-ಬಕಾಡೆ ಪಂಪಾಪತಿ
ಹೆಣಗಳ ಮಾತು
ಊರಾಚಿಗಿನ ಮಸಣದಲಿ
ಮಲಗಿರುವ ಹೆಣಗಳ ಸಾಲಿನಲಿ
ನಡೆದಿದೆ ನಡುರಾತ್ರಿಯಲಿ
ಆತ್ಮಾವಲೋಕನದ ಸಭೆ ಅಲ್ಲಿ.
ಊರಗೌಡರ ಅಧ್ಯಕ್ಷತೆಯಲಿ
ಭವಿಷ್ಯ ಹೇಳುವ ಭಟ್ಟರರಿಲಿ
ಅವರ ಮಾತು ಮೊದಲಿಗಿರಲಿ
ಕಾಳನ ಮಾತು ಮೌನವಾಗಿರಲಿ
ಗದ್ದಲವಾಯಿತು ನಾನ – ನೀನ ಅಲ್ಲಿ .
ದೂರದಲಿ ಕುಳಿತು ನಗುತ
ನುಡಿತು ಸಾಲಿ ಮಾಸ್ತರ ಪ್ರೇತ
ಸತ್ತ ಮೇಲೆ ಸ್ಮಶಾನದಲ್ಲಿಯು
ಮೇಲು ಕೀಳಿನ ಭ್ರಮೆಯು.
ದೇಹಕ್ಕಂಟಿದ ಜಾತಿಯ ಜಿಡ್ಡು
ಮಣ್ಣು ಸೇರಿದ ಆತ್ಮಕೂ ಬಿಡದು
ಜಾತಿ ಕುಲದ ನಿಶೆಯಲಿ ಬದುಕಿ
ಪಡೆಯಲಿಲ್ಲ ಜೀವ ಶಾಂತಿಯ ಹುಡುಕಿ.
ತುಂಬಿದೆ ಊರಲಿ ತರತಮದುಸಿರು
ವಿಷದ ರೀತಿ, ಅದನೇ ಕುಡಿದು
ಅದನೇ ಚೆಲ್ಲಿ ಬಂದಿಹೆವಿಲ್ಲಿ.
ಮಸಣವಿದು ಸಮತೆಯ ತಾಣ
ಮಾಡಬೇಡಿ ಇದನು ಅಸಮತೆಯ ರಣ.
ಬಿಸುಟು ಬಿಡಿ ಕಟ್ಟಳೆಗಳ ಸಂಕೋಲೆ
ಮಸಣದಲಿರಲಿ ಸ್ವಾತಂತ್ರ್ಯದ ಸರಮಾಲೆ
ಎಲ್ಲಾ ಆತ್ಮಗಳುಸಿರಾಡಲಿ ಸಲೀಸಲಿ
ಹಾಕಬೇಡಿಲ್ಲಿ ಅಡ್ಡಿ-ಆತಂಕದ ಬೇಲಿ
ಇದುವೇ ಸಾಂವಿಧಾನಿಕ ಅನಂತ ಪ್ರಭಾವಳಿ.






0 Comments