ಕೂಡ್ಲಿಗಿ ತಾಲೂಕಿನ ವಿಶಿಷ್ಟ ಗ್ರಾಮ ವಲಸೆ ..

My Photo

-ಡಾ.ಅರುಣ್ ಜೋಳದ ಕೂಡ್ಲಿಗಿ

ಕನ್ನಡ ಜಾನಪದ ದಿಂದ


(ಕೂಡ್ಲಿಗಿ ತಾಲೂಕಿನ ಅಲಕ್ಷಿತ ವಿಶೇಷ ಐತಿಹಾಸಿಕ ಗ್ರಾಮ ವಲಸೆಯ ಆರಾಧ್ಯ ದೈವ ಯರಗಟ್ಟೆನಾಯಕನ ದೇಗುಲ)

-ಸಿದ್ಧರಾಮ ಹಿರೇಮಠ. ಕೂಡ್ಲಿಗಿ

ಕೂಡ್ಲಿಗಿ ತಾಲೂಕು ೧೬ನೇ ಶತಮಾನದ ವಿಜಯನಗರ ಅರಸರ ಕಾಲದಿಂದಲೂ ವಿವಿಧ ಪಾಳೆಗಾರರ ಆಳ್ವಿಕೆಯಲ್ಲಿ ಒಳಪಟ್ಟಿದ್ದ ಪ್ರದೇಶವಾಗಿದೆ. ಹೀಗಾಗಿ ಇಲ್ಲಿನ ಪ್ರತಿಯೊಂದು ಗ್ರಾಮ, ಹಟ್ಟಿಗಳೂ ವಿಶೇಷ ನಾಮಧೇಯವನ್ನು ಹೊಂದಿವೆ. ಇವುಗಳಲ್ಲಿ ವಿಶಿಷ್ಠವಾದ ಐತಿಹಾಸಿಕ ಕುರುಹುಗಳಿರುವ ಅಲಕ್ಷಿತ ಗ್ರಾಮ ವಲಸೆ.

ಹೆಸರೇ ಸೂಚಿಸುವಂತೆ ವಲಸೆ ಬಂದ ಅಥವಾ ಗುಳೆಬಂದ ಜನಾಂಗ ವಾಸವಿರುವ ಗ್ರಾಮವೇ ವಲಸೆಯಾಗಿರಬಹುದೆಂಬುದು ಸ್ಥಳೀಯ ಐತಿಹ್ಯಗಳಿಂದ ತಿಳಿದುಬರುತ್ತದೆ. ಹುರುಳಿಹಾಳು ಗ್ರಾಮ ಪಂಚಾಯ್ತಿಗೆ ಸೇರಿದ ವಲಸೆ ಪುಟ್ಟ ಗ್ರಾಮ. ಗ್ರಾಮದ ಸುತ್ತಲೂ ೪ ಬುರುಜುಗಳಿದ್ದು, ಇವುಗಳ್ಲಲಿ ೩ ನಾಶವಾಗಿದ್ದು, ಒಂದು ಮಾತ್ರ ಸುಸ್ಥಿತಿಯಲ್ಲಿದೆ. ಬುರುಜುಗಳ ಸುತ್ತಲೂ ಕೋಟೆಯ ಕಟ್ಟಡವಿತ್ತೆಂಬುದಕ್ಕೆ ಕಲ್ಲಿನ ಕೋಟೆಯ ಶಿಥಿಲಗೊಂಡ ಕುರುಹುಗಳಿವೆ. ಗ್ರಾಮದಲ್ಲಿ ಹೆಚ್ಚು ವಾಸವಾಗಿರುವವರು ನಾಯಕ ಜನಾಂಗದವರು. ಗ್ರಾಮದ ಮಧ್ಯೆ ವಿಶೇಷವಾದ ದೇವಸ್ಥಾನವಿದ್ದು, ಇಲ್ಲಿ ಎರಡು ದೈವಗಳಿವೆ. ಯರಗಟ್ಟೆನಾಯಕ ಹಾಗೂ ಗಾದ್ರಿಪಾಲನಾಯಕ. ವಿಶೇಷವೆಂದರೆ ಎರಡೂ ದೇವಸ್ಥಾನಗಳೂ ಗುಡಿಸಲಿನ ಮಾದರಿಯಲ್ಲಿದ್ದು, ಒಳಗೆ ದೇವರ ಪೂಜಾಸಾಮಗ್ರಿಗಳನ್ನಿರಿಸಲಾಗಿದೆ. ಬೇಡ ಜನಾಂಗದ ಪ್ರತಿಷ್ಠೆಯ ಸಂಕೇತವಾಗಿರುವ ಬಿಲ್ಲು, ಖಡ್ಗಗಳನ್ನು ಇಲ್ಲಿ ಪೂಜಿಸಲಾಗುವುದು. ದೈವಗಳ ಮೂರ್ತಿಗಳೂ ಇಲ್ಲಿವೆ.

ವರ್ಷಕ್ಕೊಮ್ಮೆ ದಸರೆಯ ನಂತರ ಹುಣ್ಣಿಮೆಯ ಹತ್ತಿರದ ದಿನಗಳಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಗೆ ನಾಡಿನ ವಿವಿಧ ಭಾಗಗಳಾದ ಶಿವಮೊಗ್ಗ, ಅಂಕಮನಾಳ, ಆಂಧ್ರಪ್ರದೇಶದ ಗೊಲ್ಲಹಳ್ಳಿ, ಕೋನಸಾಗರ, ಹಿರೇಹಳ್ಳಿ, ಕರ್ನಾರ ಮನೆತನದ ೬ ಕರ್ನಾರಹಟ್ಟಿ ಗ್ರಾಮಸ್ಥರು ಮೊದಲಾದ ನಾಯಕ ಜನಾಂಗದವರು ಪಾಲ್ಗೊಳ್ಳುವರು. ಯರಗಟ್ಟೆನಾಯಕ, ಗಾದ್ರಿಪಾಲನಾಯಕರನ್ನು ಮ್ಯಾಸ ಮಂಡಲದ ಪ್ರಬುದ್ಧ ದೇವರುಗಳೆಂದು ಪೂಜಿಸಲಾಗುತ್ತದೆ. ದೇವಸ್ಥಾನವನ್ನು ನಿರ್ಮಿಸಿದ ಕಾಲವನ್ನು ಕೇಳಿದರೆ, ತಮ್ಮ ವಂಶಜರಿಂದಲೂ ಇದೇ ರೀತಿ ಉಳಿದುಬಂದಿದೆಯೆಂದು ಗ್ರಾಮಸ್ಥರು ತಿಳಿಸುತ್ತಾರೆ. ನಾಯಕ ಜನಾಂಗ ಅಥವಾ ಬೇಡ ಜನಾಂಗದ ಬೇಟೆಯ ಸಂಕೇತಗಳಾಗಿರುವ ಆಯುಧಗಳನ್ನು ಇಲ್ಲಿ ಪೂಜಿಸುವುದು ವಿಶೇಷವಾಗಿದೆ.

(ಗ್ರಾಮದ ೪ ಬುರುಜುಗಳಲ್ಲಿ ಉಳಿದಿರುವ ಸುಸ್ಥಿತಿಯಲ್ಲಿರುವ ಒಂದು ಬುರುಜಿನ ದೃಶ್ಯ)

ವಲಸೆ ಎಂಬ ಹೆಸರು ಹೇಗೆ ಬಂತೆಂದು ಗ್ರಾಮದ ಹಿರಿಯರನ್ನು ಕೇಳಿದರೆ, ಯರಗಟ್ಟೆನಾಯಕ ಮೂಲತ: ಬೆಳ್ಳಗಟ್ಟೆಯ ಸಮೀಪದ ತಮಟೆಕಲ್‌ನ ನಾಯಕ. ಯುದ್ಧದ ಸಂದರ್ಭದಲ್ಲಿ ತನ್ನ ಹಿಂಬಾಲಕರೊಂದಿಗೆ ಬಂದು ಈ ಪ್ರದೇಶದಲ್ಲಿ ಸಮಾಧಿಸ್ಥನಾದ. ಆತನ ಸಮಾಧಿಯೇ ದೇವಸ್ಥಾನವೆಂದು ಗ್ರಾಮದ ಜಿ.ಬಿ.ಪಾಲಯ್ಯ ಹೇಳುತ್ತಾರೆ. ಯರಗಟ್ಟೆನಾಯಕ ಹಾಗೂ ಗಾದ್ರಿಪಾಲನಾಯಕ ಇಬ್ಬರೂ ಮಹಾನ್ ಶೂರರು. ಅವರ ವಂಶಸ್ಥರೇ ನಮ್ಮ ಜನಾಂಗ ಎಂದೂ ಅವರು ಹೇಳಿದರು. ಯರಗಟ್ಟೆನಾಯಕ ಹಾಗೂ ಆತನ ತಂಡ ಇಲ್ಲಿ ವಲಸೆ ಬಂದು ನೆಲೆಸಿದುದಕ್ಕೆ ವಲಸೆ ಎಂಬ ಹೆಸರು ಬಂದಿರಬಹುದೇನೋ ಎಂದು ಹಿರಿಯರು ಊಹಿಸುತ್ತಾರೆ. ಮತ್ತೊಂದು ವಿಶೇಷವೆಂದರೆ ಯರಗಟ್ಟೆನಾಯಕ ಎತ್ತುಗಳನ್ನು ಪಾಲನೆ ಮಾಡುತ್ತಿದ್ದ. ಹೀಗಾಗಿ ಆತನ ಎತ್ತುಗಳೆಂದೇ ೨೫ ಎತ್ತುಗಳನ್ನು ದೇವರ ಎತ್ತುಗಳೆಂದು ಮೀಸಲಿರಿಸಲಾಗಿದೆ. ಅವುಗಳನ್ನು ಅಪ್ಪೇನಹಳ್ಳಿಯ ಬಳಿ ಡಿ.ಸಿದ್ದಾಪುರದಲ್ಲಿರಿಸಲಾಗಿದ್ದು, ಅವುಗಳನ್ನು ನೋಡಿಕೊಳ್ಳಲೆಂದೇ ಒಬ್ಬ ವ್ಯಕ್ತಿಯನ್ನು ನೇಮಕ ಮಾಡಲಾಗಿದೆ. ಆತನಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸುವುದೂ ಗ್ರಾಮಸ್ಥರ ಜವಾಬ್ದಾರಿಯಾಗಿದೆ.ಪ್ರತಿವರ್ಷದ ಜಾತ್ರೆಗೆ ದೇವರ ಎತ್ತುಗಳನ್ನು ವಿಧಿವತ್ತಾಗಿ ಕರೆತಂದು ಪೂಜಿಸಲಾಗುತ್ತದೆ.

ಇಷ್ಟೊಂದು ವೈಶಿಷ್ಟ್ಯಗಳಿರುವ ವಲಸೆ ಗ್ರಾಮದಲ್ಲಿ ಯಾರೂ ವಾಹನಗಳನ್ನೇರಿ ಹೋಗುವಂತಿಲ್ಲ. ಸೈಕಲ್, ಬೈಕ್‌ಗಳನ್ನು ಗ್ರಾಮದ ಹೊರಗೆ ತಂದೇ ವಾಹನವೇರಿ ಹೋಗಬೇಕು. ಇದು ಇಲ್ಲಿಯ ಅಲಿಖಿತ ನಿಯಮಗಳಲ್ಲೊಂದು. ಬಂಡಿಗಳನ್ನೂ ಗ್ರಾಮದಲ್ಲಿ ತರುವಂತಿಲ್ಲ. ಇದು ಈ ಗ್ರಾಮದ ಪದ್ಧತಿ. ‘ಹಿಂದಿನೋರು ನಡಸ್ಕೊಂಡು ಬಂದಾರ, ಅದನ್ನ ನಾವು ಮುಂದುವರಿಸೀವಿ’ ಎಂದು ಗ್ರಾಮದ ಚಂದ್ರಪ್ಪ ಹೇಳುತ್ತಾರೆ. ‘ನಮ್ ದೇವರದು ಭಾಳ ಇತಿಹಾಸ ಐತೆ, ೨-೩ ದಿನಾ ಆದ್ರೂ ಮುಗಿಯಂಗಿಲ್ಲ’ ಎಂದು ತಳವಾರ ನಿಂಗಪ್ಪ, ದಡ್ಲ ಮಾರಮ್ಮನ ಪೂಜಾರ ಹೇಳುತ್ತಾರೆ. ‘ನಮ್ ಊರಿನ ಬಗ್ಗೆ ನಮ್ ಹುಡುಗ್ರಿಗೆ ಏನೂ ತಿಳಿದಿಲ್ಲ, ತಿಳಿಸಬೇಕಾದ ಹಿರೇರು ಹುಡುಗರಿಗೆ ಹೇಳಿದ್ರ, ಎಷ್ಟೋ ವಿಷಯಗಳ ಗೊತ್ತಾಗ್ತಾವ’ ಎಂದು ಗ್ರಾಮದ ಯುವಕ ಓಂಕಾರಪ್ಪ ಹೇಳುತ್ತಾರೆ. ಆಸಕ್ತರು ಈ ಗ್ರಾಮವನ್ನು ಸಂದರ್ಶಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಓಂಕಾರಪ್ಪ, ಮೊಬೈಲ್ ಸಂ.೯೯೦೧೮೬೮೬೯೨ಗೆ ಸಂಪರ್ಕಿಸಬಹುದು.

 

‍ಲೇಖಕರು sreejavn

October 31, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. apppaaji

    ಅರುಣ್‌ ಜೋಳದ ಕೂಡ್ಲಿಗೆ ಜಾನಪದ ರಂಗದಲ್ಲಿ ಈವರೆಗೆ ಗಮನಿಸಿದ ಅನೇಕ ಸಂಗತಿಗಳನ್ನು ಬೆಳಕಿಗೆ ತರುತ್ತಿರುವರು. ಅನೇಕ ವರ್ಷಗಳಿಂದ ಅಲ್ಲಿಯೆ ಇರುವ ಅನೇಕರಿಗೆ ಇದರ ವಿಶೇಷತೆಯ ಅರಿವು ಇಲ್ಲ. ಅದು ನಾಗರೀಕತೆಯ ದಾಳಿಗೆ ಸಿಕ್ಕಿ ಕಾಣದಾಗುವ ಮೊದಲು ದಾಖಲೀಕರಣ ಮಾಡುವುದು ಅತಿ ಮುಖ್ಯ. ಲೇಖನ ಸೊಗಸಾಗಿ ಮೂಡಿ ಬಂದಿದೆ. ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: