ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಶರಾಬು ಸುಖವನ್ನಷ್ಟೆ ಉಣಿಸುತ್ತಿಲ್ಲ..

ನಾನು ಯಾರು?

ಎನ್ ರವಿಕುಮಾರ್ ಟೆಲೆಕ್ಸ್

ಹೀಗೆ…..ಲೆಕ್ಕವಿಲ್ಲದಷ್ಟು ಬಾರಿ
ಪ್ರಶ್ನಿಸಿಕೊಂಡಿದ್ದೇನೆ.
ವಿಸ್ಮಯದ ಜೀವ ಧಾತುವಾಗಿ
ನಡೆವಾಗ,ಕುಂತಲ್ಲಿ ನಿಂತಲ್ಲಿ
ನೆರಳ ನಿಲೆ ಹಾಕಿ ಕೇಳಿದ್ದೇನೆ
ನಾನು ಯಾರು….?

ಬದುಕು ಲೌಕಿಕ ನೇಮದ
ಆಟದಂತೆ ಕಾಣುತ್ತಿದೆ
ಏಳು – ಬೀಳು, ಕಷ್ಟ- ಸುಖಗಳ
ಗುಣಿತದಲ್ಲಿ ಹಗಲು- ಇರುಳುಗಳ
ದೂಡುತ್ತಾ ದಾರಿ ಸವೆಸುತ್ತಲೆ ಇದ್ದೇನೆ..
ಗಮ್ಯದ ಅರಿವಿಲ್ಲದೆ
ನಡೆದಷ್ಟು ಹಾದಿ ಮುಗಿಯುತ್ತಿಲ್ಲ
ಮುಗಿಲ ಕನ್ನಡಿಗೆ ಮುಖವೊಡ್ಡಿದಾಗ
ಕಂಡ ಚಿತ್ರಕ್ಕೆ ಬೆಚ್ಚಿಬಿದ್ದು
ತಟ್ಟನೆ ಎಚ್ಚರಗೊಳ್ಳುತ್ತೇನೆ
ನಾನು ಯಾರು……..?

ಈ ಶರಾಬು ಸುಖವನ್ನಷ್ಟೆ
ಉಣಿಸುತ್ತಿಲ್ಲ
ನನ್ನವರಲ್ಲದ ಅಸಂಖ್ಯಾತ ಜೀವಗಳ
ದುಃಖ ದುಮ್ಮಾನಗಳಿಗೆ ಕಡಿದಾಡುವ
ನನ್ನ ಕರುಳ ದುಗುಡವನ್ನು ಸಂತೈಸುತ್ತಿದೆ
ನಕ್ಕೆನೆಂದ ಕ್ಷಣ ಬಿಕ್ಕಿ ಅಳುವು ಬಾಚಿ ತಬ್ಬುತ್ತದೆ
ಮತ್ತೆ ಮತ್ತೆ ನನಗೆ ನಾನೆ
ಕೇಳಿಕೊಳ್ಳುವಂತೆ
ನಾನು ಯಾರು…?

ಅವಳದೊಂದು ಭಾವ ತೀವ್ರತೆ
ನಿನಗಾಗಿ ನಾನು – ನನಗಾಗಿ ನೀನು
ಎಂದು ನನ್ನ ತುಟಿ ಮೇಲೆ ಸುಡುವ ಸಿಗಾರು
ಗಂಟಲಿಗಿಳಿದ ಶರಾಬು ಕಸಿಯುವ
ಕಸರತ್ತು ಅವಳದು
ಪರಮಪ್ರೀತಿ ಎಂಬ ಅಗೋಚರ ಸಂಚಾರಿಯನ್ನು
ಎದೆಯಲೊತ್ತು ನಿತ್ಯ ನಿಡುಸುಯ್ಯುತ್ತಾಳೆ
ಅವಳ ಒಡೆತನದ ಒಲವಿನಲಿ
ಮಿಂದು ಮುದಗೊಳ್ಳುವುದೆಂದರೆ
ಮರುಹುಟ್ಟೆ ಸರಿ

ಅಧಿಕಾರ ಅದೊಂದು ಅರಗಿನ ಮನೆ
ಉರಿ ಸೋಕಿದರೆ ಕರಗಿ ಬೂದಿ
ಹಂಗಿಗೆ ಬಿದ್ದು ನಡೆದರೆ ತಲೆದಂಡ
ರಾಜನಲ್ಲ , ಪರಿಚಾರಕನಲ್ಲ,-ದೇವನಲ್ಲ,ಭಕ್ತನಲ್ಲ
ಬಂಧು ವೆಂದರೆ ಬಳಗದ ಮೋಹ
ಈ ಹಾದಿ ಮುಗಿಯುತ್ತಿಲ್ಲ
ನಾನು ಯಾರು…..?

‍ಲೇಖಕರು avadhi

2 July, 2019

1 Comment

  1. ಸುಧಾರಾಣಿ. ನಾಯ್ಕ,ಸಿದ್ದಾಪುರ

    ಗಹನ ಅರ್ಥದ ಕವಿತೆ…ಪದೇ ಪದೇ ಓದಿದಾಗ‌‌,ಅರ್ಥ ಬಿಟ್ಟುಕೊಟ್ಟಿತು.ಚೆನ್ನಾಗಿದೆ ಕವನ ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading