ಎಚ್ಚೆಸ್ವಿ ಅನಾತ್ಮ ಕಥನ: ಅಕ್ಕಚ್ಚುವಿನ ಅರಣ್ಯಪರ್ವ…

ಮದುವೆಯೇನೋ ಆಯಿತು. ಆದರೆ ಮದುಮಕ್ಕಳ ಹೊಸ ದಾಂಪತ್ಯದ ಕಿರುತೆಪ್ಪ ವಕ್ರಗತಿಯ ಅಬ್ಬರದ ಕಿರುಹೊಳೆಯಲ್ಲಿ ಸಿಕ್ಕು ತಲ್ಲಣಕ್ಕೊಳಗಾದ ಆರಂಭದ ರಾತ್ರಿಗಳವು. ಧುತ್ತೆಂದೆದುರಾಗುವ ಮಚ್ಚುಗಲ್ಲುಗಳು. ಆ ಎಂದು ಶೂನ್ಯವನ್ನೇ ನುಂಗಲಿಕ್ಕೆಂಬಂತೆ ಬಾಯಿ ತೆರೆಯುವ ಚಕ್ರಾವರ್ತಗಳು. ನೀರೊಳಗಿನ ಕಾಣದ ಚಾಚುಬಂಡೆಗಳಿಗೆ ತೀಡಿದಾಗಾದ ಗೀಚುಗಾಯಗಳಿಂದ ಘಾಸಿಗೊಂಡ ತೆಪ್ಪದ ತಳ. ಹಿಡಿದ ಹುಟ್ಟನ್ನು ತೆಪ್ಪದಲ್ಲಿಟ್ಟು ಮೊಣಕಾಲು ಮಂಡಿಗೆ ಕೈಹಚ್ಚಿ ತೆಪ್ಪಗೆ ನೀರ್ಗಣ್ಣಾಗಿ ಕೂತುಬಿಟ್ಟರು ಹುಡುಗ ಹುಡುಗಿ.

ಆ ಹಳ್ಳಿಯ ಮನೆಯಲ್ಲಿ ಇದ್ದುದು ಒಂದೇ ಕೋಣೆ. ಕಿಟಕಿಗಳೇ ಇಲ್ಲದ ಅದನ್ನು ಕತ್ತಲಕೋಣೆ ಎಂದು ಕರೆಯುತ್ತಾ ಇದ್ದರು. ಹಿಂದೆಲ್ಲಾ ಬಾಣಂತಿಯರನ್ನು ಅಲ್ಲಿ ಮಲಗಿಸುತ್ತಿದ್ದರಂತೆ. ಅದೇ ಈಗ ಹೊಸಮದುಮಕ್ಕಳ ಶಯ್ಯಾಗೃಹವಾಗಿತ್ತು. ಮೇಲೆ ಕರಿಹೆಂಚು ಹೊದಿಸಿದ ಸೂರಿನಲ್ಲಿ ಮಿನಿ ಮಿನಿ ಬೆಳಕಿನ ಕಿರುಗಂಡಿಗಳು. ಒಬ್ಬರು ಮಾತ್ರ ಮಲಗಬಹುದಾದ ಬುಗುಟಿನ ಮಂಚದಲ್ಲಿ ಇಬ್ಬರೂ ಮಲಗಬೇಕಾಗಿತ್ತು. ಕೋಣೆಗೆ ಹತ್ತಿಕೊಂಡಂತಿದ್ದ ನಡುಮನೆಯಲ್ಲಿ ಅಜ್ಜಿಯರು, ಅಮ್ಮ ಮಲಗುತ್ತಿದ್ದರು. ಹಾಗಾಗಿ ಇವರು ಪಿಸುಗುಟ್ಟುವುದೂ ಸಾಧ್ಯವಿರಲಿಲ್ಲ.

’ರಾತ್ರಿ ಯಾಕಾದರೂ ಬರುತ್ತಪ್ಪ ಅನ್ನಿಸುತ್ತೆ… ರಾತ್ರಿಯಾಗಿ, ಮಲಗುವ ಮನೆಗೆ ಬರುವುದೆಂದರೆ ಹುಲಿಯ ಗುಹೆ ಹೊಕ್ಕಂತಾಗುತ್ತೆ… ಎದೆ ನಡುಕ ಶುರುವಾಗಿ, ಮೈಯೆಲ್ಲಾ ಬೆವರಲಿಕ್ಕೆ ಶುರುವಾಗುತ್ತೆ’ ಅನ್ನುತ್ತಿದ್ದಳು ಹುಡುಗಿ. ಹುಡುಗನ ಅನುಭವವೂ ಅದಕ್ಕಿಂತ ಭಿನ್ನವಾದುದೇನಾಗಿರಲಿಲ್ಲ. ಒಂದುಕಡೆ ಅದಮ್ಯವಾದ ಅಭೀಪ್ಸೆ; ಇನ್ನೊಂದುಕಡೆ ಅಸಾಧ್ಯವಾದ ಯಮ ಯಾತನೆ. ಇದನ್ನೆಲ್ಲಾ ಹೇಳಿಕೊಳ್ಳುವುದು ಯಾರಲ್ಲಿ? ವೈದ್ಯರನ್ನು ನೋಡುವುದಕ್ಕೂ ಸಂಕೋಚ. ಹಿರಿಯರಲ್ಲಿ ಹೇಳುವುದಕ್ಕೆ ನಾಚಿಕೆ. ಸ್ನೇಹಿತರಲ್ಲಿ ಹೇಳಿಕೊಳ್ಳುವುದಕ್ಕೆ ಇವನೇ ಆ ಗುಂಪಲ್ಲಿ ಮದುವೆಯಾದ ಮೊದಲ ಹುಡುಗ.

ಒಂದುದಿನ ದೊಡ್ಡಜ್ಜಿ ಹುಡುಗನೊಬ್ಬನನ್ನೇ ಹಿತ್ತಲಿಗೆ ಕರೆದು, ದಿನಾ ರಾತ್ರಿ ಆ ಹುಡುಗಿ ಅಳೋದು ಯಾಕೆ? ಕೇಳಿದಳು. ಹುಡುಗಿ ತುಟಿಕಚ್ಚಿ ಬಿಕ್ಕಳಿಸಿದ್ದೂ ಹೇಗೋ ಅವರಿಗೆ ಕೇಳಿಬಿಟ್ಟಿತ್ತು. ಏನು ಹೇಳಬೇಕೆಂದು ಹುಡುಗ ಒಂದು ಕ್ಷಣ ಯೋಚಿಸಿ, ಆನಂತರ ತಲೆತಗ್ಗಿಸಿ ನೆಲ ನೋಡುತ್ತಾ ರಾತ್ರಿ ಅವಳಿಗೆ ಅವಳ ಅಮ್ಮನ ನೆನಪಾಗುತ್ತಂತೆ ಎಂದ. ಬೆಳಿಗ್ಗೆ ಅವಳಿಗೆ ಅಮ್ಮನ ನೆನಪಾಗುವುದಿಲ್ಲವೋ ಎಂದು ದೊಡ್ಡಜ್ಜಿ ಪ್ರಶ್ನಿಸಿದಳು. ಅವಳ ಗಂಟಲು ಯಾವುದೋ ವಿವರಿಸಲಿಕ್ಕೆ ಬಾರದ ಆಪ್ತತೆಯಿಂದ ಒದ್ದೆಯಾಗಿತ್ತು. ಅಲ್ಲಿಗೆ ಸಂಭಾಷಣೆ ಮುರಿದುಹೋಯಿತು. ಇದಾಗಿ ಒಂದುವಾರವಾದ ಮೇಲೆ ದೊಡ್ಡಜ್ಜಿ ಹುಡುಗನನ್ನು ಮತ್ತೆ ಹಿತ್ತಲಿಗೆ ಕರೆದು ಮಾತಾಡಿಸಿದಳು. ನೀನು ಅಕ್ಕಚ್ಚಿಯ ಮನೆಗೆ ಹೋಗಿ ಬಾ. ಒಂದುವಾರ ಆ ಮಲೆನಾಡಲ್ಲಿ ಹಾಯಗಿ ಇದ್ದು ಬನ್ನಿ…

ನನಗೆ ರಜ ಸಿಗಬೇಕಲ್ಲ? ಮದುವೆಗೆ ಅಂತ ಈಗಾಗಲೇ ಸಾಕಷ್ಟು ರಜ ಬಳಕೆಯಾಗಿದೆ.

ಅದೆಲ್ಲಾ ನಂಗೆ ಗೊತ್ತಿಲ್ಲ. ಅಕ್ಕಚ್ಚಿ ಕಾಗದ ಬರೆದಿದ್ದಾಳೆ- ’ನಾನೆಲ್ಲಾ ಸಮಾ ಮಾಡುತ್ತೀನಿ’ ಅಂತ. ಸುಮ್ಮನೆ ನೀವು ಹೋಗಿಬನ್ನಿ…

ಹೀಗೆ ಅಕ್ಕಚ್ಚಿಯ ಊರಿಗೆ ಹುಡುಗ ಹುಡುಗಿಯ ಪ್ರಯಾಣ ನಿಶ್ಚಯವಾಯಿತು.ಏನೋ ಶಾಸ್ತ್ರ, ಲಂಗುಲೊಟ್ಟೆ ಅಂತ ಹೇಳಿ ಹುಡುಗ ರಜಾ ಪಡೆದದ್ದೂ ಆಯಿತು. ಚನ್ನಗಿರಿಗೆ ಹೋಗಿ, ಅಲ್ಲಿಂದ ಶಿವಮಗ್ಗಕ್ಕೆ ಹೋಗಿ, ಅಲ್ಲಿ ಒಂದು ಮಿನಿ ಬಸ್ಸು ಹಿಡಿದು ತೀರ್ಥಹಳ್ಳಿಯ ಹತ್ತಿರ ಇದ್ದ ಅಕ್ಕಚ್ಚಿಯ ಊರನ್ನು ತಲಪಿದಾಗ ಸಂಜೆ ಆರುಗಂಟೆ ಸಮಯ. ಅದನ್ನು ಊರು ಅನ್ನುವಂತಿಲ್ಲ. ಅಕ್ಕಚ್ಚಿಯ ಮನೆ ಎಂದೇ ಹೇಳಬೇಕು. ನಿಮಗೆ ಗೊತ್ತಿರುವಂತೆ ಮಲೆನಾಡಲ್ಲಿ ಒಂದೊಂದು ಮನೆಯೂ ಒಂದೊಂದು ಊರು ತಾನೆ? ಬಸ್ಸಿನವ “ಮೇಲ್ಮನೆಗೆ ಇಳಿಯೋರು ಇಳೀರಿ ಸಾರ್ “ಎಂದು ವದರಿ ಇವರಿಬ್ಬರನ್ನೂ ಬಸ್ಸಿನಿಂದ ಇಳಿಸಿ ಧೂಳು ಹಾರಿಸಿಕೊಂಡು ಹೋಗಿಯೇ ಬಿಟ್ಟ.

ಇವರು ಮೇಲ್ಮನೆಗೆ ಬಂದದ್ದು ಒಳ್ಳೇ ಮಾಗಿಕಾಲದಲ್ಲಿ. ಸುತ್ತಾ ಜೀ ಎನ್ನುವ ಕಾಡು. ಪಶ್ಚಿಮದ ಕುಳಿರ್ಗಾಳಿಗೆ ಮೈ ನಡುಗುವಂತಿತ್ತು. ಗಾಳಿ ಎಷ್ಟು ಜೋರಾಗಿ ಬೀಸುತಾ ಇತ್ತು ಅಂದರೆ ಹುಡುಗಿಯ ಎರಡೂ ಕಣ್ಣಂಚಲ್ಲಿ ಸಣ್ಣಗೆ ನೀರು ಜಿನುಗತೊಡಗಿತು. ಪಶ್ಚಿಮಕ್ಕೆ ಎತ್ತರದ ಬೆಟ್ಟಸಾಲು. ಅವಗಳ ಹಿಂದೆ ಸೂರ್ಯ ಮರೆಯಾಗಿ ಹೋಗಿದ್ದ. ಆಕಾಶ ಅಲ್ಲಿ ಕೆಂಪಗೆ ತಾಮ್ರದ ತಗಡು ಹೊಡೆದ ಹಾಗೆ ಕಾಣುತಾ ಇತ್ತು. ಇವರು ನಿಂತ ರಸ್ತೆಯಲ್ಲೂ ಸಾಲಾಗಿ ಎತ್ತರೆತ್ತರಕ್ಕೆ ಬೆಳೆದ ಮರಗಳು. ಹಿಂಬದಿಗೆ ಒಂದು ಗುಡ್ಡದ ಏರು. ಮುಂದೆ ಆಯತಪ್ಪಿದರೆ ಪಾತಾಳ ಕಾಣಬಹುದು-ಅಂತಹ ಜಾರು ಕಣಿವೆ. ಅಲ್ಲಿ ಹಸಿರ ಮರೆಯಲ್ಲಿ ಚೂರು ಚೂರು ಚೂರಾಗಿ ಅಕ್ಕಚ್ಚಿಯ ಕೆಂಪುಹಂಚಿನ ಮನೆಯ ಸೂರು ಕಾಣುತಾ ಇತ್ತು.

ಅಗೋ…! ಅಲ್ಲಿ ಕಾಣುತಾ ಇದೆಯಲ್ಲಾ, ಅದೇ ಅಕ್ಕಚ್ಚಿಯ ಮನೆ…ಎಂದು ಹುಡುಗ ಹುಡುಗಿಗೆ ಹೇಳಿ, ಬೆನ್ನಿಗೆ ಚೀಲ ನೇತುಹಾಕಿಕೊಂಡು ಹುಡುಗಿಯ ಕೈ ಹಿಡಿದು ಮೆಲ್ಲಗೆ ಅವಳನ್ನು ಕಣಿವೆಯಲ್ಲಿ ಇಳಿಸಿದ. ತೀರ ಕಡಿದಾಗಿದ್ದ ಕಡೆ ನೊರಜಲು ಮಣ್ಣಲ್ಲೇ ಮೆಟ್ಟಿಲು ಕೊರೆದಿದ್ದರು. ಹೇಗೋ ಸಾವರಿಸಿಕೊಂಡು ಇಬ್ಬರೂ ಕೆಳಗಿಳಿದು ಅಕ್ಕಚ್ಚಿಯ ಮನೆಯ ಬಾಗಿಲ ಬಳಿ ನಿಂತಾಗ ಮೊದಲ ಸ್ವಾಗತ ದೊರೆತದ್ದು ಹುಲಿಗಳಂತೆ ಗುರಾಯಿಸುತ್ತಿದ್ದ ಎರಡು ನಾಯಿಗಳಿಂದ. ಹಿಂದೇ ಅಕ್ಕಚ್ಚಿಯ ಧ್ವನಿಯೂ ಕೇಳಿಸಿತು. ಚುಪ್..ನಮ್ಮೋರು ಅವರು…!ಅಕ್ಕಚ್ಚಿಯ ಮಾತಲ್ಲಿ ಅದೇನು ಮಾಂತ್ರಿಕ ಶಕ್ತಿಯಿತ್ತೋ…ಎರಡೂ ನಾಯಿಗಳು ಒಮ್ಮೆಗೇ ಬಾಲ ಅಲ್ಲಾಡಿಸುತ್ತಾ ಗಸಗಸ ಮಾಡಿ ಅಭ್ಯಾಗತರ ಕಾಲು ನೆಕ್ಕಿ, ಪೃಷ್ಠ ತಿರುವಿಕೊಂಡು ಮತ್ತ್ಯಾವ ಘನ ಕಾರ್ಯಕ್ಕೋ ಅಲ್ಲಿಂದ ಗಾಡಿಬಿಟ್ಟವು. ಅವುಗಳ ತಣ್ಣನೆ ಬೆಚ್ಚನೆ ನೆಕ್ಕಿನಿಂದ ಭಯಭೀತಳೂ ರೋಮಾಂಚಿತಳೂ ಆಗಿದ್ದ ಹುಡುಗಿ ಅವು ದೂರಕ್ಕೆ ಹೋಗುತ್ತಿದ್ದಂತೇ ಎದೆಯಲ್ಲಿ ಕಟ್ಟಿಕೊಂಡಿದ್ದ ಉಸಿರನ್ನು ಸದ್ದಾಗದಂತೆ ಅರಳಿದ ಹೊಳ್ಳೆಯಿಂದ ಹೊರಕ್ಕೆ ಸಾಗಿಸಿದಳು. ಆ ವೇಳೆಗೆ ಪ್ರಸನ್ನಮುಖಮುದ್ರೆಯೊಂದಿಗೆ ಅಕ್ಕಚ್ಚಿಯೂ ಅಲ್ಲಿಗೆ ಆಗಮಿಸಿದಳು. ಬಂದವಳೇ ಹುಡುಗಿಯನ್ನು ಒಮ್ಮೆ ಆಪಾದಮಸ್ತಕ ಅಳತೆ ಮಾಡುವಂತೆ ನೋಡಿ…ಏ! ಪೋಲಿ ಗುಂಡ..ಎಲ್ಲಿಂದ ಹಾರಿಸಿಕೊಂಡು ಬಂದೆಯೋ ಈ ಅಪ್ಸರೆಯನ್ನ? ಎಂದು ಹುಬ್ಬು ಹಾರಿಸಿ ಇಬ್ಬರನ್ನೂ ತನ್ನ ದೃಢವಾದ ತೋಳುಗಳಲ್ಲಿ ಬಾಚಿತಬ್ಬಿಕೊಂಡಳು. ಸ್ವಾಗತದ ಈ ಬಗೆಯ ಪರಿಚಯವಿಲ್ಲದ ಹುಡುಗಿ ತಬ್ಬಿಬ್ಬಾಗಿ, ಅಕ್ಕಚ್ಚಿಯ ವರ್ಚಸ್ಸಿಗೆ ಮರುಳಾದವಳಂತೆ ಅವಳನ್ನೇ ನೋಡುತ್ತಾ ಸ್ತಬ್ಧ ನಿಂತು ಬಿಟ್ಟಳು!

ಇಲ್ಲಿ ಕೆಲವೇ ಮಾತಲ್ಲಿ ಅಕ್ಕಚ್ಚಿಯ ಹಿನ್ನೆಲೆಯನ್ನು ನಿವೇದಿಸಿ ನಾನು ಮುಂದೆ ಹೋಗಬೇಕಾಗಿದೆ. ಅಕ್ಕಚ್ಚಿ ಹುಡುಗನ ದೂರದ ಸಂಬಂಧಿ.ವಾವೆಯಿಂದ ಅತ್ತೆಯೋ ಏನೋ ಆಗಬೇಕು. ಸುಮಾರು ನಲವತ್ತು ನಲವತ್ತೈದರ ಪ್ರಾಯ ಇರಬೇಕು ಅವಳಿಗೆ. ಎತ್ತರದ ಆಳು. ಕೆತ್ತಿಟ್ಟಂಥ ಶಿಲ್ಪಾಕಾರ ಆಕೆಯದು. ಬೇಲೂರಿನ ಶಿಲಾ ಬಾಲಿಕೆಯನ್ನು ನೀವು ನೆನಪಿಸಿಕೊಂಡರೆ ಸಾಕು. ಮಲ್ಲಿಗೆ ಹೂವು ಒಂದು ದಿನ ಬಾಡಿದರೆ ಬರುತ್ತದಲ್ಲ ಅಂಥ ಮಾಸಲು ಬಿಳಿ ಬಣ್ಣ ಅವಳದ್ದು. ಅವಳ ಗಂಡ ಮಿಲಿಟರಿಯಲ್ಲಿ ಮೇಜರಾಗಿದ್ದಾರೆ. ವರ್ಷಕ್ಕೊಮ್ಮೆ ಅವರು ಮೇಲ್ಮನೆಗೆ ಬಂದು ವಾರೊಪ್ಪತ್ತು ಇದ್ದು ಮತ್ತೆ ಅಂತರ್ಧಾನವಾಗಿಬಿಡುತ್ತಾರೆ. ಅವರ ಪ್ರತಿನಿಧಿಯಾಗಿ ಹುರಿಮೀಸೆ ತಿರುವಿದ ಅವರ ಫೋಟೊ ಮಾತ್ರ ವರಾಂಡದ ಗೋಡೆಯ ಮೇಲೆ ವಿರಾಜಮಾನವಾಗಿದೆ. ಅಕ್ಕಚ್ಚಿ ಎಂಥ ಗಂಡುಗರ್ವದ ಹೆಣ್ಣುಮಗಳೆಂದರೆ ಒಬ್ಬಂಟಿಯಾಗಿಯೇ ತೋಟದ ವ್ಯವಹಾರವೆಲ್ಲಾ ತೂಗಿಸಿಕೊಂಡು ಒಂಟಿಯಾಗಿ ಆ ಬೃಹದ್ ಬಂಗಲೆಯಲ್ಲಿ ವಾಸವಾಗಿದ್ದಾಳೆ. ಮನೆಗೆ ಸ್ವಲ್ಪ ದುರ ತಗ್ಗಿನಲ್ಲಿ ಎರಡು ವಕ್ಕಲ ಮನೆಗಳಿವೆ. ಅವರು ತೋಟದ ಕೆಲಸ ನೋಡಿಕೊಳ್ಳುತ್ತಾರೆ. ಪ್ರಧಾನವಾಗಿ ತೋಟದಲ್ಲಿ ಅಡಕೆ ಮತ್ತು ತೆಂಗು ಇವೆಯಾದರೂ, ಅಂಚಲ್ಲಿ ಮಾವು, ಹಲಸು, ಸಂಪಿಗೆ, ಜಾಕಾಯಿಯ ದೊಡ್ಡ ದೊಡ್ಡ ಮರಗಳಿವೆ. ಮೇಜರ್ ನಿವೃತ್ತರಾದ ಮೇಲೆ ಇಬ್ಬರೂ ಮೇಲ್ಮನೆಯಲ್ಲೇ ನೆಲೆಸಿ ಅರಾಮಾಗಿ ಇರಬೇಕೆಂಬುದು ಅವರ ಉದ್ದೇಶ. ಅದಕ್ಕಾಗಿಯೇ ಎಷ್ಟೇ ಕಷ್ಟವಾದರೂ ತೋಟ ತುಡಿಕೆ ಮಾರದೆ ಅಕ್ಕಚ್ಚಿ ಜತನವಾಗಿ ಅವನ್ನು ಸಂಬಾಳಿಸುತ್ತಾ ಇದ್ದಾಳೆ.

ಅಕ್ಕಚ್ಚಿಯದು ಎರಡು ಮಹಡಿಗಳ ಉಪ್ಪರಿಗೆ ಮನೆ. ಹಳೆಯ ಕಾಲದ ತೇಗದ ಮರದ ಭಾರಿ ಅಳತೆಯ ಕುರ್ಚಿ ಸೋಫಾಗಳು, ಅವುಗಳ ಮೇಲೆ ತಿಳಿಹಸಿರು ಬಣ್ಣದ ರೇಷ್ಮೆ ವಸ್ತ್ರ ಹೊದಿಸಿದ ಮೆತ್ತೆಗಳು. ಬೆನ್ನಿಗೆ ಕಸೂತಿಹಾಕಿದ ಚೌಕಗಳು. ಹೊರ ಜಗಲಿಯ ಉದ್ದಕ್ಕೂ ಆ ಕಡೆ ಆರು ಈ ಕಡೆ ಆರು ಬೀಟೆ ಮರದ ಕೆತ್ತನೆ ಕಂಭಗಳು. ಅವುಗಳ ಮೇಲೆ ನಾನಾ ಬಗೆಯ ಕುಸುರಿ ಕೆಲಸಗಳು. ಆ ಕಂಭಗಳಿಗೆ ವರಗಿ ಕೂರುವಷ್ಟು ಭಾಗ ಮಾತ್ರ ಬೆನ್ನಿನ ಒತ್ತಿನಿಂದ ಹೆಚ್ಚು ನಯಗೊಂಡ ಹಾಗೆ ಕಾಣುತಾ ಇದೆ. ಜಗುಲಿ ದಾಟಿದರೆ ದೊಡ್ಡ ಮುಂಬಾಗಿಲು. ಅದು ಇಚ್ಚೌಕದ ಬಾಗಿಲು. ನೆಲ ಮಟ್ಟದಿಂದ ಎರಡಡಿ ಮೇಲೆ ಮುಖ ಮೇಲಕ್ಕೆತ್ತಿದ ಆನೆಯ ಮುಖ. ಅದರ ಸೊಂಡಿಲು ಉದ್ದಕ್ಕೂ ಇಳಿಬಿದ್ದಿದೆ. ಆನೆಯ ಮುಖದ ಮೇಲೆ ಚಕ್ರಾಕಾರವಾಗಿ ಸುತ್ತಿಕೊಳ್ಳುವ ಹೂಬಳ್ಳಿಯ ಕೆತ್ತನೆ. ಪ್ರತಿ ಚಕ್ರದ ಮಧ್ಯೆ ರೆಕ್ಕೆ ಹರಡಿಕೊಂಡ ಅರಗಿಳಿಗಳು. ಬಾಗಿಲುವಾಡದ ಮೇಲ್ಮೂಲೆಯಲ್ಲಿ ಎರಡು ಪಕ್ಕ ವಿಳ್ಳೇದೆಲೆಗಳು ಹರಡಿಕೊಂಡಿವೆ. ಆ ಎಲೆಗಳ ನಡುವೆ ಕೊರೆದಿರುವ ಗೆರೆಗಳು ಮೇಲ್ವಾಡ ಮತ್ತು ಪಕ್ಕದ ವಾಡಗಳು ಕೂಡಿರುವುದನ್ನು ಕಣ್ಣಿಗೆ ಕಾಣದಂತೆ ಮರೆಸಿಬಿಟ್ಟಿವೆ. ಮೇಲ್ವಾಡದಲ್ಲಿ ನವಗ್ರಹದ ಶಿಲ್ಪಗಳು. ಮಧ್ಯೆ ಅತ್ಯಂತ ಮುದ್ದಾದ ಗಣಪತಿಯ ಶಿಲ್ಪ. ಅದನ್ನು ಅಲಾಯದ ಮಾಡಿ ಬಾಗಿಲ ಚೌಕಿಗೆ ಕೂಡಿಸಿದ್ದಾರೆ. ಹೀಗೆ ಅತ್ಯಾಕರ್ಷಕವಾಗಿಇರುವ ಮುಂಬಾಗಿಲು ದಾಟಿ ಒಳಕ್ಕೆ ಬಂದರೆ ಎಡ ಮತ್ತು ಬಲಭಾಗದಲ್ಲಿ ಉಪ್ಪರಿಗೆಗೆ ಹತ್ತುವ ಮೆಟ್ಟಿಲುಗಳಿವೆ. ಆ ಮೆಟ್ಟಿಲುಗಳ ಕೆಳಗೆ ಹಳೆಯ ಕಾಲದ ಪಲ್ಲಕ್ಕಿ, ಮೇನೆ ಇಟ್ಟಿದ್ದಾರೆ. ಈಗ ಅವನ್ನು ಯಾರೂ ಬಳಸುತ್ತಿಲ್ಲ. ಆದುದರಿಂದಲೇ ಅವಕ್ಕೆ ಒಂದು ಬಗೆಯ ಪ್ರಾಚೀನತೆಯ ಮುದ್ರೆ ದೊರಕಿದೆ. ಅಕ್ಕಚ್ಚಿ ಅಭ್ಯಾಗತರನ್ನು ಉಪ್ಪರಿಗೆಯ ಮೇಲೆ ಕರೆದುಕೊಂಡು ಹೋಗಿ, ಎಡ ಪಕ್ಕದಲ್ಲಿದ್ದ ವಿಶಾಲವಾದ ಶಯನಗೃಹ ತೋರಿಸಿದಳು. ಶಯನಗೃಹಕ್ಕೆ ಪೂರ್ವಕ್ಕೆ ತೆರೆದ ದೊಡ್ಡ ದೊಡ್ಡ ಕಿಟಕಿಗಳಿವೆ. ತೆರೆ ಸರಿಸಿ ನೋಡಿದರೆ ಪೂರ್ವದ ಪರ್ವತಶ್ರೇಣಿ ಕಾಣುತ್ತದೆ. ನೀವು ಬೆಳಿಗ್ಗೆ ಬೇಗ ಎದ್ದರೆ ಇಲ್ಲಿಂದಲೇ ಸೂರ್ಯೋದಯವನ್ನೂ ನೋಡಬಹುದು ಎಂದು ಅಕ್ಕಚ್ಚಿ ನನ್ನನ್ನು ನೋಡಿ ಕಣ್ಣು ಹೊಡೆದಳು. ಬೇಗ ಎದ್ದರೆ ಎಂಬ ಮಾತಿಗೆ ಅವಳು ಹೆಚ್ಚು ಅವಧಾರಣೆ ಕೊಟ್ಟಿದ್ದಳು.

ನೋಡಿ ಇಲ್ಲಿ ಕಾಫಿ ಇಟ್ಟಿದ್ದೇನೆ. ಜೊತೆಗೆ ಕುರುಕಲು ಇದೆ. ನೀವು ಸ್ವಲ್ಪ ಹೊತ್ತು ರೆಸ್ಟ್ ತಗೊಂಡು ಆಮೇಲೆ ಕೆಳಕ್ಕೆ ಬನ್ನಿ. ಅಡುಗೆ ರೆಡಿಯಾಗಿರುತ್ತೆ. ಆಯಿತಾ?-ಎಂದು ಹೇಳಿ ಅಕ್ಕಚ್ಚಿ ಶಯನಗೃಹದ ಬಾಗಿಲು ಮುಂದೆ ಮಾಡಿಕೊಂಡು ಹೋದವಳು ಮತ್ತೆ ತಿರುಗಿ ಬಂದು ಪಲ್ಲಂಗದ ಪಕ್ಕ ಒಂದು ಸ್ಟ್ಯಾಚ್ಯು ಇದೆ. ಮುಂದೆ ತೆರೆ ಹಾಕಿದೆ ನೋಡಿ..ಅದು! ನೀವಿಬ್ಬರೇ ಇದ್ದಾಗ ಅದನ್ನ ನೋಡಿ…ಎಂದು ಮತ್ತೆ ಮಾದಕವಾಗಿ ನಕ್ಕಳು. ಆಗ ಅವಳ ಬೆಳ್ಳನೆಯ ಕೆನ್ನೆಗೆ ಮೆಲ್ಲಗೆ ಕೆಂಪು ಹತ್ತುತಾ ಇತ್ತು. ಅಕ್ಕಚ್ಚಿ ಕೆಳಗೆ ಇಳಿಯುವ ಮೆಟ್ಟಿಲ ಸದ್ದು ಕೇಳಿದ ಮೇಲೆ, ನಾನು ಕುತೂಹಲದಿಂದ ಪಲ್ಲಂಗದ ಪಕ್ಕ ಇದ್ದ ಸ್ಟ್ಯಾಚ್ಯುಗಳಿಗೆ ಹಾಕಿದ್ದ ತೆರೆ ಸರಿಸಿ ನೋಡಿದರೆ, ಅದೊಂದು ಅದ್ಭುತವಾದ ಮಿಥುನ ಶಿಲ್ಪ. ಛೀ..! ನೋಡಲಿಕ್ಕಾಗಲ್ಲ…ಮುಚ್ಚಿ ಅದನ್ನ…! ಎಂದು ಹುಡುಗಿ ಮುಖ ತಿರುವಿಕೊಂಡಳು. ಹುಡುಗ ಮಾತ್ರ ಆ ಜೋಡಿಶಿಲ್ಪದಿಂದ ಕಣ್ಣು ಕೀಳಲಾಗದೆ ಅದನ್ನೇ ಎಷ್ಟೋ ಹೊತ್ತು ನೋಡುತ್ತಾ ನಿಂತಿದ್ದ.

 

*****

 

ಅಕ್ಕಚ್ಚಿ ರಾತ್ರಿಗೆ ಕೆಸವಿನ ದಂಟಿನ ಹುಳಿ, ಅಕ್ಕಿಯ ಉಬ್ಬುರೊಟ್ಟಿ, ಮೆಂತ್ಯ ಚಟ್ನಿ, ಹಬೆ ಹೊಡೆಯುವ ಅನ್ನ ತಯಾರಿಸಿದ್ದಳು. ಅವಳ ಉಪಚಾರದಿಂದಾಗಿ ಊಟ ಸ್ವಲ್ಪ ಹೆಚ್ಚಾಯಿತು ಎಂದೇ ಹೇಳಬಹುದು. ಊಟವಾದ ಮೇಲೆ ಸಣ್ಣ ಬಿದುರಿನ ಪದಾತದಲ್ಲಿ ತಾಂಬೂಲ, ರಸ ಬಾಳೆ. ಎಲ್ಲ ಮುಗಿಸಿಕೊಂಡು, ಸ್ವಲ್ಪ ಹೊತ್ತು ಲೋಕಾಭಿರಾಮವಾಗಿ ಹರಟಿ ಹುಡುಗ ಹುಡುಗಿ ಮಹಡಿಗೆ ಬಂದರು. ಶಯನಗೃಹ ಪ್ರವೇಶಿಸಿದ ಮೇಲೆ ಯಥಾಪ್ರಕಾರ ಹುಡುಗಿಯ ಮುಖ ಸಪ್ಪಗೆ ಹಿಡಿಗಾತ್ರಕ್ಕೆ ಮುದುಡಿಕೊಂಡಿತು. ಹುಡುಗ ಕರುಣೆಯಿಂದ ಅವಳ ಹೆಗಲು ಚಪ್ಪರಿಸಿ, ಡೋಂಟ್ ವರಿ…ನಾನು ಹೊರಗೆ ಹಾಲಲ್ಲಿ ಮಲಗುತ್ತೇನೆ. ಸ್ವಲ್ಪ ಓದುವುದೂ ಇದೆ -ಎಂದ. ಹುಡುಗ ಹೊರಗೆ ಬಂದು ಉಪ್ಪರಿಗೆಯ ಹಾಲಲ್ಲಿದ್ದ ಆರಾಮು ಕುರ್ಚಿಯ ಮೇಲೆ ಮೈ ಚಾಚಿ ಓದಲಿಕ್ಕೆ ಶುರು ಮಾಡಿದ. ಯಾವ ಮಾಯದಲ್ಲೋ ಅವನಿಗೆ ಕಣ್ಣು ಹತ್ತಿಬಿಟ್ಟಿದೆ.

ಬೆಳಗಾಗ ಹುಡುಗಿ ಬೇಗ ಎದ್ದು ಬಾಗಿಲು ತೆರೆದು ಬನ್ನಿ ಒಳಗೆ ಮಲಗಿಕೊಳ್ಳಿ…ಅಕ್ಕಚ್ಚಿ ನೋಡಿದರೆ …ಎಂದು ಗಾಭರಿಪಟ್ಟಳು. ಹುಡುಗ ಒಳಗೆ ಹೋಗಿ ಪಲ್ಲಂಗದ ಮೇಲೆ ಮಲಗಿ ಒಮ್ಮೆ ಮೈ ಮುರಿದು ಮತ್ತೆ ಕಣ್ಣು ಮುಚ್ಚಿದ. ಹುಡುಗಿ ಸ್ನಾನಕ್ಕೆ ಹೋದಾಗ ಅಕ್ಕಚ್ಚಿಯೇ ಹುಡುಗನಿಗೆ ಕಾಫಿ ತೆಗೆದುಕೊಂಡು ಬಂದಳು. ಮತ್ತ್ಯಾವ ಪರೀಕ್ಷೆ ಕಟ್ಟಿದ್ದೀಯೋ ನೀನು…? ರಾತ್ರಿಯೆಲ್ಲಾ ಒಬ್ಬನೇ ಹಾಲಲ್ಲಿ ಕೂತು ಓದುವಂಥದ್ದು?ಎಂದಾಗ ಹುಡುಗ ಅವಳ ಮುಖ ನೋಡಿದ. ಅವಳ ಮಾತಲ್ಲಿ ಅನೇಕ ವಿವರಿಸಲಾಗದ ಅರ್ಥಗಳು ತುಂಬಿದಂತಿತ್ತು.

ಮಾರನೇ ರಾತ್ರಿಯೂ ಹುಡುಗ ತನ್ನ ಓದು ಮುಂದುವರೆಸಿದ. ಮಲೆನಾಡಲ್ಲಿ ಮನೆಯ ಒಳಗೆ ಮಲಗಿದರೂ ಕಾಡಿನೊಳಗೇ ಮಲಗಿದ ಹಾಗೆ ಇರುತ್ತದೆ. ನಾನಾ ರೀತಿಯ ಪ್ರಾಣಿಗಳ ಕೂಗು, ಜತೆಗೆ ಕಾಡಿನ ಜೀರುಂಡೆಗಳ ನಿರಂತರ ನಿನಾದ, ಕಪ್ಪೆಗಳ ವಟವಟ. ಆ ಸದ್ದು ಹುಡುಗನನ್ನು ನಿದ್ದೆಯಿಂದ ಮೇಲೆತ್ತಿ ತರೋದು, ಹುಡುಗ ಆ ಸದ್ದುಗಳನ್ನು ಅವಚಿಕೊಂಡು ಮತ್ತೆ ನಿದ್ದೆಯಲ್ಲಿಮುಳುಗೋದು ಇದು ರಾತ್ರಿಯಿಡೀ ನಡೆದೇ ಇತ್ತು. ಬೆಳಿಗ್ಗೆ ಅವನ ಭುಜವನ್ನು ಹಿಡಿದು ಅಲುಗಿಸಿದ್ದು ಅವನ ಹೆಂಡತಿಯಲ್ಲ; ಅಕ್ಕಚ್ಚಿ. ಏನು..ಇಷ್ಟು ಹೊತ್ತಲ್ಲಿ ನೀನು ಇಲ್ಲಿ? ಎಂದು ಹುಡುಗ ಕಣ್ಣು ಕಣ್ಣು ಬಿಟ್ಟ. ಹೆದರಬೇಡ ಪೋಲಿಗುಂಡ…! ಈಗ ಮಾಘಮಾಸವಲ್ಲವಾ…ನಾನು ಮಾಗಿಸ್ನಾನಕ್ಕೆ ಹೊರಟಿದೀನಿ…ಒಕ್ಕಲಿನ ಹೆಂಗಸು ದಿನಾ ಜತೆಗೆ ಬರುತ್ತಾ ಇದ್ದಳು…ಅವಳಿಗೆ ಇವತ್ತು ಮೈಯಲ್ಲಿ ಇರುಸುಮುರುಸಾಗಿ ಮಲಗಿಬಿಟ್ಟಿದ್ದಾಳೆ… ನೀನಾದರೂ ಜೊತೆಗೆ ಬರುತ್ತೀಯೇನೋ ಅಂತ ಕೇಳಲಿಕ್ಕೆ ಬಂದೆ ಅಂದಳು…! ಅವಳನ್ನೂ ಎಬ್ಬಿಸಲಾ? ಎಂದ ಹುಡುಗ…ಬೇಡ…ನೀನೊಬ್ಬ ಬಂದರೆ ಸಾಕು…ನನ್ನ ಕಂಡರೆ ಭಯ ಇಲ್ಲ ತಾನೆ? ಎಂದು ಅಕ್ಕಚ್ಚಿ ಮಾದಕ ನಗೆ ನಕ್ಕಳು.

ಟಾರ್ಚು ಹಿಡಿದುಕೊಂಡು ಅಕ್ಕಚ್ಚಿ ಮುಂದೆ ಮುಂದೆ. ಹುಡುಗ ಅವಳನ್ನು ಹಿಂಬಾಲಿಸಿದ. ತೋಟ ದಾಟಿದರೆ ಸಣ್ಣ ತೊರೆಯೊಂದು ಹರಿಯುತಾ ಇತ್ತು. ಪೂರ್ವಗಿರಿಗಳ ಮೇಲೆ ಆಕಾಶ ಕೆಂಪಗೆ ಹಣ್ಣಾಗಿತ್ತು. ಹಕ್ಕಿಗಳ ಚಿಲಿಪಿಲಿಯಿಂದ ಕಾಡೇ ಪುಲಕಿತವಾದಂತಿತ್ತು. ಹೊಳೆಯ ಬಳಿಇದ್ದ ಬಂಡೆಯೊಂದನ್ನು ತೋರಿಸಿ, ನೀನು ಇಲ್ಲಿ ಕೂತುಕೋ…ಹತ್ತೇ ನಿಮಿಷದಲ್ಲಿ ಸ್ನಾನದ ಶಾಸ್ತ್ರ ಮುಗಿಸಿ ಬರುತ್ತೇನೆ ಎಂದಳು ಅಕ್ಕಚ್ಚಿ. ಹುಡುಗ ಪುರ್ರ್ ಪುರ್ರ್ ಎಂದು ಆ ಮರದಿಂದ ಈಮರಕ್ಕೆ ಈಮರದಿಂದ ಆ ಮರಕ್ಕೆ ತಾರಾಡುವ ಬಣ್ಣ ಬಣ್ಣದ ಹಕ್ಕಿಗಳನ್ನು ನೋಡುತ್ತಾ ಕೂತ. ಅವನ ಬೆನ್ನ ಹಿಂದೆ ಬಳೆಯ ಸದ್ದಾಯಿತು. ಏನೋ ನೀನು ಕವಿತೆ ಗಿವಿತೆ ಬರೆಯುತ್ತೀಯಾ? ಎಂದು ಅಕ್ಕಚ್ಚಿ ನಕ್ಕಳು. ಅವಳು ಒದ್ದೆ ಕೂದಲನ್ನು ಬೆನ್ನ ಮೇಲೆ ಹರಡಿಕೊಂಡಿದ್ದಳು. ಮಡಿಮಾಡಿದ್ದ ಬೇರೆ ವಸ್ತ್ರ ಉಟ್ಟುಕೊಂಡಿದ್ದಳು. ಥ್ಯಾಂಕ್ಸ್ ಕಣೋ..ಜತೆಗೆ ಬಂದದ್ದಕ್ಕೆ… ಎಂದು ಬರ ಬರ ಹೆಜ್ಜೆ ಹಾಕುತ್ತಾ ಅಕ್ಕಚ್ಚಿ ಮನೆಯ ಕಡೆ ನಡೆದಳು. ಮಧ್ಯೆ ಇದ್ದಕ್ಕಿದ್ದಂತೆ ನಿಂತ ಅಕ್ಕಚ್ಚಿ…ಅಲ್ಲವೋ ಪೋಲಿಗುಂಡ…ಮಲಗೋ ಮನೆಯಲ್ಲಿ ಇದ್ದ ಬೀರಲ್ಲಿ ಕೆಲವು ಪುಸ್ತಕ ಇಟ್ಟಿದ್ದೆ…ನೀನಾ ಅವನ್ನು ನೋಡಿದ್ದು? ಕೇಳಿದಳು. ಇಲ್ಲವಲ್ಲಾ! ಎಂದ ಹುಡುಗ. ಅಕ್ಕಚ್ಚಿ ನಕ್ಕು ಗೊತ್ತಾಯಿತು ಬಿಡು…ನಿನ್ನ ಮುದ್ದು ಗಿಳಿ ಆ ಪುಸ್ತಕಗಳನ್ನ ಕದ್ದು ಓದಿದೆ!

ಹುಡುಗಿ ಮಹಡಿಯಲ್ಲಿ ಗಂಡನನ್ನೇ ಕಾಯುತ್ತಾ ಇದ್ದಳು. ಇಷ್ಟು ಬೆಳಗಾಬೆಳಿಗ್ಗೆ ಎದ್ದು ಎಲ್ಲಿಗೆ ಹೋಗಿದ್ದಿರಿ? ಕೇಳಿದಳು…ಅಕ್ಕಚ್ಚಿ ಮಾಗಿ ಸ್ನಾನದ ವ್ರತ ಇಟ್ಟುಕೊಂಡಿದ್ದಾಳೆ…ಜತೆಗೆ ಬಾ ಅಂತ ಕರೆದಳು…ಆಗೋದಿಲ್ಲ ಅಂತ ಹ್ಯಾಗೆ ಹೇಳಲಿ? ಹುಡುಗಿ ಉತ್ತರಿಸಲಿಲ್ಲ. ಆದರೆ ಅವಳ ಮನಸ್ಸು ಕಲಕಿರುವುದನ್ನು ಅವಳ ಮುಖ ತೋರಿಸದೆ ಮುಚ್ಚಿಡುವಲ್ಲಿ ವಿಫಲವಾಯಿತು. ಆವತ್ತು ರಾತ್ರಿ ಅಕ್ಕಚ್ಚಿ ಊಟದ ಜತೆ ಒಂದು ಹೊಸ ರುಚಿಯ ಪಾಯಸ ಮಾಡಿದ್ದಳು. ಏನು ಅಕ್ಕಚ್ಚಿ ಪಾಯಸಕ್ಕೆ ನೀನು ಬೆಲ್ಲದ ಜತೆ ಇನ್ನೂ ಎಂಥದೋ ಸುಡುಗಾಡು ಶುಂಟಿಕೊಂಬು ಹಾಕಿದ ಹಾಗೆ ಇದೆ ಎಂದು ಹುಡುಗ ನಗೆಯಾಡಿದ. ಸದಾಶಿವಂಗೆ ಅದೇ ಧ್ಯಾನ ಎಂದು ಅಕ್ಕಚ್ಚಿ ನಕ್ಕಳು.

ರಾತ್ರಿ ಹುಡುಗ ಮತ್ತೆ ಪುಸ್ತಕ ಹಿಡಿದುಕೊಂಡು ಆರಾಮು ಕುರ್ಚಿಯನ್ನು ಆಶ್ರಯಿಸಿದ. ಶಯ್ಯಾಗೃಹದಿಂದ ಕೂಡ ಪಲ್ಲಂಗ ಕಿರುಗುಟ್ಟುವ ಸದ್ದು ಕೇಳಿಸುತ್ತಾ ಇತ್ತು. ಮಧ್ಯರಾತ್ರಿಯಿರಬೇಕು. ಹುಡುಗನ ಹಣೆಯ ಮೇಲೆ ಕೈ ಯಿರಿಸಿ ಯಾರೋ ಏಳಿ ಏಳಿ ಎಂದ ಹಾಗಾಯಿತು. ಕಣ್ಣು ಬಿಟ್ಟರೆ ಹುಡುಗಿ. ನನಗೆ ಒಬ್ಬಳಿಗೇ ಒಳಗೆ ಮಲಗಲು ಯಾಕೋ ಭಯವಾಗತ್ತೆ…ದಯವಿಟ್ಟು ಒಳಗೆ ಬನ್ನಿ ಅಂದಳು ಹುಡುಗಿ.

******

ಮಾರನೆ ಬೆಳಿಗ್ಗೆ ನೋಡಿದರೆ ಇಡೀ ಕಣಿವೆ ಇಬ್ಬನಿಯಲ್ಲಿ ನೆಂದುಹೋಗಿತ್ತು. ಬಂಗಾರದ ಬಣ್ಣದ ಬಿಸಿಲನ್ನು ಸೂರ್ಯ ಎರಡೂ ಕೈಯಲ್ಲಿ ಉಪ್ಪರಿಗೆಯೊಳಕ್ಕೆ ಪೂರ್ವದ ಕಿಟಕಿಗಳ ಮೂಲಕ ತೂರಿ ತೂರಿ ಒಗೆಯುತ್ತಾ ಇದ್ದ. ಚಳಿಗೆ ರಗ್ಗಲ್ಲಿ ಮುದುಡಿಕೊಳ್ಳುತ್ತಿದ್ದ ಹುಡುಗಿ ಸುಲಭಕ್ಕೆ ಏಳುವಂತೆ ಕಾಣಲಿಲ್ಲ. ಅಕ್ಕಚ್ಚಿ ಈವತ್ತು ಮಾಗಿ ಸ್ನಾನಕ್ಕೆ ಒಬ್ಬಳೇ ಹೋದಳೋ ಹೇಗೆ ಅಂತ ಹುಡುಗನಿಗೆ ಒಂದು ಥರಾ ಮುಜುಗರವಾಯಿತು. ಅವಳು ಬಾಗಿಲು ಬಡಿದಿದ್ದರೆ ತಾನು ಏಳುತ್ತಿರಲಿಲ್ಲವೇ ಎಂದು ಲೊಟಗುಟ್ಟಿಕೊಂಡು ಹುಡುಗ ಕೆಳ ಮನೆಗೆ ಬಂದು ಅಕ್ಕಚ್ಚಿಯ ಮಲಗುವ ಮನೆಯಲ್ಲಿ ಇಣುಕು ಹಾಕಿದ. ಅಕ್ಕಚ್ಚಿ ಪೊಗಡುದಸ್ತಾಗಿ ನಿದ್ದೆಹೊಡೆಯುತ್ತಾ ಮಲಗಿದ್ದಳು. ಇವನು ಅವಳ ತೋಳು ಹಿಡಿದು ಅಲುಗಿಸಿ…ಅಕ್ಕಚ್ಚೀ ಇವತ್ತು ನೀನು ಮಾಗಿಸ್ನಾನಕ್ಕೆ ಹೋಗಲಿಲ್ಲವಾ? ಎಂದು ಕೇಳಿದ. ಅಕ್ಕಚ್ಚಿ ಕಣ್ಣು ಮುಚ್ಚಿಕೊಂಡೇ ಉತ್ತರಿಸಿದಳು. ನೀನು ಆರಾಮುಕುರ್ಚಿ ಖಾಲಿ ಮಾಡಿ ಒಳಗೆ ಹೋದೆಯಲ್ಲಾ ಆಗಲೇ ನನ್ನ ಮಾಗೀವ್ರತವೂ ಮುಗಿಯಿತು….

 

‍ಲೇಖಕರು G

May 8, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. rAjashEkhar mAlUr

    saar… pArtha pAMchAliya naMtara huDuga-huDugi… I bEsageyalli… malenADinalli honeymoon Acharisuva puNyavaMtaralla nAvugaLu… sadyakke railway sTEshannalliddEne… sumane toMdare koDuttIri!

    ನೀರೊಳಗಿನ ಕಾಣದ ಚಾಚುಬಂಡೆಗಳಿಗೆ ತೀಡಿದಾಗಾದ ಗೀಚುಗಾಯಗಳಿಂದ ಘಾಸಿಗೊಂಡ ತೆಪ್ಪದ ತಳ…

    “ನೀನು ಆರಾಮುಕುರ್ಚಿ ಖಾಲಿ ಮಾಡಿ ಒಳಗೆ ಹೋದೆಯಲ್ಲಾ ಆಗಲೇ ನನ್ನ ಮಾಗೀವ್ರತವೂ ಮುಗಿಯಿತು…”

    eMteMthA sUkshmagaLannu eShTu channAgi bareyuvirallA…. wow! thank you!

    ಪ್ರತಿಕ್ರಿಯೆ
  2. sritri

    ‘ಅನುಭವ’ ಸಿನಿಮ ಮೊದಲೇ ಬಂದಿರೋದ್ರಿಂದ ಕೃತಿಚೌರ್ಯದ ಆಪಾದನೆಯಿಂದ ಕಾಶಿನಾಥ್ ಬಚಾವ್! 🙂

    ಪ್ರತಿಕ್ರಿಯೆ
  3. Parvathi

    nannavanondigina modala dinagalu nenapadavu… ade reethiya mahadiya roominalli mana haguraagi …. ” maayaada manada bhaara, thagadhaanga ella dwara…” antha haadi baisikonddiddu kooda….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: