– ಎಂ ಆರ್ ಕಮಲಾ
ಉಳಿದ ನದಿಗಳು
ಹುಟ್ಟನ್ನು, ಸಾವನ್ನು ಸಂಭ್ರಮಿಸುತ್ತ ಸಾಗುತ್ತವೆ
ಕೂಡುವ, ಕಳೆಯುವ,
ಅಗಲುವ, ಬೆಸೆಯುವ
ಹೊಸ ಲೆಕ್ಕಗಳ ಪಕ್ಕ ಬಿಚ್ಚುತ್ತ ಹೋಗುತ್ತವೆ
ತಾನು ತನ್ನಂತೆಯೇ ಹರಿದು
ತಾನಿಲ್ಲವಾಗುವ `ತೊರೆ’ಯಾಗುತ್ತವೆ
ಉಳಿದ ನದಿಗಳ ಹಾಗೆ ನಾನಲ್ಲ,
ನಾನು ಶಾಲ್ಮಲೆ
ನನಗೆ ಊರಿಲ್ಲ, ಹೆಸರು ಕೂಗಿದರು ಕೇಳುವುದಿಲ್ಲ
ಭೋರ್ಗರೆದು ಬರಸೆಳೆವ ಮೊರೆತವಿಲ್ಲ .
ಕಟ್ಟಿ ಹಿಡಿದು ಗುಟ್ಟಾಗಿ ಪ್ರೀತಿಸುವ
ಹೊಳೆ ದಂಡೆಗಳಿಲ್ಲ,
ಉಕ್ಕಿ ಹರಿವ ಉನ್ಮಾದಕ್ಕೆ ಅಣೆಕಟ್ಟಿಲ್ಲ
ಕೆಟ್ಟ ಕೈಗಳಿಗೆ ಸಿಕ್ಕಿ ಬೀಳುವ ಆತಂಕವು ಇಲ್ಲ.
ಉಳಿದ ನದಿಗಳ ಹಾಗೆ ನಾನಲ್ಲ,
ನಾನು ಶಾಲ್ಮಲೆ
ನನ್ನೆದೆಯ ತಬ್ಬಿ ಮಕ್ಕಳು ಜೋತು ಬೀಳುವುದಿಲ್ಲ.
ನೀರಿನಂತೆ ನಗೆ ಚಿಮ್ಮುವುದಿಲ್ಲ,
ಬೆಸ್ತರ ಹಾಡು ನಾಲಗೆಯಲ್ಲಿ ದೋಣಿ ಹಾಡ ಕೇಳಲಿಲ್ಲ.
ಸಾಹಸಿಗರು ನನ್ನ ಮೈ ಜುಮ್ಮೆನಿಸಲಿಲ್ಲ.
ಅರಿವೆ ಒಗೆಯುತ್ತ ಊರ ಸುದ್ದಿಯನ್ನಾರು ಹೇಳುವುದಿಲ್ಲ
ಅಶ್ರು `ತರ್ಪಣ’ವಿಲ್ಲ, ಮೋಕ್ಷಕ್ಕೆ ಸೋಪಾನವಲ್ಲವೇ ಅಲ್ಲ!
ಉಳಿದ ನದಿಗಳ ಹಾಗೆ ನಾನಲ್ಲ,
ನಾನು ಶಾಲ್ಮಲೆ
ಹರಿಯುತ್ತ ಹಸಿರುಕ್ಕಿಸಿ,
ಕೊಕ್ಕರೆಗಳಿಗೆ ಅಕ್ಕರೆಯಾಗುವ,
ದಂಡೆಯಲ್ಲಿನ ಜೋಡಿಗಳ ಪುಲಕಿಸಿ
ಮರ ಮರಗಳ ಮರ್ಮರಕ್ಕೆ ಕಿವಿಯಾಗುವ,
ನಲ್ಲನಿಗೆ ಬೆಲ್ಲವಾಗಿ ಕರಗುವ ಸೌಭಾಗ್ಯವಿಲ್ಲ
ಉಳಿದ ನದಿಗಳ ಹಾಗೆ ನಾನಲ್ಲ.
ನಾನು ಶಾಲ್ಮಲೆ
ಇಲ್ಲಿ ಹೊಲಸಿಲ್ಲ, ಕೊಳೆತು ನಾರುವ ಹೆಣವಿಲ್ಲ.
ಹುಚ್ಚೆದ್ದು ಕುಣಿದು ಊರು ಕೇರಿಯ ಕೊಚ್ಚುವ
ಮನೆ, ಮಠಗಳ ಉರುಳಿಸಿ ಮಸಣವಾಗಿಸುವ
ಪ್ರಳಯ ವಿಲಾಸಿನಿಯ,ದೌರ್ಭಾಗ್ಯವಿಲ್ಲ.
ಬಹುಶಃ
ನಾನು ಬದುಕಾದ ಸಾವು.
ನೆಲದೊಳಗಿನ ನೋವು.
(ಚಂದ್ರಶೇಖರ ಪಾಟಿಲರ ಬಹು ಪ್ರಸಿಧ್ಧವಾದ ಗೀತೆ `ಶಾಲ್ಮಲಾ, ನನ್ನ ಶಾಲ್ಮಲಾ’. ಪ್ರತೀ ಬಾರಿ ಸಿ.ಅಶ್ವಥ್ ಅವರ ದನಿಯಲ್ಲಿ ಈ ಹಾಡು ಕೇಳುವಾಗ ನನಗೆ ರೋಮಾಂಚನವಾಗುತ್ತದೆ. ಸದಾ ತಪ್ತ ಕಾಮಿನಿ, ಸುಪ್ತ ಮೋಹಿನಿ, ಗುಪ್ತಗಾಮಿನಿ ಶಾಲ್ಮಲೆಯ(ನದಿ) ಬಗ್ಗೆ ಪಾಟೀಲರು ಬರೆದಿರುವ `ಉಳಿದ ನದಿಗಳ ಹಾಗೆ’ ಕವಿತೆಯೊಂದಿಗೆ ಸಂವಾದ ನಡೆಸಿದ್ದೇನೆ.)







yaavuduu illadiruvudu saavalla, samadhi! olleya kavana. abhinandenagalu.
shalmale nannannu sadaa kaadauva haadu. ashwath avaru amaravagisida kavana
ತುಂಬಾ ಸೊಗಸಾದ ಕಾವ್ಯ
ಕವಿತೆ ತನ್ನದಲ್ಲದ ನಿಗೂಡತೆಯನ್ನು ಬಿಚ್ಚಿಡುತ್ತದೆ
ಸುಂದರ ಕವಿತೆ ಕಮಲಾ ಜಿ.ಶಾಲ್ಮನೆಯ ಒಡಲಾಳವು ಇಷ್ಟೊಂದು ಭಾವಗಳನ್ನು ಹೊತ್ತು ಹರಿಯುತ್ತಿರುವುದು ದಿಗ್ಭ್ರಮೆ ಮೂಡಿಸುತ್ತದೆ.
nice poem madam..pratimeyannu samarthvaagi baLsikondiddu hidisitu.