ಎಚ್ಚೆಸ್ವಿ ಅನಾತ್ಮ ಕಥನ: ಬೇಟೆಗಾರ ಬಂ ಬಂ…

ಅನಾತ್ಮಕಥನ-ಒಂಭತ್ತು

ಅರವತ್ತು ವರ್ಷಗಳ ಹಿಂದೆ ನಮ್ಮ ಹಿತ್ತಲು ಒಂದು ಸಣ್ಣ ಕಾಡಿನ ಹಾಗೇ ಇತ್ತು. ಅಗಳ್ತಿಗೆ ಅಂಚುಕಟ್ಟಿ ದಟ್ಟವಾದ ಉಪ್ಪೆ ಮೆಳೆಗಳು. ಈ ಕಡೆ ನಾಡಿಗರ ಹಿತ್ತಲಲ್ಲಿ ಸಣ್ಣ ಬೆಟ್ಟದ ಹಾಗಿದ್ದ ಬುರುಜು. ಅದರ ತುಂಬ ನಾನಾ ರೀತಿಯ ಪೊದೆಗಳು ಬೆಳೆದು ದುರ್ಭೇದ್ಯವಾಗಿತ್ತು. ಅದರ ಪಕ್ಕದಲ್ಲಿ ಭಾರಿ ಎತ್ತರದ ಬಾಗಿ ಮರ ಒಣಗಿದ ಕಾಯಿ ಸುರಿಸುತ್ತ ನಮ್ಮ ಅಜ್ಜನಿಗೆ ದಿನಾ ಹಿತ್ತಲು ಗುಡಿಸುವುದೇ ಒಂದು ಕೆಲಸವಾಗಿತ್ತು. ಚಳಿಗಾಲ ಬಂದರೆ ಒಣಗಿದ ಎಲೆಗಳೂ ಬಾಗಿ ಮರದಿಂದ ಒಂದೇ ಸಮನೆ ಸುರಿಯುತ್ತಾ ನಮ್ಮ ಮನೆಯ ಹೆಂಚಿನ ಮೇಲೆ ನಿಬಿಡವಾಗಿ ಶೇಖರವಾಗುತ್ತಾ ಇದ್ದವು. ಕೆಲವು ತರಗೆಲೆ ಹೆಂಚಿನ ಸಂದಿಯಿಂದ ತೂರಿ ಮನೆಯೊಳಗೆ ಬೀಳುವುದೂ ಇತ್ತು. ಆ ಬಾಗಿ ಮರ ಕಡಿಸಿ ಎಂದರೆ ಆ ಹಿತ್ತಲ ಯಜಮಾನರು ಮರ ಕಡಿಸಲು ಸುತ್ರಾಂ ಸಿದ್ಧರಿರಲಿಲ್ಲ. ಬಾಗಿಮರದಿಂದ ಅವರಿಗೆ ಅನಾನುಕೂಲವೇನೂ ಇರಲಿಲ್ಲ. ನಮ್ಮ ಮನೆಗೆ ತೊಂದ್ರೆ ಆದರೆ ಆಗಲೇಳು ಎಂಬುದು ಅವರ ವಿಚಾರವಿದ್ದ ಹಾಗಿತ್ತು. ಬಾಗಿ ಮರ ಕಡಿಸುವ ಬಗ್ಗೆ ನಮ್ಮ ಮನೆಯವರಿಗೂ ಅವರ ಮನೆಯವರಿಗೂ ಆಗಾಗ ಜಗಳ ಆಗುತ್ತಿತ್ತು. ಜಗಳವಾದ ಒಂದೆರಡು ದಿನ ನಾಡಿಗರ ಮನೆಯ ಹುಡುಗರು ನಾನು ಮಾತು ಬಿಡುತ್ತಾ ಇದ್ದೆವು. ಎರಡು ದಿನ ಅಷ್ಟೆ. ಆಮೇಲೆ ಮೆಲ್ಲಗೆ ಮತ್ತೆ ಮಾತು ಶುರುಮಾಡುತ್ತಿದ್ದೆವು. ಹಾಗೆ ನೋಡಿದರೆ ಬಾಗಿಮರ ನನಗೆ ಪ್ರಿಯವಾಗಿತ್ತು ಕೂಡ.

ಬೆಳಗಾಗ ನಮ್ಮ ಅಜ್ಜ ಕಡ್ಡಿಪೊರಕೆಯಲ್ಲಿ ಹಿತ್ತಲು ಗುಡಿಸುತ್ತಾ ಸಣ್ಣ ಧೂಳಿನ ಮೋಡ ಎಬ್ಬಿಸುತ್ತಾ ಇದ್ದರಲ್ಲಾ! ಆಗ ನಾನು ಹಿತ್ತಲ ಕಟ್ಟೆಯ ಮೇಲೆ ಕೂತು ಬಾಗಿಮರವನ್ನ ನೋಡುತಾ ಇರುತ್ತಿದ್ದೆ. ಬಾಗಿಮರದ ಮೇಲೆ ನಾನಾ ರೀತಿ ಹಕ್ಕಿಗಳು ಬಂದು ಕೂತುಕೊಳ್ಳುತ್ತಾ ಇದ್ದವು. ಕಾಗೆ, ದೊಂಬರಕಾಗೆ, ಗೀಜಗ, ಮರಕುಟಿಗ ಇರಲಿ ಕೆಲವು ಸಲ ಗುಂಪು ಗುಂಪಾಗಿ ಗಿಳಿಗಳೂ ಆ ಮರಕ್ಕೆ ಬರುತ್ತಾ ಇದ್ದವು. ಅಡುಗೆ ಮನೆ ಕಿಟಕಿಯಿಂದ ಅವನ್ನು ನೋಡಿದಾಗ ಭೀಮಜ್ಜಿ …ಯಂಕಾ…ಗಿಳಿ ಬಂದವೆ ನೋಡೋ ಅಂತ ಗಟ್ಟಿಯಾಗಿ ಕೂಗುತಾ ಇದ್ದರು. ಇತ್ತ ಹಿತ್ತಲಲ್ಲಿ ಗುಡಿಸಿದ ಕಸ ಎಲ್ಲ ಒಟ್ಟು ಮಾಡಿ ಅಜ್ಜ ಬೆಂಕಿ ಹಚ್ಚುತ್ತಾ ಇದ್ದರು. ಬರೀ ಒಂದು ಲಂಗೋಟಿಯಲ್ಲಿ ಇರುತ್ತಿದ್ದ ಅಜ್ಜ ಚಂದಮಾಮದಲ್ಲಿ ಬರೋ ಕಾಡುಮನುಷ್ಯರ ಹಾಗೆ ಕಾಣುತಾ ಇದ್ದರು.

ನಮ್ಮ ಹಿತ್ತಲ ಕಾಡು ಒಂದು ನಿಗೂಢ ಅಕ್ಷಯ ಪಾತ್ರೆಯಹಾಗಿತ್ತು. ಹಿಪ್ಪೆ ಮೆಳೆಯಿಂದ ನಾನು ನೋಡುತ್ತಾ ನೋಡುತ್ತಾ ಇರುವಂತೇ ನಾನಾ ಬಗೆಯ ವಿಚಿತ್ರ ಪ್ರಾಣಿಗಳು ಹೊರಕ್ಕೆ ಬರುತ್ತಾ ಇದ್ದವು. ಮೊಲ, ಮುಂಗಸಿ, ಉಡ, ಅಳಿಲು, ಕಬ್ಬೆಕ್ಕು, ಹಾವು…ಹೀಗೆ. ಅದಕ್ಕೇ ಬೇಲಿ ಹತ್ತಿರ ಹೋಗುವುದಕ್ಕೆ ನನಗೆ ಹೆದರಿಕೆ. ಹೋಗಬೇಕು ಎಂಬ ಕುತೂಹಲ. ಆ ಪೊದೆಯ ಪಕ್ಕವೇ ನಮ್ಮ ಕಕ್ಕಸು ಗೋಡೆ. ಅಲ್ಲಿ ಕೂತು ಪಾಯಖಾನೆ ಮಾಡಿದರೆ ಅದು ಬುದು ಬುದು ಉರುಳಿ ಅಗಳ್ತಿಗೆ ಜಾರಿ ಹೋಗುತಾ ಇತ್ತು. ಅಗಳ್ತಿಯ ದಟ್ಟವಾದ ಮೆಳೆಗಳಲ್ಲಿ ಕ್ಷಣಾರ್ಧದಲ್ಲಿ ಅಂತರ್ಧಾನವಾಗುತ್ತಿತ್ತು. ಪಾಯಖಾನೆ ಸಲೀಸಾಗಿ ಉರುಳಿಹೋಗುವಹಾಗೆ ಕಲ್ಲು ಜೋಡಿಸಿ, ಪೊದೆಯ ಸಂದಿಯಲ್ಲಿ ಪಾಯಖಾನೆ ಜಾರಿಹೋಗುವ ಹಾಗೆ ವ್ಯವಸ್ಥೆಮಾಡಲಾಗಿತ್ತು. ಎಂದಾದರೊಂದುದಿನ ಆ ಕಲ್ಲಿನ ಆನಿಕೆಯಿಂದ ಒಂದು ಉಡವೋ, ಮುಂಗಸಿಯೋ ಬರೋದು ಗ್ಯಾರಂಟಿ ಅಂತ ನಾನು ಯಾವಾಗಲೂ ಭಯಪಡುತ್ತಾ ಇದ್ದೆ. ಗೋಡೆಯ ಹಿಂದೆ ಯಾರಾದರೂ ಇದ್ದಾರೆ ಅಂತ ಸೂಚಿಸಲು ಒಂದು ಡಬ್ಬ ಇಡುತ್ತಾ ಇದ್ದೆವು.

ಅಜ್ಜ ತರಗು ಸುಟ್ಟಿದ್ದಾದ ಮೇಲೆ ಸ್ನಾನ ಮಾಡಲಿಕ್ಕೆ ಬಚ್ಚಲಿಗೆ ಬರುತ್ತಾ ಇದ್ದರು. ಅಜ್ಜಾ…ನನಗೆ ಹಸಿವಾಗುತಾ ಇದೆ…ಕೆಂಡದ ರೊಟ್ಟಿ ಮಾಡಿಕೊಡು ಅಂತ ನಾನು ಹಠ ಮಾಡುತಾ ಇದ್ದೆ. ಅಜ್ಜ- “ಮೈತಕ್ಕಂಡು ಮಾಡಿಕೊಡ್ತೀನಿ ಸುಮ್ಕಿರು” ಅನ್ನುತ್ತಿದ್ದರು. ಸ್ನಾನ ಆದ ಮೇಲೆ ಅವರು ಅಡ್ಡ ಲುಂಗಿ ಸುತ್ತಿಕೊಂಡು ಒಂದು ಹಿಡಿ ಜೋಳದ ಹಿಟ್ಟಿಗೆ ಒಂದು ಚಿಟಕಿ ಉಪ್ಪು, ಒಂದು ಚಿಟಕಿ ಜೀರಿಗೆ ಸೇರಿಸಿ ಕಲಸಿ ಅದನ್ನು ಮುತ್ತುಗದ ಎಲೆಮೇಲೆ ತೆಳ್ಳಗೆ ತಟ್ಟಿ, ಮೇಲೆ ಇನ್ನೊಂದು ಮುತ್ತಗದ ಎಲೆ ಅಂಟಿಸಿ, ನೀರೊಲೆಯ ಕೆಂಡ ಕೆದಕಿ ಬೇಯಲಿಕ್ಕೆ ಇಡೋರು. ಅದು ಬೆಂದು ಘಮ್ ಅಂತ ವಾಸನೆ ಬಂದಾಗ ಊದುಗೊಳವೆಯಿಂದ ರೊಟ್ಟಿ ಹೊರಕ್ಕೆ ಎಳೆದು ಮುತ್ತುಗದ ಎಲೆಯಿಂದ ಬಿಡಿಸಿ, ಸುಡುತ್ತಿರುವ ರೊಟ್ಟಿಯನ್ನು ಹಾ ಹಾ ಎಂದು ಎಡಗೈಯಿಂದ ಬಲಗೈಗೆ ಬಲಗೈಯಿಂದ ಎಡಗೈಗೆ ತೂರಾಡುತ್ತಾ ಉಫ್ ಉಫ್ ಎಂದು ಅದರ ಮೇಲಿನ ಬೂದಿ ಹಾರಿಸಿ ನನಗೆ ತಿನ್ನುವುದಕ್ಕೆ ಕೊಡುತ್ತಾ ಇದ್ದರು. ಅಂಚು ಕಪ್ಪಗೆ ಸುಟ್ಟ ಆ ಕೆಂಡದ ರೊಟ್ಟಿಯ ರುಚಿಯನ್ನು ತಿಂದೇ ಅನುಭವಿಸ ಬೇಕು. ಇವತ್ತೂ ನೀರೊಲೆಯ ಕೆಂಡದ ರೊಟ್ಟಿ ನೆನೆದರೆ ನನ್ನ ಬಾಯಲ್ಲಿ ನೀರೂರುತ್ತೆ.

ರಜಾ ಬಂತೆಂದರೆ ನಮ್ಮ ಕೇರಿಯ ಎಲ್ಲ ಹುಡುಗರೂ ನಮ್ಮ ಹಿತ್ತಲಲ್ಲಿ ಸೇರುತಾ ಇದ್ದೆವು. ನಮ್ಮ ಆಟಕ್ಕೆ ಬೇಕಾದ ಅನೇಕ ಸಾಮಗ್ರಿಗಳು ಅಲ್ಲಿ ದಂಡಿಯಾಗಿ ಸಿಗುತಾ ಇದ್ದವು. ಲಂಟಾನು ಪೊದೆಯ ಬೇಲಿಯ ಕೆಳಗೆ ಶುಚಿಮಾಡಿಕೊಂಡು ಅಲ್ಲಿ ಮನೆಯಾಟ ಆಡುತಾ ಇದ್ದೆವು. ಪಾತಕ್ಕನ ಮನೆಯ ತುಳಸಿ ಅಡುಗೆ ಮಾಡುತಾ ಇದ್ದಳು. ಕಾರೆ ಹಣ್ಣು, ಕಾಕಿ ಹಣ್ಣು, ಉಪ್ಪೆಹಣ್ಣು,ಚಳ್ಳೆ ಹಣ್ಣು, ತೊಂಡೆ ಹಣ್ಣು, ಹಳೂದಿ ಬಣ್ಣದ ಕಜ್ಜಿ ಟೊಮಾಟೊ ಇವೆಲ್ಲಾ ನಮ್ಮ ಆಟಕ್ಕೆ ಒದಗುತ್ತಾ ಇದ್ದವು. ಅನ್ನ, ಸಾರು, ಹುಳಿ, ಮುದ್ದೆ ಎಲ್ಲಾ ಅದರಲ್ಲೇ. ಅಮ್ಮಾ ಹಸಿವೆ ಏನಾರ ಕೊಡು ಎಂದು ನಾವು ತುಳಸಿಯ ಲಂಗ ಹಿಡಿದುಕೊಂಡು ಅಳುತ್ತಾ ಇದ್ದೆವು. ಯಾವಾಗಲೂ ನಿಮಗೆ ತಿನ್ನೋದೇ ಧ್ಯಾಸ ಹಾಳು ಮುಂಡೇವಾ ಎಂದು ತುಳಸಿ ಬಯ್ಯುತ್ತಾ ಇದ್ದಳು. ಒಂದು ಮಧ್ಯಾಹ್ನ ಹಿಂಗೆ ನಾವು ಹಿತ್ತಲಲ್ಲಿ ಆಟ ಆಡುತ್ತಾ ಇದ್ದೇವೆ. ಇದ್ದಕ್ಕಿದ್ದಂತೆ ಹತ್ತು ಜನ ಅರೆಬೆತ್ತಲೆ ಕರಿಯರು ಬುರುಜಿನ ಕಡೆಯ ಗೋಡೆ ಹಾರಿ ನಮ್ಮ ಹಿತ್ತಲಿಗೆ ಧುಮುಕಿದರು. ದೊಣ್ಣೆಗಳಿಂದ ಪೊದೆಗೆ ಬಡಿದು ಹುಷ್ ಹುಷ್ ಎಂದು ಯಾವುದೋ ಪ್ರಾಣಿಯನ್ನು ಓಡಿಸುತ್ತಾ ಇದ್ದರು. ಹತ್ತೇ ನಿಮಿಷ ಜನ ಜಾತ್ರೆ ಸೇರಿಬಿಟ್ಟಿತು. ನಮ್ಮ ಹಿತ್ತಲಿಗೆ ಬಂದ ಆ ಜನ ನಮ್ಮೂರಿನವರಲ್ಲವಂತೆ. ಕಬ್ಬೆಕ್ಕಿನ ಬೇಟೆಗಾಗಿ ಬಂದವರಂತೆ. ಎಲ್ಲಾ ಜಗಲಿಯ ಮೇಲೆ ಬನ್ನಿ…ಅವರು ಕಬ್ಬೆಕ್ಕು ಹಿಡಿಯೋದು ನೋಡಿ ಅಂತ ನಮ್ಮ ಅಜ್ಜ ಕೂಗಿದರು. ಕಬ್ಬೆಕ್ಕು ಅಂದರೆ ಕಾಡು ಬೆಕ್ಕು. ಒಳ್ಳೇ ನಾಯಿಯ ಎತ್ತರ ಇರತ್ತೆ. ಅವು ನಮ್ಮ ಸಾಕು ಬೆಕ್ಕುಗಳನ್ನು ಹಿಡಿದು ಕಚ್ಚಿಕೊಂಡು ಹೋಗಿಬಿಡುತ್ತವೆ. ಹೋದ ವರ್ಷ ಕೂಡ ನಮ್ಮ ಪುಂಚಿ ಬೆಕ್ಕನ್ನು ಒಂದು ಕಬ್ಬೆಕ್ಕು ಹಾರಿಸಿಕೊಂಡು ಹೋಗಿತ್ತು. ಅದಕ್ಕೇ ಕಬ್ಬೆಕ್ಕೆಂದರೆ ನಮಗೆ ದ್ವೇಶ. ಕಬ್ಬೆಕ್ಕು ಹಿಡಿಯುವುದನ್ನು ನೋಡಲು ನಾವೆಲ್ಲಾ ಜಗಲಿಯ ಮೇಲೆ ಸಾಲಾಗಿ ಕುಕ್ಕರುಗಾಲಲ್ಲಿ ಕೂತೆವು. ಆ ಪರಸ್ಥಳದವರು ಹತ್ತಾರು ಜನ ಇದ್ದರು. ಅವರಲ್ಲಿ ಒಬ್ಬ ಹಣ್ಣು ಹಣ್ಣು ಮುದುಕ. ಅವನು ಅವರಿಗೆ ಅಲ್ಲಿ ಬಲೆ ಹಾಕಿ ಇಲ್ಲಿ ಬಲೆ ಹಾಕಿ ಅಂತ ಮಾರ್ಗದರ್ಶನ ಮಾಡುತಾ ಇದ್ದ. ಬುರುಜಿನ ಸುತ್ತಾ ಬಲೆ ಎಳೆದು ಒಂದು ಕೋಟೆಯನ್ನೇ ಅವರು ನಿರ್ಮಿಸಿಬಿಟ್ಟರು. ಕಬ್ಬೆಕ್ಕು ಬುರುಜಿನ ಪೊದೆಯಲ್ಲಿ ಸೇರಿಕೊಂಡಿದೆ ಎಂದು ಅವರು ಮಾತಾಡಿಕೊಳ್ಳುತ್ತಾ ಇದ್ದರು. ಈಗ ನಮ್ಮೆಲ್ಲರ ದೃಷ್ಟಿ ಬುರುಜಿನ ಮೇಲೇ ನಾಟಿತು. ಬುರುಜಿನ ಪೊದೆಯೊಳಗೆ ಉದ್ದನೆ ಗಳ ಹಾಕಿ ತಿವಿಯುತ್ತಾ ಅವರು ದೊಡ್ಡದಾಗಿ ಹುಯಿಲೆಬ್ಬಿಸಿದ್ದರು…ಎಹೆಹೆಹೇ ಅಂತ ವಿಚಿತ್ರವಾಗಿ ಸದ್ದು ಮಾಡುತ್ತಾ ಕಬ್ಬೆಕ್ಕನ್ನು ಪೊದೆಯಿಂದ ಹೊರಕ್ಕೆ ಓಡಿಸಲು ಅವರು ಪ್ರಯತ್ನಿಸುತ್ತಾ ಇದ್ದರು. ಕಬ್ಬೆಕ್ಕು ಹೊರಗೆ ಬಂದರೆ ಬುರುಜಿನ ಸುತ್ತಲೂ ಕಟ್ಟಿದ್ದ ಬಲೆಯಲ್ಲಿ ಸಿಕ್ಕಿಕೊಳ್ಳಬೇಕಾಗುತ್ತಿತ್ತು. ಆಗ ದೊಣ್ಣೆಗಳಿಂದ ಅದನ್ನು ಬಡಿದು ಸಾಯಿಸಲು ಅವರು ಸುತ್ತಾ ದೊಣ್ಣೆ ಹಿಡಿದುಕೊಂಡು ನಿಂತಿದ್ದರು. ನಾವು ಈಗ ಕಬ್ಬೆಕ್ಕು ಹೊರಗೆ ಬರತ್ತೆ …ಈಗ ಕಬ್ಬೆಕ್ಕು ಹೊರಕ್ಕೆ ಬರುತ್ತೆ ಅಂತ ಕಾಯುತ್ತಾ ಇದ್ದೆವು. ಹಾಳಾದದ್ದು ಅಷ್ಟೆಲ್ಲ ರಂಪ ಮಾಡಿದರೂ ಅದು ಹೊರಕ್ಕೆ ಬಂದರೆ ನೋಡಿ..! ಬುರುಜಿನ ಸುತ್ತಾ ಮೂರು ನಾಲಕ್ಕು ಬಿಲ ಅವರು ಹೇಗೋ ಪತ್ತೆ ಮಾಡಿದರು. ತರಗು ಹಾಕಿ ಆ ಬಿಲಗಳಿಗೆ ಹೊಗೆ ಹಾಕಿದರು. ಮುದುಕ ಊದುಗೊಳವೆಯಿಂದ ಫೂ ಫೂ ಎಂದು ಊದುತಾ ಇದ್ದ. ಮೆಲ್ಲಗೆ ಹೊಗೆ ಬುರುಜನ್ನೆಲ್ಲಾ ಆಕ್ರಮಿಸತೊಡಗಿತು. ಆ ಹೊಗೆಯಿಂದ ದೃಶ್ಯ ಅಸ್ಪಷ್ಟವಾಗತೊಡಗಿತು. ಅವರು ಕಣ್ಣು ತಿಕ್ಕಿಕೊಳ್ಳುತ್ತಾ ಕಬ್ಬೆಕ್ಕು ಹೊರಗೆ ಬರೋದನ್ನ ಕಾಯುತ್ತಾ ಇದ್ದರು. ಅಲ್ಲಿ ಅಲ್ಲಿ ಗಳ ಹಾಕು…ಅಲ್ಲಿ ಗಳ ಹಾಕು ಎಂದು ಕೂಗುತ್ತಾ ಇದ್ದರು. ಅವರಿಗೆ ಕಬ್ಬೆಕ್ಕಿನ ಕೂಗಿನ ಸದ್ದು ಸುತಾ ಕೇಳಿಸಿತಂತೆ. ನಮಗೇನೊ ಕಬ್ಬೆಕ್ಕಿನ ಕೂಗಿನ ಸದ್ದು ಕೇಳಿಸುತ್ತಾ ಇರಲಿಲ್ಲ. ಬೇಟೆಗೆ ಬಂದೋರಲ್ಲಿ ಒಬ್ಬ ಪುಟ್ಟ ಹುಡುಗ ಇದ್ದ. ನಮ್ಮ ವಾರಿಗೆಯೋನೇ. ಏಹೇಏಹೇ ಅಂತ ಅವನು ಕೂಗುತ್ತಾ ಗಡಿಬಿಡಿಯಿಂದ ಓಡಾಡುತಾ ಇದ್ದ. ದೊಡ್ಡವರು ಅವನ ಮುಂದೆ ಸಪ್ಪೆ ಎನ್ನಬೇಕು. ಅವತ್ತು ಅವನೇ ನಮ್ಮ ಹೀರೋ ಅನ್ನಬಹುದು. ಅವನ ಕೆಂಚನೆಯ ಬಣ್ಣದ ಅಂಗಿ, ಕೆದರಿದ ಪುರುಚಲು ಪುರುಚಲು ತಲೆ, ಅವನು ಹಾರಿಹಾರಿ ಓಡುವ ರೀತಿ ನಮ್ಮಲ್ಲಿ ರೋಮಾಂಚ ಉಂಟು ಮಾಡುತಾ ಇತ್ತು. ನೋಡ್ರೋ ಕೊನೆಗೆ ಅವನೇ ಕಬ್ಬೆಕ್ಕು ಹಿಡಿಯೋದು ಅಂತ ನಾವು ಮಾತಾಡಿಕೊಳ್ಳುತ್ತಾ ಇದ್ದೆವು. ಭೀಮಜ್ಜಿ ಕರುಣೆಯಿಂದ ಆ ಹುಡುಗನ್ನನ್ನು ಕರೆದು ಅವನಿಗೆ ಒಂದು ರೊಟ್ಟಿ ತುಣುಕು ಕೊಟ್ಟು…ಭಾಳ ಚುರುಕಿದ್ದಿ ಕಣೋ ನೀನು… ಜೀವನದಲ್ಲಿ ಮುಂದಕ್ಕೆ ಬಾರಪ್ಪ ಅಂತ ಆಶಿರ್ವಾದ ಮಾಡಿದ್ದು ನಮಗೆ ಭಾಳ ವಿಚಿತ್ರ ಅನ್ನಿಸ್ತು. ಮೆಲ್ಲಗೆ ಸಾಯಂಕಾಲ ಆಗುತ್ತಾ ಇತ್ತು. ಬುರುಜಿನ ಪೊದೆ ಒಂದು ಕಡೆ ಹತ್ತಿಕೊಂಡು ಬೆಳ್ಳಗೆ ಹೊಗೆ ಬರುತ್ತಾ, ಹಸಿರು ಎಲೆ ಸುಡುವಾಗ ಆಗುವ ಸಿಮಿಸಿಮಿ ಸದ್ದಾಗುತ್ತಿತ್ತು. ಸಂಜೆಯ ಕೆಂಪಿನಿಂದ ಬುರುಜಿನ ಹಿಂದಿನ ಆಕಾಶವೆಲ್ಲಾ ಕೆಂಪಾಗಿತ್ತು. ರಕ್ತದಲ್ಲಿ ಅದ್ದಿದ ಹೇಂಟೆಯ ಪುಕ್ಕಗಳಂತೆ ಮೋಡ ಉದ್ದಕ್ಕೂ ಹಿಂಜಿಕೊಂಡಿತ್ತು. ಬುರುಜೇ ದುರ್ಯೋಧನ ಬಚ್ಚಿಟ್ಟುಕೊಂಡಿರೋ ಹೊಂಡ. ಇವರೆಲ್ಲಾ ಪಾಂಡವರು. ಆ ಹುಡುಗ ಅಭಿಮನ್ಯು. ಎಲ್ಲಾ ಸೇರಿ ದುರ್ಯೋಧನನ್ನ ಹೊರಗೆ ಹೊರಡಿಸುತಾ ಇದ್ದಾರೆ ಅಂತ ನಾವು ಅಜ್ಜಿ ನೆನ್ನೆತಾನೆ ಹೇಳಿದ ಕಥೆಗೆ ಈವತ್ತಿನ ದೃಶ್ಯ ತಳುಕುಹಾಕಿ ಕಲ್ಪನೆ ಮಾಡುತ್ತಾ ಇದ್ದೆವು. ನಮ್ಮ ಕಥೆಯಲ್ಲಿ ಅಭಿಮನ್ಯುವಿನ ಹತ್ಯೆ ಆಗಿರಲೇ ಇಲ್ಲ. ಬೇಟೆಗೆ ಬಂದವರ ಗುಂಪಲ್ಲಿ ಒಬ್ಬಳು ಹೆಂಗಸಿದ್ದಳು. ಒಂದು ಕೂಸನ್ನು ಬಟ್ಟೆಯಲ್ಲಿ ತನ್ನ ಹೊಟ್ಟೆಗೆ ಕಟ್ಟಿಕೊಂಡಿದ್ದಳು. ಅವಳು ನಮ್ಮ ಭೀಮಜ್ಜಿಯ ಹತ್ತಿರ ಬಂದು ಒಂದು ಮುಷ್ಟಿ ಹಿಟ್ಟುಕೊಡ್ರವ್ವಾ… ಮಗು ಬೆಳಗ್ನಿಂದ ಗಂಜಿ ಸುತಾ ಕುಡ್ದಿಲ್ಲ…ಎಂದು ಗೋಗರೆದಳು. ಅಜ್ಜಿ ಒಂದು ಮುಷ್ಟಿ ಹಿಟ್ಟು ಕೊಟ್ಟಾಗ ಒಂದು ಚಿಟಕೆ ಉಪ್ಪು ಇಸಕೊಂಡು ನೀರಲ್ಲಿ ಹಿಟ್ಟು ಕದಡಿ, ನಮ್ಮ ಜಗಲಿಯ ಕೆಳಗೇ ಮೂರು ಕಲ್ಲು ಹೂಡಿ ತಾತ್ಕಾಲಿಕ ಒಲೆ ಮಾಡಿ ಆ ಹೆಂಗಸು ಗಂಜಿ ಬೇಯಿಸಿದಳು. ಗಂಜಿ ಆದಮೇಲೆ ಉಫ್ ಉಫ್ ಎಂದು ಗಂಜಿ ಆರಿಸಿ, ಒಂದು ತೊಟ್ಟು ತಾನು ಕುಡಿದು, ಒಂದು ತೊಟ್ಟು ಮಗುವಿಗೆ ಕುಡಿಸುತ್ತಾ ಬಟ್ಟಲು ಖಾಲಿ ಮಾಡಿದಳು.

ಆಗಲೇ ನೋಡಿ ಹೋ ಅಂತ ಆ ಬೇಟೆಗಾರರು ಕಿರುಚಿದ್ದು. ಬೆಕ್ಕು ಹೊರಗೆ ಬಂತು ಕಣ್ರೋ…!ಬಂತು ಕಣ್ರೋ…! ಬಡೀರಿ…ಬಡೀರಿ…ಬಡೀರಿ…

ನಾವು ಈಗ ಬುರುಜಿನ ಕಡೆ ನೋಡಿದೆವು. ಕಬ್ಬೆಕ್ಕು ಸುಮಾರು ಒಂದಡಿ ಎತ್ತರ, ಎರಡಡಿ ಉದ್ದದ್ದು. ಪಾಪ! ಬಾಯಲ್ಲಿ ತನ್ನ ಮರಿಯನ್ನು ಕಚ್ಚಿಕೊಂಡಿದೆ. ಗಬಕ್ಕನೆ ಹೊರಗೆ ಹಾರಿ, ಬಲೆ ದಾಟಿ ಓಡಲಿಕ್ಕೆ ನೋಡುತ್ತಿದೆ. ಅದರ ಫಳ ಫಳ ಹೊಳೆಯುವ ನೀಲಿ ಕಣ್ಣುಗಳಲ್ಲಿ ಯಾವ ಭಾವ ಆ ಕ್ಷಣದಲ್ಲಿ ಮಿಂಚಿತೋ ನಾನು ಹೇಳಲಾರೆ. ಅದು ಹೊರಗೆ ಹಾರಿದ್ದೇ ತಡ, ಅದೆಲ್ಲಿದ್ದರೋ ಪಾಪಿಗಳು…ಎಲ್ಲಾ ಮುತ್ತಿಕೊಂಡು ದಪ ದಪ ಕಣಗೆಯಿಂದ ಕಬ್ಬೆಕ್ಕನ್ನು ಬಡಿದು ಹಾಕಿದರು. ರಕ್ತಸಿಕ್ತವಾಗಿದ್ದ ಆ ಮಿಗವನ್ನು ಎತ್ತಿಕೊಂಡು, ಅದರ ಮೇಲೆ ಒಂದು ಬಟ್ಟೆ ಹೊಚ್ಚಿಕೊಂಡು ಮುದುಕ ಹೊರಟೇ ಬಿಟ್ಟ, ಕಬ್ಬೆಕ್ಕಿನ ಮರಿ ಮ್ಯಾವ್ ಮ್ಯಾವ್ ಅಂತ ಅಳುತ್ತಾ ಇತ್ತು. ಅಭಿಮನ್ಯು ಅದನ್ನು ಹೆಗಲ ಮೇಲೆ ಹಾಕಿಕೊಂಡ. ಹೆಂಗಸು ಮಗುವನ್ನು ಮತ್ತೆ ತನ್ನ ಹೊಟ್ಟೆಗೆ ಕಟ್ಟಿಕೊಂಡಳು. ಹ್ಯಾಗೆ ಬಂದಿದ್ದರೋ ಹಾಗೇ ಹೋಗಿಬಿಟ್ಟರು ಅವರೆಲ್ಲಾ. ಸಂತೆ ಮುಗಿದ ಮೇಲಿನ ಬಯಲು ಎನ್ನುವಂತೆ ವಿಚಿತ್ರ ಸ್ತಬ್ಧತೆ ಇಡೀ ವಾತಾವರಣವನ್ನು ಆವರಿಸಿಬಿಟ್ಟಿತು. ಯಾಕೋ ಗೊತ್ತಿಲ್ಲ. ಬುರುಜಿನ ಮೇಲೆ ಆಡುತ್ತಿದ್ದ ಕಂದುಗಪ್ಪಿನ ಹೊಗೆ, ಹೊಗೆಯಲ್ಲ, ಬುರುಜಿನ ನಿಟ್ಟುಸಿರು ಅನ್ನಿಸಿತು ನನಗೆ…

 

****

 

 

‍ಲೇಖಕರು G

March 27, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ರಾಮಚಂದ್ರ ನಾಡಿಗ್

    ಕಳೆದ ವಾರ ಲೇಖನ ಮಿಸ್ ಆಗಿತ್ತು…. ಹಿತ್ತಲ ಪೊದೆಯ ಕಥೆ ಬಾಳಾ ಚೆನ್ನಾಗಿದೆ… ಆ ಸುಂದರ ಪುಟ್ಟ ಹಿತ್ತಲು ಕಣ್ಮುಂದೆ ಬರ್ತಿದೆ…..

    ಪ್ರತಿಕ್ರಿಯೆ
  2. rAjashEkhar mALUr

    “ಯಾಕೋ ಗೊತ್ತಿಲ್ಲ. ಬುರುಜಿನ ಮೇಲೆ ಆಡುತ್ತಿದ್ದ ಕಂದುಗಪ್ಪಿನ ಹೊಗೆ, ಹೊಗೆಯಲ್ಲ, ಬುರುಜಿನ ನಿಟ್ಟುಸಿರು ಅನ್ನಿಸಿತು ನನಗೆ…”… wow! tuMbA channAgide sAr…

    ಪ್ರತಿಕ್ರಿಯೆ
  3. ಡಾ.ಬಿ.ಆರ್.ಸತ್ಯನಾರಾಯಣ

    ತುಂಬಾ ಚೆನ್ನಾಗಿ ಓದಿಸಿಕೊಂಡಿತು ಸರ್.
    ಮುತ್ತುಗದ ಎಲೆಯ ನಡುವೆ ರೊಟ್ಟಿ ತಟ್ಟಿ ಅದನ್ನು ಕೆಂಡದ ಮೇಲೆ ಸುಡುವ ಬಗ್ಗೆ ಓದಿದಾಗ ನನ್ನ ಬಾಲ್ಯದ ನೆನಪು ತೆರೆದುಕೊಂಡಿತು. ನಾವು ದನ ಮೇಯಿಸಲು ಹೋಗುತ್ತಿದ್ದಾಗ, ಸಿಗುತ್ತಿದ್ದ ಗೆಣಸು, ಬಾತುಕೋಳಿ ಮೊಟ್ಟೆ, ಮೀನು ಮೊದಲಾದವನ್ನು ಬೇಯಿಸುವುದಕ್ಕೆ ಈ ವಿಧಾನವನ್ನು ಬಳಸುತ್ತಿದ್ದೆವು. ಹುಡುಗರೆಲ್ಲಾ ಅದನ್ನು ಹಂಚಿಕೊಂಡು, ಒಮ್ಮೊಮ್ಮೆ ಕಿತ್ತಾಡಿಕೊಂಡು ತಿನ್ನುತ್ತಿದ್ದೆವೆ. ಒಮ್ಮೆ ಕೆಂಡ ಮಾಡಲೆಂದು ಹಾಕಿದ್ದ ಬೆಂಕಿಯಿಂದ ಒಂದು ಕೊಳ್ಳಿಯನ್ನು ಒಬ್ಬ ತೆಗೆದು ಒಂದು ಹಳೆಯದಾಗಿ ಟೊಳ್ಳು ಬಿದ್ದಿದ್ದ ಗೋಣಿಮರಕ್ಕೆ ತಾಗಿಸಿದ್ದ. ಅಷ್ಟಕ್ಕೇ ಅದು ಒಳಗೊಳಗೆ ಕವರಿಕೊಂಡು ಹೊಗೆಯಾಡಲು ಆರಂಬಿಸಿತ್ತು. ನಾವು ನೀರು ಎರಚುವುದನ್ನು ಮಾಡಿದರೂ ಹೊಗೆ ನಿಲ್ಲಲೇ ಇಲ್ಲ. ಸಂಜೆಯಾದಾಗ ವಿಧಿಯಿಲ್ಲದೆ, ಹಸಿಮಣ್ಣು ಮೆತ್ತಿ ಮನೆಗೆ ಹೋಗಿದ್ದೆವು. ಬೆಳಿಗ್ಗೆ ನೋಡಿದಾಗ ಆ ಮರದ ಬೊಡ್ಡೆ ಸುಟ್ಟು, ಧರೆಗೆ ಉರಳಿತ್ತು! ಆ ಹುಡುಗಾಟದಲ್ಲಿ ಏನೂ ಅನ್ನಿಸದಿದ್ದರೂ, ನಂತರದ ದಿನಗಳಲ್ಲಿ ಅದು ನನಗೆ ತುಂಬಾ ಕಾಡಿತ್ತು. ಅದಕ್ಕಾಗಿ ಒಂದಷ್ಟು ಆಲದಮರದ ಕೊನೆಗಳನ್ನು ನೆಟ್ಟು ಪಾಪ ಕಳೆದುಕೊಂಡವನಂತೆ ನಿಟ್ಟುಸಿರು ಬಿಟ್ಟಿದ್ದೆ. ಬೇಟೆಯ ನೆನಪುಗಳಂತೂ ಮಾಸಿಯೇ ಇಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: