ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಮಾ ಮುಕುಂದ್ ಕವಿತೆ- ಆಸೆ…

ಉಮಾ ಮುಕುಂದ್

ಐಸಿಯುಗೆ ಕರೆದೊಯ್ಯುವ ಮುಂಚೆ
ಕಳಚಿಕೊಟ್ಟ ನಿನ್ನ ಶರಟು, ಪ್ಯಾಂಟು,
ಕಪ್ಪು ಚೌಕಟ್ಟಿನ ಹೊಳೆಹೊಳೆವ ಕನ್ನಡಕ,
ಅನಾಥವಾಗಿವೆ ಧರಿಸುವವರಿಲ್ಲದೆ,
ಅರ್ಧ ಓದಿ ಮಡಿಚಿಟ್ಟ ಪುಸ್ತಕ,
ಅರ್ಧ ಬಿಡಿಸಿಟ್ಟ ಪದಬಂಧ,
ಅರ್ಧ ನೋಡಿದ ಸಿನೆಮಾ,
ನಿನ್ನ ಬಿಸುಪುಂಡ ಕುರ್ಚಿ,
ಕೇಳಿದಷ್ಟೂ ಸಾಲದ ಹಾಡುಗಳು,
ಆಡದೇ ಉಳಿದ ಪಿಸು ಮಾತುಗಳು
ಆಡಿ ಕನವರಿಸಿದ ಕನಸುಗಳ
ಬಚ್ಚಿಟ್ಟುಕೊಂಡಿರುವ ದಿಂಬು,
ಹಾಸಿಗೆ, ಹೊದಿಕೆ ಕಾಯುತ್ತಿವೆ ನಿನಗಾಗಿ
ಪಾರಿವಾಳಗಳು ತಲೆ ಕೊಂಕಿಸಿ ನಿನ್ನ ಹುಡುಕುತ್ತಿವೆ

ಎ ಎನ್ ಮುಕುಂದ್
ಎ ಎನ್ ಮುಕುಂದ್

ಪಾರಿಜಾತದ ಮರ ಶೋಕದಿಂದ ಹೂ ಸುರಿಸುತ್ತಿದೆ
ನಿನ್ನಂಗೈ, ಬೆರಳಿನ ಬಿಸುಪುಂಡ ಸೆಲ್ ಫೋನ್
ರಿಂಗಣಿಸಿ ಆಗಾಗ ನಿಂತು ಹೋಗುತ್ತದೆ
ನಿನ್ನ ಫೋನ್ ನಿಂದ ನನಗೆ ನಾನೇ ಕರೆ ಮಾಡಿ
ನನ್ನ ಫೋನ್ ಎತ್ತಿಕೊಳ್ಳುತ್ತೇನೆ
ನಿನ್ನ ದನಿಯಾಲಿಸಲು ಕಾಯುತ್ತೇನೆ
ಕಾಯುತ್ತಲೇ ಇರುತ್ತೇನೆ
ಹೋಗಿ ಬರುತ್ತೇನೆ
ಎಂದು ಹೇಳಿಹೋಗಬಾರದೆ
ಹೋಗುವ ಮುನ್ನ ಎಂದು ಮುನಿಸಿಕೊಳ್ಳುತ್ತಿದ್ದ ನನಗೆ
ಕೊನೆಗೂ ಹೇಳದೆಯೇ ಹೊರಟುಹೋದೆ..
ಕರೆಯಾದರೂ ಮಾಡಿ ಹೇಳಬಾರದೇ
ಮತ್ತೆ ಸೇರೋಣ ಬೇಗ ಎಂದೊಮ್ಮೆ..
ಇದ್ದುಬಿಡೋಣ ಜಗದ ಹಂಗಿಲ್ಲದೆ
ನಾಳೆಯೇ ಕೊನೆಯೆಂಬಂತೆ
ನಮಗೆ ಬೇಕಾದಂತೆ
ನಮ್ಮಿಷ್ಟದಂತೆ..

‍ಲೇಖಕರು Admin

5 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading