ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಎಸ್ ವೆಂಕಟೇಶಮೂರ್ತಿ ಹೊಸ ಕವಿತೆ- ಮರಣ ಪತ್ರ…

ಎಚ್ ಎಸ್ ವೆಂಕಟೇಶಮೂರ್ತಿ

ಮಕ್ಕಳೇ, ನನ್ನ ಮಾನಸ ಪುತ್ರರಿಗೆ ಪುತ್ರಿಯರಿಗೆ
ಆಸ್ತಿ ಪಾಸ್ತಿ ಮನೆ ಮಾರು ಎಂಥದೂ ಕೊಡಲಿಲ್ಲ.
ಹಿತವಾದಪ್ಪುಗೆಯನ್ನು ಸಹಾ. ಅವರಿಗೆ ಕೊಟ್ಟದ್ದು
ನಿಟ್ಟುಸಿರ ಪ್ರಾಣ. ಬತ್ತದೆ ಹರಿಯುವ ತೊರೆಗೆ ತೆರೆ.
ಹೋಗೋ ಮುನ್ನ ಕಂಡಿದ್ದರಾಗಿತ್ತೊಮ್ಮೆ ಅವರನ್ನ.
ಅವರ ವಿಳಾಸ ಸಹಾ ಗೊತ್ತಿಲ್ಲ. ಯಾವ ಮರವೋ.
ಯಾವ ಗೂಡೋ. ಯಾವ ಒಳಗರುಳೋ. ಯಾರ
ಇನಿಗೊರಳೋ! ಪತ್ತೆ ಹಚ್ಚಿ. ಒಮ್ಮೆ ನನ್ನ ಕಂಡು
ಹೋಗಲು ಏರ್ಪಾಡು ಮಾಡಿ. ಹಾಡಿಗೆ ತವರ
ಬಾಗಿನ ಸಿಗಲಿ. ಕವಿತೆಗತ್ಯಗತ್ಯ ನೀರಿನ ಕಣ್ಣು.

ಏನು ಮಾಡಿಸುವಿರಿ ಅವರು ಬಂದಾಗ? ಆಗಬಹುದು
ಹಿಟ್ಟು ಹೊನಗನ್ನೆ ಸೊಪ್ಪು. ಪ್ರೀತಿಯ ನೇವರಿಕೆ.
ಕಂಡ ಕನಸುಗಳ ಕನವರಿಕೆ. ಸರಿಯಾದ ದಾರ
ಹಾರಕ್ಕೆ! ಉಪ್ಪು ಖಾರ ಹದವಾಗಿರಲಿ. ಒಪ್ಪತ್ತಿ
ನೂಟಕ್ಕೆ ಇಷ್ಟು ಮಸ್ತಾಯಿತು ನನ್ನ ಮಕ್ಕಳೇ.
ಅವರು ಹೊರಟಾಗ ತಪ್ಪದೆ ಹೇಳಿ: ಬರುತ್ತಿರಿ
ಆಗಾಗ ಅಪ್ಪ ಅಮ್ಮ ಇಲ್ಲದ ತವರಿಗೆ. ಅಣ್ಣ
ತಮ್ಮಂದಿರಿದ್ದೇವೆ. ಇದ್ದಾರೆ ಅತ್ತಿಗೆ ನಾದನಿಯರು.
ಆ ಮನೆಯಲ್ಲಿ ಕಾಫಿ, ಈ ಮನೆಯಲ್ಲವಲಕ್ಕಿ,
ಟಾಟಾ ಬೈ ಬೈ. ಕೈಯೆತ್ತಾಡಿಸಿ ಒಲವಿಂದ.

ಒತ್ತಿಕೊಂಡು ಬರುತ್ತಾ ಉಂಟು ನಿದ್ದೆ. ಹೊದಿಸಿ
ಹೊದಿಕೆ. ತಾಗಿಸಿ ಹಣೆಗೆ ತೆಳ್ಳನೆಯುಸಿರ ಮಕಮಲ್ಲು.
ಹಾರುವ ರೆಕ್ಕೆಗಳ ನೇವರಿಸಿ. ಕುಡಿಸಿ ಹನಿ ಹನಿ
ನಿಮಿಷ. ಬಾಗಿಲ ಬಳಿ ಆಡುವ ನೆರಳು ಯಾರದ್ದು?
ಕರೆಯಿರಿ ಒಳಕ್ಕೆ. ಪಿಕಪ್ ಎಷ್ಟು ಹೊತ್ತಿಗೆ ಕೇಳಿ.
ಜೋಪಾನ ಎನ್ನಿ. ಹಂಪುಗಳ ಮೇಲೆ ನಿಧಾನ ಚಲಿಸಿ,
ಎಲ್ಲಾ ಶಟರ್ಸ್ ಇಳಿಸಿ, ಬಂಡಿಯ ಹಿಂದೆ ಕೆಂಬಣ್ಣದ
ಮೋಡ ಎಬ್ಬಿಸಿ ಮೆಲ್ಲಗೆ-ಎನ್ನಿ. ಮೋಡ ಮೇಲಕ್ಕೇರಿ
ಬಯಲ ಗಾಳಿಯ ಹೆಗಲ ಹತ್ತಲಿ. ಮಳೆಗಾಲದಲ್ಲಿ
ಸಾಧ್ಯವಾದರೆ ಬಂದುದುರಿಸಲಿ ಎರಡೇ ಹನಿ ಅಕ್ಷತೆ.

‍ಲೇಖಕರು Admin

29 March, 2022

1 Comment

  1. G.N.Ranganatha Rao

    Dear H S V
    I read your poem.It really did wake me up to my age. .why are you i n hurry.?You have still many many miles to go.
    G N Ranganatha Rao

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading