ಈ ರಾಘವನ್ ಕುರಿತ ’ಸಂಪಾದಕರ ಸಂಪಾದಕ’ ಬಗ್ಗೆ ಒಂದಿಷ್ಟು

ಮಾಗಬೇಕಾದ ಪತ್ರಕರ್ತರು ಓದಬೇಕಾದ ಬರಹಗುಚ್ಛ

ಸಹ್ಯಾದ್ರಿ ನಾಗರಾಜ್

ಅಲಿಖಿತ

(‘ವಿಜಯ ಕರ್ನಾಟಕ’ದ ಸಂಪಾದಕರಾಗಿದ್ದ ಈ ರಾಘವನ್ ಕುರಿತ ನೆನಪುಗಳ ಮಿಡಿತ ‘ಸಂಪಾದಕರ ಸಂಪಾದಕ’ ಪುಸ್ತಕದ ಬಗೆಗೆ ನನ್ನೊಳಗೆ ಬೆಳೆದ ನಾಕು ಮಾತು)
ಪತ್ರಿಕೆ, ಪತ್ರಿಕೆಗಿಂತಲೂ ದೊಡ್ಡದಾದ ಪತ್ರಿಕಾವೃತ್ತಿ ಪತ್ರಕರ್ತರಿಂದ ನಿಜವಾಗಿಯೂ ಏನನ್ನು ಬಯಸುತ್ತದೆಂದು ತಿಳಿಯಬೇಕೆಂಬ ಅಸಲಿ ಹಂಬಲ ಇರುವ ಎಳೆಯ ಪತ್ರಕರ್ತರು, ಮಾಧ್ಯಮ ವಿದ್ಯಾರ್ಥಿಗಳು ಒಮ್ಮೆ ಎಲ್ಲ ಸಾಲುಗಳ ಮೇಲೂ ಕಣ್ಣಾಡಿಸಬೇಕಾದ ಬರಹಗುಚ್ಛವಿದು. ಹೇಳಲಿಕ್ಕೆ ಮಾತ್ರ ಅವರವರ ವೈಯಕ್ತಿಕ ಅನಿಸಿದರೂ, ಓದುವಾಗ ಕಥೆ ಹೇಳುತ್ತಿರುವ ವ್ಯಕ್ತಿ ಮತ್ತು ಆತ ಹೇಳುತ್ತಿರುವ ಆತನದ್ದಷ್ಟೇ ಆದ ಖಾಸಗಿ ಅನುಭವ ಎಂಬ ನಮ್ಮ ಗೊತ್ತಿರುವಿಕೆ ಗೌಣವಾಗುವುದು ಇಲ್ಲಿನ ಬರಹಗಳ ಕಸುವು.
ಈ ಪಠ್ಯಗಳ ಕುರಿತು ಪರೀಕ್ಷೆ ನಡೆಸುವಂಥ ಅಸಂಬದ್ಧ ಕೆಲಸ ಕೈಬಿಡುವ ಷರತ್ತಿನೊಂದಿಗೆ ಇಂಥ ಅನೌಪಚಾರಿಕ ಪುಸ್ತಕಗಳನ್ನು ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಪಠ್ಯ ಮಾಡುವುದು ಮಾಧ್ಯಮದ ಸಾಚಾತನದ ಭವಿಷ್ಯದ ದೃಷ್ಟಿಯಿಂದ ತುಂಬಾನೇ ಒಳಿತು. ಹಾಗೆ ಮಾಡಿದ್ದೇ ಆದರೆ, ಸಿಲೆಬಸ್ ಹೆಸರಿನಲ್ಲಿ ಒಣ ವಾಕ್ಯಗಳನ್ನು, ಸವಕಲು ಗ್ರಹಿಕೆಗಳನ್ನು ಇಟ್ಟುಕೊಂಡು ಯಾವತ್ತೋ ಬರೆದ ಬರಹಗಳನ್ನು ಕೂಡಿಸಿಕೊಂಡು ಪುಸ್ತಕೋದ್ಯಮ ನಡೆಸುವ ಅಕಾಡೆಮಿಕ್ ಬರಹಗಾರಿಗೆ ಹಾಗೂ ಅಂಥವುಗಳನ್ನೇ ಸರ್ವಶ್ರೇಷ್ಠ ಕೃತಿ ಎಂದುಕೊಂಡು ಏನೂ ಇಲ್ಲದಿದ್ದರೂ ಗಂಟೆಗಟ್ಟಲೆ ಪಿಟೀಲು ಕುಯ್ಯುವ ಪತ್ರಿಕೋದ್ಯಮ ಮೇಷ್ಟ್ರುಗಳಿಗೆ ಒಂಚೂರು ರೆಸ್ಟು ಕೊಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಮಾಧ್ಯಮ ಕ್ಷೇತ್ರದ ಹದಗೆಟ್ಟ ವಾಸನೆಯನ್ನೇ ಅಸಲಿ ಎಂದು ಗ್ರಹಿಸಿ ತಾವೂ ಅಂಥದ್ದೇ ಮನಸ್ಥಿತಿ ರೂಪಿಸಿಕೊಳ್ಳುತ್ತಿರುವ ಬಹುತೇಕ ವಿದ್ಯಾರ್ಥಿಗಳಲ್ಲಿ ತುಂಬು ಜೀವಂತಿಕೆ ಹಾಗೂ ವೃತ್ತಿಧರ್ಮದ ಅಸಲಿ ಫಸಲಿಗೆ ಚಂದದ ತಳಪಾಯ ಹಾಕಬಹುದು.

ಆದರೂ ಪುಸ್ತಕ ಪರಿಪೂರ್ಣವಾಗಿಲ್ಲ ಎಂಬುದು ಒಳ್ಳೆಯ ಪುಸ್ತಕದ ಲಕ್ಷಣಗಳಲ್ಲೊಂದು. ಬಹುತೇಕರು ಈ ಪುಸ್ತಕದಲ್ಲಿ ಬರೆಯುವ ಅವಕಾಶವನ್ನು ರಾಘವನ್ ತಮಗೆ ಉಪಕರಿಸಿದ್ದನ್ನು ಸ್ಮರಿಸುವ ವೇದಿಕೆಯನ್ನಾಗಿಯೂ ಮಾಡಿಕೊಳ್ಳದೆ ಇದ್ದಿದ್ದರೆ ಎಲ್ಲರೂ ರಾಘವನ್ ಬಗ್ಗೆ ಒಂದೇ ಥರದ ಮಾತುಗಳನ್ನು ಆದರೆ ಬೇರೆ ಬೇರೆ ಪದ, ವಾಕ್ಯಗಳಲ್ಲಿ ಕಟ್ಟಿಕೊಟ್ಟಿರುತ್ತಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ; ಇದು ಇಲ್ಲಿನ ಬರಹಗಳ ಸ್ವಾರಸ್ಯ. ಅಲ್ಲಲ್ಲಿ ಭಾವಾತಿರೇಕದಿಂದಲೋ ಏನೋ ರಾಘವನ್’ಗೆ ಪದೇಪದೆ ಸಲಾಮು ಹೊಡೆಯುವುದು, ಕೃತಜ್ಞತೆ ಅರ್ಪಿಸುವುದು, ಹೊಗಳುಭಟ್ಟರನ್ನು ಕಂಡರೆ ರಾಘವನ್’ಗೆ ಆಗುತ್ತಿರಲಿಲ್ಲ ಎಂದು ಉಲ್ಲೇಖಿಸುತ್ತಲೇ ಬಿಡುವಿಲ್ಲದಂತೆ ಹೊಗಳುವುದು ನಡೆದಿದೆ. ರಾಘವನ್’ರಂಥ ತೂಕದ ಮನುಷ್ಯನ ಬಗ್ಗೆ ಅವರು ಇಲ್ಲದಿದ್ದಾಗ ಮಾತನಾಡುವಾಗಲೂ ಸಮಚಿತ್ತ ರೂಢಿಸಿಕೊಂಡಿದ್ದಿದ್ದರೆ ಬರಹಗಳು ಇನ್ನಷ್ಟು ಗಾಂಭೀರ್ಯದ ಜೊತೆಗೆ ಸಹಜ ಸೌಂದರ್ಯ ಧರಿಸುತ್ತಿದ್ದವು; ಸ್ವಲ್ಪ ಮೂಢನಂಬಿಕೆಯತ್ತ ವಾಲಿ ಹೇಳುವುದಾದರೆ, ಇಲ್ಲಿಲ್ಲದ ರಾಘವನ್’ಗೂ ಬಹುಶಃ ಇಷ್ಟವಾಗುತ್ತಿದ್ದವು! ಇನ್ನು, ‘ನಮ್ಮ ಮಾತು’ ಪುಟದಿಂದಲೇ ಶುರುವಾಗುವ ವಾಕ್ಯರಚನೆಯಲ್ಲಿನ ಸಣ್ಣಪುಟ್ಟ ದೋಷಗಳು, ಅಲ್ಲಿಲ್ಲಿ ತಲೆ ಎತ್ತುವ ಅಕ್ಷರ ಅಪಸ್ವರಗಳನ್ನು ದೂರ ಇಟ್ಟಿದ್ದರೆ, ಇಲ್ಲಿ ಬರೆದವರೆಲ್ಲರೂ ಪತ್ರಕರ್ತರು ಎಂಬ ನಿಜದ ಘನತೆ ಹೆಚ್ಚುತ್ತಿತ್ತು.
ವಿದ್ಯಾರ್ಥಿಜೀವನ ಮುಗಿಸಿ ಬೆಂಗಳೂರಿಗೆ ಕಾಲಿಟ್ಟ ನಂತರ ಎಲ್ಲ ಪುಟಗಳನ್ನೂ ಓದಿಸಿಕೊಂಡ ಮೊದಲ ಪುಸ್ತಕವಿದು. ಸಾಮಾನ್ಯವಾಗಿ ಇಂಥ ವ್ಯಕ್ತಿಚಿತ್ರದ ಪುಸ್ತಕಗಳಿಂದ (ಬರೆಯಿಸಿಕೊಂಡವರು ಬದುಕಿದ್ದರೂ, ಬದುಕಿರದಿದ್ದರೂ) ಅಂತರ ಕಾಯ್ದುಕೊಂಡವನು ನಾನು. ಆದರೆ ಈ ಪುಸ್ತಕವನ್ನು ಹಲವು ಕುತೂಹಲಗಳ ಒತ್ತಡಕ್ಕೆ ಮಣಿದು ಪ್ರೀತಿಯಿಂದ ಓದಿದ್ದಾಯಿತು. ಇಂಥದ್ದೊಂದು ಪುಸ್ತಕವನ್ನು ನಮ್ಮಂಥ ಎಳೆಯ ಪತ್ರಕರ್ತರಿಗೆ ಎಟುಕಿಸಿದ್ದಕ್ಕೆ ಧನ್ಯವಾದ. ರಾಘವನ್’ರೊಂದಿಗಿನ ಹೃದಯದ ನೆನಪುಗಳನ್ನು ಹೆಕ್ಕಿಕೊಟ್ಟ ಎಲ್ಲರಿಗೂ ಅಭಿನಂದನೆ.
 

‍ಲೇಖಕರು G

June 26, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: