ಎಚ್ ಆರ್ ಲೀಲಾವತಿ
ಊರ ಸುತ್ತಿ ಬರುವ ಉಮೇದು
ಹೊರಟೆ ಹಾಗೇ ಸುಮ್ಮನೆ
ದಾರಿ ಸವೆಸುತ್ತ ಒಬ್ಬಂಟಿ
ನಡೆದೂ ನಡೆದೂ ನಡೆದೂ
ದಣಿದ ದೇಹಕ್ಕೆ ನೆಲೆಯ ಹುಡುಕಾಟ
ದೂರದಲ್ಲೊಂದು ಮುಚ್ಚಿದ ಬಾಗಿಲು
ಬಳಿ ಸಾರಿದರೆ ಅಯೋಮಯ
ಗೋಡೆಗಳೇ ಇಲ್ಲ
ನೀರಡಿಕೆಯಲಿ ಬಳಲಿ ಕಣ್ಣು ಹಾಯಿಸಿರೆ
ತುಂಬಿ ಹರಿಯುವ ನದಿ
ಆಸೆಯಿಂದ ಬಳಿಗೋಡಿದರೆ
ಬಟಾ ಬಯಲು
ಪಕ್ಕದಲಿ ಹೂವುಗಳು ನಕ್ಕಂತೆ
ಕೋಪದಲಿ ಹೂವುಗಳ ಕಿತ್ತೆಸೆಯಲು ಕೈ ಎತ್ತಿದರೆ

ಖಾಲಿ ಖಾಲಿ
ಅಗೋ ಅಲ್ಲಿ
ಗೋಲಿ ಆಡುವ ಮಕ್ಕಳ ಗುಂಪು
ಎಳೆತನದ ನೆನಪಿನಲಿ
ಮಗುವಾಗಿ ಬಳಿ ಸಾರಿದರೆ
ಮಕ್ಕಳು ,ಗೋಲಿ ,ಕನಸೇ
ಒಮ್ಮೆ ಹಿಂತಿರುಗಿ ನೋಡಿದೆ
ಕಾಳರಾತ್ರಿ ಕತ್ತಲಲ್ಲಿ
ನನ್ನ ನೆರಳಿಗೆ
ರಾಹು ಬಡಿದಿತ್ತು.






0 Comments