ಎಚ್ ಎಸ್ ಸತ್ಯನಾರಾಯಣ ಓದಿದ ‘ನಮಗಿಲ್ಲ ಹಕ್ಕಿಹಾಡು’

“ಬೋಳುಮರದ ಮೇಲೆ ಕನವರಿಪ ಹಾಡುಹಕ್ಕಿ”

ಡಾ ಎಚ್ ಎಸ್ ಸತ್ಯನಾರಾಯಣ

‘ನಮಗಿಲ್ಲ ಹಕ್ಕಿಹಾಡು’ ಓದಿದಾಗ ತುಂಬ ಸಂತೋಷವಾಯಿತು. ಈ ಸಂತೋಷಕ್ಕೆ ಮೊದಲ ಕಾರಣ ಒಂದು ಒಳ್ಳೆಯ ಭಾವಗೀತೆಗಳ ಸಂಕಲನ ಇತ್ತೀಚಿನ ವರ್ಷಗಳಲ್ಲಿ
ಅಪರೂಪದಲ್ಲಿ ಅಪರೂಪ. ಎರಡನೆಯದು, ಈಗ ಭಾವಗೀತೆಗಳನ್ನು ಬರೆಯುವವರ ಸಂಖ್ಯೆ ವಿಪುಲವಾಗಿದೆಯಾದರೂ ನಾಲ್ಕು ಕಾಲ ಉಳಿಯಬಲ್ಲ ರಚನೆಗಳನ್ನು ತಡಕಾಡಬೇಕು. ಅಲ್ಲದೆ, ಭಾವಗೀತೆಗಳನ್ನು ಪ್ರತ್ಯೇಕವಾಗಿ ಪ್ರಕಟಿಸುವ ಗಟ್ಟಿತನ ಕೂಡ ಇತ್ತೀಚೆಗೆ ಕಾಣಿಸುವುದು ಕಡಿಮೆ. ಇಂತಹ ಸಂದರ್ಭದಲ್ಲಿ ಡಾ. ಸಂತೋಷ್ ಚೊಕ್ಕಾಡಿಯವರ ‘ನಮಗಿಲ್ಲ ಹಕ್ಕಿಹಾಡು’ ಸಂಕಲನವು ಪ್ರಕಟವಾಗುತ್ತಿರುವುದು ಸಂತಸದ ಸಂಗತಿ ಮಾತ್ರವಲ್ಲ, ಕನ್ನಡ ಸಾಹಿತ್ಯ ಸಂದರ್ಭದ ಮುಖ್ಯ ಕೊರತೆಯೊಂದನ್ನು ನೀಗಿಸುವ ಪ್ರಯತ್ನವಾಗಿಯೂ ಕಾಣುತ್ತಿದೆ. ಈ ಎಲ್ಲ ಕಾರಣಗಳಿಂದ ಮೊದಲಿಗೆ ಈ ಭಾವಗೀತೆಗಳ ಕವಿಯನ್ನು ಅಭಿನಂದಿಸುವೆ.

“ಪದಗಳೆಲ್ಲ ಹಳತಾಗಿವೆ
ಹೊಸತಿಗೆ ಮನ ಕನವರಿಸಿದೆ
ಎಲೆಯುದುರಿಸಿ ಗಿಡಮರಗಳು
ನವಸೃಷ್ಟಿಗೆ ಕಾದಿವೆ.”

ಎಂಬ ಸಾಲುಗಳು ‘ತಡೆಯಲಾರೆ ಒಡಲ ಕುದಿತ’ ಎಂಬ ರಚನೆಯಲ್ಲಿ ಕಾಣಿಸಿರುವುದು ಆಕಸ್ಮಿಕವಲ್ಲವೆನಿಸುತ್ತದೆ. ವೈಯಕ್ತಿಕವಾಗಿ ಇದು ಕವಿಯ ಕಾತರ ಮತ್ತು ನಿರೀಕ್ಷೆಗಳಾದರೂ ಸಾಹಿತ್ಯ ಸಂದರ್ಭದಲ್ಲಿ ಭಾವಗೀತೆಗಳ ಕ್ಷೇತ್ರ ಕೂಡ ಇಂಥದ್ದೇ ನಿರೀಕ್ಷೆಯಲ್ಲಿರುವಂತೆ ತೋರುತ್ತದೆ. ಸಂತೋಷ್ ಚೊಕ್ಕಾಡಿಯವರಂಥ ಹೊಸ ನುಡಿಗಟ್ಟಿನ ಕವಿಗಾಗಿ ಈ ಪ್ರಕಾರ ಕಾಯುತ್ತಿರುವಂತೆ ಭಾಸವಾಗುತ್ತದೆ. ಈ ಪ್ರಕಾರವನ್ನು ಬೆಳಗಿದ ಮೊದಲ ಮೂರು ತಲೆಮಾರಿನ ಕವಿಗಳ ಕಾಲವೀಗ ಚರಿತ್ರೆಯ ಪುಟ ಸೇರಿದೆ. ಹಳೆಯ ಹಾಡುಗಳನ್ನೇ ಮೆಲುಕು ಹಾಕಿ ಹಾಕಿ ನಮ್ಮ ದವಡೆಗಳು ಸವೆಯುತ್ತಿರುವಾಗ ಹೊಸ ರಚನೆಗಳ ಹುಟ್ಟು ನವಸೃಷ್ಟಿಗಾಗಿ ಎಲೆಯುದುರಿಸಿಕೊಂಡು ಕಾದು ನಿಂತಿರುವ ಮರದ ಚಿತ್ರದಂತೆಯೇ ತೋರುತ್ತದೆ. ಇದೊಂದು ಸಶಕ್ತವಾದ ರೂಪಕವಾಗಿ ಪರಿಣಮಿಸಿರುವುದು ಅಚ್ಚರಿ ಮೂಡಿಸುವಂತಿದೆ. ಕೊರಳಲ್ಲಿ ಮೊಳಗುವ ಗಾನದಲ್ಲಿ ಭಾವವಿರದ ಕಾರಣ ಹಕ್ಕಿಗೆ ಗರಿಬಿಚ್ಚುವ ಉತ್ಸಾಹವೇ ಕಮರಿಹೋಗಿದೆ. ಇದು ಕೇವಲ ಮರದ ಮೇಲಿನ ಹಕ್ಕಿಯ ಅಥವಾ ಕವಿಯೊಬ್ಬನ ಕನವರಿಕೆ ಮಾತ್ರವಲ್ಲ. ನಮ್ಮ ಸಾಹಿತ್ಯ ಮತ್ತು ಸುಗಮ ಸಂಗೀತ ಕ್ಷೇತ್ರಗಳ ಕಾಯುವಿಕೆಯೂ ಆಗಿದೆ. ಈ ಎಚ್ಚರದಲ್ಲಿ ಇಲ್ಲಿನ ರಚನೆಗಳು ಅರಳಿ ನಿಂತಿವೆಯಾದ್ದರಿಂದ ಇದು ನಮ್ಮ ಕಾಲದ ಮುಖ್ಯ ಭಾವಗೀತೆಗಳ ಸಂಕಲನವಾಗಿದೆಯೆಂಬುದರಲ್ಲಿ ಯಾವುದೇ ಅನುಮಾನವಿಲ್ಲ.
“ಹೊಸ ಕಾಲಕೆ ಹೊಸ ಮಿಂಚಿನ
ಸಂಚಲನವು ಬೇಕಿದೆ
ನವ ಭಾವವು ಚಿಮ್ಮುವಂತೆ
ವಸಂತವು ಕಾಲನಿಟ್ಟಿದೆ”

ಎಂಬ ಸಾಲುಗಳಲ್ಲಿ ವ್ಯಕ್ತವಾದ ಭಾವವು ಈ ಸಂಕಲನದ ಭಾವಗೀತೆಗಳಿಗೂ ಅನ್ವಯಿಸುತ್ತದೆ.

ಭಾವಗೀತೆಗೆ ಕನ್ನಡದಲ್ಲಿ ಭದ್ರವಾದ ಬುನಾದಿಯಿದೆ. ಅಲ್ಲಿ ಹೊಸ ಭಾವಗೀತೆಕಾರ ತನ್ನ ದನಿಯನ್ನು ಕೇಳಿಸಬೇಕಾದರೆ ಹಲವು ಸವಾಲುಗಳಿರುತ್ತವೆ. ಈಗಾಗಲೇ ನಮ್ಮ ಕವಿಗಳು ಬದುಕಿನ ಎಲ್ಲ ಮಗ್ಗಲುಗಳನ್ನೂ ಶೋಧಿಸಿಬಿಟ್ಟಿರುವಾಗ, ಅದಕ್ಕೊಂದು ಸಿದ್ಧ ಮಾದರಿಯ ಚೌಕಟ್ಟನ್ನು ನಿರ್ಮಿಸಿರುವಾಗ ಅವನ್ನೆಲ್ಲ ಮೀರುವುದು ಸುಲಭದ ಸವಾಲೇನಲ್ಲ. ಸಂತೋಷ್ ಚೊಕ್ಕಾಡಿಯವರು ತಮ್ಮ ಮೂರ್ನಾಲ್ಕು ದಶಕಗಳ ಕಾಲದ ಕಾವ್ಯ ಪಯಣದಲ್ಲಿ ಇಂತಹ ಸವಾಲುಗಳನ್ನು ಬಹು ಸಮರ್ಥವಾಗಿ ಎದುರಿಸಿ ನಿಂತು ತಮ್ಮದೇ ನುಡಿಗಟ್ಟನ್ನು, ಕಾವ್ಯಶಿಲ್ಪವನ್ನು ನಮಗೆ ಕೊಟ್ಟ ಮುಖ್ಯ ಕವಿಯೆನಿಸಿದವರು. ಕಾವ್ಯ ಪರಂಪರೆಯೊಂದಿಗಿನ ನಿರಂತರ ಅನುಸಂಧಾನದ ಮುಖೇನ ತಮ್ಮ ಕಾವ್ಯಸೆಲೆಗೆ ಹೊಸ ಹೊಸ ರೂಪಕಗಳನ್ನು ಜೋಡಿಸಿಕೊಂಡವರು. ಈ ಅನುಭವ ಪ್ರಮಾಣದಿಂದ ರೂಪಿತವಾಗಿರುವ ಇಲ್ಲಿನ ಭಾವಗೀತೆಗಳು ಸಹಜವಾಗಿಯೇ ಎಚ್ಚರದ ಕಣ್ಣಿನಲ್ಲಿ ಭಾಷೆ, ಲಯ, ಚಿಂತನೆ, ದರ್ಶನ, ಶಿಲ್ಪಗಳಲ್ಲಿ ಹೊಸತನದ ಪ್ರಯೋಗಕ್ಕೆ ಉತ್ಸುಕಗೊಂಡಿವೆ.

ಮೈಸೂರು ನಗರದಲ್ಲಿ ವಾಸಿಸುತ್ತಿದ್ದರೂ ಈ ಕವಿಯ ಮನಸ್ಸು ಚಿಕ್ಕಾಡಿಯ ಹಕ್ಕಿಯೇ! ಈ ಹಕ್ಕಿಗೆ ಕಡಲ ಕಿನಾರೆಯ ಹಸಿರು, ಹಳ್ಳಿಗಾಡಿನ ಸುಪ್ರಸನ್ನತೆ, ವಿಶಿಷ್ಟ ಸಂಸ್ಕೃತಿಯಿಂದ ರೂಪಿತವಾದ ಜೀವನಮೌಲ್ಯ ಮತ್ತು ಹರಿತವಾದ ದೃಷ್ಟಿಕೋನ, ಜೀವನಧೋರಣೆಗಳ ಛಾಪು ಗಾಢವಾಗಿದೆ. ಇವೆಲ್ಲವೂ ಒಂದಲ್ಲ ಒಂದು ಬಗೆಯಲ್ಲಿ ಈ ಭಾವಗೀತೆಗಳಲ್ಲಿ ಅನುರಣಿಸಿವೆ. ನಗರ ಸಂಸ್ಕೃತಿಯ ನೇತ್ಯಾತ್ಮಕ ಆಘಾತಗಳನ್ನು ದಾಟುವ ಹಾಯಿದೋಣಿಯಂತೆ ಇವರ ಬಾಲ್ಯದ ಅನುಭವಗಳು ಇಲ್ಲಿ ಕಾಣಸಿಗುತ್ತವೆ. ಹುಟ್ಟಿಬೆಳೆದ ಪರಿಸರದ ಪರಿಶುಭ್ರವಾದ ಮೌಲ್ಯಗಳೆಲ್ಲವೂ‌ ಕವಿಯ ಸುಪ್ತ ಮನೋಲೋಕದಿಂದ ಚಿಪ್ಪೊಡೆದು ಬಂದಿವೆಯಾದ್ದರಿಂದ ಇವರಿಗೆ ಹಕ್ಕಿಹಾಡಿಗೆ ಕಾದು ನಿಂತಿರುವ ಹಸಿರು ಮರಗಳು ‘ನಮಗಿಲ್ಲ ಹಕ್ಕಿಹಾಡು’ ಎಂದು ವಿಷಾದದದ ನಿಟ್ಟುಸಿರುಬಿಟ್ಟಂತೆ ಕೇಳಿಸುತ್ತಿರುವುದು.

ಭಾವಗೀತೆಯ ರಚನೆಗೆ ರಮ್ಯಮನೋಭಾವ ತೀರಾ ಅಗತ್ಯವೆಂಬ ತಿಳಿವಳಿಕೆಯು ಪ್ರಚಲಿತದಲ್ಲಿತ್ತು. ಬಹುಶಃ ಅದನ್ನು ನಿರಾಕರಿಸದ ಈ ಕವಿಯು ಅಂತಹ ಮನೋಭಾವವನ್ನು ರೂಪಿಸುವ ಕಾಲಘಟ್ಟ ನಮ್ಮದಲ್ಲ ಎಂದು ಭಾವಿಸುತ್ತಾರೆ. ಭಾವಗೀತೆಯ ರಚನೆಗೆ ಬೇಕಾದ ವಿಶಿಷ್ಟವಾದ ಮನೋಧರ್ಮವೊಂದನ್ನು ಕವಿ ಸ್ಥಾಪಿಸಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರವಿರುವ ಈ ಕವಿಯು ಕಾಲಧರ್ಮದ ಪ್ರಭಾವಕ್ಕೆ ಒಡ್ಡಿಕೊಂಡೇ ಪ್ರಶಾಂತ ಹಾಗೂ ಮೃದುಮನಸ್ಥಿತಿಯಲ್ಲಿ ತಮ್ಮ ಆಲೋಚನೆಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಶಾಂತವಾಗಿರು ಮನವೆ, ಹಳೆಯ ಮಧುರ ಕ್ಷಣಗಳು, ಹಾಡ ಹರಿಸೊ ಕೊರಳೆ, ಹೂವೇ ಅರಳು ನೀ, ಕೆರಳದಿರು ಓ ಕಾಲವೇ ಮುಂತಾದ ರಚನೆಗಳ ವಸ್ತು ಭಾವಗೀತೆಗೆ ಹೇಳಿ ಮಾಡಿಸಿದಂತಿವೆ. ಅಥವಾ ಕವಿಯ ಸಮಯೋಚಿತ ಪ್ರಜ್ಞೆಗೆ ಈ ವಸ್ತುಗಳು ಸರಾಗವಾಗಿ ಒಲಿದಂತಿವೆ.

ಕವಿಗಳ ‘ಕಾಲ’ದ ಬಗೆಗಿನ ಚಿಂತನೆ ಕನ್ನಡಕ್ಕೆ ಹೊಸತಲ್ಲವಾದರೂ ಈ ಭೂಮಿಯ ಮೇಲಿನ ಬದುಕನ್ನು ಅಸಹನೀಯಗೊಳಿಸುವಂತೆ ಕೆರಳಬಾರದೆಂಬ ವಿನಮ್ರ ಪ್ರಾಥನೆಯಂತಿರುವ ಕವಿತೆ ನಮ್ಮೆಲ್ಲರ ಹಾಡೂ ಆಗುವಂತೆ ಕವಿ ಮಾಡಿರುವುದು ಗಮನಾರ್ಹ. ಕಾಲ ಕೆರಳುವುದೆಂದರೆ ಅದು ಬುವಿಯ ಮೇಲಿನ ಎಲ್ಲದರ ಕೆಡುಕಿನ ಮುನ್ನುಡಿಯೇ ಸರಿ. ತೀರದಾಸೆಗಳ ಮೊಲೆವ ಅಲೆಗೆ ನೆಲದೊಡನಿನ ಮಿಲನ ಅಸಾಧ್ಯ, ವಸಂತಾಗಮನದ ನಿರೀಕ್ಷೆಯ ಮರಕ್ಕೆ ಆಶಾಭಂಗ, ನಭಕ್ಕೆ ಹಸಿರ ನೆಲವ ತಬ್ಬಲಾಗದು, ಅಚಲವೆನಿಸಿದ ಗಿರಿಗಳ ಸ್ಥಿರತೆ ತಪ್ಪುತ್ತದೆ, ಕಾಲದ ರೌದ್ರ ನರ್ತನದಿಂದ ಜೀವಕುಲದ ಸಮತೋಲನವೇ ನೆಲೆತಪ್ಪುತ್ತದೆ. ಕಾಲ ಹೊಂಚು ಹಾಕುವ ಬೇಟೆಗಾರನಂತೆರಗಿದರೆ ಏನು ಗತಿ? ಮುಂದೆ ಇಲ್ಲಿ ಹುಟ್ಟಿಬರುವ ಜೀವ ಸಂಕುಲದ ಬದುಕುವ ಹಕ್ಕನ್ನು ಹೀಗೆ ಕಸಿದುಕೊಳ್ಳುವುದಕ್ಕೆ ಕೆರಳುವ ಕಾಲಕ್ಕಾದರೂ ಯಾವ ಹಕ್ಕಿದೆ? -ಹೀಗೆ ಕವಿಯ ಚಿಂತನಾಕ್ರಮ ಈ ಹಾಡಿನಲ್ಲಿ ಪ್ರವಹಿಸುತ್ತದೆ. ಸಾಮಾನ್ಯವಾಗಿ ಭಾವಗೀತೆಗಳಲ್ಲಿ ಯಾವುದಾದರದು ಸಂಗತಿಯ ಭಾವವನ್ನೇ ಎರಡಯ ಮೂರು ಪ್ಯಾರಾಗಳಲ್ಲಿ ವಿಸ್ತರಿಸುವ ಕ್ರಮವನ್ನು ಸಂತೋಷ್ ಚೊಕ್ಕಾಡಿಯವರು ಮೀರುವುದಕ್ಕೆ ಈ ಕವಿತೆ ಅತ್ಯುತ್ತಮ ಉದಾಹರಣೆ. ಕಾಲಕ್ಕೆ ಸಲ್ಲಿಸುವ ಮನವಿಯ ನೆಪದಲ್ಲಿ ಇಡೀ ಜೀವಸಂಕುಲದ ಅಸ್ತಿತ್ವದ ಕುರಿತಾಗಿ ಹೊಮ್ಮಿರುವ ಕಳಕಳಿ ಅನನ್ಯವಾಗಿ ಮೂಡಿನಿಂತಿದೆ. ಉದಾಹರಣೆಗಾಗಿ ಒಂದು ಕವಿತೆಯನ್ನಿಲ್ಲಿ ವಿವರಿಸಿಕೊಳ್ಳುವ ಪ್ರಯತ್ನ ಮಾಡಿರುವೆನಾದರೂ ಇಲ್ಲಿನ ಬಹುತೇಕ ರಚನೆಗಳು ಇದೇ ಗುಣವನ್ನು ಹೊಂದಿರುವಂಥವೆಂಬುದನ್ನೂ ಹೇಳಲೇಬೇಕು.

ಸಂತೋಷ್ ಚೊಕ್ಕಾಡಿಯವರ ಭಾವಗೀತೆಗಳ ಮತ್ತೊಂದು ಬಹುಮುಖ್ಯ ಸಂಗತಿಯೆಂದರೆ ಸರಳ-ಸುಲಭಗ್ರಾಹಿಯಾದ ಪದ ಬಳಕೆ. ಸುಲಲಿತವಾದ, ಸದಭಿರುಚಿಯ ಪದಗಳು ಭಾವದ ತೀವ್ರತೆಯನ್ನು ಸರಾಗವಾಗಿ ಓದುಗರ- ಕೇಳುಗರ ಎದೆಗೆ ತಲುಪಿಸುತ್ತವೆ. ಹಾಡಿನ ಗೇಯಾಂಶದ ಜೊತೆಗೆ, ಪ್ರಾಸದ ಮಿಳಿತವನ್ನೂ ಕಾಯ್ದುಕೊಂಡು ಭಾವಗೀತೆ ರಚಿಸುವ ಕೆಲಸ ಬೇರೆ ಬಗೆಯ ಕವಿತೆಗಳನ್ನು ಬರೆದು ಗೆಲ್ಲುವಷ್ಟು ಸುಲಭವೇನಲ್ಲ. ಅಲ್ಲದೆ ಇವು ಹಾಡುವವರಿಗೆ ಪೂರಕವಾಗಿ ಒದಗಿ ಬರಬೇಕು. ಅಪ್ಪಟ ಕವಿಯಾದ ಸಂತೋಷ್ ಅವರ ಕವಿತೆಗಳು ತನ್ನ ಕೋಮಲತೆಯಿಂದ ಗಾಯನಕ್ಕೆ ಸುಲಭವಾಗಿ ಒಗ್ಗಬಲ್ಲ ಗುಣಹೊಂದಿವೆ. ಇವರ ಸರಳ ಪದಗಳ ಜಾಲ ಹಾಲಿನಲ್ಲಿ ಸಕ್ಕರೆ ಬೆರೆತಷ್ಟೇ ಸಲೀಸಾಗಿ ಬೆರೆತು ಹಾಡಿನ ಸವಿ ಹೆಚ್ಚಿಸಬಲ್ಲವು.

ಹೀಗೆ ಮಾಡುವಾಗ ಕವಿಗೆ ಮತ್ತೊಂದು ತಡೆ ಎದುರಾಗುತ್ತದೆ. ಭಾವಗೀತೆಕಾರ ತನ್ನ ಚಿಂತನೆಯನ್ನು ವಿಚಾರ ಲಹರಿಯನ್ನು ಒರಟಾಗಿ ಕಾಣಿಸಿದರೆ ಲಯ ತಪ್ಪಿ ಕ್ರಾಂತಿಗೀತೆಯೋ ಹೋರಾಟದ ಹಾಡಾಗಿಯೋ ಪರಿಣಮಿಸುತ್ತದೆ. ಆದ್ದರಿಂದ ತನ್ನ ವಿಚಾರಧಾರೆಯನ್ನು ಸೂಕ್ತ ಪದಗಳಲ್ಲಿ ಕಾಣಿಸುವಾಗ ಮೇಲೆ ವಿವರಿಸಿದ ಕೋಮಲತೆಯನ್ನೋ ಮನೋಹರತೆಯನ್ನೋ ಬಿಟ್ಟುಕೊಡುವಂತಿಲ್ಲ. ಈ ಹದ ಸಂತೋಷ್ ಚೊಕ್ಕಾಡಿಯವರಿಗೆ ಸಿದ್ಧಿಸಿದೆಯಾದ್ದರಿಂದ ಅವರು ಇಲ್ಲಿನ ಬಹುತೇಕ ರಚನೆಗಳಲ್ಲಿ ಪ್ರಕೃತಿ ಮತ್ತು ಮಾನವ ಪ್ರಕೃತಿಯೊಳಗಣ ಅನೇಕ ನಿಗೂಢ ಸಂಗತಿಗಳನ್ನು, ನಮ್ಮ ದೈನಂದಿನ ಸಂಗತಿಗಳ ಜೊತೆ ಮಿಳಿತಗೊಳಿಸಿ ಸರಳವಾದ, ಆದರೆ ಮಾರ್ಮಿಕವಾದ ಭಾವಗೀತೆಗಳನ್ನು ರಚಿಸಬಲ್ಲವರಾಗಿದ್ದಾರೆ. ನಮ್ಮ ಗೋಪಾಲಕೃಷ್ಣ ಅಡಿಗ, ಕಣವಿ, ಜಿ. ಎಸ್. ಶಿವರುದ್ರಪ್ಪ ಮುಂತಾದವರ ಭಾವಗೀತೆಗಳು ಈ ಬಗೆಯವಾಗಿದ್ದವೆಂಬುದನ್ನು ನೆನೆದರೆ, ಸಂತೋಷ್ ಚೊಕ್ಕಾಡಿಯವರು ಈ ಪರಂಪರೆಯ ಅರ್ಥಪೂರ್ಣ ಮುಂದುವರಿಕೆಯಾಗಿ ತೋರುತ್ತಾರೆ.

ಎರಡು ಭಾಗಗಳಲ್ಲಿ ಸುಮಾರು ನಲವತ್ತಾರು ಹಾಡುಗಳಿವೆ. ಒಂದೊಂದರಲ್ಲೂ ಒಂದೊಂದು ಭಾವ , ಅರ್ಥ, ಚೆಲುವು ತುಂಬಿದೆ. ಎಲ್ಲಿಯೂ ಪುನರುಕ್ತವಾದ ಭಾವ ಓದುಗರನ್ನು ಆವರಿಸುವುದಿಲ್ಲ. ಸಾಮಾನ್ಯರಾದ ನಮಗೆ ಅಪರಿಚಿತವಾಗಿರುವ ಅನೇಕ ಸಂಗತಿಗಳನ್ನು ಕಾವ್ಯ ಪರಿವೇಷದಲ್ಲಿ ಪರಿಚಯಿಸುವ ಬರಹಗಳಿವು.

ಭಾವಗೀತೆಗಳ ಮೂಲಕ ಮನುಷ್ಯನಿಗೆ ವಿವೇಕ ಬೋಧಿಸುವ ಇರಾದೆ ಇರದಿದ್ದರೂ ನಮ್ಮ ಸಹಬಾಳ್ವೆ ಸಹನೀಯವೆನಿಸಲು ನಮ್ಮನ್ನು ನಾವು ಮರೆತು ದಂಡೆಗಳ ಹಂಗು ತೊರೆಯಬೇಕೆಂಬ ತಿಳಿವಳಿಕೆಯನ್ನು ಕವಿ ಕಾಣಿಸುತ್ತಾರೆ. ಅದು ಕವಿಯ ಜವಾಬ್ದಾರಿ ಕೂಡ. ಒಳಗೊಂದು ಬಗೆ, ಹೊರಗೊಂದು ಬಗೆಯ ವೇಷ ತೊಡುವ ನಮ್ಮ ಇಬ್ಬಂದಿತನವು ಬೆಟ್ಟದಂತಹ ಅಹಂಭಾವವನ್ನು ಪೇರಿಸಿಟ್ಟಿರುತ್ತದೆ. ಹೊರಗಣ ಬೆಟ್ಟವನ್ನು ಕಂಡಾಗಲಾದರೂ ನಮ್ಮ ಅಲ್ಪತ್ವದ ಅರಿವಾಗಿ, ನಮ್ಮ ಅಹಂಶಿಖರದಿಂದ ಕೆಳಗಿಳಿದು ಬರದೆ ದ್ವೀಪಜೀವಿಗಳಾಗಿಬಿಡುತ್ತೇವೆ. ಬೆಟ್ಟ, ಸಾಗರ, ನಕ್ಷತ್ರಪುಂಜಗಳು ನಮ್ಮ ಅಲ್ಪತ್ವವನ್ನು ಸದಾ ಎತ್ತಿ ತೋರುತ್ತಲೇ ಇದ್ದರೂ ನಾವು ಮಾತ್ರ ನಮ್ಮ ದಂಡೆಗಳ ಹಂಗು ತೊರೆಯದೆ ಕಡಿವಾಣ ಹಾಕಿಕೊಂಡು ಬದುಕುತ್ತಿದ್ದೇವೆ. ಲೋಕವನ್ನು ವ್ಯಾಪಿಸಿರುವ ಪ್ರೀತಿಯನ್ನು ಅರಿಯಲು, ಅನುಭವಿಸಲು, ಹಂಚಲು ಒಳ-ಹೊರಗಣ ಬೆಂಕಿಯನ್ನು ದೂರಾಗಿಸಿಕೊಳ್ಳಬೇಕು ಎಂಬುದು ಕವಿ ನಮಗೆ ಹೇಳುವ ತಿಳುವಳಿಕೆ.

ಹೊರಗೊಂದು ನದಿಯು, ಒಳಗೊಂದು ನದಿಯು
ಸಾಗರದ ಕಡೆಗೆ ಸಾಗಬೇಕು
ನಕ್ಷತ್ರಲೋಕ ಕಣ್ಣೆದುರೆ ಇರುವಾಗ
ದಂಡೆಗಳ ಹಂಗು ತೊರೆಯಬೇಕು

-ತಮಗೆ ತಾವೇ ಹೇಳಿಕೊಂಡ ಪಿಸುಮಾತಿನಂತೆ ಇದು ಓದುಗರಿಗೆ ವೇದ್ಯವಾಗುತ್ತದೆ. ಓದಿದ ತಕ್ಷಣ ನಮ್ಮನ್ನು ಹಿಡಿದು ನಿಲ್ಲಿಸಬಲ್ಲ ಇಂತಹ ಅನೇಕ ರಚನೆಗಳು ಈ ಸಂಕಲನದಲ್ಲಿವೆ. ಕೊರೋನ ತಂದ ಸಂಕಷ್ಟಗಳನ್ನೂ ದಾಖಲಿಸಲು ಕವಿ ಮರೆತಿಲ್ಲ. ಈ ಎಲ್ಲ ಕಾರಣದಿಂದ ಇವು ನಮ್ಮ ಕಾಲದ ತವಕ ತಲ್ಲಣಗಳನ್ನು ಸಶಕ್ತವಾಗಿ ಹೊಮ್ಮಿಸಿರುವ ರಚನೆಗಳಾಗಿವೆ.

ಎರಡನೆಯ ಭಾಗದಲ್ಲಿ ‘ಕವಿತೆ ಬರೆಯೋದಂದ್ರೆ’ ಎಂಬ ಸೊಗಸಾದ ಕವಿತೆಯೊಂದಿದೆ. ಒಂದು ಒಳ್ಳೆಯ “ಕವಿತೆಯನ್ನು ಓದಿದ ತಕ್ಷಣ ಕುಣಿತದಂತೆ ಭೂಮಿ” ಎಂಬ ಮಾತಂತೂ ಉತ್ತಮ ಕವಿತೆಯ ಗುಣವನ್ನು, ಪರಿಶ್ರಮವನ್ನು , ಕವಿಯ ಪಾಡನ್ನು ತಿಳಿಯಾದ ಹಾಸ್ಯದ ದಾಟಿಯಲ್ಲಿ ಹೇಳಿದೆ. ಸಮೂಹಗಾನಕ್ಕೆ ಹೇಳಿ ಮಾಡಿಸಿದ ರಚನೆ ಇದು.

ಕವಿತೆ ಬರೆಯೋ ಕಷ್ಟವು ಮಾತ್ರ
ಕವಿಯೊಬ್ಬನಿಗೇ ಗೊತ್ತು
ಕವಿತೆಯ ತೆಗಳೋ ಜನಗಳಿಗೆಲ್ಲ
ಏರಿದೆ ಕುಡಿದ ಮತ್ತು

ಎಂಬುದಾಗಿ ಹೇಳುತ್ತ, ಕವಿತೆಯನ್ನು ಕವಿತೆ ಬರೆಯುವವರನ್ನು ಹಗುರವಾಗಿ ಕಾಣುವ ಮನೋಧರ್ಮದವರನ್ನು ಕವಿ ಛೇಡಿಸಿರುವುದು ಗಮನಾರ್ಹವಾಗಿದೆ.

ಮಗಳ ಜೊತೆಗಿನ ಕವಿ ನಡೆಸಿದ ಸಂವಾದದಂತಿರುವ ರಚನೆಗಳು ತುಂಬ ಆಪ್ತವಾದ ವಾತ್ಸಲ್ಯಭಾವದಿಂದ ಮನದಲ್ಲಿ ಉಳಿಯುತ್ತವೆ. ಈ ಭಾಗದಲ್ಲಿ ಬರುವ ಮಗಳು ಮತ್ತು ಗುಬ್ಬಿಮರಿ ಎರಡೂ ಅಭಿನ್ನ. ಎರಡೂ ಬದುಕಿನಾಗಸದ ನೀಲಿಯತ್ತ ಹಾರಬೇಕಾದವರೆ. ಹಳ್ಳಿಗೆ ಹೊರಟ ಗುಬ್ಬಿ ಮತ್ತು ತಂದೆಯ ಬಳಿ ಬೇಡಿಕೆ ಸಲ್ಲಿಸುವ ಪುಟಾಣಿ ಮಗಳು ಎತ್ತುವ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿದೆ. ಇವು ಮಕ್ಕಳು ಹಾಡಲೆಂದೇ ಬರೆದಂತಿವೆ. ಮಕ್ಕಳ ಸಾಹಿತ್ಯಕ್ಕೆ ಉತ್ತಮ ಕೊಡುಗೆಯಾಗಬಲ್ಲ ಶಕ್ತಿಯುಳ್ಳವು.

ಮಗಳ ಮಾತುಗಳ ಮೂಲಕ ಅಪ್ಪ ಕಾಣುವ ಲೋಕ ಅಪರೂಪದ್ದು. ಮೊದಲ ಭಾಗದ ಕವಿತೆಯೊಂದರಲ್ಲಿ ಮಗಳು ‘ಅಪ್ಪಾ’ ಎಂದು ಕರೆದಾಗ ಕವಿಗೆ ತನ್ನ ಅಪ್ಪನ ನೆನಪಾಗುತ್ತದೆ. ಮಗಳನ್ನು ತಾನು ಕಕ್ಕುಲಾತಿಯಿಂದ ಕಾಣುತ್ತಿರುವಂತೆ ತನ್ನಪ್ಪನೂ ಕಂಡಿದ್ದರ ನೆನಪು ಜಗತ್ತಿನಲ್ಲಿ ಈ ವಾತ್ಸಲ್ಯಭಾವ ಸದಾ ಚಾಲನೆಯಲ್ಲಿರುತ್ತದೆಂಬುದನ್ನು ಮೂರು ತಲೆಮಾರಿನ ಪ್ರತಿನಿಧಿಗಳ ನೆಪದಲ್ಲಿ ನೆನಪಿಸಿರುವುದು ಸೊಗಸಾಗಿದೆ. ಹೀಗೆ ಸ್ವಾನುಭವಕ್ಕೆ ಹೊಂದಿಕೊಂಡು ರಚಿತವಾಗಿರುವ ಈ ಹಾಡುಗಳಲ್ಲಿ ಹಾಗೇ ಹೊಂದಿಕೊಳ್ಳುವಾಗಲೇ ತಮ್ಮ ಜಾಗೃತ ದರ್ಶನವನ್ನು ಜೀವಜಲದಂತೆ ಔಚಿತ್ಯವರಿತು ತುಂಬಬಲ್ಲ ಜಾಣ್ಮೆಯನ್ನು ಸಂಕಲನದುದ್ದಕ್ಕೂ ಈ ಕವಿ ತೋರಿದ್ದಾರೆ.

ಈಗಾಗಲೇ ಜನಪ್ರಿಯವಾಗಿರುವ ಶೈಲಿಯಿಂದ ದೂರ ಕಾಯ್ದುಕೊಂಡು ಹೊಸ ಬಗೆಯ ಚಿಂತನೆ ಮತ್ತು ಹೊಸ ಬಗೆಯ ಸಂವೇದನೆಯನ್ನು ಎರಕಹೊಯ್ದಂತೆ ರಚಿತವಾಗಿರುವ ಈ ಹಾಡುಗಳನ್ನು ಓದಿದಾಗ ಒಂದು ಬಗೆಯ ಸಂತಸ ಮೂಡಿದರೆ, ಹಾಡಿದಾಗ ಮತ್ತೊಂದು ಬಗೆಯ ಸಂತಸವನ್ನು ತುಂಬುತ್ತವೆ. ಈ ಮೊದಲೇ ಹೇಳಿದಂತೆ ಗುಣಮಟ್ಟದಲ್ಲಿ ಮೊದಲ ದರ್ಜೆಯನ್ನು ಕಾಯ್ದುಕೊಂಡಿರುವ ಡಾ. ಸಂತೋಷ್ ಚೊಕ್ಕಾಡಿಯವರ ಕವಿತೆಗಳಿಂದ ನಮ್ಮ ಭಾವಗೀತೆಗಳ ಪ್ರಕಾರಕ್ಕೂ ಸುಗಮ ಸಂಗೀತ ಕ್ಷೇತ್ರಕ್ಕೂ ಹೊಸ ಚೈತನ್ಯ, ತೇಜಸ್ಸು ಪ್ರಾಪ್ತವಾಗಲಿದೆ. ಭಾವಗೀತೆಯ ಮೂಲಕ ಕಾಣಸಿಗುವ ಈ ಬಗೆಯ ಪ್ರಬುದ್ಧ ರಚನೆಗಳು ತನ್ನ ಪ್ರಕಾರವನ್ನು ಸಮೃದ್ಧಗೊಳಿಸುವುದರ ಜೊತೆಗೆ, ನಮ್ಮ ಕಾಲ ಸಂವೇದನೆ ಕಾದು ಕೂತಿರುವ ಭಾವಗೀತೆಯ ಪ್ರಕಾರವನ್ನು ಪುನರುಜ್ಜೀವನಗೊಳಿಸಬಲ್ಲವು. ಈ ಅರ್ಥದಲ್ಲಿಯೂ ಇವು ಸಕಾಲಿಕವಾದ ರಚನೆಗಳಾಗಿವೆ. ತಮ್ಮ ಕಾವ್ಯ ಪಯಣದಲ್ಲಿ ಇಂತಹ ಪ್ರಯೋಗಕಾತ್ಮಕ ಮಗ್ಗುಲಿಗೆ ಹೊರಳಿಕೊಳ್ಳುವ ಮೂಲಕ ಉತ್ತಮ ಸಂಕಲನವೊಂದನ್ನು ಪ್ರಾಪ್ತವಾಗಿಸಿದ ಈ ಕವಿಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಈ ಹಾಡುಗಳು ಕನ್ನಡದ ಕೇಳುಗರ ಮನ ತಣಿಸಲಿ.

‍ಲೇಖಕರು Admin

June 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: