ಉಲಿವಾಲದ ಬಸ್ ಹತ್ತಿ ಬೆಂಗಳೂರಿಗೆ ಬಂದ ‘ಹಾಡ್ಲಹಳ್ಳಿ’

– ಚಲಂ

ಆ ಎರಡು ದಿನಗಳನ್ನು ನಾವು ಮರೆಯುವ ಹಾಗೇ ಇಲ್ಲ. ಜಿಲ್ಲಾ ಮಟ್ಟದ ರಂಗತಂಡವೊಂದು ಬೆಂಗಳೂರಿನಲ್ಲಿ ತಾನೇ ಸಂಘಟಿಸಿ ಪ್ರಯೋಗ ನೀಡಿ ಬರುವುದು ಸುಲಭದ ಮಾತಾಗಿರಲಿಲ್ಲ. ಅದರಲ್ಲೂ ಶನಿವಾರ ಭಾನುವಾರ ಬಿಟ್ಟು ವಾರದ ಕೆಲಸದ ದಿನಗಳಲ್ಲಿ… ಅದರ ರಿಸ್ಕೇ ಬೇರೆ ಲೆವೆಲ್ಲಿನದು.

ಉಲಿವಾಲ ಸ್ಕೂಲ್ ಆಫ್ ಡ್ರಾಮಾ ನಮ್ಮ ರಂಗ ಜವಬ್ದಾರಿಯ ಕೂಸು. ನಾಲ್ಕೈದು ಜನ ಕಲಾವಿದರನ್ನು ಬಿಟ್ಟರೆ ಮಿಕ್ಕವರೆಲ್ಲಾ ರಂಗಭೂಮಿಗೆ ಹೊಸಬರೆಂದರೆ ತೀರಾ ಹೊಸಬರೇ. ಹಾಸನದಲ್ಲಿ ಈ ಎರಡೂ ನಾಟಕಗಳ  ಮೂಲಕ ಗಮನ ಸೆಳೆದಿದ್ದೆವು ಎಂಬುದಷ್ಟೇ ನಮ್ಮ ಮುಖ್ಯ ಶಕ್ತಿ.

ಹಾಡ್ಲಹಳ್ಳಿ ನಾಗರಾಜ್ ಅವರು ಮಲೆನಾಡನ್ನು ಶಕ್ತವಾಗಿ ಪ್ರತಿನಿಧಿಸುವ ಒಬ್ಬ ಮಹತ್ವದ ಸಾಹಿತಿ. ಅವರ ಕೃತಿಗಳು ತೂಕದ ಮನೋರಂಜನೆಯ ಜೊತೆಗೆ ಬದುಕಿನ ಆಳವನ್ನು ತಾಕುವಂತವು. ಅವರ ಎರಡು ಕೃತಿಗಳು ಈಗ ದೃಶ್ಯರೂಪದಲ್ಲಿ ರಂಗದ ಮೇಲಿವೆ.

ಆ ಕಾರಣಕ್ಕಾಗಿಯೇ ಈ ಎರಡೂ ದಿನಗಳ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ “ಹಾಡ್ಲಹಳ್ಳಿ ರಂಗೋತ್ಸವ ಅಂತ ಹೆಸರಿಟ್ಟಿಕೊಂಡೇ ಬೆಂಗಳೂರಿಗೆ ಬಂದೆವು.

ಶನಿವಾರ ಭಾನುವಾರ ಎಲ್ಲಿಯಾದರೂ ಜಾಗ ಸಿಗುತ್ತದೆಯೇ ಅಂತ ಹುಡುಕಾಟ ನಡೆಸಿದೆವು. ಆದರೆ ಎಲ್ಲಿ ಅಂದರೆ ಎಲ್ಲಿಯೂ ಜಾಗ ಸಿಗಲಿಲ್ಲ. ಬೇರೆ ದಾರಿಯೇ ಇರಲಿಲ್ಲ… ವಾರದ ಕೆಲಸದ ದಿನಗಳಲ್ಲೇ ಪ್ರದರ್ಶನ ನೀಡಬೇಕಿತ್ತು.

ಸಂಘಟಕನಾದ ನಾನು ಹದಿನೈದು ದಿನಗಳ ಹಿಂದೆಯೇ ಬಂದು ಬೆಂಗಳೂರಿನ ಕೆಲ ಗೆಳೆಯರನ್ನು ಮಾತನಾಡಿಸಿಕೊಂಡು ಬಂದಿದ್ದೆ. ಗೆಳೆಯ ಬೇಲೂರು ರಘುನಂದನ್ ಕಲಾಗ್ರಾಮ ಬುಕ್ ಮಾಡಿಸಿದರು. ನಯನಸೂಡ ಆಸ್ಥೆಯಿಂದ ಫ್ಲೆಕ್ಸ್ ಹಾಕಿದರು. ಜಿ ಪಿ ಓ ಚಂದ್ರು “ನಾಟಕಗಳು ನಡೀತವೆ. ಪ್ರಚಾರ ಕೊಡಿ” ಅಂತ ಪತ್ರಿಕೆಯ ಕಚೇರಿಗಳಿಗೆ ಹೋಗಿ ಬಂದರು. ದಯಾ ಗಂಗನಘಟ್ಟ ಎಂಬ ನಮ್ಮದೇ ತಂಡದ ಸದಸ್ಯೆ ಬೆಂಗಳೂರಿನ ಅದಷ್ಟೂ ಸಾಂಸ್ಕತಿಕ ಜೀವಗಳಿಗೆ ಫೋನ್ ಮಾಡಿಕೊಂಡು ನಮ್ಮ ಟೀಮಿನ ನಾಟಕ ಇದೆ ಬನ್ನಿ ಅಂದರು. ಗೆಳೆಯ ವಿ ಆರ್ ಕಾರ್ಪೆಂಟರ್ ಚಂದದ ಫೋಸ್ಟರ್, ಬ್ರೋಷರ್ ಮಾಡಿಕೊಟ್ಟು ಹರಸಿದರು. 

“ಜಿಲ್ಲೆಯೊಂದರಿಂದ ಬೆಂಗಳೂರಿಗೆ ರಂಗತಂಡವೊಂದು ಬಂದು ಎರಡು ದಿನಗಳ ಕಾಲ ಇದ್ದು ಪ್ರದರ್ಶನ ನೀಡುವುದು ಬಹಳ ಮುಖ್ಯವಾದ ವಿಚಾರ. ಬನ್ನಿ ನೀವು, ನಾವಿದ್ದೇವೆ” ಅಂದರು ಬೆಂಗಳೂರಿನ ಮಲೆನಾಡಿಗರು.

ರಾಜದಾನಿಗೆ ಹೋಗಿ ಬದುಕು ಕಟ್ಟಿಕೊಂಡಿದ್ದ ಮಲೆನಾಡಿನ ಜೀವಗಳು ಸಾಕಷ್ಟು ಜವಬ್ದಾರಿ ತೆಗೆದುಕೊಂಡವು. ನಮ್ಮೂರಿಂದ ಜನ ಬರ್ತಿದಾರೆ ಅಂತ ಸಂಭ್ರಮಿಸಿದರು. ರಾಜದಾನಿಯ ಮಲೆನಾಡಿನ ವಾಟ್ಸ್ ಅಪ್ ಗ್ರೂಪುಗಳಲ್ಲೆಲ್ಲಾ ಹಾಡ್ಲಹಳ್ಳಿ ರಂಗೋತ್ಸವದ ಮಾಹಿತಿ ಹರಿದಾಡಿತು‌.

ಸೋಮವಾರ ಬೆಳಗ್ಗೆ ಹಾಸನದಿಂದ ಉಲಿವಾಲ ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ಕಲಾವಿದರು ಬಂದು ಕಲಾಗ್ರಾಮದಲ್ಲಿ ಇಳಿದರು. 

ಬಸ್ಸಿನಿಂದ ಒಂದೊಂದೆ ಹಾಡ್ಲಹಳ್ಳಿಯಿಂದಲೇ ಬಂದವೆಂಬಂತೆ ಒಂದೊಂದೇ ಮರಗಳು ಬಸ್ಸಿನಿಂದ ಕೆಳಗಿಳಿದು ಸೀದಾ ರಂಗದ ಮೇಲೆ ಸ್ಥಾಪಿತವಾದವು. ಕಡವೆ ಬೇಟೆಗೆ ಸಿದ್ದವಾಗಿದ್ದ ಕೋವಿಗಳು ಕರಿಯ, ಜಯಣ್ಣನ ಕೈ ಸೇರಲು ಸಜ್ಜಾದವು. ಇಡೀ ಮಲೆನಾಡನ್ನು ರಂಗದ ಮೇಲೆ ಪಡಿಮೂಡಿಸಿದ ಸ್ವರೂಪ್ ಆರ್ಟ್ ಅಪ್ಪಟ ಕಲಾವಿದ. ನಮ್ಮ ಜೇನುಗಿರಿ ಪತ್ರಿಕೆಯ ವ್ಯವಸ್ಥಾಪಕ ಕೂಡ‌.

ಎರಡು ಗಂಟೆಗೆಲ್ಲಾ ರಂಗದ ಮೇಲಿನ ಬೆಳಕನ್ನು ಡಿಸೈನ್ ಮಾಡಲು ರವಿಶಂಕರ್ ಬಂದಿಳಿದರು. ಕಡವೆಬೇಟೆ ನಾಟಕದ ನಿರ್ದೇಶಕಿ ರತಿ ಹೆಚ್ ಜಿ ರಂಗದ ಮೇಲೆ ಕಲಾವಿದರನ್ನು ಹರವಿಕೊಂಡು ಬೆಳಕಿನ ರಿಹರ್ಸಲ್ ಮಾಡತೊಡಗಿದರು. ರಂಗದ ಕೆಳಗಿನ ಎಡಮೂಲೆಯಲ್ಲಿ ಕಾರ್ತಿಕ್ ಭಾರದ್ವಾಜ್ ಮತ್ತು ತಂಡ ಸಂಗೀತವನ್ನು ಕೂರಿಸಿಕೊಂಡು ಕುಳಿತಿದ್ದು ನಿರ್ದೇಶಕಿಯ ಅಣತಿಗಾಗಿ ಕಾಯುತ್ತಿದ್ದರು.

ಆರು ಗಂಟೆ ಹೊತ್ತಿಗೆಲ್ಲಾ ನಾಡಿನ ಸಾಂಸ್ಕೃತಿಕ ರಾಯಭಾರಿ ಎಸ್ ಜಿ ಸಿದ್ದರಾಮಯ್ಯನವರು ರಂಗೋತ್ಸವದ ಉದ್ಘಾಟನೆಗೆ ಮಾಡಲು ತಯಾರಾದರು. ಜೊತೆಗೆ ಮಲೆನಾಡಿನ ಶಿವಕುಮಾರ್ ಜಾಗಟೆ, ಬೆಂಗಳೂರಿನಲ್ಲಿರುವ “ಬೇಲೂರು” ರಘುನಂದನರಾಗಿ ಬಂದರು. ಜ್ಚರದ ನಡುವೆಯೂ ಅಕ್ಷತಾ ಪಾಂಡವಪುರ ಬಂದು ವೇದಿಕೆಗೆ ಗ್ಲಾಮರ್ ಜೊತೆಗೆ ರಂಗದ ಎಚ್ಚರದಂತೆ ಕುಳಿತರು.

ಒಂದು ಗಂಟೆಗಳ ಕಾಲ ಉದ್ಘಾಟನ ಸಮಾರಂಭದಲ್ಲಿ ಮಡಿಕೇರಿಯಲ್ಲಿ ಹಾಡ್ಲಹಳ್ಳಿ ನಾಗರಾಜ್, ಎಸ್ ಜಿ ಸಿದ್ದರಾಮಯ್ಯ, ನನ್ನ ಪ್ರೀತಿಯ ಸಿದ್ದರಾಮಣ್ಣ, ಮಲೆನಾಡಿನ ಸಂಭ್ರಮ, ಸಂಭ್ರಮ ಮುಗಿದ ನಂತರದ ದೂಳು ಎಲ್ಲಾ ಮಾತಾದವು. ನಾವು ಜಿಲ್ಲೆಗಳಿಗೆ ಹೋದಾಗ ಪ್ರೀತಿಯಿಂದ ಕಾಣುವ ಜಿಲ್ಲೆಗಳ ಕಲಾವಿದರಿಗೆ ಮರ್ಯಾದೆ ಕೊಡಿ, ಬಂದು ನಾಟಕ ನೋಡಿ ಅಂದವರು ಅಕ್ಷತಾ. ಹಾಡ್ಲಹಳ್ಳಿ ಬೆಂಗಳೂರಿಗೆ ಬಂದಿದೆ. ಇದು ಬೆಂಗಳೂರಿಗೆ ಸಂಭ್ರಮ ಎಂದವರು  ಬೇಲೂರು. ಇನ್ನೂ ಮತ್ತಷ್ಟು ಗೆಳೆಯರು ಮಾತಾಡಿ ಮುಗಿಸುವಷ್ಟರಲ್ಲಿ ಕಲಾಗ್ರಾಮದ ಸೀಟುಗಳು ಭರ್ತಿಯಾದವು.

ಇತ್ತ ಗ್ರೀನ್ ರೂಮಿನಲ್ಲಿ ಬೇಟೆಗೆ ತಂಡ ಸಿದ್ಧವಾಗಿ ರಂಗಪ್ರಾರ್ಥನೆಯಲ್ಲಿ ತೊಡಗಿ ರಂಗದ ಮೇಲಿನ ಬೆಳಕಿಗೆ ಜಿಗಿಯಲು ಸಿದ್ದರಾಗಿದ್ದರು.

ಒಂದೂಮುಕ್ಕಾಲು ಗಂಟೆಗಳ ಕಾಲ ಕಡವೆಬೇಟೆ ನಾಟಕವನ್ನು ಅದಷ್ಟೂ ಜನ ಕುಳಿತು ನೋಡಿದರು. ನಾಟಕ ಮುಗಿದ ಮೇಲೆ ವೇದಿಕೆ ಮೇಲೆ ಬಂದು ಬೇಟೆಯ ವಿಷಾದವನ್ನು , ಮಲೆನಾಡಿನ ಸಂಭ್ರಮವನ್ನು ಹಂಚಿಕೊಂಡರು.

ತಂಡದ ಸದಸ್ಯರು ಮಧ್ಯಾಹ್ನ ಬಂದಾಗಲೇ ತಮ್ಮ ಗ್ಯಾಸ್ ಒಲೆಯ ಮೇಲೆ ಅನ್ನ ಸಾರು ಮಾಡಿಟ್ಟಿದ್ದರು. ಪುನೀತ್ ಗೌತಮ್, ಅರುಣ, ಪ್ರಿಯಾ, ಅಂಬಿಕಾ ಅವರ ಮುಂದಾಳತ್ವದಲ್ಲಿ ಚಂದದ ಊಟ ರಾತ್ರಿ ಊಟಕ್ಕೂ ಆಗುವಷ್ಟು ಮಾಡಿಟ್ಟಿದ್ದರು.

ನಾಟಕದ ಸಂಭ್ರಮ ಮುಗಿದ ಮೇಲೆ ಹಸಿದ ಹೊಟ್ಟೆಗೆ ಭರ್ಜರಿ ಊಟ. ಉಲಿವಾಲ ತಂಡ ಅಲ್ಲಿಂದ ನಾಲ್ಕು ಕಿ ಮೀ ದೂರದಲ್ಲಿದ್ದ ಮಲ್ಲಿಕಾರ್ಜುನ ಮಹಾಮನೆಯವರ ರಂಗಮಹಾಮನೆಗೆ ತಲುಪಿಕೊಂಡೆವು.

ಅದಷ್ಟೂ ಜನರಿಗೆ ಉಳಿಯುವ ವ್ಯವಸ್ಥೆಯ ಜೊತೆಗೆ ಬೆಳಗಿನ ಸ್ನಾನದ ವ್ಯವಸ್ಥೆಯನ್ನೂ ಮಾಡಿಕೊಟ್ಟ ಆ ಹಿರಿಯ ರಂಗಜೀವ ಮಲ್ಲಿಕಾರ್ಜುನ ಮಹಾಮನೆ ನಮ್ಮ ಜೊತೆಗೆ ಮಾತಿಗೂ ಸಿಕ್ಕಿದರು.

ಬೆಳಗ್ಗೆ ಕರ್ನಾಟಕ ಗೃಹಮಂಡಳಿಯ ಪ್ಲಾಟಿನಂ ಎದುರಿನ ಹೊಟೆಲಿನಲ್ಲಿ ತಿಂಡಿ ಮಾಡಿಕೊಂಡ ತಂಡ ಮತ್ತೆ ಕಲಾಗ್ರಾಮಕ್ಕೆ ಬಂದು ವೇದಿಕೆಯಲ್ಲಿ ನಿಲುವಂಗಿಯ ಕನಸು ನಾಟಕಕ್ಕೆ ಸಜ್ಜಾದರು‌. ಲೈಟ್ ರಿಹರ್ಸಲ್ ಮುಗಿಯುವ ಹೊತ್ತಿಗೆ ಶ್ರೀನಿವಾಸ ಜಿ ಕಪ್ಪಣ್ಣ ಸಮಾರೋಪ ಭಾಷಣಕ್ಕೆ ರೆಡಿಯಾಗಿ ಬಂದಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಲು ಪ್ರಸಾದ್ ರಕ್ಷಿದಿ ಇದ್ದರು. ಲವಕುಮಾರ್ ಕಾಮನಹಳ್ಳಿ ಬೆಳ್ಳಿಗೌಡರು ಸೇರಿದಂತೆ ಜಿ ಪಿ ಓ ಚಂದ್ರು, ಮಾಗಡಿ ಗಿರೀಶ್ ಮುಂತಾದವರು ಸಮಯಕ್ಕೆ ಸರಿಯಾಗಿ ಬಂದಿದ್ದರು.

ತಮಟೆ ಬಾರಿಸುವ ಮೂಲಕ ಸಮಾರೋಪಕ್ಕೆ ಚಾಲನೆ ನೀಡಿದ ಕಪ್ಪಣ್ಣನವರು ಹಾಡ್ಲಹಳ್ಳಿ, ನಿಲುವಂಗಿ, ಕಡವೆ ಬಗ್ಗೆ ಏನೇನೂ ಗೊತ್ತಿಲ್ಲ. ಆದರೂ ದೂರದಿಂದ ಬಂದವರನ್ನು ನೋಡಲು ಬಂದಿದ್ದೇನೆ ಅಂದರು. ಪ್ರಸಾದ್ ರಕ್ಷಿದಿ ಅವರು ನಿಲುವಂಗಿಯ ಕನಸು ನಾಟಕ ಹೇಗೆ ಅವರೆಡೆಗೆ ನಡೆದು ಬಂದಿತು ಎಂಬುದನ್ನು ವಿವರಿಸಿ ಸಹಜ, ಸಮುದಾಯದ ನಾಟಕದ ಪರಿಕಲ್ಪನೆಯನ್ನು ವಿವರಿಸಿದರು.

ಹಿಂದಿನ ದಿನಕ್ಕಿಂತ ಅರ್ಧ ಗಂಟೆ ಮೊದಲೇ ನಾಟಕ ಆರಂಭವಾಯಿತು. ಸೀತೆ, ಚಿನ್ನಪ್ಪ, ಅವ್ವ, ಶಾಂತೇಗೌಡ, ಕತ್ತೆರಾಮ, ಪಿರಾಂದು ಸೇರಿದಂತೆ ಅಪಾರ ರಂಗಗಣ ಎರಡೂಕಾಲು ಗಂಟೆಗಳ ಕಾಲ ರೈತರ ಬವಣೆಗಳನ್ನು ನಿರ್ದೇಶಕರಾದ ಉಲಿವಾಲ ಮೋಹನ್ ಕುಮಾರ್ ಅನಾವರಣ ಗೊಳಿಸಿದರು.

ಎರಡು ದಿನಗಳ ಕಾಲ ಮಲೆನಾಡಿನ ವಾತಾವರಣ ಅನುಭವಿಸಿದೆವು. ಮಲೆಗಳಲ್ಲಿ ಮದುಮಗಳು ನಂತರ ಮತ್ತೊಮ್ಮೆ ಕಲಾಗ್ರಾಮದಲ್ಲಿ ಮಲೆನಾಡನ್ನು ರೂಪಿಸಿದ್ದಕ್ಕಾಗಿ ಪ್ರೇಕ್ಷಕರು ಮುದಗೊಂಡು ಮಾತನಾಡಿದರು.

ಎರಡನೇ ದಿನದ ಕಡೆಯ ಹೊತ್ತಿಗೆ ಸುಸ್ತಾಗಿ ಹೋಗಿದ್ದ ಉಲಿವಾಲ ತಂಡಕ್ಕೆ ಅಕ್ಷತಾ ಪಾಂಡವಪುರ ಪ್ರೀತಿಯಿಂದ ಗಿ ರೈಸ್, ಚಿಕನ್ ಗ್ರೇವಿ ಮನೆಯಿಂದ ಮಾಡಿಕೊಂಡು ಬಂದಿದ್ದರು.

ನಮ್ಮ ಟೀಮಿನ ಅಡುಗೆಯ ಜೊತೆಗೆ ಅಕ್ಷತಾ ಕೊಟ್ಟ ನಾನ್ ವೆಜ್ ಊಟವನ್ನು ಮುಗಿಸಿ ಹಾಡ್ಲಹಳ್ಳಿಯ ಮರಗಳು, ಬೇಟೆಯ ಕೋವಿಗಳು, ಹಾಸನದ ಹನುಮಂತಣ್ಣನ ನಾಟಕದ ಕಾಸ್ಟೂಮುಗಳು ಮತ್ತೆ ಬಸ್ಸೇರಿ ಹಾಸನದ ಕಡೆಗೆ ಹೊರಟವು.

ಹಾಸನದಿಂದ ಬಂದ ಹಾಡ್ಲಹಳ್ಳಿ ಬೆಂಗಳೂರಿನ ಜನರ ಮುಂದೆ ರಂಗದ ಮೂಲಕ ತನ್ನ ಕಥೆ ಹೇಳಿ ಮತ್ತೆ ಉಲಿವಾಲದ ಬಸ್ ಹತ್ತಿ ಹಾಸನ ತಲುಪುವ ಹೊತ್ತಿಗೆ ಬೆಳಗಿನ ಜಾವ ನಾಲ್ಕು ಗಂಟೆ…

ತಾಯಿ ಲೋಕೇಶ್ ಎಂಬ ಗಟ್ಟಿಗನ ಕ್ಯಾಮರ ನಾಟಕದ ಒಂದೊಂದು ಭಾವವನ್ನು ಕಲಾತ್ಮಕವಾಗಿ ಸೆರೆ ಹಿಡಿದು ನಮ್ಮದೇ ಸುಪರ್ದಿಗೆ ಕೊಟ್ಟರು. ಅವು ನೆನಪುಗಳಾಗಿ ನಮ್ಮ ನಡುವೆ ಎಂದಿಗೂ ಶಾಶ್ವತ.

ರಮೇಶ್ ಹಾಸನ್ ಹಾಗು ಅವನ ಗೆಳೆಯರು ಅದಷ್ಟೂ ಜನರಿಗೆ ಟಿಕೆಟ್ ಕೊಡುತ್ತಾ ಕಲಾಗ್ರಾಮದ ಆ ಆಡಿಟೋರಿಯಂ ಒಳಗೆ ಕಳಿಸುತ್ತಿದ್ದರೇ ನಾವು “ಟಿಕೆಟ್ ಕಲೆಕ್ಷನ್” ಎಂಬ ಭರವಸೆಯನ್ನು ತುಂಬಿಕೊಳ್ಳುತ್ತಿದ್ದೆವು. ಎರಡೂ ದಿನಗಳಿಂದ ಹತ್ತತ್ತಿರ ಮುನ್ನೂರು ಟಿಕೆಟ್ ಮಾರಾಟವಾದವು. ಅದರಲ್ಲೂ ಈ ವಾರದ ಕೆಲಸದ ದಿನಗಳಲ್ಲಿ ಅಂದರೆ ಯಾರಾದರೂ ಅಚ್ಚರಿ ಪಡಲೇಬೇಕು.

ಹಾಡ್ಲಹಳ್ಳಿ ಎಂಬ ಅಪ್ಪಟ ಮಲೆನಾಡಿನ, ವರ್ಷಕ್ಕೆ ಮುನ್ನೂರು ಇಂಚು ಮಲೆಯಾಗುವ ಗ್ರಾಮೀಣ ಭಾವಗಳನ್ನು ಪ್ರೀತಿಯಿಂದ ನೋಡಿಕೊಂಡು ಬೀಳ್ಕೊಟ್ಟ ಬೆಂಗಳೂರು ಎಂಬ ಮಹಾನಗರದ ರಂಗಮಿಡಿತದ ಜೀವಗಳಿಗೆ ಧನ್ಯವಾದ ಹೇಳದಿದ್ದರೆ ಕಲಾ”ಗ್ರಾಮ” ಮುನಿಸಿಕೊಂಡು ಕಲಾ”ನಗರ”ವಾಗಿ ಬದಲಾಗುವುದಿಲ್ಲವೇ ಹೇಳಿ…?

ಎಲ್ಲರಿಗೂ ಪ್ರೀತಿಯ ನೆನಕೆಗಳು.

‍ಲೇಖಕರು avadhi

August 30, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: