ಈ ಹೆಣಗಳನ್ನು ಏನು ಮಾಡೋದು?..

pravara

ಪ್ರವರ ಕೊಟ್ಟೂರು

ಕವಿ. ‘ಅಜೀಬು ದುನಿಯಾ’ದ ಹುಡುಗ. ಕೊರಳಲ್ಲಿ ಸದಾ ಕ್ಯಾಮೆರಾ. ಕೈನಲ್ಲಿ ಪುಸ್ತಕ.

ಸರಿಯಾದ ಪ್ರಶ್ನೆ ಎತ್ತುವುದು ಡಿ ಎನ್ ಎ ನಲ್ಲಿಯೇ ಇರುವ ಗುಣ.

ಇತ್ತೀಚಿಗೆ ನಡೆದ ಟೋಟೋ ಯುವ ಬರಹಗಾರ ಪ್ರಶಸ್ತಿ ಆಯ್ಕೆಯಲ್ಲಿ ಅಂತಿಮ ಸುತ್ತು ತಲುಪಿದಾತ.

ಯುದ್ಧ ಮುಗಿದ ಸಂಜೆ
ಪಡುವಣದ ದಿಕ್ಕಿನ ಅದೇ ಒಣಕಲು ಟೊಂಗೆಯ ಆಚೆ,
ರಕ್ತ ಕುಡಿದಂತೆ ಕೆಂಪಗೆ~~~ ನಾಲಿಗೆಯಲ್ಲಿನ್ನು ರುಚಿ ಉಳಿದಿತ್ತೋ ಏನೋ
ಚಪ್ಪರಿಸುತ್ತಿದ್ದ ಸದ್ದಿಗೆ ಹಾವುಗಳು ದನಿ ಕಳೆದುಕೊಂಡು
ದಿಕ್ಕಾಪಾಲಾದವು; ಒಂದು ಕಡೆ ಮೂತಿ-ಇನ್ನೊಂದು ಕಡೆ ಬಾಲ
ದೇಹದ ಸಂಬಂಧ ಕಡಿದುಕೊಂಡವು

rose cutಈ ಹೆಣಗಳನ್ನು ಏನು ಮಾಡೋದು?
ಒಂದಕ್ಕೂ ಜೀವ ಇಲ್ಲ! ಇದ್ದಿದ್ದರೆ ಬಂದೂಕು ಕೊಟ್ಟು
ಎತ್ತರದ ತಂತಿ ಬೇಲಿಯ ಬಗಲಿನಲ್ಲಿ ಕೂರಿಸಬಹುದಿತ್ತು
ಗಡಿ ಕಾಯೆ, ಗುಡಿ ಕಾಯೆ ಕಾಯಲಾರೆಯೆ ಸಾಯೆ!!!
ತಪ್ಪಿಸಿಕೊಂಡು ಎಲ್ಲಿ ಓಡಿಯಾನು
ಕಣ್ಣು ನಿದ್ರೆದಪ್ಪುವವರೆಗೂ ಬಯಲು, ದಾಟಿದರೆ ಘೋರ ಮರಳು
ಜೀವವಿದೆ ಅನ್ನುವುದಾದರೆ ಸಾಯಬೇಕಲ್ಲ ಹೇಗಾದರೂ
ಕೊಲ್ಲುವ ಆಯ್ಕೆ ಎದುರು
ಯಾರನ್ನು?
ಅಮ್ಮನೋ ಅಕ್ಕನೋ ಸೋದರನೋ ಅಪ್ಪನೋ
ಅಥವಾ ಸ್ನೇಹಿತನೋ
ಅವರಲ್ಲಿ ಯಾರಾದರೂ ಆಗಿರಬಹುದು
ಯುದ್ಧವೆಂದ ಮೇಲೆ ಯಾರದರನ್ನು ಕೊಲ್ಲಬೇಕಾಗುತ್ತದೆ
ಅಥವಾ
ಕೊಲ್ಲಿಸಲೇಬೇಕಾಗುತ್ತದೆ

ಈ ಹೆಣಗಳನ್ನು ಏನು ಮಾಡೋದು?
ಹೆಣಗಳ ಖಾಕಿ ಪ್ಯಾಂಟುಗಳ ಬೆದಕುತ್ತಿದ್ದ ಹುಡುಗನಿಗೆ
ಏನೇನೋ ಸಿಕ್ಕಿತು; ಏನಿರಬಹುದು!
ಸುಮಾರು ಮೂವತ್ತರ ಆಸುಪಾಸಿನ ಸುಂದರ  ಹೆಣ್ಣಿನ ಫೋಟೊ
ಹಿಂದುಗಡೆ ಅವಸರದಲ್ಲಿ ಬರೆದಿರಬಹುದಾದ ಹೆಸರಿದೆ
ಆಕೆಯದಾ! ಇರಬಹುದು
ಇನ್ನೂ ಓದದ ಪತ್ರವೂ ಇದೆ, ಇದರ ತುಂಬ ಬರೀ ಪ್ರೀತಿಯೇ ತುಂಬಿದೆ
ಬಂದೂಕು ಹಿಡಿದ ಆತ ಪತ್ರವ ಮರೆತುಬಿಟ್ಟ…
ಎಷ್ಟು ದೂರದ ಅಂಚೆ ಡಬ್ಬಿಯದೋ
ಮುದ್ದು ಮುದ್ದಾಗಿದ್ದ ಅಕ್ಷರಗಳಿಗೆ ಆ ಹುಡುಗ ಹಗುರ ಚುಂಬಿಸಿದ,
ಅರ್ಧ ಸುಟ್ಟ ಸಿಗಾರ್, ಇತ್ತ ತುದಿಯಲ್ಲಿ ಎಂಜಲಿನ್ನೂ ಆರಿಲ್ಲ
ಇದೇನಕ್ಕೆ? ಅಲ್ಲೇ ಬಿಸಾಡಿದ

ಇಲ್ಲಿರುವ ಅಷ್ಟೂ ಹೆಣಗಳನ್ನು ಅತಿಯಾಗಿ ಪ್ರೀತಿಸಿದ್ದೆಂದರೆ
ಬೋಳು ಕತ್ತಿನ, ಪುಕ್ಕಗಳ ಕೆದರಿಕೊಂಡ ಹದ್ದು.
ಹೆಣಗಳ ಹೃದಯಕ್ಕೆ ಅವುಗಳಲ್ಲಿ ಬೆಲೆ ಹೆಚ್ಚು,
ಎದೆ ಬಗೆಯುವ ಅವುಗಳು ಮೊದಲು ಮಾತನಾಡಿಸೋದು
ಎದೆಯಲ್ಲಿ ಜೈಲಿನ ಕಂಬಿಗಳಂಥಾ ಎಲುಬಿನ ಹಂದರವನ್ನು; ಒಳಗೆ ಖೈದಿಯಂಥಾ ಹೃದಯ
ಖುಷಿಯಿಂದ ಎದುರುಗೊಂಡು
ಎಂಥಾ ಅಪರಿಚಿತ ಆಪ್ತ ಭೇಟಿ
ಎದೆಯೊಳಗಿಂದ ಬಂಧ ಮುಕ್ತ ಹೃದಯ

ಕಣ್ಣುಗಳ ಹೆಕ್ಕಿ, ಜೋಪಾನವಾಗಿ
ನರಗಳ ಸಹಿತ,
ನೋಡಬಹುದು ಗ್ರೆನೇಡು, ಟ್ಯಾಂಕರ್ರು, ಹೆಂಡತಿ, ತೊಟ್ಟಿಲೊಳಗಿನ ಕೂಸು,
ಹಸಿರು ಬಣ್ಣದ ನೋಟು
ಉಲ್ಲಾಸ ತುಂಬಿಕೊಂಡ ಗೋಧಿಯ ಹೊಲ, ತನ್ನ ಶರ್ಟು ತೊಟ್ಟ ಬೆರ್ಚಪ್ಪ,
ಸಿಗರೇಟು, ವಿಸ್ಕಿ, ತೋಳಿಗೆ ತಾಯತ ಕಟ್ಟುವ ಅಮ್ಮ,
ಬೆತ್ತದ ಮಂಚದ ಮೇಲೆ ಗೂರಲು ಹಿಡಿದ ಅಪ್ಪ…
ಎಲ್ಲರ ಕಣ್ಣುಗಳನ್ನು ಜೋಳಿಗೆಗೆ ಸುರಿದುಕೊಂಡ
ಹದ್ದಿನ ಮುಖದಲ್ಲಿ ವ್ಯಾಖ್ಯಾನಿಸಲಾಗದ ಸಂಕಟ.

ಈ ಹೆಣಗಳನ್ನೆಲ್ಲಾ ಏನು ಮಾಡೋದು?
ಯಾರ ಶಾಪ? ಇಷ್ಟೊಂದು ರಕ್ತ!
ನರ ಬಲಿ ಕಾಯ್ದಿತ್ತೇ ದೇವರು; ಸಾಕೆನಿಸಲಿಲ್ಲ ಹೂ ಹಣ್ಣು.
ಚಿತೆಗೆಂದು ಇಡೀ ಕಾಡೇ ನಡೆದು ಬಂದಿದೆ
ಜೋಕಾಲಿ ಕಟ್ಟಿದ್ದ ಕೊಂಬೆಗಳೂ ಇದ್ದಾವೆ
ಇನ್ನೂ ಜೀಕೊಡೆಯುತ್ತಲೇ ಇವೆ…

‍ಲೇಖಕರು Admin

February 5, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. kumbar Veerabhadrappa

    ಮಗ ಕವಿತೆ ಪರವಾ ಇಲ್ಲ, ಆದರೆ ಈ ವಯಸ್ಸಿನಲ್ಲಿ ಇಂಥ ಭೀಭತ್ಸಕಾರಿ ಕವಿತೆಗಳನ್ನು ಯಾಕೆ ಬರೆಯುವಿ? ಸ್ವಲ್ಪ ರೋಮ್ಯಾಂಟಿಕ್ಕಾಗಿ ಯೋಚಿಸಲು ಯತ್ನಿಸು,
    ಡ್ಯಾಡ್ ಕುಂವೀ

    ಪ್ರತಿಕ್ರಿಯೆ
    • pravara kottur

      ಖಂಡಿತಾ ಬರೀತಿನಿ… ಥ್ಯಾಂಕ್ಸ್ ಅಪ್ಪಾಜಿ

      ಪ್ರತಿಕ್ರಿಯೆ
  2. Maithri Merkaje

    ಭಯಾನಕ… ಅದ್ಭುತ …. ಚೆಂದ ಪ್ರವರ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: