ಎಂಡೋಸಲ್ಫಾನ್ ವಿಷವರ್ತುಲದಲ್ಲಿ..

 

 

 

ಇಂದು ಸಂಕ್ರಾಂತಿ. ಕೃಷಿಕರ ಬದುಕಿಗೆ ಸಂಭ್ರಮ ತಾಕುವ ಹಬ್ಬ. ಆದರೆ ಇಲ್ಲಿದೆ ಕೃಷಿಕರ ಬದುಕಿಡೀ ನಿಟ್ಟುಸಿರಾಗಿ ಹೋಗುತ್ತಿರುವ ಕಥೆ. ದಕ್ಷಿಣ ಕನ್ನಡ ಮೂಲೆ ಮೂಲೆ ಸುತ್ತಿ ಬಂದ ರುಕ್ಮಿಣಿ ಒಂದು ಧಾರುಣ ಕಥೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ 

 

****

ರುಕ್ಮಿಣಿ ನಾಗಣ್ಣವರ / ತೋರಣಗಟ್ಟಿ

ಅದೊಂದು ಚಂದದ ಊರು. ಕಣ್ಣು ಹಾಯಿಸಿದಷ್ಟೂ ಹಸಿರು. ಬೆಟ್ಟ, ಗುಡ್ಡ, ಕಾಡು ಎತ್ತರೆತ್ತರಕೆ ಬೆಳೆದು ಮುಗಿಲು ಚುಂಬಿಸುವ ಮರಗಳು. ಹಗಲು ಬಿಸಿಲೆಂದರೆ ಬಿಸಿಲು ರಣಬಿಸಿಲು. ರಾತ್ರಿ? ಗಡಗಡನೇ ಮೈ ನಡುಕಿಸುವ ಚಳಿ. ಹಾದಿ-ಬದಿಗಳ ಇಕ್ಕೆಲಗಳಲ್ಲಿ  ವೈನಾಗಿ ಅರಳಿ ಗಂಧ ಸೂಸುವ ಹೂ ಗಿಡಗಳ ಸಾಲು ಸಾಲು.

ಹೂಗಳೆಂದರೆ ಅದೇನೋ ವಿಶಿಷ್ಟ ಪ್ರೀತಿ. ಮನಸ್ಸು ಕೂಡ ಹೂವಂತೆ ಅರಳಿ ಬಿಡುತ್ತದೆ. ಅಷ್ಟೇ, ಮೊಬೈಲ್ ಕೈಗೆತ್ತಿ ಫೋಟೋ ಕ್ಲಿಕ್ಕಿಸಲು ಸಜ್ಜಾಗುತ್ತದೆ. ಹೂಗಿಡಗಳೆಂದರೆ ಈ ಜನಗಳಿಗೆ ಅದೆಷ್ಟು ಪ್ರೀತಿ!  ವಿವಿಧ ಬಗೆಯ, ಬಣ್ಣಬಣ್ಣದ ದಾಸವಾಳ, ಮಲ್ಲಿಗೆ, ಗುಲಾಬಿ, ಕನಕಾಂಬರ, ಇನ್ನು ಹೆಸರೇ ಗೊತ್ತಿರದ ಹಲವು ಬಗೆಯ ಹೂವುಗಳು. ಅದಕ್ಕೊಂದು ಪುಟ್ಟದಾದ ಕೈತೋಟ. ಕೈತೋಟಕ್ಕೆ ಹೆಣೆದ ಅಚ್ಚುಕಟ್ಟಾದ ಬೇಲಿ. ವ್ಹಾ..! ಕಣ್ಮನ ಮುದಗೊಳ್ಳುವಂಥದ್ದು.

ಐದು ನಿಮಿಷಗಳ ಹಿಂದೆ ನನ್ನ ಒಡನಾಡಿಗಳೆಲ್ಲ ಶ್ರೀಧರ ಜೊತೆ ಈ ಕೈತೋಟದ ಮಾಲಿಕರ ಮನೆ ಹೊಕ್ಕಾಗಿತ್ತು. ನಾವು ಎಂಡೊಸಲ್ಫಾನ್ ವಿಷಯದ ಕುರಿತು ಒಂದು ಕಿರು ಅಧ್ಯಯನ ನಡೆಸಲು ಬೆಳ್ತಂಗಡಿ ತಾಲೂಕಿನ ಕೊಕ್ಕಡಕ್ಕೆ ಬಂದಿರುವುದಾಗಿ ನೆನೆದು ಕಾಲುಗಳು ಅಲ್ಲಿಂದ ಓಟ ಕಿತ್ತಿದವು.

ಅದೊಂದು ಪುಟ್ಟ ಮನೆ. ಕಾಲಿಡುತ್ತಿದ್ದಂತೆಯೇ ಮುಖ ತುಂಬ ನಗೆ ತುಂಬಿ ಕಣ್ಣಲ್ಲೇ ಬನ್ನಿ ಎಂಬ ಆಹ್ವಾನವಿತ್ತ ಅವ್ವನಂಥ ಅವ್ವ. ಗ್ಲಾಸು ತುಂಬಿ ತಂದ ತಂಪು ನೀರು ರಣಬಿಸಿಲ ದಣಿವನ್ನು ಆರಿಸಿತು. ಆ ಅವ್ವನ ಹೆಸರು ಗ್ರೇಸಿ ಡಿಸಿಲ್ವ. ಆಕೆಯೇ ಮನೆಯೊಡತಿ. ಕೂಲಿ ಮಾಡಿ ಅನ್ನ ಹುಟ್ಟಿಸುತ್ತಿದ್ದ ಗಂಡನಿಗೆ ಹೃದಯ ಸಂಬಂಧಿ ಖಾಯಿಲೆ. ಎರಡು ದಿನ ಹಾಸಿಗೆ ಹಿಡಿದರೆ ಮತ್ತೆರಡು ದಿನ ಕೂಲಿ ಆಸೆಗೆ ಅಡರಾಯಿಸುತ್ತಾರೆ. ಪಡಸಾಲೆಯಲ್ಲಿನ ಮಂಚದ ಮೇಲೆ ಅಂಗಾತ ಮಲಗಿ ಮಂಚದ ತುಂಬ ಹೊರಳಾಡಿ ಹೆಚ್ಚುಕಡಿಮೆ ಹಾಸಿಗೆಯಲ್ಲಿಯೇ ಮಲ ಮೂತ್ರ ಮಾಡಬಹುದಂತಹ ಮಗ ಸಂತೋಷ್!  ಪ್ರಾಯ 27. ನಮ್ಮ ಹಾಗೆ ಓದು,  ಬರಹ ಮಾಡಿದವನಲ್ಲ. ಆಟ ಪಾಠಗಳಲ್ಲಿ ಭಾಗಿಯಾದವನೂ ಅಲ್ಲ.

ಭಾಗಿಯಾಗುತ್ತಾನಾದರೂ ಹೇಗೆ? ಅವನದು ಕೈಕಾಲುಗಾಳ ಶಕ್ತಿ ಉಡುಗಿದ ಸೊಟ್ಟಗಿನ ಆಕಾರ. ತೆಕ್ಕೆಯಲ್ಲಿ ಹಿಡಿದೆತ್ತುವಂತಹ ನರಪೇತಲ ದೇಹ. ತೆರೆದ ಬಾಯೊಳಗೆ ನೊಣ ಹೊಕ್ಕರು ಹಾರಿಸಲು ಬಾರದಂತಹ ನಿಶ್ಯಕ್ತತೆ. ಕಲ್ಲು ಮನಸ್ಸಿಗೂ ಕರುಳು ಕಿತ್ತು ಬರುವ ದಯನೀಯ ಸ್ಥಿತಿ. ಎಂಡೋಸಲ್ಫಾನ್ ಎಂಬ ಮಹಾಮಾರಿಗೆ ತುತ್ತಾದವರಲ್ಲಿ ಸಂತೋಷ್ ಕೂಡ ಒಬ್ಬ. ಬಹಿರ್ದೆಸೆಗೋ, ಸ್ನಾನಕ್ಕೋ ಅಮ್ಮನೇ ಇವನನ್ನು ತನ್ನೆರಡು ಕೈಗಳಲ್ಲಿ ಎತ್ತಿಕೊಂಡು ಹೋಗಬೇಕು. ದಿನಕ್ಕೆ ಎಂಟತ್ತು ಬಾರಿ ಎತ್ತಿ ಎತ್ತಿಯೋ ಅಥವಾ ಅದೇ ಬದುಕಲ್ಲಿ ಮುಪ್ಪಾದ ಆಕೆಯ ಯೌವನವೋ ಅಮ್ಮನಿಗೀಗ ಮಂಡಿನೋವು, ಸೊಂಟ ನೋವು. ಅಂತಹ ಸ್ಥಿತಿಯಲ್ಲೂ ಮಗನ, ಗಂಡನ ಸೇವೆಯನ್ನು ಸಾಂಗವಾಗಿ ನಡೆಸುವ ಆಕೆ ಗಟ್ಟಿಗಿತ್ತಿ.

ಹಾಸಿಗೆ ತುಂಬ ಉರುಳಾಡಿ ಒಂದೆಡೆಯಿಂದ ಹಾಸಿಗೆಯೆಲ್ಲ ಮುದ್ದೆ. ಕಾಟ್ ಮೇಲಿಂದ ಬಿದ್ದೇಬಿಟ್ಟ ಎನ್ನುವಷ್ಟರಲ್ಲಿ ಓಡಿಬರುವ ಅಮ್ಮ.  ಹಾಸಿಗೆಯನ್ನೆಲ್ಲ ಒಪ್ಪ ಮಾಡಿ ಅವನನ್ನು ಮಲಗಿಸಿ ತಲೆ ನೇವರಿಸುವುದು ನಿತ್ಯ ರೂಢಿ. ಸಂತೋಷ್ ತನ್ನಷ್ಟಕ್ಕೆ ತಾನಿರುವವನಲ್ಲ. ಕಂಪನಿಗೆ ಅಮ್ಮ ಬೇಕೆ ಬೇಕು. ತನ್ನ ಸಿಟ್ಟು ,ಸೆಡವು, ಸಂಭ್ರಮ, ಖುಷಿಗಳನ್ನು ತೋರ್ಪಡಿಸಿಕೊಳ್ಳಲು ಆತನ ಜೀವದ ಜೀವವೇ ಅಮ್ಮ. ಮಾತನಾಡಿದರೆ ಆಡುತ್ತಲೇ ಇರುತ್ತಾನೆ. ಏನನ್ನೋ. ಅದು ಆ ಹೆತ್ತ ಜೀವಕ್ಕೆ ಮಾತ್ರ ಅರ್ಥವಾದೀತು. ಕ್ರಿಕೆಟ್ ಎಂದರೆ ಪ್ರಾಣ. ಬೆಳಗಿನಿಂದ ನಿದ್ದೆಯವರೆಗೆ ನೋಡುತ್ತಲೇ ಇರುತ್ತಾನೆ. ನಾವು ಭೇಟಿ ಮಾಡಿದ ದಿನ ಟಿ.ವಿ. ಪರದೆಯ ಮೇಲೆ ಕ್ರಿಕೆಟ್ ನಡೆದಿತ್ತು. ಭಾರತದವರು ಗೆದ್ದಾಗ ಹೋ ಎಂದು ಸಂಭ್ರಮಿಸುವ ತನ್ನದೇ ಶೈಲಿಯ ಹರ್ಷೋದ್ಗಾರ. ಸೋತಾಗ, ಅಷ್ಟೇ ದುಗುಡದ ಗದ್ಗದಿತ ಭಾವ. ವಿರುದ್ಧ ತಂಡದವರು ಸಿಕ್ಸು,  ಫೋರು ಹೊಡೆದರಂತು ಮುಗಿತು. ಸೊಂಡಿ ಪಿರುಕಿಸಿ ಮುಖ ಸಿಂಡರಿಸಿಕೊಳ್ಳುವ ಗುಮ್ಮ.

ಮನೆಯ ಹಿಂಭಾಗದಲ್ಲಿರುವುದೇ ತುಂಡು ಭೂಮಿ. ಅದರಲ್ಲಿ ಅಡಿಕೆ, ತೆಂಗು, ರಬ್ಬರ್ ಮರಗಳ ಒಂದಷ್ಟು ಸಾಲು. ಸಂತೋಷ್ ನಿದ್ರೆಗೆ ಜಾರಿದ ಸಮಯದಲ್ಲಿ ಗ್ರೇಸಿಯಮ್ಮ ತೋಟದಲ್ಲಿ ಒಂದಷ್ಟು ಕೆಲಸ ಮಾಡಿಯಾರು. ಇಲ್ಲವೆಂದರೆ ಇಡೀ ದಿನ ಅವನಿಗೆ ಉಣಿಸಿ, ತಿನಿಸಿ, ತೊಳೆದು, ಬಳಿದು ಮಲಗಿಸುವುದರಲ್ಲಿಯೇ ಸಾಕು ಸಾಕಾದೀತು. ಜ್ವರ ಬಂದರೆ ಮನೆಯ ಎಲ್ಲರಿಗೂ ನಿದ್ದೆ ಇಲ್ಲದ ಸ್ಥಿತಿ.

ಬೆಳೆದು ನಿಂತ ತಂಗಿಗೆ ತನ್ನ ಕಾಲ ಮೇಲೆ ನಿಂತು ಸ್ವಂತದ  ಬದುಕು ಕಟ್ಟಿಕೊಳ್ಳುವ ಅದಮ್ಯ ಆಸೆ. ಕನಸುಗಳ ಬೆಂಬತ್ತಿದ ಆಕೆ ವೃತ್ತಿಪರ ತರಬೇತಿ ಪಡೆಯುತ್ತಿದ್ದಾಳೆ. ಇವರ ಬಡತನದ್ದು ಮಾತ್ರ ಹಿಂಗದ ಹಸಿವು. ಹತ್ತರಾಚೆಗೂ ದಾಟಿದ ಲಕ್ಷದ ಸಾಲದ ಲೆಕ್ಕ. ದೂರದ ಹೈದರಾಬಾದಿನ ಖಾಸಗಿ ಕಂಪನಿಯೊಂದರಲ್ಲಿ ಐವರು ಜನರ ಹೊಟ್ಟೆಗೆ, ಬಟ್ಟೆಗೆ, ತಂದೆ ಮತ್ತು ಸಂತೋಷನ ಮದ್ದಿನ ಖರ್ಚಿಗೆ ಜೀವ ಸವೆಸುವ ಅಣ್ಣನದು ಬಯಸಿಯೂ ಜೊತೆಗಿರದ  ಪರದೇಶಿ ಬದುಕು. ಸರ್ಕಾರದವರು ಸಂತೋಷಗೆಂದು ಕೊಡಮಾಡುವ ಮಾಸಿಕ ಮಾಸಾಶನ ೩೦೦೦/- ಎಲ್ಲವನ್ನು ಕೊಂಡು ತಿನ್ನುವ, ಎಲ್ಲವೂ ದುಬಾರಿಯಾದ ಈ ಕಾಲದಲ್ಲಿ ಯಾರ ಹೊಟ್ಟೆ ತಣಿಸೀತು?

ಎದ್ದು ಕೂಡಲೂ ಬಾರದ ಸಂತೋಷನೊಟ್ಟಿಗೆ ಯಾವತ್ತೂ ಒಬ್ಬ ಕೇರ್ ಟೇಕರ್ ಬೇಕೆ ಬೇಕು. ಮಗನನ್ನು ತೊಡೆಮೇಲೆ ಹಾಕಿಕೊಂಡು ಗ್ರೇಸಿ ಹೇಳುತ್ತಾರೆ, “ಇವನು ಹುಟ್ಟಿದಾಗಿನಿಂದ ಇವನ ಬದುಕನ್ನೇ ನಾನೂ ಬದುಕಿದ್ದಾಯಿತು. ನಾನಿನ್ನು ಎಷ್ಟು ದಿನ ಈ ಭೂಮಿ ಮೇಲೆ ಇರ್ಲಿಕ್ಕೆ ಸಾಧ್ಯ? ನಾನು ತೀರಿ ಹೋದಮೇಲೆ ಮಗನ್ನ ಯಾರು ನೋಡಿಕೊಳ್ತಾರೆ?”. ಎಂದು ಸಿಡುಕುತ್ತಲೇ ಆತಂಕ ಪಡುವ ಅಸಹಾಯಕ ಅಮ್ಮನ ಸ್ಥಿತಿ ಕರುಳು ಹಿಂಡುವಂಥದ್ದು.

ಇದು ಕೇವಲ ಒಬ್ಬ ಗ್ರೇಸಿಯ ಕಥೆಯಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಭಟ್ಕಳ, ಉಪ್ಪಿನಂಗಡಿ ಮತ್ತು ಬೆಳ್ತಂಗಡಿಯ ಕೊಕ್ಕಡ, ಆಲಡ್ಕ, ನಿಡ್ಲೆ, ಪಟ್ರಮೆ ಸುತ್ತಮುತ್ತಲಿನ ಗ್ರಾಮಗಳ ಮನೆಮನೆಗಳಲ್ಲಿ ಇಂಥ ಗ್ರೇಸಿಯರ ಕರುಣಾಜನಕ ಕಥೆಗಳು ಸಿಕ್ಕುತ್ತವೆ.

ಮೂರುವರೆ ದಶಕಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ “ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮವು “ಸುಮಾರು ೮೦೦ ಹೆಕ್ಟೇರು ಭೂಮಿಯಲ್ಲಿ ಗೇರು ಮರಗಳನ್ನು ಬೆಳೆಸುತ್ತದೆ.

ಗೇರು ಮರಗಳಿಗೆ ಕಂಡ ‘ಟೀ ಸೊಳ್ಳೆ ರೋಗ’ಕ್ಕೆ ಎಂಡೋಸಲ್ಫಾನ್ ಎಂಬ ವಿಷಕಾರಿ ಕ್ರಿಮಿನಾಶಕವನ್ನು ಸಿಂಪಡಿಸುತ್ತದೆ. ಹೀಗೆ ಸಿಂಪಡಿಸಿದ ಕ್ರಿಮಿನಾಶಕ ಅಲ್ಲಿನ ಒಟ್ಟು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದರ ಫಲವೇ ಇಂದು ಸಂತೋಷನಂತಹ ಅದೆಷ್ಟೋ ಮಕ್ಕಳು ನರಮಂಡಲಕ್ಕೆ ಸಂಬಂಧಿಸಿದ ಖಾಯಿಲೆ, ಅಪಸ್ಮಾರ, ಚರ್ಮರೋಗ, ವಿವಿಧ ಬಗೆಯ ಕ್ಯಾನ್ಸರ್, ಖಿನ್ನತೆ & ಸ್ತ್ರೀ ಬಂಜೆತನದಿಂದ ಬಳಲುತ್ತಿರುವುದು ಮತ್ತು ಆತ್ಮಹತ್ಯೆಗೂ ದಾರಿ ಮಾಡಿಕೊಟ್ಟಿರುವುದು. ದ.ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲೂಕಿನ ಆಲಡ್ಕ ಗ್ರಾಮದ ಎಂಡೋಸಲ್ಫಾನ್ ಪೀಡಿತ ಒಂದೇ ಕುಟುಂಬದ ನಾಲ್ವರು ಗುರುವಾರವಷ್ಟೇ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಇದಕ್ಕೊಂದು ತಾಜಾ ನಿದರ್ಶನ.

ದ.ಕನ್ನಡ ಜಿಲ್ಲೆಯ ಪರಿಸರವನ್ನು, ಪರಿಸರದ ಭಾಗವಾಗಿರುವ ಅಲ್ಲಿನ ಜನರನ್ನು ವಿಷವರ್ತುಲಕ್ಕೆ ನೂಕಿದ ನೇರ ಹೊಣೆ ಸರ್ಕಾರಕ್ಕೆ ಸಲ್ಲುವಂಥದ್ದು. ಎಂಡೊ-ಪೀಡೀತರಿಗೆ ಮಾಸಾಶನ ಸಿಗುತ್ತಿದೆಯಲ್ಲ ಎಂದು ಮೂಗಿಗೆ ತುಪ್ಪ ಸವರುವ ಮಾನವೀಯ ಮೌಲ್ಯಗಳನ್ನೇ ಕಳೆದುಕೊಂಡ ಪ್ರಭುತ್ವದ ನಾಚಿಕೆಗೇಡುತನ ಇಂದು ಮತ್ತೆ ಸಾಬೀತಾಗಿದೆ.

ಈ ಲೇಖನವನ್ನು ಮುಗಿಸಬಹುದು. ಪುಟದ ಮಿತಿಗೆ. ಅಕ್ಷರ ಮಿತಿಗೆ. ಆದರೆ ಮುಗಿಯದ ಎಂಡೋಸಲ್ಫಾನ್ ಯುದ್ದವನ್ನು ಹೇಗೆ ಮುಗಿಸುವುದು..?

 

‍ಲೇಖಕರು admin

January 14, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: