆ. ಅನುಭವಸ್ಥರು ಈ ಊರಿನ ಬಗ್ಗೆ ಹೇಳುತ್ತ, ‘ಈ ಮಾಯೆಯ ಊರಿಗೆ ಬಲಿಯಾಗ ಬೇಡಿರೋ. ಇದು ಸಂಜೆ ಆರು ಗಂಟೆವರೆಗೂ ಹೆಚ್. ಕ್ರಾಸೇ ಆಮೇಲೆ ಇದು ಹುಚ್ಚು ಕ್ರಾಸು ‘ ಎಂದೆನ್ನುತ್ತಲೇ , ಸಂಜೆಯಾದ ಮೇಲೆ ಅಲ್ಲಿಗೇ ಹೋಗಿ ಎರಡು ಡರಾಮು ಬಿಟ್ಟು ಕೊಂಡು , ‘ಇದರಮ್ಮನ ಕೊಂಪೆನೇ ಕ್ಯಾಯ’ ಎಂದು ಬೈಕೊಂಡು ಬರುವುದೂ ಉಂಟು. ಆ ಕಾಡಿನ ಜುಗಾರಿಕ್ರಾಸ್ ನ್ನು ಮೀರಿಸುವಷ್ಟು ಶಕ್ತಿ ಇರುವ ಈ ಹೆಚ್. ಕ್ರಾಸ್. ಯಾವ ದೊಡ್ಡ ನಗರಗಳಿಗಿಂಥಲೂ ಕಮ್ಮಿಯಾದ ಇಸುಮೇನಲ್ಲ.
    ಹೆಚ್.ಕ್ರಾಸ್ ನಿಂದ ಒಂದೆರಡು ಕಿ.ಮೀ.ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನನಗೆ , ನನ್ನ ಪ್ರೀತಿಯ ಊರಿನ ಬಗ್ಗೆ ಓದಿ ಖುಷಿಯಾಯಿತು. ಲೇಖನ ಕೊಟ್ಟ ನಾಗಮಣಿ ಮಾಲೂರ್ ರವರಿಗೆ ಅಭಿನಂದನೆಗಳು.

    ಪ್ರತಿಕ್ರಿಯೆ
  2. Venkataswamy

    ‘ಜುಗಾರಿ ಕ್ರಾಸ್’ ಓದುವಾಗ ಕೋಲಾರ ಜಿಲ್ಲೆಯವರಿಗೆ ಹೆಚ್ ಕ್ರಾಸ್ ನೆನೆಪಾಗುತ್ತದೆ. ನಾಗಮಣಿ ಮಾಲೂರ್ ಅಲ್ಲಿನ ಚಂದ್ರಂಕಿಗಳನ್ನು ಹೆಣೆಯುವ ಮೇದಾರರ ಈಗಿನ ಪರಿಸ್ಥಿತಿಯನ್ನು ಮನಸ್ಸಿಗೆ ನಾಟುವಂತೆ ವಿವರಿಸಿದ್ದಾರೆ. ಚಂದ್ರಂಕಿಗಳಷ್ಟೆ ಅಲ್ಲದೆ ಅವರು ಮಕ್ಕರಿ,ಮೊರ,ಪುಟ್ಟಿ ಇತ್ಯಾದಿಯನ್ನು ಹೆಣೆಯುತ್ತಾರೆ. ಪ್ಲಾಸ್ಟಿಕ್ ಹಾವಳಿಯಿಂದ ಅವರ ಕಸುಬು ಅವಸಾನದ ಅಂಚಿನಲ್ಲಿದೆ. ಹಾಗೆಯೇ ಕುಂಬಾರಿಕೆಯೂ ಪ್ಲಾಸ್ಟಿಕ್ ಮೇನಿಯಾಗೆ ಬಲಿಯಾಗಿದೆ. ನೇಯ್ಗೆಯೇ ಮೊದಲಾದ ಕಲಾವಂತಿಕೆಯ ಈ ದೇಸೀ ಕೈಗಾರಿಕೆಗಳನ್ನು ಉಳಿಸಿಕೊಳ್ಳಬೇಕೆಂದು ಪ್ರಸನ್ನ ಅಂತಹವರು ಸತ್ಯಾಗ್ರಹದ ಹಾದಿಯನ್ನೂ ಹಿಡಿದಿದ್ದಾರೆ. ಬದನವಾಳುವಿನಲ್ಲಿ ಇದಕ್ಕೆ ಒಳ್ಳೆಯ ಬೆಂಬಲ ವ್ಯಕ್ತವಾಗಿದೆ.ಆದರೆ ಸರ್ಕಾರದ ನಿರ್ಲಿಪ್ತ ಧೋರಣೆ ಇದಕ್ಕೆ ಮಾರಕವಾಗಿದೆ. ಪ್ರಸನ್ನರಂಥವರ ಪ್ರಯತ್ನಗಳು ಸಮಸ್ಯೆಯನ್ನು ಇನ್ನೂ ಜೀವಂತವಾಗಿರಿಸಿವೆ.ಪರಿಹಾರದ ದಾರಿಯನ್ನು ಹುಡುಕುತ್ತಿವೆ

    ಪ್ರತಿಕ್ರಿಯೆ
  3. ಕಿರಣ್

    ನೀವು ಹೇಳದೆ ಹೋದ ಮತ್ತೊಂದು ಅಂಶವೆಂದರೆ ಹಿಂದೂ-ಮುಸ್ಲಿಂ ಸಂಘರ್ಷ.
    ಇವು ಕೆಲ ವರ್ಷಗಳ ಹಿಂದೆ ಪತ್ರಿಕೆಗಳ ಮುಖಪುಟ ವಾರ್ತೆಯಾಗಿದ್ದವು.
    ಇಡೀ ಎಚ್-ಕ್ರಾಸಿನ ಬಗ್ಗೆ ಇಷ್ಟು ಚೆನ್ನಾಗಿ ಬರೆದ ನೀವು, ಈ ಕುದಿ ಪರಿಸ್ಥಿತಿಗೆ ಕೆಳಗಿನಿಂದ ಕಾವು ಕೊಡುವ ಧಾರ್ಮಿಕ ತಲ್ಲಣಗಳ ಅಂಶ ಬಿಟ್ಟದ್ದು ಉದ್ದೇಶಪೂರ್ವಕವಾಗಿಯೇ?
    Political Correctness ಗಿಂತ ಪ್ರಾಮಾಣಿಕ ಅಭಿಪ್ರಾಯ ಮಂಡನೆ ಮುಖ್ಯ ಎಂದು ಪತ್ರಿಕೋದ್ಯಮದ ಹಳಬರ ನಂಬಿಕೆ!
    ನಿಮ್ಮ ಅಭಿಪ್ರಾಯ ತಿಳಿಯುವ ಇಚ್ಛೆ ಇದೆ. ಸಾಧ್ಯವಾದರೆ ಈ ಕೋನದ ಬಗ್ಗೆ ವಿವರಿಸಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: