ಈ ಸಂತ ಕಬೀರ ಎಂಥ ಅದ್ಭುತ ದಾರ್ಶನಿಕ ಕವಿ!

ಬಿ ಎಂ ಹನೀಫ್

ನಿನ್ನೆ ರಾತ್ರಿ ಅಶೋಕ ಹೋಟೆಲ್ಲಿನ ಕೊಳದ ಪಕ್ಕದಲ್ಲಿ ಕುಳಿತು ಮೀರ್ ಮುಖ್ತಿಯಾರ್ ಅಲಿ ಮತ್ತು ತಂಡ ಕಬೀರನ ದೋಹಾಗಳನ್ನು ಹಾಡುತ್ತಿದ್ದರೆ ಒಂದು ಹಂತದಲ್ಲಿ ಪಳಕ್ಕೆಂದು ಕಣ್ಣೀರು ಚಿಮ್ಮಿತು.

ಹೊತ್ತಿಕೊಂಡ ಕಾಡ್ಗಿಚ್ಚಿನಲ್ಲಿ
ಧಗಧಗನೆ ಉರಿಯುತ್ತಿತ್ತು ಮರ
ಪಕ್ಷಿಯೊಂದು ಉರಿಯುತ್ತಿದ್ದ ಮರವನ್ನೇ ನೋಡುತ್ತಿತ್ತು
ಮರ ಹೇಳಿತು-
ನಾನಂತೂ ಬೆಂಕಿಯಿಂದ ತಪ್ಪಿಸಿಕೊಂಡು
ಓಡಲಾಗದು
ಉರಿಯುವುದು ನನ್ನ ಕರ್ಮ
ನಿನಗೆ ದೇವರು ರೆಕ್ಕೆ ಕೊಟ್ಟಿದ್ದಾನೆ
ನೀನೇಕೆ ಹಾರಿ ಹೋಗುತ್ತಿಲ್ಲ ದೂರ?
ಪಕ್ಷಿ ಹೇಳಿತು-
ಹೇಗೆ ಹೋಗಲಿ ಹೇಳು?
ನಿನ್ನ ಫಲ ತಿಂದಿದ್ದೇನೆ
ರೆಂಬೆಗಳ ಮಧ್ಯೆ ಗೂಡು ಕಟ್ಟಿ
ಮರಿ ಮಾಡಿ ನಿನ್ನ ನೆರಳಲ್ಲಿ
ಜೀವನ ಕಟ್ಟಿಕೊಂಡಿದ್ದೇನೆ
ಹಾರಿ ಹೋಗಲಿ ಹೇಗೆ ಹೇಳು?

ಪ್ರೇಮ, ವಿರಹ, ಆಧ್ಯಾತ್ಮ ಮುಂತಾಗಿ ಮೀರ್ ಮುಖ್ತಿಯಾರ್ ಹಾಡುತ್ತಲೇ ಇದ್ದ. ತಬಲಾ, ಮೃದಂಗ, ಸಂತೂರ್ ನ ಜುಗಲ್ಬಂದಿ ನಡೆಯುತ್ತಲೇ ಇತ್ತು. ಕಿಕ್ಕಿರಿದು ಸೇರಿದ್ದ ಸಾಹಿತ್ಯಾಸಕ್ತರು ವಯೋಬೇಧವಿಲ್ಲದೆ ತಲೆದೂಗುತ್ತಿದ್ದರು. ಯುವಜನರು ಹುಚ್ಚೆದ್ದು ಕೇಕೆ ಹಾಕುತ್ತಿದ್ದರು. ಮೇಲೆ ಆಕಾಶದಲ್ಲಿ ಅರ್ಧಚಂದ್ರನೂ ತಲೆದೂಗುತ್ತಿದ್ದ.

ನಾನು ಬೆಳ್ಳಂಬೆಳಿಗ್ಗೆ ಎದ್ದು ಕಬೀರನ ಬಗ್ಗೆ ಯೋಚಿಸುತ್ತಿದ್ದೇನೆ. ಉರಿಯುತ್ತಿರುವ ಮರ ಮತ್ತು ಕಣ್ಣೀರಿಡುತ್ತಾ ಅಲ್ಲೇ ದೂರದಲ್ಲಿ ಕುಳಿತಿದ್ದ ಹಕ್ಕಿಯ ಚಿತ್ರ ಕಣ್ಣ ಪಾಪೆಯಿಂದಾಚೆ ಸರಿಯುತ್ತಲೇ ಇಲ್ಲ.

ರಾತ್ರಿ ಹಿರಿಯ ಕೊಂಕಣಿ ಸಾಹಿತಿ ದಾಮೋದರ ಮವ್ಜೊ ಮತ್ತು ಹಿರಿಯಣ್ಣನಂತಿರುವ ಪುರುಷೋತ್ತಮ ಬಿಳಿಮಲೆ ಅವರ ಜೊತೆಗೆ ಕುಳಿತು ಅಶೋಕಾ ಗಾರ್ಡನ್ ನಲ್ಲಿ ಊಟ ಮಾಡುತ್ತಿದ್ದಾಗ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. “ರಾಜಕೀಯದ ಪರಿಸರವನ್ನು ಬಲಪಂಥೀಯರು ಗಬ್ಬೆಬ್ಬಿಸಿ ವೈಷಮ್ಯದ ಏಕರೂಪದ ಹೇರಿಕೆ ನಡೆಸಿದ್ದರೂ ಸಾಹಿತ್ಯದ ವಾತಾವರಣದಲ್ಲಿ ವೈವಿಧ್ಯದ ಸುಗಂಧ ಹೇಗೆ ಇನ್ನೂ ಉಳಿದುಕೊಂಡಿದೆ..?” ಎನ್ನುವ ಪ್ರಶ್ನೆಯದು.

ಶನಿವಾರವಿಡೀ ಬೆಂಗಳೂರು ಲಿಟ್ ಫೆಸ್ಟ್ ನಲ್ಲಿ ಸೈರಸ್ ಮಿಸ್ತ್ರಿ, ವಿವಿಎಸ್ ಲಕ್ಷಣ್, ಎಸ್ತರ್ ಅನಂತಮೂರ್ತಿ, ರಾಮಚಂದ್ರ ಗುಹಾ, ಪಿ ಸಾಯಿನಾಥ್, ಉಲ್ಲಾಸ ಕಾರಂತ, ರೋಹಿಣಿ ನೀಲೇಕಣಿ, ಪಿ ಶಿವಕಾಮಿ, ಗೀತಾ ರಾಮಸ್ವಾಮಿ, ರಾಜಾರಾಂ ತಲ್ಲೂರು ಮುಂತಾದವರ ಮಾತುಗಳಿಗೆ ಕಿವಿಯಾಗುತ್ತಾ ಸಂಭ್ರಮದಿಂದ ಓಡಾಡುತ್ತಿದ್ದ ಸಾಹಿತ್ಯಾಸಕ್ತರನ್ನು ನೋಡುತ್ತಿದ್ದರೆ ಇಡೀ ಅಶೋಕಾ ಹೋಟೆಲ್ಲಿನ ಆವರಣ ಮಿನಿ ಇಂಡಿಯಾದಂತೆ ಕಂಗೊಳಿಸುತ್ತಿತ್ತು. ಎಲ್ಲ ಭಾಷೆ, ಎಲ್ಲ ಜಾತಿ, ಎಲ್ಲ ಧರ್ಮ ಮತ್ತು ಇದ್ಯಾವುದರ ಗೊಡವೆಯೂ ಇಲ್ಲದ ಸಾವಿರಾರು ಜನ ಅಲ್ಲಿ ಸೇರಿದ್ದರು.

ರಾತ್ರಿ ಮೀರ್ ಮುಖ್ತಿಯಾರ್ ನ ದೋಹಾ, ಗಜಲ್, ಸೂಫಿ ಹಾಡುಗಳಲ್ಲಿ ಮೇಲಿನ ಪ್ರಶ್ನೆಗೆ ಉತ್ತರ ಸಿಕ್ಕಿತು.
ವೈವಿಧ್ಯತೆಯೇ ಭಾರತದ ಅಂತಃಶಕ್ತಿ. ಏಕರೂಪ ಎನ್ನುವುದು ನೀರ ಮೇಲಿನ ಗುಳ್ಳೆ.

‍ಲೇಖಕರು Admin

December 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: