
ಜಯಶ್ರೀ ಕಾಸರವಳ್ಳಿ
ಈ ಹುಡುಗನ ಬಗ್ಗೆ ಎಷ್ಟು ಹೇಳಿದರೂ ಸಾಲದು.
ವರ್ಷದ ಮೊದಲ ದಿನವೇ ಇವನ ಫೋನ್ ಬರುವವರೆಗೂ ಇವನ ಪರಿಚಯ ಫೇಸ್ ಬುಕ್ ನ ಸಣ್ಣಪುಟ್ಟ ವಿವಾದಾತ್ಮಕ ಹೇಳಿಕೆಗಳಿರುವ ಯಾವ್ಯಾವುದೋ ಸ್ಟೇಟಸ್ ಗಳಲಷ್ಟೇ ನೋಡಿದ ನೆನಪು…
ಆದರೆ ಒಂದಿಡೀ ದಿನ ಶೂಟಿಂಗ್ ಎಂದು ಕಳೆಯುವಷ್ಟರಲ್ಲಿ ಎಷ್ಟು ಆತ್ಮೀಯನೆನ್ನಿಸಿಬಿಟ್ಟ!
ತೆಗೆದಿದ್ದು ಯಾವುದೋ ತಾಂತ್ರಿಕ ದೋಷದಿಂದ ಸರಿಯಾಗಿ ಬರಲಿಲ್ಲವೆಂದು ಯುಗಾದಿಯ ಮರು ಬೆಳಿಗ್ಗೆ ಮತ್ತೆ ಧಿಡೀರ್ ಹಾಜರು.
ಅದೇ ಮಖದ ತುಂಬಾ ನಗೆ, ಉತ್ಸಾಹ, ಗಲಗಲ ಮಾತು, ಹೆಗಲ ಮೇಲಿನ ಭರ್ಜರಿ ತೂಕದ ಬ್ಯಾಗ್, ಮತ್ತದೇ ’ಅಡಿಗ’ ಧ್ಯಾನ!
ಮತ್ತೊಂದು ಇಡೀ ದಿನ ಶೂಟಿಂಗ್. ಇವನನ್ನು ನೋಡಿ ಕವಿಯಾಗಿ ಹುಟ್ಟುವುದಕ್ಕೂ ಪುಣ್ಯ ಮಾಡಿರಬೇಕೆನ್ನಿಸಿದ್ದು ಸುಳ್ಳಲ್ಲ. ’ಭೂತ’ಕ್ಕೆ ಸರಿದ ಅಡಿಗರನ್ನು ಎಲ್ಲರ ಸುಪ್ತಪ್ರಜ್ಞೆಯಾಳದಿಂದ ’ಚಂಡೆಮದ್ದಳೆ’ ಸದ್ದಿನೊಂದಿಗೆ ಎತ್ತಿ ವರ್ತಮಾನದಲ್ಲಿ ವಿಜೃಂಭಿಸುವ ಆಶಯದಲ್ಲಿ ’ನೆಲ ಸಪಾಟಗಿಲ್ಲ’ವೆಂದು ತಿಳಿದೂ, ಈ ನೆಲದ ಮಣ್ಣಿನ ’ಭೂಮಿಗೀತ’ವನ್ನು ಪರಿಚಯಿಸುವ ಹಾದಿಯಲ್ಲಿ ಕಲ್ಲುಮುಳ್ಳುಗಳನ್ನು ಲೆಕ್ಕಿಸದೇ, ಹಗಲುರಾತ್ರಿಯೆನ್ನದೇ, ಊರು ಕೇರಿ, ಬೀದಿ, ಗಲ್ಲಿ, ಮನೆ, ಮನೆಗಳಿಗೆ ಅಲೆಯುತ್ತಾ ವಾರಾಂತ್ಯಗಳಲ್ಲಿ ಪ್ರೇಮಿ ಜೊತೆ ಯಾವುದೋ ರಿಸಾರ್ಟ್ ಗಳಲ್ಲಿ ಕಳೆಯುವುದರ ಬದಲು ಬಾಯಿ ತೆರೆದರೆ ಸಾಲು ಸಾಲು ಅಡಿಗರನ್ನೇ ಉದ್ಧರಿಸುತ್ತಾ, ಊಟ, ತಿಂಡಿ, ನಿದ್ರೆಯಿಲ್ಲದೇ ಓಡಾಡುವ ಈ ಹುಡುಗ ನನಗಂತೂ ದೊಡ್ಡ ಸೋಜಿಗ.
ಒಂದು ದಿನ ಊಟ, ತಿಂಡಿ, ನಿದ್ರೆಯಲ್ಲಿ ಏರುಪೇರಾದರೂ ಮರುದಿನ ಚಾಚೂ ತಪ್ಪದೇ ದಿನಚರಿಯಲ್ಲಿ ಅದರ ಪರಿಣಾಮದ ಪ್ರತ್ಯಕ್ಷ ದರ್ಶನವಾಗುವ ನನಗಂತೂ ಈ ’ಕುಂಟಾಡಿ ನಿತೇಶ್’ ಅನ್ನುವವನು ಅದ್ಭುತದಲ್ಲೊಂದು ಅದ್ಭುತ..!!
ಮುಖಪುಟ ಚಿತ್ರ ಕೃಪೆ: ಸೌಮ್ಯ






0 Comments