ರೊಟ್ಟಿಯ ಕನಸು
-ಕವಿತಾ ವಿರೂಪಾಕ್ಷ
ದಾರಿಯಲಿ ಹೊರಟಾಗ
ಹೋಟೆಲ್ ಮುಂದೆ ಮಗು
ಪಿಳಿಪಿಳಿಯ ಕಣ್ಣ ಮಿನುಗು
ರೆಪ್ಪೆ ಚಪ್ಪರಿಸಿದ್ದು
ರೊಟ್ಟಿಯ ಕನಸು.
ಹಾಗೆ ಕಣ್ಣೊರಳಿಸಿದೆ
ಹೋಟೆಲ್ಲೆಡೆಗೆ;
ಟೇಬಲ್ ತಟ್ಟೆ ತುಂಬ
ಭಕ್ಯ ಭೋಜ್ಯಗಳು
ಮಗು ಕಣ್ಣಲ್ಲಿ ಮಾತ್ರ
ಖಾಲಿ ತಟ್ಟೆ…!
ಥತ್ ಎನಿಸಿತು…
ಮತ್ತೆ ಕಣ್ಣೊರಳಿಸಿದೆ
ಕಂಡದ್ದು ಗಲ್ಲಾಪೆಟ್ಟಿಗೆ ಹಿಂದೆ
ಹೋಟೆಲ್ ಮಾಲೀಕ..
ಪೆಟ್ಟಿಗೆಯೇನೋ ತುಂಬಿತ್ತು
ಹಾಗೇ ಆತನ ಕಣ್ಣಿಣುಕಿದೆ;
ಕಂಡದ್ದು
CGST, SGST, CESS,
Tax, ಹೋಟೆಲ್ ರೆಂಟ್
ನಾಳೆಯ ಇಷ್ಟುದ್ದ list
ಪಿಚ್ ಎನಿಸಿತು…
ಹೊರಳಿ ಮಗು ಕಡೆ
ಕಣ್ಣಾಯಿಸಿದೆ;
ಖಾಲಿ ತಟ್ಟೆ ಅಣಕಿಸುವಂಥಹ
ಖಾಲಿ ಹೊಟ್ಟೆ..!
ಏನೋ
ಕೇಳಲೋ, ಹೇಳಲೋ ಹೊರಟೆ
ಧ್ವನಿಯೇ ಸತ್ತಿತ್ತು….
ಉಪದೇಶ ಅನ್ನವಾದೀತೆ?!
ಎರಡಿಪ್ಪತ್ತರ ರೊಟ್ಟಿಯ ಕನಸ
ಅವನ ಖಾಲಿ ಕೈಗಿತ್ತು
ಒಂದು ದೇಶಾವರಿ ನಗೆಬೀರಿ
ಅಲ್ಲಿಂದ ಕಾಲ್ಕಿತ್ತೆ…!






0 Comments