ಎಚ್ ಆರ್ ರಮೇಶ
ಹಿಂಸೆ ಕಲಾತ್ಮಕವಾದ
ಮೆರುಗಿನಲಿ ಮಿಂಚುತಿದೆ
ಕರುಣೆಯ ಪೀಠದಲ್ಲಿ ಧರ್ಮವಿಲ್ಲದ ಧರ್ಮ,
ತಪ್ಪನೆಸಗಿ ಮಣ್ಣಾಗಿರುವವರ
ಇತಿಹಾಸದೊಳಗೆ ತೂರಿ
ಹತಾರಗಳ ಹೊಳಪಿನಲಿ ಮಸೆದುಕೊಂಡು
ಹೊರ ತೆಗೆದು
ಮತ್ತೆ ಶವ ಪರೀಕ್ಷೆ;
ವರ್ತಮಾನದಲ್ಲಿ ಇತಿಹಾಸ,
ಕೊಳೆತ ನಾತ,
ಬಿರಿದು ಮೊಗ್ಗು ಸೂಸುತ್ತಿದ್ದರೂ ಪರಿಮಳವ
ಸುಮದ ಸೌರಭ ಕಾಣುತ್ತಿಲ್ಲ,

ಬಗೆದು ವರ್ತಮಾನದ ಮೆದುಳನ್ನು ತುಂಬಲಾಗುತ್ತಿದೆ ಭೂತವನು;
ವರ್ತಮಾನದ ಹಾದಿಗೆ
ಜಡಿದು ಬೀಗ
ಪಹರೆ,
ಹಿಚುಕುತ್ತಿದೆ ಭೂತ ಕನಸುಗಳ ಕತ್ತನು,
ಮತವು
ಮತಿಯ ಕೆಡಿಸಿ ಹಿಡಿಸಿದೆ ಹುಚ್ಚು
ವರ್ತಮಾನಕ್ಕೆ,
ಧರ್ಮವಿಲ್ಲದ ಧರ್ಮ
ಮತ,
ಅದರ ಅತ್ತರು ಉಸಿರಲ್ಲಿ,
ಮತ್ತು ಶಾಯಿಯಲ್ಲೂ.






0 Comments