ಸಿಂಪಲ್ಲಾಗೊಂದ್ Love letter

nalina d1

ನಳಿನ ಡಿ

ಅಂಕಣಕಾರರು, ಕವಯತ್ರಿ 

ಈಗಾಗಲೇ ಇವರ ಹಲವಾರು ಕವಿತೆ, ಲಹರಿ ಅವಧಿಯಲ್ಲಿ ಪ್ರಕಟವಾಗಿದೆ.   

she paintingಜಲಗಾರ!  ಏನನ್ನಲಿ ಮತ್ತೆನೀ ಬಂದ ದಿನದಿಂದ, ಮನದೊಳಗಿದ್ದ ಅಷ್ಟ ಅಶುದ್ಧಿಗಳನ್ನೂ ಪರಿಪೂರ್ಣವಾಗಿ ಗುಡಿಸಿ, ಶೋಧಿಸಿ ನನ್ನೊಳಗಿನ ಒಲವಿನೊಂದಿಗೆ ಅನುಸಂಧಾನಕ್ಕೆ ತೆರೆದುಹೋದೆ ಕಿಟ್ಟದೊಂದಿಗೆ ಕಟ್ಟಿದ್ದ ಕಣ್ಣಗೂಡುಗಳ.  ಸ್ತ್ರೀಸಾಮಾನ್ಯನಂತೆ ನೀನು ಕೇಳಹೋಗಲಿಲ್ಲ ನೋಡು ಅವೇ ಪ್ರಶ್ನೆಗಳನ್ನ, ಅದಕ್ಕೆ ನೀನೊಬ್ಬನೇ ಪರಿಪೂರ್ಣನೆನಿಸಿ ಅರ್ಥಪೂರ್ಣವಾಗಿ ನಿವೇದಿಸಿಕೊಳ್ಳುತ್ತಿದ್ದೇನೆ.  ಆಕ್ಷೇಪಣೆಗಳೆಂದು ನೀನು ಒಂದಾದರೂ ಟೀಕೆ ಎತ್ತಿದ್ದರೆ, ಕಾಲ ಹೀಗೆ ಒದಗುತ್ತಿರಲಿಲ್ಲಚಕ್ಕಂಬಕ್ಕ ಹಾಕಿಕೊಂಡು ನಿನ್ನ ಎದುರಾಬದುರು ಕೂರಿಸಿಕೊಂಡು ಅಂತರ್ಮಿಲನಕ್ಕೆ ಬೊಗಸೆತುಂಬಿ ನಾ ಕರೆಯುತ್ತಿರಲಿಲ್ಲ. 

ಈಗಲೂ ಕಾಲ ಮಿಂಚಿಲ್ಲ, ಸಾಮಾನ್ಯನಂತೆ ಒಂದಾದರೂ ಯಕಶ್ಚಿತ್ ಪ್ರಶ್ನೆಯನ್ನು ಒಗೆದುಬಿಡು.  ಇಷ್ಟು ವರ್ಷಗಳ ಗ್ಯಾಪಿನಲ್ಲಿ ನೀನು ಎಲ್ಲಾದರೂ, ಯಾವ ಹೊತ್ತಿನಲ್ಲಾದರೂ, ನನ್ನ ಹೊರತಾಗಿ ಇನ್ಯಾವನದೋ ಮಖವನ್ನು ಎದೆತುಂಬಾ ತುಂಬಿಕೊಂಡು, ತಾಸುಗಟ್ಟಳೇ ರಸಿಕತನ ಠೇಂಕರಿಸಿ ಅವನದೆಲ್ಲವನ್ನು ಮೇಲೇರಿಸುವ ಅಂಥಾ ಉನ್ಮಾದಕ ಕ್ಷಣಗಳನ್ನು ಮಾತನಾಡುವ ಕಲ್ಪನೆ ಕೂಡಾ ಮಾಡಿಲ್ಲವೇಕೆ? ಎಂದು.  ಕೇಳು ಅಥವಾ ಕೇಳದೆ ಇನ್ನು ಮುಂದೆಯೂ ಹೀಗೆಯೇ ಇರು, ಆದರೆ ನಿನ್ನ ಮೌನದಲ್ಲಿರುವ ಸಾಮೀಪ್ಯ, ಅನಾವಶ್ಯಕ ಅಪರಿಚಿತ ಆತಂಕಕ್ಕೀಡುಮಾಡುವಘಾಸಿಯಾಗಿಸುವ ಯಕಶ್ಚಿತ್ ಪಾಸ್ಟ್ , ಗತದ ಬಗ್ಗೆ ಇಲ್ಲವೆಂಬುದೇ ನನಗೆ ದೊಡ್ಡ ಸಂತೋಷ. 

ಒಂದು ಹೆಣ್ಣಿಗೆ ಅಸಲಿ ಸಂಭ್ರಮವೆಂದರೆ, ಮದುವೆಗೂ ಮೀರಿದ ಸಂಭ್ರಮವೆಂದರೆ ಮಿಲನದ್ದು ಅಂದುಕೊಂಡೆಯಾಬೆಪ್ಪುತಕ್ಕಡಿ ಹುಡುಗಾ, ನಾನು ಜಂಗ್ಲೀ ಹುಡ್ಗೀ ಮಗಾ.  ನಿನ್ನಾಣೆಗೂ ಅವೆಲ್ಲಾ ನನ್ನ ಸೆರಗೊಳಗೆ ಕೌಂಟು ಮಾಡಿಟ್ಟುಕೊಂಡಿರೋ ವಿಷಯಗಳಲ್ಲ ಅಂತಲ್ಲಾ.  ಆದರೆ ನನಗೇ ಬೇಕು ನೀನುಆಗ-ಈಗ-ಯಾವಾಗಲೂ!.  ನಿನ್ನನ್ನ ನಿಮ್ಮಮ್ಮ ಕಾಂಪ್ಲಿಮೆಂಟರಿಯಾಗಿ ಕೊಡುತ್ತಾಳೆ ಅಂದರೆ ಆಕೆಗೆಷ್ಟು ಬೇಕೋ ಡೌರಿ ಕೊಟ್ಟು ನಿನ್ನ ನನ್ನವನಾಗಿಸಿಕೊಂಡುಬಿಡ್ತೀನೋ.

ನಿನಗೆ ಅಮ್ಮನಿದ್ದಾಳೆ ಅಂತ ನೀನ್ಯಾವತ್ತು ಹೇಳೇ ಇಲ್ಲ, ಅಪ್ಪನಿದ್ದರೆ ಹೇಳು, ಯಾವ ದೇಶದ ಹಳೆ ವೈನ್ ಕುಡಿಸಬೇಕಂತ, ಪಕ್ಕಾ ಹುಚ್ಚೇರಿಸಿ ಕೇಳುತ್ತೇನೆ, ನಿಮ್ಮ ಮಗನ್ನ, ನನಗೇ ಕೊಟ್ಟುಬಿಡೋದಾದ್ರೆ, ವೈನ್ ತುಂಬಿದ ಬಾಟಲುಗಳಿಗೆಲ್ಲಾ ಸದಾ ಕಾಲ ನಿಮ್ಮ ಮನೆ ಬಿಟ್ಟು ಕದಲದ ಹಾಗೆ ಆಜ್ಞೆ ಮಾಡುತ್ತೇನೆ ಅಂತ.   ನಿನ್ನ ಕೈಲಿ ಮೊದಲ ಬಾರಿಗೆ ಕಂಡ ಪೊರಕೆ ಹೇಳಿದ ಸತ್ಯಗಳು ನೂರೆಂಟು.  ನಿನ್ನ ಅಮ್ಮ ನಿನ್ನಿಂದ ದೂರವೇ ಉಳಿಯೋದಕ್ಕೆ ಸಾವಿರ ಕಾರಣ ಇರಲಿ ಬಿಡೋ, ಒಮ್ಮೆ ನನ್ನ ಬುಟ್ಟೀಲಿ ನೀನು ಬಿದ್ದು ನೋಡು, ಎಂಥಾ ಮಿಕಾನೂ ಬಿಡಾಕಿಲ್ಲ, ಹಾಗೇ ನಿನ್ನಮ್ಮನ್ನು ನಿನ್ನೊಂದಿಗೆ ಒಗ್ಗೂಡಿಸಿ ಬಿಡ್ತೀನಿ. 

nalini dಮೊದಲು ನಿನ್ನ ನೋಡಿದಾಗ ನನ್ನ ಸುತ್ತಾ ಅಪದ್ಭಾಂದವರ ದಂಡೇ ಇತ್ತು, ಈಗೀಗ ಎಲ್ಲಾ ಆಟೋಪಗಳೆಡೆಗೆ ಆಸಕ್ತಿ ಸತ್ತುಹೋದಂಗಾಗಿ, ನಿನ್ನ ಸುತ್ತಲಿನ ಚಹರೆಗಳು, ನಿನ್ನ ಗತಿಗಳು, ಎಲ್ಲವನ್ನೂ ಅತಿಕ್ರಮಿಸಿ ಈಗ ನನಗೆ ಕಾಣಸಿಗುವುದು ಬರೇ ನೀನು.  ನಿನ್ನ ಕೆಂಚುಕಣ್ಣು, ಮಾಮೂಲಿ ಕ್ರಾಪ್ ಗಿಂತ ಉದ್ದವಿರುವ ಕೂದಲು, ವಿಚಿತ್ರ ಶರ್ಟ್ ಪ್ಯಾಂಟ್ ಗಳೊಳಗೆ ತೂರಿಕೊಂಡ ಅಸ್ತಿತ್ವ ಅರಸುವ ಅನಾಮಿಕ ಸೂತ್ರಧಾರಿ.  ನನ್ನನ್ನು ಹೀಗೆ ಕಲ್ಪಿಸಿಕೊಳ್ಳ ಹತ್ತಿರುವ, ಅನಾಮಿಕ ಸೂತ್ರಧಾರಿ ಜಲಗಾರನಿಗೆ ಸಿಕ್ಕು ಆಕಾರ ಕಳಕೊಂಡ ಆಡಂಬೊಲ. 

ಎಲ್ಲರ ಬೇಗೆಗೆ, ಅನ್ಯರ ನೋವಿಗೆ ನುಡಿಕಾರಿ ನೋಯುವ ನೀನು, ನನ್ನೊಳು ನೋವಾಗಿ ಹುಟ್ಟಿಹಾಕಿರುವೆ ಪ್ರೇಮವೆಂಬ ಪರೀಕ್ಷೆಯ. ಅಥವಾ ಕಾರಣವಿಲ್ಲದ ವಿನಾಕಾರಣ ಹುಟ್ಟಿಕೊಂಡಿದೆ ತಬ್ಬಲಿ ಬಳ್ಳಿ ನಿನ್ನೆಡೆಗೆ ಸೇರಲು ಬಡಿದಾಡುತಿದೆ ಬಾಗಿ ಬಾಗಿ.  ವೃತ್ತ, ಪರಿಧಿ, ನೀಲ ನಕಾಶೆ ಯಾವುದರೊಳಗೂ ಅವಿತಿರದ ಹೊಸ ಆಕಾರವಿಲ್ಲದ ಭಾವ ಎದೆಯಿಂದ ಎದ್ದು ಮೋಡವಾಗುತ್ತಿದೆ, ಅವನ ಪ್ರಭೆಗೆ ಸುಟ್ಟುಹೋಗುತಿರುವ ನನ್ನ ಉಳಿಸಲು ಕೊಂಚ ತುಂತುರು ಸುರಿಸಿ ಉಸಿರಾಡಗೊಡುತಿದೆ.  ನೀ ಗುಡಿಸಿದ ಎದೆಯಲ್ಲಿ ಶುದ್ಧಳಾಗಿ ಕುಳಿತು ಕೇಳುವೆ ಜಲಗಾರ, ಬಾ ಶುದ್ಧವಾಗಿ ಬಳಕೆಯಾಗುವ, ಒಬ್ಬರಿಗೊಬ್ಬರು ಬಡಿದಾಡದೆ ಪೂರ್ಣದೆಡೆಗೆ ಬಲಗಾಲಿಟ್ಟು ನಡೆವ. 

ನಿನ್ನ ಮೊದಲುಗಳನ್ನೆಲ್ಲಾ ನೀನು ಯಾರಿಗಾದರೂ ಕೊಟ್ಟುಬಿಟ್ಟಿದ್ದರೆ, ನನಗೇನೂ ಕನಿಕರವಿಲ್ಲಾ, ಆದರೆ ನನ್ನ ಮೊದಲುಗಳೆಲ್ಲಾ ನಿನ್ನ ಮುದ್ದು ಕಣ್ಣುಗಳಲ್ಲಿ ನೋಡುತ್ತಾ ಸಂತಸಪಡಬೇಕಿದೆ ನಾನು.  ಯಾರಿರಲಿ, ಇಲ್ಲದಿರಲಿ, ನಾನು ನಾಳೆ ಇಲ್ಲವಾಗುವ ಕಾಲದ ಯೋಚನೆಯಿಲ್ಲ.  ಕಾಲದ ಮರ್ಮದಲ್ಲಿ ಸುಳಿವು ಕೊಡದ ಸುಳಿಗಳೊಳಗೆ ನೀನು ನನ್ನ ಮುಂದೆ ಸುಳಿದು ಹೋದೆಯಲ್ಲಾ.. ನಿನ್ನ ಕರ್ಮದ ಭಕ್ತಿ –ಭಾವಕ್ಕೆರಗಿ ನಾನು ಒಪ್ಪಲಿಲ್ಲ, ಎಲ್ಲಾ ಗಂಡಸರೂ ಪೊರಕೆ ಹಿಡಿದು ಮನೆಗುಡಿಸುವುದನ್ನು ನಾನು ಬೆಳ್ಳಂಬೆಳಿಗ್ಗೆ ವಾಕಿಂಗ್ ಹೋಗುವಾಗ ನಿತ್ಯ ನೋಡಿದ್ಡೇನೆ.  ಮನೆಗೊಬ್ಬ ಮುಖ್ಯ ಸದಸ್ಯನಾದಮೇಲೆ, ಮನೆಯ ಗೌರವ ಕಾಪಾಡಲು ಗುಡಿಸುವುದರಲ್ಲೇನಿದೆ ದೊಡ್ಡ ವಿಚಾರ.  ಅದಕ್ಕಿಂತ ಮೊದಲು ನಮ್ಮೊಳಗಿನದ ನಾವು ಗುಡಿಸಿಕೊಳ್ಳದೇ ಹೋದರೆ ದೇಶವನ್ನು ಗುಡಿಸಿ ಕಟ್ಟೆಗೆ ಹಾಕಿ ಒಳಗೊಳಗೆ ಉದ್ಧಾರವಾಗುವುದು ಅಸಾಧ್ಯವಲ್ಲವೇನೋ ಗೆಳೆಯ. 


ಅದೇಕಷ್ಟು ಸಮಸ್ಯೆಗಳು ಅಂತೀಯಾ, ಪಿಯುಸಿ ಡುಂಕಿ, ಟೈಪಿಂಗ್, ಶಾರ್ಟ್ ಹ್ಯಾಂಡ್ ಜೊತೆಗೆ ಅನಿಮೇಶನ್ ಕೋಚಿಂಗ್ ನಲ್ಲೂ ನಾಲಾಯಕ್ಕು ಮಾರ್ಕ್ಸ್ ತಗೊಂಡು, ಅದ್ಯಾವುದೋ ಹುಡುಗನ ಪ್ರೇಮವೆಂಬ ಅಫೀಮು ಕುಡಿಸಿಕೊಂಡಿದ್ದೆ.   ಸುಮ್ಮನೆ ಹೇಳಿಬಿಡಬಹುದು, ಬ್ಯಾಡ್ ಟೈಮ್, ಗುಡ್ ಟೈಮ್, ಆದರೆ ನನ್ನ ಅಷ್ಟೂ ಕಷ್ಟಗಳಿಂದ ಹೊರಗೆ ನನ್ನನ್ನು ನಾನೇ ಎಳೆದುಕೊಂಡು ಬರಬೇಕಿತ್ತಲ್ಲಾ, ಅದಕ್ಕೆ ಜಂಘಾಬಲವೇ ಹಿಡಿಯಾಗಿಸಿಕೊಂಡಿದ್ದೆ,  ಆ ಕ್ಷಣದಲ್ಲಿ ನೀನು ಮುಗುಳ್ನಕ್ಕೆ, ಗೊತ್ತೋ ಗೊತ್ತಿಲ್ಲದೆಯೋ ನೀನು ನನಗೋ, ಇನ್ಯಾರಿಗೋ ಹುರಿದುಂಬಿಸಿದ್ದು ಕೇವಲ ನಂಗೇ ಅಂತ ಪಕ್ಕಾ ನಂಬಿಬಿಟ್ಟೆ ಕಣೋ.  ಮತ್ತೇ ಮತ್ತೇ ಈ ಕಾಲೇಜಿಗೆ, ಇದೇ ಗ್ರೌಂಡಿಗೇ, ಬರೆದು ಹೋಗು ಹಾಕಿ, ಫುಟ್ಬಾಲ್ ಕ್ರೀಡಾಂಗಣದ ಚೌಕಗಳ, ಗುಡಿಸಿ ಸ್ವಚ್ಛವಾಗಿಸು ಕಾಲೇಜು ಗ್ರೌಂಡ್ ನಷ್ಟೇ ನೀಟಾಗಿ ನನ್ನ ಹೃದಯವಾ. 

love rainಕಣ್ಣಿನಲ್ಲಿ ಹುಟ್ಟಿದ ಪ್ರೀತಿಗೆ ದಿನಗಟ್ಟಳೇ ಕಾಯಬೇಕಾ ಗುರುವೇ..  ದಂಡಿಗೆ ದಂಡೇ ನನ್ನ ಹಿಂದೆ, ಈಗ ನಾನು ನಿನ್ನ ಹಿಂದೇ.  ಎಷ್ಟು ದೊಡ್ಡವನಾದರೇನು ವಿಐಪಿ ಹುಡುಗಾ, ಪೊರಕೆ ಕೈಲಿದ್ದ ಮೇಲೆ ಜಲಗಾರನೇ.  ನಾವು ಬಿದ್ದಹಾಗೆಯೇ ಏಳಬೇಕಾಗಿದೆ, ಸ್ವಾಮಿ ವಿವೇಕಾನಂದರ ಭವ್ಯ ಮೂರ್ತಿ ನಮ್ಮಿಬ್ಬರ ಅನತಿ ದೂರದಲ್ಲಿ ನಿಂತು ನನ್ನನ್ನೇ ನೋಡುತ್ತಿದೆ.  ಹಂತಕನಂತೆ ಅಂತರ ಕಾಯ್ದುಕೊಂಡೇ ಮೆರೆಯಬೇಡ, ಅಂತಿಮವಾಗಿ ಒಂದೇ ಒಂದು ಸಲ ಬಂದು ಬಿಡು, ಸ್ಟೈಲಾಗಿ ಅತಿಥಿಯಾಗಿ ನಿಂತು ಪಾರಿವಾಳಗಳನ್ನು ಬೆಳಗ್ಗೆ ಬಾನಿಗೆ ಬಿಟ್ಟ ಹಾಗೆಯೇ, ನನ್ನೊಳಗೆ ಕೂತ ನನ್ನನ್ನು ಹೊರಗೆ ಚಿಮ್ಮಿ ಹಾರಿಸು ಮತ್ತೆ.  ಪಾರಿವಾಳಗಳನ್ನು ಬಾನಿಗೆ ಬಿಡುವ ಪ್ರಹಸನದಂತೆ ನನ್ನನ್ನು ಹೊರಗೆ ಬಿಡುವ ಕೆಲಸ ನಿನಗೆ ಇಷ್ಟವಾಗದೇ ಇರುವುದೇನು?  ಊರ ಕಂಡ ಗಿಡುಗನಿಗೆ ನನ್ನಂತ ಗುಬ್ಬಿ ಸಂಸಾರಕ್ಕೆ ಕರೆದರೆ ಸುಖವೆನಿಸದೇನು?  ಸೂರ್ಯ ಎಷ್ಟೇ ಗಾವುದ ದೂರವಿರಲಿ, ನಾವಂದುಕೊಂಡಷ್ಟು ಹತ್ತಿರದಲ್ಲೇ ಕಾಣಿಸುತ್ತಾನವ.  ಹತ್ತಿರ ದೂರ ಅದೇನಿದ್ದರೂ, ಅವನ ಕೆಲಸ ಬೆಳಕು ಬೀರೋದು, ಅದನ್ನವ ಮಾಡದೇ ಮಲಗಲಾರ. ನಿನ್ನ ಕೆಲಸವೂ ಶುದ್ಧವಾಗಿರಿಸೋದು, ನೀನು ಹತ್ತಿರವಾಗು, ಬಿಡು, ಆದರೆ ನಿನ್ನ ಶುದ್ಧ ಮಾಡುವ ಕೆಲಸವನ್ನ ಮಾತ್ರ ಬಿಡಬೇಡ, ಹಾಗಿದ್ದಾಗ ಇನ್ನಷ್ಟು ಖಾಸ್ ಆಗುತ್ತಲೇ ಇರುತ್ತೀಯಾ. 

ನಿರ್ಭಿಡೆಯಿಂದ ಯಾವ ಹೊತ್ತಿಗಾದರೂ ನಿನಗೆ ನಾನೇ ಇದನ್ನು ಪತ್ರದಲ್ಲಿ ಬರೆವ ಮನಸ್ಸು ನನಗೆ ಬಂದದ್ದು ನಿನ್ನಿಂದಲೇ.  ಚಕಿತತೆಯಲ್ಲಿ ಮುಳುಗಿ ಕಣ್ಣಲ್ಲಿ ನನ್ನನ್ನು ಕಲ್ಪಿಸಿಕೊಳ್ಳುವ ನಿನಗೆ, ಸೌಂದರ್ಯವೆಂದರೆ ಬಿಳಿಯ ಬಣ್ಣವಲ್ಲವೆಂಬುದು ಗೊತ್ತಿರಲಿ, ನಾನು ಹೊತ್ತಿಸಿದ ಧೀಪ ನಿನ್ನ ಮನೆ ಬೆಳಗಿಸಬೇಕೇ ಹೊರತು, ನನ್ನ ಮೈಬಣ್ಣವಾಗಲಿ, ನನ್ನಪ್ಪ ಹೊರಿಸಿ ಕಳಿಸುವ ಬಂಗಾರದಿಂದಾಗಲಿ ಏನೂ ಆಗಬೇಕಾಗಿಲ್ಲ ಅನ್ನಿಸಿದರೆ, ಅದೇ ಗ್ರೌಂಡಿಗೆ ಮತ್ತೆ ಬಾ, ನಮ್ಮ ಕಾಲೇಜಿನಲ್ಲಿರುವ ಸ್ವಾಮಿ ವಿವೇಕಾನಂದರ ಮೂರ್ತಿಗೆ ಹೊಸದೊಂದು ಗುಲಾಬಿ ಹಾರ ಹಾಕಿದ್ದೇನೆ, ಅದರ ಜೊತೆಗೆ ನನ್ನ ಅಪ್ಪನ ವಿಳಾಸವೂ ಇದೆ.  ಇಲ್ಲವೆಂದರೆ, ಯುವಜನಮಾನಸದಲ್ಲಿ ಇದೆಲ್ಲಾ ಸಹಜವೆಂದು ಮುಗುಳ್ನಕ್ಕು ಅಕಾಶದಲಿ  ಹಾರಿಹೋಗುವ ಬೆಳ್ಳಕ್ಕಿಗೆ ಇದೆಲ್ಲಾ ಹೇಳಿಬಿಡು ಮತ್ತು ಮರೆತುಬಿಡು.  ನಾನೂ ಸಹ, ಅದೇ ಗ್ರೌಂಡಿನಲ್ಲಿ ನಿಂತು ಸಂಜೆಯ ವೇಳೆ ದಂಡು ದಂಡಾಗಿ ಮರಳುವ ಬೆಳ್ಳಕ್ಕಿಗಳಿಗೆ ಉಂಗುರ ಕೇಳುವಾಗ ನಿನ್ನದೇನಾದರೂ ಸುದ್ಧಿಯಿದೆಯೇ ಎಂದು ನೆನಪಾಗಿ ಕೇಳುತ್ತೇನೆ. 

‍ಲೇಖಕರು Admin

February 5, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. nalina

    9 people shared it on facebook… thats really great avadhi…. i love d way you are,,, avadhi,,,

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: