ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಎಸ್ ವಿ ಅಂಕಣ ಆರಂಭ..

ತಾವರೆಯ ಬಾಗಿಲು-೧

ಕಾವ್ಯವೆಂಬ ಆತ್ಮದ ಬೆಳಕು…

ಈ ಕವಿಗಳೆಂಬವರು ನಾವೆಲ್ಲಾ ನಿತ್ಯ ವ್ಯವಹಾರದಲ್ಲಿ ಬಳಸುವ ಭಾಷೆಯನ್ನೇ ಬಳಸುವರು ಎಂಬುದು ನಿಜವಾದರೂ ಕಾವ್ಯದಲ್ಲಿ ಭಾಷೆಯ ಬಳಕೆಯ ಕ್ರಮ ನಿತ್ಯರೂಢಿಯನ್ನು ಸಾಮಾನ್ಯವಾಗಿ ಮೀರಿದ್ದಾಗಿರುತ್ತದೆ.

hsv1-2ಕಾವ್ಯವು ನಮ್ಮ ಸುಲಭ ಗ್ರಹಿಕೆಗೆ ದಕ್ಕದಿರುವ ಕಾರಣ ಅದೇ. ಭಾಷೆ ತಿಳಿದಿದ್ದರೆ ಸಾಲದು; ಕಾವ್ಯದಲ್ಲಿ ಭಾಷೆಯು ಬಳಕೆಯಾಗುವ ವಿಶಿಷ್ಟ ಹದದ ಅರಿವಿರದೆ ಹೋದರೆ ನಾವು ಕಾವ್ಯದಲ್ಲಿ ಬೇರೇನನ್ನೋ ಕಾವ್ಯವೆಂದೇ ಗ್ರಹಿಸಿ ಮುಂದೆ ಸಾಗಿಬಿಡುತ್ತೇವೆ.

ಕಾವ್ಯದಲ್ಲಿ ಕಥೆಯೊಂದರ ನಿರೂಪಣೆಯಿದ್ದರೆ ಕಥೆಯನ್ನೇ ನಾವು ಕಾವ್ಯವೆಂದು ಗ್ರಹಿಸುವ ಅಪಗ್ರಹಿಕೆ ಸಾಮಾನ್ಯವಾಗಿ ಉಂಟಾಗಿಬಿಡುತ್ತದೆ. ಪ್ರಸಿದ್ಧ ಕಾವ್ಯಗಳ ಕಥಾ ನಿರೂಪಣೆಯು ಕಾವ್ಯಗ್ರಹಿಕೆಯತ್ತ ವಿಮುಖವಾಗಿರುವುದನ್ನು ಗಮನಿಸಿದಾಗ ನಾನು ಹೇಳಿದ್ದರ ತಥ್ಯ ಅರಿವಾಗುವುದು.

ಹಾಗಾದರೆ ಕಾವ್ಯವೆಂಬುದು ಶಬ್ದಾರ್ಥ ಅಲಂಕಾರಗಳೆನ್ನಲಾದೀತೇ?

ಕಾವ್ಯವು ಶಬ್ದಾರ್ಥ ಅಲಂಕಾರಗಳಿಂದ ವ್ಯಂಜಿತವಾಗಬಹುದೆಂಬುದು ನಿಜವಾದರೂ ಅಲಂಕಾರವೇ ಕಾವ್ಯವೆನ್ನಲಾಗದು. ಮತ್ತೆ ಕೆಲವರು ಕಾವ್ಯದಲ್ಲಿ ಅಭಿವ್ಯಕ್ತವಾಗುವ ವೈಚಾರಿಕತೆಯನ್ನೇ ಕಾವ್ಯವೆಂದು ಭ್ರಮಿಸುವುದುಂಟು. ಬಹಳ ಘನವಾದ ವೈಚಾರಿಕತೆಯನ್ನು ಜಾಲಿಸಿ ಜಾಲಿಸಿ ಕೊಟ್ಟರೂ ಅನೇಕ ಕಾವ್ಯರೂಪೀ ಬರವಣಿಗೆಗೆ ಕಾವ್ಯತ್ವವಿರಲಿ, ಕಾವ್ಯತ್ವದ ಸ್ಪರ್ಶವೂ ಇರುವುದಿಲ್ಲ.

ನಮ್ಮ ಶಾಲಾಕಾಲೇಜುಗಳಲ್ಲಂತೂ ಕಾವ್ಯದ ಶಬ್ದಾರ್ಥ, ಸಾರಾಂಶ, ಛಂದಗಳನ್ನು ಬಿಡಿ ಬಿಡಿಯಾಗಿ ಹರಿಹರಿದು ಹರವುತ್ತಾ ಇದೇ ನೋಡಿ “ಕಾವ್ಯ” ಎಂದು ಅಪವ್ಯಾಖ್ಯೆಗೆ ತೊಡಗುವುದುಂಟು. ಕಥೆಯೇ ಕಾವ್ಯವೆಂದು ಭ್ರಮಿಸುವವರಿಗೆ ಕುಮಾರವ್ಯಾಸ, ಕುಮಾರವಾಲ್ಮೀಕಿಯರಲ್ಲಿ ಏನು ಫರಕೆಂಬುದೇ ತಿಳಿಯದೆ ಹೋಗಬಹುದು.

ಅಲಂಕಾರದ ಚೆಲುವು ಪಂಪ, ಲಕ್ಷ್ಮೀಶರಲ್ಲಿ ಯಾರು ಘನವಾದ ಕವಿ ಎಂಬುದನ್ನು ಗ್ರಹಿಸುವಲ್ಲಿ ತೊಡಕೊಡ್ಡಬಹುದು. ತಾತ್ವಿಕತೆಯ ಭಾರಕ್ಕೆ ತಣಿಯುವವರು ಮಂಕುತಿಮ್ಮ, ಮರುಳು ಮುನಿಯರ ಅಂತರವನ್ನು ಗ್ರಹಿಸುವಲ್ಲಿ ವಿಫಲರಾಗಬಹುದು.

ಕಾವ್ಯದಲ್ಲಿ ಮೇಲಿನ ಎಲ್ಲ ಅಂಶಗಳೂ ಇದ್ದೂ “ಅತ್ಯತಿಷ್ಠದ್ದಶಾಂಗುಲಂ”(ಪುರುಷಸೂ ಕ್ತ) ಎಂಬಂತೆ ಕಾವ್ಯವೆಂಬುದು ಆತ್ಮದ ಬೆಳಕಾಗಿ ಅದೆಲ್ಲವನ್ನೂ ಮೀರಿದ್ದಾಗಿರುತ್ತದೆ ಎಂಬ ವಿನಯ ಮತ್ತು ಅರಿವನ್ನು ಸಹೃದಯರು ರೂಢಿಸಬೇಕಾಗುತ್ತದೆ. ಅದಕ್ಕೇ ಕಾವ್ಯತ್ವ ಎಂಬುದು ಹೇಳಿಕೆಯ ಸಂಗತಿಯಾಗಿರದೆ ಧ್ವನಿಯ ಸಂಗತಿಯಾಗಿರುತ್ತದೆ. ಬೊಟ್ಟಿಟ್ಟು ತೋರಿಸಲಿಕ್ಕಾಗದೆ ಬೆರಳು ಚಾಚಿ ಅನೂಹ್ಯದತ್ತ ಕೈಮಾಡಿ, ನೋಡು ಅಲ್ಲುಂಟು ಕಾವ್ಯ ಎನ್ನುವುದು ಕಾವ್ಯವೆಂಬ ವಿಶಿಷ್ಟ ಭಾಷಾರಚನೆಯ ಅಸಾಮಾನ್ಯತೆ. ಕೇವಲ ಕತೆಯಲ್ಲ ಅದು; ಕತೆಯನ್ನೂ ಮೀರಿದ ವ್ಯಂಜಕತೆ.

krisಕುಮಾರವ್ಯಾಸನಲ್ಲಿ ಶ್ರೀಕೃಷ್ಣನ ಕಾಲ್ಬೆರಳ ಉಗುರನ್ನು ವರ್ಣಿಸುವ ಪದ್ಯವೊಂದಿದೆ. ಸಂಧಿಗಾಗಿ ಮುರಹರನಾದ ಕೃಷ್ಣನು ದುರ್ಯೋಧನನ ಆಸ್ಥಾನಕ್ಕೆ ಬಂದನು. ದ್ರೋಣ, ಭೀಷ್ಮ, ಕೃಪ ಮೊದಲಾದ ಹಿರಿಯರು ಕೃಷ್ಣನನ್ನು ಇದಿರುಗೊಂಡು ಸ್ವಾಗತಿಸಿದರು.

ಆಸ್ಥಾನದಲ್ಲಿ ನೆರೆದಿದ್ದ ರಾಜರೆಲ್ಲರೂ ತಮ್ಮ ಕಿರೀಟ ಮುಡಿಯಲ್ಲಿ ಇರುವಂತೆಯೇ ಕೃಷ್ಣನ ಪಾದಗಳಿಗೆ ತಮ್ಮ ತಲೆಗಳನ್ನು ಚಾಚಿದರು. ಆಗ ಕೃಷ್ಣನ ಪಾದನಖವು(ಕಾಲಿನ ಉಗುರು) ಹೇಗೆ ಶೋಭಿಸಿತು? ಅನಂತ ತಾರಾ ಪರಿವೃತೇಂದುವಿನಂತೆ ಮೆರೆದುದು ಹರಿಯ ಪದನಖವು!(ಅಸಂಖ್ಯಾತ ನಕ್ಷತ್ರಗಳಿಂದ ಸುತ್ತುವರೆಯಲ್ಪಟ್ಟ ಚಂದ್ರನ ಹಾಗೆ ಕೃಷ್ಣನ ಕಾಲ್ಬೆರಳ ಉಗುರು ಶೋಭಿಸುತ್ತಾ ಇತ್ತು!).

ಉಗುರನ್ನು ಚಂದ್ರನಿಗೆ(ಅರ್ಧಚಂದ್ರ!) ಹೋಲಿಸಿರುವುದು ಮೊದಲ ವಿಶೇಷ. ರಾಜರ ಕಿರೀಟಗಳಲ್ಲಿ ಇರುವ ರತ್ನದ ಹರಳುಗಳನ್ನು ಚಂದ್ರನನ್ನು ಸುತ್ತುವರೆದ ನಕ್ಷತ್ರಗಳಿಗೆ ಹೋಲಿಸಿರುವುದು ಎರಡನೆಯ ವಿಶೇಷ.  ಕೃಷ್ಣನ ಶ್ಯಾಮಲವರ್ಣದ ಪಾದವು ಇರುಳ ಕಡುನೀಲಿಯ ಆಕಾಶವನ್ನು ವ್ಯಂಜಿಸುವುದು ಮೂರನೇ ವಿಶೇಷ.

ಆ ಪಾದವು ಆಕಾಶವನ್ನು ಅಳೆಯಲಿಕ್ಕಾಗಿ ಮೇಲೆತ್ತಿ ಸಮಸ್ತ ಊರ್ಧ್ವಲೋಕವನ್ನೇ ವ್ಯಾಪಿಸಿದ್ದಲ್ಲವೇ! ಆಕಾಶದಲ್ಲಿ ಆ ಪಾದವು ಸ್ಥಾಪಿತವಾಗುವುದು ತೀರ ಸಹಜವಾಗಿದೆ! ಈಗ ಒಟ್ಟಾರೆ ಕೃಷ್ಣನ ಶ್ಯಾಮಲವರ್ಣದ  ಪಾದ, ಅಲ್ಲಿ ಕಾಣುವ ಅರ್ಧಚಂದ್ರನಂತಿರುವ ಬೆಳ್ಳನೆಯ ಉಗುರು, ಆ ಪಾದದ  ಸುತ್ತಾ ಹೊಳೆಯುತ್ತಿರುವ ರಾಜರುಗಳ ಕಿರೀಟದ ರತ್ನಗಳು ಇವೆಲ್ಲವನ್ನೂ ಗ್ರಹಿಸಿದಾಗ ಆಗುವ ಮಹಾನುಭವವು ಅಸಾಮಾನ್ಯವಾದುದು. (ಇಂಥ ಉಂಗುಟದ ತುದಿಯಿಂದ ಧಾರುಣಿಯನ್ನು ನಗುತ್ತಾ ಕೃಷ್ಣನು ಒತ್ತಿದಾಗ ದುರ್ಯೋಧನನ ಮಣಿಖಚಿತ ಕಾಂಚನದ ಪೀಠದ ಗೊಣಸು ಮುರಿದುದುದರಲ್ಲಿ ಏನು ಆಶ್ಚರ್ಯ!?).

ಒಂದು ಹೋಲಿಕೆ, ಮತ್ತೊಂದು ಹೋಲಿಕೆಗೆ ದಾರಿಮಾಡಿಕೊಡುತ್ತಾ, ಆ ಹೋಲಿಕೆ ಮತ್ತೊಂದು ಹೋಲಿಕೆಗೆ ದಾರಿಮಾಡಿಕೊಡುತ್ತಾ , ಮೂರನೆಯ ಹೋಲಿಕೆಯು ಹೇಳದೆಯೂ ಧ್ವನಿತವಾಗುತ್ತಾ ಒಂದು ಸಬ್ಲೈಮ್ ಅನ್ನಬಹುದಾದ ಅನುಭೂತಿಯನ್ನು ಸಹೃದಯರ ಗ್ರಹಿಕೆಗೆ ತರುತ್ತದೆ. ಇದು ಕಾವ್ಯ.

16dbe5bddf3e8d7a0e6d7853027fbbeaಅದು ಕಥನವನ್ನು ಒಳಗೊಂಡೂ ಅದನ್ನು ಮೀರಿದ್ದು. ಅಲಂಕಾರಗಳನ್ನು ಒಳಗೊಂಡೂ ಅದನ್ನು ಮೀರಿದ್ದು. ಶಬ್ದವ್ಯಾಪಾರವನ್ನು ಒಳಗೊಂಡೂ ಅದನ್ನು ಮೀರಿ ನಿಶ್ಶಬ್ದದ ಮೌನವಲಯಕ್ಕೆ ಕೈಚಾಚಿದ್ದು!

ಕೃಷ್ಣನ ದೈವಿಕತೆಯನ್ನು ವರ್ಣಿಸುವ ಈ ಪದ್ಯವು, ಹಿಂದೆ ಬರುವ ದೇವ ಬಂದನು ಎಂದು ಜಪಜಪಿಸುವ ಹತ್ತಾರು ಪದ್ಯಗಳು ಮಾಡಲಾರದ ಪರಿಣಾಮವನ್ನು ಒಂದು ಕಾವ್ಯಚೇಷ್ಟೆಯಿಂದ  ಮಾಡಿಬಿಡುತ್ತದಲ್ಲ! ಕಥೆ ಹೇಳಿಕೊಂಡುಹೋಗುವವರು ಈ ಸ್ಥಿರಚಿತ್ರಿಕೆಯ  ಅದ್ಭುತವಾದ ಚೆಲುವನ್ನು ಗ್ರಹಿಸಲಾರರು. ಅಲಂಕಾರಕ್ಕೆ ಬೆರಗಾಗುವ ಮಂದಿ ಅಲಂಕಾರವನ್ನು ದಾಟಿ ಧ್ವನಿಯತ್ತ ತಮ್ಮ ಕಲ್ಪಕತೆಯನ್ನು ಹರಿಸಲಾರರು.

ಇಲ್ಲಿನ ಚೆಲುವಿನ ಗ್ರಹಿಕೆಗೆ ಬೇಕಾದದು ನಿತಾಂತವಾದ ಕಾವ್ಯಧ್ಯಾನ; ಕವಿಗೆ ಸಮಾನವಾದ ಕಲ್ಪಕತೆಯ ಉಡ್ಡಯಣ. ಅವಸರದ ಓದಿಗೆ ಇದು ದಕ್ಕುವಂಥದಲ್ಲ. ರವಿಯ ಕಿರಣ ತಾವರೆ ಹೂವಿನ ಬಾಗಿಲನ್ನು ಎಷ್ಟು ಸೂಕ್ಷ್ಮವಾಗಿ, ಎಷ್ಟು ಅಹಿಂಸಕವಾಗಿ, ಎಷ್ಟು ನವುರಾಗಿ ತೆರೆಯುತ್ತದೆ ಎಂಬುದನ್ನು ಕಲ್ಪಿಸಿ! ಇಲ್ಲಿ ಆಗಬೇಕಾದದು ಅಂತಹ ಸಹೃದಯ ವ್ಯಾಪಾರ!

ಸುಮಕೆ ಸೌರಭ ಬಂದ ಗಳಿಗೆ ಯಾವುದು ಗೆಳೆಯ?! ಎಂದು ಆಧುನಿಕ ಕವಿ ಒಬ್ಬರು ಉದ್ಗಾರವೆತ್ತಿದ್ದಾರೆ. ಸುಮಕೆ ಸೌರಭ ಬಂದ ಗಳಿಗೆ ಇದು. “ತಾವರೆಯ ಬಾಗಿಲು” ಎಂಬ ಈ ಅಂಕಣದಲ್ಲಿ ನಾನು ಕೈಗೊಂಡಿರುವುದಾದರೂ ಅಂತಹ ಅಹಿಂಸಾಯೋಗವನ್ನು. ಕಿರಣದ ಬಿಸುಪು, ಕಿರಣದ ನಯ, ಕಿರಣದ ಕೌತುಕ ತಾವರೆಯ ಬಾಗಿಲ ಬೀಯಗವ ಹೂವಿಗೆ ಘಾಸಿಯಾಗದಂತೆ ತೆರೆಯಲಿ ಎಂಬುದೊಂದೇ ನನ್ನ ಕಳಕಳಿಯ ಬಿನ್ನಪ…..

ಪದ್ಯದ ಪೂರ್ಣಪಾಠ:
ಬರಲು ಮುರಹರನಿದಿರುವಂದರು
ಗುರು ನದೀಜ ದ್ರೋಣ ಗೌತಮ
ಗುರುಸುತಾದಿ ಸಮಸ್ತ ಭೂಪ ಚಮೂಹ ಸಂದೋಹ|
ಚರಣದಲಿ ಚಾಚಿದರು ಭೂಮೀ-
ಶ್ವರರು ಮಕುಟವನಂತತಾರಾ
ಪರಿವೃತೇಂದುವಿನಂತೆ ಮೆರೆದುದು ಹರಿಯ ಪದನಖವು||
ವಿಶ್ವವಾಣಿಯಲ್ಲಿ ಇದು ಮೊದಲು ಪ್ರಕಟಗೊಂಡಿತ್ತು

‍ಲೇಖಕರು Admin

15 September, 2016

9 Comments

  1. kvtirumalesh

    ಪ್ರಿಯ ಎಚ್.ಎಸ್.ವಿ.
    ನಿಮ್ಮ ಸೊಗಸಾದ ಲೇಖನವನ್ನು ಓದಿ ಖುಷಿಯಾಯಿತು.
    ಇನ್ನು ಮುಂದೆ ನೀವಿಲ್ಲಿ ಕಾಣಿಸಿಕೊಳ್ಳುತ್ತೀರಿ ಎನ್ನುವುದೇ ಕವಿತಾಪ್ರಿಯರಿಗೆ ಒಂದು ಸಾಂತ್ವನ.

    ಕೆ.ವಿ.ತಿರುಮಲೇಶ್

    • ಎಚ್.ಎಸ್.ವೆಂಕಟೇಶಮೂರ್ತಿ

      ಪ್ರಿಯ ತಿರುಮಲೇಶ್
      ನಿಮ್ಮ ಸ್ಪಂದನ ಯಾವಾಗಲೂ ನನ್ನ ಬರೆಯುವ ಉತ್ಸಾಹವನ್ನು ಹೆಚ್ಚಿಸುವುದು. ತುಂಬ ಆಭಾರಿ. ಹಾಗೇ ವಿಜಯಲಕ್ಷ್ಮಿ ಅವರಿಗೂ thanks.
      ಎಚ್ಚೆಸ್ವಿ

  2. s.p.vijayalakshmi

    ತಾವರೆಯ ಬಾಗಿಲು ತೆರೆದ ಪರಿಯನ್ನು , ಶ್ಯಾಮಲಾಕೃಷ್ಣನ ನಖದ ವರ್ಣನೆಯನ್ನು ಓದುತ್ತಾ ನಾನು ಕಳೆದೇಹೋಗಿಬಿಟ್ಟೆ . ಈ ರಸಾನುಭವದಲ್ಲಿ ಮುಳುಗಿಸಿದ್ದೇ ಕಾವ್ಯಗುಣವಲ್ಲವೇ …ಆಹಾ, ಎಷ್ಟು ಮನೋಹರವಾದ ಲೇಖನ . ಏಚ್ . ಎಸ್. ವಿ. ಯವರ ಅಂಕಣ ಶುರುವಾದದ್ದು ನಮ್ಮ ಭಾಗ್ಯ .
    ಅವಧಿ ಧನ್ಯವಾದಗಳು. ….

  3. Sathyakama Sharma Kasaragodu

    ತಿರುಮಲೇಶ ಅವರ ಮಾತು ಸತ್ಯ. ಒಂದು ಕಲಾಕೃತಿಯನ್ನು ಹಲವು ದೃಷ್ಟಿಕೋನಗಳಿಂದ ನೋಡುವಂತೆ ಕವಿತೆಯನ್ನು ಕೂಡಾ ಪದೇ ಪದೇ ಓದಿ ಗ್ರಹಿಸುವ ವಿಧಾನವನ್ನು ಅವರು ಈ ಅಂಕಣದಲ್ಲಿ ಸರಳವಾಗಿ ವಿವರಿಸಿ ಹೇಳಿದ್ದಾರೆ. ಅವರಿಗೆ ಮತ್ತು ಅವಧಿಗೆ ಧನ್ಯವಾದಗಳು. ಹಾಗೇನೇ ನಾವು ತಿರುಮಲೇಶರ ಅಂಕಣವನ್ನು ಮಿಸ್ ಮಾಡುತ್ತಿದ್ದೇವೆ. ಒಂದು ವಿಶ್ವಕೋಶದ ಹಾಗೆ ಯಾವುದೇ ವಸ್ತುವಿನ ಮೇಲೂ ಅವರು ಬರೆಯುತ್ತಿದ್ದ ಪಾಂಡಿತ್ಯಪೂರ್ಣ ಬರಹಗಳಿಗಾಗಿ ನಾನು ವಿಜಯ ಕರ್ನಾಟಕದ ಶುಕ್ರವಾರದ ಆವೃತ್ತಿಯನ್ನು ಎದುರು ನೋಡುತ್ತಿದ್ದೆ.

  4. Sarojini Padasalagi

    ಕಾವ್ಯದ ಬಗ್ಗೆ ಎಚ್ ಎಸ್ ವೆಂಕಟೇಶ್ ಮೂರ್ತಿಯವರ ಲೇಖನ ಅಮೂಲ್ಯ .ಕಾವ್ಯವೆಂದರೆ ಬೊಟ್ಟಿಟ್ಟು ತೋರಲಾಗದ ಅನುಭೂತಿ. ಎಂದು ಹೇಳುತ್ತ ,ಅದನ್ನು ಗ್ರಹಿಸುವ ರೀತಿಯನ್ನೂ ಸುಂದರವಾಗಿ ತಿಳಿಯಪಡಿಸಿದ್ದಾರೆ .ನಿಜಕ್ಕೂ ಕಾವ್ಯ ಗ್ರಹಣಕ್ಕೆ ನಿತಾಂತ ಶಾಂತತೆ ,ಕಾಲ್ಪನಿಕತೆ ಬೇಕೇಬೇಕು ,ನನ್ನ ಅನುಭವ‌ .ತಾವರೆಯ ಬಾಗಿಲು ರವಿ ಕಿರಣ ತೆಗೆಯುವಾಗಿನ ನವಿರತೆ ,ಸೂಕ್ಷತೆಯ ವ್ಯಾಪಾರ ಅಂತ ಅವರು ಹೇಳುವದು ಮನ ಸೂರೆಗೊಳ್ಳತ್ತದೆ . ಎಚ್ ಎಸ್ ವಿ ಯವರಂಥ ಅದ್ಭುತ ಕವಿಯ ಲೇಖನಗಳನ್ನೋದುವ ಅವಕಾಶ ದೊರಕಿಸಿಕೊಟ್ಟ .ಅವಧಿ ಗೂ ಇಂತಹ ವಿಶಿಷ್ಟ ಲೇಖನಗಳನ್ನು ನೀಡುತ್ತಿರುವ ವೆಂಕಟೇಶ್ ಮೂರ್ತಿಯವರಿಗೂ ಅನೇಕ ಧನ್ಯವಾದಗಳು.

  5. `ಶ್ರೀ' ತಲಗೇರಿ

    ಶ್ರೀಯುತರ ಅಂಕಣವನ್ನ ಓದುವ ಸೌಭಾಗ್ಯ ನಮ್ಮದಾಗುತ್ತಿರುವುದು ತುಂಬಾ ಖುಷಿಯ ಸಂಗತಿ 🙂 ಕಾವ್ಯ ಅನ್ನೋದು ಪರಿಪೂರ್ಣತೆಯ ಶೂನ್ಯ… ! ಕೆಲವೊಮ್ಮೆ ಸರ್ವಗುಣ ಸಂಪನ್ನವಾಗಿ, ಇನ್ನು ಕೆಲವೊಮ್ಮೆ ನಿರಾಕಾರ ನಿರ್ಗುಣವಾಗಿಯೂ ಅದು ಕೊಡುವ ಅನುಭೂತಿ ಒಳಗಿನ ಆನಂದಕ್ಕೆ ಧಾತುವಾಗುವಿಕೆಯ ಚೆಂದವನ್ನ ಅನುಭವಿಸಬೇಕು 🙂 ಕಾವ್ಯ ಒಳಗಿನದು 🙂 🙂 🙂 ಶ್ರೀ ಎಚ್ಚೆಸ್ವಿ ಅವರ ಬರಹಗಳನ್ನು ಓದುವ ಸಂಭ್ರಮವೇ ಬೇರೆ… 🙂 🙂 🙂

  6. C. N. Ramachandran

    ಪ್ರಿಯ ಎಚ್ ಎಸ್ ವಿ: ’ತಾವರೆ’ಯ ಮುಂಬಾಗಿಲು ತುಂಬಾ ಆಕರ್ಷಕವಾಗಿದೆ; ಇನ್ನು ಒಳಹೊಕ್ಕರೆ ಮತ್ತೆಷ್ಟು ಬಾಗಿಲುಗಳು, ಮತ್ತೆಷ್ಟು ವರ್ಣಮಯ ಚಿತ್ರಗಳು ಎಂಬಂತಹ ಕುತೂಹಲ ಕಾಡುತ್ತದೆ. ಶ್ರೇಷ್ಠ ಕಾವ್ಯದ ಸೌಂದರ್ಯವನ್ನರಿತ ನಂತರವೇ ತಾವು ಅರೆಯಾದುವು; ಅಂತಹ ತಾವರೆಯ ಸಹಸ್ರ ದಳಗಳನ್ನು ಬಿಡಿಸಿಡಿ; ನಾವೂ ನೋಡಿ ಆನಂದಿಸುತ್ತೇವೆ. ರಾಮಚಂದ್ರನ್

    • ಎಚ್.ಎಸ್.ವೆಂಕಟೇಶಮೂರ್ತಿ

      Thanks to Dr CNR and all other friends.

  7. Devika

    Kavyada vidyarthi namsge nimma ashivadavirali sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading