ಎಚ್ಚೆಸ್ವಿ ಬರೆಯುತ್ತಾರೆ:ಹೊರಟ ಕಂಪಿಲರಾಯ

-ಎಚ್.ಎಸ್.ವೆಂಕಟೇಶಮೂರ್ತಿ

ನಾವು ಹುಡುಗರಿದ್ದಾಗ ಸಂಜೆ ಶಾಲೆ ಮುಗಿದು ಹೋ ಅಂತ ರಸ್ತೆಗೆ ನುಗ್ಗುವಾಗ ಒಂದು ಹಾಡನ್ನು ಕೋರಸ್ಸಾಗಿ ಹಾಡುತಾ ಇದ್ದೆವು.
ಹೊರಟ ಕಂಪಿಲರಾಯ  ಸಡಗರದಿಂ ಕೆರೆ ಕಡೆಗೆಸಡಗರದಿಂಕೆರೆ ಕಡೆಗೆಸಡಗರದಿಂಕೆರೆ ಕಡೆಗೆ!
ಈ ಕಂಪಿಲರಾಯ ಯಾರು?

ಅವನು ಸಡಗರದಿಂದ ಕೆರೆ ಕಡೆ ಯಾಕೆ ಹೊರಟ? ದೇವರಾಣೆಗೂ ನಮಗೆ ಗೊತ್ತಿದ್ದಿಲ್ಲ. ಸಡಗರದಿಂ ಎಂದು ಒಬ್ಬ ಕೂಗುವುದು. ಉಳಿದವರೆಲ್ಲಾ ರಾಗ ರಾಗವಾಗಿ ಕೆರೆ ಕಡೆಗೆ ಎಂದು ಅರಚುವುದು! ಹೀಗೆ ಒಂದು ದಿನ ನಾವೆಲ್ಲಾ ಹಾಡುತ್ತಾ ಬರುತ್ತಿರುವಾಗ ಪೋಸ್ಟ್ ಮ್ಯಾನ್ ಮರಿಲಿಂಗಣ್ಣ ಎದುರಿಗೆ ಬಂದ. ಅವನ ಬೆನ್ನ ಹಿಂದೆ ಅವನ ಪೋಸ್ಟ್ ಚೀಲ ಇತ್ತು. ವಿಶೇಷ ಅಂದರೆ ಈವತ್ತು ಪೋಸ್ಟ್ ಚೀಲ ಜೀವ ಬಂದಂತೆ ಜಿಗಿದಾಡುತಾ ಇತ್ತು! ಸುಂಕದ ಕಟ್ಟೆ ರುದ್ರಣ್ಣ “ಮರ್ಲಿಂಗಣ್ಣಾ…ನಿನ್ನ ಪೋಸ್ಟ್ಬ್ಯಾಗಿಗೆ ಜೀವ ಬಂದದೆ ಕಣಣ್ಣ” ಅಂತ ಕೂಗಿದ. ಹೌದಲ್ಲವಾ ಅಂತ ನಮಗೂ ಅನ್ನಿಸಿತು. ಮರ್ಲಿಂಗಣ್ಣ ನಮ್ಮನ್ನು ನೋಡಿ ನಕ್ಕು “ಕೆಂಚಾಪುರದ ಕಾವ್ಲಿಂದ ಒಂದು ಕಾನಚೌಡಿ ಹಿಡಕಂಡು ಬಂದಿವ್ನಿ..!” ಅಂದ. ಇದು ನಮಗೆಲ್ಲಾ ದಿಗಿಲು ತರಿಸುವ ವಿಷಯವಾಗಿತ್ತು. ಕಾನುಚೌಡಿ ಒಂದು ಗೇಣುದ್ದ ಇರುತ್ತಾಳೆಂದೂ, ಅವಳ ಕಾಲಿಗೆ ಮಂತ್ರವಾದಿಗಳು ಗೆಜ್ಜೆ ಕಟ್ಟಿರುತ್ತಾರೆಂದು, ಅವಳು ಬರುವಾಗ ಗಿಲ್ ಗಿಲ್ ಗಿಲ್ ಗಿಲ್ ಸದ್ದಾಗುತ್ತದೆಂದೂ, ನಮಗೆ ಕುಂಬಾರ್ರ ಮಾದಣ್ಣ ಹೇಳಿದ್ದ. ಒಂದು ಸಣ್ಣ ಮಣ್ಣಿನ ಮಡಕೇಲಿ ಗಂಗಾಜಲ ತುಂಬಿ ಜಗಲೀ ಮ್ಯಾಲೆ ಮಡಗಿದರೆ ಕಾನುಚೌಡಿ ಸುತ್ತಾಮುತ್ತಾ ಅರವತ್ತು ಅಡಿ ಫಾಸಲೆ ಸುಳಿದಾಡಂಗಿಲ್ಲ ಎನ್ನುವುದು ಅವನ ಬೋಧನೆಯಾಗಿತ್ತು. ನಾವೆಲ್ಲಾ ಕಿವಿಗೊಟ್ಟೂ ಆಲಿಸಿದಿವಿ.

ಪೋಸ್ಟ್ ಬ್ಯಾಗಿಂದ ಗೆಜ್ಜೆ ಸದ್ದೇನೂ ಕೇಳಿಬರ್ತಾ ಇರಲಿಲ್ಲ. ಗೆಜ್ಜೆ ಸದ್ದು ಪುನಾಸಿ ಕೇಳವಲ್ದು ಅಂತ ಮಲ್ಲಿ ಅಂದಾಗ , ಮರ್ಲಿಂಗಣ್ಣ ” ಗೆಜ್ಜೆಗೆ ನಿದ್ದೆ ಬಂದೈತೆ!” ಅಂತ ತಣ್ಣಗೆ ಹೇಳಿದ. ನಾವು ಇದ್ದರೂ ಇರಬೌದು ಅಂದುಕೊಂಡೆವು. ರಾತ್ರಿನಾಗ ಬಂದರೆ ಚೌಡಿ ತೋರಸ್ತೀಯ ಎಂದು ನಮ್ಮಲೆಲ್ಲಾ ಮಹಾ ಧೈರ್ಯಶಾಲಿಯಾಗಿದ್ದ ಒಡೇಮಲ್ಲೇಶಿ ಕೇಳಿದ. ಲಕ್ಷಣವಾದ ಹುಡುಗರು ಕಂಡ್ರೆ ಚಂಗಂತ ಜಿಗ್ದು ತೊಡೆ ಮ್ಯಾಲೆ ಕೂತ್ಕಂಡು ನನ್ನ ಮದವಿ ಆಗಲೇ ಹುಡುಗ ಅಂತ ಚೌಡಿ ಕೈ ಹಿಡ್ಕಂತಳೆ…ಮದವಿ ಆಗಾಕೆ ರೆಡಿಯಿದೀ ಏನು…ರೆಡಿಯಿದ್ದರೆ ರಾತ್ರಿ ನಮ್ಮನೆ ತಾವು ಬಾ…!: ಎನ್ನುತ್ತಾ ಮರಿಲಿಂಗಣ್ಣ ತನ್ನ ಹೆಜ್ಜೆ ಚುರುಕು ಮಾಡಿ ಈಶ್ವರನ ಗುಡಿಯ ಓಣಿಯಲ್ಲಿ ಮರೆಯಾದ. ನಾವು ನಾಕೈದು ಜನ ಕುತೂಹಲಿಗಳು ಜೋಯ್ಸರ ಜಗಲೀಮ್ಯಾಲೆ ಚೌಕಾಬರ ಆಡತಾ ಕೂತಿದ್ದೆವೇ? ಅಲ್ಲಿಗೆ ವಡೇಮಲ್ಲೇಶಿ ಬಂದ. ಅವನು ಬಲೇ ಧೈರ್ಯಶಾಲಿ ಅಂತ ಮದಲೇ ನಾನು ನಿಮಗೆ ಹೇಳಿದ್ದೇನೆ. ಬಂದವನೇ ಮಲ್ಲೇಶಿ ಜಗಲೀ ಮ್ಯಾಲೆ ಜಂಪ್ ಮಾಡಿ ಕೂತೋನು, “ರಾತ್ರಿನಾಗ ನನ್ನ ಜೋಡಿ ಯಾರು ಬರ್ತೀರ್ರೆಲೇ….ದಮ್ಮಿದ್ದೋರು ಕೈಯೆತ್ರಿ ಮತ್ತೆ….” ಅಂದ. ಮಲ್ಲಿ, ನಾಗಪ್ಪ ನಾವ್ ಬರ್ತೀವಪ್ಪಾ ಅಂತ ಕೈಯೆತ್ತಿದರು. ನನಗೆ ಒಳಗೊಳಗೇ ದಿಗಿಲು. ಪುಕ್ಕ ನನ ಮಗನೇ…ನಿನ್ನೇನು ಚೌಡಿ ನುಂಗಂಗಿಲ್ಲ…ನನ್ತಾವು ಬನಶಂಕರಿ ಪೆಟ್ಟಿಗೆ ಪ್ರಸಾದ ಇರತದೆ…. ನಮ್ಮ ಸುತ್ತ ಮೂರು ಮಾರು ಮಂತ್ರಶಕ್ತಿ ಪೇರಿ ಹೊಡಿತಾ ಇರತತೆ ಮಕ್ಕಳ್ರಾ…ಯಾವ ಚೌಡೀನೂ ನಮಗೆ ಎಂಥದೂ ಮಾಡಂಗಿಲ್ಲ…”-ಎಂದು ಮುಂದೆ ಮೀಸೆ ಬರೋ ಜಾಗದಲ್ಲಿ ಸುಮ್ಮಗೆ ವಡೆಮಲ್ಲೇಶಿ ಕೈ ಆಡಿಸಿದ.

ಬನಶಂಕರಿ ಪೆಟ್ಟಿಗೆ ಅಂದರೆ ನಿಮಗೆ ಗೊತ್ತಿದೆಯೋ ಇಲ್ಲವೋ ಕಾಣೆ. ನಮ್ಮೂರ ಹಾಳು ಹನುಮಂತನ ಗುಡಿ ಮುಂದೆ ಬನಶಂಕರಿ ಗುಡಿ ಇತ್ತು. ಕರೀ ಹಂಚು ಹೊಚ್ಚಿದ ಮನೇನೆ. ಅದರಲ್ಲಿ ಬನಶಂಕರಿ ಪೆಟ್ಟಿಗೆ ಇಟ್ಟಿದ್ದರು. ಮಧ್ಯಾಹ್ನ ಪೂಜೆ ಹೊತ್ತಿಗೆ ಮಾತ್ರ ಗುಡಿ ಬಾಗಿಲು ತೆಗೀತಿದ್ದರು. ಗುಡಿಗೆ ಕಿಟಕಿ ಗಿಟಕಿ ಏನೂ ಇದ್ದಿರಲಿಲ್ಲ. ಹಾಗಾಗಿ ಗುಡಿಯೊಳಗೆ ಕತ್ತಲು ಗವ್ ಅನ್ನುತಾ ಇರುತ್ತಿತ್ತು. ಗುಡಿಯ ಒಳಗೆ ಹೋಗಿ ಸ್ವಲ್ಪ ಹೊತ್ತು ಸುಮ್ಮಗೆ ನಿಂತು ಕಣ್ಣು ಹೊಂದಿಸಿಕೊಳ್ಳಬೇಕು. ಆಮೇಲೆ ನಮಗೆ ಗುಡಿಯ ಒಳಗೆ ಎಡಭಾಗಕ್ಕೆ ಇನ್ನೊಂದು ಕತ್ತಲ ಕೋಣೆ ಕಾಣುತಾ ಇತ್ತು. ಅದರೊಳಗೆ ಒಂದು ಸಣ್ಣ ನಂದಾದೀಪ ಮಿನಿಮಿನಿ ಅಂತ ಉರಿತಾ ಇರೋದು. ನಮ್ಮ ಕ್ಲಾಸ್ ಮೇಟ್ ನರಸಿಂಹನೇ ಬನಶಂಕರಿ ಪೂಜೇ ಮಾಡುತಾ ಇದ್ದ. ಕತ್ತಲ ಕೋಣೆಯಲ್ಲಿ ಬನಶಂಕರಿ ಪೆಟ್ಟಿಗೆ ಇಟ್ಟಿದ್ದರು. ಅದಕ್ಕೆ ಇಷ್ಟು ದಪ್ಪದ ಹಿತ್ತಾಳೆ ಬೀಗ. ಅದನ್ನು ದೊಡ್ಡ ಪೂಜಾರಿ ಬಿಟ್ಟು ಮತ್ತೆ ಯಾರೂ ತೆಗೆಯಂಗೇ ಇಲ್ಲವಂತೆ. ದೊಡ್ಡಪೂಜಾರಿ ಹುಣ್ಣಿಮೆಗೋ ಅಮವಾಸ್ಯೆಗೋ ಒಂದು ದಿನ ಗುಡಿಯ ಬಾಗಿಲು ಹಾಕಿಕೊಂಡು ಬನಶಂಕರಿ ಪೆಟ್ಟಿಗೆ ಬಾಗಿಲು ತೆಗೆಯೋದಂತೆ. ಆವಾಗ ಭುಸ್ ಅಂತ ಬಣ್ಣ ಬಣ್ಣದ ಹೊಗೆ ಬರ್ತದಂತೆ ಮೊದಲು! ಆಮ್ಯಾಲೆ ಏಳು ಹೆಡೆ ಘಟಸರ್ಪ. ಕೆಂಪಗೆ ಗಾಜು ಹೊಳದಂಗೆ ಅದರ ಕಣ್ಣು ಹೊಳಿತಾ ಇರತವಂತೆ. ಭುಸ್ ಭುಸ್ ಅಂತ ಅದು ಉಸಿರು ಎಳ್ಕೋತದಂತೆ. ಮತ್ತೆ ಎಷ್ಟೋ ದಿನ ಅದು ಉಸಿರು ಕಟ್ಕಂಡು ಪೆಟ್ಟಿಗೆ ಒಳಗೇ ಮಲಗಿರ್ತದಲ್ಲ! ಅದರ ಮೈಮೇಲೆ ಒಂದೊಂದು ಗೇಣುದ್ದದ ಕರೀ ಕೂದಲು ಇರ್ತಾವಂತೆ. ಆ ಏಳು ಹೆಡೆ ಸರ್ಪಕ್ಕೆ ಬೇಕು ಬೇಕಾದದ್ದು ಕೊಡೋ ಶಕ್ತಿ ಉಂಟು…ಗ್ರಹಣದ ದಿನ ನಿಟ್ಟುಪವಾಸ ಮಾಡಿ ಒದ್ದೇ ಬಟ್ಟೇಲಿ ಒಬ್ಬನೇ ಗುಡಿಯ ಒಳಗೆ ಹೋಗಿ, ದೇವೀನ ಬೇಡಿಕೊಂಡರೆ ಹಿಡಿ ಹಿಡಿ ಕೂದಲು ಒಗೀತದಂತೆ ಏಳುಹೆಡಿಸರ್ಪ. ಅದೇ ಮತ್ತೆ ಪ್ರಸಾದ. ಅದನ್ನ ಹೊಸಕಂಡು ಕೊಳ್ಳಿಗೆ ಕಟ್ಕಬೇಕು. ನರಸಿಂಹ ಅಂತ ಹರಕೆ-ಸರ ಕೊಳ್ಳಿಗೆ ಕಟ್ಕೊಂಡಿದಾನೆ. ಅದಕ್ಕೇ ಹೋದವಾರ ರನ್ನಿಂಗ್ ಕಾಂಪಿಟೇಷನ್ ಆದಾಗ ಎಲ್ಲರಿಗಿಂತ ಹಿಂದೆ ಇದ್ದ ನರಸಿಂಹ ಇದ್ದಕ್ಕಿದ್ದಂಗೆ ಹೋ ಅಂತ ಮೈ ಜಲಿಸಿ ಕ್ಷಣಾಮತ್ತಲ್ಲಿ ಫಸ್ಟ್ ಪ್ಲೇಸಿಗೆ ಬಂದಿದ್ದ!  ಒಡೆಮಲ್ಲೇಶಿ ಪೂಸಿ ಹೊಡೆದು ನರಸಿಂಹನಿಂದ ಬನಶಂಕರಿ ಪ್ರಸಾದ ಇಸಕೊಂಡಿದ್ದ. ಐದು ಕೂದಲು ಇದ್ದವು ಅವನ ಹತ್ತಿರ. ಅವನ್ನು ಜೋಬಲ್ಲಿ ಮಡಗಿಕೊಂಡು ಐದು ದಿನ ಮರಿಲಿಂಗಪ್ಪನ ಮನೆಗೆ ಚೌಡಿ ನೋಡಲು ಹೋಗಬಹುದಿತ್ತು. ಬಾರಲೇ…ನಾವು ಜತಿಗಿರ್ತೀವಿ…ಚೌಡಿ ತೊಡೆಗೆ ಜಿಗಿದು ಕೈ ಏನು ಹಿಡ್ಕಮಲ್ಲ….ಒಬ್ಬ ಹುಡುಗ ಹೋದ್ರೆ ಅವಳು ಹಂಗೆ ಮಾಡಬಹುದು…ಐದು ಮಂದಿ ಹೋದ್ರೆ ಅವಳಿಗೆ ಕನ್ ಫ಼್ಯೂಸ್ ಆಗಲ್ವಾ ಎಂದು ಸುಂಕದಕಟ್ಟೆ ರುದ್ರಣ್ಣ ಲಾ ಪಾಯಿಂಟ್ ಹಾಕಿದ. ಅದು ಸರಿ ಅಂತ ಉಳಿದವರಿಗೂ ಅನ್ನಿಸಿತು.

ಎಂಟು ಗಂಟೆಗೆ ಚೌಡಿ ನೋಡಲಿಕ್ಕೆ ಮರಿಲಿಂಗಪ್ಪನ ಮನೆಗೆ ಹೋಗೋದು ಅಂತ ಎಲ್ಲ ತೀರ್ಮಾನ ಮಾಡಿದೆವು. ಎಲ್ಲಾ ಏಶ್ವರನ ಗುಡಿ ಪೌಳಿಯಲ್ಲಿ ಸೇರಬೇಕು ಅಂತ ತೀರ್ಮಾನವಾಯಿತು. ನಾನು ಹೋಮ್ವರ್ಕ್ ಪುಸ್ತಕ ಇಸಕಂಬರ್ತೀನಿ ಅಂತ ಅಜ್ಜಿಯ ಹತ್ರ ಸುಳ್ಳು ಬೊಂಕಿ ಎಂಟು ಗಂಟೆಗೆ ಸರಿಯಾಗಿ ಗುಡಿ ಪೌಳಿಬಳಿ ಬಂದೆ. ಮಲ್ಲೇಶಿ ಒಬ್ಬೊಬ್ಬರಿಗೂ ಒಂದೊಂದು ಕೂದಲು ಪ್ರಸಾದ ಕೊಟ್ಟ. ಹುಷಾರ್…ಇದನ್ನ ಸರಿಯಾಗಿ ಚಡ್ಡಿ ಜೇಬಲ್ಲಿ ಮಡಕ್ಕಳ್ಳಿ ಅಂದ. ದಾರಿ ನಿರ್ಜನವಾಗಿತ್ತು. ಅಷ್ಟುಹೊತ್ತಲ್ಲಿ ಯಾರು ಓಡಾಡುತಾರೆ? ಸೆಟ್ರ ಸಂಗಜ್ಜ ಏಳೂವರೆಗೆ ಅಂಗಡಿ ಬಾಗಿಲು ಹಾಕಿಕೊಂಡು ತಮ್ಮ ಲಾಟೀನು ಸಮೇತ ಮನೆಗೆ ಹೋದರು ಅಂದರೆ ಆಮ್ಯಾಲೆ ಬೀದಿಯಲ್ಲಿ ಒಂದು ನರಪಿಳ್ಳೆ ಇರೋದಿಲ್ಲ. ಅಲ್ಲಿ ಇಲ್ಲಿ ಕೆಲವು ನಾಯಿ ಬಗುಳ್ತಾ ಇರತವೆ ಅಷ್ಟೆ. ಆವಾಗ ಕಾರ್ತೀಕ ಮಾಸ. ಎಲ್ಲರ ಮನೆ ಮುಂದೂ ಗೋಡೆಯಲ್ಲಿ ಕೊರೆದಿದ್ದ ಗೂಡಲ್ಲಿ ಮಣ್ಣಿನ ಹಣತೆ ಉರಿತಾ ಇತ್ತು. ಆ ಬೆಳಕಲ್ಲಿ ನಾವು ಬೇಗ ಬೇಗ ಮರಿಲಿಂಗಪ್ಪನ ಮನೆ ಕಡೆ ಹೊರಟೆವು. ಚೌಡಿ ಗೇಣುದ್ದದ ಕುಳ್ಳಿ ಇದ್ದರೂ ಭಾಳ ಚೆಲುವೆ ಇರ್ತಾಳಂತೆ ಅಂತ ನಾಗಪ್ಪ ಹೇಳ್ತಾ ಇದ್ದ. ಅವಳಿಗೆ ನೆಲ ಗುಡಿಸೋ ಅಷ್ಟು ಉದ್ದದ ತಲೆಗೂದಲಂತೆ. ಅವನ್ನು ಬಿಚ್ಚಿ ಬಿರುಹೊಯ್ಕೊಂಡಿರ್ತಾಳಂತೆ! ಜರತಾರಿ ಲಂಗ. ಎರಡೂ ಕಾಲಿಗೆ ಗೆಜ್ಜೆ. ಅವು ನಡೀ ಬೇಕಾದ್ರೆ ಗಿಲಿ ಗಿಲಿ ಸದ್ದು ಮಾಡ್ತಾ ಇರತವಂತೆ. ಚೌಡಿಗೆ ಶಿಳ್ಳು ಹೊಡೆದಂಗೆ ಧ್ವನಿಯಂತೆ. ಇದೆಲ್ಲಾ ಹೆಂಗೋ ಗೊತ್ತು ನಿಂಗೆ ಅಂತ ನಾಗಪ್ಪನನ್ನ ಕೇಳಿದರೆ, ನಮ್ಮಪ್ಪ ಜೋಯಿಸ ಅಲ್ವೇನೋ..? ಎಲ್ಲಾ ಗೊತ್ತು ನಂಗೆ ಅಂತ ದಬಾಯಿಸಿದ.  ನಾವು ಬಂದಾಗ ಮರ್ಲಿಂಗಪ್ಪನ ಮನೆ ಬಾಗಿಲು ಮುಂದೆ ಮಾಡಿದ್ದರು. ಮರ್ಲಿಂಗಣ್ಣಾ…ಮರ್ಲಿಂಗಣ್ಣಾ…ನಾವು ಬಂದಿದೀವಿ ಕಾಣಣ್ಣಾ…ಅಂತ ಮಲ್ಲೇಶಿ ಪಿಸು ಧ್ವನಿಯಲ್ಲಿ ಕೂಗಿದ. ಓ…ನೀವಾ..? ಅಂತ ಒಳಗಿಂದ ಮರಿಲಿಂಗಣ್ಣನ ಧ್ವನಿ ಕೇಳಿಸಿತು. ಮರುಕ್ಷಣ ಕಿರ್ರ್ ಅಂತ ಬಾಗಿಲು ತೆಗೆದುಕೊಂಡಿತು. ಆಗ ಹೊರಗಿಂದ ಗಾಳಿ ಬೀಸಿತಾಗಿ, ನಡುಮನೆಯ ದೀಪ ಹೊಯ್ದಾಡುತ್ತಾ ನಮ್ಮ ನೆರಳೂ ಗೋಡೆ ಮ್ಯಾಲೆ ಹಂಗೆ ಹಿಂಗೆ ತೂಗಾಡಿ ದಿಗಿಲುಹುಟ್ಟಿಸಿದವು. ನನಗೆ ಎದೆಯಲ್ಲಿ ಅವಲಕ್ಕಿ ಕುಟ್ಟಿದಂಗೆ ಧಿಗ್ ಧಿಗ್ ಧಿಗ್ ಸದ್ದಾಗುತಾ ಇತ್ತು. ಚೌಡಿ ಎಲ್ಲವ್ಳೇ? ಅಂತ ಮಲ್ಲೇಶಿ ಕೇಳಿದ. ಅವನ ಬಲಗೈ ಚಡ್ಡಿ ಜೇಬಲ್ಲಿ ತೂರಿ ಬನಶಂಕರಿ ಪ್ರಸಾದ ಸವರುತಾ ಇತ್ತು ಅಂತ ನಾನು ಊಹಿಸ ಬಲ್ಲೆ. ನಾನೂ ಥಟ್ಟನೆ ಚೆಡ್ಡಿ ಜೋಬಲ್ಲಿ ಕೈ ತೂರಿಸಿದೆ. ಮರಿಲಿಂಗಣ್ಣ ನಡುಮನೆಯ ಮೂಲೆಯಲ್ಲಿ ಒಂದು ಬಿದಿರಿನ ಬುಟ್ಟಿ ಕವುಚಿ ಹಾಕಿದ್ದ. ಅವ, ಉಷ್! ಎಂದು ತುಟಿಯ ಮೇಲೆ ಬೆರಳಿಟ್ಟು ನಮ್ಮನ್ನು ಎಚ್ಚರಿಸಿ, ಚೌಡೀನ ಬುಟ್ಟಿ ಒಳಗೆ ಮಡಗಿವ್ನಿ….ತುಟಿ ಪಿಟಕ್ಕೆನ್ನದೆ ಸುಮ್ಮಕೆ ತಿ-ಮುಚ್ಚಿಕಂಡು ನಿಂತ್ಕಳ್ರಿ ಎಂದು ಸಣ್ಣ ದನಿಯಲ್ಲೇ ನಮ್ಮನ್ನು ಗದರಿಸಿದ. ನಾವು ಪಿಳಿ ಪಿಳಿ ಕಣ್ಣು ಬಿಡುತ್ತಾ ಅವನು ಬಿದಿರು ಬುಟ್ಟಿ ಮೇಲೆತ್ತುವುದೇ ಕಾಯುತಾ ಇದ್ದೀವಿ. ಮರ್ಲಿಂಗಣ್ಣ ಪುಟ್ಟಿ ಮೇಲೆತ್ತಿದ್ದೇ ತಡ ಪುರ್ ಅಂತ ಒಂದು ಮಜಭೂತು ಕೋಳಿ ಮೇಲಕ್ಕೆ ಹಾರಿತು ನೋಡಿ! ಅಯ್ಯಾ…ಇದೇನಾ ಚೌಡಿ? ಅಂದ ನಾಗಪ್ಪ ಕೈಯಿಂದ ಬಾಯಿ ಮುಚ್ಚಿಕೊಂಡು ಕಿಸಿ ಕಿಸಿ ನಗುತ್ತಾ.  ರೇಗಿ ಹೋಯಿತು ಮರಿಲಿಂಗಪ್ಪನಿಗೆ. ಕಣ್ಣು ಕೆಂಪಗೆ ಗಿಮಿ ಗಿಮಿ ತಿರುಗಿಸುತ್ತಾ, “ಪಡಪೋಷಿ ನನ್ನ ಮಕ್ಕಳಾ…ಚೌಡಮ್ಮನ್ನ, ಕೋಳಿ ಅಂತೀರೇನ್ಲೇ…? ಕುಕ್ಕೋಡಮ್ಮನ ಅವತಾರದಾಗೆ ಕಾಣ್ತಾ ಇದ್ದಾಳೆ ಕಾನುಚೌಡಿ….ಕೋಳಿ ಅಂದರೆ ನಿಮ್ಮ ನಾಲಗೆ ಬಿದ್ದು ಹೋದಾವು….” ನಾವು ತೆಪ್ಪಗೆ ಮರಿಲಿಂಗಪ್ಪನ ಮನೆಯಿಂದ ಹಿಂದಿರುಗಿದೆವು. ಎಷ್ಟೋ ಹೊತ್ತಾದ ಮ್ಯಾಲೆ “ನಾಳೆ ಚೌಡಿ ಯಾವ ಅವತಾರ ತಾಳಬಹುದು?”-ಎಂದು ಸುಂಕದಕಟ್ಟೆ ರುದ್ರ ಉದ್ಗಾರ ತೆಗೆದ. ” ಹೇಳಂಗಿಲ್ಲ….ಆಕಿ ಮಹಿಮಾ ಹಂಗೆ ಇನ್ ಅಡ್ವಾನ್ಸ್ ಹೇಳ್ಳಿಕ್ಕೆ ಬತ್ತದಾ?”ಎಂದು ನರಸಿಂಹ ಗಲ್ಲಗಲ್ಲ ಬಡಿದುಕೊಂಡ.
*****

‍ಲೇಖಕರು avadhi

October 31, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. Rankusa

    seriously sir, you should stop writing poems and start writing articles! 🙂

    well, i thought i did smell the presence of a thick base note of kum.vee.’s style here; but very much polished and sophisticated which makes yours totally a different one 🙂

    all in all, a great article that can be included as a lesson in the high school/college text. kids would love to read this. compliments! 😉

    ಪ್ರತಿಕ್ರಿಯೆ
  2. shalu

    ಖುಷಿ ನೀಡಿದ ಲೇಖನ. ಅವರ ಬಾಯಲ್ಲಿ ಕೇಳಿದ್ದಕ್ಕಿಂತ ಬರವಣಿಗೆಯಲ್ಲಿ ಹೆಚ್ಚು ರೋಚಕವೆನ್ನಿಸಿತು.

    ಪ್ರತಿಕ್ರಿಯೆ
  3. sathya

    ಬಹಳ ಹಿಂದೆ ಚಿಮೂ ಅವರು ಬನಶಂಕರಿ ಪೆಟ್ಟಿಗೆ ಎನ್ನುವ ಲಲಿತ ಪ್ರಬಂಧ ಬರೆದಿದ್ದರು. ಎಚ್ಚೆಸ್ವಿ ಅವರು ಮತ್ತು ಚಿಮು ಒಂದೇ ತಾಲ್ಲೂಕಿನವರು. ಆ ಪ್ರಾಂತದಲ್ಲಿ ಈ ಬನಶಂಕರಿ ಪೆಟ್ಟಿಗೆಯ ಸಂಪ್ರದಾಯ ಹೆಚ್ಚಾಗಿ ಇರಬಹುದೆ?

    ಪ್ರತಿಕ್ರಿಯೆ
  4. hsv

    ಚಿಮೂ ಅವರ ಲೇಖನ ನೆನಪಿಸಿದ ಸತ್ಯ ಅವರಿಗೆ ವಂದನೆ. ನಾನೂ ತುಂಬ ಇಷ್ಟಪಟ್ಟಿದ್ದ ಲೇಖನ ಅದು. ಸಂಶೋಧನೆಗೆ ಲಲಿತಪ್ರಬಂಧದ ಶೈಲಿಯನ್ನು ಹೊಂದಿಸಿ ಬರೆದ ಅಪರೂಪದ ಲೇಖನ. ಚಿಮು ಅವರು ನಮ್ಮೂರಿನ ಸಮೀಪದಲ್ಲಿರುವ ಹಿರೇಕೋಗಿಲೂರಿನವರು. ಅವರು ನೋಡಿದ ಬನಶಂಕರಿ ಪೆಟ್ಟಿಗೆ ಎಲ್ಲಿನದೋ ನನಗೆ ತಿಳಿಯದು. ನಮ್ಮೂರಲ್ಲಿ ಈವತ್ತೂ ನೀವು ಬನಶಂಕರಿ ಪೆಟ್ಟಿಗೆ ನೋಡಬಹುದು.
    ಎಚ್ಚೆಸ್ವಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: