
ಪೂರ್ವ ಸೂರ್ಯ
ಒಂದಿಷ್ಟು ಪಾದರಸ, ಅರ್ಸೆನಾಲ್, ಕ್ರೋಮಿಯಮ್, ಲೆಡ್, ಟಾಕ್ಸಿನ್, ಜಿಂಕ್ ಮತ್ತು ಜೊತೆಗೆ ಒಂದು ಹಿಡಿ ಅನ್ನ.. ಅನ್ನ ಎಂದರೆ ಮನುಷ್ಯರು ತಿನ್ನುತ್ತಾರಲ್ಲಾ ಅದೇ ಅನ್ನ. ಇದೇ ನನ್ನ ದಿನನಿತ್ಯದ ಊಟ.
ನನ್ನದಷ್ಟೇ ಅಲ್ಲ, ನಮ್ಮ ಪೈಂಟ್ ಕೆಲಸ ಮಾಡುವವರೆಲ್ಲರೂ ಇದನ್ನೇ ತಿನ್ನುತ್ತೇವೆ. ಮೇಲೆ ಹೇಳಿರುವ ಅಷ್ಟೂ ವಿಷಕಾರಿ ರಾಸಾಯನಿಕಗಳು ನಮ್ಮ ಒಳಹೊಕ್ಕು ಆಸ್ತಮಾ, ದೃಷ್ಟಿದೋಷ, ಕರುಳುಬೇನೆ, ಟಿಬಿ, ಚರ್ಮ ವ್ಯಾಧಿ ಇನ್ನೂ ಹತ್ತಾರು ರೋಗಗಳನ್ನು ತಂದೊಡ್ಡುತ್ತವೆ.
ನನ್ನ ಸಹವರ್ತಿಗಳಲ್ಲಿ ಬಹಳ ಜನ ಸದ್ದಿಲ್ಲದೆ ಈ ಒಂದಿಲ್ಲೊಂದು ಖಾಯಿಲೆಗಳಿಗೆ ತುತ್ತಾಗಿ ಬಡತನ ಮತ್ತು ಆರೋಗ್ಯದ ಬಗ್ಗೆ ಅರಿವಿನ ಕೊರತೆಯಿಂದಾಗಿ ಹೊರಟುಹೋದರು. ಪೈಂಟ್ ಕಂಪೆನಿಗಳು ಎಗ್ಗಿಲ್ಲದೆ ತಮ್ಮದು ಪರಿಸರ ಸ್ನೇಹಿ ಉತ್ಪನ್ನಗಳೆಂದು ಜಾಹಿರಾತುಗಳ ಮೂಲಕ ಬೊಬ್ಬೆ ಹೊಡೆಯುತ್ತಿವೆ. ಆದರೆ., ಈ ರಾಸಾಯನಿಕಗಳನ್ನು ಬಳಸದೇ ಪೈಂಟುಗಳನ್ನು ತಯಾರಿಸಲು ಸಾಧ್ಯವಿಲ್ಲವೆಂಬುದು ಕಟುವಾಸ್ತವ.
ಟಾಕ್ಸಿನ್ ಅಂಶಗಳಂತೂ ಚಳಿಗಾಲ ಮತ್ತು ಮಳೆಗಾಲದಲ್ಲಿ ನಮ್ಮನ್ನು ಬಾಧಿಸದೇ ಬಿಡುವುದಿಲ್ಲ. ಶ್ವಾಸಕೋಶದ ಸೋಂಕಿನ ತೊಂದರೆ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರ ವಿಷಯದಲ್ಲಿ ಆರೋಗ್ಯ ಇಲಾಖೆ ಮತ್ತು ಕೈಗಾರಿಕಾ ಇಲಾಖೆ ಜಾಣ
ಕುರುಡಾಗಿದೆ. ಕಾರಣ., ದಿನನಿತ್ಯ ನಡೆಯುವ ಕೋಟ್ಯಾಂತರ ರೂಪಾಯಿಗಳ ವ್ಯಾಪಾರ ವಹಿವಾಟು. ಇದರ ಜೊತೆಗೆ ನಮ್ಮ ಜೀವವನ್ನು ಆಟ ಆಡಿಸುವ ಹಗ್ಗದ ಕೊನೆಗಳು.
ಹೀಗೆಯೇ ಕೆಲವು ದಿನಗಳ ಕೆಳಗೆ ಯಾವನೋ ಒಬ್ಬ ಫೇಸ್ ಬುಕ್ ಕ್ರಾಂತಿಕಾರಿ ಪ್ರಶಾಂತವಾಗಿ ಬಂದು ದಾನಿಯಂತೆ ನನ್ನ ಪತ್ನಿಯ ಇನ್ಬಾಕ್ಸ್ನಲ್ಲಿ ಹೀಗೆ ಮಾತಾಡಿದ್ದ:
ಏನ್ರೀ ., ನಿಮ್ಮ ಹಸ್ಬೆಂಡ್ ನಿಜವಾಗ್ಲೂ ಪೈಂಟ್ ಕೆಲಸ ಮಾಡ್ತಾರಾ.. ನಿಮಗೆ ಸುಳ್ಳು ಹೇಳ್ತಿದ್ದಾರೆ ಅವರು..
ಅರಿವು ಯಾರಪ್ಪನ ಮನೆಯ ಆಸ್ತಿಯಲ್ಲ. ಸದಾ ಅನಕ್ಷರಸ್ಥ ಕೂಲಿ ಕಾರ್ಮಿಕರ ಸಹವಾಸದಲ್ಲಿ ದಿನದ 8-10 ಗಂಟೆಗಳವರೆಗೆ ಬದುಕು ದೂಡುವ ನಾನು ಅವರಿಂದ ಕಲಿತಿದ್ದು ಬಹಳಷ್ಟಿದೆ. ಇದನ್ನು ಪ್ರಶ್ನಿಸಿದ ಆ ವ್ಯಕ್ತಿಯ ಯಾವ ಪ್ರಮಾಣಪತ್ರವೂ ಇದನ್ನು ಬೋಧಿಸುವುದಿಲ್ಲ.
ಅದೇಕೋ ಇಂದು ಊಟ ಮಾಡುವಾಗ ಇದು ನೆನಪಾಗಿ ತುತ್ತು ಎದೆಯಲ್ಲೇ ಸಿಕ್ಕಿಕೊಂಡಂತಾಯ್ತು.. ಬರೆದುಬಿಟ್ಟೆ.





0 Comments