ಈ ಹೊತ್ತಿಗೆ ಬೇಕಾದ 'ನಂಜಿಲ್ಲದ ಪದಗಳು'

ನಂಜಿಲ್ಲದ ಮಾತಲ್ಲಿ ವೇದನೆಯ ಭಾವಗಳಿವೆ. . 
ಡಾ. ಎಂ.ಎಸ್. ಮಣಿ
ನೋವಿನ ದನಿಯ ಮಾತಲ್ಲಿ ವೇದನೆಯ ಆಲಾಪನೆಯಿದೆ. ವಿಷಾದದ ಮಾತಿನಲ್ಲೂ ಆರ್ತನಾದದ ಅರ್ಥದ ಮೇಳೈಕೆಯಿದೆ. “ನಂಜಿಲ್ಲದ ಪದಗಳ” ಲ್ಲಿ ಮಡುಗಟ್ಟಿದ ಮೌನವಿದೆ. ಉಸಿರುಗಟ್ಟಿಸುವ ಆರ್ದ್ರತೆಯಿದೆ. ಕವಿಯ ಪ್ರತಿ ಪದದಲ್ಲೂ ಸಣ್ಣದೊಂದು ಕಂಪನವಿದೆ. ಭಾವನೆಯ ತೀವ್ರತೆಯಿದೆ. ಹೇಳಿರುವುದಕ್ಕಿಂತ, ಹೇಳಿಕೊಳ್ಳಲಾಗದ ನೂರಾರು ಮಾತುಗಳಿವೆ. ಕೆಂಡದಂತಹ ಮಾತುಗಳನ್ನು ತಣ್ಣಗೆ ಹೇಳಿರುವ ಭಾವ ಅಪ್ಯಾಯಮಾನವೆನಿಸುತ್ತದೆ.
ಹೌದು, ಎನ್. ರವಿಕುಮಾರ್ ಅವರ ನಂಜಿಲ್ಲದ ಪದ ಗಳು ಕವನ ಸಂಕಲನದ ಪ್ರತಿಯೊಂದು ಕವನಗಳಲ್ಲೂ ಆರ್ತನಾದದ ತೀವ್ರತೆ ಎದ್ದು ಕಾಣುತ್ತದೆ. ಈಗಾಗಲೇ ಟೆಲೆಕ್ಸ್ ರವಿ ಎಂದೇ ಪತ್ರಕರ್ತರ ವಲಯದಲ್ಲಿ ಚಿರಪರಿಚಿತರಾಗಿರುವ ಶಿವಮೊಗ್ಗ ಜಿಲ್ಲೆಯ ಎನ್. ರವಿಕುಮಾರ್ ಕಾವ್ಯ ಲೋಕಕ್ಕೆ ಕಾಲಿರಿಸಿ, ಓದುಗರ ಮನದಲ್ಲಿ ಬಂಡಾಯದ ಕಿಡಿ ಹೊತ್ತಿಸಿದ್ದಾರೆ.

“ದೇವರ ಕೋಣೆಯಲ್ಲಿ ನಾನು ಉಸಿರುಗಟ್ಟಿದ್ದೆ
ಅಂಗಾಂಗಳ ಮೇಲೆ ದೇವರು ಕುಣಿದಿದ್ದ
ನನ್ನ ಕೆಂಪು ಒಡಲು
ಈಗ ಉರಿದು ಇದ್ದಲಾಗಿತ್ತು
ಕಣ್ಣೀರು ಕಣಿವೆಯಲ್ಲಿ ಧುಮಿಕ್ಕಿತ್ತು
ದೇವರು ಸುಮ್ಮನೆ ಇದ್ದ.
ಆ ದೇವರ ಸನ್ನಿಧಿಯಲ್ಲಿ ನರಕವೊಂದು ಕಂಡೆ
ನನ್ನ ರಕ್ತ ಮಾಂಸ, ಮೂಳೆಗಳ
ನೈವೇದ್ಯ ಇರಿಸಿದರು
ಅಗ್ನಿ ಕುಂಡದಲ್ಲಿ ಹವಿಗಾಗಿ ಸುರಿದು ಸುಟ್ಟರು…..”

ಎಂಬ ಸಾಲುಗಳು ಕಲ್ಲೆದೆಯನ್ನು ಕರಗಿಸುತ್ತದೆ. ಹೆಣ್ಣಿನ ಆರ್ತನಾದ ಬೆಲೆಯಿಲ್ಲದ ಸವಕಲು ಶಬ್ದವಾಗಿ ಹೋಗಿದೆ.

“ಕೋಣೆ ತುಂಬಾ ಚೆಲ್ಲಾಡಿದ ನೋಟುಗಳ ಆಯುತ್ತಿದ್ದೇನೆ
ಕಣ್ಣೀರ ಜೊತೆ
ಉಡಿ ತುಂಬುತ್ತಿಲ್ಲ, ಕಣ್ಣ ಕಲ್ಯಾಣಿ ಬತ್ತುತ್ತಿಲ್ಲ.
ತೆವಲು ತೀರದ ದಾಟಿದ ಮೇಲೆ
ನನ್ನ ಹೆಣ್ತನವನ್ನೀಗ ಹಳಿದು ಹರಾಜು ಕೂಗುತ್ತಿದ್ದಾನೆ.
ಸೂಳೆ. . . . .
. . . . . ಸೂಳೆ”

ಎಂಬ ಕವನದ ಸಾಲುಗಳಲ್ಲಿ ಅಸಹಾಯಕ ಹೆಣ್ಣಿನ ಆರ್ದ್ರತೆಯಿದೆ. ಗಂಡೊಂದು ಹೆಣ್ಣನ್ನು ಕಟು ನುಡಿಗಳಿಂದ ಹಿಂಸಿಸುವ, ಭೋಗಿಸುವ ಪುರುಷ ದಾಷ್ಟ್ಯತೆಯೊಂದು ಮಾರ್ದನಿಸುತ್ತವೆ.
ರವಿಕುಮಾರ್ ಅವರು, ಈ ಮೂಲಕ ತಮ್ಮ ಮನಸ್ಸಿನಲ್ಲಿ ಅವಿತಿಟ್ಟುಕೊಂಡಿರುವ ತುಮುಲಗಳನ್ನು, ಒಡಲಲ್ಲಿ ಹುದುಗಿಸಿಟ್ಟುಕೊಂಡಿರುವ ಭಾವಗಳ ಕೆಂಡದ ಮಳೆಯನ್ನೇ ಸುರಿಸಿದ್ದಾರೆ.
ಅದೇ ಸುಗಂಧಗಾಳಿ ಬೀಸುತ್ತಿದೆ.

“ಓ . . . . . ಅವಳು ಬಂದಂತೆ ಕಾಣುತ್ತಿದೆ.
ನೀವಿನ್ನು ಹೊರಡಿ. .
ನಾನೀಗ ಅವಳ ಕೋಮಲ ಎದೆಗಳಿಗೆ ಕಿವಿಗೊಡಬೇಕು
ತೋಳುಗಳಲ್ಲಿ ಸೆರೆಯಾಗಬೇಕು
ಮತ್ತದೇ ಹುಸಿ ಪ್ರೀತಿಯ ಅಮಲಿನಲ್ಲಿ ಕರಗಬೇಕು…”

ಎಂಬ ಪದ ಪುಂಜದಲ್ಲಿ ಪಲ್ಲವಗಳು ಪಲ್ಲವಿಸಿವೆ. ಇಲ್ಲಿ ಪದಲಾಸ್ಯ, ಅವುಗಳ ಅರ್ಥವತ್ತಾದ ರಸ ಸ್ರವಿಸುವ ಭಾವ ಎರಡೂ ಮಿಳಿತಗೊಂಡು ಓದುಗನ ಮನದಲ್ಲಿ ಕಬ್ಬಿಗನ ಕಾವ್ಯದ ಕಂಪು ಸೂಸುತ್ತದೆ. ವೇದನೆಯ ನೆನಪುಗಳ ಮೂಟೆಹೊತ್ತು, ನೆನೆ ನೆನೆದು, ಒಮ್ಮೊಮ್ಮೆ ಅತ್ತು, ಮನದಲ್ಲೇ ನೋವುಂಡು, ಕಡೆಗೆ ಕಣ್ಣೀರಿಟ್ಟು ಉಮ್ಮಳಿಸುವ ಪರಿ ನಿಜಕ್ಕೂ ಓದುಗರ ಹೃದಯವನ್ನು ಕಲಕದೆ ಇರದು. ರವಿಕುಮಾರ್ ಅವರು ಇಂತಹ ಪದದಾಟದಲ್ಲಿ, ಕಟುವಾಸ್ತವದ ನಿರೂಪಣೆಯಲ್ಲಿ ಗೆಲ್ಲುತ್ತಾರೆ.

“ಯಾಕಿಷ್ಟು ದುಃಖ ದೊರೆಯೇ ? ಎಂದೆ.
ಇದು ಬರೀ ದುಃಖವಲ್ಲ, ಕರುಳ ಕೋಣೆಯ ಮಹಾ ದುಃಖ
ಮಹಾ ಮನೆಯಲ್ಲಿ ರಜ ತುಂಬಿದೆ.
ಹುಳ, ಹುಪ್ಪಟಿಗಳು, ಕಾಡು ಮೃಗಗಳು, ಘೀಳಿಡುತ್ತಿವೆ.
ಕಲ್ಲು, ಮಣ್ಣು, ಕಂಚಿನ ನನ್ನ ಮೂತಿ ಒಡೆದು
ಚೂರು ಚೂರು ಮಾಡಿದ್ದಕ್ಕೆ ದುಃಖವಿಲ್ಲ
ಅಧಿಕಾರದ ಪಲ್ಲಂಗದ ಮೇಲೆ
ದೇವರ ಪಲ್ಲಕ್ಕಿಯ ಮೇಲೆ ಹಾಲುಗಲ್ಲದ ಹಸುಗೂಸುಗಳ
ಹೆಣ್ಣು ಮಕ್ಕಳ ಒಡಲು ಹುರಿದು ಕೊರಳ ಹಿಸುಕಿ
ಕೇಕೆ ಹಾಕುವಾಗ ನನ್ನ ಕರುಳ ಬಳ್ಳಿ ವಿಲ ವಿಲಗೊಳ್ಳುತ್ತಿದೆ…”
ಎಂದರು.

ಇಲ್ಲಿ ಕವನಗಳು ಕೇವಲ ಪದಪುಂಜದ ಗುಚ್ಛವಾಗಿರದೆ, ಎದೆಯ ಕೋಣೆಯ ಭಾವನೆಗಳಿಗೆ ಜೀವ ತುಂಬಿ ಬೆರೆಸಿ ಅರ್ಥವನ್ನು ಮೇಳೈಸಿದೆ. ಅಷ್ಟೇ ಅಲ್ಲದೆ ಓದುಗನ ಎದೆಯಲ್ಲಿ ಬಂಡಾಯದ ಕಿಡಿಯನ್ನು ಹೊತ್ತಿಸಬಲ್ಲವು. ಸಮಾಜದ ಆಗು-ಹೋಗುಗಳು, ನಡೆಯಬೇಕಾದ ಮಾರ್ಗದೆಡೆಗೆ ಬೆಳಕು ಹರಿಸುತ್ತಾ, ಬುದ್ಧ ಕಾರುಣ್ಯವನ್ನು ಹೊತ್ತು ಹೆಣ್ಣನ್ನು ಗೌರವಿಸಬೇಕೆಂದು ಸಾರುತ್ತಾ ರವಿಕುಮಾರ್ ಕವಿತೆಗಳು ಸಾಗಿವೆ.
ರವಿಕುಮಾರ್ ಅವರ ಚೊಚ್ಚಲ ಕವನಸಂಕಲನ ನಂಜಿಲ್ಲದ ಪದಗಳು ಹಸ್ತಪ್ರತಿಗೆ ನಾಡಿನ ಕನ್ನಡ ಸಾಹಿತ್ಯ ಲೋಕದ ಪ್ರತಿಷ್ಠಿತ “ವಿಭಾ ಸಾಹಿತ್ಯ ಪ್ರಶಸ್ತಿ” ಸಂದಿರುವುದು ಸಲ್ಲಬೇಕಾದದ್ದು ನ್ಯಾಯವೂ ಆಗಿದೆ. ಅರ್ಥಪೂರ್ಣವೂ ಕೂಡ.
ಕವಿ ಇಲ್ಲಿ ಸಮಾಜದ ಕಣ್ಣು ಕಾಣುವ ಮತ್ತು ಕರುಳಾಗಿ ಮಿಡಿಯುವ ಕೆಲಸದಲ್ಲಿ ನಿರತನಾಗಿದ್ದಾನೆ. ಇದು ನಿಜಕ್ಕೂ ಓರ್ವ ಕವಿ ತನ್ನೊಳಗೆ ಅವಿರ್ಭವಿಸಿಕೊಳ್ಳಬೇಕಾದ ಕಾವ್ಯ ಗುಣ.
ನಂಜಿಲ್ಲದ ಪದಗಳು ಕವನ ಸಂಕಲನ ಸಾಕಷ್ಟು ವಿಚಾರಗಳನ್ನು ಕೇಂದ್ರೀಕರಿಸಿ ಅಕ್ಷರ ರೂಪ ತಳೆದಿದೆ. ಸಾಕಷ್ಟು ಒಳನೋಟಗಳು, ಭಾವನೆಗಳೊಂದಿಗಿನ ಸಂವಾದ, ಪದಗಳೆಡೆಗಿನ ಹಿಡಿತವನ್ನು ಸಾಧಿಸಿದೆ.
ಎನ್. ರವಿಕುಮಾರ್ (ಟೆಲೆಕ್ಸ್) ಅವರ ನಂಜಿಲ್ಲದ ಪದಗಳು ಕವನ ಸಂಕಲನ ಮನಸ್ಸಿಗೆ ಹಿಡಿಸುತ್ತದೆ. ಇಂತಹ ಹಲವಾರು ಕವನ ಸಂಕಲನಗಳು ಹೊರಬರಲಿ.
ನಂಜಿಲ್ಲದ ಪದಗಳು ಕವನ ಸಂಕಲವನ್ನು ಹೊರ ತರುವ ಮೂಲಕ ಬೆಂಗಳೂರಿನ ಬಹುರೂಪಿ ಪ್ರಕಾಶನವು ಸಮಾಜಮುಖಿ ಕೆಲಸವನ್ನು ಅಸ್ಥೆಯಿಂದ ಮಾಡಿರುವುದು ಅಭಿನಂದನೀಯ. ಈ ಹೊತ್ತಿಗೆ ನಂಜಿಲ್ಲದ ಪದಗಳು ಕಾವ್ಯಲೋಕದ ಹೊಳಹು ಮತ್ತು ಸಮಾಜದ ಕನ್ನಡಿಯಂತೆ ಫಲಿಸುತ್ತಿದೆ.
ಈ ಕೃತಿ ಕೊಳ್ಳಲು-
https://avadhimag.in/?page_id=201769

‍ಲೇಖಕರು avadhi

March 23, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: