ರೂಪ ಹಾಸನ
ಅದು ರೈಲಿನಲ್ಲಿ ರಾತ್ರಿ ಪ್ರಯಾಣದ ದಿನ. ಮಧ್ಯ ರಾತ್ರಿ ಕಳೆದ ನಂತರ ಯಾವುದೋ ಸ್ಟೇಷನ್ನಿನಲ್ಲಿ ಎಳೆ ಕಂದಮ್ಮನನ್ನು ಎತ್ತಿಕೊಂಡು ದಂಪತಿಗಳು ರೈಲೇರಿದರು. ಮೊದಲೆ ಕಾದಿರಿಸಿದ್ದ ಸೀಟಿನಲ್ಲಿ ಮಲಗಲು ಸಿದ್ಧತೆ ನಡೆಸಿದ್ದರು. ತಾಯಿ ತನ್ನ ಪಕ್ಕದಲ್ಲೇ ಸೀಟಿನ ಮೇಲೆ ಮಗುವಿಗೆ ಮಲಗಲು ಅನುವು ಮಾಡಿ ತಾನೂ ಮಲಗಿದಳು. ಮತ್ತೆ ರೈಲು ಹೊರಟಿತು. ತಕ್ಷಣವೇ ಮಗು ಜೋರಾದ ದನಿಯಲ್ಲಿ ಅಳತೊಡಗಿತು. ಎಷ್ಟೇ ಸಮಾಧಾನಪಡಿಸಿದರೂ ಸುಮ್ಮನಾಗುತ್ತಲೇ ಇಲ್ಲ. ಮಗುವನ್ನು ಸಮಾಧಾನಿಸುವುದು ಹೇಗೆಂದು ಒಂದು ಚಿಂತೆಯಾದರೆ, ನಿದ್ದೆಗೆಟ್ಟ ಜನರೆಲ್ಲಾ ಬೈಯ್ದುಕೊಳ್ಳುವರಲ್ಲಾ ಎಂಬ ಆತಂಕ ಆ ಹೊಸ ತಂದೆ-ತಾಯಿಯರಿಗೆ. ಆದರೆ ಮಗುವಿಗೆ ಮಾತ್ರ ಅದೇನು ಹಿಂಸೆಯಾಗುತ್ತಿತ್ತೋ ತೆರೆದ ಬಾಯಿ ಮುಚ್ಚುತ್ತಲೇ ಇಲ್ಲ.

ಸಹಪ್ರಯಾಣಿಕರು ಒಂದೊಂದು ಸಲಹೆ ನೀಡಿದಂತೆಲ್ಲಾ ಅಪ್ಪ-ಅಮ್ಮ ಮಾಡಿ ಮುಗಿಸಿದರು. ಆದರೆ ಮಗು ಅಳು ನಿಲ್ಲಿಸುತ್ತಿಲ್ಲ. ಮಲಗುತ್ತಿಲ್ಲ. ಕೈಗೆತ್ತಿಕೊಂಡಾಗೊಮ್ಮೆ ಸ್ವಲ್ಪ ರಚ್ಚೆ ಕಡಿಮೆಯಾದರೂ ಸೀಟಿನ ಮೇಲೆ ಮಲಗಿಸಿದಾಕ್ಷಣ ಮತ್ತೆ ಜೋರನೆ ಅಳು. ರೈಲು ಮಾತ್ರ ಇದಾವುದೂ ತನಗೆ ಸಂಬಂಧಿಸಿದ್ದಲ್ಲವೆಂಬಂತೆ ತನ್ನಷ್ಟಕ್ಕೆ ಭರ್ರನೆ ಸಾಗುತ್ತಿತ್ತು. ಚಿಕ್ಕವಯಸ್ಸಿನ ತಾಯಿಗೂ ಏನು ಮಾಡಬೇಕೆಂದು ತೋರದೇ ತಾನೂ ಬಿಕ್ಕಳಿಸಲಾರಂಭಿಸಿದಳು. ಅಚಾನಕ್ ಆಗಿ ನನಗೆ ಅನ್ನಿಸಿತ್ತು, ಬಹುಶಃ ಇದು ಮಗುವಿನ ಮೊದಲ ರೈಲು ಪ್ರಯಾಣವಿರಬೇಕೆಂದು. ಮೂರು ತಿಂಗಳ ಮಗುವಿಗೆ ಇದು ಮೊದಲ ಪ್ರಯಾಣ. ಅದರ ಜೊತೆಗೆ ಅಷ್ಟು ಚಿಕ್ಕ ಮಗುವನ್ನು ಪ್ರಯಾಣಕ್ಕೆ ಕರೆದುಕೊಂಡು ಹೊರಟಿರುವ ಅನನುಭವಿ ದಂಪತಿಗಳಿಗೂ ಮಗುವಿನೊಂದಿಗೆ ಇದು ಮೊದಲ ಪ್ರಯಾಣ!
‘ಮಗು ರೈಲಿನ ಅಲುಗಾಟ, ಕರ್ಕಶ ಶಬ್ಧಕ್ಕೆ ಬೆಚ್ಚುತ್ತಿರಬೇಕು. ಸೀಟಿನ ಮೇಲೆ ಮಲಗಿಸಬೇಡಿ. ನಿಮ್ಮ ಮೇಲೆಯೇ ಮಲಗಿಸಿಕೊಂಡು ನೋಡಿ’ ಎಂದು ಸಲಹೆ ನೀಡಿದೆ. ‘ ‘ಮಗುವನ್ನು ಮೈ ಮೇಲೆ ಮಲಗಿಸಿಕೊಂಡು ನಮಗೆ ಹಾಗೇ ನಿದ್ದೆ ಬಂದು ಕೈನಿಂದ ಜಾರಿ ಹೋದರೇನು ಮಾಡುವುದು? ಕಷ್ಟವಾಗುತ್ತದೆ’ ಎಂದರು ಅಪ್ಪ ಅಮ್ಮ. ಸರಿ ನಾನೇ ಪ್ರಯೋಗಕ್ಕೆ ಮುಂದಾದೆ. ಮಗುವನ್ನು ಅಪ್ಪಿ ಹಿಡಿದು ಮೈ ಮೇಲೆ ಮಲಗಿಸಿಕೊಂಡು ಬೆಚ್ಚಗೆ, ಅಲುಗಾಡದಂತೆ ಶಾಲು ಸುತ್ತಿದೆ. ನಿಧಾನಕ್ಕೆ ಮಗು ಅಳು ನಿಲ್ಲಿಸುತ್ತಾ ನನ್ನ ಮೇಲೆ ಮೈಮರೆತು ನಿದ್ದೆ ಹೋಯ್ತು. ನಾನು ನಿದ್ದೆಯಿಂದ ಸಂಪೂರ್ಣ ಎಚ್ಚರಗೊಂಡೆ! ಮಗು ನನ್ನ ಕೈಜಾರಿ ಕೆಳಗೆ ಬೀಳದಂತೆ ಕಾವಲು ಕಾಯಲು ನನ್ನ ನಿದ್ದೆ ಎಚ್ಚರಗೊಂಡಿತ್ತು! ಆದರೆ ನನ್ನ ಮನಸು ಮಗುವಿನ ಕೋಮಲ ಸ್ಪರ್ಶಕ್ಕೆ ಮೈಮರೆತಿತ್ತು.
ಮಗುವಿನದು ಇದಕ್ಕೆ ತದ್ವಿರುದ್ಧ ಸ್ಥಿತಿ. ಮಗುವಿನ ಹೊರಗು ಸಂಪೂರ್ಣ ಮೈಮರೆತಿತ್ತು. ನಿದ್ದೆ ಹೋಗಿತ್ತು. ಆದರೆ ಅದರ ಒಳಗು ನನ್ನ ಸ್ಪರ್ಶಕ್ಕೆ ಎಚ್ಚರಾಗಿತ್ತು! ಆ ಮಗುವಿಗೆ ಭೀತಿಗೊಂದು ಸಾಂತ್ವನ ಬೇಕಿತ್ತು. ಅದು ಸ್ಪರ್ಶದ ಮೂಲಕ ಸಿಕ್ಕಿದೊಡನೆ ಅದರ ಒಳಗು ನನ್ನ ಒಳಗಿಗೆ ಸ್ಪಂದಿಸಿ ಜಾಗೃತಗೊಂಡು ಅದರ ಹೊರಗು ಮೈಮರೆತು ನಿದ್ದೆಗಿಳಿದಿತ್ತು. ಈ ಅನುಭವವನ್ನು ನನ್ನ ಮನಸು ವಿಶ್ಲೇಷಿಸಿದ್ದು ಹೀಗಷ್ಟೇ. ಇದನ್ನೂ ಮೀರಿ ಇದಕ್ಕೆ ಅದಾವ ಆಯಾಮಗಳಿವೆಯೋ ಗೊತ್ತಿಲ್ಲ. ಈ ಒಳಗು ಹೊರಗಿನ ಎಚ್ಚರ ಮೈಮರೆವಿನ ಆಟ ನನ್ನ ಬದುಕಿನ ಅಮೂಲ್ಯ ಕ್ಷಣಗಳಲ್ಲೊಂದು. ಮಗು ಬೆಳಗ್ಗೆ ಹೊತ್ತು ಮೂಡಿ ಎಷ್ಟೋ ಹೊತ್ತಿನವರೆಗೆ ಮೈಮರೆತು ನಿದ್ರಿಸುತ್ತಲೇ ಇತ್ತು. ನಾನು ಎಚ್ಚರಾಗಿಯೇ ಇದ್ದೆ!






Sooo nice…
” ಒಳಗು ಹೊರಗಿನ ಎಚ್ಚರ ಮೈಮರೆವಿನ ಆಟ ಬದುಕಿನ ಅಮೂಲ್ಯ ಕ್ಷಣಗಳಲ್ಲೊಂದು” very touching!
wonderful dear madam….
Anu
AAptha anubhoothi…yAvade sparshavirali aapthavagiddare ellavUu suraleetha..niddeyuu..
ಸಾಂತ್ವನ ennuvu athi dodda guru……..
ಎಚ್ಚರ ಮೈಮರೆವುಗಳ ಸರಳ ಸುಂದರ ವಿಶ್ಲೇಷಣೆ ತುಂಬಾ ಇಷ್ಟವಾಯ್ತು ರೂಪ ಮೇಡಂ…
anubhutiya uttama chitraNa..
chennagide
Remembering one of Dr. Rajkumar’s beautiful songs:
ಎಂಥಾ ಸೊಗಸು ಮಗುವಿನ ಮನಸು!
aa maguvige mattobba ammana sparsha sikkide. nimma anubhava ananyavadaddu.
hidisithu-smitha
According to psychologist Harlow, ‘contact comfort’ is the basic experience that leads to the development of attachment between the mother and the child.
Nice Mom’s always like this only!
Jagadish, chennai
maathugalu illa… ARIF raja