ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ.ಜಿ. ರೋಡಲಿ ಗಿಣಿವಿಂಡು

ಸುಧನ್ವ ದೇರಾಜೆ ಮತ್ತೆ ತಮ್ಮ ‘ಪೇಟೆಯ ಪಾಡ್ದನ’ದೊಂದಿಗೆ ಪ್ರತ್ಯಕ್ಷರಾಗಿದ್ದಾರೆ. ಹರೀಶ್ ಖೇರ ತಮ್ಮ ಬ್ಲಾಗ್ನಲ್ಲಿ ದೇರಾಜೆ ಬಗ್ಗೆ ಉತ್ತಮ ನೋಟವೊಂದನ್ನು ನೀಡಿದ್ದಾರೆ. ಇಲ್ಲಿದೆ ಸುಧನ್ವ ಹಾಗೂ ಹರೀಶ್ ಖೇರರ  ತಾಳ ಮದ್ದಲೆ.
ಸಂಜೆಯಾದರೆ ಸಾಕು.
ಎಂ.ಜಿ. ರೋಡಲಿ ಗಿಣಿವಿಂಡು.
ಸಾಕಿದಾ ಗಿಣಿ ಮಾತಿನಾ ಗಿಣಿ
ಕೆಂಪು ಚಿಮ್ಮುವ ಅರಗಿಣಿ
ಗಿಟಾರುಪಾಣಿ ನೀಲವೇಣಿ
ನವ ಕಲ್ಯಾಣಿ, ಹೆಡೆ ಬಿಚ್ಚಿದ ನಾಗಿಣಿ
ಲಂಕಿಣಿ ಸಿಂಹಿಣಿ ನಟೀಮಣಿ
‘ಗುಂಡು’ಗಲಿ ಕ್ಷತ್ರಿಯಾಣಿ
ಸಗ್ಗಕ್ಕೆ ಒಂದೇ ಗೇಣಿನ ಏಣಿ.
***
ಈ ಗಿಣಿ-ವಿಂಡು ಇನ್ನೂ ಬೀಸಲಿ
ತಪ್ಪಿಸಿಕೊಳುತಿರಲಿ ನನ್ನ ವಿರಹಿಣಿ !
***
ಹುಡುಕುತ್ತ ಬಂದು
ವರ್ಷವಾಯಿತು ಹದಿನಾಲ್ಕು .
ನಾಳೆಯೂ ಮರಳದಿದ್ದರೆ
ಜೀವ ತೊರೆವನಂತೆ ತಮ್ಮ .
***
ರಾಕ್ಷಸರ ಸದೆ ಬಡಿಯಲಿಲ್ಲ
ವಿಭೀಷಣ ಸಿಗಲಿಲ್ಲ ಸೀತೆ ಇರಲಿಲ್ಲ
ಕುಂಭಕರ್ಣನಿಗೆ ಎಚ್ಚರವಾಗಲೇ ಇಲ್ಲ
ಮಂಗಗಳ ಉಪದ್ರ ಸಹಿಸಲು ಸಾಧ್ಯವಿಲ್ಲ
ಹೇಗೆ ಬಂದೆನೆಂದೂ ನೆನಪಿಲ್ಲ .
ಪೂರೈಸಿದ್ದೇನೆ ಬಂದು ನಿನ್ನಮ್ಮನ ಆಸೆ
ನನ್ನ ಚಪ್ಪಲಿಯ ನೀನು ಹಾಕಬೇಡ !
***
ನೀನೆ ಆರಾಮ ರಾಜಾರಾಮ,
ನನಗಿಲ್ಲ ವಿರಾಮ ಲೋಕಾಭಿರಾಮ
ಕ್ಷಮಿಸು, ನಾನು ಹರಾಮ.
***
ಶಾಪಿಂಗ್ ಮಾಲ್‌ನ ಮುಂದೆ
ಮಿನಿ ಸ್ಕರ್ಟಿನ ಹಿಂದೆ
ಅಂಟಿಕೊಂಡ ಚ್ಯೂಯಿಂಗಮ್ಮು
ಎಳೆ ಎಳೆದಷ್ಟೂ
ರೇಶಿಮೆಯ ಎಳೆಯಂತೆ ಬರುವುದರ
ನೋಡುತ್ತ ಕಚಕಚ ಅಗಿಯುತ್ತ
‘ಬಿಗ್ ಬಬಲ್’ ಊದುತ್ತ
ಅವಳ ಕಣ್ಣಿನಲ್ಲೇ ತಿಂದರು.
***
ಆಕೆ ಎಳೆದ ‘ಸೆಂಟರ್ ಫ್ರೆಶ್’ ಚ್ಯೂಯಿಂಗಮ್ಮು
‘ಸೆಂಟರ್ ಶಾಕ್’ನಂತೆ ಕೈಗೆ, ಬ್ಯಾಗಿಗೆ, ಗೋಡೆಗೆ
ಕಾರಿಗೆ, ಬಸ್ಸಿಗೆ, ಎಲ್ಲರ ಮೈಗೆ
ನೋವಿನೆಳೆಯಂತೆ ಅಂಟಿ ಹಬ್ಬುತ್ತಿರಲು…
***
‘ಅಗಿದಗಿದು ತಿನ್ನು’ ಅಂತ
ಅಮ್ಮ ಅಂದದ್ದು ನೆನಪಾಗಿ
ಕಣ್ಣ ಕೊನೆ ಒರೆಸಿದರೆ
ನಗರವೇ ಅಗಿಯುತ್ತಿತ್ತು ಜಗಿಯುತ್ತಿತ್ತು
ನುಂಗಲೂ ಆಗದೆ, ಉಗುಳಲೂ ಬಾರದೆ.

‍ಲೇಖಕರು avadhi

9 April, 2008

1 Comment

  1. GURU

    good

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading