ಎಚ್.ಆರ್. ರಮೇಶ
ಕತೆಯನ್ನು ಹುಡುಕಿಕೊಂಡು ಹೊರಟ ಅವನಿಗೆ ಎದುರಿಗೆ ಅವನ ಸ್ನೇಹಿತ ಗುಣ್ಣಯ್ಯ ಬಂದ. ಬಂದವನು, ‘ರಾಜಿ ಇವೊತ್ತು ನಮ್ಮ ಮನೆಗೆ ಬಂದು ಇತ್ಯರ್ಥ ಮಾಡಿಕೊಡಲೇ ಬೇಕು. ಸಾಕಾಗಿದೆ. ಹೊಲ ನೋಡಿಕೆಬೇಕ, ಇವಳ ಪುರಾಣ ಕೇಳ್ತಾ ಕುಕ್ಕಬೇಕ. ಸಾಕಾಗೇತೆ ಮಾರಾಯ’ ಎಂದು ಅವನ ಅಡ್ಡ ಗಟ್ಟಿದ. ಅದಕ್ಕೆ ‘ನಿಮ್ಮದು ಯಾವೊತ್ತು ಇದೇ ರಾಮಾಯಣ. ಹೇಳಿ ಹೇಳಿ ಸಾಕಾಗಿದೆ. ಫೋನ್ ನಲ್ಲಿ ಎಷ್ಟು ಸಲ ಮಾತಾಡಿಲ್ಲ ಇದರ ಬಗ್ಗೆ. ತಿಳಿದಂತವನಾಗಿ ನೀನೆ ಹೀಗೆ ಮಾಡಿದರೆ ಹೇಗೆ ಹೇಳು’ ಅಂದ ಗುಣ್ಣಯ್ಯನ ಸ್ನೇಹಿತ ಕಾಂತರಾಜ. ಕಾಂತರಾಜನಿಗೆ ತಕ್ಷಣಕ್ಕೆ ಒಂದು ಲೆಮನ್ ಟೀ ಕುಡಿಯಬೇಕೆನ್ನಿಸಿತ್ತು. ರಾತ್ರೆಯೇ ನಿಂಬೆಹಣ್ಣುಗಳು ಮುಗಿದ್ದಿದು, ಮನೆಯ ಮುಂದಿನ ನಿಂಬೆಗಿಡದಲ್ಲಿದ್ದಂತಹವುಗಳು ಇನ್ನೂ ಎಳೆಯವು ಆಗಿದ್ದುದರಿಂದ ಕಾಂತರಾಜ ಹತ್ತಿರದ ಟಿಬೇಟಿಯನ್ ಕ್ಯಾಂಪಿನ ಹತ್ತಿರ ಲೆಮನ್ ಟೀಯನ್ನು ಹೀರುತ್ತ ಅಲ್ಲಿ ಹೊರ ದೇಶದಿಂದ, ಹೊರ ರಾಜ್ಯಗಳಿಂದ ಹೊರ ಜಿಲ್ಲೆಗಳಿಂದ ಬಂದ ಪ್ರವಾಸಿಗರ ಮಾತುಗಳನ್ನು, ಅವರ ಚಟುವಟಿಕೆಗಳನ್ನು ನೋಡುತ್ತ ಸುಮ್ಮನೆ ಒಂಟಿಯಾಗಿ ತಿರುಗಾಡುತ್ತ ಏನಾದರು ರಾತ್ರಿ ನಿಲ್ಲಿಸಿದ ತನ್ನ ಕತೆಗೆ ಮುಂದಿನ ಕೊಂಡಿ ಸಿಗಬಹುದು ಎನ್ನುವ ಭರವಸೆಯನ್ನು ಇಟ್ಟುಕೊಂಡು ಹೊರಟಿದ್ದ. ಹೀಗೆ ಹೊರಟವನನ್ನು ಬಸ್ ನಿಲ್ದಾಣದ ಹತ್ತಿರದಲ್ಲಿನ ಹೂವಿನ ಪೇಶಮ್ಮನ ಅಂಗಡಿಯ ಬಳಿ ಅವನ ಸ್ನೇಹಿತ ಗುಣ್ಣಯ್ಯ ಎದುರಾಗಿ ಅವನ ಮನೆಗೆ ಬಂದು ಅವನ ಮತ್ತು ಅವನ ಹೆಂಡತಿಯ ನಡುವಿನ ಜಗಳಕ್ಕೆ ಒಂದು ಇತ್ಯರ್ಥ ಮಾಡಿಕೊಡಬೇಕೆಂದು ಗೋಗರೆದಿದ್ದ. ಇವರಿಬ್ಬರು ಬಾಲ್ಯಕಾಲದ ಸ್ನೇಹಿತರಾಗಿದ್ದುದರಿಂದ ಇಬ್ಬರ ಮನೆಯಲ್ಲಿ ನಡೆಯುತ್ತಿದ್ದ ಎಲ್ಲ ವಿಚಾರಗಳು ಇಬ್ಬರಿಗೂ ಚೆನ್ನಾಗಿಯೇ ಗೊತ್ತಿದ್ದವು. ಕಾಂತರಾಜ ಸಿಕ್ಕ ಸರ್ಕಾರಿ ಕೆಲಸವನ್ನು ತ್ಯಜಿಸಿ, ಎರಡು ಎಕರೆ ಹೊಲವನ್ನು
ಕೊಂಡು, ಬಯಲ ಸೀಮೆಯಲ್ಲಿನ ಆ ಎರಡು ಎಕರೆಗಳಲ್ಲಿ ಒಂದು ಎಕರೆಗೆ ರೇಡಿಯೋದ ರೈತಮಿತ್ರ ಕಾರ್ಯಕ್ರಮದಲ್ಲಿ ಬಿತ್ತರಗೊಂಡ ಒಂದು ಕಾರ್ಯಕ್ರಮವನ್ನು ಕೇಳಿ, ಅದರಿಂದ ಪ್ರೇರೇಪಿತಗೊಂಡು ಪ್ರಾಯೋಗಿಕವಾಗಿ ಬಯಲ ಸೀಮೆಯಲ್ಲಿ ಗೋಡಂಬಿ ಗಿಡಗಳನ್ನು ಮತ್ತೊಂದು ಎಕರೆಗೆ ಹುಣಸೆಗಿಡಗಳನ್ನು ನೆಟ್ಟು, ನಡುವೆ ಹೂವು ತರಕಾರಿಗಳನ್ನು ಬೆಳೆಯುತ್ತ ಸದ್ಯಕ್ಕೆ ಕತೆ, ಕವನ ಬರೆದುಕೊಂಡು, ಅವುಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿಕೊಂಡು ಜೀವನ ಸಾಗಿಸುತ್ತಿದ್ದ. ಅವನಿಗೆ ಮದುವೆ ಫಿಕ್ಸ್ ಆಗಿ, ಎಂಗೇಜ್ ಮೆಂಟ್ ದಿನವೇ ಅವನು ಮದುವೆ ಆಗಬೇಕಿದ್ದ ಹುಡುಗಿಗೆ ಮನೆಯಲ್ಲಿ ಕರೆಂಟ್ ಶಾಕ್ ಹೊಡೆದು ಸತ್ತು ಹೋಗಿದ್ದುದರಿಂದ, ಕಾಂತರಾಜ ಮತ್ತೆ ಮದುವೆಯ ಯೋಚನೆಯನ್ನು ಕೈಬಿಟ್ಟಿದ್ದ. ಅವನ ಅಪ್ಪ ಅಮ್ಮ ಎಷ್ಟೇ ಮನವೊಲಿಸಿದ್ದರೂ ಯಾವುದಕ್ಕೂ ಬಗ್ಗದೆ ತನ್ನ ಪಾಡಿಗೆ ತಾನು ಹೊಲದಲ್ಲಿ ಗುಡಿಸಲನ್ನು ಕಟ್ಟಿಕೊಂಡು ಆನ್ ಲೈನ್ನಲ್ಲಿ ಪುಸ್ತಕಗಳನ್ನು ತರಿಸಿಕೊಂಡು ಪುಸ್ತಕಗಳನ್ನು ಓದುತ್ತ, ಜಗತ್ತಿನ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ಓದುತ್ತಾ, ಹೊಲವನ್ನು ಹಸನು ಮಾಡಿಕೊಂಡು ತನ್ನ ಪಾಡಿಗೆ ತಾನು ಇದ್ದನು. ಜೊತೆಗೆ ಹಿಂಭಾಗದ ಸೀಟಿಲ್ಲದ ಎನ್ಫೀಲ್ಡ್ ಇಟ್ಟುಕೊಂಡು ಎಲ್ಲಿಗಾದರೂ ಹೋಗಬೇಕೆಂದಲ್ಲಿ ಅದರಲ್ಲಿ ಒಬ್ಬನೇ ಹೋಗುವನು. ಹಿಂಭಾಗದ ಸೀಟಿಲ್ಲದ ಕಾರಣ ಅವನನ್ನು ಯಾರೂ ಡ್ರಾಪ್ ಕೇಳುತ್ತಿರಲಿಲ್ಲ.
‘ಇಲ್ಲೋಡು ಫ್ರೆಂಡು ನಾವಿಬ್ಬರೂ ಎಷ್ಟೇ ಕ್ಲೋಸ್ ಫ್ರೆಂಡ್ಸ್ ಆಗಿದ್ದರೂ ಫ್ಯಾಮಿಲಿ ವಿಷಯದಲ್ಲಿ ಇಂಟರ್ಫಿಯರ್ ಆಗಬಾರದು, ಅದು ಚೆನ್ನಾಗಿ ಕಾಣಲ್ಲ’ ಎಂದ. ‘ಅರೆ ಇದೊಳ್ಳೆ ಕತೆ ಆಯ್ತಲ್ಲ, ನಮ್ಮಂತ ಬಡಪಾಯಿಗಳನ್ನು ಯಾರು ಕಾಪಾಡಬೇಕು. ಸುಮ್ಮನೆ ಡವ್ ಹೊಡಿಬೇಡ. ಸುಮ್ಮನೆ ಬಾ’ ಎಂದು, ಅವನು ಬರಲೇ ಬೇಕು ಎಂಬ ಧೋರಣೆಯಿಟ್ಟುಕೊಂಡು ಒತ್ತಾಯ ಮಾಡಿದ. ‘ಅಲ್ಲಯ್ಯ ಇನ್ನೇನು ಇರುತ್ತೆ, ನನ್ನೆಣ್ತಿ ಬರೆ ತವರುಮನಿಗೆ ಹೋಗಾಕೆ ಸಾಯ್ತಾಳೆ, ಇಲ್ಲ, ಗುಡಿಹಿಂದ್ಲರ ಮಲ್ಲಯ್ಯನ ಜೊತೆ ಮಾತಾಡ್ತಾಳೆ, ಅಥವಾ ನೀನು ಯಾಕೆ ಲೇಟಾಗಿ ಬಂದೆ ಎಲ್ಲಿಗೆ ಹೋಗಿದ್ದೆ ಅಂಥ ದಿನಾ ಟಾರ್ಚರ್ ಕೊಡ್ತಾಳೆ ಇವೆ ತಾನೆ ನಿನ್ನ ಕಂಪ್ಲೆಂಟ್?’ ಎಂದು ವ್ಯಂಗ್ಯಮಾಡಿ ಹೇಳಿದ. ಅದಕ್ಕೆ ಕಾಂತರಾಜ ಅಲಿಯಾಸ್ ರಾಜಿ ‘ಅವ್ಯಾವು ಅಲ್ಲ ಮಾರಾಯ. ಅವು ಎಂದೂ ಬಗೆ ಹರೆಯೊಲ್ಲ’ ಎಂದ.
‘ಮತ್ತೇನ್ನೇನಪ್ಪ?’
‘ಕನಸಲ್ಲೆ ಕನ್ನಡಿ ಕಾಮುತ್ತಂತೆ, ಅದರಾಗೆ ಬೆಂಕಿ ಉರಿಯುತ್ತಂತೆ. ನಮ್ಮ ರಾಗಿ ಹೊಲೆಲ್ಲ ಹತ್ತಿಕಂಡು ಉರಿಯುತ್ತಂತೆ’.
‘ಇದು ಯಾವನಾದರು ಫ್ಯಾಮಿಲಿ ಪ್ರಾಬ್ಲಮ್ ಅಂತಾನ ಹೇಳು’
‘ಲೋ ರಾಜಿ ಅಷ್ಟೇ ಅಲ್ಲ, ನಮ್ಮ ಮನೇಲೆ ದೆವ್ವಗಳಿದ್ದಾವೆ. ನನ್ನೊಳಗೂ ದೆವ್ವ ಇದಾವೆ ಅಂತಾಳೆ. ಅಲ್ಲದೆ ದಿನಕ್ಕೊಂದು ಕನಸು. ನನಿಗಂತು ದಿನಾ ಕೇಳಿ ಕೇಳಿ ಸಾಕಾಗಿದೆ’.
‘ಇದ್ಯಾವುದೋ ಹೊಸ ಥರ! ನಾನು ಎಲ್ಲಿ ಕೇಳಿಲ್ಲಪ್ಪ! ನನ್ನೊಳಗೆ ದೆವ್ವ ಇದೆ ಅಂತ ಹೇಳಕೊಂಡು ಅಡ್ಡಾಡವರನ್ನ.’
‘ಡಾಕ್ಟ್ರಿಗೆ ತೋರಿಸದರೆ ಸರಿಯಾಗುತ್ತೆ. ಅದ್ಯಾವ ವಿಷಯ ಅಂತ ಹೇಳ್ತಿದಿಯೋ. ಅಲ್ಲದೆ, ಇಂತ ವಿಷಯಗಳನ್ನು ನಾನು ಹೇಗೆ ಸಾಲ್ವು ಮಾಡಲಿ ಹೇಳು, ನೀನೆನೆ?’ಅಂದ ಕಾಂತರಾಜ.
ಅರೆ ಮನಸ್ಸಿನಲ್ಲಿ ತನ್ನ ಸ್ನೇಹಿತ ಗುಣ್ಣಯ್ಯನ ಜೊತೆ ಮಾತಾಡಿದ ಕಾಂತರಾಜ, ಸಾಯಂಕಾಲ ಮತ್ತೆ ಸಿಗುತ್ತೇನೆ ಮನೆಯ ಹತ್ತಿರ ಕೂತು ಮಾತಾಡೋಣ, ಈಗ ಅರ್ಜೆಂಟ್ ಎಲ್ಲಿಗೋ ಹೋಗಬೇಕು ಎಂದು ಗುಂಪು ಗುಂಪಾಗಿ ಬೆಳಿದಿರುವ ಆಲದ ಮರಗಳ ದಾಟಿಕೊಂಡು ಹೊರಟ. ಸ್ಮಶಾನ ಮೌನವನ್ನು ಆವರಿಸಿಕೊಂಡಿರುವ ಆಲದ ಮರಗಳ ನೆರಳು ಎಂತವರನ್ನು ಕ್ಷಣ ಒಬ್ಬಂಟಿಯಾಗಿ ಹೋಗುವಾಗ ಜೀವ ಡವಗುಡುವಂತೆ ಮಾಡುತ್ತದೆ. ಮೌನವನ್ನು ತನ್ನ ಬುಲೆಟ್ ಸದ್ದಿನಲ್ಲಿ ಸೀಳಿಕೊಂಡು ನೇರ ಟಿಬೇಟಿಯನ್ ಕ್ಯಾಂಪಿನ ಬಳಿ ಬಂದ. ಬಂದವನೆ ಒಂದು ಸ್ಟ್ರಾಂಗ್ ಲೆಮನ್ ಟಿಯನ್ನು ಆರ್ಡರ್ ಮಾಡಿದ ಹೋಟೆಲ್ ಒಂದರಲ್ಲಿ ಕುಳಿತು. ಐದು ನಿಮಷದ ಬಳಿಕ ಅವನಿಗೆ ಲೆಮನ್ ಟೀಯನ್ನು ಕುಳ್ಳನೆ ದೇಹದ ಹೂವುಗಳ ಚಿತ್ರಗಳಿರುವ ಸ್ಕರ್ಟ್ನ್ನು ತೊಟ್ಟುಕೊಂಡ ನುಣುಪಾದ ಮೀನುಖಂಡಗಳ, ಚಪ್ಪಟೆ ಮೂಗಿನ ಆನೆ ಕಣ್ಣುಗಳಂತೆ ಚಿಕ್ಕದಾಗಿರುವ ತುಂಬಾ ಲವಲವಿಕೆಯಿಂದ ಇರುವ ಒಬ್ಬ ತರುಣಿ ಅವನ ಟೇಬಲ್ಲಿನ ಮೇಲೆ ಇಟ್ಟು ಹೋದಳು. ಕನ್ನಡಿಯಂತೆ ಹೊಳೆವ ಅವಳ ದೇಹ, ಸೂರ್ಯನ ಬೆಳಕಿಗೆ ನೆಲದ ಮೇಲೆ ಬಿದ್ದಿರುವ ಅವಳ ಕಪ್ಪು ನೆರಳು. ಅವಳ ಜೊತೆ ಅವಳ ನೆರಳು ಸರಿಯಿತು. ಕ್ಷಣ ಲೆಮನ್ ಟೀಯನ್ನು ನೋಡಿದ. ಜೀನಿನ ಬಣ್ಣದ ನಿಂಬೆ ಹಣ್ಣಿನ ಟೀ. ಗ್ಲಾಸಿನ ತುಂಬ ತುಂಬಿಕೊಂಡಿದೆ. ಅದರ ಮೇಲೆ ಎರಡು ಎಸಳು ಪುದೀನ ಎಲೆಗಳು. ತೇಲುತ್ತಿದ್ದಾವೆ. ಎಲೆ ಯಾಕೋ ಅವನನ್ನು ಆಲದ ಎಲೆಗಳನ್ನು ನೆನಪಿಸಿತು. ಒಂದು ಸಿಪ್ಪನ್ನು ಹೀರಿ ಮತ್ತೆ ಟೀಯ ಗ್ಲಾಸನ್ನು ಟೇಬಲ್ಲಿನ ಮೇಲೆ ಇಟ್ಟ. ಟೀಯನ್ನು ಇಟ್ಟು ಹೋದ ತರುಣಿಯ ನೆರಳು ಮನಸ್ಸಿನಲ್ಲಿ ಮಿಂಚಿನಂತೆ ಸಡನ್ನಾಗಿ ಹರಿದುಹೋಯಿತು. ಅವನು ಬರುವಾಗ ಆಲದ ಮರಗಳ ದಟ್ಟವಾದ ನೆರಳುಗಳ ನಡುವೆ ಮೂಲೆಯ ಒಂದು ಮರದ ಹಿಂದಕ್ಕೆ ಎಲೆಗಳ ನಡುವಿನಲ್ಲಿ ಒಂದಿಷ್ಟು ಬೊಗಸೆಯಷ್ಟಿನ ಸೂರ್ಯನ ಬೆಳಕಲ್ಲಿ ಎರಡು ಆಕೃತಿಗಳು ಪಾಸಾಗಿದ್ದದ್ದನ್ನು ಗಮನಸಿರಲಿಲ್ಲ. ಈಗ ಅವನು ಟೀ ಕುಡಿದಂತೆ ಒಂದೊಂದೇ ಗುಟುಕು ಆ ನೆರಳು ಸರಿದು ಹೋದದ್ದು ಮನಸ್ಸಿನಲ್ಲಿ ತೇಲಿ ಹೋಗುತ್ತಿವೆ. ಟೀಯನ್ನು ಕುಡಿದ ತಕ್ಷಣಕ್ಕೆ ಟೀಯ ಬಿಲ್ಲನ್ನು ಕೊಟ್ಟು, ಬುಲೆಟ್ ಸ್ಟಾಟ್ ಮಾಡಿಕೊಂಡು ಹೊರಟ. ಸೀದ ಆಲದ ಮರಗಳ ಗುಂಪಿನ ಬಳಿ ಬಂದ. ಅಲ್ಲಿ ಯಾರೂ ಇರಲಿಲ್ಲ. ಬುಲೆಟನ್ನು ಒಂದು ಕಡೆ ಪಾರ್ಕ್ ಮಾಡಿ ಅಲ್ಲಿದ್ದ ಸುಮಾರು ಮುವತ್ತು ಮರಗಳ ಸುತ್ತ ಅಡ್ಡಾಡಿದ. ಏನು ಕಾಣಿಸಲಿಲ್ಲ. ಸ್ವಲ್ಪ ಹೊತ್ತು ಅಲ್ಲೆ ನಿಂತು, ಸಿಗರೇಟನ್ನು ಸೇದಿ, ಮತ್ತೆ ಬುಲೆಟ್ ಸ್ಟಾರ್ಟ್ಮಾಡಿಕೊಂಡು ಊರಿನ ಕಡೆ ಹೊರಟ. ಮನೆಯ ಕಡೆ ಹೋಗಬೇಕಿಂದ್ದವನು ತನ್ನ ಬುಲೆಟನ್ನು ಗುಣ್ಣಯ್ಯನ ಮನೆಯ ಕಡೆ ತಿರುಗಿಸಿದ. ಗುಣ್ಣಯ್ಯ ಮನೆಯ ಮೇಲೆ ಮೆಣಸಿನ ಕಾಯಿಯನ್ನು ಒಣ ಹಾಕುತ್ತಿದ್ದ. ರಾಜಿಯ ಬುಲೆಟ್ ಸದ್ದನ್ನು ಕೇಳಿ, ಮೇಲಿಂದಲೇ ‘ಸ್ವಲ್ಪ ಹೊತ್ತು ಕುತ್ಕಂಡಿರು, ಬಂದೆ’ ಎಂದ. ಕಾಂತರಾಜ ಬುಲೆಟನ್ನು ಅಂಗಳದಲ್ಲಿ ನಿಲ್ಲಿಸಿ ಮನೆಯ ಒಳಗೆ ಹೋದ. ಗುಣ್ಣಯ್ಯನ ಹೆಂಡತಿ ಅಡುಗೆ ಮನೆಯಿಂದ ಬಂದವಳು, ಅವನಿಗೆ ಒಂದ ಲೋಟ
ನೀರನ್ನು ಕೊಟ್ಟು ‘ಕಾಂತರಾಜಣ್ಣ ಬುಲೆಟಲ್ಲಿ ಎಲ್ಲಿಗೆ ಹೋಗ್ತಾ ಇದ್ದೆ. ಆಲದ ಮರದ ಹತ್ತಿರ ನೋಡಿದೆ ನಿನ್ನ’ಎಂದ ಅವಳ ಮಾತಿಗೆ ದಂಗಾಗಿ ಕೂತ ಕಾಂತರಾಜ. ತನ್ನ ಗಂಡ ಬರುವಷ್ಟರಲ್ಲಿ ನೇರವಾಗಿ ತನ್ನವಿಷಯವನ್ನು ಅವನಿಗೆ ಹೇಳುವ ತವಕದಲ್ಲಿದ್ದ ಅವಳು, ‘ಹೇಗಾದರೂ ಮಾಡಿ ನನ್ನ ಪರವಾಗಿಯೇ ತೀರ್ಪುಕೊಟ್ಟು ಹೋಗಬೇಕು. ನನ್ನೊಟ್ಟೆಯಲ್ಲಿ ಒಂದು ಹುಳವಾದರೂ ಬೆಳೀಲೇ ಬೇಕು. ನಮ್ಮ ಮನೆಯವರಿಗೆ ಎತ್ತು ಗುದ್ದಿದಾಗಿನಿಂದ ಬಹಳ ಪ್ರಾಬ್ಲಮಾಗಿದೆ. ಡಾಕ್ಟರ್ ಹೇಳಿದರು ನಿನ್ನ ಗಂಡನಿಂದ ಮಕ್ಕಳು ಹುಟ್ಟೊದು ಕಷ್ಟ. ಸುಮ್ಮನೆ ಆ ಆಲೋಚನೆ ಬಿಟ್ಟು ಬಿಡು. ಇಲ್ಲ ಅಂದ್ರೆ ಯಾರಾನ್ನಾದರೂ ದತ್ತು ತೆಗೆದು ಕೊಳ್ಳಿ ಎಂದು ‘ ಎಂದಳು. ಗುಣ್ಣಯ್ಯನ ಹೆಂಡತಿಯು ಹೇಳಿದುದನ್ನು ಕೇಳಿದ ಕಾಂತರಾಜನಿಗೆ ಕ್ಷಣ ಮುಜುಗರಕ್ಕೊಳಗಾಗಿ ಏನು ಹೇಳಬೇಕು ಎಂದು ತೋಚದೆ ತಬ್ಬಿಬ್ಬಿಗೆ ಒಳಗಾದ. ಸ್ವಲ್ಪ ಹೊತ್ತಾದ ಬಳಿಕ, ‘ಸರಿ ಏನು ಹೇಳಬೇಕು ಹೇಳು?’ ಎಂದು ಕೇಳಿದ. ‘ಅದೇ ನೀನು ಬುಲೆಟ್ ನಲ್ಲಿ ಹೋಗ್ವಾಗ ನನ್ಜೊತೆಯಲ್ಲಿ’ ಎಂದು ಹೇಳ್ತಾ ಇದ್ದಳು , ಅಷ್ಟೊತ್ತಿಗೆ ಗುಣ್ಣಯ್ಯ ಕೆಳಗೆ ಇಳಿದು ಬರುವ ಸದ್ದಾಗಿ ತನ್ನ ಮಾತಿನ ಇನ್ನರ್ಧವನ್ನು ಸಡನ್ನಾಗಿ ನುಂಗಿಕೊಂಡಳು. ‘ನೀವಿಬ್ಬರೂ ವಿಚಿತ್ರವಾಗಿ ಆಡ್ತಾ ಇದ್ದೀರ. ಅವನೇ ಬೇರೆ ಥರ ಹೇಳ್ತಾ ಇದ್ದಾನೆ. ನೀನೇ ಬೇರೆ ಥರ ಹೇಳ್ತಾ ಇದೀಯಾ’ಎಂದನು. ಮತ್ತೆ, ‘ವಿಜ್ಞಾನ ಮುಂದುವರೆದಿದೆ. ನಿಮ್ಮ ಪ್ರಾಬ್ಲಮ್ ಈಸಿಯಾಗಿ ಬಗೆಹರಿಸಬಹುದು’ ಎಂದು ಹೇಳುತ್ತಿರುವಾಗ, ಮಾಳಿಗೆ ಮೇಲಿಂದ ಗುಣ್ಣಯ್ಯ ಕೆಳಗೆ ಇಳಿದು ಹೊಸ್ತಿಲ ದಾಟಿಕೂಂಡು ಒಳಗಡೆ ಬಂದೇ ಬಿಟ್ಟ. ಬಂದವನು, ತನ್ನ ಹೆಂಡತಿಗೆ ತನ್ನ ಹೊಲದಿಂದ ತಂದಿಟ್ಟಿದ್ದ ಕಲ್ಲಂಗಡಿ ಹಣ್ಣನ್ನು ಕೊಯ್ದು ಕೊಡಲು ಹೇಳಿದನು. ಅವಳು ಚಾಕುವನ್ನು ತೆಗದುಕೊಂಡು ಹಣ್ಣನ್ನು ಕೊಯ್ಯತೊಡಗಿದಳು. ಈ ಇಬ್ಬರು ಸ್ನೇಹಿತರು ತಮ್ಮ ಮಾತುಗಳನ್ನು ಮುಂದುವರೆಸಿದರು. ಮುಂದಿನ ವಾರ ಬುದ್ಧ ಪೂರ್ಣಿಮೆ. ಆಲದ ಮರದ ಹತ್ತಿರ ಬೆಳದಿಂಗಳು ಊಟ ಮಾಡೋಣವಾ? ಮೂವರೂ?’ ಅಂದ.
‘ಅಲ್ಲ ಮಾರಾಯ, ನಮ್ಮ ಪ್ರಾಬ್ಲಮ್ ಬಗೆಹರಿಸಪ್ಪ ಅಂದ್ರೆ, ಬೆಳದಿಂಗಳು ಊಟ, ಅದು ಇದು ಅಂತ ಏನೇನೋ ಹೇಳ್ತಾ ಇದೀಯಲ್ಲೋ?’ ಎಂದು ತನ್ನ ಸ್ನೇಹಿತನಿಗೆ ಸಿಟ್ಟಿನಿಂದ ಹೇಳಿದ. ಒಂದು ತಟ್ಟೆಯಲ್ಲಿ ಮೂರು ದೊಡ್ಡದಾದ ಕಲ್ಲಂಗಡಿ ಹಣ್ಣಿನ ಹೋಳುಗಳನ್ನು ಇಟ್ಟಳು. ಒಂದು ಓಳನ್ನು ತಿಂದು, ಅವರಿಬ್ಬರಿಗೆ ‘ಮತ್ತೆ ಸಿಗುತ್ತೇನೆ’ ಎಂದು ಹೇಳಿ ತನ್ನ ಗಾಡಿಯನ್ನು ಚಾಲು ಮಾಡಿಕೊಂಡು ತನ್ನ ಹೊಲದಲ್ಲಿನ ತೆಂಗಿನಗರಿಗಳಿಂದ ಕಟ್ಟಿರುವ ತನ್ನ ಮನೆಯ ಕಡೆ ಹೋದನು. ಒಳ ಹೋಗಿ ಅರ್ಧಕ್ಕೆ ನಿಲ್ಲಿಸಿದ್ದ ತನ್ನ ಕತೆಯನ್ನು ಮುಂದುವರೆಸಿದನು.






0 Comments