ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ಆರ್ ಕಮಲ ಅನುವಾದಿತ ಕವಿತೆ – ಕತ್ತಲ ಹೂವಿನ ಹಾಡು

ಮೂಲ: ಅಲೀಸ್ ವಾಕರ್
ಕನ್ನಡಕ್ಕೆ: ಎಂ ಆರ್ ಕಮಲ

37 ವರ್ಷಗಳ ಹಿಂದೆ ಅನುವಾದಿಸಿದ ಆಫ್ರೋ -ಅಮೇರಿಕನ್ ಕವಿ ಅಲೀಸ್ ವಾಕರ್ ಳ ಕವಿತೆ.ಈ ಕವಿತೆ ಅನುವಾದಿಸುವಾಗ ನನ್ನ ಸ್ವಂತದ್ದು ಅನ್ನಿಸಿತ್ತು..
ಇಲ್ಲಿಯ ತಂದೆಗೂ ನನ್ನ ತಂದೆಗೂ ಒಂದೇ ಒಂದು ವ್ಯತ್ಯಾಸವನ್ನು ನಾನು ಕಂಡಿಲ್ಲ!!!

ಅಪ್ಪನ ನೆನಪು ಎಷ್ಟು ಕಾಡುತ್ತದೆ!
ನನಗನಿಸುತ್ತದೆ ನಾ ಹುಟ್ಟುವಾಗಲೇ
ಅಪ್ಪ ಅಷ್ಟು ದಣಿದಿರಬಾರದಿತ್ತೆಂದು.
ಬ್ಯಾಂಕಿನ ಚೆಕ್ಕುಗಳ ಬರೆವಾಗ
ಚಲನ್ ತುಂಬುವಾಗ
ಅವನ ಬಗ್ಗೆ ಯೋಚಿಸುತ್ತೇನೆ –
ಬಹುಶಃ ಹೀಗಿರಬೇಕೆಂದೋ
ಹಾಗಿರಬೇಕೆಂದೋ ಹೇಳುತ್ತಿದ್ದ.
ಅವನಿಗೆ ತಿಳಿದಿತ್ತು-
ಹೈಸ್ಕೂಲಿನಲ್ಲಿಯೇ ನನ್ನದೊಂದು
ಉಳಿತಾಯ ಖಾತೆಯಿತ್ತು!

ಅಪ್ಪ ಬದುಕಿದ ಬದುಕಿನಿಂದ
ಕಳಚಿಕೊಳ್ಳುವುದಕ್ಕೆ
ಅಕ್ಷರ ಲೋಕಕ್ಕೆ ಹೋದ ನನಗೆ
ಸತ್ಯ ಹೇಳುವುದೆಂದರೆ
ಶಿಕ್ಷಿಸುವುದಲ್ಲವೆಂದು ಆತ ಕಲಿಸಿದ
ಬದುಕಿನ ಘೋರ ಸತ್ಯಗಳು
ಕೊನೆಗಳಿಗೆಯಲ್ಲಿ ಅವನನ್ನು
ತೀವ್ರವಾಗಿ ಘಾಸಿಗೊಳಿಸಿದರೂ!

ಅಪ್ಪನ ನೆನಪು ಎಷ್ಟು ಕಾಡುತ್ತದೆ:
ತರಕಾರಿ ಹೆಚ್ಚುತ್ತಿದ್ದ,
ಅಡುಗೆ ಬೇಯಿಸುತ್ತಿದ್ದ
ಧ್ಯಾನಲೀನ ಯೋಗಾಸಕ್ತನಂತೆ!
ಊರವರ ಕರೆದು ಊಟವಿಕ್ಕುತ್ತಿದ್ದ
ಎಷ್ಟು ಧಾರಾಳಿಯಾಗಿದ್ದ!

ನಾನೀಗ ಥೇಟ್ ಅಪ್ಪನಂತೆ ಕಾಣುತ್ತೇನೆ
ಅಡುಗೆ ಬೇಯಿಸುತ್ತೇನೆ
ನನಗವನದೇ ಬುಧ್ಧಿ ಹೊಳಪು.
ಪಕ್ವವಾಗದ ಬದುಕು!
ಮತ್ತೊಮ್ಮೆ ಅವನದೇ
ದಾರಿ ತುಳಿಯುತ್ತಿದ್ದೇನೆ.
ಹಾದಿಬದಿಯಲ್ಲಿ ಹಾದು ಹೋಗುವವರಿಗೆಲ್ಲ
ಉಣಬಡಿಸುತ್ತ ….

ಈಗವನು ಇದ್ದಿದ್ದರೆ
ಎದೆಯುಬ್ಬಿಸುತ್ತಿದ್ದ
ನನ್ನ ಬರವಣಿಗೆಯನ್ನು
ಅಡುಗೆ ಬೇಯಿಸುವುದನ್ನು
ಬೆಂಕಿಗೆದುರಾದ ನನ್ನ
ನೆಟ್ಟ ಕಣ್ಣುಗಳನ್ನು-ಈಗವನು ಕಂಡಿದ್ದರೆ!?

‍ಲೇಖಕರು Admin

19 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading