ಉಮಾ ರಾಜಣ್ಣ‌ ಓದಿದ ‘ಯಕ್ಷಕವಿ ಕೆಂಪಣ್ಣಗೌಡ’

ಉಮಾ ರಾಜಣ್ಣ‌

ಸಾಹಿತ್ಯ ಚರಿತ್ರೆಯ ನಿರ್ಮಾಣದಲ್ಲಿ ಅನೇಕ ಕಾರಣಗಳಿಂದ ಕೆಲವು ಮುಖ್ಯ ಕವಿಗಳು ಅಜ್ಞಾತರಾಗಿಯೇ,ಅಂಚಿನಲ್ಲಿಯೇ, ಉಳಿದುಹೋಗುವರು. ಅಂತಹವರನ್ನು ಕಾಲಾನುಕೂಲಕ್ಕೆ ಹುಡುಕುತ್ತಾ ಪರಂಪರೆಯಲ್ಲಿ ಮರುಸ್ಥಾಪಿಸುವ ಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದ್ದು ಅದರಲ್ಲಿ ಅತ್ಯಂತ ಮುಖ್ಯಪಾತ್ರ ವಿಮರ್ಶಕರದ್ದು. ಅಂತಹ ಒಂದು ಗಮನಾರ್ಹ ಪ್ರಯತ್ನವೇ ಇತ್ತೀಚೆಗೆ ಬಂದಿರುವ ನರಹಳ್ಳಿ ಬಾಲಸುಬ್ರಮಣ್ಯರವರ ‘ ಯಕ್ಷ ಕವಿ ಕೆಂಪಣ್ಣ ಗೌಡ ‘.

ಕನ್ನಡದ ಮುಖ್ಯ ವಿಮರ್ಶಕರಲ್ಲಿ ಒಬ್ಬರಾದ ನರಹಳ್ಳಿಯವರು ಸಾಹಿತ್ಯಲೋಕದ ಗಮನ ಸೆಳೆದಿರುವುದು ತಮಗೆ ವಿಶಿಷ್ಟವಾದ ಸಮಗ್ರ ಅಧ್ಯಯನದಿಂದ. ಇತ್ತೀಚೆಗೆ ಪ್ರಕಟವಾದ ಅವರ ‘ ಬಾ ಕುವೆಂಪು ದರ್ಶನಕೆ ‘ ಯನ್ನು ಓದಿದವರಿಗೆ ಅವರ ಅಧ್ಯಯನದ ಆಳದ ಅರಿವಾಗುವುದು. ಕುವೆಂಪುರವರ ಎಲ್ಲಾ ಮಾದರಿಯ ಸಾಹಿತ್ಯವನ್ನು ಸಮಗ್ರವಾಗಿ ವಿಶ್ಲೇಷಿರುವುದಲ್ಲದೆ ಕುವೆಂಪು ಸಾಹಿತ್ಯಕ್ಕೆ ವಿಮರ್ಶಾಲೋಕ ಮತ್ತು ಸಹೃದಯರ ಪ್ರತಿಸ್ಪಂದನದ ಸಂಪೂರ್ಣ ವಿವರಣೆಯನ್ನು ಒಳಗೊಂಡ ಅದು ಅಧ್ಯಯನಾಸಕ್ತರಿಗೆ ಒಂದು ಆಕರ ಗ್ರಂಥವಾಗುವಷ್ಟು ಮಾಹಿತಿಪೂರ್ಣವಾಗಿರುವುದು. ಸಾಮಾನ್ಯರಿಗೂ ಅರ್ಥವಾಗುವಂತಹ ಸರಳತೆಯು ಅವರ ಬರವಣಿಗೆಯ ವೈಶಿಷ್ಟ. ಕನ್ನಡದ ಇನ್ನೂ ಅನೇಕ ಮುಖ್ಯ ಲೇಖಕರ ಸಾಹಿತ್ಯವನ್ನು ಇದೇ ಮಾದರಿಯಲ್ಲಿ ಪರಿಚಯಿಸಿರುವ ಅವರು ಈಗ ಮಂಡ್ಯ ಜಿಲ್ಲೆಗೆ ಸೇರಿದ, ಯಕ್ಷಗಾನ ಕವಿಯಾದ ಕೆಂಪಣ್ಣ ಗೌಡನ ಬಗ್ಗೆ ಬರೆದಿರುವ ಕೃತಿಯು ಸಾಕಷ್ಟು ಸಂಶೋಧನೆ ಮತ್ತು ಅಧ್ಯಯನವನ್ನು ಒಳಗೊಂಡಿರುವುದು.

ಕೆಂಪಣ್ಣಗೌಡ ಮಂಡ್ಯ ಜಿಲ್ಲೆಗೆ ಸೇರಿದ ಯಕ್ಷಗಾನ ಕವಿ. ಕವಿಯು ಪ್ರಧಾನ ಯಕ್ಷಕವಿಯಾಗಿ ಪರಿಚಿತನಾಗದಿರಲು ಅವರು ಕಾರಣ ಹುಡುಕುತ್ತಾ, ಹಲವಾರು ಯಕ್ಷಗಾನ ಪ್ರಸಂಗಗಳು ಕವಿಗಳಿಂದಲೇ ವಿರಚಿತವಾಗಿದ್ದರೂ ಅವು ರಂಗಭೂಮಿಯಲ್ಲಿ ಪ್ರದರ್ಶನಗೊಳ್ಳುವಾಗ ಪಾತ್ರಧಾರಿಯ ‘ ಆಶುಪ್ರತಿಭೆ ‘ ಗೆ ಪಕ್ಕಾಗಿ ಮೂಲಪಠ್ಯ ಹಿಂದೆ ಸರಿಯುತ್ತಿದ್ದುದರಿಂದ ಕವಿರಚಿತ ಸಾಹಿತ್ಯವು ಹಿನ್ನೆಲೆಗೆ ಸರಿದು ಇತ್ತ ಶಿಷ್ಟ ಸಾಹಿತ್ಯ ಪ್ರಕಾರಕ್ಕೂ ಸೇರದೆ, ಅತ್ತ ಜನಪದ ಪ್ರಕಾರದಲ್ಲೂ ಸಲ್ಲದೆ ಹೋಗಿಯೇ ಕೆಂಪಣ್ಣಗೌಡನಂತಹ ಕವಿಯು ಅವಗಣನೆಗೆ ಒಳಗಾಗುತ್ತಿದ್ದಿರಬೇಕು ಎನ್ನುತ್ತಾರೆ. ಹಾಗಾಗಿಯೇ ಕನ್ನಡ ಸಾಹಿತ್ಯ ಪರಂಪರೆಯನ್ನು ಮರುವ್ಯಾಖ್ಯಾನಕ್ಕೆ ಒಳಪಡಿಸುವುದು ಮುಖ್ಯವೆಂಬುದನ್ನು ಕೂಡ ಅವರು ಪ್ರತಿಪಾದಿಸುತ್ತಾರೆ.

ಕೆಂಪಣ್ಣಗೌಡ ತನ್ನ ಕಾವ್ಯಗಳ ಮೂಲಕ ‘ ಕೇಳುಗಬ್ಬ’ ಎಂಬ ಮಾದರಿಯನ್ನು ಸೃಷ್ಟಿಸಿದಂತೆ ತೋರುತ್ತದೆ ಎನ್ನುವ ಲೇಖಕರು ಇಂತಹ ಕವಿಗಳು ಪ್ರಭುತ್ವದ ಹಂಗಿಗೆ ಒಳಗಾಗದೆ ಜನಪದ ಶ್ರೋತೃವರ್ಗವನ್ನು ಅವಲಂಬಿಸಿದ್ದರೆಂಬ ಹೊಳಹನ್ನು ನೀಡುತ್ತಾರೆ. ಆತನ ‘ ಕರಿರಾಯ ಚರಿತ್ರೆ’ ಯನ್ನು ವಿಶ್ಲೇಷಿಸುತ್ತಾ ಕರ್ನಾಟಕದಾದ್ಯಂತ ‘ಕರಿಭಂಟನ ಕಾಳಗ’ ಎಂಬ ಹೆಸರಿನಿಂದಲೇ ಅದು ಪ್ರಸಿದ್ಧವಾಗಿದ್ದರೂ ಅದು ಮಂಡ್ಯ ಜಿಲ್ಲೆಯಲ್ಲಿಯೇ ರೂಪುಗೊಂಡಿದ್ದು ಕಾವ್ಯದ ಮಾದರಿಯಲ್ಲಿದೆ ಎಂಬುದನ್ನು ವಿವರಗಳ ಸಮೇತ ಪ್ರಚುರ ಪಡಿಸುತ್ತಾರೆ. ಕರಿರಾಯ ಚರಿತ್ರೆಯು ಕನ್ನಡದಲ್ಲಿ ಒಂದು ವಿಶಿಷ್ಟ ಕೃತಿಯೆಂದೂ ಇತಿಹಾಸ, ಜನಪದ ನಂಬಿಕೆ, ಪುರಾಣ ಎಲ್ಲವನ್ನೂ ಒಳಗೊಂಡ ಪ್ರಣಯ ಸಾಹಸದ ಆಕರ್ಷಕ ಕಾವ್ಯವೆಂದೂ ಬಣ್ಣಿಸುತ್ತಾರೆ.

ಮಹಾಶೂರನಾದ ಕರಿರಾಯನಿಗೆ ಹಳೇಬೀಡಿನ ರಾಜ ಧರಣಿಮೋಹಿನಿ ಹಾಗೂ ರಕ್ಕಸಿಯಾದ ಉದ್ದಂಡಿಯ ಮಗಳು ಪುಂಡರೀಕಾಕ್ಷಿ ಇಬ್ಬರೂ ಮನಸೋತಿರುವರು. ತನ್ನ ತಮ್ಮನಿಗೆ ಮಗಳನ್ನು ಕೊಡಬೇಕೆಂಬ ಆಶಯ ಹೊಂದಿದ್ದ ರಕ್ಕಸಿಯು ಸಂಚಿನಿಂದ ಕರಿರಾಯನನ್ನು ಕೊಂದಾಗ ಧರಣಿಮೋಹಿನಿ ಹಾಗೂ ಪುಂಡರೀಕಾಕ್ಷಿ ಇಬ್ಬರೂ ಸಹಗಮನಕ್ಕೆ ಸಿದ್ಧರಾಗುತ್ತಾರೆ. ಆಗ ಶಿವ ಪಾರ್ವತಿಯರು ಪ್ರತ್ಯಕ್ಷ್ಯರಾಗಿ ಎಲ್ಲವೂ ಸುಖಾಂತವಾಗಿ ಮುಗಿಯುವುದು ಕರಿರಾಯನ ಸ್ಥೂಲ ಕತೆಯಾಗಿದೆ. ಇಲ್ಲಿ ಸ್ತ್ರೀ ಪಾತ್ರಗಳೇ ಪ್ರಧಾನವಾಗುತ್ತಾ ಪುರುಷಪಾತ್ರಗಳು ಪೂರಕವೆಂಬಂತೆ ಚಿತ್ರಿತವಾಗಿವೆ ಎಂದು ಲೇಖಕರು ವಿವರಿಸುತ್ತಾರೆ. ಮೌಲಿಕ ಕೃತಿಯಾಗಿದ್ದರೂ ಕಾರಣಾಂತರಗಳಿಂದ ಪಂಡಿತ ಮಂಡಲಿಯ ಮನ್ನಣೆ ಸಿಗದೇ ಬರಿಯ ಜನಮನ್ನಣೆ ಮಾತ್ರ ಸಿಕ್ಕಿದ, ಸಾಂಸ್ಕೃತಿಕವಾಗಿ ಕೂಡ ಮಹತ್ವದ ಸ್ಥಾನವಿರುವ ಆ ಕೃತಿಯನ್ನು, ಮರುಪರಿಶೀಲನೆಗೆ ಒಳಪಡಿಸುವುದು ಅವಶ್ಯಕವೆಂದು ಅವರೆನ್ನುತ್ತಾರೆ. ಒಕ್ಕಲಿಗ( ಈ ಪದವನ್ನು ಕೃಷಿ ಸಂಸ್ಕೃತಿಗೆ ಪರ್ಯಾಯವಾಗಿ ಅವರು ಬಳಸಿರುವರು ; ಪುಟ 59) ಜನಾಂಗದ ಸಂಸ್ಕೃತಿಯನ್ನು ವೈಭವೀಕರಿಸುವಂತೆ ಕವಿಯು ಚಿತ್ರಿಸಿದ್ದಾನೆ ಎಂದೂ ವಿವರಿಸುವ ಅವರು ಶ್ರೇಣೀಕರಣ ಸಾಮಾಜಿಕ ವ್ಯವಸ್ಥೆಯಲ್ಲಿ ಈ ಚಿತ್ರಣವೂ ಕೂಡ ಕ್ರಾಂತಿಕಾರವಾದದ್ದು. ಈ ಹಿನ್ನೆಲೆಯಲ್ಲಿ ಕೂಡ ಕೆಂಪಣ್ಣಗೌಡನನ್ನು ಪ್ರಧಾನ ಧಾರೆಯಲ್ಲಿ ಅಧ್ಯಯನ ಮಾಡಿ ಆತನ ಸಾಂಸ್ಕೃತಿಕ ಮಹತ್ವವನ್ನು ಮನಗಾಣಿಸುವುದು ಮುಖ್ಯವೆನ್ನುತ್ತಾರೆ.

ಇನ್ನು ಕೆಂಪಣ್ಣಗೌಡನ ‘ನಳ ಚರಿತ್ರೆ’ ಯ ಬಗೆಗೂ ವಿವರಗಳನ್ನು ಕೊಡುತ್ತಾ, ‘ಕರಿರಾಯ ಚರಿತ್ರೆ’ ಯಲ್ಲಿ ರೂಢಿಗಿಂತ ಭಿನ್ನವಾಗಿ ಹೊಸ ವಸ್ತುವನ್ನು ಆಯ್ದುಕೊಂಡಿದ್ದ ಆತ ಇಲ್ಲಿ ಮಾತ್ರ ಪರಂಪರೆಯಿಂದ ಬಂದ ಪರಿಚಿತ ವಸ್ತುವನ್ನೇ ಆಯ್ದುಕೊಂಡು ಯಕ್ಷಗಾನ ಮಾದರಿಯಲ್ಲಿ ರಚಿಸಿರುವನು ಎನ್ನುತ್ತಾರೆ. ಸಮಕಾಲೀನರಾದ ಕನಕದಾಸನೂ, ಈತನೂ, ಒಂದೇ ವಸ್ತುವನ್ನು ಆಯ್ದು ಕಾವ್ಯ ರಚಿಸಿದ್ದರೂ ಕನಕದಾಸ ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ಉದ್ದೇಶದಿಂದ ಕುಮಾರವ್ಯಾಸನ ಮಾದರಿಯನ್ನು ಅನುಸರಿಸಿರುವನೆಂದೂ, ಆ ರೀತಿಯ ಯಾವುದೇ ಒತ್ತಡಕ್ಕೆ ಒಳಗಾಗದ ಕೆಂಪಣ್ಣಗೌಡನು ತಾನು ಜನಸಮುದಾಯಕ್ಕೆ ಉಪಯುಕ್ತವಾಗುವಂತೆ ಯಕ್ಷಗಾನ ಮಾದರಿಯನ್ನು ಅನುಸರಿಸಿರಬೇಕೆಂದೂ ಊಹಿಸುತ್ತಾರೆ. ಸ್ಥೂಲವಾಗಿ ಅದರ ಕತೆ ಹೀಗಿದೆ ; ದೇವೇಂದ್ರ, ಶನಿದೇವ ಮುಂತಾದವರು ದಮಯಂತಿಯ ಸೌಂದರ್ಯಕ್ಕೆ ಮರುಳಾಗಿ ನಳನ ವೇಷದಲ್ಲಿ ಅವಳ ಸ್ವಯಂವರಕ್ಕೆ ಆಗಮಿಸುವರು. ಆದರೆ ನಳನಲ್ಲಿ ಅನುರಕ್ತಳಾದ ಅವಳು ಸ್ವಯಂವರದಲ್ಲಿ ನಳನನ್ನೇ ವರಿಸುವಳು. ಅವಳನ್ನು ಪಡೆಯುವ ಹುನ್ನಾರದಲ್ಲಿ ವಿಫಲನಾದ ಶನಿದೇವನು ” ನಾನು ಬಯಸಿದ ದಮಯಂತಿಯನ್ನು ನಳ ಮದುವೆಯಾಗಿ ಹೇಗೆ ಸುಖವಾಗಿರುತ್ತಾನೋ ನೋಡಿಯೇಬಿಡುತ್ತೇನೆ” ಎಂದು ಪಣ ತೊಡುತ್ತಾನೆ. ಪರಿಣಾಮವಾಗಿ ಅವರಿಬ್ಬರೂ ಶನಿಯ ಕಾಟಕ್ಕೊಳಗಾಗಿ ಪಡಬಾರದ ಪಾಡು ಪಟ್ಟಿದುದನ್ನು ವಿವರಿಸುವ ಕಾವ್ಯವೇ ‘ ನಳ ಚರಿತ್ರೆ ‘. ಇಲ್ಲಿಯೂ ನಳನಿಗಿಂತ ದಮಯಂತಿಯ ಪಾತ್ರವೇ ಗಟ್ಟಿ ಪಾತ್ರವಾಗಿ ಹೊರಹೊಮ್ಮಿರುವುದರಿಂದ ಇದನ್ನು ದಮಯಂತಿಯ ಕತೆ ಎನ್ನಬಹುದು ಅನ್ನುತ್ತಾರೆ.

ನಳ ದಮಯಂತಿಯ ಕತೆಯ ಮೂಲಕ ಶನಿಯ ಪ್ರಭಾವವನ್ನು ವಿವರಿಸುವ ಕತೆಯಿದು ಎನ್ನುತ್ತಾರೆ. ಶನಿಯು ಮನಸ್ಸು ಮಾಡಿದರೆ ಯಾರ ಬದುಕನ್ನಾದರೂ ಲಯ ತಪ್ಪಿಸಬಲ್ಲ ಎಂದು ಹೇಳುವ ಈ ಕತೆಗೆ ಒಂದು ಧಾರ್ಮಿಕ ಆಯಾಮವೂ ಇದೆ ಎಂದವರು ವಿವರಿಸುತ್ತಾರೆ. ಕನ್ನಡದಲ್ಲಿ ನಳ ಚರಿತ್ರೆಯ ಬಗ್ಗೆ ಚರ್ಚಿಸುವಾಗ ಯಾರೂ ಕೂಡ ಕೆಂಪಣ್ಣ ಗೌಡನ ನಳಚರಿತ್ರೆಯ ಬಗ್ಗೆ ಪ್ರಸ್ತಾಪಿಸದಿರುವುದು ಒಂದು ಲೋಪವೆಂದೂ ಹೇಳುತ್ತಾ ಅವರು ಚರ್ಚೆಗೆ ದಾರಿ ಮಾಡಿಕೊಟ್ಟಿರುವರು.

ಇನ್ನು ಕೆಂಪಣ್ಣಗೌಡನ ‘ ಶನಿ ಮಹಾತ್ಮೆ’ ನಿಸ್ಸಂದೇಹವಾಗಿಯೂ ಧಾರ್ಮಿಕ ಆಶಯದಿಂದ ರಚಿಸಲ್ಪಟ್ಟಿರುವುದು ಎನ್ನುತ್ತಾರೆ. ಭಾರತೀಯ ಪರಂಪರೆಯಲ್ಲಿ ದಂತ ಕತೆಯಾಗಿರುವ ‘ ರಾಜಾ ವಿಕ್ರಮ ‘ ನ ಕತೆಯನ್ನು ಕವಿಯು ಇಲ್ಲಿ ಬಳಸಿಕೊಂಡಿರುವನು. ಒಂದು ದಿನ ಓಡ್ಡೋಲಗದಲ್ಲಿ ನವಗ್ರಹಗಳ ಮಹಿಮೆಗಳ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಒಬ್ಬ ಪಂಡಿತನು ಶನಿದೇವರ ಮಹಿಮೆಯ ಬಗ್ಗೆ ವಿವರಿಸಿ ಹೇಳಲು ರಾಜಾ ವಿಕ್ರಮನು ಪರಿಹಾಸ್ಯ ಮಾಡುತ್ತಾನೆ. ಆಕಾಶಮಾರ್ಗದಲ್ಲಿ ಹೋಗುತ್ತಿದ್ದ ಶನಿಯು ಇದನ್ನು ಕೇಳಿಸಿಕೊಂಡು ಕೋಪಗೊಂಡು ವಿಕ್ರಮನನ್ನು ನಾನಾ ವಿಧವಾದ ಕಷ್ಟ ಕೋಟಲೆಗಳಿಗೆ ಗುರಿಪಡಿಸುತ್ತಾನೆ. ಶನಿಪೂಜಾ ನಿರತನಾದರೆ ಶನಿದೇವ ಬಿಟ್ಟು ಹೋಗುವನೆಂದ ಬ್ರಾಹ್ಮಣರ ಸೂಚನೆಯನ್ನು ನಿರಾಕರಿಸಿದ ವಿಕ್ರಮನು ಬಂದದ್ದನ್ನು ಎದುರಿಸುವೆನೆನ್ನುತ್ತಾನೆ. ಕಟ್ಟಕಡೆಗೆ ಶನಿಕಥೆಯನ್ನು ಓದಿಸುವ ವಿಧಾನದಿಂದ ಶನಿಯನ್ನು ಒಲಿಸಿಕೊಳ್ಳಬಹುದೆಂದು ಕವಿಯು ಸೂಚಿಸುವುದು ಒಟ್ಟುಕತೆಯ ಸಾರಾಂಶ. ಶನಿದೇವನನ್ನು ಒಲಿಸಿಕೊಳ್ಳುವುದು ಪ್ರಧಾನ ಸಂಸ್ಕೃತಿಯ ಬ್ರಾಹ್ಮಣರು ಸೂಚಿಸುವ ಪೂಜಾವಿಧಾನದಿಂದಲ್ಲ ಎಂದು ಕವಿ ಸೂಚಿಸುತ್ತಿದ್ದಾನೆಯೇ ಎಂಬ ಪ್ರಶ್ನೆಯನ್ನು ಲೇಖಕರು ಇಲ್ಲಿ ಎತ್ತಿರುವರು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಸಾಮಾನ್ಯ ಕೃತಿಯಾಗಿ ಕಾಣುವ ಇದು ಕವಿಯು ಪ್ರಬಲ ಆರ್ಯ ಸಂಸ್ಕೃತಿಗೆ ಬದಲಾಗಿ ದ್ರಾವಿಡ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಿರಬಹುದೇ ಎನ್ನುವ ಪ್ರಶ್ನೆಯನ್ನು ಕೂಡ ಇಲ್ಲಿ ಎತ್ತಿದ್ದಾರೆ.

ಕನ್ನಡದಲ್ಲಿ ಕೃಷಿ ಸಂಸ್ಕೃತಿಯಿಂದ ಬಂದವರಲ್ಲಿ ಮುದ್ದಣನನ್ನು ಬಿಟ್ಟರೆ ಕೆಂಪಣ್ಣಗೌಡನು ಮೊದಲ ಒಕ್ಕಲಿಗ ಕವಿಯೆಂದು ಲೇಖಕರು ಹೇಳುತ್ತಾರೆ. ಯಕ್ಷಗಾನದ ‘ಆದ್ಯಕವಿ ‘ ಎಂದು ಗುರುತಿಸಬಹುದಾದ ಅನೇಕ ದಾಖಲೆಗಳನ್ನು ನೀಡುವ ಈ ಪುಸ್ತಕವು ಯಕ್ಷಗಾನದ ಆದ್ಯ ಪ್ರವರ್ತಕನೆನ್ನಬಹುದಾದ ಕೆಂಪಣ್ಣಗೌಡನು ಮಂಡ್ಯ ಜಿಲ್ಲೆಯಲ್ಲಿಯೇ ಅಪರಿಚಿತ ಎನ್ನುವಷ್ಟು ದುರ್ಬಲವಾಗಿರುವುದಕ್ಕೆ ಕಾರಣ ಕರಾವಳಿಯಲ್ಲಿ ಆ ಕಲೆಯನ್ನು ಉಳಿಸಿ ಬೆಳೆಸಿ, ಪೋಷಿಸಿದ ಹಾಗೆ ಕರ್ನಾಟಕದ ಉಳಿದ ಭಾಗಗಳಲ್ಲಿ ಆಗದಿರುವುದೇ ಮುಖ್ಯವಾದ ಕಾರಣವೆನ್ನುತ್ತಾರೆ. ಯಕ್ಷಗಾನ ಕರ್ನಾಟಕದ ಹೆಮ್ಮೆಯ ಕಲೆ, ದ್ರಾವಿಡ ಕಲೆ ಎನ್ನುತ್ತಾ ಅದರ ಹುಟ್ಟು, ಬೆಳವಣಿಗೆ, ವಿವಿಧ ರೂಪಾಂತರಗಳ ಬಗ್ಗೆ ವಿವರವಾಗಿ ಚರ್ಚಿಸಿರುವ ಲೇಖಕರು ಅದರ ಬಗ್ಗೆ ಆಳವಾದೊಂದು ಚರ್ಚೆಯನ್ನೇ ಹುಟ್ಟು ಹಾಕಬಲ್ಲಷ್ಟು ಸಮರ್ಥವಾಗಿ, ಆಳವಾದ ಅಧ್ಯಯನದಿಂದ ಕೂಡಿದ ವಿಶ್ಲೇಷಣೆಯಿಂದಾಗಿ ಆಸಕ್ತಿಯಿಂದ ಓದಬೇಕೆನ್ನಿಸುವ ಅಚ್ಚುಕಟ್ಟಾದ ಕೃತಿಯೊಂದನ್ನು ನೀಡಿರುವರು.

ಮುನ್ನುಡಿ ಬರೆದಿರುವ ‘ ವಿದ್ವಾನ್ ಉಮಾಕಾಂತ ಭಟ್ಟ’ ರವರು ಕವಿಯ ಕೃತಿಗಳನ್ನು ಹುಡುಕಿ, ಮೆಚ್ಚಿ, ಕವಿಯ ವೈಯುಕ್ತಿಕ ಮಾಹಿತಿಗಳನ್ನು ತರ್ಕಿಸಿ ಶೋಧಿಸಿ ದಾಖಲಿಸಿರುವ ಡಾ. ನರಹಳ್ಳಿಯವರನ್ನು ” ಕನ್ನಡ ವಾಘಮಯವನ್ನು ಕಣ್ಗಾಪಿನಿಂದ ಗಮನಿಸುವ ಕಾಯುವ ಆಚಾರ್ಯ ಪ್ರಜ್ಞೆ ಯಕ್ಷಗಾನವು ಸಾಹಿತ್ಯ ಪರಂಪರೆಯ ಅವಲೋಕನದ ವಸ್ತುವಾಗಬೇಕು ಎಂದು ಹೇಳಿರುವುದು ಗಮನಾರ್ಹ ” ಎನ್ನುತ್ತಾ ಅವರ ಮಾತನ್ನು ಮೆಚ್ಚಿರುವರು. ಅಭಿನವ ಪ್ರಕಾಶನದ ನಾ. ರವಿಕುಮಾರ್ ರವರು ಯಕ್ಷಗಾನದ ಇತಿಹಾಸದ ಮುಖ್ಯವಾದ ಮೈಲುಗಲ್ಲುಗಳನ್ನು ಸಮರ್ಥವಾಗಿ ದಾಖಲಿಸಿರುವರು. ಹಿನ್ನುಡಿ ಬರೆದಿರುವ ಕೆ ವೈ ನಾರಾಯಣಸ್ವಾಮಿಯವರು ಮೌಖಿಕ ಪರಂಪರೆ, ಜನಪದ ಸಾಹಿತ್ಯ ಮೂಲೆಗುಂಪಾದ ಸಾಹಿತ್ಯಗಳನ್ನು ಚರಿತ್ರೆಯ ಭಾಗವಾಗಿಸುವ ಇಂತಹ ಕೃತಿಗಳು ಬಹುಮುಖ್ಯವೆಂದೂ, ಹಾಗಾಗಿಯೇ ಇದೊಂದು ಮಹತ್ವದ ಕೃತಿಯೆಂದೂ ವರ್ಣಿಸುತ್ತಾರೆ.

‍ಲೇಖಕರು avadhi

February 14, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: