ತ್ರಿಕೋನದ ಹುಡುಗ, ವೃತ್ತಿಪರತೆ, ಐಸ್ ಕ್ರೀಮ್ ಮತ್ತು ಒಂದು ಕ್ಷಮೆ – ಹೇಮಲತಾ

 

ಹೇಮಲತಾ

ಕೆಲವೊಮ್ಮೆ ಹೀಗೆ ಸಂಬಂಧಗಳು ತ್ರಿಕೋನಕ್ಕೆ ಬಂದು ನಿಂತುಬಿಡುತ್ತವೆ , ಎಷ್ಟೇ ಸಿಂಪಲ್ ಆಗಿರಿಸಿಕೊಳ್ಳಬೇಕು ಎಂದುಕೊಂಡರು ಸುಮ್ಮಸುಮ್ಮನೆ ಸಂಕೀರ್ಣಗೊಂಡುಬಿಡುತ್ತವೆ.
ಲಾಜಿಕಲ್ ಪಜ಼ಲ್  ಒಂದು ಪೀಡಿಸುತ್ತಿದೆ, ಉತ್ತರ ಗೊತ್ತು, ಆದರೂ …
ಶತ್ರುವಿನ ಶತ್ರು ನಮಗೆ ಮಿತ್ರನಾಗಬೇಕು.
ಆದರೆ ಶತ್ರುವಿನ ಮಿತ್ರ ?
ಅನೇಕ ವಿಚಿತ್ರ ತಿರುವುಗಳಲ್ಲಿ ನನಗೆ ಆಪ್ತಮಿತ್ರನಾಗಿಬಿಟ್ಟ .
ಇನ್ ಫ್ಯಾಕ್ಟ್ ಲಾಜಿಕ್ ಇರೋದೇ ಹಾಗೆ, ಶತ್ರುವಿನ ಮಿತ್ರನ ಮಧ್ಯಸ್ತಿಕೆಯಲ್ಲಿ ಶತ್ರು ಕೂಡ ಮಿತ್ರನಾಗಿಬಿಡಬೇಕು , ಇಲ್ಲ ಶತ್ರುವಿನ ಮಿತ್ರ ಕೂಡ ಶತ್ರುವಾಗಬೇಕು !!!
ಶತ್ರುತ್ವ ನನಗೆ ಒಗ್ಗದ ವಿಷಯ . ಶತ್ರು ಕೂಡ ಮಿತ್ರನಾಗಲಿ ಎನ್ನುವ ಹಂಬಲಕ್ಕೆ, ಆಸೆಗೆ ಬಿದ್ದೆ ನಿನ್ನ ಬಾಗಿಲುತಟ್ಟಿದ್ದು ನಾನು.
ಕಡೆಗೆ ಏನಾಗುವುದೋ ಇನ್ನು ತಿಳಿದಿಲ್ಲ …
ಆದರೆ ಅಲ್ಲಾ ಗೋಜಲು ಗೊಂದಲಗಳಾಚೆಗು ನನಗಂತೂ ನಿನ್ನಲ್ಲಿ ಅದ್ಬುತ ಗೆಳೆಯನೊಬ್ಬ ಸಿಕ್ಕಬಿಟ್ಟ .ಹರ್ಟ್ ಆಗಿದೆಯ ನಿನಗೆ? ಭಯ ನನಗೆ .
ಸನ್ನಿವೇಶ ಸಹಜ ಆದರು ಟ್ರಿಕಿ ಇತ್ತು .
ಶತ್ರುವಿನ ಕುತಂತ್ರದ ಕುದಿಯುವಿಕೆಯಲ್ಲಿ ನಾ ಮಾತಾಡಿಬಿಟ್ಟೆ , ನಿನ್ನ ನಿಯತ್ತು ಪ್ರಶ್ನಿಸಿ ಅಲ್ಲ, ಕುತಂತ್ರದ ಹಿನ್ನಲೆಯಲ್ಲಿ . ಆದರೆ ಚೂಪಾಗಿ ತಾಗಿ ಘಾಸಿಕೊಳ್ಳುವ ಸಾಧ್ಯತೆ ಇತ್ತು ! ಆ ಕ್ಷಣಕ್ಕೆ ಅರ್ಥವಾಗಲಿಲ್ಲ ನನಗೂ , ಏನು ಮಾಡಲಿ ನನ್ನ ಸಂವೇದನೆಗಳೆಲ್ಲ ಪೆಟ್ಟು ತಿಂದುತಿಂದು ಮೊಂಡಾಗಿಬಿಟ್ಟಿದೆ.ನಿನ್ನ ದ್ವನಿಯಲಿದ್ದ ನೋವು ನಿಧಾನವಾಗಿ ಬಿಸಿತಾಕಿಸ ತೊಡಗಿದಾಗ ,ಸಣ್ಣಗೆ ಕಾಡಲು ತೊಡಗಿದ ಗಿಲ್ಟ್, ಅದಕ್ಕೆ ಈ ವಿವರಣೆ.
ಧರ್ಮಸೂಕ್ಷ್ಮವೊಂದಿದೆ ತಾಕಲಾಟದಲ್ಲಿ ತಗುಲಾಕಿಕೊಂಡಿದ್ದೀಯ ನೀನು,  ಮಾನವೀಯತೆ, ಸ್ನೇಹದ ಪ್ರಯಾರಿಟಿ ಮತ್ತು ಕರ್ತವ್ಯ ಪ್ರಜ್ಞೆ .
ಮಾನವೀಯತೆಯಲ್ಲಿ ನನ್ನ ಪರವೆಂದು ನಾನು ಭಾವಿಸುತ್ತೇನೆ , ಸ್ನೇಹದ ಪ್ರಯಾರಿಟಿಯಲ್ಲಿ ಅವನ ಪರ ಅಂತ ಅವನು ಭಾವಿಸಿದ್ದಾನೆ , ಆದರೆ ಅದೆಲ್ಲವನ್ನು ಮೀರಿ ನಿನಗೆ ನೆರವೇರಿಸಬೇಕಾದ ಕರ್ತವ್ಯಪ್ರಜ್ಞೆ ಮುಖ್ಯವಾಗುತ್ತದೆ .
ನಿಜ ಪ್ರಾಪಂಚಿಕ ಸಮಸ್ಯೆಗೆ ಪರಿಹಾರಾರ್ಥವಾಗೆ, ನೀನು ದಿಕ್ಕು ದೆಸೆಯಾಗಿದ್ದು ! ಆದರೆ ಪರಿಹಾರವಿಲ್ಲದ ಸಮಸ್ಯೆಗೆ , ಮತ್ತೊಂದು ಮಜಲಲ್ಲಿ ಸಾಂತ್ವನವಾಗಿ ಒದಗಿ ಬಂದೆ .ಮಾನಸಿಕ ಪರಿಹಾರ ಕಂಡುಕೊಳ್ಳುವಲ್ಲಿ ದೊಡ್ಡ ಸಹಾಯವಾದೆ .
ನನ್ನನ್ನು ನಂಬು, ಎಂತ ಸಂದಿಜ್ಞತೆಯಲ್ಲೂ ಮನಸು ಕಳೆದುಕೊಳ್ಳ ಬಯಸದ ಕೆಲವೇ ಕೆಲವು ವ್ಯಕ್ತಿಗತ ಸಂಬಂಧಗಳಲ್ಲಿ ನೀನು ಒಂದು .
ಹೀಗೆಲ್ಲ ಯಾರ್ಯಾರನ್ನೋ ಹೊಗಳಿ ನನಗೆ ಅಭ್ಯಾಸ ಇಲ್ಲ, ಬಕೆಟ್ ಹಿಡಿಯುವ ಜಾಯಮಾನ ನನ್ನದು ಅಲ್ಲವೇಅಲ್ಲ, ಹೊನ್ನ ಶೂಲದ ಹಂಗು ನೀಡಬೇಕಿಲ್ಲ .
ಸುಮ್ಮಸುಮ್ಮನೆ ಯಾರ್ಯಾರೋ ಹೇಳಿದ್ದನ್ನು ಕುರುಡಾಗಿ ಪಾಲಿಸುವ ರಾಶಿ ಗೋತ್ರವು ನನ್ನದ್ದಲ್ಲ .ದೊಡ್ಡವರು ಎಂದ ಮಾತ್ರಕೆ ಸುಲಭವಾಗಿ ಮನ್ನಣೆ ಸಿಗುವುದು ಇಲ್ಲ . ಹುಡುಗರು,ಹುಡುಗಿಯರು, ವಯಸ್ಕರು, ವಿವಾಹಿತರು, ಅವಿವಾಹಿತರು , ವಯಸಾದವರು ಎಂದೆಲ್ಲ ವಿಂಗಡಿಸಿ ನೋಡುವ ವಯೋಸ್ತಿತಿ ಮನಸ್ತಿತಿಯಲ್ಲಿ ಸದ್ಯಕ್ಕೆ ನಾನಿಲ್ಲ ,ನನಗೆ ಎಲ್ಲರು ಕೇವಲ ವ್ಯಕ್ತಿಗಳೇ.. ಕೆಲವರು ಶಕ್ತಿ ಕುಂದಿಸಬಹುದಾದ ವ್ಯಕ್ತಿಗಳು , ಇನ್ನು ಕೆಲವರೂ ಶಕ್ತಿ ತುಂಬಿಸಬಲ್ಲ ವ್ಯಕ್ತಿಗಳು ಅಷ್ಟೇ .
ಗಾಬರಿ ಮತ್ತು ಗೋಜಲುಗಳಲ್ಲಿರುವವರ ಹತ್ತಿರ ವ್ಯಾವಹಾರಿಕ ಅಳತೆಗೋಲುಗಳ ಜೊತೆಗೆ ವಾಸ್ತವದ ಅರಿವಿಟ್ಟುಕೊಂಡು ಭಾವನಾತ್ಮಕವಾಗಿ ಮನಸಿಗೆ, ಬುದ್ಧಿಗೆ ತಾಗಬೇಕೆಂದರೆ ಅದು ಕಷ್ಟವೇ . ಹಾಗಿದ್ದಾಗ ನಿನ್ನ ಮಾತುಗಳು ನನ್ನೊಳಗೆ ಸುಲಭವಾಗಿ ಇಳಿಯುತ್ತವೆ ಅಂದರೆ ಮತ್ತೇನೋ ಶಕ್ತಿ ಇರಬೇಕು ಅದರಲ್ಲಿ .
ನಿಜ, ನಿನ್ನ ಬಂಡವಾಳ ಮತ್ತು ತಾಕತ್ತು ಅದೇ. ಸ್ಪಷ್ಟ ವಿವರಣೆ, ಬಿಗಡಾಯಿಸಬಹುದಾದ ವಿಷಯವನ್ನು ಬುದ್ಧಿವಂತಿಕೆಯ ಬತ್ತಳಿಕೆಯಲ್ಲಿ, ಪ್ರಾಮಾಣಿಕ ಮತ್ತು ಸುಲಭವಾಗಿ ಅದಕ್ಕಿಂತಲೂ ಹೆಚ್ಚಾಗಿ ಗೌರವಾನ್ವಿತವಾಗಿ, ಶಿಷ್ಟಾಚಾರ ಬದ್ದವಾಗಿ ಮಾತಾಡಿ ಸರಿತೂಗಿಸಬಲ್ಲ ಶಕ್ತಿ. ಅಫ್ ಕೋರ್ಸ್ ಅದೇ ನಿನ್ನ ವೃತ್ತಿ .
ಮನುಷ್ಯನ ಗುಣ ಎಂದರೆ ತಮ್ಮ ತಪ್ಪುಗಳಿಗೆ ವಕೀಲರಾಗಿಬಿಡುವುದು, ಮತ್ತು ಇನ್ನೊಬ್ಬರ ತಪ್ಪಿಗೆ ನ್ಯಾಯಾದೀಶರಾಗುವುದು ..
ಅದರಲ್ಲೂ ವೃತ್ತಿಯಲ್ಲೇ ವಕೀಲ ನೀನು, ನಿನ್ನ ಮಿತ್ರನ ವಕಾಲತ್ತು ಮಾಡಲು ಬಂದವನು
..ಡಾಕ್ಟರ ಮತ್ತು ವಕೀಲರ ಹತ್ತಿರ ಮುಚ್ಚುಮರೆ ಇಲ್ಲದೆ ಎಲ್ಲ ಹೇಳಿಕೊಳ್ಳಬೇಕಂತೆ. ನನ್ನ ಶತ್ರುವಿನ ಬಗ್ಗೆ ಎಲ್ಲ ಹೇಳಿಕೊಳ್ಳುವ ಧಾವಂತಕ್ಕೆ ಬಿದ್ದವಳಂತೆ ಅವಲತ್ತುಗೊಂಡೆ .
ನನಗನಿಸುತ್ತಿದೆ ಯಶಸ್ವೀ ಡಾಕ್ಟರ್ ಮತ್ತು ಲಾಯರ್ಗಳು ಆಗಬೇಕೆಂದರೆ, ಜೊತೆಜೊತೆಗೆ ಅವರು ಆಪ್ತಸಮಾಲೋಚಕರು ಆಗಿರಬೇಕು. ಮನಶ್ಯಾಸ್ತ್ರಜ್ಞರಾಗಿರುವುದು ಅವರ ಹೆಚ್ಚುವರೀ ಕಾರ್ಯ. ಎಲ್ಲರು ಹಾಗಾಗಲು ಸಾದ್ಯವಿಲ್ಲ .ವೃತ್ತಿಪರತೆ ಮತ್ತು ಗಳಿಸುವ ಮೋಹದಿಂದಾಚೆಗು ಮಾನವೀಯತೆ ಮತ್ತು ಮೌಲ್ಯಗಳನ್ನು ಉಳಿಸಿಕೊಂಡವರು ಮಾತ್ರ ಜನರ ದುಗುಡ, ಅಸಹಾಯಕತೆ , ಅಸ್ತಿಮಿತ ಭಾವುಕತೆ ಅರಿತು ತಮ್ಮ ಕ್ಲೈಂಟ್ ಗಳಿಗೆ ಪರಿಹಾರದ ಮೇಲು ಮತ್ತೇನೋ ಹೆಚ್ಚಿನದು ನೀಡಬಲ್ಲರು .

ಈ ಹಿಂದೆ ಕೂಡ ಸಲಹೆ, ಸಾಂತ್ವನ ನೀಡಿದವರು ಅನೇಕರಿದ್ದರು .ಇನ್ನು ಕೆಲವರು ಗೊತ್ತಿದ್ದೋ ಗೊತ್ತಿಲದೆಯೋ ಹಸಿಗಾಯಕ್ಕೆ ಉಪ್ಪು ಹಚ್ಚಿದ್ದವರು .ಮತ್ತಷ್ಟು ಹೆದರಿಸಿ ಹಣ್ಣು ಮಾಡಿದವರು, ಹೀಗೆ ಮಾಡಬೇಕಿತ್ತು ಹಾಗೆ ಮಾಡಬೇಕ್ಕಿತು ಎನ್ನುತ್ತಲೇ ಹೀಗೆಲ್ಲ ಮಾಡಬಾರದಿತ್ತು ಎಂದವರು.
ಎಲ್ಲ ಮುಗಿದು ಹೋಗಿದೆ ಪಾಪ ಎಂದವರು , ಹೀಗೆ ಆಗಬೇಕು ಎಂದವರು ….ಕಾಲಕಾಲಕ್ಕೆ ಬದಲಾದ ಸಾಮಾಜಿಕ ಕೌಟುಂಬಿಕ ಪಾತ್ರಧಾರಿಗಳ ಬಣ್ಣಗಳು …
ಕಾಲ ಕೆಳಗಿನ ಮಣ್ಣೇ ಕುಸಿದಾಗ ನಂಬಿಕೆ ಉಳಿಯೋದು ಹೇಗೆ ಪ್ರಪಂಚದ ಮೇಲೆ … ನಿಜ ಹೇಳಲಾ, ಅಪನಂಬಿಕೆಯ ಹಿನ್ನಲೆಯಲ್ಲೇ ತಡವರಿಸುತ್ತಲೇ ನಿನ್ನ ನಂಬಿದ್ದು ನಾನು , ಪ್ರಾಮಾಣಿಕತೆ ಅರಿವಾಗುವವರೆಗೂ . ಸಣ್ಣ ಹಿನ್ನಡೆಯನ್ನು ಬಹುಷ್ಯ ಸಹಿಸೋದಿಲ್ಲವೇನೋ ಈಗ .ನೀನೆ ಅಲ್ಲವ ಮೋಸವಾಗಿರೋದು ನಿಜ ಎಂದು ಶರ ಹೇಳಿದ್ದು ,ಅದಕ್ಕೆ ಇರಬೇಕು ಅಷ್ಟೆಲ್ಲ possessive ನಾನು, ಎಲ್ಲರೆದುರು ನನ್ನ ಪರವೇ ನೀನು ನಿಲ್ಲಬೇಕು, ಕಡೆಪಕ್ಷ ಮಾತಾಡಬೇಕು ಎಂದು…
ಹೇಗಾಯಿತು ಹೀಗೆಲ್ಲ ..
ಕಷ್ಟಗಳೇ ಹಾಗೆ , ಕೆಲವರಿಗೆ ಇನ್ನೊಬ್ಬರನ್ನು ಅರ್ಥೈಸಿಕೊಳ್ಳುವ , ಸಹಿಸಿಕೊಳ್ಳುವ ಸಹಿಷ್ಣುತೆ ಕಲಿಸಿದರೆ ಮತ್ತೂ ಕೆಲವರಿಗೆ ಸ್ವಾರ್ಥ ಕಲಿಸಿಬಿಡುತ್ತದೆ .ತಾವು ಬಚಾವಾಗಿ ಸುರಕ್ಷಾವಲಯ ತಲುಪಿಕೊಂಡು ಬಾಗಿಲುಗಳನ್ನು ಮುಚ್ಚಿಕೊಂಡು ಬಿಡುತ್ತಾರೆ …
ಹೆಚ್ಚು ಕಮ್ಮಿ ಒಂದೇ ಹಿನ್ನಲೆಯ ಆದರೆ ಬೇರೆಬೇರೆ ರೀತಿ ಪರಿವರ್ತನೆಗೊಂಡವರಿಗೆ ಅರ್ಥವಾಗಬೇಕಿತ್ತು ನಾನು .ನಮ್ಮನ್ನು ನಾವು ಅಳೆದುಕೊಳ್ಳುವ ಅಳತೆಗೋಲು ಮತ್ತು ಇತರರು ನಮ್ಮನ್ನು ಅಳೆಯುವ ಮಾನದಂಡ ಬೇರೆಬೇರೆಯೇ . ಅದರಲ್ಲೂ ಅನ್ಯಗ್ರಹ ಜೀವಿಗಳ ಜೊತೆ ಬದುಕಿ, ಗುದ್ದಾಡಿ ಹೆಣಗಬೇಕಾದಾಗ ಅಲ್ಲಿ ಸಣ್ಣ ಸಮಸ್ಯೆಯು ದೊಡ್ಡ ಯುದ್ಧವೇ …ಜಗತ್ತು ಕಷ್ಟವಿದೆ ಸ್ವಾಮಿ ! ಅದಕ್ಕೆ ಅರ್ಥಮಾಡಿಸುವುದು ಕೂಡ ..!!
ಸುಳಿಯಲ್ಲಿ ಸಿಕ್ಕಿ ಸಾಯದೆ ಮುಳುಗದೆ ಸುರಳಿಸುರಳಿ ಸುತ್ತುತ್ತ ,ಬದುಕುಳಿಯಲು ಸರ್ವಪ್ರಯತ್ನ ಮಾಡುತ್ತಿರುವಾಗ ಹುಲ್ಲುಕಡ್ಡಿ ಕೂಡ ಆಪತ್ಭಾಂದವನಂತೆ ಕಾಣ್ಣುತ್ತಂತೆ.ನಾನು ಅಂತದ್ದೇ ಪರಿಸ್ಥಿತಿಯಲ್ಲಿದ್ದೆ.ಹುಲ್ಲುಕಡ್ಡಿಯ ಅಗತ್ಯವಿತ್ತು .
ಮೊದಲ ದಿನದ ನಿನ್ನ ವಾದಮಂಡನೆ ಇರಸರಿಕೆ ಮತ್ತು ಅಪಬ್ರಂಶವೆನಿಸಿದರು ಒಂದು ಕಾಳಜಿ ಕಂಡಿತ್ತು ಅಲ್ಲಿ — ’dont go bashing , sympathy would end’,  ಆಗಾ ಕಂಡಿದ್ದು ನೀನು
dont go bashing , sympathy would end –ನೀ ಕಲಿಸಿದ ಮೊದಲ ಪಾಠ .
ನಮ್ಮ ನೋವು, ಸಂಕಟಕ್ಕಿಂತ ದ್ವನಿ ಮತ್ತು ಮಾತಿನ ಬಿರುಸಿನ ಮೇಲೆ ಸಾಮಾನ್ಯಜನರಿಗೆ ನಾವು ತಪ್ಪಾಗಿ ಅರ್ಥವಾಗಿಬಿಡುತ್ತೇವೆ. ಬದುಕಿನುದ್ದ ಅದರಲ್ಲೂ ಹೆಣ್ಣುಮಕ್ಕಳು ಈ ನಮ್ಮ ವ್ಯವಸ್ಥೆಯಲ್ಲಿ ಜ್ಞಾಪಕವಿಟ್ಟುಕೊಳ್ಳಬೇಕಾದ ಅನಿವಾರ್ಯ ಪಾಠ , ಎಷ್ಟೇ ಸಬಲರಾಗಿದ್ರು….ಅದೆಷ್ಟು ಬಾರಿ ಮನಸಲ್ಲೇ ಪಟಪಟಿಸಿದೆನೋ….
ಮೊದಮೊದಲು ನನ್ನ ಮಾತೆಲ್ಲ ನಿಂಗೆ ಒಪ್ಪಿಗೆಯಾಗಲಿಲ್ಲ, ನನಗು ಅಷ್ಟೇ ನಿನ್ನ ವಾದವು …
ಕೆಲವೊಮ್ಮೆ ಎಳೆದು ಎಳೆದು ಅದೆಷ್ಟು ಇರುಸು ಮುರುಸು ಮಾಡಿದೆನೋ ಗೊತ್ತಿಲ್ಲ. ವಿಧಿ ಇರಲಿಲ್ಲ!
ಬುದ್ಧಿವಾದಕ್ಕು,ಅನುಭವಕ್ಕೂ ಇರುವ ವ್ಯತ್ಯಾಸ –ದಾಹ ಅಂತ ನೀರು ಕುಡಿಯುವ ಹಾಗೆ ಕಲ್ಪಿಸಿಕೊಳ್ಳುವುದಕ್ಕು , ನಿಜವಾಗಲು ನೀರು ಕುಡಿಯುವುದಕ್ಕು ಇರುವಷ್ಟೇ .
ಆದರೆ ಕೇಳುವ ಕಿವಿಯಾದೆಯೆಲ್ಲ ಅದೇ ಎಷ್ಟೋ ಪರಿಹಾರ ನೀಡಿದಂತೆ. ಮೊದಲೇ ಮುಜುಗರದ ಸೂಕ್ಷ್ಮ ಪ್ರಾಣಿಯಾಗಿದ್ದ ನಾನು ಭಯ ನಿರ್ಮಿತ ಕಾರಾಗೃಹದಲ್ಲಿ ಬೇರೆಯವರು ತಳ್ಳುವ ಮೊದಲೇ ಸರಿದು ಕುಳಿತಿದ್ದೆ , ಜೊತೆಜೊತೆಗೆ ಜಿಗುಪ್ಸೆಯ ಚಿಪ್ಪನ್ನು ಮೇಲೆ ಕವಚಿಕೊಂಡ್ಡಿದ್ದೆ .
ಒಳಗೆ ಅದಮ್ಯ ಬದುಕುವ ಬಯಕೆ, ಉತ್ಕಟ ಕನಸು, ಸಿಕ್ಕಿದ್ದಿದ್ದು ಮಾತ್ರ ವಂಚನೆಯ ಬಹುಮಾನ. ಸುತ್ತಲು ಕತ್ತಲು. ಯಾರಿಗಾದರು ಕಡೆಪಕ್ಷ ಅಥವಾಗಬೇಕಿತ್ತು
ಧಾವಂತದಲ್ಲಿ ಸಿಡಿಲಾಗಿದ್ದವಳಿಗೆ ಸ್ಪೋಟಿಸಲು ಬಿಟ್ಟು, ನಿಧಾನವಾಗಿ ಸುಧಾರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟೆ ನೀನು, ಕುಡಿಯಲು ನೀರುಕೊಟ್ಟೆ ..
ಹೇಳುತ್ತಾ ಹೇಳುತ್ತಾ ನಾ ಹಗುರಾದೆ, ಸ್ಪಷ್ಟವಾದೆ …ಇವೆಲ್ಲ ಸಹಜವೆನ್ನುತ್ತಲೇ ಹೆಪ್ಪುಗಟ್ಟ ಸಮಸ್ಯೆಗೆ ಸರಳೀಕೃತ ಅರ್ಥ ಒದಗಿಸಿದೆ ನೀನು .
ಒಂದು ದಿನದಲ್ಲ ಅದು …ಒಂದು ರಾತ್ರಿಯಲ್ಲಿ ಆದ್ದದ್ದಲ್ಲ .
ಅದೆಷ್ಟು ದಿನ ಅದೆಷ್ಟು ರಾತ್ರಿ ಭೋರಿಟ್ಟೆ ನಾನು, ಪಾಪ ನಿದ್ದೆ ತೊರೆದು ಕೇಳಿಸಿಕೊಂಡೆ ನೀನು. ಮಾತಾಡತೊಡಗಿದ್ದೆ ಕನ್ನಡಿ ಎದುರು ನಿಂತಂತೆ, ಅಪ್ಪನೆದುರು ಬಿಕ್ಕಳಿಸುವಂತೆ, ಎಷ್ಟೋ ವರ್ಷಗಳ ಗೆಳೆಯನ ಹತ್ತಿರ ಸಲಿಗೆ ತೆಗೆದುಕೊಳ್ಳುವಂತೆ…
ಬದುಕಲ್ಲಿ ಏನಿದೆ ಎಲ್ಲ ಖಾಲಿಖಾಲಿ ಎನ್ನುತ್ತಾ ನಾನು ಕೊರಗುತ್ತಿರುವಾಗಲೇ, ಹೌದು ಏನಿಲ್ಲ ಎಂದು ಜೊತೆಗೆ ಒಪ್ಪಿಕೊಳ್ಳುತ್ತ , ಎಲ್ಲವನ್ನು ಹೊಸದಾಗಿ ನಾವೇ ತುಂಬಿಸಿಕೊಳ್ಳಬೇಕು , ಶ್ರೀಮಂತರಿಗೂ ಕಾಡಿದ ಜಿಜ್ಞಾಸೆ ಇದು, ನಮ್ಮತನವಿರೋದೆ ಇಲ್ಲಿ ಎಂದು ವಿವರಿಸಿದೆ.
ಕಷ್ಟಗಳು ತಾತ್ಕಾಲಿಕ ಎಂದಾಗಲು ನಾನು ಕನ್ವಿನ್ಸ್ ಆಗಲಿಲ್ಲ , ಸುಖಗಳು ನಿರಂತರವಲ್ಲ ಎಂದಾಗಲು ನಾನು ಒಪ್ಪಲಿಲ್ಲ. ಬದುಕು ಇರುವುದೇ ಹೀಗೆ, ಸಾವಿನಂತೆ, ಹರಿವ ನೀರಲ್ಲಿ ಕಳೆದುಹೋದ ಉಂಗುರದಂತೆ ಒಪ್ಪಿಕೊಳ್ಳಬೇಕು ನೀನು, ಮರಳಿಬಾರದ ವಾಸ್ತವವನ್ನು ಮನಸಿಗೆ ಒಪ್ಪಿಸಬೇಕು, ಹಾಗಾದಾಗಲೇ ಬದುಕಲು ಸಾಧ್ಯವಾಗುವುದು ಎಂದೆ. ಆಗ ನಾನು ಕನ್ವಿನ್ಸ್ ಆದೆ.
ಹೌದು ನೋವನ್ನು ತಡೆಯಲು ಸಾಧ್ಯವಿಲ್ಲ ಆದರೆ ಪ್ರಯತ್ನಪೂರ್ವಕವಾಗಿ ಮೀರುವ ಆಯ್ಕೆ ನಮ್ಮಲ್ಲೇ ಇದೆ, ಕಡೆಗೆ ಹೊರಕವಚ ಕಿತ್ತು ಮೀರಬೇಕಾದವರು ನಾವೇ.
ಸ್ವಾನುಕಂಪದ ಮಡುವು ಸಾವಿನ ಸುಳಿಯಂತೆ , ಹೊರಗೆ ಬರಲು ಪ್ರಯತ್ನಿಸಿದಾಗಲಷ್ಟೇ ಬದುಕು ಕಾಣೋದು , ದಾರಿ ಕೊನೆಯಾದರೆ ಅದು ಬದುಕಿನ ಕೊನೆಯಲ್ಲ, ಹೊಸ ಹಾದಿಯ ಆದಿಯಾಗಿದ್ದರು ಆಗಿರಬಹುದು ಎನ್ನುವ ಸಣ್ಣ ಆಸೆಯಾದರು ಉಳಿಸಿಕೊಳ್ಳಬೇಕು .
ಬರಹ, ಬವಣೆಗಳಾಚೆಗು ಬದುಕು ಚಾಚಿಕೊಂಡಿದೆ …
ನೀ ಹೇಳಿದ್ದು ಅದೇ ತಾನೇ , ನನಗು ಅವೆಲ್ಲ ಅಲ್ಪಸ್ವಲ್ಪ ಗೊತ್ತಿತ್ತು ..
ಸ್ನೇಹಿತರಾಗಿದ್ದು ಯಾವಾಗ ..ನೆಂಚಿಕೊಳ್ಳಲು ಮಾತು ಬದಲಿಸಿ ಅಭಿರುಚಿಗಳಲ್ಲಿ ಸಾಮ್ಯತೆ ಗುರುತಿಸಿಕೊಂಡಾಗ …ಸಾಹಿತ್ಯ, ಕವನ, ಕವಿತೆ ,ನಾಟಕ , ಊಟ, ಹಾಡು ಅಂತೆಲ್ಲ ಮಾತಾದಾಗ ..
ನಮ್ಮವರು ನಮ್ಮನು ಹೊಗಳೋದೆಲ್ಲ ಕ್ಲೀಷೆಯಾಗಿಬಿಡುತ್ತದೆ, ನಮ್ಮ ಬಗ್ಗೆ ನೆಗೆಟಿವ್ ಇಮೇಜ್ ಹೊಂದಿದವರು ಕೊಡುವ ಕಾಂಪ್ಲಿಮೆಂಟ್  ಇದೆಯಲ್ಲ ಅದು ಮಹತ್ತರವಾಗಿ ಬಿಡುತ್ತದ. ಅದಕ್ಕಿರುವ ಶಕ್ತಿಯೇ ಬೇರೆ..
ಅದ್ಯಾವ ದಿವ್ಯಗಳಿಗೆಯಲ್ಲಿ ಬೆಳಕಿನ ಕಿಡಿಯೊಂದನ್ನು ತೂರಿಬಿಟ್ಟೆಯೋ , ವಿಶೇಷ ಶಕ್ತಿ ಬಂದುಬಿಟ್ಟಿತು . ನಿನ್ನೊಳಗೂ ಸತ್ವವಿದೆ ಎಂದಾಗ ಸಿಕ್ಕುವ ಧೈರ್ಯವೇ ಬೇರೆ .
ನನ್ನವೇ ಚಿಂತೆಗಳು ಚಿಂತನೆಯಾಗಿ , ನೋವು ನಲಿವಿಗೂ ಅಕ್ಷರದ ರೂಪಮೂಡಿ, ನಿನ್ನ ಮಾತು ಪಾತ್ರವಾಗಿ ಕತೆಗಳು ಹುಟ್ಟತೊಡಗಿದವು . ಕಿತ್ತೆಸೆದಿದ್ದ ಹವ್ಯಾಸಕ್ಕು ಪ್ರಾಮುಕ್ಯತೆ ದೊರೆತು ,ನಾ ಬಯಸಿದ ನನ್ನ ಅಸ್ತಿತ್ವ ಚೂರುಚೂರೇ ದೊರಕತೊಡಗಿತು .ಅದಕ್ಕಿಂತ ಬೆರಗು ಮತ್ತು ಸಂತೋಷ ಯಾವುದಿದೆ …ನಮ್ಮನ್ನು ನಾವು ಕಂಡುಕೊಳ್ಳೋದು, ಕನಸು ಕಂಡಂತೆ !
ಒಂದರಿಂದ ಒಂದು ಹತ್ತಿದಂತೆ , ದೂರತಳ್ಳಿದ್ದ ಹಾಡುಗಳು ಬರಸೆಳೆದು ಅಪ್ಪಿಕೊಂಡವು, ಸಾಮಾಜಿಕವಾಗಿ ಸಕ್ರಿಯವಾಗಿರುವಂತೆ ಪ್ರೇರೇಪಿಸಿದವು, ಹಗಲು ಹಿಗ್ಗಿತು, ರಾತ್ರಿ ಕುಗ್ಗಿತು , ಬಿಡುಸಾಗಿದ್ದ ತುಟಿ ಕೊಂಕಿತು , ನಗು ಊರಗಲ ಮೂಡಿತು .
ನಟನೆ, ಆಂಕರಿಂಗ್, ಓದು , ಬರಹ ,ನಾಟಕ, ಸುತ್ತಾಟ , ರಂಗೋಲಿ, ಚಿತ್ರಕಲೆ — ನಾ ಕಂಡ ಕನಸು ಎಲ್ಲ ಮತ್ತೆಮತ್ತೆ ನೆನಪಾಯಿತು , ನಮ್ಮ ಮಾತಿಗೆ ಸರಕಾಯಿತು . ಮುಂದೆ ಎಂದು ಮುಂದೂಡಿದ್ದೆವಲ್ಲ ಅವೆಲ್ಲ ? ಅರೆ ಬದುಕಲ್ಲಿ ಏನೆಲ್ಲಾ ಬದುಕದೆ ಬಿಟ್ಟಿರುವೆ….ಇವಾಗ ಯಾರು ತಡೆಯುತ್ತಿರೋದು ? ನಿಜ ನಮ್ಮನ್ನು ಬಂಧಿಸಿದ ಸರಪಳಿಗಳು ಮಾನಸಿಕವಾದ್ದದ್ದು ..ಹೊಸ ಹೊಳಹು
ನನ್ನನುಭವಕ್ಕೆ ದಕ್ಕಿತ್ತು , ಬಿರುಸು ಕಡಿಮೆಯಾಗಿತ್ತು , ಒಮ್ಮತಕ್ಕೆ ಬಂದಿದ್ದೆವು , ಹೆಚ್ಚೇನೂ ಹೇಳುವುದು ಬೇಕಿರಲಿಲ್ಲ ನಾನು , ಹೆಚ್ಚೇನೂ ವಾದಿಸುವುದು ಬೇಕಿರಲಿಲ್ಲ ನೀನು . ಸ್ನೇಹ , ಗೌರವ ಮತ್ತು ಪಕ್ವತೆ ಮಿಳಿತಗೊಂಡ ಸಂಬಂಧದ ಔನ್ನತ್ಯದ ಎತ್ತರವೆ ಬೇರೆ .
ವೈಯಕ್ತಿಕವಾಗಿ ನಿನ್ನ ಬಗ್ಗೆ ಹೆಚ್ಚೇನೂ ತಿಳಿದುಕೊಂಡಿಲ್ಲ ನಾನು , ಗೊತ್ತಿರೋದು ಒಂದೇ ನಿನ್ನ ಆಫೀಸ್ ಕೆಳಗಿನ ಅಂಗಡಿಯಲ್ಲಿ ಗೆಳತಿಯರೊಂದಿಗೆ ಐಸ್ ಕ್ರೀಂ ತಿನ್ನುತ್ತ ನಿಂತ ನೀನು ಮತ್ತು ಮನೆ ಬಂದೊಡನೆ ಊಟಕ್ಕೆ ಫೋನ್ ಕಟ್ ಮಾಡೋ ನೀನು.
ಆದರೆ ಬೌದ್ಧಿಕವಾಗಿ ಕಂಡಿದ್ದು ಬೇರೆ ಬೇರೆ ಕೋನಗಳಲ್ಲಿ .
ಒಳ್ಳೆಯ ಗುರುವಾದವನ್ನು ಕೇವಲ ನೀತಿಪಾಠ ಮಾಡಲ್ಲ , ವಿಷಯದ ಬಗ್ಗೆ ಕುತೂಹಲ ಮೂಡಿಸಿ, ತಾವಾಗೆ ತಾವು ಕಂಡುಕೊಳ್ಳುವಂತೆ ಪ್ರೇರೇಪಿಸುತ್ತಾನೆ .
ಒಳ್ಳೆಯ ವಿಮರ್ಶಕ ಅನಗತ್ಯ ಹೊಗಳಲ್ಲ, ನಿಧಾನವಾಗಿ ಏಕತಾನತೆಯ ಬಗ್ಗೆ ಜಿಗುಪ್ಸೆ ತೋರಿಸುತ್ತಾನೆ .
ಒಳ್ಳೆಯ ಮಾರ್ಗದರ್ಶಿ ಏನು ಬಾರದವನಿಗೆ ಒಮ್ಮೆಲೇ ಹೀಗೆ ನಿಲ್ಲು, ಹೀಗೆ ಓಡು ತಾಕೀತು ಮಾಡಲ್ಲ ,ನಿರ್ದೇಶಿಸುವುದಿಲ್ಲ , ಇದು ಸಹಜ ಸ್ಥಿತಿ ನಿಧಾನವಾಗಿ ನಿಲ್ಲು, ಒಂದೊಂದೇ ಹೆಜ್ಜೆ ಇಡು, ನಿನ್ನಿಂದ ಸಾಧ್ಯವಿದೆ ಆತ್ಮವಿಶ್ವಾಸ ತುಂಬುತ್ತಾನೆ.
ನಿಶ್ಚಲ ಕಾಯಕ್ಕೆ ಈಗಷ್ಟೇ ಚಲನೆ ಚಾಲ್ತಿಯಾಗಿದೆ, ನನ್ನ ಮನೋಭಾವದಲ್ಲಿ ಸಣ್ಣ ಹೊಸಹುರುಪು ಮೂಡಿದೆ, ಬದುಕನ್ನು ಕಾಣುವ ರೇಖೆಗೆ  ಯೂ ಟರ್ನ್ ಸಿಕ್ಕಿದೆ, ಏನಿವಾಗ ಹೌದು ಎನ್ನುವ ಹುಂಬ ಧೈರ್ಯಗಿಟ್ಟಿದೆ …
ನನಗೊತ್ತು ಇವೆಲ್ಲ ಅಲ್ಟಿಮೇಟ್ ಅಲ್ಲ ….ಮತ್ತೆ ಮತ್ತೆ ಕುಸಿಯೋದು ಸಹಜ..
ಬದುಕಿನ ಭಯ ಕಡಿಮೆಯಾಗಿಲ್ಲ , ಕಡೆಪಕ್ಷ ಬದುಕುವ ಭಯ ಕಡಿಮೆಯಾಗಿದೆ .ಅಷ್ಟರ ಮಟ್ಟಿಗೆ ನಾ ಗೆದ್ದೇ …
ಪೆನ್ನಿನ ರೀಫಿಲ್ ನಂತೆ ನನ್ನಂತ ಹುಡುಗಿಯ ಆತ್ಮವಿಶ್ವಾಸ … ತುಂಬಿ ಚೆಲ್ಲಾಡುತ್ತಿರುವ ನಿನ್ನ ಆತ್ಮವಿಶ್ವಾಸದ ಸಾಲ ಆಗಿಂದಾಗೆ ದೊರಕುತ್ತಲಿರಲಿ ನನಗೆ. ನನ್ನ ನಿಲುವು ಅಷ್ಟೇ “ಬದುಕುವ ಧನಾತ್ಮಕ ಪ್ರೇರೇಪಣೆ ” ನಾವು ಇನ್ನೊಬ್ಬರಿಗೆ ನೀಡಬೇಕಾದ ಇಂದಿನ ಜೀವನಶೈಲಿಯ ತುರ್ತು ..
ಮತ್ತು ಬದುಕು ಬೆಳೆಯಬೇಕು ಎಲ್ಲ ಕ್ಲೈಂಟ್ ಸರ್ವಿಸರ್ ಗಳ ಬಂಧಗಳಾಚೆಗು. ಜರೂರತ್ತಿದೆ ಬೆಳಕು ಜಗಕ್ಕೆ, ಜನಕ್ಕೆ .
ನಿನ್ನಲ್ಲಿರುವ ಹಣತೆ ಬೆಳಗುತ್ತಿರಲಿ ಹಾಗೆ .
ನಿನ್ನ ಒಳ್ಳೆತನಕ್ಕೆ ಫೀಸ್ ಕಟ್ಟಿಲ್ಲ … ಕಟ್ಟಲು ಆಗುವುದು ಇಲ್ಲ .
ನೋವಿನಲ್ಲಿರುವವರಿಗೆ ತಮ್ಮ ಭಾವನೆಗಳ ಮೇಲಾಗಲಿ , ಮಾತಿನ ಮೇಲಾಗಲಿ ಹತೋಟಿ ಇರುವುದಿಲ್ಲ .ಅವರಿಗೆ ಹೆಚ್ಚುಕಮ್ಮಿ ಮಾತಾಡುವ ಎಲ್ಲ  ವಿನಾಯತಿ ಇರುತ್ತೆ .
ಇದೆಲ್ಲ ಗೊತ್ತಿಲದವನೇನಲ್ಲ ನೀನು , ಹೇಳಬೇಕಾದ ಅನಿವಾರ್ಯವೂ ನನಗಿಲ್ಲ .
ಆದರು ತಿಳಿದೋ ತಿಳಿಯದೆಯೋ ಆದ ತಪ್ಪಿಗೆ ಕ್ಷಮೆ ಕೇಳಿಬಿಡುತ್ತೇನೆ .
ಇನ್ನೊಂದಿಷ್ಟು ಮಾತಾಡೋದಿದೆ , ಕವಿತೆ ಕವನ ಚರ್ಚಿಸೋದಿದೆ , ಜೀವನ ಪ್ರೀತಿ ಯರವಲು ಪಡೆಯಬೇಕಿದೆ .
ಕೋಪ ಕರಗಿದ್ದರೆ ,ಜೊತೆಗೆ ನಿನ್ನೊಂದಿಗೆ ಐಸ್ ಕ್ರೀಂ ತಿನ್ನೋ ಹೊಸ ಆಸೆಯೂ ಚಿಗುರಿದೆ ….!!!
 

‍ಲೇಖಕರು G

May 13, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Anonymous

    ತುಂಬಾ ಅಂದ್ರೆ ತುಂಬಾನೇ ಇಷ್ಟವಾಯಿತು…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: