’ಆಕೃತಿ’ ಪುಸ್ತಕದಿಂದ ಹೊರಬರುತ್ತಿರುವ ಎಂ ಎಸ್ ಸುಬ್ಬಲಕ್ಷ್ಮಿಯವರ ಪುಸ್ತಕಕ್ಕೆ ಎಸ್ ದಿವಾಕರ್ ಬರೆದ ಪ್ರಸ್ತಾವನೆಯ ಭಾಗ ’ಅವಧಿ’ ಓದುಗರಿಗಾಗಿ :
ಎಂ.ಎಸ್. ಸುಬ್ಬುಲಕ್ಷ್ಮಿ! ಈ ಹೆಸರು ಕೇಳಿದೊಡನೆ ಎಲ್ಲೆಡೆ ಹರ್ಷೋದ್ಗಾರವೇಳುತ್ತದೆ. ನಮ್ಮನ್ನು ನಾದದ ನದಿಯೊಂದು ಮೀಯಿಸಿಬಿಡುತ್ತದೆ; ಹೃದಯವನ್ನು ಸ್ಪರ್ಶಿಸುವಂಥ ಮಧುರ ಭಾವನೆಯೊಂದು ಪರವಶಗೊಳಿಸುತ್ತದೆ.ಇನ್ನು ಆ ದಿವ್ಯಗಾಯಕಿಯನ್ನುಕಂಡು ಕೇಳಿದವರಿಗಂತೂ ‘ರಾಜಾರವಿವರ್ಮನಕುಂಚದಿಂದ ಮೂಡಿಬಂದ ಅಂಗನೆಯ ಚೆಲುವು; ಬೇರೆ ಯಾರಿಗೂ ಇರದಂಥ ಕಂಠಮಾಧುರ್ಯ; ದೈವದತ್ತವಾಗಿ ಬಂದ ಕಲಾಭಿಜ್ಞತೆ; ವಿದ್ಯಾರ್ಜನೆಯಲ್ಲಿ ಇಂಗದ ದಾಹ; ಕುಶಾಗ್ರ ಬುದ್ಧಿ; ವಿನಯ ಸಂಪನ್ನತೆ; ಸದಾಶಿವಂ ಅವರ ಶಿಲ್ಪ ಚಾತುರ್ಯ’ ಇವೆಲ್ಲವೂ ಒಟ್ಟು ಸೇರಿ ಗಂಧರ್ವಲೋಕದ ದೇವತೆಯೊಬ್ಬಳು ಎದುರಿಗೇ ಪ್ರತ್ಯಕ್ಷವಾದಂತಾಗುತ್ತದೆ.ಇನ್ನು ಅವರ ಸಂಗೀತ ವೈಭವ? ಅದನ್ನು ಸಮರ್ಥವಾಗಿ ಚಿತ್ರಿಸಬಲ್ಲ ಗುಣವಾಚಕಗಳು ಕೂಡ ಇಲ್ಲದಂಥ ಬಡ ಭಾಷೆ ನಮ್ಮದು.
ಕನ್ನಡದಲ್ಲಿ ಇದುವರೆಗೆ ಈ ಸಂಗೀತ ಸಾಮ್ರಾಜ್ಞಿಯಬಗ್ಗೆ ಪ್ರಕಟವಾಗಿರುವುದು ಒಂದೋ ಎರಡೋ ಕಿರು ಹೊತ್ತಿಗೆಗಳಷ್ಟೆ. ಈಕೆಯ ಜೀವನವನ್ನು, ವ್ಯಕ್ತಿತ್ವವನ್ನು, ಸಂಗೀತವನ್ನು ಸಮಗ್ರವಾಗಿ ಚಿತ್ರಿಸಿ, ವಿಶ್ಲೇಷಿಸುವ ಒಂದು ಪರಿಪೂರ್ಣ ಗ್ರಂಥಕ್ಕಾಗಿ ನಮ್ಮ ಜನ ಇದುವರೆಗೂ ಕಾದಿದ್ದುದು ಸಾರ್ಥಕವಾಯಿತೆನ್ನುವಂತೆ ಮೂಡಿಬಂದಿದೆ ಶ್ರೀ ಎಸ್. ಕೃಷ್ಣಮೂರ್ತಿಯವರ ‘ಸುನಾದ ವಿನೋದಿನಿ ಎಂ.ಎಸ್. ಸುಬ್ಬುಲಕ್ಷ್ಮಿ’. ಸ್ವತಃ ಅಪರೂಪದ ಸಂಗೀತಜ್ಞರಾದ, ಕನ್ನಡದಲ್ಲಿ ಸಂಗೀತವನ್ನು ಕುರಿತು ಅದ್ವಿತೀಯ ಕೃತಿಗಳನ್ನು ರಚಿಸಿರುವ ಶ್ರೀ ಕೃಷ್ಣಮೂರ್ತಿಯವರ ಈ ಕೃತಿ ಸುಬ್ಬುಲಕ್ಷ್ಮಿಯವರ ಜೀವನ, ಸಾಧನೆಗಳನ್ನು ಕುರಿತ ಒಂದು ಅಧಿಕೃತ ಗ್ರಂಥ. ಅವರ ವಿಚಾರವಂತಿಕೆಯಿಂದ, ಸಂವೇದನಾಶೀಲ ವಿಶ್ಲೇಷಣೆಯಿಂದ, ವಿಶಿಷ್ಟ ಸಂದರ್ಭಗಳನ್ನು ಪೋಣಿಸುವ ಮೂಲಕ ಒಳ ಸಂಬಂಧಗಳನ್ನು ಧ್ವನಿಸುವ ಪ್ರತಿಭೆಯಿಂದ, ಕಣ್ಣಿಗೆ ಕಟ್ಟುವಂಥ ಚಿತ್ರಕ ಶಕ್ತಿಯಿಂದ ತುಂಬಿ ತುಳುಕುತ್ತಿರುವ ಈ ಕೃತಿ ನಿಜಕ್ಕೂ ಅನನ್ಯವಾದದ್ದು, ಅದ್ಭುತವಾದದ್ದು.
ಎಸ್. ದಿವಾಕರ್



ಎಲ್ಲಾ ಸರಿ. ಆದರೆ ಭಾಷೆ ಕುರಿತ ಮಾತು ಸರಿಯಲ್ಲ. ಏನನ್ನು ಬೇಕಾದರೂ ನಮ್ಮ ಭಾಷೆಯಲ್ಲಿ ಹೇಳಬಹುದು. ನಾವೇ ಮೂಕಾದಾಗ ಭಾಷೆ ಏನು ಮಾಡುತ್ತದೆ?