ಎಂ ಆರ್ ಗಿರಿಜಾ ಪ್ರವಾಸ ಕಥನ : ’ನಿಮಗೆ ಗಾಂಧಿ ಹೇಗೋ ನಮಗೆ ಶಬ್ರದುಂಗ್ ಹಾಗೆ’

(ಇಲ್ಲಿಯವರೆಗೆ…)

ನಾನು ಭೂತಾನಿನಲ್ಲಿದ್ದಷ್ಟೂ ದಿನವೂ ಪದೇ ಪದೇ ಕೇಳಿದ ಕೆಲವು ಮಹಾನ್ ಸನ್ಯಾಸಿಗಳು ಶಬ್ರದುಂಗ್, ಗುರು ರಿಂಪೋಚೆ, ಪೇಮಾ ಲಿಂಗ್ಪ, ಮತ್ತು ದ್ರುಪ ಕಿಲೇ. ಶಬ್ರದುಂಗ್ ನ ಬಿಟ್ಟು ಯಾವ ಊರನ್ನೂ ನೋಡಕ್ಕಾಗಲ್ಲಾ ಅಷ್ಟರಮಟ್ಟಿಗೆ ಆತ ಜನಪ್ರಿಯ ವ್ಯಕ್ತಿ ಹಾಗೂ ಭೂತಾನೀಯರ ಇತಿಹಾಸದಲ್ಲಿ ಹಾಸುಹೊಕ್ಕಾಗಿದ್ದಾನೆ. ಗುರು ರಿಂಪೋಚೆಯ ನಂತರದ ಮಹತ್ವದ ವ್ಯಕ್ತಿ.
ಈತ 17 ನೇ ಶತಮಾನದಲ್ಲಿ ಟಿಬೇಟ್ ನಿಂದ ಭೂತಾನ್ ಗೆ ಬಂದನಂತೆ. ಭೂತಾನಿನ ರಾಷ್ಟ್ರೀಯ ಪಕ್ಷಿ ರವೀನ್ ಕನಸಿನಲ್ಲಿ ಬಂದು ಭೂತಾನ್ ಗೆ ಬರಲು ಹೇಳಿತಂತೆ. ಈತ ಕನಸಿನ ದಾರಿ ಹಿಡಿದು ಮುಖ್ಯವಾದ ರೆಲಿಕ್ ಗಳೊಂದಿಗೆ ಬರುವ ಹೊತ್ತಲ್ಲಿ ಭೂತಾನ್ ಆಂತರಿಕ ಯುದ್ಧಗಳಿಂದ ನರಳುತ್ತಿತ್ತು. ಶಬ್ರದುಂಗ್ ಯೋಗಿಯಷ್ಟೆ ಅಲ್ಲ. ಚಾಣಾಕ್ಷ ವೀರ ಕೂಡ. ಟಿಬೆಟಿಯನ್ನರು ಶಬ್ರದುಂಗ್ ನ ಬಳಿ ಇದ್ದ ರೆಲಿಕ್ ಗೋಸ್ಕರ ಅವನ ಬೆನ್ನಟ್ಟಿದ್ದರಂತೆ.
ಒಮ್ಮೆ ಟಿಬೆಟಿಯನ್ನರು ಆಕ್ರಮಣ ಮಾಡುತ್ತಾರೆಂಬ ಸುಳಿವು ಸಿಕ್ಕಿ, ಒಣಹುಲ್ಲಿನಿಂದ ಮಾಡಿದ ಸಾವಿರಾರು ಸೈನಿಕರನ್ನು ನಿರ್ಮಿಸಿ ನಿಲ್ಲಿಸಿದ್ದನಂತೆ. ಇದನ್ನು ನೋಡಿ, ಇಷ್ಟೊಂದು ಸೈನ್ಯದ ಜೊತೆ ಹೋರಾಡಿದರೆ ಸೋಲು ನಿಶ್ಚಿತ ಅಂತ ಟಿಬೆಟಿಯನ್ನರು ಹಿಮ್ಮೆಟ್ಟಿಸಿದರಂತೆ. ಮತ್ತೊಮ್ಮೆ ದಾಳಿ ಮಾಡಲು ಬಂದಾಗ ಸುಳ್ಳು ರೆಲಿಕ್ ಸೃಷ್ಟಿಸಿ ಅದನ್ನು ನೀರಿಗೆ ಎಸೆದಂತೆ ನಾಟಕವಾಡಿದನಂತೆ. ಆಗ ಟಿಬೆಟ್ ಸೇನೆ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ಸಾಯಿತಂತೆ.
ಟಿಬೆಟನ್ನು ಹಿಮ್ಮೆಟ್ಟಿಸಿದ್ದಲ್ಲದೆ ಆಂತರಿಕ ಕಲಹವನ್ನು ಹತ್ತಿಕ್ಕಿ ಭೂತಾನನ್ನು ಒಂದು ಗೂಡಿಸಿದ ಖ್ಯಾತಿ ಶಬ್ರದುಂಗ್ ನದು. ಎಲ್ಲಾ ಊರುಗಳಲ್ಲಿಯು ಝಾಂಗ್ ಅಂದರೆ ಕೋಟೆಗಳನ್ನು ನಿರ್ಮಿಸಿ ಭದ್ರತೆಯನ್ನು ಬಿಗಿ ಮಾಡಿದ. ಪಾರೊ,ಟಿಂಪು, ಪುನಾಖಾಗಳ ಝಾಂಗ್ ಗಳ ಹಿಂದಿರುವುದು ಶಬ್ರದುಂಗ್. ಈ ಝಾಂಗ್ ಗಳು ವಿಶಾಲವಾದ ಕಟ್ಟಡಗಳಾಗಿದ್ದು ಅದರ ಒಳಗೆ ದೇವಾಲಯ, ಆಡಳಿತದ ಭಾಗಗಳು, ಮೊನೆಸ್ಟರಿ, ಜನ ನೆರೆಯಲು ಅಂಗಳ, ಅರಳೀಮರ ಎಲ್ಲವೂ ಇರುತ್ತದೆ. ಇವುಗಳಿಗೆ ಹತ್ತಾರು ಅಡಿಗಳ ಮರದ ಮೆಟ್ಟಿಲುಗಳಿದ್ದು ಶತ್ರು ಆಕ್ರಮಣ ಮಾಡಿದಾಗ ಮೇಲಕ್ಕೆ ಎಳೆದುಬಿಡುತ್ತಿದ್ದರಂತೆ. ಈಗ ಈ ಮರದ ಮೆಟ್ಟಿಲುಗಳನ್ನು ಯಾವತ್ತಿಗೂ ಫಿಕ್ಸ್ ಮಾಡಿದ್ದಾರೆ.
ಭೂತಾನ್ ಸದಾ ಕಾಲವೂ ನೆನಪಿಸಿಕೊಳ್ಳುವಂತಹ ಕೆಲಸ ಮಾಡಿದವ ಶಬ್ರದುಂಗ್. ನನ್ನ ಡ್ರೈವರ್ ಹೇಳ್ತಾ ಇದ್ದ ನಿಮಗೆ ಗಾಂಧಿ ಹೇಗೋ ಹಾಗೆ ನಮಗೆ ಶಬ್ರದುಂಗ್ ಅಂತ.
ನಾನು ಟಿಂಪು, ಪಾರೋ ಹಾಗೂ ಪುನಾಖಾ ಝಾಂಗ್ ಗಳನ್ನು ನೋಡಿದೆ. ಇದಲ್ಲದೇ ಇನ್ನು ಅನೇಕ ಹತ್ತಿರಹತ್ತಿರ ಇಪ್ಪತ್ತು ಝಾಂಗ್ ಗಳಿವೆಯಂತೆ. ಎಲ್ಲಾ ಝಾಂಗ್ ಗಳನ್ನು ಬೆಟ್ಟದ ಮೇಲೋ ಅಥವಾ ನದೀ ದಡದಲ್ಲೋ ನಿರ್ಮಿಸಿರುತ್ತಾರೆ. ಝಾಂಗ್ ತಲುಪಲು ನದಿಗೆ ನಿರ್ಮಿಸಿದ ಮರದ ಸೇತುವೆಗಳು ನನಗೆ ತುಂಬಾ ಹಿಡಿಸಿದವು.
ಎಲ್ಲಾ ಝಾಂಗ್ ಗಳನ್ನು ಈಗ ಆಡಳಿತದ ಬ್ಲಾಕ್ ಗಳಾಗಿ ಬಳಸುತ್ತಿದ್ದಾರೆ. ಪುನಾಖಾ ಝಾಂಗ್ ಅತ್ಯಂತ ದೊಡ್ಡದಾದ ಝಾಂಗ್. ಈ ಝಾಂಗ್ ನಲ್ಲಿಯೇ ಶಬ್ರದುಂಗ್ ನ ದೇಹವನ್ನು ಸಂರಕ್ಷಿಸಿ ಇಡಲಾಗಿದೆ. ಅಲ್ಲಿಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಕೇವಲ ಅವರ ಧರ್ಮಗುರುಗಳಾದ ಜೇಕೆಂಪೋ ರಿಗೆ ಮತ್ತು ರಾಜನಿಗೆ ಮಾತ್ರ ಪ್ರವೇಶ. ಇಬ್ಬರು ಸನ್ಯಾಸಿಗಳು ಆ ಕೋಣೆಯ ಮೇಲ್ವಿಚಾರಣೆ ಮಾಡುತ್ತಾರೆ. ಶಬ್ರದುಂಗ್ ನ ಮರಣದ ನಂತರ 25 ವರ್ಷಗಳು ಆ ವಿಷಯವನ್ನು ಗೌಪ್ಯವಾಗಿ ಇಟ್ಟಿದ್ದರಂತೆ. ಇನ್ನೂ ಧ್ಯಾನದಲ್ಲಿ ಇದ್ದಾರೆ ಎಂದೇ ಹೇಳಿ ಜನರನ್ನು ನಂಬಿಸಿದ್ದರಂತೆ. ಆತನ ಸಾವಿನ ನಂತರ ರಾಜಕೀಯವಾಗಿ ಮಹತ್ತರ ಬದಲಾವಣೆಗಳಾಗಿ ಕೊನೆಗೆ ವಾಂಗ್ಚುಕ್ ವಂಶ ಪಟ್ಟಕ್ಕೆ ಬಂತು. ಈಗಲೂ ಆ ವಂಶವೇ ಪಟ್ಟದಲ್ಲಿ ಇರುವುದು.

ಈ ಝಾಂಗ್ ಗಳು ಅವರ ತ್ಸೆಚುಗಳಿಗೆ ರಂಗಮಂಚವೂ ಹೌದು. ತ್ಸೆಚು ಅಂದರೆ ಹಬ್ಬ, ಜಾತ್ರೆ ತರಹ. ಭೂತಾನಿನಲ್ಲಿ ಇಂತಹ ಹಬ್ಬಗಳಲ್ಲಿ ಬಣ್ಣಗಳ ಧಮಾಕ ದೊಡ್ಡದು. ಎಲ್ಲಾ ಝಾಂಗ್ ಗಳಲ್ಲಿಯೂ ತ್ಸೆಚು ಬೇರೆ ಬೇರೆ ಸಮಯಗಳಲ್ಲಿ ನಡೆಯುತ್ತದೆ. ಸನ್ಯಾಸಿಗಳಿಂದ ಹಾಡು, ನೃತ್ಯ ಇರುತ್ತದೆ. ಶಬ್ರದುಂಗ್, ಗುರು ರಿಂಪೋಚೆಯ ಸಾಧನೆಗಳನ್ನು ತೋರಿಸುವ ಮುಖವಾಡದ ನೃತ್ಯ ಇಲ್ಲಿನ ಪ್ರಮುಖ ಆಕರ್ಷಣೆ. ಊರ ಜನರೆಲ್ಲಾ ನೆರೆಯುತ್ತಾರೆ. ನನ್ನ ಡ್ರೈವರ್ ಹೇಳಿದಂತೆ ‘ನಾಚ್ ಗಾನ ನೋಡಿ ಸಂತೋಷ ಪಡುತ್ತಾರೆ’. ಆ ದಿನ ಝಾಂಗ್ ಗೆ ಬರುವ ಪ್ರತಿಯೊಬ್ಬ ಭೂತಾನೀಯರೂ ಅವರ ಸಾಂಪ್ರದಾಯಿಕ ಉಡುಗೆಯಲ್ಲೇ ಬರುತ್ತಾರೆ. ತಮ್ಮಲ್ಲಿನ ಉತ್ತಮೋತ್ತಮ ಉಡುಗೆಯನ್ನೇ ಧರಿಸಿ ಬರುವುದು ಅವರು ದೇವರಿಗೆ ಸಲ್ಲಿಸುವ ಸೇವೆಯ ಒಂದು ಭಾಗ ಎಂದು ನಂಬುತ್ತಾರೆ.
ನಾನು ಹೋಗೋ ಸಮಯಕ್ಕೆ ಪುನಾಖಾ ಹಬ್ಬ ಇತ್ತು. ಪ್ಲಾನ್ ಮಾಡದಿದ್ರೂ ಕಾಕತಾಳೀಯವಾಗಿತ್ತು. ಮೊದಲ ದಿನದ ತ್ಸೆಚುಗೆ ಝಾಂಗ್ ತಲುಪಿದಾಗ ಝಾಂಗ್ ನ ಅಂಗಳದಲ್ಲಿ ಅರಳಿ ಮರದ ಸುತ್ತ ಜನವೋ ಜನ. ನಡುವೆ ನೃತ್ಯ ನಡೆಯುತ್ತಿತ್ತು. ನಾನು ಹೋದಾಗ, ಮಿಲರೇಪ ಬೇಟೆಗಾರನಿಂದ ಜಿಂಕೆಯನ್ನು ರಕ್ಷಿಸುವ ನೃತ್ಯ ನಡೀತಿತ್ತು. ಹಾಡುಗಳ ಅರ್ಥ ತಿಳಿಯದೇ ಇದ್ದರೂ ಭಾವ ಸ್ವಲ್ಪ ತಿಳೀತಿತ್ತು. ಊರಿನ ಜನರ ಜೊತೆಗೆ ಅರ್ಧಕ್ಕೆ ಅರ್ಧ ಪ್ರವಾಸಿಗರೇ ತುಂಬಿದ್ದರು. ನನಗೆ ಸರಿಯಾಗಿ ಕಾಣುವ ಜಾಗ ಸಿಕ್ಕದೆ ಸರ್ಕಸ್ ಮಾಡಿ ತುದಿಗಾಲ ಮೇಲೆ ನಿಂತು ನೋಡಬೇಕಾಯಿತು.


ಮೊದಲ ಮಹಡಿಯ ಮೇಲೆ ಕುಳಿತ ಅವರ ಧರ್ಮಗುರುಗಳಾದ ಜೇಕೆಂಪೋ ರವರ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯುತ್ತಿತ್ತು. ಅವರು ಹಳದಿ ಬಣ್ಣದ ಕಾವಿ ತೊಟ್ಟು ಉಳಿದವರಿಗಿಂತ ಭಿನ್ನವಾಗಿ ಕಾಣುತ್ತಿದ್ದರು. ಅವರಿಗಿದ್ದ ರಾಜಮರ್ಯಾದೆಗಳು ಎದ್ದು ಕಾಣುತ್ತಿದ್ದವು.

ಅದಾದ ನಂತರ ಜೋಕರ್ಗಳ ಒಂದು ಆಟ ನಡೀತಿತ್ತು. ಜನ ಬಿದ್ದು ಬಿದ್ದು ನಗ್ತಿದ್ದರು. ಸ್ವಲ್ಪ ಹೊತ್ತಿಗೆ ನಂಗೆ ನಿಂತು ಕುತ್ತಿಗೆ ನಿಗಿರಿ ಸಾಕಾಗಿ ಹೊರಟೆ. ನನಗೆ ಬೇಕಾದ ಹಾಗೆ ನೋಡಲಿಕ್ಕಾಗಲಿಲ್ಲ ಅಂತ ಬೇಜಾರಾಯ್ತು. ಜೊತೆಗೆ ದೋಮಾದ ವಾಸನೆ ಸಹಿಸೋಕಾಗ್ತಾ ಇರಲಿಲ್ಲ. ಎಲ್ಲರ ಬಾಯಲ್ಲೂ ಅದೇ. ಆಚೆ, ನದಿ ದಡದಲ್ಲಿ ಜನರನ್ನು ನೋಡ್ತಾ ಸ್ವಲ್ಪ ಹೊತ್ತು ಕೂತು ಬಂದೆ.
ಪುನಾಖಾ ಝಾಂಗ್ ಮೋಚು ಮತ್ತು ಪೋಚು ನದಿಗಳ ನಡುವೆ ಸಂಗಮಕ್ಕೂ ಕೆಲ ನೂರು ಮೀಟರ್ಗಳಲ್ಲಿದೆ. ಕೋಟೆಗೆ ಇದೊಂದು ಹೇಳಿಮಾಡಿಸಿದ ಜಾಗ. ಮೋಚು ಮತ್ತು ಪೋಚು ಹೆಣ್ಣು ಮತ್ತು ಗಂಡು ನದಿಗಳು.
ಬೆಳಗ್ಗೆ ಟಿಂಪುವಿನಿಂದ ಹೊರಟು ಪುನಾಖಾಗೆ ಬಂದಿದ್ದರಿಂದ ಸ್ವಲ್ಪ ಆಯಾಸ ಆಗತಾ ಇತ್ತು. ಟಿಂಪುವಿನಿಂದ ಪುನಾಖಾಗೆ 78 ಕಿ.ಮೀ. ಆದರೆ ರಸ್ತೆ ಚೆನ್ನಾಗಿಲ್ಲದ ಕಾರಣ 3 ಗಂಟೆಯ ಪ್ರಯಾಣ. ಇನ್ನೆರಡು ದಿನಗಳಿಗೆ ಕಾರ್ ಹಾಗು ಗೈಡು ಬುಕ್ ಆಗಿದ್ದರು. ಡೈವರ್ ಟೀಕಾ ಹಾಗು ಗೈಡ್ ಲಾಲ್ ಬಹಾದುರ್. ದಾರಿಯುದ್ದಕ್ಕೂ ಲಾಲ್ ಅನೇಕ ಕತೆಗಳನ್ನು ಹೇಳುತ್ತಾ ಬಂದ. ಅವನಿಗೂ ಬಾಲಿವುಡ್ ಮೋಹ. ನಾನು ಬೆಂಗಳೂರಿನವಳು ಅಂದರೆ, ಚ್ಚೆನ್ನೈ ಪಕ್ಕನಾ? ನಾನು ಚ್ಚೆನ್ನೈ ಎಕ್ಸಪ್ರೆಸ್ ನೋಡಿದೀನಿ ಅಂದ. ಕರೀನಾ,ಕತ್ರೀನಾ ಬಗ್ಗೆನೂ ಮಾತನಾಡಿದ. ಕಡೆಗೆ ಸನ್ನಿ ಲಿಯೋನ್ ಬಗ್ಗೆ. …ಪೋರ್ನಾಸ್ಟ್ ರ್ ಯಿಂದ ಎಲ್ಲಿಗೆ ಬಂದಳು ನೋಡಿ ಅಂತ ಮೆಚ್ಚಿದ. ರಾಗಿಣಿ ನಲ್ಲಿ MMS ಚನ್ನಾಗಿ ಮಾಡಿದಾಳಂತೆ ಅಂತ ಕೇಳಿದ. ಹೌದಾ ? ನನಗೆ ಗೊತ್ತಿಲ್ಲ ಅಂದೆ. ಅವನು ರಾಗಿಣಿ MMS  ಗೊತ್ತಿಲ್ವಾ ಅಂತ ನನ್ನ ಅಜ್ಞಾನಕ್ಕೆ ಮರುಗಿದ. ವಾಪಾಸ್ ಬೆಂಗಳೂರಿಗೆ ಬಂದ ಮೇಲೆನೇ ಗೊತ್ತಾಗಿದ್ದು ಇಂಥ ಒಂದು ಸಿನೆಮಾ ಇದೆ ಅಂತ.
ದಾರಿಯಲ್ಲಿ ಚೀಮೀ ಲಾಖಾಂಗ್ ಗೆ ಹೋಗಿ ಹೋಟೆಲ್ ಗೆ ಬಂದು ರೆಸ್ಟ್ ತೆಗೆದುಕೊಂಡೆ.
(ಮುಂದುವರಿಯುವುದು…)

‍ಲೇಖಕರು avadhi

May 13, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

Trackbacks/Pingbacks

  1. ಎಂ ಆರ್ ಗಿರಿಜಾ ಪ್ರವಾಸ ಕಥನ : ಅವಧೂತ ತಾಂತ್ರಿಕ ದ್ರುಪ ಕಿಲೆ ಮತ್ತು ಶಿಶ್ನಾರಾಧನೆ « ಅವಧಿ / Avadhi - [...] ಎಂ ಆರ್ ಗಿರಿಜಾ ಪ್ರವಾಸ ಕಥನ : ಅವಧೂತ ತಾಂತ್ರಿಕ ದ್ರುಪ ಕಿಲೆ ಮತ್ತು ಶಿಶ್ನಾರಾಧನೆ May 14, 2014 by avadhinew (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: