ಎಚ್ ಎಸ್ ಶಿವಪ್ರಕಾಶ್ ಓದಿದ ‘ಚಂದಿರನ ದೋಣಿ’

ಎಚ್. ಎಸ್. ಶಿವಪ್ರಕಾಶ್

—–

ಕವಿ, ನಾಟಕಕಾರ ಶ್ರೀ ಎಚ್. ಎಸ್. ಶಿವಪ್ರಕಾಶ್ ಅವರು ಹೃದಯಶಿವ ಅವರ ನನ್ನ ಚಂದಿರನ ದೋಣಿ (ಗಜಲ್ ಸಂಕಲನ) ಕೃತಿಗೆ ಪ್ರೊ ಎಚ್. ಎಸ್. ಶಿವಪ್ರಕಾಶ್ ಬರೆದ ಮುನ್ನುಡಿ.

​ಮುಮ್ಮಾತು ​

ನನ್ನ ಮೆಚ್ಚಿನ ಸಿನಿಮಾ ಗೀತಕಾರ ಹೃದಯಶಿವ ಅವರು ತಮ್ಮ ಗಜಲ್ ಗುಚ್ಛಕ್ಕೆ ನಾನೊಂದು ಮುನ್ನುಡಿ ಬರೆಯಬೇಕೆಂದು ಬಯಸಿದ್ದಾರೆ. ನಮ್ಮ ಕಿವಿಗಳಲ್ಲಿ ಕೇಳಿದ ಬಹುಕಾಲದ ನಂತರವೂ ಗುನುಗಡುವ ಇನಿಹಾಡುಗಳನ್ನು ಬರೆಯುತ್ತಾ ಕಾವ್ಯದಿಂದ ಬಹು ದೂರ ಸಿಡಿದುನಿಂತಿರುವ ಕಮರ್ಷಿಯಲ್ ಸಿನಿಮಾ ಲೋಕಕ್ಕೆ ಕಾವ್ಯದ ಸೂಕ್ಷ್ಮತೆಯನ್ನು ತರುವ ಸ್ತುತ್ಯ ಪ್ರಯತ್ನದಲ್ಲಿ ತೊಡಗಿರುವ ಅವರು ಪ್ರಸ್ತುತ ಕನ್ನಡಕಾವ್ಯದ ಗಂಭೀರ ಸಹೃದಯ ರುಚಿಯುಳ಼್ಳವರೆಂಬುದನ್ನು ಕೆಲವು ಸಮಕಾಲೀನ ಕವಿಗಳ ಕುರಿತ ತಮ್ಮ ಬಿಡಿ ಬರಹಗಳಲ್ಲಿ ಸಾಬೀತು ಮಾಡಿದ್ದಾರೆ. ಆದ್ದರಿಂದ ಅವರ ಬಗ್ಗೆ ನನಗೆ ತುಂಬು ಅಕ್ಕರೆ.

ಫೇಸ್ ಬುಕ್ಕಿನಲ್ಲಿ ಆಗಾಗ ಅವರು ಜಾಹೀರುಗೊಳಿ‌ಸುವ ಬಿಡಿ ಕವಿತೆಗಳನ್ನೂ ಕಾಲಕಾಲಕ್ಕೆ ನಿಗಾ ಮಾಡುತ್ತಿರುತ್ತೇನೆ.

ಕೆಲವು ಮಾ‌ಸಗಳ ಹಿಂದೆ ನನ್ನ ಮುನ್ನುಡಿಯ ಅಪೇಕ್ಷೆಯಿಂದ ತಮ್ಮ ಗಜಲುಗಳನ್ನು ಇಮೇಲಿಸಿದ್ದರು. ಕಾರ್ಯಭಾರ ಮತ್ತು ನನ್ನ ಹುಟ್ಟುಗುಣವಾದ ‌ಸೋಂಬೇರಿತನದಿಂದ ತೀರಾ ತಡವಾಗಿ ಬರೆಯತೊಡಗಿದ್ದೇನೆ–ಅವರ ಕ್ಷಮೆ ಕೋರುತ್ತಾ.

ಆಧುನಿಕ ಕನ್ನಡ ಕಾವ್ಯದ ಇಂದಿನ ಪ್ರಮುಖ ಪ್ರೇರಣೆಗಳಲ್ಲಿ ಉರ್ದು-ಪಾರ‌ಸೀ ಪರಂಪರೆಯಿಂದ ಎರವಲಾಗಿ ಬಂದಿರುವ ಗಜಲ್ ಪ್ರಕಾರ ಇಂದಿನ ಕಾವ್ಯಸುಬಿಗರನ್ನು ವಿಶೇಷವಾಗಿ ಸೆಳೆಯಹತ್ತಿದೆ. ನವ್ಯ ಮತ್ತು ಬಂಡಾಯ ಕಾವ್ಯದಲ್ಲಿ ಉಂಟಾದ ಭಾವಪರತೆಯ ಕೊರತೆಯನ್ನು ತುಂಬಿಕೊಳ್ಳಲು ಹೀಗಾಗುತ್ತಿರಬ‌‌ಹುದು. ಯಾವುದೇ ಭಾಷೆಯ ಕಾವ್ಯ ಕಾಲಕಾಲಕ್ಕೆ ತನ್ನ ಜರೂರಿಗ಼಼ಳಿಗನುಗುಣವಾಗಿ ಹೊರಗಿನ ಪ್ರೇರಣೆಗ಼ಳಿಗೊಳಗಾಗುವುದು ಸಹಜ, ಸ್ವಾಗತಾರ್ಹ.

ಇದೇ ಥರ ಜಪಾನ್ ಮೂಲದ ಹಾಯ್ಕು ಕವಿತೆಯೂ ಕನ್ನಡಕ್ಕೆ ಒದಗಿಬಂತು.

ಗಜಲ್ ವಿಶ್ವದ ಅತ್ಯಂತ ಶ್ರೀಮಂತ, ವೈವಿಧ್ಯಮಯ, ನಿರಂತರ ವಿಕಸನಶೀಲ ಕಾವ್ಯಪ್ರಕಾರಗಳಲ್ಲೊಂದು. ಒಂದು ವಿಧದಲ್ಲಿ ಯೂರೋಪಿನ ಸಾನೆಟ್ಪುಗಳಿಗೆ ಹೋಲಿಕೆ ಮಾಡಬಹುದಾದರೂ ಗಜಲುಗಳ ಬಹುಕುಳತೆ, ಬೀಸು ಸಾನೆಟ್ಪಿಗಿನ್ನಾ ಮಿಗಿಲು. ತನ್ನ ತಾಯಿನಾಡಾದ ಪರ್ಷಿಯದಲ್ಲೇ ಪ್ರಬುಧ್ಧತೆಯನ್ನಡೆದು ತುರ್ಕಿ, ಪುಷ್ತೂ, ಉರ್ದು, ಪಂಜಾಬಿಗಳಲ್ಲಿ ಸುಳಿದೆಗೆದು ಬೆಳೆಯಿತು, ಹೆಸರಾಂತ ಗಜಲುಕಾರರು ಆಯಾ ಭಾಷೆ ಗಳಲ್ಲಿ ಮಾತ್ರ ವಲ್ಲದೆ ಜಾಗತಿಕ ಕಾವ್ಯನಭದಲ್ಲೇ ಆಚಂದ್ರಾರ್ಕ ಪ್ರಖರ ನಕ್ಷತ್ರಗಳಾಗಿದ್ದಾರೆ. ರೂಮಿ, ಹಾಫಿಜ್,ಜಾಮಿ ಮುಂತಾದ ಅಗ್ಗಳರು ಫಾರಸಿ ಭಾಷೆ ಗೆ ಅಮೂಲ್ಯ ರತ್ನಗಳನ್ನು ನೀಡಿದ್ದಾರೆ. ಸೂಫೀ ಪರಂಪರೆಯ ಜೊತೆಗೆ ತಳುಕು ಹಾಕಿ ಕೊಂಡಿರುವ ಈ ಭವ್ಯ ಪ್ರಕಾರಕ್ಕೆ ಪಂಜಾಬಿಯಲ್ಲಿ ಬುಲ್ ಲೆ ಶಾ, ಸಿಂಧಿಯ ಇತರ ಸೂಫಿ-ಭಕ್ತರು ನವರೂಪಗಳನ್ನು ಕೊಟ್ಟರು.

ಹಲವು ಮೂಲಗಳಿಂದ ಸತುವನ್ನು ಹೀರಿ ಭಾರತದ ನೆಲದಲ್ಲಿ ಮೈದಾಳಿದ ಉರ್ದು ಭಾಷೆಯಲ್ಲೂ ಗಜಲು ಹೊಸ ಅವತಾರಗಳನ್ನು ತಾಳಿತು. ಮಿರ್ಜಾ ಘಾಲಿಬ್ ಉರ್ದು ಗಜಲಿಗೆ ಶಿಖರಪ್ರಾಯ. ಪರಂಪರೆಯ ಎಲ್ಲ ಶಕ್ತಿಗಳನ್ನೂ ಒಗ್ಗೂಡಿಸಿ ಹೊಸದೊಂದು ಸಂಕೀರ್ಣ ರಸವನ್ನು ಸೃಜಿಸಿದ. ಅವನು ಭಾರತದ ಬಾದಲೇರ್. ಬದಲಾವಣೆಯ ಪ್ರಳಯವಾತದೆದುರು ಪಂಚಭೂತಗಳು ಹೊಲಿಗೆ ಬಿಚ್ಚಿಕೊಳ್ಳುತ್ತಿರಲು ಅಲ್ಲೋಲಕಲ್ಲೋಲವಾಗುತ್ತಿರುವ ‌ಸಯದ ಮತ್ತು ಜಗದ ಉತ್ಪಾತಗಳನ್ನು ತನ್ನ ಹಲಮಜಲಿನ ರುದ್ರಸೌಂದರ್ಯದ ಗಜಲುಗಳಲ್ಲಿ ನಾಟಕೀಕಕರಿಸಿದ. ಆ ಪ್ರಕಾರದ ಎಲ್ಲಾ ಸಾಧ್ಯತೆಗಳನ್ನು ಲೂಟಿಸಿ ಮುಂದಿನವರ ಗಜಲುಹಾದಿಯನ್ನು ಕಷ್ಟ‌ಸಾಧ್ಯಗೊಳಿ‌ಸಿದ. ನನ್ ಉರ್ದು ಕವಿಮಿತ್ರ ಖಲೀಲ್ ಮೋಮೂನ್ ಪ್ರಕಾರ ಮುಂದಿನ ಕಾವ್ಯಕುಶಲಿಗಳು ಸಾಧಿಸಿರುವುದೇನೆಂದರೆ ಆ ಎಲ್ಲಕ್ಕೂ ಘಾಲಿಬನೇ ಸರಹದ್ದು.

ಹಿಂದಿ ಗಜಲು ಉರ್ದು ಗಜಲಿನ ವೈಭವವನ್ನು ಮುಟ್ಟಲೂ ಆಗಿಲ್ಲ. ಇದೇ ಮಾತು ಇತರ ಉತ್ತರದ ಭಾಷೆಗಳ ಮಟ್ಟಿಗೂ ನಿಜ.

ಇಸ್ಲಾಂನ, ಸೂಫಿಯಾನದ ಪಾರಂಪರಿಕ ಹೋಲಿಕೆಳು, ಬಿಂಬಗಳು ಗಜಲಿನ ಜೀವದುಸಿರು. ಅದಕ್ಕಿಂತ ಭಿನ್ನ ಉಪಮೆ-ಸಂಕೇತ ಗಳ ಹಿನ್ನಲೆಯಲ್ಲಿ ಉಸಿರಾಡುವ ಭಾಷಾಕಾವ್ಯಗಳಲ್ಲಿ ಗಜಲ್ ವಿಶಿಷ್ಟವಾದ ಸಾಕಿ, ಮದಿರೆ, ಬುಲ್ ಬುಲ್ ಇತ್ಯಾದಿ ಗಳನ್ನು ತಂದಾಗ ಪರಿಣಾಮ ಕೃತಕವಾಗುವ ಅಪಾಯ ಹೆಚ್ಚು‌. ಅವನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕು. ಅಥವಾ ಅದಕ್ಕೆ ಸಂವಾದಿಯಾದ ಇನ್ನೇನನ್ನೋ ಕಟ್ಟಿಕೊಳ್ಳಬೇಕು. ಅಲ್ಲದೇ ಗಜಲ್ ಕೇವಲ ಅರ್ಥ ಸಂರಚನೆಯಲ್ಲ. ಗೇಯತೆಗೆ ‌ಸಿಕ್ಕುವ ನಾದಸಂರಚನೆಯೂ ‌ಹೌದು. ಮೈಮಾಟವೇ ಗಜಲಿನ ಜೀವ. ಪ್ರಾಸಾನುಪ್ರಾಸ‌ಗಳ ಹೊಂದಿಕೆ-ಬಂದಿಕೆಗಳೂ ಬಹು ಮುಖ್ಯ. ಪದ್ಯ ಪದ್ಯದ ನಡುವಿನ ಕೊಂಡಿ ವಸ್ತುವಿನ ಮೇಲಿನದಲ್ಲ. ಗಜಲಿನ ಒಂದುತನದ ತಳಪಾಯ ಏಕಭಾವತ್ವ ಮತ್ತು ಏಕರಸತ್ವ.

ಇಷ್ಟೆಲ್ಲಾ ಸುತ್ತಿ ಬಳಸಿ ಮಾತಾಡಿದ ಕಾರಣ ಇಷ್ಟೇ. ಗಜಲನ್ನು ಕನ್ನಡದಲ್ಲಿ ಬರೆಯುವುದು ಸಾನೆಟ್ ಅಥವಾ ಹಾಯ್ಕೂ ಬರೆಯುವಷ್ಟೇ ಕಠಿಣ ಎಂಬುದನ್ನು ಸೂಚಿಸಲು.

​ಗಜಲುಗಳನ್ನು ಹಲವು ಯುವಕವಿಗಳು ಅನುಕರಿಸಲು ಪ್ರಯತ್ನಿಸುತ್ತಿರುವುದು ಗೊತ್ತಿದ್ದೇ. ಇದಕ್ಕಿಂತಲೂ ಸೂಕ್ಷ್ಮವಾದ ಒಳ್ದಾರಿಯೊಂದರ ದ್ವಾರಾ ಗಜಲಿನ ಸೊಗಡು ಕನ್ನಡ ಕಾವ್ಯಲೋಕವನ್ನು ಹೋಗತೊಡಗಿದೆ. ಹಿಂದಿಸಿನಿಮಾ (ಅದನ್ನೀಗ ಬಾಲಿವುಡ್ ಎಂದು ಪುನರ್ನಾಮಕರಣ ಮಾಡಲಾಗಿದೆ) ಇಂದಿನ ಅತ್ಯಂತ ಜನಪ್ರಿಯ ಮಾಧ್ಯಮವಾಗಿದೆ. ಅದರ ಪ್ರಧಾನ ಆಕರ್ಷಣೆ ಹಾಡುಗಳು. ಹಿಂದಿ ಸಿನಿಸಂಗೀತರಚನೆಯಲ್ಲಿ ಗಜಲ್ ಪರಂಪರೆಯಿಂದ ಲೂಟಿ ಹೊಡೆದ ಮಾಲುಗಳು. ಆ ಹಿಂದಿ ಸಿನಿಹಾಡುಗಳು ನಮ್ಮ ಸುತ್ತಾ ಕವಿದುಕೊಂಡಿರುವುದಲ್ಲದೆ ನಮ್ಮ ಭಾಷೆಗಳ ನಿನಿಗೀತಗಳನ್ನೂ ಪ್ರಭಾವಸುತ್ತಿವೆ. ಆ ಪ್ರಭಾವದಿನಿದ ತಪ್ಪಿಸಿಕೊಳ್ಳುವುದು ಕಷ್ಟ–ಆ ಬಗ್ಗೆ ಕಟ್ಟೆಚ್ಚರ ಹೊಂದಿರುವ ನನ್ನಂಥವರಿಗೆ ಕೂಡಾ.ನಮ್ಮ ವಿಮರ್ಶಾತ್ಮಕ ಎಚ್ಚರ ಸದಾ ಸರ್ವತ್ರ ಎಚ್ಚ್ರವಾಗಿರುವುದಿಲ್ಲ. ಅಂತಹ ಮರೆವಿನ ಗಳಿಗೆಗಳಲ್ಲಿ ಅವು ನಮ್ಮ ತಳಮನದಲ್ಲಿ ನುಸುಳಿಕೊಂಡು, ನಮ್ಮ ಭಾವಗಳಲ್ಲಿ ಕರಗಿಹೋಗುತ್ತವೆ. ಜಾಹಿರಾತಿನ ತುಣುಕುಗಳು, ಮಾಧ್ಯಮದಲ್ಲಿ ಮಾರ್ದನಿಗೊಳ್ಳುವ ನೇತಾದಿಗಳ ಅಂಬೋಣಗಳೂ ಹೀಗೆಯೇ ನಮಗೆ ಗೊತ್ತಿಲ್ಲದಂತೆ ನಮ್ಮನ್ನು ನಿಯಂತ್ರಿಸತೊದಗುತ್ತವೆ. ಈ ಕಳ್ಳದಾರಿಗಳಿಂದಲೂ ಗಜಲಿನ ಡೈಲ್ಯೂಟೆದ್ ಪ್ರಭಾವಗಳು ನಮ್ಮನ್ನು ಹೊಗುತ್ತಿವೆ. ಇಂದು ಕನ್ನಡದಲ್ಲಿ ರಚಿತವಾಗುತ್ತಿರುವ ಗಜಳುಗಳನ್ನು ಗಮನಿಸಿದರೆ ಈ ಎರಡನೇ ದಾರಿಯಿಂದ ನುಸುಳುವ ಪ್ರಭಾವವೇ ಹೆಚ್ಚು ಕೆಲಸ ಮಾಡಿದಂತೆ ಕಾಣುತ್ತದೆ.

​ಇನ್ನು ನಮ್ಮ ಹೃದಯಶಿವರ ಗಜಲು ಗುಚ್ಚಗಳಿಗೆ ವಾಪಸಾಗುತ್ತಿದ್ದೇನೆ. ಹೃದಯಹೀನ ಸಿನಮಾ ಗೀತೆಗಳಿಗೆ ಕವಿತೆಯ ಭಾವಗೀತಾತ್ಮತೆ ತರುತ್ತಿರವ ಅವರು ಗಜಲಿನಂಥ ಭಾವಪ್ರಧಾನ ಪ್ರಕಾರಕ್ಕೆ ಒಲಿಯುತ್ತಿರುವುದು ಸಹಜ ಹಾಗೂ ಸ್ವಾಗತಾರ್ಹ. ಒಟ್ಟು ನಲವತ್ತು ಗಜಲುಗಳನ್ನು ​ಇಲ್ಲಿ ಸಂಕಲಿಸಿದ್ದಾರೆ. ಇಲ್ಲಿ ಕೆಲವು ಗಜಲುಗಳು ಆ ಪ್ರಕಾರದ ಆತ್ಮವಾದ ಪ್ರೇಮವನ್ನು ಕುರಿತವು. ಮಿಕ್ಕವು ಸಾಮಾಜಿಕ ವಸ್ತುಗ ಕುರಿತವು. ಪ್ರೀತಿಕೇಂದ್ರಿತ ಗಜಲುಗಳನ್ನು ಬರೆದಾಗ ಅವರು ಬಹುಮಟ್ಟಿಗೆ ಗೆಲ್ಲುತ್ತಾರೆ. ಉದಾಹರಣೆಗೆ

6

ಅವಳ ಕಾಡಿಗೆಯ ಕಪ್ಪು ತೆರೆಯುತಿದೆ ಕಾರಿರುಳ ಬದುಕಿನಲ್ಲಿ

ಸೋತ ಗೀತೆಯೊಂದು ಸುಮ್ಮನೆ ಬರುತಿದೆ ಅವಳ ನೆನಪ ನೆಪದಲ್ಲಿ

ನನ್ನ ಬೇಗುದಿ ಏಕಾಂತದ ತಾಪ ಗ್ರಹಿಸಲಾಗದ ಬಡಪಾಯಿ ಚಂದಿರ

ಉರಿಯುತ್ತಿದ್ದಾನೆ ಇರುಳ ತುಟಿಗೆ ತುಟಿ ಬೆಸೆದು ವಿಚಿತ್ರ ದ್ವಂದ್ವದಲ್ಲಿ

ಭೇಟಿ ವಿದಾಯಗಳ ನಡುವೆ ಮಹಲೊಂದು ಎದ್ದು ನೆಲಸಮವಾದರೂ

ಉಡಾಫೆಯ ಭಾವ ನಸೀಬಿಗೆ ಕರಗಿಹುದಾಯುಷ್ಯ ಕಂಬನಿಯಲ್ಲಿ

ಖಾಲಿ ಮೋಡಗಳ ನಿರ್ಭಾವುಕತೆ ನೋಡಲಾರದಾಕಾಶವು

ಗೋಳಾಡುತ್ತಿದೆ ಕಪ್ಪಿಟ್ಟ ಮೊಗದೋರಿ ಬರಿದೇ ವ್ಯಾಕುಲದಲ್ಲಿ

ಖುಷಿಗೋ ನೋವಿಗೋ ರೆಪ್ಪೆ ತೇವಗೊಳುತ್ತಿರಬೇಕೋ ‘ಹೃದಯ’

ಇರಲೇಬೇಕು ಕಾಲದ ಬಾಸುಂಡೆ ಗುರುತು ಸುಖವುಂಡವನ ಬೆನ್ನಿನಲ್ಲಿ

​ಒಂದೆರಡು ಜಾಗಗಳಲ್ಲಿ ಗೇಯತೆ ಎಡವಿದರೂ ಇದೊಂದು ಮನದುಂಬುವ ಕವಿತೆ. ಗಜಲಿನ ಬಹುತೇಕ ಲಕ್ಷಣಗಳನ್ನು ಉಳಿಸಿಕೊಂಡು ಗಜಲುಗಳ ಸ್ಫ್ವಾದವನ್ನು ಕನ್ನಡಿಸುವಲ್ಲಿ ಈ ಕವಿತೆ ಗೆಲ್ಲುತ್ತದೆ. ಹೀಗೆಯೇ ಇನ್ನೊಂದು ಉದಾಹರಣೆ:

20

ನಾ ಸತ್ತು ಮಲಗಿರಲು ಹೂಮಾಲೆ ತರಬೇಡ ಮುಳ್ಳುಗಳು ನನಗಿಷ್ಟ ಕ್ಷಮಿಸು ಹುಡುಗಿ

ನನ್ನ ಹೂಳುವ ನಿಮಿಷ ಅತ್ತು ಗೋಳಾಡದಿರು ನೋವುಗಳು ನನಗಿಷ್ಟ ಕ್ಷಮಿಸು ಹುಡುಗಿ

ಮುಂದೆ ನಾ ಗೋರಿಯಲಿ ವಿಶ್ರಾಂತಿ ಪಡೆವಾಗ ಪಾರಾಗಿ ಸಕಲ ಜಂಜಡಗಳಿAದ

ಇಳಿಸದಿರು ಆಳಕ್ಕೆ ಮುಂಗಾರುಮಳೆ ಬೇರ ಕ್ಷಾಮಗಳು ನನಗಿಷ್ಟ ಕ್ಷಮಿಸು ಹುಡುಗಿ

ಬಿದಿರು ಕಾಡಿನ ನಡುವೆ ಒಬ್ಬಳೇ ಅಲೆದಲೆದು ಊದದಿರು ಕೊಳಲ ನೀ ನೆನೆದು ನನ್ನ

ಕಟ್ಟಕಡೆ ಪಯಣಕ್ಕೆ ಹೆಗಲಾಗುವಂಥ ಆ ಬೊಂಬುಗಳು ನನಗಿಷ್ಟ ಕ್ಷಮಿಸು ಹುಡುಗಿ

ಹೊಳೆದಂಡೆಯಲಿ ಕುಳಿತು ಗೀಚದಿರು ಕವಿತೆಯನು ಕೂಡಿ ನಡೆಸಿದ ತೆಪ್ಪ ನೋಡಿ ನೋಡಿ

ತೀರ ಸೇರದ ಎಷ್ಟೋ ನತದೃಷ್ಟ ಕಾಗದದ ದೋಣಿಗಳು ನನಗಿಷ್ಟ ಕ್ಷಮಿಸು ಹುಡುಗಿ

ಮುಖಕ್ಕೂ ಕೂಡ ಸಾವಿನಲೇ ಗಾಂಭೀರ್ಯ ತಿಳಿ ಅಂತ್ಯದಲೇ ಜೀವಿತಕು ಮಿಗಿಲು ಅರ್ಥ

ಈ ‘ಹೃದಯ’ ನಿಂತೊಡನೆ ಜಗವು ನಿಲ್ಲದು ಎಂಬ ಸತ್ಯಗಳು ನನಗಿಷ್ಟ ಕ್ಷಮಿಸು ಹುಡುಗಿ

​ನನ್ನ ಪ್ರಕಾರ ಈ ಕವಿತೆ ಗಜಲನ್ನು ಕನ್ನಡ ವಿಶಿಷ್ಠ ಉಪಮೆಗಳ ಮೂಲಕ ಮನ ಸೆಳೆಯುತ್ತದೆ. ಆದರೆ ಪ್ರಣಯೇತರ ​ವಸ್ತುಗಳನ್ನು ಗಜಲಿಗೆ ತರುವಲ್ಲಿ ಈ ಮಟ್ಟಿಗಿನ ಗೆಲುವು ಅವರಿಗೆ ಇನ್ನೂ ಸಿಗುತ್ತಿಲ್ಲ.

26

ಕಚ್ಚಾಡಿದವರೆಲ್ಲ ಮತ್ತೆ ಒಂದಾಗಿಹರು ಅಧಿಕಾರಕಾಗಿ

ಸಿದ್ಧಾಂತವೆಲ್ಲವನು ಗಾಳಿಗೆ ತೂರಿಹರು ಅಧಿಕಾರಕಾಗಿ

ರಾಜಕಾರಣ ತಾನು ರಾಜಿಸೂತ್ರದ ಆಟ, ಹೌದೇನು ಸಾಕಿ?

ಹೂತ ಸಂಬಂಧಳ ಗೋರಿಯನು ತೋಡಿಹರು ಅಧಿಕಾರಕಾಗಿ

ಭ್ರಷ್ಟನೀತಿಯ ದುಷ್ಟಕೂಟವೇ ಜಗದಲ್ಲಿ ಮೆರೆದಿಹುದು ಸತತ

ಲೋಭ ಅಳಿಸದ ಅಚ್ಚೆ, ನುಡಿಭ್ರಷ್ಟರಾಗಿಹರು ಅಧಿಕಾರಕಾಗಿ

ಕಪಟಿಗಳ ಸಂತೆಯಲಿ ಮುಗ್ಧ ಜನರ ಹರಾಜು, ನಿಜವೇನು ಸಾಕಿ?

ಚಾಲಾಕಿತನದಿ ನಗುತಲೇ ದ್ರೋಹವೆಸಗಿಹರು ಅಧಿಕಾರಕಾಗಿ

ಪ್ರತಿಯೊಂದಕೂ ಇಲ್ಲಿ ಕೊನೆಯೆಂಬುದಿರಬೇಕು, ಅಲ್ಲವೇ ‘ಹೃದಯ’?

ಪ್ರತಿ ಹೆಜ್ಜೆ ದಾಖಲಾಗುವುದನ್ನು ಮರೆತಿಹರು ಅಧಿಕಾರಕಾಗಿ

ಗಜಲಿನಲ್ಲಿ ಪ್ರೇಮಕ್ಕೆ ಹೊರತಾದ ವಸ್ತುಗಳನ್ನು ತರುವುದು ಹಿರಿಯ ಕವಿಗಳಿಗೂ ಕಷ್ಟ. ಆ ದಿಕ್ಕಿನಲ್ಲ ಗೆದ್ದುಕೊಂಡವರು ಗಾಲಿಬ್, ಫೈಜ್ ರಂಥ ಸಮರ್ಥರು ಮಾತ್ರ. ಅವರು ಸಾಮಾಜಿಕ ಮತ್ತು ದಾರ್ಶನಿಕ ವಸ್ತುಗಳನ್ನು ಪ್ರತ್ಯೇಕವಾಗಿ ತರದೆ ಪ್ರೇಮವನ್ನು ಒಂದು ವ್ಯಾಪಕ ಸಾಂಕೇತಿಕ ಭಾಷೆಯನ್ನಾಗಿಸಿ ಸಮಸ್ಯೆಯನ್ನು ದಾಟಿಕೊಳ್ಳುತ್ತಾರೆ.

ಗಾಲಿಬ್ ಇದನ್ನು ಹೇಗೆ ಸಾಧಿಸುತ್ತಾನೆ ಎನ್ನುವುದನ್ನ ಈ ಕೆಳಗಿನ ಗಜಲಿನಲ್ಲಿ ಕಾಣಬಹುದು. (ಅನುವಾದ ನನ್ನದು)

ಎಲ್ಲಿ ಆ ದಿವಸಗಳು ಕೂಟದ ಆ ಗಳಿಗೆಗಳು, ಈಗೆಲ್ಲಿ?

ಆದಿವಸ ಅಇರುಳು ಆ ಮಾಸ ಆ ವರ್ಷ, ಈಗೆಲ್ಲಿ?

ಯಾರಿಗಿದೆ ಪುರುಸೊತ್ತು ಪ್ರೇಮದಾರಾಧನೆಗೆ?

ಚಲುವ ಧ್ಯಾನಿಸೊ ಆಳ, ಆತುರ-ಈಗೆಲ್ಲಿ?

ಹೃದಯದ ಕತೆಯ ಬಿಡು, ಮೆದುಳೂನು ಉಳಿದಿಲ್ಲ

ಒಂದು ಕಪ್ಪನೆ ಮಚ್ಚೆ, ದಟ್ಟ ಕೇಶ ಹುಚ್ಚು-ಈಗೆಲ್ಲಿ?

ಎಲ್ಲ ಪ್ರೇರಣೆ ಇತ್ತು ಅವಳಲ್ಲಿ,ಹೂಂ, ಅವಳಲ್ಲಿಯೇ

ಎದೆಯಾಳ ಆ ಬಯಕೆ ಆ ಅಪಾರ ಬೆದೆ-ಈಗೆಲ್ಲಿ?

ನೆತ್ತರಿನ ಕಣ್ಣೀರೂ ಸುಲಭವಲ್ಲ ಇಂದು

ಹೃದಯದ ತಾಖತ್ತು, ಉಸಿರಿನ ಗಮ್ಮತ್ತು-ಈಗೆಲ್ಲಿ?

ಪ್ರೀತಿ ಜೂಜಿನ ಮನೆಗೆ ಕಾಲಿಡೆನು ಎಂದೂನು

ಇಟ್ಟರೂ ಕೂಡ ಆಪಾಟಿ ಸಿರಿ, ಹೊನ್ನು-ಈಗೆಲ್ಲಿ?

ಜಗದ ಬವಣೆಗಳಲ್ಲಿ ಸವೆದು ಹೋಗಿದೆ ಜೀವ

ನಾನೆಲ್ಲಿ? ಜಗವೆಂಬ ಶಾಪ ಈಗೆಲ್ಲಿ?

ನನ್ನ ಎಲ್ಲಾ ಶಕ್ತಿ, ಘಾಲಿಬ್, ಆಗಿ ಹೋಗಿದೆ ಖಾಲಿ

ಪಂಚ ಭೂತಗಳ ಸಮತೋಲ ಈಗೆಲ್ಲಿ?

ಈ ದಾರಿ ಹೃದಯಶಿವರಿಗೆ ತೆರೆದುಕೊಂಡರೆ ಅವರ ಗಜಲುಗಳ ಮೌಲ್ಯ ಇನ್ನೂ ಹೆಚ್ಚ್ಚುತ್ತದೆ.

ಈ ಕೆಲವು ಮಾತುಗಳನ್ನು ಬರೆಯಲು ನನಗವಕಾಶ ಮಾಡಿಕೊಟ್ಟ ಹೃದಯಶಿವ ಅವರಿಗೆ ನನ್ನ ಧನ್ಯವಾದಗಳು.

ಅವರ ಗಜಲಿನ ಸಂಗ್ರಹಕ್ಕೆ ಓದುಗರು ಮೆಚ್ಚುಗೆಯಿಂದ ಸ್ಪಂದಿಸಲಿ ಎಂದು ಹಾರಯಿಸುತ್ತೇನೆ.

‍ಲೇಖಕರು avadhi

September 19, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: