ಆವಾಸ
ಶೇಷಗಿರಿ ಜೋಡಿದಾರ್

ಗುರುತ್ವ ಮೀರಿದ,
ಆದರೆ, ಮೇಲೆರದ, ಕೆಳಜಾರದ,
ಎಳು ಬೀಳುವ ವಲಸೆಗೆ ಸದಾ ಸಿದ್ದವಿರುವ
ಹಗುರ ಹಂದರದ,ಗೋಡೆಮುಕ್ತ ಮನೆ ಬೇಕಿದೆ ನನಗೆ
ಬಾಡಿಗೆಗೆ ಆದರೂ ಸರಿ
ಪರಿಸರದಷ್ಟೆ ಮುಕ್ತ ಆವಾಸಕೆ
ಜಾಗ ಬೇಕು ನನಗೆ, ಸತತ ಸ್ಥಾನಪಲ್ಲಟಕೆ,
ವಿಸ್ತಾರ ಕೇಂದ್ರದಲಿ ಭಿತ್ತಿಯ ಭ್ರಮೆ ಏಕೆ?
ದೃಷ್ಟಿ ಹೋದಲ್ಲಿ ದಿಗಂತ ಕಂಡರೆ ಎಷ್ಟುಚೆನ್ನ?
ಆಕಾಶನೋಡಲು ಪಾಳಿಯ ನೂಕುನುಗ್ಗಲು ಬೇಕೆ?
ಹೋಗಿ,ಬರುವ ಜನರಿಗೆ ಗಡಿಯಾರದ ಗಡಿಬಿಡಿ ಏಕೆ?
ಗಾಳಿ ತಡೆಯಲು ಕಾಂಕ್ರೀಟ್ ಪರದೆ ಬೇಡ
ಕಣ್ಣುಕುಕ್ಕದಿರಲಿ ನಿನ್ನ ಕಾಮನಬಿಲ್ಲಿನ ಬೆಳಕು,
ಹಸಿರಿಗೆ ಉಸಿರ ಬೆರೆಸಲು ತಿಳಿಗಾಳಿ ತೀಡುತಲಿರಲಿ ,
ಬೆಳಕಿಗೆ ಗೂಟಹೊಡೆಯುವ ಹವ್ಯಾಸ
ಬೆವರ ಇಂಗುವ ಹವಾ ನಿಯಂತ್ರಕ
ಆಗಿ ಬಿಟ್ಟಿದೆ ಕೆಟ್ಟ ಅಭ್ಯಾಸ. ತಾಪ ನಿರೋಧಕ, ಶೋಧಕ
ಆಲಸ್ಯ ಜನಕ, ಸಿಗಲೇಬೇಕು ಇದಕೆ ಬಂಗಾರದ ಪದಕ
ಕಡಲತೀರಕ್ಕೊಂದು ಅಣೆಕಟ್ಟು ಬೇಕೆ?
ಬೆಳಕಿಗೆ ಮೈ ಒಡ್ಡಲು ಮರುಳಾಗಬೇಕೆ?
ಬಗೆದು ಭೂಮಿಯಲೇ ನಿನ್ನ ಬುನಾದಿ,
ತೆಗೆದು ಮಣ್ಣುಗುಂಡಿ ಮುಚ್ಚಿ ಸಮಾದಿ,
ಜೀವಮಂಡಲವನ್ನೇ ಗೋರಿಯಾಗಿಸುವ ಶಿಲ್ಪಿಗಳು
ನಿರ್ಮಿಸಬಹುದು ಗೊಂದಲದ ನವವಿನ್ಯಾಸ,
ಸುಸಜ್ಜಿತ “ಆಲ್ ಇನ್ ಒನ್” ಸಂಕುಚಿತ
“ಸಕಲ ಸೌಕರ್ಯ ಸಹಿತ”, “ಸಕಲ ನಿಯಂತ್ರಕ”
ಬಹುಮಹಡಿ ಕಟ್ಟಡ..ನರಕೋಶಗಳ ಬಲೆಯಷ್ಟೇ
ಕ್ಲಿಷ್ಟ ಸಂಕೀರ್ಣ, ಮಾರಕ ಕಲ್ಪನೆ
ಮರದಿಂದ ಮರಕ್ಕೆ ಹಾರಿ,ಆವಾಸ ಬದಲಿಸುವ
ಅನುವಂಶೀಯವಾಗಿ ಅಂಟಿಸಿಕೊಂಡಿರುವ ಚಟ
ಒಳ್ಳೆಯದಲ್ಲ… ಗೊತ್ತು ನನಗೆ ಈ ಪಾರಿ ಹಟ,
ಹುಡುಗಾಟ,ಪರದಾಟ….. ಮಾತ್ರ
ಎಂದೂ ಮರೆಯದ ಶಾಶ್ವತ ಹುಡುಕಾಟ.
ನಾನಿನ್ನು ಜೀವಂತ……






uttama kavana..jeevantikeyinda koodide.
ಮರದಿಂದ ಮರಕ್ಕೆ ಹಾರಿ,ಆವಾಸ ಬದಲಿಸುವ
ಅನುವಂಶೀಯವಾಗಿ ಅಂಟಿಸಿಕೊಂಡಿರುವ ಚಟ…
Yes yes… 🙂 just like me
kavana channagide…