ಎಚ್ಚೆಸ್ವಿ ಬರೆಯುತ್ತಾರೆ:ಹೀಗೊಂದು (ಅಳಿಲು) ರಾಮಾಯಣ

-ಎಚ್.ಎಸ್.ವೆಂಕಟೇಶಮೂರ್ತಿ

ಬೆಳಗಾಬೆಳಿಗ್ಗೆ ಬಿವಿ ಕಾರಂತರಿಂದ ಫೋನ್: “ಎಚ್ಚೆಸ್ವಿ ನಿಮ್ಮೊಂದಿಗೆ ತುರ್ತಾಗಿ ಮಾತಾಡುವುದಿದೆ. ದಯವಿಟ್ಟು ಬಿಡುವುಮಾಡಿಕೊಂಡು ಬರುತ್ತೀರಾ?”. ನಾನು ಬೇಗ ತಿಂಡಿಶಾಸ್ತ್ರ ಮುಗಿಸಿ ಕಾರಂತರ ಮನೆಗೆ ಹೋಗೋಣ ಎಂದುಕೊಂಡೆ. ಅಷ್ಟರಲ್ಲಿ ಕಾರಂತರಿಂದ ಮತ್ತೆ ಫೋನ್: “ಬ್ರೇಕ್ಫಾಸ್ಟಿಗೆ ನಮ್ಮಲ್ಲಿಗೇ ಬನ್ನಿ”. ಸರಿ ಅಂದುಕೊಂಡು ನಾನು ಕಾರಂತರ ಮನೆ ತಲಪಿದಾಗ ಗೇಟಿನ ಬಳಿಯೇ ಕಾರಂತ ನಿಂತಿದ್ದರು. ಅವರ ನಿಂಜ ಪಕ್ಕದಲ್ಲಿ ಗಸಗಸ ತೇಗುತ್ತಾ. ನನ್ನನ್ನ ನೋಡಿದ್ದೇ ಅವ ಬಗುಳಾಟ ಶುರುಹಚ್ಚಿದಾಗ “ಏಯ್…ಫ್ರೆಂಡ್ ಕಣೋ” ಅಂತ ಕಾರಂತ ಅವನನ್ನು ಸಮಾಧಾನಪಡಿಸಿದರು. ನಾವು ಒಳಗೆ ಹೋದ ಮೇಲೆ ಪ್ರೇಮ ಕಾಣಿಸಿಕೊಂಡು, “ದೋಸೆ ಆರಿ ಹೋಗತ್ತೆ…ಮೊದಲು ನೀವು ತಿಂಡಿ ತಿಂದುಬಿಡಿ…” ಎಂದರು. ದೋಸೆ ತಿನ್ನುತ್ತಾ ಏನು ವಿಷಯ ಕಾರಂತರೆ ಕೇಳಿದೆ. “ನನಗೆ ಅರ್ಜೆಂಟಾಗಿ ಒಂದು ಮಕ್ಕಳ ನಾಟಕ ಬೇಕು. ವರ್ಕ್ಷಾಪ್ ಶುರುವಾಗಿಬಿಟ್ಟಿದೆ. ಯಾಕೋ ಯಾವ ನಾಟಕವೂ ಓಕೆ ಆಗುತ್ತಿಲ್ಲ. ನನ್ನ ಹತ್ರ ಕಥೆಯಿದೆ. ನೀವು ಅದನ್ನ ನಾಟಕ ಮಾಡಿ”. ನಿಮಗೆ ಯಾವಾಗ ಬೇಕಾಗತ್ತೆ? .”ನಾಳೆ! ನಾಡಿದ್ದು!”. ನಾನು ನಕ್ಕು ಮೊದಲು ಕಥೆ ಹೇಳಿ ನೋಡುವಾ…ಎಂದೆ. ಕಾರಂತರು ಆಗ ಅಳಿಲುರಾಮಾಯಣದ ಕಥೆ ಹೇಳಿದರು. ಅವರ ದೋಸೆ ತಿನ್ನಾಟ ನಿಂತೇ ಹೋಯಿತು. ನೀವು ತಿಂಡಿ ಮುಗಿಸಿ ಆಮೇಲೆ ಕಥೆ ಹೇಳಿ…ಎಂದರು ಪ್ರೇಮ.

ಕಾರಂತ ಆ ಮಾತು ಕೇಳಿಸಿಕೊಳ್ಳಲೇ ಇಲ್ಲ. ಕಥೆ ಹೇಳೋದರಲ್ಲಿ ಅವರು ತನ್ಮಯರಾಗಿದ್ದರು.  ನೀವು ಈ ನಾಟಕ ಹಿಂದಿಯಲ್ಲಿ ಮಾಡಿಸಿದ್ದಿರಂತಲ್ಲ. ಆ ಸ್ಕ್ರಿಪ್ಟ್ ಇದೆಯಾ ಕೇಳಿದೆ. “ನೋಡುತ್ತೇನೆ. ಸಿಕ್ಕರೆ ಕೊಡುತ್ತೇನೆ. ಹಾಗೆ ಸ್ಕ್ರಿಪ್ಟ್ ಅಂತ ಬರೆದಿರಲಿಲ್ಲ. ರಿಹರ್ಸಲ್ಲಲ್ಲೇ ಮಾತು ಹುಟ್ಟಿಸುತ್ತಾ ಹೋಗಿದ್ದೆ” ಅಂತ ಕಾರಂತ ಯಾಕೋ ಸಣ್ಣಗೆ ಒಟಗುಟ್ಟಿ….”ನನ್ನ ಕೇಳಿದರೆ ನೀವು ಆ ಸ್ಕ್ರಿಪ್ಟಲ್ಲಿ ಸಿಕ್ಕಿಹಾಕಿಕೊಳ್ಳೋದೇ ಬೇಡ. ನೀವು ನಿಮ್ಮ ಕಲ್ಪನೆಗೆ ಏನೇನು ತೋರತ್ತೋ ಅದೆಲ್ಲಾ ಫ್ರೀಯಾಗಿ ಬರೀರಿ…ಹಳೇದಕ್ಕೆ ಸಿಕ್ಕಿಕೊಂಡರೆ ಹೊಸದು ಹುಟ್ಟೋದಿಲ್ಲ…” ಅಂದರು. ಒಂದು ಡಯಲಾಗ್ ಬಗ್ಗೆ ಮಾತ್ರ ಅವರು ಮತ್ತೆ ಮತ್ತೆ ಹೇಳಿದರು. ಏನು…ಕಪಿಗಳು ಸಮುದ್ರ ದಾಟಿ ಬಂದುಬಿಟ್ಟವಾ ಅನ್ನುತ್ತಾನೆ ರಾವಣ. ಸಮುದ್ರ ದಾಟಲಿಕ್ಕೆ ಅಶಕ್ಯ ಅಂತ ಅವನ ನಂಬಿಕೆ…ಅದಕ್ಕೇ ಅವನು ಸಮುದ್ರ ಅನ್ನೋದನ್ನ ಸಮಾನಾರ್ಥಕವಾದ ಹತ್ತಾರು ಶಬ್ದಗಳಿಂದ ಹೇಳ್ತಾನೆ…ನನಗೆ ಅದು ಬೇಕು…ಅಂದರು. ನೀವು ಸ್ಕ್ರಿಪ್ಟಲ್ಲಿ ಸಿಕ್ಕಿಕೊಳ್ಳ ಬೇಡಿ ಅನ್ನುತ್ತಿದ್ದ ಕಾರಂತ ತಾವೇ ಒಂದು ಡಯಲಾಗಲ್ಲಿ ಸಿಕ್ಕಿಹಾಕಿಕೊಂದಿದ್ದರು… ಒಂದು ವಾರದಲ್ಲಿ ನಾನು ನಾಟಕ ಮುಗಿಸಿ ಕಾರಂತರ ಮನೆಗೆ ಹೋದೆ. ಕಾರಂತ ಸ್ಕ್ರಿಪ್ಟ್ ಪರಕ್ಕನೆ ಕಸಿದುಕೊಂಡು ರಾವಣನ ಡಯಲಾಗು ಹುಡುಕ ತೊಡಗಿದರು. ಆಮೇಲೆ ಗಡ್ಡ ನೀವಿಕೊಂಡು ತುಟಿಯ ಸಂದಲ್ಲಿ ಸಣ್ಣಗೆ ನಕ್ಕು, ಆಮೇಲೆ ಇದ್ದಕ್ಕಿದ್ದಂತೆ ಗಂಭೀರರಾಗಿ ರಾವಣನನ್ನು ತಮ್ಮ ಮೇಲೆ ಆರೋಪಿಸಿಕೊಂಡು ಡಯಲಾಗನ್ನು ತಮಗೆ ತಾವೇ ಬೇರೆ ಬೇರೆ ಲಯದಲ್ಲಿ ಹೇಳಿಕೊಳ್ಳತೊಡಗಿದರು. ಅವರಿಗೆ ನಾನು ಎದುರಿಗೆ ಕೂತಿರೋದು ಮರೆತೇ ಹೋಗಿತ್ತು. ರವೀಂದ್ರಕಲಾಕ್ಷೇತ್ರದಲ್ಲಿ ಅಳಿಲುರಾಮಾಯಣ ನಾಟಕ. ಕಲಾಕ್ಷೇತ್ರ ತುಂಬಿ ತುಳುಕುತಾ ಇತ್ತು. ಕಾರಂತರದ್ದೇ ಸಂಗೀತ . ನಾಟಕ ಅದ್ಭುತವಾಗಿ ಮೂಡಿಬಂತು. ಅಳಿಲು ಮಾಡಿದ್ದ ಹುಡುಗಿ ತುಂಬ ಚುರುಕಾಗಿದ್ದಳು. ಇಡೀ ನಾಟಕದ ಕಣ್ಮಣಿ ಅವಳು. ಹಾಗೇ ಸುಗ್ರೀವ ಮಾಡಿದ್ದ ಹುಡುಗ. ವೇದಿಕೆ ತುಂಬಿಕೊಂಡಿದ್ದ ನಾಟಕ ಉದ್ದಕ್ಕೂ ಚಟುವಟಿಕೆಯಿಂದ ಗಿಲಿಗಿಲಿ ಅನ್ನುತ್ತಾ ಇತ್ತು. ಗೂಢಚಾರರ ಪಾತ್ರ ಮಾಡಿದ್ದ ಹುಡುಗರದ್ದು ಅದ್ಭುತ ಜೋಡಿ. ಇವ ಹೆಚ್ಚು; ಇವ ಕಮ್ಮಿ ಅನ್ನುವಂತಿಲ್ಲ. ಮಾತು ಮಾತಿಗೆ ಕಿವಿಗಡಚಿಕ್ಕುವ ಚಪ್ಪಾಳೆ. ಸಹಜವಾಗೇ ನನ್ನ ಕಣ್ಣಂಚು ಒದ್ದೆಯಾಗಿತ್ತು. ನಾಟಕ ಮುಗಿದು ಮಕ್ಕಳೆಲ್ಲಾ ರಂಗದ ಮೇಲೆ ನಿಂತಾಗ ಪ್ರೇಕ್ಷಕರ ಸ್ಟಾಂಡಿಂಗ್ ಅವೇಷನ್. ಕಾರಂತರಿಗೆ ಖುಷಿಯಾಗಿತ್ತು. ಅವರು ವೇದಿಕೆ ಮೇಲೆ ಬಂದರು. ನಾಗಾಭರಣ ಕಲಾವಿದರನ್ನೆಲ್ಲಾ ವೇದಿಕೆಗೆ ಕರೆಯುತ್ತಾ ಇದ್ದರು. ನಾಟಕದ  ಹಿಂದೆ ಕೆಲಸ ಮಾಡಿದವರು ಒಬ್ಬೊಬ್ಬರಾಗಿ ಆಹ್ವಾನಿತರಾಗಿ ಪ್ರೇಕ್ಷಕರ ಅಭಿನಂದನೆ ಸ್ವೀಕರಿಸಿದರು. ಕೆಲವರ ಹೆಸರು ಮರೆತುಹೋದಾಗ ಯಾರೋ ಬಂದು ನಾಗಾಭರಣರ ಕಿವಿಯಲ್ಲಿ ಪಿಸುಗುಟ್ಟುತ್ತಿದ್ದರು. ಭರಣ ತಪ್ಪಿತಸ್ಥ ಭಾವದಿಂದ “ನೋಡಿ… ಅತ್ಯಂತ ಮುಖ್ಯರಾದ ಹೆಸರೇ ನಾನು ಹೇಳಲಿಲ್ಲ. ದಯವಿಟ್ಟು ಕ್ಷಮಿಸ ಬೇಕು…” ಇತ್ಯಾದಿ ಹೇಳಿ ಅರಕೆ ತುಂಬಿಕೊಳ್ಳುತ್ತಿದ್ದರು. ಬಂದವರನ್ನೆಲ್ಲಾ ಕಾರಂತ ಅಭಿನಂದಿಸುವುದು, ಹೂಗುಚ್ಛ ನೀಡುವುದು ನಡೆಯಿತು. ಪ್ರೇಮಾಕಾರಂತ ಮತ್ತೆ ಕೆಲವರನ್ನ ಭರಣರಿಗೆ ನೆನಪಿಸಿದರು. ಪ್ರೇಕ್ಷಕರು ನಾಟಕ ಮುಗಿದ ಮೇಲೆ ಸಾಮಾನ್ಯವಾಗಿ ಕಲಾಮಂದಿರ ತೆರವು ಮಾಡುತ್ತಾರೆ.  ಆದರೆ ಅಳಿಲುರಾಮಾಯಣ ಎಷ್ಟು ಪ್ರಭಾವಶಾಲಿಯಾಗಿ ಮೂಡಿಬಂದಿತ್ತೆಂದರೆ ಪ್ರೇಕ್ಷಕರು ಅಭಿಮಾನ ತುಂಬಿದ ಕಣ್ಣುಗಳಿಂದ ಮಕ್ಕಳನ್ನು ನೋಡುತ್ತಾ ಇನ್ನೂ ಪ್ರೇಕ್ಷಾಂಗಣದಲ್ಲಿ ನಿಂತೇ ಇದ್ದರು. ಮತ್ತೆ ಕೆಲವರು ಮಕ್ಕಳನ್ನು ಅಭಿನಂದಿಸಲು ವೇದಿಕೆಯ ಕಡೆ ಒತ್ತರಿಸುತ್ತಾ ಇದ್ದರು. ಈ ಮಹಾಸಂಭ್ರಮದಲ್ಲಿ ಒಂದು ಹೆಸರು ಕಾರಂತರಿಗೆ, ಪ್ರೇಮಾ ಅವರಿಗೆ ಮರೆತೇ ಹೋಗಿತ್ತು! ಅದು ನಾಟಕ ರಚಿಸಿದ ಲೇಖಕನ ಹೆಸರು. ಈ ಬಗ್ಗೆ ನಾಗಾಭರಣರ ಬಳಿ ಅಸಮಾಧಾನ ವ್ಯಕ್ತಪಡಿಸಿ, ಲೇಖಕ ಮುಖ ಪೆಚ್ಚುಮಾಡಿಕೊಂಡು ತನ್ನ ಪಾಡಿಗೆ ತಾನು ಮನೆಯ ದಾರಿಹಿಡಿದ.
*****
ಮನೆಗೆ ಬಂದ ನಾನು ಯಾರ ಬಳಿಯೂ ಮಾತಾಡದೆ ಸುಮ್ಮನೆ ಮಲಗುವ ಕೋಣೆಗೆ ಹೋಗಿಬಿಟ್ಟೆ. ಯಾಕೆ…? ಏನಾಯ್ತು? ನಾಟಕ ಚೆನ್ನಾಗಿ ಬರಲಿಲ್ಲವಾ? ಎಂದು ಹೆಂಡತಿ ಕೇಳಿದಳು. ನಾನು ಉತ್ತರಿಸಲಿಲ್ಲ. ಊಟವನ್ನೂ ಮಾಡಲಿಲ್ಲ. ನನ್ನ ಸ್ವಭಾವದ ಪರಿಚಯವಿದ್ದ ಹೆಂಡತಿ ನಾಳೆ ಅವರೇ ಹೇಳುತ್ತಾರೆ ಅಂತ ಸುಮ್ಮನಾಗಿಬಿಟ್ಟಳು. ರಾತ್ರಿ ಬಹಳ ಹೊತ್ತು ನನಗೆ ನಿದ್ದೆ ಹತ್ತಲಿಲ್ಲ. ಯಾವ ಮಾಯದಲ್ಲಿ ನಿದ್ದೆ ಹತ್ತಿತೋ ಕಾಣೆ. ಬೆಳಿಗ್ಗೆ ನಾನು ಕಣ್ಣು ಬಿಟ್ಟಾಗ ಎಂಟುಗಂಟೆ ಸಮಯ. ಬೇಗ ಬೇಗ ಪ್ರಾತರ್ವಿಧಿಗಳನ್ನು ಮುಗಿಸಿ, ಪ್ರೆಸ್ನಲ್ಲಿ ಸ್ವಲ್ಪ ಕೆಲಸವಿದೆ…ಬಾಕಿನಾ ಹತ್ತಿರ ಹೋಗುತ್ತೇನೆ ಎಂದು ಹೆಂಡತಿಗೆ ಹೇಳಿ ಗಾಂಧಿಬಜಾರಿಗೆ ಹೋದೆ. ಲಿಪಿಯಲ್ಲಿ ನಾನು ಬಾಕಿನಾ ಮಾತಾಡುತ್ತಾ ಕುತಿದ್ದೆವು. ನೆನ್ನೆಯ ವಿಷಯ ಅವರಿಗೆ ಹೇಳಿದೆ. ಕಾರಂತರು ಸ್ವಲ್ಪ ಗಡಿಬಿಡಿ ಮನುಷ್ಯರು. ನಿಮ್ಮನ್ನು ಕರೆಯದಿದ್ದುದು ಕೇವಲ ಆಕಸ್ಮಿಕ ಅನ್ನಿಸತ್ತೆ…ಅದರಲ್ಲಿ ಬೇರೆ ಯಾವ ಉದ್ದೇಶವೂ ಇರುವುದಿಲ್ಲ ಎಂದು ನನಗೆ ಬಾಕಿನಾ ಸಮಾಧಾನ ಹೇಳಿದರು. ಇಂಥ ಅನುಭವಗಳು ನನಗೆ ತೀರ ಹೊಸದೇನಾಗಿರಲಿಲ್ಲ. ಸ್ವಲ್ಪ ಸಮಯ ಮನಸ್ಸು ಕಲಕುವ ಇಂಥ ಘಟನೆಗಳು ಒಂದೆರಡು ದಿನದಲ್ಲಿ ಪೂರ್ಣ ತಹಬಂದಿಗೆ ಬಂದು ನೀರು ಮತ್ತೆ ತಿಳಿಯಾಗುತ್ತದೆ. ಮತ್ತೆ ಇನ್ನ್ಯಾವುದೋ ಕೆಲಸಕ್ಕೆ ನಾನು ತೊಡಗಿಬಿಡುತ್ತೇನೆ.  ನಾನು ಬಾಕಿನಾ ವಿದ್ಯಾರ್ಥಿಭವನಕ್ಕೆ ಹೋಗಿ ದೋಸೆ ತಿಂದೆವು. ಆಯಿತು..ಮುಂದಿನ ವಾರ ಮತ್ತೆ ನಿಮ್ಮನ್ನು ಕಾಣುವೆ ಎಂದು ಅವರಿಗೆ ವಿದಾಯ ಹೇಳಿ ನಾನು ಮನೆಯ ದಾರಿ ಹಿಡಿದೆ. ದಾರಿಯಲ್ಲಿ ಅಶ್ವಥ್ ಮನೆ. ಅವರನ್ನು ನೋಡಿ ಬಹಳ ದಿನವಾಗಿತ್ತು. ನೋಡಿ ಮಾತಾಡಿಸಿಕೊಂಡು ಹೋಗೋಣ..ಅಂತ ಅವರ ಮನೆಯ ಬಳಿ ಇಳಿದೆ. ಏನ್ಸ್ವಾಮಿ ನೆನ್ನೆ ಭರ್ಜರಿ ಬಂತಂತಲ್ಲ ನಿಮ್ಮ ನಾಟಕ…ಎಂದು ಅಶ್ವತ್ಥ ಗಟ್ಟಿಕೊರಳಲ್ಲಿ ನನ್ನನ್ನು ಸ್ವಾಗತಿಸಿದರು. ನಾನು ಸಪ್ಪೆಯಾಗಿ ನಕ್ಕು…ಹುಂ…ಹಾಗಂತ ಬಹಳ ಜನ ಮಾತಾಡಿದ್ದ ಕೇಳಿದೆ…ಅದಿರಲಿ ನೀವು ಏನು ಮಾಡಿದಿರಿ ಹೇಳಿ..ಎಂದು ವಿಷಯಾಂತರ ಮಾಡಿದೆ. ಮತ್ತೆ ನಾವು ಬೇರೆ ಲೋಕಾಭಿರಾಮದಲ್ಲಿ ತೊಡಗಿದೆವು. ಅಷ್ಟು ಹೊತ್ತಿಗೆ ಮನೆಯಿಂದ ನನಗೆ ಫೋನ್. ರಾಜಲಕ್ಷ್ಮಿ ಹೇಳಿದಳು. ಕಾರಂತರು ಬಂದಿದ್ದರು. ಏನೇನೋ ಅವಸರದಲ್ಲಿ ಮಾತಾಡಿದರು. ನನಗೆ ಸರಿಯಾಗಿ ಅರ್ಥವಾಗಲಿಲ್ಲ. ನಾನು ಎಚ್ಚೆಸ್ವೀನ ಸಾರಿ ಕೇಳ ಬೇಕಾಗಿದೆ ಅಂದರು. ಮತ್ತೆ ಗಡಿಬಿಡಿಯಿಂದ ಹೊರಟು ಬಿಟ್ಟರು…ಇವತ್ತು ಷೋಗೆ ನೀವು ಹೋಗಲೇ ಬೇಕಂತೆ ಅಂದಳು. ನಾನು ಎಲ್ಲಿಹೋಗಿದ್ದೀನಿ ಅಂತ ನೀನು ಅವರಿಗೆ ತಿಳಿಸಿದೆಯಾ ಎಂದೆ. ಬಾಕಿನಾ ಪ್ರೆಸ್ಸಿಗೆ ಹೋಗಿದ್ದಾರೆ ಎಂದೆ ಅಂದಳು. ನನಗೆ ನಿಜಕ್ಕೂ ಈಗ ಪೆಚ್ಚಾಗಿತ್ತು. ಈ ವಯಸ್ಸಲ್ಲಿ ಕಾರಂತ ಯಾರದ್ದೋ ಸ್ಕೂಟರಿನ ಹಿಂದೆ ಕೂತು ಕಷ್ಟ ಸಾಧ್ಯವಾದ ರಸ್ತೆಯಲ್ಲಿ, ನನಗೆ ಸಮಾಧಾನ ಹೇಳಲಿಕ್ಕೆ ತಾವೇ ನನ್ನ ಮನೆಗೆ ಬಂದಿದ್ದಾರೆ. ಅವರ ದೊಡ್ಡತನ ನನ್ನ ಕಣ್ಣಲ್ಲಿ ನೀರು ತರಿಸಿತು. ಅವರು ನನ್ನ ಹೆಸರು ಕರೆಯದಿದ್ದರೆ ಏನಾಯ್ತು? ನಾನ್ಯಾಕೆ ಅದನ್ನು ಅಷ್ಟೊಂದು ಮನಸ್ಸಿಗೆ ಹಚ್ಚಿಕೊಂಡೆ? ಭರಣ ನನಗೆ ಬೇಸರವಾದ ಬಗ್ಗೆ ಕಾರಂತರಿಗೆ ಹೇಳಿರ ಬೇಕು. ನಾನು ಇಡೀ ಪ್ರಸಂಗವನ್ನು ಇನ್ನೂ ತಣ್ಣಗೆ ತೆಗೆದುಕೊಳ್ಳಬೇಕಾಗಿತ್ತು ಎಂದು ಪರಿತಪಿಸಿದೆ. ಮನೆಗೆ ಹೋಗಿ ಉಶ್ಷಪ್ಪಾ ಅಂತ ಕುರ್ಚಿಯ ಮೇಲೆ ಕೂತಿದ್ದೇನೆ, ಬಾಕಿನಾ ಫೋನ್. “ಎಚ್ಚೆಸ್ವೀ…ಕಾರಂತರು ಬಂದಿದ್ದರು ಇಲ್ಲಿಗೆ….ನಿಮಗೆ ಸಾರಿ ಹೇಳಬೇಕೂ ಅಂತ…!”. ಛೆ! ಅನ್ನಿಸಿತು ನನಗೆ. ನಮ್ಮ ಸ್ವಕೇಂದ್ರ ಚಿಂತನೆ ಎಷ್ಟು ಸಣ್ಣವರನ್ನಾಗಿ ಮಾಡುತ್ತದಲ್ಲ ನಮ್ಮನ್ನ!…..ನಾನೂ ನಾಟಕದ ಯಶಸ್ಸಿನ ಸಂದರ್ಭದಲ್ಲಿ ಎಲ್ಲರೊಂದಿಗೆ ಬೆರೆತಿದ್ದರೆ ಎಷ್ಟು ಪ್ರಸನ್ನವಾಗಿ ನೆನ್ನೆಯ ರಾತ್ರಿ ಪರಿಣಮಿಸುತ್ತಾ ಇತ್ತು. ಅದೆಲ್ಲಾ ಕಳೆದುಕೊಂಡೆನಲ್ಲಾ..ಎಂದು ವ್ಯಥೆಪಟ್ಟೆ. ಎಲ್ಲಕ್ಕಿಂತ ಹೆಚ್ಚಾಗಿ ಕಾರಂತರು ತಮ್ಮ ಅನಾರೋಗ್ಯ ಸ್ಥಿತಿಯಲ್ಲಿ ಸ್ಕೂಟರೊಂದರ ಹಿಂದೆ ಕೂತು ಕಠಿಣವಾದ ಹಾದಿಯಲ್ಲಿ ನಮ್ಮ ಮನೆಗೆ ಬರಬೇಕಾಯಿತಲ್ಲ! ಅಂತ . ಅದೂ ಕಾರಂತರು ನಮ್ಮ ಮನೆಗೆ ಬಂದದ್ದು ಮೊದಲ ಸಾರಿ. ಅದು ಹೀಗೆ ಆಗಬೇಕಾಗಿರಲಿಲ್ಲ….ಬಾಕಿನಾ ಹೇಳಿದರು. ಕಾರಂತರು ಈವತ್ತು ಸಂಜೆ ಶೋಗೆ ನಿಮ್ಮನ್ನು ಕಲಾಕ್ಷೇತ್ರಕ್ಕೆ ಕರೆದುಕೊಂಡುಬರುವ ಹೊಣೆ ನನಗೆ ಒಪ್ಪಿಸಿದ್ದಾರೆ…ನೀವು ಆಗದು ಅನ್ನುವಂತಿಲ್ಲ. ಬರಲೇ ಬೇಕು. ನಾನು ಐದುಗಂಟೆಗೆ ನಿಮ್ಮಲ್ಲಿಗೆ ಬರುತ್ತೇನೆ….
******
ಅಳಿಲುರಾಮಾಯಣದ ಎರಡನೇ ಶೋ ಅದು. ನಾಟಕ ಇನ್ನೂ ಪ್ರಾರಂಭವಾಗಿಯೇ ಇಲ್ಲ. ಕಾರಂತ ವೇದಿಕೆಯ ಮೇಲೆ ಬಂದರು. ನನ್ನನ್ನು ವೇದಿಕೆಗೆ ಸ್ವಾಗತಿಸಿದರು. ತಬ್ಬಿಕೊಂಡು, ಹೂಗುಚ್ಚ ಕೊಟ್ಟು ಅಭಿನಂದಿಸಿದರು. ಆಮೇಲೆ ಕಿವಿಯಲ್ಲಿ ಸಣ್ಣಗೆ “ನನ್ನನ್ನು ಕ್ಷಮಿಸಿದ್ದೀರಷ್ಟೇ?” ಅಂತ ಪಿಸುಗುಟ್ಟಿದರು. ನಾನು ಲಜ್ಜೆಯಿಂದ ತಲೆತಗ್ಗಿಸಿದೆ.

ಚಿತ್ರ ಕೃಪೆ-ಅಂತರ್ಜಾಲ
*******

‍ಲೇಖಕರು avadhi

October 17, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

19 ಪ್ರತಿಕ್ರಿಯೆಗಳು

  1. veda

    ಕಾರಂತರ ಘನತೆ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ. ಎಚ್ಚೆಸ್ವಿ ಬರವಣಿಗೆ ನಮಗೆ ಪ್ರಿಯವಾಗುವುದು ಇದಕ್ಕಾಗಿಯೇ.

    ಪ್ರತಿಕ್ರಿಯೆ
  2. ಲಕ್ಷ್ಮೀನಾರಾಯಣ ವಿ.ಎನ್

    ಅಳಿಲ ಚಿತ್ರ ತುಂಬಾ ಚೆನ್ನಾಗಿದೆ. ರಚಿಸಿದವರ ಹೆಸರು ಪ್ರಕಟಿಸಿ

    ಪ್ರತಿಕ್ರಿಯೆ
    • hsv murthy

      ಹೌದು. ಚಿತ್ರ ನನಗೂ ತುಂಬ ಇಷ್ಟವಾಯಿತು.

      ಪ್ರತಿಕ್ರಿಯೆ
    • Rankusa

      its the “Squirrel” by Roger Excoffon, a French typeface & graphic designer.

      -R

      ಪ್ರತಿಕ್ರಿಯೆ
  3. ವಿಶ್ವೆಶ್ವ್ರರ ಶರ್ಮ

    ವಿಷಯ ಪ್ರೆರಣಾದಾಯಿ ಯಾಗಿದೆ. ದನ್ಯವಾದಗಳು

    ಪ್ರತಿಕ್ರಿಯೆ
  4. Prashanth Ignatius

    ಬರಹ ತುಂಬಾ ಚೆನ್ನಾಗಿದೆ ಸಾರ್!!!

    ಪ್ರತಿಕ್ರಿಯೆ
  5. D.V.Sridhara

    Alilu ramaayanada yashassinna kushi naanu anubahvisidde, kaarana nannamaganu adarlli paatradari aagidda,aagina gatane nenapige tandu karaanta vyakittva avarannu ellara manadladlli irirside.hsv yavarige dnyavadagalu.

    ಪ್ರತಿಕ್ರಿಯೆ
  6. Rankusa

    well, it is A MISTAKE, and a formidable one from an elderly one—- not giving timely credit to the person who, pound-for-pound, deserved it. it is as weighty a mistake as usurping credits, supressing one from taking credit, or feeling jealous if someone somehow wins some credit. we’re so brimful with this mentality. damn, i’m sick of it.

    and you don’t have to be sorry Mr.HSV. any sane person in your place would’ve felt the same. age can’t be an excuse for not using some common sense—until the person happens to be totally, or at least, partially senile. and felicitating the next day IS NOT AT ALL a way of honoring someone but is simply a ‘damage control’ measure. in fact, its your modesty that you’re paying obeisance to him in your own way i.e. through this article.

    points of view differ. so just want to make it clear that it is just my ‘personal opinion,’ ‘as seen through my eyes,’ and therefore, shouldn’t be taken for an attempt to defame anyone- living or dead.

    -R

    ಪ್ರತಿಕ್ರಿಯೆ
    • HSV

      ಆತ್ಮೀಯರೇ,
      ನಿಮ್ಮ ಸದಾಶಯಕ್ಕೆ ಆಭಾರಿ. ಇಂಥ ಕಹಿ ಅನುಭವಗಳು ನನಗೆ ಅನೇಕ ಆಗಿವೆ( ವಿಶೇಷವಾಗಿ ಸಿನಿಮಾ ಮತ್ತು ನಾಟಕ ರಂಗಗಳಿಗೆ ಸಂಬಂಧಿಸಿದಂತೆ). ಅವನ್ನು ಅರಗಿಸಿಕೊಳ್ಳುವ ಒಂದೇ ಮಾರ್ಗ ಸಕಾರಾತ್ಮಕ ನೆಲೆಯಲ್ಲಿ ಅಂಥ ಸಂದರ್ಭಗಳನ್ನು ನೋಡುವುದು. ಮನಸ್ಸನ್ನು ಮತ್ತೆ ತಿಳಿ ಮಾಡಿಕೊಳ್ಳಲು ಯತ್ನಿಸುವುದು. ಕಷ್ಟವಾದರೂ ಅಂಥ ಪ್ರಯತ್ನಗಳಲ್ಲಿ ತೊಡಗಿಕೊಳ್ಳುತ್ತೇನೆ. ಇದು ನಾವು ಮಾಡ ಬಹುದಾದ ಅದೇ ಬಗೆಯ ತಪ್ಪು ನಡೆಗಳನ್ನು ಮರುಪರಿಶೀಲಿಸುವ ಅವಕಾಶಗಳನ್ನೂ ಕೊಡುತ್ತದೆಯಲ್ಲವೆ?
      ಎಚ್ಚೆಸ್ವಿ

      ಪ್ರತಿಕ್ರಿಯೆ
    • h s v murthy

      ಆತ್ಮೀಯ ಛಾಯಾ ಅವರಿಗೆ,
      ಹೊಸಪೇಟೆಯಿಂದ ಬರೆಯುತ್ತಿರುವಿರಾ?
      ನಿಮ್ಮ ಅಭಿಮಾನಕ್ಕೆ ಋಣಿ.
      ಎಚ್ಚೆಸ್ವಿ

      ಪ್ರತಿಕ್ರಿಯೆ
  7. Prasad V Murthy

    ಸರ್ ಮೊಟ್ಟ ಮೊದಲನೆಯದಾಗಿ ನಿಮಗೆ ನಮಸ್ಕರಿಸುತ್ತೇನೆ. ನಿಮ್ಮ ಸಾಹಿತ್ಯವನ್ನು ಅಸ್ವಾದಿಸುವಾಗ ನನ್ನನ್ನು ನಾನೇ ಮರೆತುಬಿಡುತ್ತೇನೆ. ಹಾಗೆ ಮೊನ್ನೆ ಸಿಕ್ಕಿಕೊಂಡ ಗಾಳ ‘ಬಾನಿಗೆ ಜಿಗಿಯುವ ನಗುವಿನ ಬಗೆಗೆ ಜೋಲುವ ಅಳುವಿನ ಧಾತು’! ಇನ್ನೂ ಆ ಗುಂಗಿನಿಂದ ಹೊರಗೆ ಬರಲಾಗಿಲ್ಲ! ಇಂತಹ ಸಾಹಿತ್ಯವನ್ನು ಸೃಷ್ಟಿಸುತ್ತಾ ನಮ್ಮಂತಹ ಯುವ ಬರಹಗಾರರಿಗೆ ದಾರಿದೀಪವಾಗಿರುವ ನಿಮಗೆ ನಮ್ಮೆಲ್ಲರ ಕಡೆಯಿಂದ ಕೃತಜ್ಞತಾ ಪೂರ್ವಕ ನಮನ.
    ಈ ಬರಹ ಸೂಕ್ಷ್ಮ ನೆಲೆಗಟ್ಟಿನಲ್ಲಿ ಮೂಡಿ ನಿಂತು ನಮ್ಮೆಲ್ಲರ ಜೀವನಗಳಿಗೂ ಅಗಾಧ ಸಾರವನ್ನು ಬಿಟ್ಟು ಕೊಟ್ಟಿದೆ. ಮನುಷ್ಯ ಕೆಲವೊಮ್ಮೆ ತುಂಬಾ ಸಂಕೀರ್ಣವಾಗಿ ಯೋಚಿಸುತ್ತಾನೆ. ಆ ವಿಷಯ ಅಷ್ಟು ಸಂಕೀರ್ಣತೆಗೆ ಯೋಗ್ಯವೂ ಇಲ್ಲವೋ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆ ವರ್ತನೆಗಳು ಮತ್ತೊಬ್ಬರಿಗೆ ಘಾಸಿ ಮಾಡಿದವೆಂದು ತಿಳಿದಾಗ, ಹಿಡಿಯಷ್ಟಾಗುತ್ತಾನೆ. ಆ ವ್ಯಕ್ತಿ ಅನುಭವಿಸಿದ ತೊಳಲಾಟಕ್ಕಿಂತ ಹೆಚ್ಚು ತೊಳಲಾಡುತ್ತಾನೆ! ಅಂತಹ ಒಂದು ಸನ್ನಿವೇಶವನ್ನು ಮನೋಜ್ಞವಾಗಿ ಬಿಚ್ಚಿಟ್ಟಿದ್ದೀರಿ. ಕಾರಂತರೊಳಗಿನ ಸಹೃದಯಿಯ ಪರಿಚಯ ಕಾಡದೆ ಇರದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: