ಈ ಹುಡುಗನಿಗೆ ಕತ್ತಲೆಂದರೆ ಬಲು ಇಷ್ಟ..

ಬೆತ್ತಲ ಹುಡುಗನ ಕತ್ತಲ ಹಾಡು…
ಅಥವಾ
ಹುಡುಗ ಬೆತ್ತಲಾದ…!

bhuvaneshvari h c

ಭುವನೇಶ್ವರಿ ಹೆಚ್.ಸಿ

ಈ ಹುಡುಗನಿಗೆ ಕತ್ತಲೆಂದರೆ ಬಲು ಇಷ್ಟ
ಗವ್ವೆನ್ನುವ ಗುಂಗಿನಲ್ಲಿಹುಡುಕುವುದಿಲ್ಲ, ತಡಕುವುದೂ ಇಲ್ಲ..
ಸಿಕ್ಕದ್ದು ಸಿಕ್ಕಂತೆ ಕಬಳಿಸುತ್ತಾನೆ, ಕಳವಳಿಸುತ್ತಾನೆ, ಕಂಗೆಡುತ್ತಾನೆ
ನಡೆಯುತ್ತಾನೆ ನಡೆಯುತ್ತಾನೆ ನಡೆದೇ ನಡೆಯುತ್ತಾನೆ..

ಎಳ್ಳುಕಾಳಷ್ಟೂ ಅಂಜಿಕೆಯಿರದ ಹೈದ ಅವನು
ಎದೆಯುಬ್ಬಿಸಿ ದಿಟ್ಟಿ ಕೀಲಿಸಿ ದಾಪುಗಾಲಿಟ್ಟನೆಂದರೆ-
coupleಅತ್ತಿತ್ತ ಸರಿಯಬೇಕು ಅಡ್ಡ ಇದ್ದವರೆಲ್ಲ!
ಓಡಾಟವೊಂದೇ ಗೊತ್ತಿವಗೆ, ಗೊತ್ತು ಗುರಿಯಿರದ ಇರವಿನೆಡೆಗೆ-

ಹೌದು…ಅಂಥಾ ಕತ್ತಲಲ್ಲಿ ಇವ ಗಮಿಸಿದ್ದೆಲ್ಲಿಗೆ?
ಗಮನ ಇದ್ದರಲ್ಲವೇ ಸ್ವಂತ ‘ಅವನಿ’ಗೆ!
ಹೆಜ್ಜೆ ಊರಿದ್ದೊಂದೇ ಗೊತ್ತು…ಒಜ್ಜೆ ಎನಿಸಲೇ ಇಲ್ಲ
ಕಾಡ ಜಾಡನು ಹಿಡಿದು, ಕಲ್ಲು ಕಮರಿಯ ದಾಂಟಿ
ನಡೆದ ನಡೆದ ನಡೆದೇ ನಡೆದ…

ಬೆತ್ತವಿಡಿದಿದ್ದ ಈ ಹುಡುಗ ನಡೆಯುತ್ತಾ ನಡೆಯುತ್ತಾ
ಬೆತ್ತಲಾಗುತ್ತಿದ್ದ!

ಮುದುರಿಟ್ಟ ಮುಂಡಾಸು, ತೆಗೆದೊಗೆದ ಮೇಲಂಗಿ, ದಾರಿಗೆಸೆದ ಧೋತರ
ಕೊನೆಗೆ…ಕೊನೆ ಕೊನೆಗೆ ಕಳಚಿದ್ದ ಕೌಪೀನ!

ಛೇ ಏನಿವನ ಅವತಾರ ಸಲ್ಲದಿದು ಸುಕುಮಾರಂಗೆ
ನಿಮಿಷಾರ್ಧದಲಿ `ಬಟ್ಟೆ’ ದೊರಕಿತ್ತು
ಬಿಟ್ಟ ಬಾಯಿ ಬಿಟ್ಟಂತೆ
ದೊರೆಮಗನೇ ದಂಗಾದ

ಎಳೆಗಾಳಿಯ ಸುಳಿಯಪ್ಪುಗೆಯಂತೆ, ಸಲಿಲ ಧಾರೆಯ ಕಲರವದಂತೆ,
ಅನಲನ ಅಮಿತೋತ್ಸಾದಂತೆ…ಮುಗಿಲೇ ಮನಬಿಚ್ಚಿ ಕುಣಿದಂತೆ,
ನೆಲದಾಯಿ ನಲಿನಲಿದಂತೆ…ಬಟ್ಟೆ ಧರಿಸಿದ್ದ!

ಅರೆರೆ ನಿಜ ನಿಜ…ಇವ ಸಿದ್ಧ
ಬದ್ಧತೆಯೆ ಜಿದ್ದಾಗಿ ಸದ್ದಿಲ್ಲದಂತೆ ಬುದ್ಧನಾಗಿದ್ದ!
ಬೈಚಿಟ್ಟ ತಾರಕೆಯ ಹಾರಲುಜ್ಜುಗಿಸಿದ್ದ
ಹಿಡಿದ ದಂಡವ ಊರಿ ವಿಜೃಂಭಿಸಿದ್ದ
ಬತ್ತಳಿಕೆಯ ಬಾಣಕ್ಕೆ ಬಳಲಿಕೆಯ ತಂದಿತ್ತ
ಕಾಡ ಹಾದಿಯ ಬಲು ಕಾಡಿದ್ದ, ಮತ್ತಿನುತ್ಸವಕೆ ಮುತ್ತತೇರನೆ ಸಿಂಗರಿಸಿದ್ದ
ಒಳಗುದಿಯ ಮೆದುವಾಗಿ ಹದಗೊಳಿಸಿದ್ದ, ಕಾದಲನ ಕೀಟಳೆಗೆ ಮೇಟಿಯಾಗಿದ್ದ

ಈ ಬೈರಾಗಿ ಭಕ್ತನಾಗಿದ್ದ, ಮಗುತನಕೆ ಮೂಲ ಎನಿಸಿದ್ದ
ಕಾಪಿಟ್ಟ ಬದುಕು, ಕಾಯ್ದಿಟ್ಟ ಆಸೆ, ಕನಲಿದ್ದ ಕನಸುಗಳಿಗೆ ರೂಪುಗೊಟ್ಟ…

ಮುಲಮುಲ ಮುಲುಗಿದ್ದ, ತಣ್ಣನೆ ನಕ್ಕಿದ್ದ, ಸೊಕ್ಕಿದ್ದ-ಸಗ್ಗ ಕಂಡಿದ್ದ
ಕತ್ತಲ ಕಳಚಿದ್ದ, ಮತ್ತೆ ಹೊದ್ದಿದ್ದ, ಮುದ್ದು ಮಾಡಿದ್ದ
ಕತ್ತಲಿಗೇ ರೂಪುಗೊಟ್ಟ..!

ಕತ್ತಲೆಂದರೆ ಈ ಬೆತ್ತಲ ಹುಡುಗನಿಗೆ ಬಲು ಇಷ್ಟ
ಅವ್ವನ ಮಡಿಲು, ನಲ್ಲೆಯ ತೆಕ್ಕೆ,
ಮಗುವಿನ ನಗು ಎಲ್ಲಾ ಕಂಡದ್ದು ಈ ಕತ್ತಲಲ್ಲೇ
ಅದಕೆ ಇವಗೆ ಕತ್ತಲೆಂದರೆ ಬಲು ಇಷ್ಟ

‍ಲೇಖಕರು Admin

June 7, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

      • ರೇಣುಕಾ ಹೆಳವರ್

        Comment Text*ಅದ್ಭುತವಾದ ಕವಿತೆ ಮೇಡಂ ಕತ್ತಲೆಂದರೆ ಇಷ್ಟ ಗಂಡುಗಳಿಗೆ ಆದರೆ ಎಷ್ಟೋ ಹೆಣ್ಣಿನ ರೋದನೆ ಆ ಕತ್ತಲಲ್ಲಿ ಕರಗಿ ಕ್ಷೀಣಿಸಿವೆ.

        ಪ್ರತಿಕ್ರಿಯೆ
  1. ಜಯಶಂಕರ್ ಬೆಳಗುಂಬ

    ಹಲವಾರು ಬುದ್ದನ ಬಗ್ಗೆ ಕವನಗಳು ಬಂದಿವೆ ಆದರೆ ಈ ಕವನಕ್ಕಿರುವ ಶಕ್ತಿ, ನವಿರು ,ಮೆಟಾಫರ್ ಸಿಮಿಲಿ ಗಳು ಮನೊಙ್ನ ವಾಗಿವೆ ಬರೆದ ಕವಿಗಳಿಗೆ ಪ್ರಕಟಿಸಿದ ಅವಧಿಗೆ ಧನ್ಯವಾದಗಳು ು

    ಪ್ರತಿಕ್ರಿಯೆ
  2. vithaldas kamat ,reporter

    tumba sooper kavite
    ಕತ್ತಲೆಂದರೆ ಈ ಬೆತ್ತಲ ಹುಡುಗನಿಗೆ ಬಲು ಇಷ್ಟ
    ಅವ್ವನ ಮಡಿಲು, ನಲ್ಲೆಯ ತೆಕ್ಕೆ,
    ಮಗುವಿನ ನಗು ಎಲ್ಲಾ ಕಂಡದ್ದು ಈ ಕತ್ತಲಲ್ಲೇ
    ಅದಕೆ ಇವಗೆ ಕತ್ತಲೆಂದರೆ ಬಲು ಇಷ್ಟ idu tumba tumba ista aaytu

    ಪ್ರತಿಕ್ರಿಯೆ
  3. ರೇಣುಕಾ ಹೆಳವರ್

    Comment Text* ನಿಮ್ಮ ಕವನದ ಶೀರ್ಷಿಕೆ ಛಂದ ಇದೆ ಕವಿತೆ ಇನ್ನೂ ಚಂದ ಇದೆ ಏನೋ ಹೊಸ ಲೋಕ ನೋಡಿದ ಹಾಗಾಯ್ತು.

    ಪ್ರತಿಕ್ರಿಯೆ
  4. Anonymous

    ನಿಜಕ್ಕೂ ಇಲ್ಲಿ ಪದ್ಯ ಕಾವ್ಯವಾಗಿದೆ. ಹೊಸ ಒಳನೋಟಗಳುಳ್ಳ ಕವಿತೆ ಇದು. ಕಾವ್ಯವಾಗಲಿ, ನಾಟಕವಾಗಲಿ, ಕಲಾಕೖತಿಯಾಗಲಿ ಇಷ್ಟವಾಯ್ತು ಎನ್ನುವುದಕ್ಕಿಂತ ನಮ್ಮನ್ನು ಕಾಡುವಂತಿರಬೇಕು. ಆ ಗುಣ ನಿಮ್ಮ ಕವಿತೆಯಲ್ಲಿದೆ. ತುಂಬಾ ಧನ್ಯವಾದಗಳು ಒಳ್ಳೆ ಪದ್ಯ ಕೊಟ್ಟಿದ್ದಕ್ಕೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: