‘ಎಂಗೆಯುಂ..ಎಂಪ್ಪೋದಮ್..’ ಕುಮಾರ ರೈತ ಅವರ ವಿಮರ್ಶೆ

Kumara Raitha
-ಕುಮಾರ ರೈತ
ಈ ಚಿತ್ರ ಆರಂಭಗೊಳ್ಳುವುದೇ ಅಂತ್ಯದಿಂದ. ನಂತರ ಪಾತ್ರಗಳ ವಿವರದ  ಸುರುಳಿ  ಬಿಚ್ಚಿಕೊಳ್ಳುತ್ತಾ  ಭೂತ-ವರ್ತಮಾನಗಳ ನಡುವೆ  ಚಲಿಸುತ್ತದೆ. ಈ ಪ್ರಕ್ರಿಯೆಗಳನ್ನೆಲ್ಲ  ಪ್ರತ್ಯಕ್ಷದರ್ಶಿಯಾಗಿ ನೋಡಿದ ಗಾಢ ಅನುಭವ ಆಗುತ್ತದೆ. ಇದು ಮನವನ್ನು ಕಲಕಿ….ವಿಷಾದದ ಭಾವ ಉಳಿಸುತ್ತದೆ.
ಹೊಸತನದ ನಿರೂಪಣೆಯ ಈ ಸಿನಿಮಾ ತಮಿಳಿನ ‘ಎಂಗೆಯುಂ..ಎಂಪ್ಪೋದಮ್..ಅಂದರೆ ಎಲ್ಲಿಯೂ..ಯಾವಾಗಲೂ…

ತಾನು ಪ್ರೀತಿಸಿದವನ ಪಡೆಯಲು ತಿರುಚ್ಚಿಯಿಂದ ಚೆನ್ನೈಗೆ ಬಸ್ಸಿನಲಿ ಸಾಗುವ ಯುವತಿ ಅಮುದ, ಇದೇ ಭಾವದಿಂದ ಚೆನ್ನೈಯಿಂದ ತಿರುಚ್ಚಿಗೆ ಸಾಗುವ ಯುವಕ ಗೌತಮ್.  ಈತ ಕುಳಿತ ಬಸ್ಸನ್ನೇ ಮತ್ತೊಂದು ಜೋಡಿ ಏರುತ್ತದೆ. ತಾನು ತೀವ್ರವಾಗಿ ಪ್ರೀತಿಸಿದ ಮಣಿ ಮೇಘಮಾಲೆಯನ್ನು ತನ್ನ ಕುಟುಂಬದವರಿಗೆ ಪರಿಚಯಿಸುವುದಕ್ಕಾಗಿ ಕರೆದುಕೊಂಡು ಹೋಗುತ್ತಿರುವ ಕದಿರೇಶ.  ದುಬೈನಲ್ಲಿದ್ದು ಐದು ವರ್ಷದಿಂದ ನೋಡಿರದ ಪುಟ್ಟ ಮಗಳನ್ನು ಕಾಣುವ ತವಕದಿಂದ ಊರಿಗೆ ಮರಳುತ್ತಿರುವ ವ್ಯಕ್ತಿ.  ತವರಿಗೆ ತೆರಳುತ್ತಿರುವ ಪತ್ನಿಯನ್ನು ಅಗಲಿರಲಾರದೇ ತಾನೂ ಒಂದಷ್ಟು ದೂರ ಜೊತೆಗೆ ಬರುತ್ತೇನೆಂದು ಸಾಗುವ ಪತಿ. ಬಸ್ಸಿನಲಿ ಪಯಣಿಸುತ್ತಿರುವಾಗಲೇ ಪರಸ್ಪರ ಪ್ರೇಮದ ಸೆಳೆತಕ್ಕೆ ಸಿಲುಕುವ ಜೋಡಿ.
ಹೀಗೆ ವಿವಿಧ ಪಾತ್ರಗಳ ವಿವರಗಳನ್ನು ಹೊತ್ತ ಬಸ್ಸುಗಳು ಗಮ್ಯದೆಡೆಗೆ ವೇಗದಿಂದ ಚಲಿಸುತ್ತವೆ.
ಉದ್ಯೋಗದ ಸಂದರ್ಶನ ಮತ್ತು ಅಕ್ಕನ ಮನೆಗೆ ತೆರಳುವ ಉದ್ದೇಶದಿಂದ ಅಪರಿಚಿತ ಚೆನ್ನೈಗೆ ಬಂದಿಳಿಯುವ ಅಮುದ  ಇದಕ್ಕಾಗಿ ಎಂದೂ ನೋಡಿರದ ಯುವಕನ ನೆರವು ಕೇಳಬೇಕಾಗುತ್ತದೆ. ಇದರಿಂದ ಇಬ್ಬರು ಮುಂಜಾನೆಯಿಂದ ಸಂಜೆವರೆಗೂ ಒಟ್ಟಿಗೆ ಸಾಗಬೇಕಾಗುತ್ತದೆ.  ಈ ಅವಧಿಯಲ್ಲಿ ಇಬ್ಬರಿಗೂ ಪರಸ್ಪರರ ವ್ಯಕ್ತಿತ್ವಗಳು ಅನಾವರಣಗೊಳ್ಳುತ್ತಾ  ಸಾಗುತ್ತದೆ.  ಅಕ್ಕನ ಮನೆ ತಲುಪುವುದರೊಳಗೆ ಅಮುದಾಳಿಗೆ ಗೌತಮ್ಮೇಲೆ ಪ್ರೇಮ ಅಂಕುರವಾಗುತ್ತದೆ.  ಆದರೆ ಇದ್ಯಾವುದರ ಸೂಚನೆಯೂ ಇಲ್ಲದ ಗೌತಮ್ ನಿರ್ಭಾವುಕವಾಗಿ ತೆರಳುತ್ತಾನೆ. ಆದರೆ ಅಮುದ ದಿನದಿಂದ ದಿನಕ್ಕೆ ಭಾವುಕಳಾಗತೊಡಗುತ್ತಾಳೆ. ಬಂದ ಸಂಬಂಧಗಳ್ಯಾವುದು ಹಿಡಿಸುವುದಿಲ್ಲ.  ಇದರ ಕಾರಣ ಅರಿತ ಆಕೆಯ ಅಕ್ಕ ‘ ಒಂದು ದಿನದಲ್ಲಿಯೇ ಆತನ ಮೇಲೆ ಪ್ರೇಮಾಂಕುರವಾಗಿ ಬಿಟ್ಟಿತ್ತೆ’ ಎಂದಾಗ ಅಮುದ ನೀಡುವ ಉತ್ತರ ಬಲು ಮಾರ್ಮಿಕ. ‘ ಅಕ್ಕ ನಿನ್ನನ್ನು ಭಾವ ನೋಡಲು ಬಂದು ಚಹಾಕುಡಿದು ಮುಗಿಸುವುದರೊಳಗೆ ಒಪ್ಪಿಗೆಯೆಂದರು. ಚಹಾ ಕೊಟ್ಟು ಒಳಬಂದ ನೀನೂ ಕೂಡ ನನಗೆ ಸಮ್ಮತ ಎಂದೆ. ಒಂದು ಚಹಾ ಕುಡಿಯುವುದರೊಳಗೆ ಅಪರಿಚಿತರಾದ ನೀವಿಬ್ಬರೂ ಒಟ್ಟಿಗೆ ಬಾಳಲು ನಿಶ್ಚಯಿಸಿಬಿಟ್ಟಿರಿ. ಆದರೆ ನಾನು ಆತನೊಂದಿಗೆ ಇಡೀ ದಿನದ ಸಮಯ ಕಳೆದಿದ್ದೆ. ಆತನ ವ್ಯಕ್ತಿತ್ವ ಅರಿಯಲು ಅಷ್ಟು ಸಮಯ ಸಾಕು’.
ಇಡೀ ಸಿನಿಮಾ ಪೋಕಸ್ ಆಗಿರುವುದು ಅಮುದ-ಗೌತಮ್, ಮಣಿ ಮೇಘಮಾಲೆ-

ಕದಿರೇಶ ಪಾತ್ರಗಳ ಮೇಲೆ.ಆದರೆ ಉಳಿದ ಪಾತ್ರಗಳು ಪೋಷಣೆಯಿಲ್ಲದೇ ಸೊರಗಿವೆ ಎಂದು ಅನಿಸುವುದೇ ಇಲ್ಲ. ಕೆಲವೇ ಸಂಭಾಷಣೆಗಳಮೂಲಕ ಆ ಪಾತ್ರಗಳ ವಿವರಗಳನ್ನು ಸದೃಢವಾಗಿ ಕಟ್ಟಿಕೊಡಲಾಗಿದೆ.
ಈ ಎರಡು ಜೋಡಿಗಳ ನಡುವೆ ಪ್ರೇಮಮೊಳಕೆಯೊಡೆಯುವ ಮತ್ತು ಗಟ್ಟಿಯಾಗುವ ಪರಿ ಅತ್ಯಂತ ಸಹಜವಾಗಿ ಮೂಡಿದೆ.
ಕದೀರೇಶ ಮತ್ತು ಮಣಿ ಮೇಘಮಾಲೆಯ ಪ್ರೇಮಾಂಕುರ ಮತ್ತೂ ವಿಭಿನ್ನ. ಸತತ ಆರು ತಿಂಗಳು ಆಕೆಯನ್ನು ಕದಿರೇಶ ಗಮನಿಸುತ್ತಲೇ ಇರುತ್ತಾನೆ. ಪ್ರೇಮ ವ್ಯಕ್ತಪಡಿಸಲು ಮಾತ್ರ ಹಿಂಜರಿಕೆ. ಆದರೆ ಮಣಿ ಮೇಘಮಾಲೆ ದಿಟ್ಟ ಹೆಣ್ಣು ಮಗಳು. ಈತನ ನಡೆನುಡಿ…ಭಾವ ಗಮನಿಸಿ ತಾನಾಗಿ ಮುಂದೆ ಬಂದು ಮಾತನಾಡಿಸಿ ಆತನ ಮನದಿಂಗಿತ ಅರಿಯುತ್ತಾಳೆ. ಅಲ್ಲಿಂದ ಮುಂದೆ ಇವರಿಬ್ಬರ ನಡುವೆ ನಡೆಯುವ ಮಾತು-ಕಥೆ…ಕನಸುಗಳು ತುಂಬ ಸ್ವಾರಸ್ಯಕರ.
ಕಾಲೇಜು ಜೋಡಿ ನಡುವೆ ಬಸ್ಸಿನಲ್ಲಿಯೇ ಒಂದೆರಡು ಗಂಟೆಗಳಲ್ಲಿಯೇ ಪ್ರೇಮಾಂಕುರವಾಗುತ್ತದೆ. ಇದನ್ನು ಚಿತ್ರಿಸಿದ ರೀತಿ ತುಂಬ ಆಸಕ್ತಿಕರ. ಇವರಿಬ್ಬರ ಪರಸ್ಪರ ಪರಿಚಯ ಮುಂದೆ ಬಳಕೆಯಾಗುವ ರೀತಿ ಮನ ಕರಗಿಸುತ್ತದೆ. ನವ ದಂಪತಿಯ ಪರಸ್ಪರ ಸೆಳೆತ ಚಿತ್ರಿಸಿರುವ ರೀತಿ ಕೂಡ ಮನೋಜ್ಞ.
ಕನಸುಗಳನ್ನೇ ಕನವರಿಸುತ್ತಿರುವ ಜೀವಗಳನ್ನು ಹೊತ್ತು ಸಾಗುವ ಎರಡೂ ಬಸ್ಸುಗಳು ಸಂಧಿಸುವ ರೀತಿ ಎದೆ ನಡುಗಿಸುತ್ತದೆ. ಇದು ಯಾವೆಲ್ಲ ಪರಿಣಾಮಗಳನ್ನು ಬೀರುತ್ತದೆ ಎನ್ನುವುದನ್ನು ಚಿತ್ರ ನೋಡಿ ತಿಳಿದರೆ ಸೂಕ್ತವೆನ್ನಿಸುತ್ತದೆ. ಎಲ್ಲಿಯೂ ಅತಿ ಎನಿಸದ ಅಥವಾ ಕಡಿಮೆಯೂ ಎನಿಸದ ಸಂಭಾಷಣೆ…ನಟರ ಭಾವಾಭಿವ್ಯಕ್ತಿ…ಹಾಡುಗಳು…ಛಾಯಾಗ್ರಹಣ..ಸಂಕಲನ ಎಲ್ಲವೂ ಪೂರಕವಾಗಿವೆ. ಚಿತ್ರಕಥೆ-ಸಂಭಾಷಣೆ-ನಿರ್ದೇಶನದ ಜವಾಬ್ದಾರಿಯನ್ನು ಎಂ.ಶರವಣ ಬಹಳ ಶಕ್ತವಾಗಿ ನಿರ್ವಹಿಸಿದ್ದಾರೆ.
ಜೈ, ಶರವಣಾನಂದ, ಅಂಜಲಿ ಮತ್ತು ಅನನ್ಯ ಪಾತ್ರಗಳ ಒಳಗೆ ಪರಕಾಯ ಪ್ರವೇಶ ಮಾಡಿ ಅಭಿನಯಿಸಿದ್ದಾರೆ. ಈ ಸಿನಿಮಾ ನೋಡಿ ತಿಂಗಳು (ಸೆಪ್ಟೆಂಬರ್ 16, 2011 ಬಿಡುಗಡೆ) ಕಳೆಯಿತು. ಆದರೆ ಆ ಚಿತ್ರ ಮೂಡಿಸಿದ ವಿಷಾದ ಕಳೆಯಲು ಇನ್ನೂ ಸಾಧ್ಯವಾಗಿಲ್ಲ. ಈ ಬರಹ ಬರೆದ ಮೇಲಾದರೂ ಮನದ ಭಾರ ಕಡಿಮೆಯಾಗಬಹುದೇ…ಎನ್ನುವ ನಿರೀಕ್ಷೆಯೊಂದಿಗೆ….

 

‍ಲೇಖಕರು sreejavn

October 31, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. anoop

    thumbha ollaya vimarshae… release adda varadalle noodthey… thumbha roopa veeruva apparoopadha cinema…

    ಪ್ರತಿಕ್ರಿಯೆ
    • D.RAVIVARMA

      sir,nimma cinema vimarshe tumba manamutuvahagide. nammalli cinema noduva arthisikolluva bagge ondistu charcheyagabekagide anta anisutte,i am eagerly waiting for the film.
      ravi.hampi

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: