ಉಡುಗಿದ ಗಡಸು ದನಿ: ಲೋಹಿತಾಶ್ವ…

ಎಂ ನಾಗರಾಜ ಶೆಟ್ಟಿ

ಲೋಹಿತಾಶ್ವ ಇನ್ನಿಲ್ಲವೆಂದು ತಿಳಿದಾಗ ಕಣ್ಮುಂದೆ ರೂಪು ಕಾಣಿಸುವ ಬದಲು ಧ್ವನಿ ಕಿವಿಗಪ್ಪಳಿಸಿತು. ಲೋಹಿತಾಶ್ವ ಎಂದರೆ ಕಂಚಿನ ಕಂಠ.

ಅವರ ದನಿಯನ್ನು ಕೊನೆಯ ಬಾರಿ ಕೇಳಿದ್ದು ಸುಮಾರು ಮೂರು ವರ್ಷಗಳ ಹಿಂದೆ, ಬೆಂಗಳೂರು ಚಿತ್ರೋತ್ಸವದಲ್ಲಿ. ಮಾತಿಗೆ ಸಿಕ್ಕ ಅವರನ್ನು ನೀವು ನಾಟಕ, ಸಿನಿಮಾಗಳಲ್ಲಿ ಕಾಣಿಸುವುದು ಕಡಿಮೆಯಾಗಿದೆಯಲ್ಲಾ ಎಂದು ಕೇಳಿದ್ದೆ. ʼಊರಲ್ಲಿ ಜಮೀನು ನೋಡಿಕೊಂಡು ಹಾಯಾಗಿದ್ದೇನೆʼ ಎನ್ನುವ ಅವರ ಮಾತಲ್ಲಿ ಸಂತೃಪ್ತಿಯಿತ್ತು. ಜೊತೆಯಲ್ಲಿದ್ದರೂ ಅಂದು ಕೇಳದೆ ಉಳಿದ ಪ್ರಶ್ನೆ: “ನಿಮ್ಮ ಇಷ್ಟದ ಪಾತ್ರ ಯಾವುದು?”

ವಿಕಿಪೀಡಿಯಾದಲ್ಲಿ ಲೋಹಿತಾಶ್ವ ಸುಮಾರು ಐನೂರು ಚಲನಚಿತ್ರಗಳಲ್ಲಿ ನಟಿಸಿದ್ದಾರೆಂದು ನಮೂದಿಸಲಾಗಿದೆ. ಒಳ್ಳೆಯ, ಕೆಟ್ಟ ಮುಖ್ಯಮಂತ್ರಿಯಾಗಿಯೇ ಹೆಚ್ಚು ಕಮ್ಮಿ ಐನೂರು ಚಿತ್ರಗಳಿವೆ. ಹಾಗೆಯೇ ಪೋಲಿಸ್‌ ಆಫೀಸರ್‌, ಡಾಕ್ಟರ್‌, ವಿಲನ್‌ಪಾತ್ರಗಳಿವೆ. ಲೋಹಿತಾಶ್ವ ಎಂದ ಕೂಡಲೇ ಪ್ರೇಕ್ಷಕರ ಮನಸ್ಸಲ್ಲಿ ಮೂಡುವುದು ಅವರ ಗಟ್ಟಿ ದನಿ,ಎತ್ತರದ ನಿಲುವು.ಆದರೆ ನಿರ್ದಿಷ್ಟ ಪಾತ್ರದ ಮೂಲಕ ಲೋಹಿತಾಶ್ವರನ್ನು ಗುರುತಿಸುವುದು ಕಷ್ಟದ ಕೆಲಸ. 

ಲೋಹಿತಾಶ್ವ ಒಬ್ಬ ಅತ್ಯುತ್ತಮ ನಟ. ಚಲನಚಿತ್ರಗಳಲ್ಲಿ ಅಭಿನಯಿಸುವ ಮುನ್ನ ನಟನಾಗಿ ರಂಗದಲ್ಲಿ ಗುರುತಿಸಿಕೊಂಡವರು. ಪ್ರಸನ್ನ ನಿರ್ದೇಶನದ ʼಕತ್ತಲೆ ದಾರಿ ದೂರʼ ಅವರಲ್ಲಿರುವ ಕಲಾವಿದನನ್ನು ತೋರಿಸಿಕೊಟ್ಟಿತ್ತು. ತುಮಕೂರು ʼಸಮುದಾಯʼದ ಅಧ್ಯಕ್ಷರೂ ಆಗಿ ʼಹುತ್ತವ ಬಡಿದರೆʼ ಮುಂತಾದ ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸಿ ಹೆಸರು ಮಾಡಿದ್ದರು.ʼಕತ್ತಲೆ ದಾರಿ ದೂರʼದ ನಾಟಕದ ಅವರ ಪಾತ್ರವನ್ನು ಮೆಚ್ಚಿ ಶಂಕರ್‌ನಾಗ್‌ ಅವರನ್ನು ʼಗೀತಾʼ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯಿಸಿದ್ದರು.

ಮೂಲತಃ ತುಮಕೂರು ಜಿಲ್ಲೆಯ ತೊಂಡೆಗೆರೆಯವರಾಗಿದ್ದ ರೋಹಿತಾಶ್ವ ವಿದ್ಯಾಭ್ಯಾಸ, ಬಳಿಕ ಸರಕಾರಿ ಕಾಲೇಜಲ್ಲಿ  ಲೆಕ್ಚರರ್‌ ಆಗಿ ಬಹಳ ವರ್ಷ ತವರು ಜಿಲ್ಲೆಯಲ್ಲಿಯೇ ಇದ್ದರು. ತುಮಕೂರಿನ ಎಂಜಿ ರಸ್ತೆಯಲ್ಲಿನ ಪುಸ್ತಕದಂಗಡಿಯಲ್ಲಿ ಎಚ್‌ಜಿ ಸಣ್ಣಗುಡ್ಡಯ್ಯ, ಕೆ ಆರ್‌ನಾಯಕ್‌, ವೀಚಿ, ಎಚ್‌ಎಸ್‌ ಶಿವಪ್ರಕಾಶ್‌ ಪ್ರತಿ ಸಂಜೆಯೆನ್ನುವಂತೆ ಸೇರುತ್ತಿದ್ದರು. ಈ ಗೆಳೆಯರ ಒಡನಾಟ ಮತ್ತು ʼಸಮುದಾಯʼ ಲೋಹಿತಾಶ್ವರ ವ್ಯಕ್ತಿತ್ವಕ್ಕೆ ಗಟ್ಟಿತನವನ್ನು ತಂದಿರಬಹುದು.

ಬೆಂಗಳೂರಿಗೆ ಬಂದ ನಂತರದಲ್ಲಿ ರೋಹಿತಾಶ್ವ ಸಿನಿಮಾ ನಟನೆಯಲ್ಲಿ ಹೆಚ್ಚು ತೊಡಗಿಸಿಕೊಂಡರು.ಜಿ ಎಸ್‌ ಸೋಮಣ್ಣನ ಮನೆಯಲ್ಲಿ ‌”ಲೆಕ್ಚರರ್ ಕೆಲಸದ ಜೊತೆಗೆ ನಟನೆಗೆ ಹೇಗೆ ಸಮಯ ಒದಗುತ್ತದೆ “ ಎಂದು ಕೇಳಿದ್ದೆ. ”ಶೂಟಿಂಗ್‌ ಬೆಂಗಳೂರಲ್ಲಿ ಇದ್ದರೆ ಒಪ್ಪಿಕೊಳ್ಳುತ್ತೇನೆ. ಕೆಲವೊಮ್ಮೆ ರಜೆ ಹಾಕಬೇಕಾಗುತ್ತದೆ” ಎಂದಿದ್ದರು.ಬಹುಶಃ ಇದರಿಂದಾಗಿಯೇ ಅವರಿಗೆ ಸವಾಲೆನ್ನಿಸುವಂತ ಪಾತ್ರಗಳು ದಕ್ಕದೇ ಹೋಗಿರಬಹುದು. ನೇರಾನೇರ ಮಾತುಗಳು, ಯಾರಿಗೂ ಸಲಾಂ ಹೊಡೆಯದ, ಅವಮಾನ ಸಹಿಸದ ಮನಸ್ಥಿತಿ ಕೂಡಾ ಚಿತ್ರರಂಗದ ಹಿತಾಸಕ್ತಿಗಳಿಗೆ ಒಗ್ಗದೇ ಹೋಗಿರುವ ಸಂಭವವೂ ಇದೆ.

ಗಿರೀಶ್‌ ಕಾಸರವಳ್ಳಿಯವರ ಟಿವಿ ಧಾರಾವಾಹಿ ʼಗೃಹಭಂಗʼದಲ್ಲಿ ಕಂಠೀಜೋಯಿಸನ ಪಾತ್ರ ಅವರಿಗೆ ಒಪ್ಪುವಂತದ್ದಾಗಿತ್ತು.ʼಮಾಲ್ಗುಡಿ ಡೇಸ್‌ʼ ನ ಉರುಟು ಟೊಪ್ಪಿಗೆ ಧರಿಸಿದ ಸಾಹೇಬನ ಪಾತ್ರವೂ ಮರೆಯಲಾರದ್ದು. ಎಂ ಎಸ್‌ ಸತ್ಯು ನಿರ್ದೇಶನದ ಧಾರಾವಾಹಿಗಳಲ್ಲೂ ಅವರು ನಟಿಸಿದ್ದರು. ಇವು ಲೋಹಿತಾಶ್ವರ ನಟನಾ ಪರಣತಿಗೆ ಸಾಕ್ಷಿಯಾಗುಳಿಯುತ್ತವೆ.

ಬಂಗಾಳಿಯ ʼಸಿಂಹಾಸನಂʼ ನಾಟಕವನ್ನು ಹಿಂದಿಯಿಂದ ಕನ್ನಡಕ್ಕೆ ʼಮುಖ್ಯಮಂತ್ರಿʼ ಎನ್ನುವ ಹೆಸರಲ್ಲಿ ತಂದವರು ಲೋಹಿತಾಶ್ವ. ನಾಟಕ ಪ್ರದರ್ಶನಗೊಂಡಾಗ ಕಾರಣಾಂತರಗಳಿಂದ ಅವರು ಮುಖ್ಯಮಂತ್ರಿಯ ಪಾತ್ರದಲ್ಲಿ ಅಭಿನಯಿಸಲಾಗಲಿಲ್ಲ. ಸಾವಿರಾರು ಪ್ರದರ್ಶನಗಳನ್ನು ಕಂಡ ನಾಟಕದಲ್ಲಿ ಮತ್ತೆಂದೂ ಆ ಪಾತ್ರವನ್ನು ಅವರು ಮಾಡಲಾಗಲಿಲ್ಲವೆನ್ನುವುದೊಂದು ವಿಪರ್ಯಾಸ. ʼಅಕ್ಕಡಿ ಸಾಲುʼ ಎನ್ನುವ ಪುಸ್ತಕ ರೂಪದಲ್ಲಿ ಪ್ರಕಟವಾಗಿರುವ ಅಂಕಣ ಬರಹದಲ್ಲಿ ಅವರ ಬದುಕಿನ ಕೆಲವು ಘಟನೆಗಳ ಪ್ರಸ್ತಾಪವಿದೆ. ʼಹೊತ್ತು ಹೋಗುವ ಮುನ್ನ” ಎಂಬ ಕವನ ಸಂಕಲನವನ್ನೂ, ʼಕಬೀರʼ ಎನ್ನುವ ಅನುವಾದಿತ ನಾಟಕವನ್ನೂ ಅವರು ಪ್ರಕಟಿಸಿದ್ದಾರೆ. ಮೂವತ್ತಮೂರು ವರ್ಷ ಇಂಗ್ಲಿಷ್‌ಪ್ರಾಧ್ಯಾಪಕರಾಗಿ ವಿವಿಧ ಕಾಲೇಜುಗಳಲ್ಲಿ ಬೋಧಿಸಿದ ಅವರು ಕೆ ಆರ್‌ಪುರಂ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದರು.

ಮೊದಲ ನೋಟಕ್ಕೆ ಗಡಸು ಎಂದು ತೋರುವ ಅವರ ವ್ಯಕ್ತಿತ್ವದಲ್ಲಿ ಹಾಸ್ಯ,ಮಾರ್ದವತೆ ಇತ್ತು.ಗಂಭೀರವಾದ ವಿಷಯವನ್ನು ಹೇಳುತ್ತಲೇ ಹಾಸ್ಯ ಮಾಡುತ್ತಿದ್ದರು.ಸಾಕಷ್ಟು ಓದು, ತೀಕ್ಷ್ಣ ಗ್ರಹಿಕೆಗಳಿದ್ದವು. ಗೆಳೆಯರ ಜೊತೆಗಿದ್ದಾಗ ನಿಖರವಾಗಿ ವಿಚಾರ, ವಿಮರ್ಶೆ ಮಾಡುತ್ತಿದ್ದ ಅವರು ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಿರಲಿಲ್ಲ. ನಟನೆಯಲ್ಲಿ ಶ್ರದ್ಧೆಯಿತ್ತು. ಚಿಕ್ಕ ಪಾತ್ರವಾದರೂ ನಟನೆಯಲ್ಲಿ ಕುಂದು ಕಾಣಲು ಸಾಧ್ಯವಿರಲಿಲ್ಲ. 

ರೋಹಿತಾಶ್ವ ಕನ್ನಡ ಚಿತ್ರರಂಗದ ಧೀಮಂತ ನಟ ಎನ್ನುವುದರಲ್ಲಿ ಅನುಮಾನವಿಲ್ಲ. ಪ್ರಾಧ್ಯಾಪಕ ವೃತ್ತಿಗೂ, ದೊರೆತ ಪಾತ್ರಗಳಿಗೂ ನ್ಯಾಯ ಸಲ್ಲಿಸಿ, ನೆಮ್ಮದಿಯ ಜೀವನ ನಡೆಸಿದ ವ್ಯಕ್ತಿ ಅವರು. ಅವರಿಗಿಷ್ಟವಾದ ಪಾತ್ರ ಯಾವುದೆಂದು ಅವರು ಹೇಳುತ್ತಿದ್ದರೋ, ಇಲ್ಲವೋ, ನಟನೆ ಅವರ ಇಷ್ಟದ ಕೆಲಸವಾಗಿದ್ದಂತೂ ನಿಜ.

‍ಲೇಖಕರು Admin

November 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: