ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉದಯ ಗಾಂವಕಾರ ಕವಿತೆ- ಕಟಾವಿಗೆ ಬಂದ ಕವಿತೆ..

ಉದಯ ಗಾಂವಕಾರ

ಇನ್ನಷ್ಟು ಸಹನೆಯಿಂದ ಕಾದಿದ್ದರೆ
ಆ ಮೊಗ್ಗು ಬಿರಿದು ಹೂವಾಗುವುದನ್ನು
ನೋಡಬಹುದಿತ್ತು.
ಅಷ್ಟರಲ್ಲಿ
ಚಪ್ಪಲಿಯಿಲ್ಲದ ಆ ಮುದುಕನ
ಒರಟು ಪಾದಗಳು
ನನ್ನ ಕಣ್ ಸೆಳೆದವು.

ಮರಗಿಡಗಳ ಸಂದಿಯಿಂದ
ನುಸುಳಿಹೋಗುವ ಗಾಳಿಯ
ನಿಟ್ಟುಸಿರನ್ನು ನಾನೂ
ಆಲಿಸಬೇಕೆಂದುಕೊಂಡಿದ್ದೆ;
ಎಲ್ಲೋ ದೂರದಿಂದ ಕೇಳಿಬಂದ
ಆಕ್ರಂದನವೇ ಕಿವಿಗಳನ್ನು
ತುಂಬಿಕೊಂಡಿತು.

ಆಕೆಯ ಮುಂಗುರುಳ
ಲಾಸ್ಯವನ್ನು ಅಕ್ಷರಗಳಲ್ಲಿ
ಹಿಡಿದಿಡಬೇಕೆಂದು
ಯೋಚಿಸುತ್ತಿರುವಾಗಲೆ
ದುಗುಡ ತುಂಬಿದ ಮುಖದ
ಆ ಮಹಿಳೆ ಎದುರಾದಳು.
ದೂರದೂರಿನ ಆಕೆಯ
ಮಗನಿಗೆ ಪತ್ರ ಬರೆಯೆಂದಳು.

ಧ್ಯಾನಸ್ಥನಾಗಬೇಕೆಂದಾಗೆಲ್ಲ
ಲೋಕದ ಅಶಾಂತಿ
ನನ್ನನ್ನು ಎಚ್ಚರಿಸುವುದು-
ಶೀತ, ಕೆಮ್ಮು
ಗುಡುಗು ಮಳೆ, ಬಿಸಿಲಿನಂತೆ.
ಕವಿತೆ ಬರೆಯುವುದೊಂದು
ಧ್ಯಾನವೆಂದು ಯಾರೋ
ಹೇಳಿದ್ದ ನೆನಪು
ಅಥವಾ
ನಾನೇ ಹಾಗೆಂದುಕೊಂಡಿರಬೇಕು.

ಕಟಾವಿಗೆ ಬಂದ ಬೆಳೆ
ಅಕಾಲದ ಮಳೆಗೆ
ನೆಲಕ್ಕೊರಗಿದಾಗ
ಬೆಳೆದಾಕೆ
ಧ್ಯಾನಿಸಲಾರಳು.

‍ಲೇಖಕರು Admin

19 October, 2021

1 Comment

  1. prathibha nandakumar

    ತುಂಬಾ ಚೆನ್ನಾಗಿರುತ್ತೆ ನಿಮ್ಮ ಕವನಗಳು. ಅದರ ಶೈಲಿ, ಬಂಧ, ಪದ ಬಳಕೆ ಸಖತ್ತಾಗಿದೆ. ” ಹಿಂತಿರುಗಿ ಬಂದಳು…ಕವನದ ಅದ್ಭುತ ಇಮೇಜರಿ… (ಮುಟ್ಟಿರದ ಯೋನಿಯಿಂದ /ಹುಟ್ಟಿರುವವನನ್ನು ಹುಡುಕಿಕೊಡು ಎಂದಳು.) ಕಟಾವಿಗೆ ಬಂದ ಕವಿತೆ, ಒಂದು ಕಾಡುವ ಉದ್ಯಾನ… (ಬಿಟ್ಟರೆ ಕಾಡಾಗಿಬಿಡಬಹುದು ಉದ್ಯಾನ!) ಕರೋನಾ ಚೂರ್ಗತೆಗಳು… ಎಲ್ಲ ಓದಿ ಖುಷಿ ಪಟ್ಟಿದ್ದೇನೆ. ಥ್ಯಾಂಕ್ಸ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading